ಪ್ರವಾಸಿ ಸಿಂಡ್ರೋಮ್‌ಗಳು

Share Button

ಸಾಮಾನ್ಯವಾಗಿ ಎಲ್ಲರೂ ಪ್ರವಾಸ ಮಾಡುವ ಸಮಯದಲ್ಲಿ ಒಂದು ಪುರಾತನ ತಾಣ, ದೇಗುಲ, ಗುಹಾಂತರ ದೇವಾಲಯಗಳು, ಕೋಟೆಕೊತ್ತಲಗಳು, ಪ್ರಾಚೀನ ಅವಶೇಷಗಳು, ಭಗ್ನವಾದ ನಗರ ಸಂಕೀರ್ಣದಂತಹ ಸ್ಥಳಗಳನ್ನು ವೀಕ್ಷಿಸಿದಾಗ ಒಂದಲ್ಲ ಒಂದು ರೀತಿಯ ರೋಮಾಂಚನವಾಗುವ ಅನುಭವ ಆಗುತ್ತದೆ. ಕೆಲವು ನಗರ, ತಾಣಗಳಿಗೆ ಹೋದಾಗ ಒಂದು ತರಹದ ವಿಚಿತ್ರ ಸಹಲಕ್ಷಣ (Syndrome) ಕಾಡುವುದುಂಟು. ಹಲವಾರು ರೀತಿಯ ಈ ಸಿಂಡ್ರೋಮ್‌ಗಳು ಪ್ರವಾಸಿಗರಲ್ಲಿ ಕಾಣಸಿಗುತ್ತದೆ. ಇವುಗಳ ಸ್ಥೂಲ ಸಮೀಕ್ಷೆಯೇ ಈ ಲೇಖನದ ಉದ್ದೀಶ್ಯ.
ಪ್ರವಾಸಿ ಸಿಂಡ್ರೋಮ್‌ಗಳೆಂದರೆ ಸ್ಥೂಲವಾಗಿ ತಾತ್ಕಾಲಿಕ ಮಾನಸಿಕ ಕುಸಿತ ಎನ್ನಬಹುದು. ಹಲವಾರು ತರಹೆಯ ಸಿಂಡ್ರೋಮ್‌ಗಳು ಪ್ರವಾಸಿಗರನ್ನು ಕೆಲವೊಮ್ಮೆ ಕಾಡಬಹುದು. ಮನಸ್ಸು ಆ ತಾಣದ ಪರಿಸರಕ್ಕೆ ಹೊಂದಿಕೊಳ್ಳದಿದ್ದರೆ ಈ ಸಿಂಡ್ರೋಮ್‌ಗಳು ಕಾಡುತ್ತವೆ.

ಫ್ಲಾರೆನ್ಸ್ ಅಥವಾ ಸ್ಟೆನ್‌ಧಾಲ್ ಸಿಂಡ್ರೋಮ್ (Florence or Stendhal Syndrome) ಮೊದಲು ಫ್ಲಾರೆನ್ಸ್‌ನೆಂಬ ಪ್ರವಾಸಿಗೆ ಅನುಭವವಾದ್ದರಿಂದ ಈ ಹೆಸರು ಬಂದಿದೆ. ಇದು ಯಾವ ಜಾಗದಲ್ಲಿ ಅತಿಯಾದ ಕಲೆ ಮತ್ತು ವಾಸ್ತುಶಿಲ್ಪವಿರುವುದೋ ಅಂಥಹ ಜಾಗದಲ್ಲಿ ವೀಕ್ಷಿಸಿದ ಪ್ರವಾಸಿಗರಿಗೆ ಉಂಟಾಗುವ ಅನುಭವ. ಫ್ಲಾರೆನ್ಸ್, ಕಾಂಬೋಡಿಯಾ, ಬೇಲೂರು, ಹಳೇಬೀಡು, ಅಜಂತ, ಎಲ್ಲೋರ ಇಂಥಹ ಸ್ಥಳಗಳಲ್ಲಿ ಈ ಅನುಭವ ಸಾಮಾನ್ಯ. ಇದರಲ್ಲಿ ಪ್ರವಾಸಿಗರು ಮಂಪರು, ಭ್ರಮಾತ್ಮಕ ಅನುಭವ, ಉಸಿರಾಟದ ತೊಂದರೆ ಅನುಭವಿಸುತ್ತಾರೆ ಇದಕ್ಕೆ ಪರಿಹಾರ ವಿಶ್ರಾಂತಿ ಹಾಗೂ ಒತ್ತಡ ರಹಿತವಾಗಿರುವುದು. ಎಲ್ಲವನ್ನೂ ನೋಡಬೇಕೆಂಬ ಹಂಬಲದಿಂದ ದೂರವಿರುವುದು.

ಪ್ಯಾರಿಸ್ ಸಿಂಡ್ರೋಮ್ (Paris Syndrome ) ಒಂದು ವಿಚಿತ್ರವಾದ ಅನುಭವ. ಪ್ಯಾರಿಸ್ಸಿಗೆ ಮೊದಲ ಬಾರಿ ಬಂದವರು ಇದರ ಬಗ್ಗೆ ಅವರಿಗಿರುವ ರಮ್ಯ ಹಾಗೂ ಕಲ್ಪನಾಮಯ ವರ್ಣನೆ, ಚಿತ್ರಣ ಇಲ್ಲದೆ ನಿರಾಶಾಭಾವನೆ ಮೂಡುವುದು. ಇದು ವಿಶೇಷವಾಗಿ ಜಪಾನ್ ದೇಶದ ಪ್ರವಾಸಿಗರಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಪ್ರತಿವರ್ಷ ಕನಿಷ್ಟ ಇಪ್ಪತ್ತು ಪ್ರವಾಸಿಗರಲ್ಲಿ ಕಾಣುತ್ತದೆ. ಇದಕ್ಕೆ ಕಾರಣ ಜಪಾನಿನ ಪ್ರವಾಸಿಗರಲ್ಲಿ ಮಾಧ್ಯಮದಲ್ಲಿ ಪ್ಯಾರಿಸ್ಸನ್ನು ಬಹಳ ಉತ್ಪ್ರೇಕ್ಷಿಸಿ ತೋರಿಸಿರುವುದೇ ಕಾರಣ ಎನ್ನಲಾಗಿದೆ. ಈ ಸಿಂಡ್ರೋಮ್‌ನಿಂದ ಪ್ರವಾಸಿಗರು ಆತಂಕ, ಭ್ರಮೆ, ಆಕ್ರಮಣಕಾರಿ ವರ್ತನೆ, ನಿದ್ರಾಹೀನತೆ, ಉಸಿರಾಟದ ತೊಂದರೆಯಿಂದ ನರಳುತ್ತಾರೆ. ಇದರಿಂದಾಗಿ ಪ್ಯಾರಿಸ್ ಜಪಾನ್ ರಾಯಭಾರಿ ಕಛೇರಿಯಲ್ಲಿ ಒಂದು ಸಹಾಯವಾಣಿ ಕೂಡ ಇದೆ ಎಂದರೆ ಇದರ ತೀವ್ರತೆಯ ಅರಿವಾದೀತು. ಸ್ವದೇಶಕ್ಕೆ ವಾಪಾಸಾದ ನಂತರ ಪ್ರವಾಸಿಗಳು ಸಾಮಾನ್ಯ ಸ್ಥಿತಿಗೆ ಮರಳುತ್ತಾರೆ.

ಜೆರೋಸಲೆಮ್ ಸಿಂಡ್ರೋಮ್ (Jerusalem Syndrome) ಇದೊಂದು ವಿಚಿತ್ರವಾದ ಸಹಲಕ್ಷಣ. ಇದನ್ನು 2000 ನೇ ಇಸವಿಯಲ್ಲಿ ಗುರುತಿಸಲಾಯಿತು. ಜಗತ್ತಿನ ಪುಣ್ಯಭೂಮಿ ಎಂದೇ ಹೆಸರಾಗಿರುವ ಜೆರೋಸಲೆಮ್ ಯೆಹೂದಿಯರು, ಕ್ರಿಶ್ಚನರು ಹಾಗೂ ಮುಸ್ಲಿಮರಿಗೆ ಪವಿತ್ರ ಕ್ಷೇತ್ರ. ಯೇಸುವಿನ ಜನ್ಮಸ್ಥಳ ಬೆತ್ಲೆಹೆಮ್‌ನಿಂದ ಕೇವಲ 20 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಬಂದ ಕೆಲವರು ಮೈಮೇಲೆ ಭೂತ ಬಂದವರಂತೆ ವರ್ತಿಸುತ್ತಾರೆ, ರೋಧಿಸುತ್ತಾರೆ, ಬಿಕ್ಕಿ ಬಿಕ್ಕಿ ಅಳುತ್ತಾರೆ, ತಲೆಕೂದಲು ಕೆದರಿಕೊಂಡು ಕೂಗುತ್ತಾರೆ, ಧರ್ಮ ಪ್ರವರ್ತಕರಂತೆ ವರ್ತಿಸುತ್ತಾರೆ. ಇದು ಈ ಸಿಂಡ್ರೋಮ್‌ನ ಲಕ್ಷಣಗಳು ಇದಕ್ಕೆ ಒಳಪಟ್ಟವರು ಆತಂಕ, ಚಿಂತೆ, ವ್ಯಾಕುಲತೆ, ನಿದ್ರಾಹೀನತೆ, ಭ್ರಮೆಗಳನ್ನು ಅನುಭವಿಸುತ್ತಾರೆ. ಈ ಸಿಂಡ್ರೋಮನ್ನು ಜಿರೋಸಲಮ್ ಅಲ್ಲದೆ ಅತ್ಯಂತ ಪವಿತ್ರ, ಕ್ಷೇತ್ರಗಳಾದ ಕಾಶಿ, ಪುರಿಜಗನ್ನಾಥ, ಕುಂಭಮೇಳ ಇನ್ನಿತರ ಜಾತ್ರೆಗಳನ್ನು ಸಾಮಾನ್ಯವಾಗಿ ಕಾಣಬಹುದು. ಇದನ್ನು ಮನೋವೈದ್ಯರು ಕ್ಷಣಿಕ ಆದರೆ ತೀಕ್ಷ್ಣ ಧರ್ಮಪ್ರೇರಿತ ಮಾನಸಿಕ ಅಸ್ವಸ್ಥತೆ ಎಂದಿದ್ದಾರೆ. ಪ್ರವಾಸಿಗರು ತಾಯ್ನಾಡಿಗೆ ಮರಳಿದಾಗ ಸಹಜಸ್ಥಿತಿಗೆ ಬರುತ್ತಾರೆ.

‘ಇಂಡಿಯಾ ಸಿಂಡ್ರೋಮ್ (India Syndrome ) ಇದು ಜೆರೋಸಲಮ್ ಸಿಂಡ್ರೋಮ್‌ನ ಸಮೀಪದ ಸಹಲಕ್ಷಣ. ಇದು ತಾತ್ಕಾಲಿಕ ಮಾನಸಿಕ ಅಸಮತೋಲನ ಸ್ಥಿತಿ. ಇದು ಸಾಮಾನ್ಯವಾಗಿ ಪಾಶ್ಚಿಮಾತ್ಯ ಪ್ರವಾಸಿಗರು ಭಾರತದ ಅದ್ಭುತಕಲೆ, ವಾಸ್ತುಶಿಲ್ಪ, ಸಂಸ್ಕಾರ, ಪದ್ಧತಿ, ಆಧ್ಯಾತ್ಮ, ಧರ್ಮ ಇವುಗಳಿಂದ ಅತೀ ಪ್ರಭಾವಿತರಾಗಿ ಮಾನಸಿಕ ಅಸ್ವಸ್ಥತೆಯಿಂದ ಆಗುವ ಭ್ರಮೆಯಿಂದ ನರಳುತ್ತಾರೆ. ಇಲ್ಲಿಯ ಅತಿಯಾದ ಅವರ ಊಹೆಗೂ ಮಿತಿಮೀರಿದ ಆಧ್ಯಾತ್ಮ, ಧರ್ಮ ಇವುಗಳಿಂದ ಅವರನ್ನು ಈ ಸ್ಥಿತಿಗೆ ತರುತ್ತದೆ ಎಂಬ ಮಾತಿದೆ. ಇದರ ಅತಿರೇಕದ ಪರಮಾವಧಿ ಎಂದರೆ ಕೆಲ ಪ್ರವಾಸಿಗರು ತಮ್ಮ ಎಲ್ಲಾ ವಸ್ತುಗಳನ್ನು, ಪಾಸ್‌ಪೋರ್ಟ್ ಸಹಿತವಾಗಿ ಬಿಟ್ಟು ನಾಪತ್ತೆಯಾಗಿರುವ ಪ್ರಕರಣಗಳು ದಾಖಲಾಗಿವೆ. ಸಾಮಾನ್ಯವಾಗಿ ತಾಯ್ನಾಡಿಗೆ ಮರಳಿದ ಬಳಿಕ ಸಹಜಸ್ಥಿತಿಗೆ ಪ್ರವಾಸಿಗರು ಬರುತ್ತಾರೆ.

ಕಲ್ಚರ್ ಶಾಕ್ ಸಿಂಡ್ರೋಮ್ (Culture Shock Syndrome) ಈ ಸಹಲಕ್ಷಣ ಯಾರಿಗೆ ಬೇಕಾದರೂ ಎಲ್ಲಾದರೂ ಆಗಬಹುದು. ಇದರಿಂದ ನರಳುವವರು ಬಸ್‌ ಟಿಕೆಟ್ ಪಡೆಯುವ ಬಗ್ಗೆ, ಹೋಟೆಲ್‌ನಲ್ಲಿ ಮೆನು ಆರ್ಡರ್ ಮಾಡುವ ಬಗ್ಗೆ ತಡಬಡಿಸುತ್ತಾರೆ. ಇವರಿಗೆ ಗೊಂದಲಮಯ ಸ್ಥಿತಿ, ಆತಂಕ, ಅಸಂಬದ್ಧವಾದ ಕೋಪ ಇರುತ್ತದೆ. ಹೊಸ ವಾತಾವರಣಕ್ಕೆ ಹೊಂದಿಕೆಯಾದೊಡನೇ ಸಹಜಸ್ಥಿತಿಗೆ ಮರಳುತ್ತಾರೆ. ಇದು ಬಹಳ ತಾತ್ಕಾಲಿಕ ಮಾನಸಿಕ ಪಲ್ಲಟ ಅಷ್ಟೆ.

ವ್ಯತಿರಿಕ್ತವಾದ ಕಲ್ಚರಲ್ ಸಿಂಡ್ರೋಮ್ (Reverse Culture Shock Syndrome) ಇದು ಸಾಮಾನ್ಯವಾಗಿ ಪ್ರವಾಸಿಗರು ತಾಯ್ನಾಡನ್ನು ಬಿಟ್ಟು ಬಹುಕಾಲ ಹೊರಗಿದ್ದು ವಾಪಾಸಾದಾಗ ಪುನಃ ಅಲ್ಲಿನ ವಾತಾವರಣಕ್ಕೆ ಹೊಂದಲು ಬಹಳ ಕಷ್ಟಪಡುತ್ತಾರೆ. ಇದನ್ನು ಅನುಭವಿಸುವವರು. ಸಮಾಜದಲ್ಲಿ ತಪ್ಪು ಹುಡುಕುವುದು, ಜೀವನ ಬಹಳ ಬೇಸರ ಹಾಗೂ ನಿರಾಶಾದಾಯಕ ಎಂಬ ಭ್ರಾಂತಿಯಲ್ಲಿರುತ್ತಾರೆ. ಇದಕ್ಕೆ ತಮ್ಮ ದೈನಂದಿನ ಕಾರ್‍ಯಗಳಿಗೆ ಹೊಂದಿಕೊಳ್ಳಲು ಬಹಳ ಸಮಯ ಹಿಡಿಯುತ್ತದೆ. ಈ ಸಿಂಡ್ರೋಮ್ ಪ್ರಪಂಚದ ಎಲ್ಲಾ ಪ್ರವಾಸಿಗಳಿಗೂ ಅನ್ವಯ.

ಜೆಟ್ ಲ್ಯಾಗ್ ಸಿಂಡ್ರೋಮ್ (Jet Lag Syndrome) ಇದು ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಹಲಕ್ಷಣ, ನಮ್ಮ ದೇಹದ ಒಳಗಿನ ಸಮಯ ಹೊರಗಿನ ಪ್ರಪಂಚದ ಸಮಯಕ್ಕೆ ಹೊಂದಿಕೆಯಾಗದಿರುವುದೇ ಈ ಸಹಲಕ್ಷಣಕ್ಕೆ ಕಾರಣ. ಅಲ್ಲದೆ ದೀರ್ಘ ಪ್ರಯಾಣದ ವೇಳೆ ಈ ಸಮಯ ವಲಯ (Time Zone ) ವೇಗವಾಗಿ ಬದಲಾಗುತ್ತಿರುವುದೂ ಒಂದು ಕಾರಣ. ಇದರಿಂದ ನಿದ್ರಾಹೀನತೆ, ವಾಕರಿಕೆ, ಬಲಹೀನತೆ, ಏಕಾಗ್ರತೆಯ ಕೊರತೆಯಿಂದ ನರಳುತ್ತಾರೆ. ಇದಕ್ಕೆ ಪರಿಹಾರ ವಿಶ್ರಾಂತಿ, ಹೆಚ್ಚು ತಂಪು ಪಾನೀಯ ಸೇವನೆ, ನಿಮ್ಮ ಜಾಗದಲ್ಲೇ ಆದಷ್ಟು ಸಮಯ ಇರುವುದು. ಪ್ರಯಾಣದ ವೇಳೆ ಸಾಕಷ್ಟು ನಿದ್ರೆ ಮಾಡುವುದು. ಈ ಸಹಲಕ್ಷಣ ಕೆಲವೇ ಗಂಟೆ ಅಥವಾ ದಿನಗಳಲ್ಲಿ ಸರಿಹೋಗುತ್ತದೆ. ವ್ಯಾಯಾಮ ಅದ್ಭುತ ಪರಿಣಾಮ ನೀಡಬಲ್ಲುದು.

ಮೆಫ್ಲೋಕ್ವೀನ್ ಸಿಂಡ್ರೋಮ್ (Mefloquine Syndrome) ಕೆಲವು ದೇಶಗಳಲ್ಲಿ ಕಾಲಿಡುವ ಮುನ್ನ ಮಲೇರಿಯ ನಿರೋಧ ಚುಚ್ಚು ಮದ್ದು ಕಡ್ಡಾಯ. ಈ ಚುಚ್ಚುಮದ್ದನ್ನು ತೆಗೆದುಕೊಂಡು ಪ್ರಯಾಣಿಸುವ ಕೆಲ ಪ್ರವಾಸಿಗರಿಗೆ ನಿದ್ರಾಹೀನತೆ, ಆತಂಕ, ಹಿಂಸಾತ್ಮಕ ನಡವಳಿಕೆ, ಆತ್ಮಹತ್ಯೆಯ ಇಂಗಿತ ಕಾಡುತ್ತವೆ. ಇದರ ನಿವಾರಣೆಗೆ ವಿಶ್ರಾಂತಿ, ತಂಪು ಪಾನೀಯ ಸೇವನೆ ತಕ್ಕಮಟ್ಟಿಗೆ ಉಪಶಮನ ನೀಡಬಲ್ಲದು.

ಔನ್ನತ್ಯ ಅಸ್ವಸ್ಥತೆಯ ಸಿಂಡ್ರೋಮ್ (Altitude Sickness Syndrome) ಇದು ತಕ್ಷಣ ಅತೀ ಎತ್ತರಕ್ಕೆ ಏರುವಾಗ ಉಂಟಾಗುವ ತಾತ್ಕಾಲಿಕ ಅಸ್ವಸ್ಥತೆ ಇದು ಸಾಮಾನ್ಯವಾಗಿ 3000 ಅಡಿಗೂ ಮಿಕ್ಕಿ ಏರಿದಾಗ ಉಂಟಾಗುವ ಸಂಭವ ಹೆಚ್ಚು. ಇದರಿಂದ ಸಣ್ಣ ತಲೆನೋವು, ಶಿರೋಭ್ರಮಣೆಯ ಅನಿಸಿಕೆ, ವಾಕರಿಕೆ, ಆಯಾಸ, ನಿತ್ರಾಣ, ಹಸಿವಿನ ಕೊರತೆ ಇತ್ಯಾದಿ ಸಂಭವಿಸಬಹುದು. ಇವುಗಳ ನಿವಾರಣೆಗೆ ಸೂಕ್ತವಾದ ಔಷಧಿಗಳು ಲಭ್ಯ. ಧೂಮಪಾನ, ಮದ್ಯಸೇವನೆ ಈ ಚಾರಣಗಳಲ್ಲಿ ಸಂಪೂರ್ಣ ವರ್ಜ್ಯ. ಹೇರಳವಾದ ಪಾನೀಯ ಸೇವನೆ ಸ್ವಲ್ಪ ಮುದ ನೀಡಬಲ್ಲದು. ಭಾರತದ ಮಾನಸ ಸರೋವರ, ಬದ್ರಿ, ಕೇದಾರನಾಥ, ಜಪಾನಿನ ಆಲ್‌ಫೈನ್ ಹಾಗೂ ಯೂರೋಪಿನ ಟಿಟ್ಲಿಸ್, ಉಲ್‌ಫ್ರ ತಾಣಗಳ ಭೇಟಿ ಈ ಬಗೆಯ ಸಹಲಕ್ಷಣಗಳನ್ನು ತೋರಬಲ್ಲುದು.

ಪಿ.ಟಿ.ಎಸ್.ಡಿ. (Post Traumatic Stress Disorder) ಇದು ಗಂಭೀರ ಸ್ವರೂಪದ ಸಿಂಡ್ರೋಮ್ ಅಥವಾ ಸಹಲಕ್ಷಣ. ಇದು ಸಾಮಾನ್ಯವಾಗಿ ಪ್ರವಾಸಿಗರು ಪ್ರವಾಸದ ವೇಳೆ ಒಂದು ಮರೆಯಲಾಗದ ಅಪಘಾತ ಅಥವಾ ಘಟನೆಗೆ ಒಳಪಟ್ಟರೆ ಒಂದು ಮಾನಸಿಕ ಆಘಾತಕ್ಕೆ ಒಳಪಡುತ್ತಾರೆ. ಅವರಿಗೆ ಉಳಿದದವರ ಬಗ್ಗೆ ಅಪರಾಧಿಭಾವ, ಬೇರೆಯವರಿಂದ ಪ್ರತ್ಯೇಕತಾ ಭಾವನೆ ಉಂಟಾಗುತ್ತದೆ. ಇವರಲ್ಲಿ ಪುನಃ ಪ್ರವಾಸ ಮಾಡುವ ಧೈರ್ಯ ಅಥವಾ ಆಸೆ ಇರುವುದಿಲ್ಲ. ಇವರಿಗೆ ವೈದ್ಯಕೀಯ ಸಲಹೆ ಅತ್ಯಗತ್ಯ ಇದರಿಂದ ಹೊರಬರಲು ಬಹಳ ಸಮಯ ಬೇಕಾಗಬಹುದು.

ಡಾಟರ್ ಆಫ್ ಕ್ಯಾಲಿಫೋರ್ನಿಯ ಸಿಂಡ್ರೋಮ್ (Daughter of California Syndrome) ಇದು ಸಾಗರದಾಚೆಯ ಮಕ್ಕಳ ಮನಸ್ಥಿತಿಗೆ ಸಂಬಂಧಿಸಿದ ಸಹಲಕ್ಷಣ. ಇವರು ಡಾಕ್ಟರಾಗಲೀ, ಇಂಜಿನಿಯರಾಗಲೀ, ಮಾಮೂಲಿ ಕೆಲಸಗಾರನಾಗಲೀ ತಮ್ಮ ತಾಯ್ನಾಡಿನಲ್ಲಿ ತಂದೆ, ತಾಯಿ ಅಥವಾ ಸಂಬಂಧಿಕರ ಆರೋಗ್ಯ ವ್ಯತ್ಯಯವಾಗಿ ಆಸ್ಪತ್ರೆ ಸೇರಿದರೆ, ಗೂಗಲಿನಿಂದ ಖಾಯಿಲೆಯ ಎಲ್ಲಾ ವಿವರ ಪಡೆದು ಆಸ್ಪತ್ರೆಯ ವೈದ್ಯರಿಗೆ ತಾವು ಸ್ವತಃ ವೈದ್ಯರಲ್ಲದಿದ್ದರೂ ಫೋನಾಯಿಸುತ್ತಾರೆ. ಅವರ ಚಿಕಿತ್ಸಾ ಕ್ರಮದ ಬಗ್ಗೆ ಪ್ರತಿಕ್ರಿಯಿಸಿ ವಾಚಾಮ ಗೋಚರವಾಗಿ ಬಯ್ಯುತ್ತಾರೆ. ಚಿಕಿತ್ಸಾ ಕ್ರಮದ ಬಗ್ಗೆ ಅವರದೇ ವ್ಯಾಖ್ಯಾನ ನೀಡುತ್ತಾರೆ. ಮನಃಶಾಸ್ತ್ರಿಗಳ ಪ್ರಕಾರ ದೂರದಲ್ಲಿರುವ ಇವರಿಗೆ ಪಶ್ಚಾತ್ತಾಪದ ನಡವಳಿಕೆ, ತಾವೇನು ಮಾಡಲಾಗುವುದಿಲ್ಲವಲ್ಲ ಎಂಬ ಅಸಾಹಯಕತೆ, ಅಸಹನೆ, ಈ ವರ್ತನೆಗೆ ಕಾರಣ ಎನ್ನುತ್ತಾರೆ. ಇದು ಎಲ್ಲಾ ವಲಸಿಗರಲ್ಲಿ ಕಾಣುವ ಸಾಮಾನ್ಯ ನಡವಳಿಕೆ. ಇದಕ್ಕೆ ಪರಿಹಾರ ಆ ವ್ಯಕ್ತಿಗಳಿಂದಲೇ ಬರಬೇಕು ವಿನಹ ವೈದ್ಯೋಪಚಾರದಿಂದ ಸಾಧ್ಯವಿಲ್ಲ. ಗಾಢವಾದ ಕೌಟುಂಬಿಕ ಸಂಬಂಧಗಳಿರುವ ವ್ಯಕ್ತಿಗಳಲ್ಲಿ ಈ ಸಿಂಡ್ರೋಮ್‌ಗಳು ಸಾಮಾನ್ಯ. ಅವರು ಸಹಾಯ ಹಸ್ತ ನೀಡಲು ಅಸಹಾಯಕರು ಆದ್ದರಿಂದ ಅದು ಆಕ್ರೋಶದ ರೂಪದಲ್ಲಿ ಹೊರಹೊಮ್ಮುತ್ತದೆ.

ವಾಂಡರ್‌ಲಸ್ಟ್ ಸಿಂಡ್ರೋಮ್ (Wander Lust Syndrome) (ಅಲೆದಾಟದ ಅತ್ಯಾಸೆಯ ಸಹಲಕ್ಷಣ) ಇದೊಂದು ವಿಚಿತ್ರವಾದ ಕೆಲವೇ ಪುರುಷ ಹಾಗೂ ಸ್ತ್ರೀಯರಲ್ಲಿ ಕಾಣಬರುವ ಸಹಲಕ್ಷಣಗಳು ಇವರು ಯಾರೂ ನೋಡದಿರುವ ಅಪಾಯಕಾರಿ ಸ್ಥಳಗಳು, ಸಾಹಸಮಯ ಪ್ರವಾಸಿ ತಾಣಗಳು, ಹೊಸ ಸಂಸ್ಕೃತಿ, ಸಂಸ್ಕಾರಗಳಿರುವ ತಾಣಗಳು ಇವುಗಳ ಹುಡುಕಾಟ ಮಾಡಿ ಪ್ರವಾಸ ಕೈಗೊಳ್ಳುತ್ತಾರೆ. ಸಾಮಾನ್ಯವಾಗಿ 20-40 ವರ್ಷ ವಯಸ್ಸಿನ ಪುರುಷರು ಹಾಗೂ ಸ್ತ್ರೀಯರು ಈ ತರಹದ ಸಾಹಸದ ಪ್ರವಾಸಕ್ಕೆ ತಿಣುಕಾಡುತ್ತಿರುತ್ತಾರೆ. ವಿಶೇಷವೆಂದರೆ ಈ ತರಹದ ಸಿಂಡ್ರೋಮ್‌ನವರು ಪ್ರವಾಸದಿಂದ ಹಿಂದಿರುಗಿದ ಕೇವಲ 2-3 ತಿಂಗಳಲ್ಲೇ ಮತ್ತೊಂದು ಪ್ರವಾಸಕ್ಕೆ ಅಣಿಯಾಗುತ್ತಾರೆ. ಈ ಸಿಂಡ್ರೋಮ್ ನವರು ಕೆಲವೊಮ್ಮೆ ಸಾಹಸದ ತಾಣಗಳಿಗೆ ಪ್ರಯತ್ನಿಸಿ ಜೀವಭಯವನ್ನು ಎದುರಿಸಿರುವ ಉದಾಹರಣೆಗಳಿವೆ. ಆದರೆ ಇವರು ಯಾವುದಕ್ಕೂ ಎದೆಗುಂದದ ಧೈರ್ಯಸ್ಥರಾಗಿರುವುದು ವಿಶೇಷ.

ಸ್ಟಾಕ್‌ಹೋಮ್ ಸಿಂಡ್ರೋಮ್ (Stockholm Syndrome ಈ ಸಹಲಕ್ಷಣ ಸಾಮಾನ್ಯವಾಗಿ ವಿಮಾನವನ್ನು ಅಪಹರಿಸಿದ ನಂತರ ಅದರಲ್ಲಿರುವ ಪ್ರವಾಸಿಗಳಲ್ಲಿ ಉಂಟಾಗುವ ಸಹಲಕ್ಷಣ. ಇದು ಮೊದಲಬಾರಿಗೆ 1973 ರಲ್ಲಿ ಒಂದು ಬ್ಯಾಂಕ್ ದರೋಡೆಯಲ್ಲಿ ಒತ್ತೆಯಾಳುಗಳು ಅನುಭವಿಸಿದ ಸಹಲಕ್ಷಣ. ಆದ್ದರಿಂದ ಈ ಹೆಸರು ಬಂದಿದೆ. ಇದರಲ್ಲಿ ಒತ್ತೆಯಾಳುಗಳು ಕೆಲ ಸಮಯದ ನಂತರ ದರೋಡೆಕಾರರೇ ಸರಿ. ಅವರ ರೀತಿ, ನೀತಿ ವಿಧಾನಗಳೇ ಸರಿ ಎಂಬ ಭ್ರಮೆಗೊಳಗಾಗಿ ಅವರನ್ನು ಹೊಗಳಲು ಪ್ರಾರಂಭಿಸುತ್ತಾರೆ. ಸಾಮಾನ್ಯವಾಗಿ ದರೋಡೆಕಾರರು ಈ ಒತ್ತೆಯಾಳುಗಳನ್ನು ಬಹಳ ಕರುಣಾಮಯಿಗಳಾಗಿ ನೋಡುತ್ತಾರೆ. ಈ ತರದ ಒತ್ತೆಯಾಳುಗಳು ಬಿಡುಗಡೆಯ ನಂತರ ಬಹಳ ಒತ್ತಡದಿಂದ ನರಳುತ್ತಾರೆ, ನಿದ್ರಾಹೀನತೆ, ದುಃಸ್ವಪ್ನ ಹಿಂದಿನ ಭಯಾನಕ ಘಟನೆಯ ನೆನಪು, ಇನ್ನೊಬ್ಬರನ್ನು ನಂಬುವ ಸ್ಥಿತಿಯಲ್ಲಿರುವುದಿಲ್ಲ. ಈ ಮನೋ ವೈಜ್ಞಾನಿಕ ಸ್ಥಿತಿ ಸರಿಹೋಗಲು ಸಾಕಷ್ಟು ಸಮಯ ಬೇಕು.

ಉಪಸಂಹಾರ : ಪ್ರವಾಸ ಎಷ್ಟು ಆಹ್ಲಾದಕರವೋ ಕೆಲವೊಮ್ಮೆ ಅಷ್ಟೇ ಸಂಕಷ್ಟಕ್ಕೆ ಈಡು ಮಾಡುತ್ತದೆ. ಇದಕ್ಕೆ ಪ್ರವಾಸಿಗಳಲ್ಲಿ ದೃಢವಾದ ಮನಸ್ಸು, ಧೈರ್ಯ, ಸಂಕಲ್ಪ, ಹೊಂದಿಕೆ ಅತ್ಯಗತ್ಯ. ಅದಾಗ್ಯೂ ಕೆಲವೊಮ್ಮೆ ಕೆಲವು ಆತಂಕಕಾರಿ ವಾತಾವರಣ ಸಿಂಡ್ರೋಮ್ ರೂಪದಲ್ಲಿ ಕಾಡುತ್ತವೆ. ಎಲ್ಲಾ ಪ್ರವಾಸಿ ತಾಣಗಳನ್ನು ನೋಡಿದಾಗ ಪ್ರವಾಸಿಗರಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಮನಸ್ಸಿನಲ್ಲಿ ಪರಿಣಾಮ ಬೀರುತ್ತದೆ. ಪ್ರವಾಸಿಯ ಮನಸ್ಥೈರ್ಯಕ್ಕನುಗುಣವಾಗಿ ಸಿಂಡ್ರೋಮ್‌ಗಳು ವ್ಯಕ್ತವಾಗುತ್ತವೆ. ಅದಕ್ಕೆಂದು ಪ್ರವಾಸ ಹೋಗಲು ಹಿಂಜರಿಯಬೇಡಿ. ಸಿಂಡ್ರೋಮ್‌ಗಳು ಒಮ್ಮೊಮ್ಮೆ ಕೌತುಕಮಯ ಅಲ್ಲವೇ?

-ಕೆ.ರಮೇಶ್

10 Responses

  1. Hema says:

    ಅಪರೂಪದ, ಸೊಗಸಾದ ವಿಚಾರಗಳ ಬಗ್ಗೆ ಬರೆಯುತ್ತೀರಿ..ಲೇಖನ ಬಹಳ ಇಷ್ಟವಾಯಿತು. ಪ್ರವಾಸಪ್ರಿಯಳಾದ ನಾನು ಈ ಲೇಖನದಲ್ಲಿ ಹೆಸರಿಸಿದ ಕೆಲವು ಸಿಂಡ್ರೋಮ್ ಗಳನ್ನು ಅನುಭವಿಸಿದ್ದೇನೆ..

  2. ಕೆ. ರಮೇಶ್ says:

    ಧನ್ಯವಾದಗಳು ಮೇಡಂ.

  3. ನಯನ ಬಜಕೂಡ್ಲು says:

    ಸೂಪರ್. ನಿಮ್ಮ ಪ್ರತೀ ಲೇಖನವೂ ಬಹಳ ಮಾಹಿತಿಪೂರ್ಣವಾಗಿರುತ್ತದೆ. ಇದೂ ಬಹಳ ಚೆನ್ನಾಗಿದೆ.

  4. ನಾಗರತ್ನ ಬಿ. ಅರ್. says:

    ಒಂದು ರೀತಿಯ ವಿಶೇಷವಾದ ಲೇಖನ ಹೆಚ್ಚು ಪ್ರವಾಸಮಾಡುವವರಿಗೆ ಒಂದಲ್ಲಾ ಒಂದು ಕಡೆ ಈ ರೀತಿಯ ಅನುಭವ ಆಗಬಹುದು… ಹೊಸ ಸಂಗತಿ ಚೆನ್ನಾಗಿ ದೆ.ಧನ್ಯವಾದಗಳು ಸಾರ್

  5. ಹೆಸರು ಗೊತ್ತಿಲ್ಲದೆ ಇಂತಹ ಅನುಭವಗಳಿಗೆ ಪ್ರವಾಸ ಹೋದವರು ಒಳಗಾಗಿದ್ದೇವೆ
    ಮಾಹಿತಿಪೂರ್ಣ ಲೇಖನಕ್ಕೆ ಧನ್ಯವಾದಗಳು

  6. . ಶಂಕರಿ ಶರ್ಮ says:

    ಅಬ್ಬಾ…ಎಷ್ಟು ಬಗೆಗಳ ಸಿಂಡ್ರೋಮ್ ಗಳು!! ಈ ಸಿಂಡ್ರೋಮ್ ಗಳ ಹೆಸರೇ ಗೊತ್ತಿಲ್ಲ! ಆದರೆ ಪ್ರವಾಸ ಹೋಗಿದ್ದಾಗ ಈ ತರಹದ ಅನುಭವಗಳು ಆದದ್ದು ಹೌದು. ಇವುಗಳಲ್ಲಿ, ಜೆಟ್ ಲ್ಯಾಗ್ ಮಾತ್ರ ನನಗೆ ಚಿರಪರಿಚಿತ ಒಳ್ಳೆಯ ಮಾಹಿತಿಯುಕ್ತ ಲೇಖನ.. ಧನ್ಯವಾದಗಳು ಸರ್.

  7. Padmini Hegade says:

    ಲೇಖನ ಮಾಹಿತಿಪೂರ್ಣವಾಗಿದೆ. ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: