ಜ್ಯೋತಿರ್ಲಿಂಗ 7: ರಾಮೇಶ್ವರ

Share Button

ದಕ್ಷಿಣ ಭಾರತದ ಪ್ರವಾಸಕ್ಕೆಂದು ಬಂದವಳು, ರಾಮೇಶ್ವರದ ಕಡಲ ತೀರದಲ್ಲಿ ನಿಂತಾಗ, ರಾಮಾಯಣದ ಕೆಲವು ಪ್ರಸಂಗಗಳು ಮನದಲ್ಲಿ ತೇಲಿ ಬಂದವು – ದಂಡಕಾರಣ್ಯದಲ್ಲಿ ಪರ್ಣಕುಟೀರವೊಂದರಲ್ಲಿ ವಾಸವಾಗಿದ್ದ ರಾಮ, ಸೀತೆ, ಲಕ್ಷ್ಮಣರು. ಸೀತೆಯ ಮನ ಸೆಳೆದ, ಚಿನ್ನದ ಬಣ್ಣದ ಜಿಂಕೆಯ ರೂಪದಲ್ಲಿ ಪ್ರತ್ಯಕ್ಷನಾದ ಮಾರೀಚ, ಪರಮ ಸುಂದರಿಯಾದ ಸೀತೆಯನ್ನು ಕಂಡು ಮೋಹಿಸಿ, ಅಪಹರಿಸಿದ ರಾವಣ, ಅಶೋಕವನದಲ್ಲಿ ಬಂದಿಯಾಗಿದ್ದ ಸೀತೆಯನ್ನು ಕಂಡ ಹನುಮಂತ, ರಾವಣನನ್ನು ವಧಿಸಿದ ಶ್ರೀ ರಾಮ .. ಇತ್ಯಾದಿ. ಉತ್ತರ ಭಾರತದಲ್ಲಿರುವ ಅಯೋಧ್ಯೆಯಿಂದ ದಕ್ಷಿಣ ಭಾರತದ ಅಂಚಿನಲ್ಲಿರುವ ರಾಮೇಶ್ವರದವರೆಗೆ ನಡೆದಿತ್ತು ರಾಮಾಯಣದ ಮೆರವಣಿಗೆ. ಈ ವಿಸ್ತಾರವಾದ ಸಮುದ್ರದ ಮೇಲಲ್ಲವೇ ಹನುಮಂತ ಹಾರಿ ಹೋಗಿ, ಲಂಕೆಯನ್ನು ತಲುಪಿದ್ದು. ಇದು ಚಾರ್‌ಧಾಮ್‌ಗಳಲ್ಲಿ ಒಂದು ಪವಿತ್ರ ಕ್ಷೇತ್ರವಾಗಿರುವುದು ಮತ್ತೊಂದು ವಿಶೇಷ. ಆದಿಗುರು ಶಂಕರರು ಭಾರತವರ್ಷದ ನಾಲ್ಕು ದಿಕ್ಕುಗಳಲ್ಲಿ ಪವಿತ್ರವಾದ ‘ಚಾರ್ ಧಾಮ್’ ಗಳನ್ನು ಗುರುತಿಸಿ, ಧಾರ್ಮಿಕ ಐಕ್ಯತೆಯನ್ನು ಸಾರಿದರು. ಪಶ್ಚಿಮ ದಿಕ್ಕಿನಲ್ಲಿರುವ ದ್ವಾರಕ, ಉತ್ತರದಲ್ಲಿರುವ ಕೇದಾರ, ಪೂರ್ವದಲ್ಲಿರುವ ಪುರಿ, ಹಾಗೂ ದಕ್ಷಿಣದಲ್ಲಿರುವ ರಾಮೇಶ್ವರ. ಹಿಮಾಲಯದ ತಪ್ಪಲಲ್ಲಿರುವ – ಯಮುನೋತ್ರಿ, ಗಂಗೋತ್ರಿ, ಕೇದಾರ ಹಾಗೂ ಬದರಿಯನ್ನು ‘ಛೋಟಾ ಚಾರ್‌ಧಾಮ್’ ಎನ್ನುವರು. ಮತ್ತೊಂದು ಭೌಗೋಳಿಕವಾದ ಕೌತುಕವೆಂದರೆ – ಪವಿತ್ರ ಕ್ಷೇತ್ರಗಳಾದ ಬದರಿ ಮತ್ತು ರಾಮೇಶ್ವರ ಒಂದೇ ಬಂದರೆ, ದ್ಡಾರಕೆ ಮತ್ತು ಪುರಿ ಒಂದೇ ರೇಖಾಂಶದಲ್ಲ್ಲಿ ಬರುವುದು. ಇದು ಧಾರ್ಮಿಕ ಪರಿಪೂರ್ಣತೆಯ ರೂಪಕವಾಗಿ ನಿಲ್ಲುವುದು.

ತಮಿಳು ನಾಡಿನ ರಾಮನಾಥ ಜಿಲ್ಲೆಯ, ರಾಮೇಶ್ವರ ದ್ವೀಪದಲ್ಲಿರುವ ಭವ್ಯವಾದ ಜ್ಯೋತಿರ್ಲಿಂಗ. ವಿಷ್ಣುವಿನ ಏಳನೇ ಅವತಾರವಾದ ಶ್ರೀರಾಮನು ಸ್ಥಾಪಿಸಿದ ಜ್ಯೋತಿರ್ಲಿಂಗ. ರಾಮೇಶ್ವರ ದ್ವೀಪವು ಶಂಖದ ಆಕಾರದಲ್ಲಿದ್ದು, ಬಂಗಾಳ ಕೊಲ್ಲಿ ಹಾಗೂ ಹಿಂದೂ ಮಹಾಸಾಗರಗಳಿಂದ ಸುತ್ತುವರೆಯಲ್ಪಟ್ಟಿದೆ. ಈ ಕ್ಷೇತ್ರದ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಯಾವುದು ವಾಸ್ತವ ಯಾವುದು ಕಾಲ್ಪನಿಕ ಎಂಬ ದ್ವಂದ್ವ ಕೆಲವರ ಮನದಲ್ಲಿ ಕಾಡುತ್ತಲೇ ಇದೆ. ಪುರಾಣದಲ್ಲಿ ಎರಡು ಬಗೆಯ ಉಲ್ಲೇಖಗಳು ಕಂಡು ಬರುತ್ತವೆ. ಶ್ರೀರಾಮನು, ಸೀತೆಯನ್ನು ಅಪಹರಿಸಿದ್ದ ರಾವಣನ ಮೇಲೆ ಆಕ್ರಮಣ ಮಾಡಲು, ಸುಗ್ರೀವನ ಸೈನ್ಯದೊಂದಿಗೆ ರಾಮೇಶ್ವರಕ್ಕೆ ಬರುತ್ತಾನೆ. ಲಂಕೆಯನ್ನು ತಲುಪಲು ಧನುಷ್ಕೋಡಿ ಎಂಬ ಸ್ಥಳದಿಂದ, ಒಂದು ಸೇತುವೆಯನ್ನು ವಾನರ ಸೇನೆಯ ಸಹಯೋಗದಿಂದ ನಿರ್ಮಿಸುತ್ತಾನೆ. ಇದೇ ರಾಮಸೇತು. ಶ್ರೀರಾಮನು, ಮಹಾಶಿವಭಕ್ತನಾಗಿದ್ದ ರಾವಣನನ್ನು ಸೋಲಿಸಲು, ಮಹಾದೇವನ ಮೊರೆಹೋಗುತ್ತಾನೆ. ಜ್ಯೇಷ್ಠಮಾಸದ ಶುಕ್ಲಪಕ್ಷದ ದಶಮಿಯಂದು ಶಿವಲಿಂಗವನ್ನು ಸ್ಥಾಪಿಸಿ ಭಕ್ತಿಯಿಂದ ಪೂಜಿಸಿದ ನಂತರವೇ ಯುದ್ದಕ್ಕೆ ಹೊರಡುತ್ತಾನೆ. ರಾಮನು ಸ್ಥಾಪಿಸಿ ಪೂಜಿಸಿದ ಲಿಂಗ – ‘ರಾಮೇಶ್ವರ’ಎಂದು ಪ್ರಸಿದ್ಧಿಯಾಯಿತು.

ಮತ್ತೊಂದು ಉಲ್ಲೇಖ ಹೀಗಿದೆ – ಪುಲಸ್ತ್ಯ ಮುನಿಯ ಮಗನಾಗಿದ್ದ ರಾವಣನು ಮಹಾಬ್ರಾಹ್ಮಣನಾಗಿದ್ದನು. ಸೀತಾಪಹರಣ ಮಾಡಿದ್ದ ರಾವಣನನ್ನು ವಧಿಸಿ, ಶ್ರೀರಾಮನು, ವಿಭೀಷಣ, ಲಕ್ಷ್ಮಣ ಹಾಗೂ ಸೀತೆಯೊಂದಿಗೆ, ಪುಷ್ಪಕ ವಿಮಾನದಲ್ಲಿ ರಾಮೇಶ್ವರಕ್ಕೆ ಹಿಂತಿರುಗಿದನು. ವಿಭೀಷಣನು, ತನ್ನ ರಾಜ್ಯದ ಸುರಕ್ಷತೆಗಾಗಿ, ವಾನರ ಸೇನೆಯು ನಿರ್ಮಿಸಿದ್ದ ಸೇತುವೆಯನ್ನು ಕೆಡವಬೇಕೆಂದು ಕೋರುತ್ತಾನೆ. ಆಗ ರಾಮನು, ತನ್ನ ಒಂದು ಬಾಣದಿಂದ, ಆ ಸೇತುವೆಯನ್ನು ತುಂಡರಿಸುತ್ತಾನೆ. ಹಾಗಾಗಿ, ಈ ಸ್ಥಳಕ್ಕೆ ‘ಧನುಷ್ಕೋಡಿ’ ಎಂಬ ಹೆಸರು ಬಂದಿದೆ. ನಂತರ, ಶ್ರೀರಾಮನು, ಬ್ರಹ್ಮಹತ್ಯಾ ದೋಷದ ನಿವಾರಣೆಗಾಗಿ, ಪರಶಿವನನ್ನು ಪೂಜಿಸಬೇಕೆಂಬ ಸಂಕಲ್ಪ ಮಾಡುವನು. ಶಿವಲಿಂಗವನ್ನು ತರಲು, ಹನುಮಂತನನ್ನು ಕೈಲಾಸ ಪರ್ವತಕ್ಕೆ ಕಳುಹಿಸುವನು. ರಾಮನ ಅಣತಿಯಂತೆ, ಹನುಮನು, ಕೈಲಾಸ ಪರ್ವತಕ್ಕೆ ತೆರಳುವನು. ಆದರೆ, ಅವನು ಹಿಂತಿರುಗುವಷ್ಟರಲ್ಲಿ, ಶುಭ ಮುಹೂರ್ತ ಮೀರಿದ್ದರಿಂದ, ಶ್ರೀರಾಮನು, ಸೀತೆಯು ಮರಳಿನಿಂದ ಮಾಡಿದ್ದ ಶಿವಲಿಂಗವನ್ನು ಸ್ಥಾಪಿಸಿ, ರಾಮನಾಥನೆಂಬ ಹೆಸರಿನಿಂದ ಪೂಜಿಸುವನು. ತುಸು ಹೊತ್ತಿನಲ್ಲೇ, ಶಿವಲಿಂಗವನ್ನು ಕೈಲಾಸದಿಂದ ಹೊತ್ತು ತಂದ ಹನುಮಂತನಿಗೆ ನಿರಾಸೆಯಾಗುವುದು. ಹನುಮನನ್ನು ಸಂತೈಸಲು, ಶ್ರೀರಾಮನು, ಆ ಶಿವಲಿಂಗವನ್ನು, ವಿಶ್ವಲಿಂಗವೆಂದು ಹೆಸರಿಸಿ, ಸ್ಥಾಪಿಸಿ, ಪೂಜಿಸುವನು. ಆ ಶಿವಲಿಂಗಕ್ಕೇ, ಮೊದಲು ಪೂಜೆ ಸಲ್ಲಬೇಕೆಂದು ಆದೇಶಿಸುವನು. ನಂತರವೇ, ರಾಮನಾಥಸ್ವಾಮಿಗೆ ಪೂಜೆ ಸಲ್ಲುತ್ತಿದೆ. ಈ ಕ್ಷೇತ್ರವು, ಶೈವರಿಗೂ, ವೈಷ್ಣವರಿಗೂ ಪವಿತ್ರಕ್ಷೇತ್ರವೆಂದು ಪರಿಗಣಿಸಲ್ಪಟ್ಟಿದೆ.

ರಾಮೇಶ್ವರದ ಶಿವಲಿಂಗ PC: Internet

ರಾಮನು ಲಂಕೆಗೆ ನಿರ್ಮಿಸಿದ ಸೇತುವೆ -‘ರಾಮಸೇತು’ವಿನ ಬಗ್ಗೆ ಸಾಕಷ್ಟು ವಾದ ವಿವಾದಗಳು ಕೇಳಿ ಬಂದಿವೆ. ಹಿಂದೂ ಮಹಾಸಾಗರ ಮತ್ತು ಬಂಗಾಳಕೊಲ್ಲಿಯು ಸೇರುವ ಸ್ಥಳ ಧನುಷ್ಕೋಡಿ. ಇಲ್ಲಿ ಸಮುದ್ರವು ಅಷ್ಟೇನು ಆಳವಾಗಿಲ್ಲದಿರುವುದರಿಂದ, ವಾನರ ಸೇನೆಯ ಇಂಜಿನಿಯರ್‌ಗಳಾದ ನಲ ಮತ್ತು ನೀಲರು ಈ ಸ್ಥಳದಲ್ಲಿ ಸುಮಾರು ಹದಿನೈದು ಮೈಲಿ ಉದ್ದದ ಸೇತುವೆ ನಿರ್ಮಾಣ ಮಾಡಿದರು ಎಂಬ ನಂಬಿಕೆ. ಮರದ ತೊಲೆಗಳ ಜೊತೆಗೆ ಬಂಡೆಗಳನ್ನೂ ತಂದು, ಈ ಸೇತುವೆಯನ್ನು ನಿರ್ಮಿಸಿದರು. ಕಲ್ಲುಬಂಡೆಗಳು ಮುಳುಗತೊಡಗಿದಾಗ, ಹನುಮಂತನು ಬಂಡೆಗಳ ಮೇಲೆ ‘ಶ್ರೀರಾಮ’ ಎಂದು ಬರೆದನಂತೆ. ಆಗ ಬಂಡೆಗಳು ತೇಲತೊಡಗಿದವು ಎಂದು ರಾಮಭಕ್ತರ ನಂಬಿಕೆ. ಇದು ಕೇವಲ ಕಾಲ್ಪನಿಕವಾದ ಕತೆಯೆಂದೂ, ಸಮುದ್ರಕ್ಕೆ ಸೇತುವೆ ಕಟ್ಟಲು ಅಸಾಧ್ಯವೆಂದೂ ಕೆಲವರು ವಾದ ಮಾಡುತ್ತಾರೆ. ಆದರೆ, ಇತ್ತ್ತೀಚಿನ ವರ್ಷಗಳಲ್ಲಿ, ಅಮೆರಿಕಾದ ಪ್ರತಿಷ್ಠಿತ ವೈಜ್ಞಾನಿಕ ಸಂಶೋಧನಾ ಕೇಂದ್ರವಾದ ‘ನಾಸಾ'(NASA) ಉಪಗ್ರಹಗಳ ಚಿತ್ರಗಳು ನೀಡಿದ ಮಾಹಿತಿಯಂತೆ ಧನುಷ್ಕೋಡಿಯಿಂದ ಶ್ರೀಲಂಕಾದವರೆಗೆ, ರಾಮಸೇತುವೆಂದು ಕರೆಯಲ್ಪಡುವ ಜಾಗದಲ್ಲಿ, ಸಮುದ್ರದ ಅಡಿಯಲ್ಲಿ ‘ಪ್ಯುಮಿಸ್’ ಎಂಬ ವಿಶೇಷವಾದ ಕಲ್ಲುಬಂಡೆಗಳು ಬಿದ್ದಿವೆ. ಈ ಕಲ್ಲುಬಂಡೆಗಳು ಜ್ವಾಲಾಮುಖಿಯ ಸಮಯದಲ್ಲಿ ರಚಿಸಲ್ಪಡುವುವು – ವಾಯುವಿನ ಅಂಶವು ನೀರ ಮೇಲಿನ ಗುಳ್ಳೆಗಳಂತೆ ಕಲ್ಲುಗಳಲ್ಲಿ ಶೇಖರವಾಗುವುದರಿಂದ. ಈ ಬಂಡೆಗಳು ಹಗುರವಾಗಿ ನೀರ ಮೇಲೆ ತೇಲುವುವು ಹಾಗೂ ಕಾಲಾನುಕ್ರಮದಲ್ಲಿ ಮುಳುಗುವ ಸಾಧ್ಯತೆ ಇದೆಯೆಂದೂ ಕೆಲವು ವಿಜ್ಞಾನಿಗಳ ಅಭಿಮತವಾಗಿದೆ. ಮತ್ತೂ ಕೆಲವು ಭೂಗರ್ಭಶಾಸ್ತ್ರಜ್ಞರು ಈ ತೇಲುವ ಕಲ್ಲು ಬಂಡೆಗಳು ಹವಳದ ದಿಬ್ಬಗಳನ್ನು ಕಡಿದು ಮಾಡಿದ ಬಂಡೆಗಳೆಂದೂ ಅಭಿಪ್ರಾಯ ಪಡುತ್ತಾರೆ. ರಾಮೆಶ್ವರದ ಬಳಿಯಿರುವ ಸಾಗರಗಳಲ್ಲಿ ಹವಳದ ದಿಬ್ಬಗಳು ಹೇರಳವಾಗಿವೆ, ಸಮೀಪದಲ್ಲಿರುವ, ರಾಮನ ದೇಗುಲದಲ್ಲಿ, ಇಂತಹ ಕಲ್ಲುಗಳನ್ನು ಒಂದು ನೀರಿನ ತೊಟ್ಟಯಲ್ಲಿ ಹಾಕಿಟ್ಟಿದ್ದಾರೆ. ಭಕ್ತರು, ಅದನ್ನು ಮುಟ್ಟಿ ನೋಡಿ ಸಂಭ್ರಮಿಸುತ್ತಾರೆ. ನೇಪಾಳದಲ್ಲಿರುವ ‘ಜಲನಾರಾಯಣ್’ ಎಂಬ ವಿಗ್ರಹವೂ ಇಂತಹದೇ ಕಲ್ಲಿನಿಂದ ಮಾಡಲ್ಪಟ್ಟಿದೆ. ಅಂದು, ಆ ಬ್ರಹತ್ತಾದ ವಿಗ್ರಹ ನೀರಿನಲ್ಲಿ ತೇಲುವುದನ್ನು ಕಂಡು ಅಚ್ಚರಿ ಪಟ್ಟಿದ್ದೆವು. ಇಂದು, ರಾಮೇಶ್ವರದಲ್ಲಿ, ಇಂತಹ ಕಲ್ಲುಗಳಿಂದ ಸೇತುವೆಯನ್ನು ನಿರ್ಮಿಸಿದ್ದ ಕೌತುಕವನ್ನು ಊಹಿಸುತ್ತಾ ಸೋಜಿಗ ಪಡುವ ಸರದಿ ನಮ್ಮದಾಗಿತ್ತು.

ರಾಮೇಶ್ವರಕ್ಕೆ ಹೋಗಲು, ವಿಮಾನ, ರೈಲು, ಬಸ್ ಮಾರ್ಗಗಳಿದ್ದರೂ, ಎಲ್ಲದಕ್ಕಿಂತ ರಮಣೀಯವಾಗಿರುವುದು ರೈಲು ಮಾರ್ಗ. ಸಮುದ್ರದ ಮೇಲಿರುವ, ಹಾವಿನಂತೆ ಗೋಚರಿಸುವ ಸೇತುವೆಯ ಮೇಲೆ, ರೈಲಿನಲ್ಲಿ ಪಯಣಿಸುವ ಅದೃಷ್ಟ ಪ್ರವಾಸಿಗರದು. ಬಸ್ ಮಾರ್ಗವಾಗಿ ಬರುವವರು, ಸಮುದ್ರದ ಮೇಲೆ ನಿರ್ಮಿಸಲಾಗಿರುವ ಅತ್ಯಂತ ಉದ್ದವಾದ ಪಾಂಬನ್ ಸೇತುವೆಯ ಮೇಲೆ ಪಯಣಿಸುವವರು. ಸೇತುವೆಯ ಮೇಲೆ ಬಸ್ ನಿಲ್ಲಿಸಿ, ಒಮ್ಮೆ ಸಮುದ್ರ ರಾಜನನ್ನು ಕಣ್ತುಂಬಾ ತುಂಬಿಕೊಂಡೇ ಪ್ರಯಾಣ ಮುಂದುವರೆಸುವವರು.

ಪಾಂಬನ್ ಸೇತುವೆ PC: Internet

ರಾಮೇಶ್ವರಕ್ಕೆ ಬಂದವರು, ಪಾಪ ಪರಿಹಾರಕ್ಕಾಗಿ, ಮೊದಲಿಗೆ ಅಗ್ನಿ ತೀರ್ಥದಲ್ಲಿ ಮೀಯುವರು. ರಾವಣನನ್ನು ವಧಿಸಿದ ಮೇಲೆ ಶ್ರೀರಾಮನು, ಬ್ರಹ್ಮಹತ್ಯಾ ದೋಷ ನಿವಾರಣೆಗಾಗಿ ಈ ಸ್ಥಳದಲ್ಲಿ ಮುಳುಗು ಹಾಕಿದನೆಂಬ ಪ್ರತೀತಿ. ನಂತರ ದೇವಾಲಯದ ಸುತ್ತ ಇರುವ ಇಪ್ಪತ್ತೆರಡು ತೀರ್ಥಗಳಲ್ಲಿ ಪುಣ್ಯಸ್ನಾನ. ಈ ಭಾವಿಗಳನ್ನು ಗಂಗಾ, ಯಮುನಾ, ಬ್ರಹ್ಮಪುತ್ರ, ಸರಸ್ವತಿ ಇತ್ಯಾದಿ., ಎಂದು ಹೆಸರಿಸಲಾಗಿದೆ. ಸಮುದ್ರದ ಉಪ್ಪು ನೀರಿನಿಂದ ಸುತ್ತುವರೆಯಲ್ಪಟ್ಟಿದ್ದರೂ ಈ ಪುಣ್ಯತೀರ್ಥಗಳಲ್ಲಿರುವ ನೀರು ಸಿಹಿಯಾಗಿರುವುದು ಒಂದು ಅಚ್ಚರಿಯ ಸಂಗತಿ ಅಲ್ಲವೇ? ಈ ಭಾವಿಗಳಿಂದ ನೀರನ್ನು ಸೇದಿ ಭಕ್ತರ ಮೇಲೆ ಸುರಿಯುವರು.. ಇಂಜಿನೀಯರ್ ಅಗಿದ್ದ ನನ್ನ ಅಣ್ಣ, ‘ಹೀಗೆ ಇಪ್ಪತ್ತೆರಡು ಭಾವಿಗಳಿಂದ ನೀರು ಹಾಕುವ ಬದಲಿಗೆ, ಎಲ್ಲಾ ಭಾವಿಗಳಿಂದ ನೀರನ್ನು ಒಂದು ತೊಟ್ಟಿಗೆ ಪಂಪ್ ಮಾಡಿ ಸ್ನಾನ ಮಾಡಿದ್ದರೆ, ಪುಣ್ಯಸ್ನಾನ ಒಮ್ಮೆಲೆ ಆಗುತ್ತಿತ್ತು ಅಲ್ಲವೇ?’ ಎಂದು ಕೇಳಿದಾಗ ನಗುವುದೋ ಆಳುವುದೋ ತಿಳಿಯಲಿಲ್ಲ. ಈ ಪುಣ್ಯತೀರ್ಥಗಳು ರಾಮನ ಬತ್ತಳಿಕೆಯಲ್ಲಿದ್ದ ಇಪ್ಪತ್ತೆರಡು ಬಾಣಗಳು ಎಂಬ ಪ್ರತೀತಿಯೂ ಇದೆ. ಮತ್ತೊಂದು ನಂಬಿಕೆಯೂ ಜನಜನಿತವಾಗಿದೆ. ಕಾಶಿಯಾತ್ರೆ ಮಾಡಿದವರು ರಾಮೇಶ್ವರಯಾತ್ರೆ ಮಾಡಬೇಕೆಂದೂ, ಕಾಶಿಯಿಂದ ತಂದ ಗಂಗೆಯ ನೀರನ್ನು ರಾಮೇಶ್ವರದಲ್ಲಿ ವಿಸರ್ಜಿಸಬೇಕು. ಹಾಗೂ ರಾಮೇಶ್ವರದಿಂದ ಮರಳನ್ನು ಕೊಂಡು ಹೋಗಿ ಕಾಶಿಯ ಗಂಗಾನದಿಯಲ್ಲಿ ಬಿಡಬೇಕೆಂಬ ಸಂಪ್ರದಾಯವೂ ಇದೆ.

ಐತಿಹಾಸಿಕ ದಾಖಲೆಯಂತೆ, ಮೊದಲಿಗೆ ರಾಮೇಶ್ವರ ಜ್ಯೋತಿರ್ಲಿಂಗವನ್ನು ಒಂದು ಪುಟ್ಟ ಜೋಪಡಿಯಲ್ಲಿ ಸ್ಥಾಪಿಸಲಾಗಿತ್ತು. ನಂತರದ ದಿನಗಳಲ್ಲಿ, ಶ್ರೀಲಂಕಾದ ದೊರೆ ಪರಾಕ್ರಮ ಬಾಹು ಈ ದೇಗುಲುವನ್ನು ಕಟ್ಟಲು ಪ್ರಾರಂಭಿಸಿದನು. ಸೇತುಪತಿ ರಾಜವಂಶಸ್ಥರು ಈ ದೇಗುಲವನ್ನು ಅಭಿವೃದ್ಧಿಪಡಿಸಿದರು. ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ಭವ್ಯ ದೇಗುಲ – ಪಾಂಡ್ಯರು, ಟ್ರಾವಂಕೂರ್, ರಾಮನಾಥಪುರ, ಮೈಸೂರು, ಪುದುಕೊಟ್ಟಾ ಮುಂತಾದ ರಾಜ ವಂಶದವರ ಕಲಾ ಪ್ರೌಢಿಮೆಗೆ ಸಾಕ್ಷಿಯಾಗಿ ನಿಂತಿದೆ. ಸುಮಾರು ಹದಿನೈದು ಎಕರೆಯಲ್ಲಿ ನಿರ್ಮಿಸಲಾಗಿರುವ, ಈ ದೇವಾಲಯದ ನಾಲ್ಕು ದಿಕ್ಕಿನಲ್ಲಿಯೂ ನಾಲ್ಕು ಬೃಹದಾಕಾರದ ಗೋಪುರಗಳು ಯಾತ್ರಿಗಳನ್ನು ಕೈ ಬೀಸಿ ಕರೆಯುತ್ತಿವೆ. ಪೂರ್ವದಿಕ್ಕಿನ ಮಹಾದ್ವಾರದಲ್ಲಿರುವ ಗೋಪುರದಲ್ಲಿ ಎಲ್ಲಾ ದೇವಾನುದೇವತೆಗಳ ಶಿಲ್ಪಗಳೂ ಅದ್ಭುತವಾಗಿ ಕೆತ್ತಲ್ಪಟ್ಟಿವೆ. ದೇಗುಲವನ್ನು ಪ್ರವೇಶಿಸುತ್ತಿದ್ದಂತೆ, ಎರಡೂ ಬದಿಯಲ್ಲಿ ಕಾಣುವ ಸಾಲು ಸಾಲು ಕಂಬಗಳು, ಅವುಗಳ ಮೇಲಿರುವ ಕುಸುರಿ ಕೆಲಸ, ಅಂದಿನ ಶಿಲ್ಪಿಗಳ ಕೌಶಲವನ್ನು ಪ್ರದರ್ಶಿಸುತ್ತಿತ್ತು. ವಿಶ್ವದಲ್ಲಿಯೇ ಅತ್ಯಂತ ಉದ್ದವಾದ, ನಾಲ್ಕು ಸಾವಿರ ಅಡಿ ಉದ್ದದ ಕಾರಿಡಾರ್‌ನಲ್ಲಿ ನಾಲ್ಕು ಸಾವಿರ ಕಂಬಗಳು – ಕಲ್ಲರಳಿ ಹೂವಾದಂತೆ ಕಂಗೊಳಿಸುತ್ತಿವೆ. ಸೇತುಪತಿ ಮಂಟಪ, ಕಲ್ಯಾಣ ಮಂಟಪ, ನಂದಿ ಮಂಟಪಗಳು ಈ ದೇಗುಲದ ಭವ್ಯತೆಯನ್ನು ಸಾರುತ್ತಿವೆ. ಎಲ್ಲಿಂದ ಬಂದರೋ ಈ ಕಲಾವಲ್ಲಭರು? ಬಹುಶಃ, ವಿಶ್ವಕರ್ಮನ ಅನುಜರಿರಬಹುದು. ಅಂತೂ, ಇಲ್ಲೊಂದು ಸ್ವರ್ಗ ಲೋಕವನ್ನೇ ನಿರ್ಮಾಣ ಮಾಡಿ ಹೋಗಿದ್ದಾರೆ. ಆದಿ, ಅಂತ್ಯವಿಲ್ಲದ ಜ್ಯೋತಿ ಸ್ವರೂಪನಾದ ಪರಶಿವನ ಸನ್ನಿಧಿಯಲ್ಲಿ ಯಾತ್ರಿಗಳ ಬದುಕು ಪಾವನವಾಗುವುದು. ಬೃಹದಾಕಾರದ ನಂದಿ, ಎಲ್ಲಕ್ಕೂ ಸಾಕ್ಷಿಯಾಗಿ ನಿಂತಿದ್ದಾನೆ. ‘ಸೇತು ಬಂಧೇತು ರಾಮೇಶಂ’ ಎಂದು ದ್ವಾದಶಲಿಂಗ ಜ್ಯೋತಿರ್ಲಿಂಗ ಶ್ಲೋಕದಲ್ಲಿ ಹೇಳುವಂತೆ – ಎಲ್ಲರನ್ನೂ ಮಂಗಳಕರವಾದ, ಮೌಲ್ಯಯುತವಾದ, ಸ್ನೇಹದ ದಿವ್ಯವಾದ ಸೇತುವೆಯಿಂದ ಬಂಧಿಸೋಣ, ರಾಮೇಶ್ವರ ಜ್ಯೋತಿರ್ಲಿಂಗವನ್ನು ನಮ್ಮ ಹೃದಯ ಕಮಲದಲ್ಲಿ ನೆಲೆಯಾಗಿಸೋಣ. ಆದಿಗುರು ಶಂಕರರ ಧಾರ್ಮಿಕ ಐಕ್ಯತೆಯ ಕನಸನ್ನು ನನಸಾಗಿಸೋಣ.

ಈ ಲೇಖನ ಸರಣಿಯ ಹಿಂದಿನ ಲೇಖನ ( ಜ್ಯೋತಿರ್ಲಿಂಗ 6) ಇಲ್ಲಿದೆ: http://surahonne.com/?p=34639

-ಡಾ.ಗಾಯತ್ರಿದೇವಿ ಸಜ್ಜನ್

6 Responses

  1. ನಯನ ಬಜಕೂಡ್ಲು says:

    Very nice

  2. sudha says:

    Very good information

  3. ತುಂಬಾ ಚೆನ್ನಾಗಿದೆ ಮೇಡಂ

  4. ನಾಗರತ್ನ ಬಿ. ಅರ್. says:

    ಉತ್ತಮ ನಿರೂಪಣೆಯೊಂದಿಗೆ ಜ್ಯೋತಿರ್ಲಿಂಗ ರಾಮೇಶ್ವರ ಲಿಂಗದ ಪರಿಚಯಾತ್ಮಕ ಲೇಖನ ಸೊಗಸಾಗಿದೆ ಮೇಡಂ ಧನ್ಯವಾದಗಳು

  5. . ಶಂಕರಿ ಶರ್ಮ says:

    ರಾಮೇಶ್ವರದ ಐತಿಹ್ಯ, ಪೌರಾಣಿಕ ಕಥಾ ಹಿನ್ನೆಲೆ ಬಹಳ ರೋಚಕವಾಗಿದೆ. ಧನುಷ್ಕೋಡಿಯಲ್ಲಿ ರಚನೆಗೊಂಡಿದ್ದ ರಾಮಸೇತುವಿನಲ್ಲಿ ಉಪಯೋಗಿಸಲಾಗಿದ್ದ ಶಿಲೆಗಳ ವೈಜ್ಞಾನಿಕ ಮಾಹಿತಿ ಹೊತ್ತ ಲೇಖನವು ಬಹಳ ಸೊಗಸಾಗಿದೆ… ಧನ್ಯವಾದಗಳು ಗಾಯತ್ರಿ ಮೇಡಂ.

  6. Padmini Hegade says:

    ರಾಮೇಶ್ವರದ ಐತಿಹ್ಯ, ಪೌರಾಣಿಕ ಕಥಾ ಹಿನ್ನೆಲೆ, ರಾಮಸೇತುವಿನಲ್ಲಿ ಉಪಯೋಗಿಸಿದ್ದ ಶಿಲೆಗಳ ವೈಜ್ಞಾನಿಕ ಮಾಹಿತಿ ಸೊಗಸಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: