ಜ್ಯೋತಿರ್ಲಿಂಗ 12 : ಘೃಶ್ನೇಶ್ವರ

Share Button

ಪಾರ್ವತಿಯ ಅಂಗೈಯಲ್ಲಿ ಉದ್ಭವವಾದ ಜ್ಯೋತಿರ್ಲಿಂಗವನ್ನು ನೋಡೋಣ ಬನ್ನಿ. ಒಮ್ಮೆ ಪಾರ್ವತಿಯು ಹಣೆಗೆ ತಿಲಕವನ್ನು ಹಚ್ಚಲು, ಕುಂಕುಮವನ್ನು ತನ್ನ ಅಂಗೈನಲ್ಲಿಟ್ಟು, ಅಲ್ಲಿದ್ದ ಶಿವಾಲಯ ಕೊಳದ ನೀರನ್ನು ಬಳಸಿ ಉಜ್ಜಿದಳಂತೆ. ಆಗ ಸಂಭವಿಸಿದ ಚಮತ್ಕಾರವೇ – ಅಂಗೈ ಮೇಲೆ, ಬೆರಳಿನ ಘರ್ಷಣೆಯಿಂದ ಉದ್ಭವವಾದ ಜ್ಯೋತಿಸ್ವರೂಪನಾದ ಘೃಶ್ನೇಶ್ವರ ಜ್ಯೋತಿರ್ಲಿಂಗ. ಘೃಶ್ನೇಶ್ವರ ಎಂಬ ಪದದ ಅರ್ಥ – ವಾತ್ಸಲ್ಯ ಮೂರ್ತಿ, ಕರುಣಾಸಾಗರ, ದಯಾನಿಧಿ ಎಂದು. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಕಡೆಯದಾದ, ಕಿರಿದಾದ ದೇಗುಲ ಇದು. ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ವೆರೂಲ್ ಎಂಬ ಪ್ರದೇಶದಲ್ಲಿ, ವಿಶ್ವದಲ್ಲೇ ಪ್ರಖ್ಯಾತವಾಗಿರುವ ‘ಎಲ್ಲೋರ ಗುಹೆಗಳ’ ಸಮೀಪದಲ್ಲಿಯೇ ಈ ದೇಗುಲವಿದೆ. ಶಿವ ಪುರಾಣ ಹಾಗೂ ಪದ್ಮ ಪುರಾಣದಲ್ಲಿ ಈ ದೇಗುಲದ ಉಲ್ಲೇಖವಿದೆ.

ರೋಚಕವಾದ ಸ್ಥಳ ಪುರಾಣಗಳಲ್ಲಿ ಬರುವ ಹಲವು ಪ್ರಸಂಗಗಳು ಘೃಶ್ನೇಶ್ವರ ಜ್ಯೋತಿರ್ಲಿಂಗದ ಕಥೆಗಳನ್ನು ಹೇಳುತ್ತಿವೆ. ಒಮ್ಮೆ ಕೈಲಾಸದಲ್ಲಿ ವಾಸವಾಗಿದ್ದ ಶಿವ ಪಾರ್ವತಿಯರು ವಿನೋದಕ್ಕಾಗಿ ಪಗಡೆಯಾಡುತ್ತಿದ್ದರಂತೆ. ಸದಾ ಶಿವನದೇ ಮೇಲುಗೈ, ಆದರೆ ಅಂದು ಪಂದ್ಯದಲ್ಲಿ ಪಾರ್ವತಿಯದೇ ಗೆಲುವು. ಪಾರ್ವತಿಗೆ ದಿಗಿಲು ಹುಟ್ಟಿಸಲು ಶಿವ ಕೈಲಾಸದಿಂದ ನೇರವಾಗಿ ದಕ್ಷಿಣ ಭಾರತದಲ್ಲಿರುವ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿರುವ ದೇವಗಿರಿಗೆ ಬಂದು ಬೀಡುಬಿಟ್ಟನಂತೆ. ಶಿವನಿಲ್ಲದೆ, ಕೈಲಾಸದಲ್ಲಿ ಪಾರ್ವತಿಯು ಹೇಗೆ ತಾನೆ ಇರಬಲ್ಲಳು? ಶಿವನನ್ನು ಹಿಂಬಾಲಿಸಿ ಬಂದ ಪಾರ್ವತಿಯು ಹಳ್ಳಿಗಾಡಿನ ಹುಡುಗಿಯ ಮಾರುವೇಷದಲ್ಲಿ ಸುಳಿದಾಡುವಳು. ಎಲ್ಲವನ್ನೂ ಅರಿತ ಭೋಲೇನಾಥನು ಹುಸಿನಗುವಿನೊಂದಿಗೆ ಅವಳನ್ನೇ ಗಮನಿಸುವನು. ಶಿವ ಪಾರ್ವತಿಯರು ನಲಿದಾಡಿದ ಈ ವನವು ‘ಕಾಮ್ಯಕವನ’ ಎಂದು ಪ್ರಸಿದ್ದಿಯಾಯಿತು. ಒಮ್ಮೆ ಪಾರ್ವತಿಯು ಬಾಯಾರಿಕೆಯಿಂದ ಪರಿತಪಿಸಿದಾಗ, ಶಿವನು ತನ್ನ ತ್ರಿಶೂಲದಿಂದ ನೆಲವನ್ನು ಕೊರೆಯುವನು. ಆಗ ಪಾತಾಳದಿಂದ ಉದ್ಭವಿಸಿದ ನೀರಿನ ಚಿಲುಮೆಯು ‘ಭೋಗವತಿ‘ ಎಂಬ ಹೆಸರು ಪಡೆಯುತ್ತಾಳೆ. ನಂತರದ ದಿನಗಳಲ್ಲಿ ಈ ನೀರಿನ ಚಿಲುಮೆಯು ‘ಶಿವಾಲಯ’ ವೆಂಬ ಕೊಳವಾಗಿ ಮಾರ್ಪಡುತ್ತದೆ. ಈ ಕೊಳವು ಮುಂದೆ ನದಿಯಾಗಿ ಸಾಗಿ ‘ಯಲಗಂಗಾ’ ಎಂದು ಪ್ರಸಿದ್ದಿಯಾಗುವಳು.

ಮತ್ತೊಂದು ಪೌರಾಣಿಕ ಪ್ರಸಂಗ ಹೀಗಿದೆ – ರಾಜನೊಬ್ಬ ಬೇಟೆಯಾಡುತ್ತಾ ತನ್ನ ಹಾದಿಯಲ್ಲಿ ಸಿಕ್ಕ ಎಲ್ಲ ವನ್ಯಮೃಗಗಳ ಮಾರಣ ಹೋಮ ಮಾಡುತ್ತಾ ಬರುತ್ತಿರುವನು. ಆಗೊಂದು ಅಚ್ಚರಿಯನ್ನು ಕಂಡು ಒಂದು ಕ್ಷಣ ನಿಲ್ಲುವನು. ಹುಲಿಯ ಮರಿಯೊಂದು ಜಿಂಕೆಯ ಹಾಲನ್ನು ಕುಡಿಯುತ್ತಿದ್ದರೆ, ಜಿಂಕೆಯ ಮರಿಯೊಂದು ಹುಲಿಯ ಹಾಲನ್ನು ಕುಡಿಯುತ್ತಿದೆ. ಆದರೆ ಬೇಟೆಯಾಡುವ ಹುಮ್ಮಸ್ಸಿನಲ್ಲಿದ್ದ ರಾಜನು, ಒಂದು ಕ್ಷಣವೂ ತಡಮಾಡಧೇ, ಆ ಅಪರೂಪದ ಪ್ರಾಣಿಗಳ ಮೇಲೂ ತನ್ನ ಬಾಣಗಳನ್ನು ಚಲಾಯಿಸುವನು. ಈ ಪ್ರಾಣಿಗಳು ಗೌತಮ ಮುನಿಗಳ ಆಶ್ರಮದಲ್ಲಿ ಆಶ್ರಯ ಪಡೆದಿದ್ದವು. ಆ ಪ್ರಾಣಿಗಳ ಚೀತ್ಕಾರವನ್ನು ಕೇಳಿದ ಮುನಿವರ್ಯರು, ರಾಜನನ್ನು ರೋಗಗ್ರಸ್ತನಾಗೆಂದು ಶಪಿಸುವರು. ರಾಜನು ನರಳಾಡುತ್ತಾ ಕಾಡಿನಲ್ಲಿ ಅಲೆದಾಡುತ್ತಿರುವಾಗ, ಬಾಯಾರಿಕೆಯಾಗುವುದು. ಅಲ್ಲೊಂದು ನೀರಿನ ಗುಂಡಿ ಕಾಣುವುದು, ಆದರೆ ಆ ನೀರಿನ ಗುಂಡಿಯ ಸುತ್ತಲೂ ಕುದುರೆಯ ಗೊರಸಿನ ಗುರುತುಗಳು ಕಂಡು ಬರುತ್ತವೆ. ಆದರೆ, ದಾಹದಿಂದ ಪರಿತಪಿಸುತ್ತಿದ್ದ ದೊರೆಯು ಆ ಮಣ್ಣಿನ ರಾಡಿಯಂತಿದ್ದ ನೀರನ್ನೇ, ತನ್ನ ಬೊಗಸೆಯಲ್ಲಿ ತುಂಬಿಕೊಂಡು, ಗಟಗಟನೇ ಕುಡಿಯುವನು. ಸಂಜೀವಿನಿಯಂತಿದ್ದ ನೀರನ್ನು ಕುಡಿದಾಕ್ಷಣ ರಾಜನು ಗುಣಮುಖನಾಗುವನು. ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುತ್ತಿದ್ದ ಅರಸನು, ಬ್ರಹ್ಮದೇವನನ್ನು ಕುರಿತು ದೀರ್ಘವಾದ ತಪಸ್ಸನ್ನು ಆಚರಿಸುವನು. ಅವನ ತಪಸ್ಸಿಗೆ ಮೆಚ್ಚಿದ ಬ್ರಹ್ಮನು, ಆ ಸ್ಥಳದಲ್ಲಿ ‘ಪರಶ್ತ ತೀರ್ಥ’ ಎಂಬ ಕೊಳವನ್ನು ಸೃಷ್ಟಿಸುವನು. ಸೃಷ್ಟಿಯ ಭಾಗವಾದ ಪ್ರಾಣಿ ಪಕ್ಷಿಗಳಿಗೂ, ನಮ್ಮಂತೆಯೇ ಬದುಕುವ ಹಕ್ಕಿದೆಯೆಂದು ಪ್ರತಿಪಾದಿಸುವ ಸುಂದರವಾದ ಪೌರಾಣಿಕ ಪ್ರಸಂಗವಿದು.

ಇನ್ನೊಂದು ದಂತಕಥೆಯನ್ನು ಕೇಳೋಣ ಬನ್ನಿ. ದೇವಗಿರಿಯ ತಪ್ಪಲಲ್ಲಿ, ಬ್ರಹ್ಮವೆತ್ತ ಸುಧರ್ಮನೆಂಬುವನು ತನ್ನ ಪತ್ನಿ ಸುದೇಹಳೊಂದಿಗೆ ವಾಸವಾಗಿರುತ್ತಾನೆ. ಹಲವು ವರ್ಷಗಳು ಕಳೆದರೂ ಅವರಿಗೆ ಮಕ್ಕಳ ಭಾಗ್ಯ ಲಭಿಸಿರುವುದಿಲ್ಲ. ಆಗ ಸುದೇಹಳು ತನ್ನ ಪತಿಯ ಮನವೊಲಿಸಿ, ತಂಗಿಯಾದ ಘೃಷ್ಣೆಯೊಂದಿಗೆ ಪತಿಯ ವಿವಾಹ ನೆರವೇರಿಸುತ್ತಾಳೆ. ಘೃಷ್ಣೆಯು ಮಹಾಶಿವಭಕ್ತೆ. ನಿತ್ಯವೂ, ಮಣ್ಣಿನಿಂದ ಶಿವಲಿಂಗವನ್ನು ನಿರ್ಮಿಸಿ, ಸಕಲ ಶಾಸ್ತ್ರಗಳೊಂದಿಗೆ ಅರ್ಚಿಸಿ, ಅದನ್ನು ಶಿವಾಲಯದ ಕೊಳದಲ್ಲಿ ವಿಸರ್ಜಿಸುತ್ತಿರುತ್ತಾಳೆ. ಮದುವೆಯಾದ ಎರಡನೇ ವರ್ಷದಲ್ಲಿ, ಘೃಷ್ಣೆಯು ಮುದ್ದಾದ ಗಂಡು ಮಗುವಿನ ತಾಯಿಯಾಗುತ್ತಾಳೆ. ಸುದೇಹಳ ಸಂತಸಕ್ಕೆ ಪಾರವೇ ಇರುವುದಿಲ್ಲ. ಆ ಮಗುವಿನ ಲಾಲನೆ ಪಾಲನೆಯಲ್ಲಿ ಅಕ್ಕ ತಂಗಿಯರಿಬ್ಬರೂ ಸಂಭ್ರಮಿಸುತ್ತಿರುತ್ತಾರೆ. ದಿನಕಳೆದಂತೆ, ಸುದೇಹಳಿಗೆ ಕೀಳರಿಮೆ ಕಾಡತೊಡಗುವುದು – ನೆರೆಹೊರೆಯವರು ತನ್ನನ್ನು ಬಂಜೆ ಎಂದು ಹೀಯಾಳಿಸುವವರೇನೋ ಎಂಬ ಆತಂಕ ಒಂದೆಡೆಯಾದರೆ, ಘೃಷ್ಣೆಯು ಎಲ್ಲರ ಪ್ರೀತಿಯನ್ನು ಗಳಿಸುತ್ತಿದ್ದಾಳೆ ಎಂಬ ಮತ್ಸರ ಇನ್ನೊಂದೆಡೆ. ದಿನಕಳೆದಂತೆ, ಮನದ ಮೂಲೆಯೊಂದರಲ್ಲಿ ಬುಸುಗುಡುತ್ತಿದ್ದ ಮತ್ಸರವೆಂಬ ವಿಷವೃಕ್ಷವು ಬೆಳೆದು ಹೆಮ್ಮರವಾಯಿತು. ತಂಗಿಯು ಶಿವನ ಪೂಜೆಯಲ್ಲಿ ನಿರತಳಾಗಿರುವಾಗ, ಸುದೇಹಳು ಮಲಗಿದ್ದ ಮಗುವನ್ನು ತುಂಡರಿಸಿ, ಶಿವಾಲಯದ ಕೊಳದಲ್ಲಿ ಎಸೆದು ಬಿಡುವಳು. ಮಗನ ದಾರುಣ ಸಾವಿನ ಸುದ್ದಿ ತಿಳಿದರೂ ಘೃಷ್ಣೆಯು, ಶಿವನ ಪೂಜೆಯನ್ನು ಅರ್ಧದಲ್ಲಿ ಬಿಟ್ಟು ಮೇಲೇಳದೆ, ಅರ್ಚನೆಯನ್ನು ಪೂರ್ಣಗೊಳಿಸಿ ಶಿವಲಿಂಗವನ್ನು ಕೊಳದಲ್ಲಿ ವಿಸರ್ಜಿಸಲು ಬಂದಾಗ, ಆ ಕೊಳದಿಂದ ಮೇಲೆದ್ದು ಬರುವನು ಅವಳ ಮುದ್ದು ಮಗ. ಅವಳ ಭಕ್ತಿಗೆ ಮೆಚ್ಚಿ ಶಿವನು, -‘ನಿನಗೆ ಬೇಕಾದ ವರವನ್ನು ಕೇಳು’ ಎಂದಾಗ, ಘೃಷ್ಣೆಯು, ತನ್ನ ಅಕ್ಕ ತಿಳಿಯದೆ ಮಾಡಿದ ಪಾಪವನ್ನು ಪರಿಹರಿಸಬೇಕೆಂದು ಬೇಡುತ್ತಾಳೆ. ಹಾಗೆಯೇ, ಶಿವನು, ಅಲ್ಲಿಯೇ ನೆಲಸಿ, ಜನರನ್ನು ಉದ್ಧರಿಸಬೇಕೆಂದು ಕೋರುವಳು. ಸುದೇಹಳನ್ನು ಹರಸಿದ ಶೀವನು, ಜ್ಯೋತಿಸ್ವರೂಪನಾಗಿ -‘ಘೃಷ್ಣೇಶ್ವರ ಜ್ಯೋತಿರ್ಲಿಂವೆಂಬ’ ನಾಮಧೇಯದಿಂದ ಅಲ್ಲಿಯೇ ನೆಲಸುವನು. ಹೀಗೆ ತನ್ನ ಮಗನನ್ನೇ ಕೊಂದ ಅಕ್ಕನನ್ನು ಕ್ಷಮಿಸಿ, ಅವಳನ್ನು ಉದ್ಧರಿಸಿದ ಘೃಷ್ಣೆಯು, ಭೂದೇವಿಯಂತೆ ಸಹನೆ, ತಾಳ್ಮೆಯ ಪ್ರತೀಕವಾಗಿ ನಮ್ಮ ಮನದಾಳದಲ್ಲಿ ಉಳಿಯುವಳು.

ಘೃಷ್ಣೇಶ್ವರ ಜ್ಯೋತಿರ್ಲಿಂಗ

ಘೃಷ್ಣೇಶ್ವರ ಜ್ಯೋತಿರ್ಲಿಂಗದ ಐತಿಹಾಸಿಕ ಪುಟಗಳನ್ನು ತೆರೆದು ನೋಡೋಣ ಬನ್ನಿ. ಹದಿಮೂರನೆಯ ಶತಮಾನಕ್ಕಿಂತ ಮುಂಚಿತವಾಗಿಯೇ, ಈ ದೇವಾಲಯವನ್ನು ಸಹ್ಯಾದ್ರಿ ಪರ್ವತಶ್ರೇಣಿಗಳ ಮಡಿಲಲ್ಲಿ ನಿರ್ಮಿಸಲಾಗಿತ್ತು. ಡೆಲ್ಲಿಯ ಸುಲ್ತಾನರಿಂದ ಭಗ್ನವಾದ ಈ ದೇಗುಲವನ್ನು ಕೆಚ್ಚೆದೆಯ ವೀರರಾದ ಮರಾಠರು ಪುನರ್‌ನಿರ್ಮಾಣ ಮಾಡಿದರು. ಹದಿನಾರನೆಯ ಶತಮಾನದಲ್ಲಿ ಛತ್ರಪತಿ ಶಿವಾಜಿಯ ತಾತನಾದ ಮಾಲೋಜಿಯವರು ಈ ದೇಗುಲವನ್ನು ಭವ್ಯವಾಗಿ ನಿರ್ಮಿಸಿದರು. ನಂತರ ಬಂದ ಅರಸರು, ದೇಗುಲದ ಕಟ್ಟಡವನ್ನು ವಿಸ್ತರಿಸುತ್ತಾ, ಇಪ್ಪತ್ನಾಲ್ಕು ಸ್ತಂಭಗಳುಳ್ಳ ಸಭಾಮಂಟಪವನ್ನು ಕಟ್ಟಸಿದರು. ಪ್ರತೀ ಸ್ತಂಭದಲ್ಲಿಯೂ ಕಲೆಯು ಹೂವಾಗಿ ಅರಳಿದಂತೆ ತೋರುವುದು. ದೇಗುಲದ ಪ್ರಾಂಗಣದಲ್ಲಿ ವಿಷ್ಣುವಿನ ದಶಾವತಾರದ ಚಿತ್ರಗಳನ್ನೂ, ಶಿವ ಪುರಾಣದಲ್ಲಿ ಬರುವ ಪ್ರಸಂಗಗಳನ್ನು ಸುಂದರವಾಗಿ ಕೆತ್ತಲಾಗಿದೆ. ಮೊಗಲರ ಕಾಲದಲ್ಲಿ ಮತ್ತೊಮ್ಮೆ ಧ್ವಂಸವಾದ ದೇಗುಲವನ್ನು, ಹದಿನೆಂಟನೇ ಶತಮಾನದಲ್ಲಿ, ನಿರ್ಮಿಸಲು ಮುಂದಾದ ರಾಣಿ ಇಂದೋರಿನ -‘ಅಹಲ್ಯಾ ಬಾಯಿ ಹೋಲ್ಕರ್’. ಮರಾಠಾ ವಾಸ್ತು ಶಿಲ್ಪದ ಮಾದರಿಯಲ್ಲಿರುವ, ಈ ದೇಗುಲವು, ಕೆಂಪು ಕಲ್ಲಿನಿಂದ ಕಟ್ಟಲಾಗಿದೆ. ಕೇವಲ 240 ಅಡಿ -185 ಅಡಿ ವಿಸ್ತೀರ್ಣ ಹೊಂದಿರುವ ಈ ದೇಗುಲದ ಮುಖ್ಯ ಪ್ರವೇಶ ದ್ವಾರವು ದಕ್ಷಿಣ ದಿಕ್ಕಿನೆಡೆ ಇದ್ದು, ಜ್ಯೋತಿರ್ಲಿಂಗವು ಪೂರ್ವ ದಿಕ್ಕಿಗೆ ಮುಖ ಮಾಡಿದೆ. ಭವ್ಯವಾದ ಐದು ಅಂತಸ್ತಿನ ಶಿಖರವು, ಈ ದೇಗುಲಕ್ಕೆ ದಿವ್ಯ ಆಕಾರವನ್ನು ನೀಡಿದೆ.

ಸ್ವಯಂಭುವಾದ, ದ್ವಾದಶ ಜ್ಯೋತಿರ್ಲಿಂಗಗಳು ಭಕ್ತರ ಹೃದಯ ಕಮಲದಲ್ಲಿ ವಿಶೇಷ ಸ್ಥಾನವನ್ನು ಪಡೆದಿವೆ. ಶಿವಲಿಂಗವು ಪ್ರಕೃತಿ ಪುರುಷನ ಮಿಲನದ ಸಂಕೇತವೆಂದು ಕೆಲವರು ಪ್ರತಿಪಾದಿಸಿದರೆ ಮತ್ತೆ ಕೆಲವರು ಮನಸ್ಸು ಮತ್ತು ಆತ್ಮಗಳ ಸಂಗಮವೆಂದೂ ಗುರುತಿಸುವರು. ಈ ಜ್ಯೋತಿರ್ಲಿಂಗಗಳು ಧಾರ್ಮಿಕ ಶಕ್ತಿಕೇಂದ್ರಗಳಾಗಿರುವುದರ ಜೊತೆಜೊತೆಗೇ, ಸಾಂಸ್ಕೃತಿಕ ಕೇಂದ್ರ ಬಿಂದುಗಳೂ ಆಗಿದ್ದವು. ದೇಗುಲಗಳು ಸಂಗೀತ, ಸಾಹಿತ್ಯ, ನೃತ್ಯ ಹಾಗೂ ಕಲೆಗಳ ತವರಾಗಿದ್ದವು. ಮಕ್ಕಳಿಗೆ ವಿದ್ಯೆ ಕಲಿಸುವ ಗುರುಕುಲಗಳೂ ಆಗಿದ್ದವು. ದೇಗುಲಗಳು ಮಾನವನ ಬದುಕಿನ ಅವಿಭಾಜ್ಯ ಅಂಗವಾಗಿದ್ದವು. ಮಾನವನ ಹುಟ್ಟಿನಿಂದ ಸಾವಿನ ತನಕ ನಡೆಯುವ ಹಲವು ವಿಧಿ ವಿಧಾನಗಳಲ್ಲಿ ದೇಗುಲದ ಪಾತ್ರ ಮಹತ್ವದ್ದಾಗಿದೆ. ನಾಮಕರಣ, ಅಕ್ಷರಾಭ್ಯಾಸದ ಆರಂಭ, ವಿವಾಹ ಮಹೋತ್ಸವ, ಅಂತಿಮ ಸಂಸ್ಕಾರ ಇತ್ಯಾದಿ ಎಲ್ಲ ಹಂತಗಳಲ್ಲೂ ದೇವಾಲಯಗಳು ಪ್ರಮುಖ ಪಾತ್ರ ವಹಿಸುವುವು. ಇಲ್ಲಿ ಜಾತ್ರೆ, ರಥೋತ್ಸವ, ಹಬ್ಬ ಹರಿದಿನಗಳನ್ನೂ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಭಿನ್ನ ಭಿನ್ನ ವರ್ಗಗಳಿಂದ ಬಂದವರೆಲ್ಲಾ ಒಂದುಗೂಡಿ, ಈ ಎಲ್ಲ ಆಚರಣೆಗಳನ್ನು ಸಂತಸದಿಂದ ಪಾಲಿಸುವುದೇ ನಿಜವಾದ ಮಾನವ ಧರ್ಮ.

ಈ ಜ್ಯೋತಿರ್ಲಿಂಗಗಳು ಸಾಮಾನ್ಯವಾಗಿ ರಮಣೀಯವಾದ ನಿಸರ್ಗದ ಮಡಿಲಲ್ಲಿ ಸ್ಥಾಪಿಸಲ್ಪಟ್ಟಿರುವುದು ಮತ್ತೊಂದು ವಿಶೇಷ. ಕೆಲವು ದೇಗುಲಗಳು ಪರ್ವತ ಶ್ರೇಣಿಗಳ ಮಧ್ಯೆ, ಇನ್ನೂ ಕೆಲವು ನದೀದಡಗಳಲ್ಲಿ, ಮತ್ತೆ ಕೆಲವು ಸಾಗರದ ತೀರಗಳಲ್ಲಿದ್ದು ಯಾತ್ರಿಗಳ ಮನಸ್ಸಿಗೆ ಮುದ ನೀಡುವುವು. ಪ್ರಕೃತಿಯೇ ದೇವರೆಂದು ಪೂಜಿಸುವ ಹಿಂದೂ ಧರ್ಮಕ್ಕೆ ಹಿಡಿದ ಕೈಗನ್ನಡಿಯಂತಿದೆಯಲ್ಲವೇ?

ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದಾಗ, ಪರಕೀಯರ ದಾಳಿಗೆ ತುತ್ತಾದ ಹಿಂದೂ ದೇಗುಲಗಳ ದಾಖಲೆಗಳು ಕಂಡು ಬರುತ್ತವೆ. ಬಹುಶಃ ಅವರ ಧಾರ್ಮಿಕ ಶ್ರದ್ಧೆಯನ್ನು ಕೆಣಕಲೋ ಅಥವಾ ಅಲ್ಲಿದ್ದ ಸಂಪತ್ತನ್ನು ಲೂಟಿ ಮಾಡಲೆಂದೋ ಇಂತಹ ಆಕ್ರಮಣಗಳು ನಡೆದಿರಬಹುದು. ದೇಗುಲಗಳ ಕಟ್ಟಡಗಳನ್ನು ಧ್ವಂಸಗೊಳಿಸಬಹುದು ಆದರೆ ನಿರಾಕಾರನಾದ, ನಿರ್ಗುಣನಾದ, ಅನಂತನಾದ, ಅವಿನಾಶಿಯಾದ, ಆ ಮಹಾದೇವನ ಜ್ಯೋತಿ ಸ್ವರೂಪವನ್ನು ಯಾರಿಂದ ತಾನೇ ನಾಶ ಪಡಿಸಲು ಸಾಧ್ಯ? ಈ ದೇಗುಲಗಳ ಸ್ಥಳ ಪುರಾಣಗಳಲ್ಲಿ – ದುಷ್ಟ ಶಕ್ತಿಗಳ ಸಂಹಾರ ಹಾಗೂ ಶಿಷ್ಟ ರಕ್ಷಣೆಯಾಗುವುದನ್ನು ಕಾಣುತ್ತೇವೆ. ಅರಿಷಡ್ವರ್ಗಗಳನ್ನು ನಿರ್ನಾಮ ಮಾಡಿ ಉತ್ತಮ ಮೌಲ್ಯಗಳನ್ನು ಬೋಧಿಸುವ ರೂಪಕವಾಗಿ ದೇಗುಲಗಳು ನಿಲ್ಲುತ್ತವೆ. ಅಜ್ಞಾನವೆಂಬ ಕತ್ತಲನ್ನು ಸರಿಸಿ, ಜ್ಞಾನವೆಂಬ ಬೆಳಕನ್ನು ಬೀರುತ್ತಾ, ಸತ್ ಚಿತ್ ಆನಂದವನ್ನು ನೀಡುತ್ತಾ ಎಲ್ಲರಿಗೂ ದಾರಿದೀಪವಾಗಿದ್ದಾನೆ ಆ ಭಗವಂತ.

ಈ ಲೇಖನ ಸರಣಿಯ ಹಿಂದಿನ ಲೇಖನ ( ಜ್ಯೋತಿರ್ಲಿಂಗ 11) ಇಲ್ಲಿದೆ : http://surahonne.com/?p=34835

ಡಾ.ಗಾಯತ್ರಿದೇವಿ ಸಜ್ಜನ್

7 Responses

  1. ನಯನ ಬಜಕೂಡ್ಲು says:

    ಮಾಹಿತಿಪೂರ್ಣ

  2. ನಾಗರತ್ನ ಬಿ.ಆರ್. says:

    ಘೃಣ್ನೇಶ್ವರನ ಪರಿಚಯ ಚೆನ್ನಾಗಿ ಮೂಡಿ ಬಂದಿದೆ ಮೇಡಂ. ಅಂತೂ ನಿಮ್ಮ ಜೊತೆಯಲ್ಲಿ ನಮಗೂ ಜೋತಿರ್ಲಿಂಗಗಳ ದರ್ಶನವನ್ನು ಬಹಳಷ್ಟು ಮಾಹಿತಿಯೊಡನೆ ಸೊಗಸಾದ ನಿರೂಪಣೆಯೊಂದಿಗೆ ಪರಿಚಯಿಸಿದ ನಿಮಗೆ ಅನಂತ ಧನ್ಯವಾದಗಳು ಮೇಡಂ.

  3. Hema says:

    12 ಜ್ಯೋತಿರ್ಲಿಂಗಗಳ ಬಗ್ಗೆ ಮಾಹಿತಿಯನ್ನು ಬಹಳ ಸೊಗಸಾಗಿ ನಿರೂಪಿಸಿದ್ದೀರಿ. ಅಪರೂಪದ ಲೇಖನಸರಣಿಯನ್ನು ಸೃಷ್ಟಿಸಿದ ತಮಗೆ ಅಭಿನಂದನೆಗಳು

  4. . ಶಂಕರಿ ಶರ್ಮ says:

    ವಿಶೇಷವಾದ ಈ ಲಿಂಗದ ಹಿನ್ನೆಲೆ ಕಥೆಯು ಬಹಳ ರೋಚಕವಾಗಿದೆ. ವಿವಿಧ ಜ್ಯೋತಿರ್ಲಿಂಗಗಳ ಬಗೆಗಿನ ವಿವರವಾದ ಲೇಖನಗಳು ಸಂಗ್ರಹಯೋಗ್ಯವಾಗಿವೆ…ಧನ್ಯವಾದಗಳು ಗಾಯತ್ರಿ ಮೇಡಂ.

  5. sudha says:

    ದ್ವಾದಶ ಜ್ಯೋತಿರ್ಲಿಂಗಗಳನ್ನು ಪರಿಚಯಿಸಿದಕ್ಕೆ ನಮಸ್ಕಾರಗಳು. ಇದನ್ನು ಪುಸ್ತಕ ಮಾಡಬಹುದು.

  6. ಸಹೃದಯ ಓದುಗರಿಗೆ ಧನ್ಯವಾದಗಳು

  7. Padma Anand says:

    ಎಲ್ಲಾ ಜ್ಯೋತಿರ್ಲಿಂಗಗಳ ಪೌರಾಣಿಕ, ಚಾರಿತ್ರಿಕ ಮಾಹಿತಿಗಳನ್ನು ಒಳಗೊಂಡ ವಿವರಣೆಯನ್ನು ಭಕ್ತಿ ಪೂರ್ವಕವಾದ, ಆಸಕ್ತದಾಯಕವಾದ ಲೇಖನ ಮಾಲಿಕೆಯಾಗಿ ಕಟ್ಟಿಕೊಟ್ಟ ತಮಗೆ ವಂದನೆಗಳು, ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: