ಜ್ಯೋತಿರ್ಲಿಂಗ 11: ಕಾಶಿ ವಿಶ್ವನಾಥ

Share Button

ಗಂಗಾ ತರಂಗ ರಮಣೀಯ ಜಟಾ ಕಲಾಪಂ
ಗೌರೀ ನಿರಂತರ ವಿಭೂಷಿತ ವಾಮಭಾಗಂ
ನಾರಾಯಣ ಪ್ರಿಯ ಮನಂಗ ಮದಾಪಹಾರಮ್
ವಾರಾಣಸೀ ಪುರಪತಿ ಭಜ ವಿಶ್ವನಾಥಂ


‘ವಿಶ್ವನಾಥಾಷ್ಟಕಮ್’ ಎಂಬ ಶಿವಮಂತ್ರದಲ್ಲಿ ಬರುವ, ಈ ಸಾಲುಗಳು, ವಿಶ್ವಕ್ಕೆ ಒಡೆಯನಾದ ವಿಶ್ವನಾಥನ ಮಹಿಮೆಯನ್ನು ಲೋಕಕ್ಕೇ ಸಾರುತ್ತಿವೆ. ಕಾಶಿ ಎಂದಾಕ್ಷಣ ಹಿಂದೂಗಳ ಮೈ ಮನ ನವಿರೇಳುವುದು. ಬದುಕಿನಲ್ಲಿ ಒಮ್ಮೆಯಾದರೂ ಕಾಶಿಯಲ್ಲಿ ಗಂಗಾಸ್ನಾನ ಮಾಡಿ, ವಿಶ್ವನಾಥನ ದರ್ಶನ ಮಾಡಿ, ಗಂಗಾರತಿಯನ್ನು ವೀಕ್ಷಿಸಿಬೇಕೆಂಬುದೇ ಎಲ್ಲರ ಮನದಾಳದ ಬಯಕೆ. ಸೂರ್ಯದೇವನು ಹೇಗೆ ಬೆಳಕನ್ನು ನೀಡುತ್ತಾ, ಈ ಜಗತ್ತನ್ನು ಸಲಹುತ್ತಿರುವುನೋ, ಹಾಗೆಯೇ ವಿಶ್ವನಾಥನು ತನಗೆ ಶರಣಾದವರಿಗೆ ಸುಖ, ಸಮೃದ್ಧಿ ಹಾಗೂ ಮುಕ್ತಿಯನ್ನು ನೀಡುತ್ತಿರುವನು.

2021 ಡಿಸೆಂಬರ್ 13 ರಂದು ‘ಕಾಶಿ ವಿಶ್ವನಾಥ ಕಾರಿಡಾರ್’ ಅನ್ನು ಉದ್ಘಾಟಿಸಿದ ಪ್ರಧಾನಿಯವರು ಹೇಳಿದ ಮಾತುಗಳಿವು – ಇದು ಶಿವನ ಸರ್ಕಾರ. ಇಲ್ಲಿ ಸತ್ಯವೇ ಸಂಸ್ಕಾರ, ಪ್ರೇಮವೇ ಪರಂಪರೆ. ಈ ಕ್ಷೇತ್ರದಲ್ಲಿ ಎಲ್ಲ ಜಾತಿ, ಮತ, ಪಂಥದವರಿಗೆ ಮುಕ್ತ ಪ್ರವೇಶವಿದೆ. ಬಡವ ಬಲ್ಲಿದರೆಂಬ ಬೇಧ ಭಾವವಿಲ್ಲ, ಲಿಂಗ ತಾರತಮ್ಯವಿಲ್ಲ ಇಲ್ಲಿ ಮೃತ್ಯುವೂ ಮಂಗಳಕರವಾಗುತ್ತದೆ. ಕಾಶಿಯು ಭಾರತದ ಆತ್ಮದ ಜೀವಂತ ಅವತಾರ. ಪ್ರಾಚೀನ ಭಾರತದ ಉಜ್ವಲವಾದ ಸಂಸ್ಕೃತಿಯ ಪ್ರತೀಕ. ಇದು ಆಧ್ಯಾತ್ಮಿಕ ಶಕ್ತಿ ಕೇಂದ್ರ.

ಕಾಶಿ ವಿಶ್ವನಾಥ

ಪ್ರಧಾನಿಯವರ ಮಾತನ್ನು ಕೇಳುತ್ತಿರುವಾಗ, ನಾನು, ಎರಡು ವರ್ಷಗಳ ಹಿಂದೆ, ಶ್ರೀ ಶಿವಗಂಗಾ ಯೋಗ ಕೇಂದ್ರದ ಬಂಧುಗಳೊಂದಿಗೆ ಗಂಗೆಯಲ್ಲಿ ಮುಳುಗು ಹಾಕಿ, ಕಾಶಿ ವಿಶ್ವನಾಥನಿಗೆ ಪಂಚಾಮೃತದ ಅಭಿಷೇಕ ಮಾಡಿ, ಬಿಲ್ವ ಪತ್ರೆಯನ್ನು ಶಿವನ ಮುಡಿಗೇರಿಸಿದ್ದು ನೆನಪಾಯಿತು. ಸಂಜೆ ದೋಣಿಯಲ್ಲಿ ಕುಳಿತು, ಸಾಧು ಸಂತರು ನೆರವೇರಿಸುತ್ತಿದ್ದ ಗಂಗಾರತಿಯನ್ನು ನೋಡುತ್ತಿರುವಾಗ, ಸ್ವರ್ಗವೇ ಧರೆಗೆಳಿದು ಬಂದಂತಾಗಿತ್ತು. ಎಲ್ಲರೂ ಒಟ್ಟಾಗಿ ‘ಹರ್ ಹರ್ ಮಹಾದೇವ್’ ಎಂದು ಜೈಕಾರ ಕೂಗಿದ್ದು ನೆನಪಾಯಿತು. ಅಂದು, ನನ್ನ ಹಲವು ದಶಕಗಳ ಕನಸು ನನಸಾಗಿತ್ತು. ‘ನಮಾಮಿ ಗಂಗಾ’ಯೋಜನೆಯ ಪ್ರತ್ಯಕ್ಷ ಫಲಾನುಭವಿಗಳು ನಾವಾಗಿದ್ದೆವು. ಮನದಲ್ಲಿ ಹತ್ತು ಹಲವು ಆಲೋಚನೆಗಳು ಮೂಡುತ್ತಿದ್ದವು. ಭಾರತದ ಧಾರ್ಮಿಕ ಮೇರು ಪರ್ವತದಂತಿರುವ ಕಾಶಿಯು, ಹಲವು ಬಾರಿ ಪರಕೀಯರ ಆಕ್ರಮಣಕ್ಕೊಳಗಾಗಿತ್ತು. ಪ್ರತೀ ಬಾರಿಯೂ, ಭಾರತದ ರಾಜ, ಮಹಾರಾಜರು ಕಾಶಿ ವಿಶ್ವನಾಥನ ದೇಗುಲವನ್ನು ಪುನರ್ ನಿರ್ಮಾಣ ಮಾಡುತ್ತಲೇ ಬಂದರು. ಆದರೆ, ಸ್ವಾತಂತ್ರ್ಯ ಬಂದು ಹಲವು ದಶಕಗಳಾದರೂ, ಕಾಶಿಯಲ್ಲಿ ಯಾವುದೇ ಪುನರುತ್ಥಾನ ಕಾರ್ಯ ನಡೆಯಲೇ ಇಲ್ಲ. ಕಾಶಿ ಎಂದಾಕ್ಷಣ – ಪತ್ರಿಕೆಗಳಲ್ಲಿ, ಟಿ.ವಿ.ಮಾಧ್ಮಗಳಲ್ಲಿ ಬರುತ್ತಿದ್ದ ಸುದ್ದಿಗಳು ಎಂತಹವರನ್ನೂ ಧೃತಿಗೆಡಿಸುತ್ತಿದ್ದವು – ಸಹಸ್ರ ಸಹಸ್ರ ಯಾತ್ರಿಗಳು, ಗಲ್ಲಿ ಗಲ್ಲಿಗಳಲ್ಲಿ ನೆಲೆಯಾಗಿರುವ ದೇಗುಲಗಳು, ಎಲ್ಲೆಲ್ಲಿಯೂ ಕಸದ ರಾಶಿ, ಗಂಗೆಯಲ್ಲಿ ತೇಲುವ ಅರೆಬರೆ ಸುಟ್ಟ ಹೆಣಗಳು, ಇತ್ಯಾದಿ. ಆದರೆ ಪ್ರಖರವಾಗಿ ಬೆಳಗುವ ಸೂರ್ಯಕಿರಣಗಳನ್ನು ಕಪ್ಪು ಮೋಡಗಳು ಎಷ್ಟು ಕಾಲ ಮಸುಕಾಗಿಸಲು ಸಾಧ್ಯ? ಅಂತೆಯೇ, ಈಗ ಕಾಶಿಯು ತನ್ನ ಗತವೈಭವವನ್ನು ಮರಳಿ ಪಡೆಯುತ್ತಿದೆ.

ಕಾಶಿ ಎಂದರೆ, ದೇದೀಪ್ಯಮಾನವಾಗಿ ಪ್ರಜ್ವಲಿಸುವ ಜ್ಯೋತಿ. ಕೋಟಿ ಕೋಟಿ ನಕ್ಷತ್ರಗಳಂತೆ ಪ್ರಕಾಶಿಸುವ ಬೆಳಕು. ಅಮೆರಿಕಾದ ಪ್ರಖ್ಯಾತ ಲೇಖಕನಾದ ಮಾರ್ಕ್‌ಟೈನ್ ಹೇಳುವಂತೆ, ‘ಕಾಶಿಯು ಅತ್ಯಂತ ಪ್ರಾಚೀನವಾದ ನಗರ, ಪುರಾಣಗಳಿಗಿಂತ ಪುರಾತನವಾದುದು.’ ಸುಮಾರು 12,400 ವರ್ಷಗಳ ಹಿಂದೆ ಭಾರತದಲ್ಲಿ ದೊರೆತಿರುವ ನಾಣ್ಯಗಳ ಮೇಲೆ ಸಿದ್ದಾಸನದಲ್ಲಿ ಕುಳಿತಿರುವ ಯೋಗಿ, ಬದಿಯಲ್ಲಿ ನಿಂತಿರುವ ನಂದಿಯ ಚಿತ್ರ ಮುದ್ರಿತವಾಗಿದೆ. ಅಂದರೆ ಈ ನಾಣ್ಯಗಳು ಚಲಾವಣೆಯಲ್ಲಿದ್ದ ಕಾಲಕ್ಕಿಂತ ಮುಂಚಿತವಾಗಿಯೇ ಆದಿಯೋಗಿ ಶಿವನು ಜನಮಾನಸದಲ್ಲಿ ನೆಲೆಯಾಗಿದ್ದಿರಬೇಕಲ್ಲವೇ?

ಕಾಶಿಯ ಐತಿಹಾಸಿಕ ಹಿನ್ನೆಲೆ ನೋಡೋಣ ಬನ್ನಿ – ಇದು ಅತ್ಯಂತ ಪ್ರಾಚೀನವಾದ ದೇಗುಲವಾಗಿದ್ದರಿಂದ, ಯಾರು ಕಟ್ಟಿಸಿದರು ಎಂಬುದು ಯಕ್ಷಪ್ರಶ್ನೆಯಾಗಿದೆ. ಮೊಗಲ್ ದೊರೆ ಅಕ್ಬರನ ಕಾಲದಲ್ಲಿ, ರಾಜಾ ಮಾನ್‌ಸಿಂಗ್ ಈ ದೇಗುಲವನ್ನು ನವೀಕರಿಸಿದನು. ಪರಕೀಯರ ದಾಳಿಯಲ್ಲಿ ಧ್ವಂಸವಾದ ದೇಗುಲದ ಸ್ಥಳದಲ್ಲಿ ಮಸೀದಿಯ ನಿರ್ಮಾಣವಾಗಿದ್ದರಿಂದ, ಮಹಾರಾಣಿ ಅಹಲ್ಯಾ ಬಾಯಿ ಹೋಲ್ಕರ್ 1780 ರಲ್ಲಿ, ಈಗಿರುವ ಸ್ಥಳದಲ್ಲಿ ವಿಶ್ವನಾಥನ ದೇಗುಲವನ್ನು ನಿರ್ಮಾಣ ಮಾಡಿದರು. 1828 ರಲ್ಲಿ ಗ್ವಾಲಿಯರ್‌ನ ಸಿಂಧಿಯಾ ಮನೆತನದ ರಾಣಿ ಬೈಜು ಬಾಯಿಯು ನಲವತ್ತು ಕಂಬದ ವಿಶಾಲವಾದ ಸಭಾ ಮಂಟಪವನ್ನು ನಿರ್ಮಿಸಿದಳು. 1835 ರಲ್ಲಿ ರಾಜಾ ರಣಜೀತ್ ಸಿಂಗ್ ದೇಗುಲಕ್ಕೆ ಒಂದು ಟನ್ ಚಿನ್ನವನ್ನು ದಾನವಾಗಿ ನೀಡಿ, ದೇಗುಲದ ಮೇಲಿನ ಮೂರು ಶಿಖರಗಳಿಗೆ ಚಿನ್ನದ ಹೊದಿಕೆಯನ್ನು ಹಾಸಿದ. ನಂತರ ಬಂದ ನಾಗ್ಪುರದ ದೊರೆ ರಘೂಜಿ ಭೋಸ್ಲೆ ಬೆಳ್ಳಿಯಿಂದ ದೇಗುಲವನ್ನು ಸಿಂಗರಿಸಿದ. ಔರಂಗಜೀಬನು ದಾಳಿ ಮಾಡಿದಾಗ, ಪುರೊಹಿತನೊಬ್ಬನು ಶಿವಲಿಂಗವನ್ನು ಹಿಡಿದೇ ಜ್ಞಾನವಾಪಿ ಭಾವಿಗೆ ಜಿಗಿದಿದ್ದನಂತೆ. 2019 ರಿಂದ ಕಾಶಿಯ ಪುನರುತ್ಥಾನ ಕಾರ್ಯ ಭರದಿಂದ ಸಾಗುತ್ತಿದೆ. ಶಿಥಿಲವಾಗಿದ್ದ, ಸುಮಾರು ನಲವತ್ತು ದೇಗುಲಗಳನ್ನು ಪುನರ್‌ನಿರ್ಮಾಣ ಮಾಡಿದ್ದಾರೆ.

ಕಾಶಿ ವಿಶ್ವನಾಥ ದೇಗುಲ

ಇಂದಿಗೂ, ಭಾರತದ ಭವ್ಯ ಪರಂಪರೆಯಲ್ಲಿ ಧೃವನಕ್ಷತ್ರಗಳಂತೆ ಮಿನುಗುತ್ತಿರುವ ಮಹಾನ್ ವ್ಯಕ್ತಿಗಳನ್ನು ನೆನಪಿಸಿಕೊಳ್ಳೋಣ. ಸತ್ಯವನ್ನು ತನ್ನ ಉಸಿರಾಗಿಸಿಕೊಂಡಿದ್ದ ರಾಜಾ ಹರಿಶ್ಚಂದ್ರನು, ತನ್ನ ಪತ್ನಿಯನ್ನು ಮಾರಾಟಮಾಡಿ, ನಂತರ ತನ್ನನ್ನೂ ವೀರಬಾಹುವಿನ ದಾಸನನ್ನಾಗಿ ಒಪ್ಪಿಸಿಕೊಂಡು, ಸ್ಮಶಾನದ ಕಾವಲುಗಾರನಾದ ಕ್ಷೇತ್ರವಿದು. ಗೌತಮ ಬುದ್ದನು ತನ್ನ ಮೊದಲ ಉಪದೇಶವನ್ನು ನೀಡಲು ಆರಿಸಿಕೊಂಡ ಪುಣ್ಯಕ್ಷೇತ್ರ ಇದು. ಆದಿಗುರು ಶಂಕರರು, ಕಾಶಿಯಲ್ಲಿ, ಹಲವು ವರ್ಷಗಳ ಕಾಲ ಅಧ್ಯಯನ ನಡೆಸಿ, ಇಡೀ ಭಾರತವನ್ನು ಧಾರ್ಮಿಕ ಏಕತೆಯ ಸೂತ್ರದಲ್ಲಿ ಕಟ್ಟಲು ಪ್ರಯತ್ನಿಸಿದರು. ತುಲಸೀದಾಸರು ‘ರಾಮಚಂದ್ರಚರಿತ ಮಾನಸ’ ವೆಂಬ ಅತ್ಯುತ್ತಮ ಕೃತಿಯನ್ನು ರಚಿಸಿದ ಸ್ಥಳವಿದು. ಕೃಷ್ಣಭಕ್ತರಾದ ಚೈತನ್ಯ ಪ್ರಭುಗಳ ಕಾರ್ಯಕ್ಷೇತ್ರವಾಗಿತ್ತು ವಾರಣಾಸಿ. ಗುರು ನಾನಕರು, ಸತ್ಯ ಸಾಯಿಬಾಬಾ, ಸಂತ ಕಬೀರ ದಾಸರು, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಸುಬ್ರಹ್ಮಣ್ಯ ಭಾರತಿಯವರು ಮುಂತಾದ ಸಾಧಕರು ಕಾಶಿಯಲ್ಲಿ ಜ್ಞಾನದೀಕ್ಷೆ ಪಡೆದು, ದೇಶಸೇವೆಗೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಸ್ಥಳವಿದು. ಮದನ ಮೋಹನ ಮಾಲವೀಯರು ಬನಾರಸ್ ಹಿಂದೂ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಆರ್ಯಭಟ, ವರಾಹ ಮಿಹಿರ ಮುಂತಾದ ವಿಜ್ಞಾನಿಗಳು ಅನ್ವೇಷಣೆ ನಡೆಸಿದ ಪ್ರದೇಶವಿದು. ಇಪ್ಪತ್ತನೇ ಶತಮಾನದಲ್ಲಿ, ಮಹಾತ್ಮ ಗಾಂಧೀಜಿಯವರ ಕನಸಿನ ಕೂಸಾದ ಕಾಶಿ ವಿದ್ಯಾಪೀಠದ ಸ್ಥಾಪನೆಯಾಯಿತು. ಚೀನಾದಿಂದ ಆಗಮಿಸಿದ್ದ ಯಾತ್ರಿಕ ಹ್ಯುಯೆತ್ಸಾಂಗ್ ದಾಖಲಿಸಿರುವಂತೆ – ‘ದೇಶ ವಿದೇಶಗಳಿಂದ ವೇದ ಉಪನಿಷತ್ತುಗಳನ್ನು ಪಠಣ ಮಾಡಲು ವಿದ್ವಾಂಸರು ಕಾಶಿಯ ವಿಶ್ವ ವಿದ್ಯಾಲಯಗಳಿಗೆ ಆಗಮಿಸುತ್ತಿದ್ದರು. ನಳಂದ ವಿ.ವಿ. ಯಂತಹ ಹಲವು ಪ್ರಖ್ಯಾತ ವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದವು. ಅವನು ಭೇಟಿ ನೀಡಿದ್ದ ಸಮಯದಲ್ಲಿ ಹತ್ತು ಸಾವಿರ ಗುರುಗಳೂ ಹಾಗೂ ಮೂವತ್ತು ಸಾವಿರ ಶಿಕ್ಷಣಾರ್ಥಿಗಳೂ ಇದ್ದರು ಎಂದು ದಾಖಲಿಸಿದ್ದಾನೆ.

ವಾರಣಾಸಿಯು ಸಂಗೀತ, ಶಿಲ್ಪಕಲೆ, ದಂತದ ಮೇಲಿನ ಕುಸುರಿ ಕೆಲಸ, ಸುಗಂಧ ದ್ರವ್ಯಗಳ ಉತ್ಪಾದನೆ ಹಾಗೂ ಸಿಲ್ಕ್ ನೇಯ್ಗೆಯ ತವರೂರಾಗಿತ್ತು. ಇಲ್ಲಿನ ಮಸ್ಲಿನ್ ಬಟ್ಟೆ, ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿತ್ತು.

ಕಾಶಿಯ ಪೌರಾಣಿಕ ಹಿನ್ನೆಲೆಯನ್ನು ಪರಿಶೀಲಿಸೋಣವೇ?
ಸ್ಕಂದ ಪುರಾಣದಲ್ಲಿ ಬರುವ ಕಾಶಿ ಖಂಡದಲ್ಲಿ – ಚಿದಾನಂದ ಸ್ವರೂಪನಾಗಿದ್ದ ಶಿವನು ತನ್ನ ಸೃಷ್ಟಿಕಾರ್ಯವನ್ನು ಕಾಶಿ ಕ್ಷೇತ್ರದಲ್ಲಿ ಆರಂಭಿಸಿದನೆಂಬ ಪ್ರತೀತಿಯಿದೆ. ನಿರ್ಗುಣನಾದ ಪರಶಿವನು ಸಗುಣನಾಗಿ ಪುರುಷ ಪ್ರಕೃತಿಯೆಂದು ಇಬ್ಭಾಗವಾಗುವನು. ಅಂದಿನ ಶಿವನ ಅವತಾರವೇ ಅರ್ಧನಾರೀಶ್ವರನೆಂದು ಹೆಸರಾಯಿತು.

ಕೈಲಾಸವಾಸಿಯಾಗಿದ್ದ ಶಿವನು ಪಾರ್ವತಿಯನ್ನು ವರಿಸಿದ ಮೇಲೆ, ತನ್ನ ವಾಸ ಸ್ಥಾನವನ್ನು ಕಾಶಿಗೆ ಸ್ಥಳಾಂತರಿಸುವನು. ಸುಂದರವಾದ, ಪರಿಪೂರ್ಣವಾದ ಸ್ಥಳವಾಗಿದ್ದ ವಾರಣಾಸಿಯು, ಶಿವನಿಗೆ ಅತ್ಯಂತ ಪ್ರಿಯವಾಗಿತ್ತು. ಪ್ರಜೆಗಳೆಲ್ಲರೂ ಶಿವನ ಬಳಿಯೇ ಹೋಗುತ್ತಿದುದನ್ನು ಕಂಡ ಕಾಶಿಯ ದೊರೆಯಾದ ದೇವದಾಸನಿಗೆ, ಮತ್ಸರ ಉಂಟಾಯಿತು. ಬ್ರಹ್ಮದೇವನಿಗೆ ಪ್ರಾರ್ಥನೆ ಸಲ್ಲಿಸಿ – ಶಿವನನ್ನು ತನ್ನ ರಾಜ್ಯದಿಂದ ಹೊರ ಕಳುಹಿಸಬೇಕೆಂಬ ಬೇಡಿಕೆಯನ್ನು ಇಟ್ಟನು. ಶಿವನು ಬ್ರಹ್ಮನ ಅಣತಿಯಂತೆ ಮಂದಾರ ಪರ್ವತದೆಡೆ ಪಯಣ ಬೆಳಸುವನು. ಆದರೆ ಶಿವನಿಗೆ, ಕಾಶಿಗೆ ಹಿಂದಿರುಗಲೇಬೇಕೆಂಬ ಮಹತ್ತರವಾದ ಆಕಾಂಕ್ಷೆ ಉಂಟಾಯಿತು. ಆಗ ಬ್ರಹ್ಮದೇವನು ರಾಜಾ ದೇವದಾಸನ ಮನವೊಲಿಸಿ, ಅವನನ್ನು ತಪೋವನಕ್ಕೆ ಕಳುಹಿಸುವನು. ನಂತರ ಶಿವನು ತನ್ನ ಗಣಗಳೊಂದಿಗೆ ಕಾಶಿ ಕ್ಷೇತ್ರದಲ್ಲಿ ನೆಲಸುವನು.

ಮತ್ತೊಂದು ಐತಿಹ್ಯ ಕೇಳೋಣ ಬನ್ನಿ – ಒಮ್ಮೆ ಪಾರ್ವತಿಯ ಕಿವಿಯೋಲೆ ಕೆಳಗೆ ಬಿದ್ದು ಹೋಗುವುದು. ಆಗ ವಿಷ್ಣುವು ಅದನ್ನು ಹುಡುಕಲು ಭೂಮಿಯನ್ನು ಅಗೆಯುತ್ತಾ ಹೋದನಂತೆ. ಆಗ ನೆಲಕ್ಕೆ ಬಿದ್ದ ಅವನ ಬೆವರಿನ ಹನಿಗಳು ಮಣಿಕರ್ಣಿಕಾ ಕುಂಡವಾಗಿ ಮಾರ್ಪಾಡಾದವಂತೆ. ನಂತರ ಶಿವನ ಮುಡಿಯಿಂದ ಇಳಿದು ಬಂದ ಗಂಗೆಯನ್ನು ಸೇರಿದಳು ಮಣಿಕರ್ಣಿಕಾ.
ಇನ್ನೊಂದು ಪ್ರಸಂಗ ವಿಸ್ಮಯಕಾರಿಯಾಗಿದೆ. ಅಸತ್ಯವನ್ನಾಡಿದ ಬ್ರಹ್ಮದೇವನ ತಲೆಯನ್ನು ಕಡಿದ, ಶಿವನು ಬ್ರಹ್ಮಹತ್ಯಾ ದೋಷ ನಿವಾರಣೆಗಾಗಿ ಬ್ರಹ್ಮನ ತಲೆಯನ್ನೇ ಕಪಾಲವನ್ನಾಗಿ ಹಿಡಿದು ಬಿಕ್ಷಾಟನೆ ನಡೆಸುವನು. ಅವನಿಗೆ ಬಿಕ್ಷೆ ಹಾಕಿದ ಪಾರ್ವತಿಯು ಅನ್ನಪೂರ್ಣೇಶ್ವರಿ ಎಂದು ಪ್ರಸಿದ್ಧಿಯಾದಳು.

ಕಾಶಿಯಲ್ಲಿ ಗಂಗಾರತಿ

ಕಾಶಿ ವಿಶ್ವನಾಥನ ದೇಗುಲದಲ್ಲಿ, ಒಂದು ಚೌಕಾಕಾರದ ಬೆಳ್ಳಿಯ ಪೀಠದಲ್ಲಿ ಶಿವಲಿಂಗವನ್ನು ಸ್ಥಾಪಿಸಲಾಗಿದೆ. ದೇಗುಲದ ಪ್ರಾಂಗಣದಲ್ಲಿ ಅವಿಮುಕ್ತೇಶ್ವರ, ಕಾಲಭೈರವ, ವಿಷ್ಣು, ಗಣೇಶ, ಕಾರ್ತಿಕೇಯ ಮುಂತಾದ ದೇವಾಲಯಗಳಿವೆ. ಇಲ್ಲಿ ಶಿವನಿಗೆ ನಾಲ್ಕು ಬಾರಿ ಪೂಜೆ ಸಲ್ಲಿಸಲಾಗುತ್ತದೆ. ಬ್ರಾಹ್ಮೀ ಮುಹೂರ್ತದಲ್ಲಿ ಮುಂಜಾನೆ ಮೂರರಿಂದ ನಾಲ್ಕು ಗಂಟೆಯವರೆಗೆ ನಡೆಯುವ ಆರತಿಗೆ ಮಂಗಳಾರತಿ ಎಂದೂ, ಮಧ್ಯಾನ್ಹ ಹನ್ನೆರಡು ಗಂಟೆಗೆ ನಡೆಯುವ ಪೂಜೆಗೆ ಭೋಗ್ ಆರತಿಯೆಂದೂ, ಸಂಜೆ ಏಳೂವರೆಗೆ ನಡೆಯುವ ಆರತಿಗೆ ಸಂಧ್ಯಾ ಆರತಿಯೆಂದೂ, ರಾತ್ರಿ ಹನ್ನೊಂದು ಗಂಟೆಗೆ ನಡೆಯುವ ಅರತಿಗೆ ಶೃಂಗಾರ ಆರತಿಯೆಂದೂ ಕರೆಯುವರು. ಇಲ್ಲಿ ವಿಶಿಷ್ಟವಾದ ಪರಂಪರೆಯೊಂದು ಜಾರಿಯಲ್ಲಿದೆ. ಶಿವನ ದರ್ಶನಕ್ಕೆ ಆಗಮಿಸುವ ಭಕ್ತರು ತಮಗೆ ಪ್ರಿಯವಾದ ವಸ್ತುವನ್ನು ದೇವರ ಸನ್ನಿಧಿಯಲ್ಲಿ ಬಿಟ್ಟು ಹೋಗಬೇಕು. ನಾನು – ‘ನಾನು ಎಂಬ ಅಹಂಭಾವವನ್ನು ಕಾಶಿಯಲ್ಲಿ ತ್ಯಜಿಸಿ ಬರುವ ಸಂಕಲ್ಪ ಮಾಡಿದೆ’.

ಕಾಶಿಯಲ್ಲಿ ಮರಣ ಹೊಂದಿದವರಿಗೆ, ಪುನರ್ ಜನ್ಮ ಇಲ್ಲ, ಹುಟ್ಟು ಸಾವಿನಿಂದ ಮುಕ್ತಿ ಪಡೆಯುವರು ಎಂಬ ಪ್ರತೀತಿ ಇರುವುದರಿಂದ, ಇಲ್ಲಿಗೆ ಮರಣಶಯ್ಯೆಯಲ್ಲಿರುವವರು ಬರುವರು. ಅವರಿಗೆಂದೇ ಕೆಲವು ಬಿಡಾರಗಳೂ ಇವೆ. ಮರಣ ಹೊಂದಿದವರ ಅಂತ್ಯ ಸಂಸ್ಕಾರವನ್ನು ಮಾಡಲು ಹಲವು ಘಾಟ್ ಗಳು ಇವೆ – ದಶಾಶ್ವಮೇಧ ಘಾಟ್, ಪಂಚಗಂಗ ಘಾಟ್, ಮಣಿಕರ್ಣಿಕಾ ಘಾಟ್, ಹರಿಶ್ಚಂದ್ರ ಘಾಟ್ ಇವುಗಳಲ್ಲಿ ಪ್ರಮುಖವಾದವು. ಹರಿಶ್ಚಂದ್ರ ಘಾಟ್‌ನಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಯೂ ಶವ ಸಂಸ್ಕಾರ ನಡೆಯುತ್ತಲೇ ಇರುವುದು, ಹರಿಶ್ಚಂದ್ರ ಹಚ್ಚಿದ್ದ ಬೆಂಕಿ ಇನ್ನೂ ಆರಿಲ್ಲ ಎಂಬ ಪ್ರತೀತಿಯೂ ಇದೆ.
ಸದ್ಗುರುಗಳ ಮಾತಿನಲ್ಲಿ ಹೇಳುವುದಾದರೆ – ‘ಬ್ರಹ್ಮಾಂಡವನ್ನು ಕುತೂಹಲ ಹಾಗೂ ಅಚ್ಚರಿಯಿಂದ ವೀಕ್ಷಿಸಿದ ಮಹರ್ಷಿಗಳು – ಗಗನದಲ್ಲಿ ಆಕಾಶಕಾಯಗಳು ಪರಿಭ್ರಮಣ ಮಾಡುತ್ತಲೇ ವಿಕಾಸ ಹೊಂದುತ್ತಿರುವುದನ್ನು ಗುರುತಿಸಿದರು. ಬ್ರಹ್ಮಾಂಡದ ಪ್ರತಿರೂಪವನ್ನು ರಚಿಸಲು ಮುಂದಾದರು. ಅವರು ಯೋಗಶಾಸ್ತ್ರದ ತಳಹದಿಯ ಮೇಲೆ ರಚಿಸಿದ ಸ್ಥಳವೇ ಕಾಶಿ. ಆದಿಯೋಗಿ ಶಿವನ ವಾಸಸ್ಥಾನವನ್ನು ಮಾನವನ ದೇಹದ ಆಕೃತಿಯಲ್ಲೇ ರಚಿಸಿದರು. ಅವರು ನಿರ್ಮಿಸಿದ 72,000 ಸಾವಿರ ದೇಗುಲಗಳು, ಮಾನವನಲ್ಲಿರುವ ಎಪ್ಪತ್ತೆರೆಡು ಸಹಸ್ರನಾಡಿಗಳ ಸಂಕೇತವಾಗಿ ನಿಲ್ಲುತ್ತವೆ. ಅವುಗಳಲ್ಲಿ ಪ್ರಮುಖವಾದ 108 ದೇವಾಲಯಗಳು, ಮನುಷ್ಯನಲ್ಲಿರುವ ಚಕ್ರಗಳ ರೂಪಕವಾಗಿ ನಿಲ್ಲುವುದು. 54 ದೇಗುಲಗಳು ಶಿವನ ಆಲಯಗಳಾದರೆ, 54 ದೇಗುಲಗಳು ಶಕ್ತಿಯ ಆಲಯಗಳಾಗಿವೆ. ಶಿವನಿಗೆ ಭೂತೇಶ್ವರ ಎಂಬ ಹೆಸರಿನಿಂದ ಕರೆದರು, ಕಾರಣ ಪಂಚಭೂತಗಳಾದ ಜಲ, ಪೃಥ್ವಿ, ಆಕಾಶ, ವಾಯು, ಅಗ್ನಿ – ಮಾನವನಲ್ಲಿಯೂ ಇವೆ. ಶಿವನು ತನ್ನ ತ್ರಿಶೂಲದ ಮೇಲೆ ಈ ನಗರದ ಚೈತನ್ಯ ಸ್ವರೂಪವನ್ನು ನಿಲ್ಲಿಸಿದ್ದಾನೆ ಎಂಬ ಪ್ರತೀತಿ ಇದೆ. ಮಾನವನ ಅಂತರಾತ್ಮದ ಜಾಗೃತಿಗಾಗಿಯೇ ಕಾಶಿಯನ್ನು ನಿರ್ಮಿಸಿದ್ದರಿಂದ ಕಾಶಿಕ್ಷೇತ್ರವು ಎಂದಿಗೂ, ಎಂದೆಂದಿಗೂ ಅಮರ.

ಈ ಲೇಖನ ಸರಣಿಯ ಹಿಂದಿನ ಲೇಖನ ( ಜ್ಯೋತಿರ್ಲಿಂಗ 10) ಇಲ್ಲಿದೆ :http://surahonne.com/?p=34787

ಡಾ.ಗಾಯತ್ರಿದೇವಿ ಸಜ್ಜನ್

7 Responses

  1. sudha says:

    Very nice and informative article. thanks madam.

  2. ನಯನ ಬಜಕೂಡ್ಲು says:

    Very nice

  3. ನಾಗರತ್ನ ಬಿ.ಆರ್. says:

    ಕಾಶಿವಿಶ್ವನಾಥನ ಪರಿಚಯಾತ್ಮಕ ಲೇಖನ ಬಹಳ ಬಹಳ ಮಹತ್ವದ ವಿಚಾರಗಳನ್ನು ಒಳಗೊಂಡಿದೆ …ಉತ್ತಮ ನಿರೂಪಣೆ ಯೊಂದಿಗೆ ಆಪ್ತವಾಗಿ ಮೂಡಿಬಂದಿದೆ ಧನ್ಯವಾದಗಳು ಮೇಡಂ

  4. ಸಹೋದರಿ ಓದುಗರಿಗೆ ನಮನಗಳು

  5. ಶಂಕರಿ ಶರ್ಮ says:

    ಕಾಶಿಯ ಜ್ಯೋತಿರ್ಲಿಂಗದ ಬಗೆಗಿನ ಮಾಹಿತಿಪೂರ್ಣ ಸಂಗ್ರಹಯೋಗ್ಯ ಬರೆಹ…ಧನ್ಯವಾದಗಳು ಗಾಯತ್ರಿ ಮೇಡಂ

  6. Padmini Hegde says:

    ನಿರೂಪಣೆ ಚೆನ್ನಾಗಿದೆ

  7. ತಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: