‘ನೆಮ್ಮದಿಯ ನೆಲೆ’-ಎಸಳು 15

Share Button

 

(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಮಗ ತಮ್ಮ ಅಗತ್ಯಕ್ಕಾಗಿ ಅಮೇರಿಕಾಕ್ಕೆ ಕರೆಯಿಸಿಕೊಳ್ಳುತ್ತಾನೆ, ಬರಬರುತ್ತಾ ಸೊಸೆಯ ಅನಾದರ ಗಮನಕ್ಕೆ ಬರುತ್ತದೆ…ಈ ನಡುವೆ ಗೆಳತಿ ಸಂಧ್ಯಾಳೊಂದಿಗೆ ಒಡನಾಟ ,ಪ್ರವಾಸ ಶುರುವಾಯಿತು…..ಮುಂದಕ್ಕೆ ಓದಿ)

ಅಲ್ಲದೆ ಪ್ರವಾಸದಿಂದ ನಾನು ಹಿಂತಿರುಗಿ ಬಂದನಂತರ ನನ್ನ ಅನುಭವಗಳನ್ನು ಹಂಚಿಕೊಳ್ಳಲು ನನ್ನವರು, ಮಗಳು ತಯಾರಿರುತ್ತಿರಲಿಲ್ಲ. ಅವರ್‍ಯಾರೂ ಅದರಲ್ಲಿ ಆಸಕ್ತಿಯನ್ನು ತೋರುತ್ತಿರಲಿಲ್ಲ. ಇನ್ನು ಮಗ ಫೋನ್ ಮಾಡಿದಾಗ ಏನಾದರೂ ಈ ವಿಷಯವನ್ನೆತ್ತಿದರೆ ಬರೀ ‘ಹಾ..ಹೂ.. ಎನ್ನುತ್ತಾ ಆಯಿತಮ್ಮ ನಿನಗೆ ಸಂತೋಷವಾದರೆ ಸರಿ’ ಎಂದುಬಿಡುತ್ತಿದ್ದ. ಇವೆಲ್ಲಕ್ಕಿಂತ ಹೆಚ್ಚಾಗಿ ಸಾಮಾನ್ಯವಾಗಿ ನನಗೆ ಕೆಮ್ಮು, ನೆಗಡಿ, ಸಣ್ಣಪುಟ್ಟ ಜ್ವರ ಮುಂತಾದ ತೊಂದರೆಗಳಷ್ಟೇ ಬರುತ್ತಿದ್ದವು. ಪ್ರವಾಸದ ನಂತರ ಈಗೀಗ ಆರೋಗ್ಯದಲ್ಲಿ ಏರುಪೇರಾಗಹತ್ತಿತು. ಬಿಡುವಿಲ್ಲದ ತಿರುಗಾಟ, ಹೊರಗಿನ ಊಟತಿಂಡಿಗಳ ವ್ಯತ್ಯಾಸ, ಹವಾಮಾನ ಬದಲಾವಣೆ ಇತ್ಯಾದಿಗಳಿಂದ ಗ್ಯಾಸ್ ಟ್ರಬಲ್, ಗಂಟಲಿನ ಇನ್ಫೆಕ್ಷನ್, ಮ್ಯೆಕೈಯೆಲ್ಲಾ ನೋವು ಹೀಗೆ ಒಂದೊಂದೇ ಕಾಣಿಸಿಕೊಳ್ಳುತ್ತಿದ್ದವು. ಅದಕ್ಕಾಗಿ ಎಲ್ಲರೀತಿಯ ಪರೀಕ್ಷೆಗಳನ್ನು ನೆರವೇರಿಸಿದ ವೈದ್ಯರು ರೆಸ್ಟ್ ಬೇಕು. ಓಡಾಟ ಕಡಿಮೆಮಾಡುವುದೊಳ್ಳೆಯದು ಎಂದು ಸಲಹೆ ಕೊಟ್ಟರು. ಇದರಿಂದ ಗಾಭರಿಗೊಂಡು ನನ್ನವರು ‘ಸುಕನ್ಯಾ, ನಿನ್ನ ಪ್ರವಾಸದ ಹುಚ್ಚಿಗೆ ಕಡಿವಾಣ ಹಾಕಿಕೋ. ಆರಾಮವಾಗಿರು ‘ಎಂದು ಎಚ್ಚರಿಸಿದರು. ಇವೆಲ್ಲ ಕಾರಣಗಳಿಂದ ನನ್ನ ಹೊರಪ್ರವಾಸದ ಕಥನಕ್ಕೆ ಮುಕ್ತಾಯ ಹಾಡಬೇಕಾಯಿತು.

ಹುಂ ಹತ್ತಿರವಿದ್ದರೂ ಯಾವುದಕ್ಕೂ ನನ್ನವರಂತೆ ಅಂಟಿಕೊಳ್ಳದಂತಿರುವುದನ್ನು ಕಲಿಯಬೇಕು. ಹೌದು ಸಂತಸವಾಗಲೀ, ದುಃಖವಾಗಲೀ ಸಮಚಿತ್ತದಿಂದ ಸ್ವೀಕರಿಸಬೇಕು. ಹೀಗೆ ಮೊದಲಿನಿಂದಲೂ ನನ್ನವರು ಆಚರಿಸುತ್ತಾ ಬಂದಿದ್ದಾರೆ. ಯಾರ ಬಗ್ಗೆಯೂ ಚಕಾರವೆತ್ತದೆ ಬೆಟ್ಟುಮಾಡಿ ತೋರಿಸದೆ ಬದುಕಿನ ನೊಗವನ್ನು ಎಳೆಯುತ್ತಾ ಹೋಗುತ್ತಿದ್ದಾರೆ. ನಾನೂ ಅವರೊಟ್ಟಿಗೆ ಅವರಂತೆ ಹೋಗಬಾರದೇಕೆ? ಅಂದುಕೊಳ್ಳುವಷ್ಟರಲ್ಲಿ ಮುಂದಿನ ಗೇಟು ಸದ್ದಾಯಿತು. ಆ ಸದ್ದು ನನ್ನನ್ನು ನೆನಪಿನಿಂದ ಆಚೆಗೆ ಬರುವಂತೆ ಮಾಡಿತು. ಯಾರಿರಬಹುದೆಂದು ಕಿಟಕಿಯಲ್ಲಿ ಹಣಿಕುತ್ತಿದ್ದಂತೆಯೇ ನನ್ನ ಗಂಡನ ಆಗಮನ ಅಚ್ಚರಿ ತಂದಿತು. ಹೊರಗೆ ಬರುವಷ್ಟರಲ್ಲಿ ಅವರಲ್ಲಿದ್ದ ಬೀಗದಕೈಯಿಂದ ಬಾಗಿಲನ್ನು ತೆರೆದು ಒಳಗೆ ಅಡಿಯಿಟ್ಟ ಅವರು ‘ಲೇ ಮಹಾರಾಯ್ತೀ, ಇದೇನು ಅರ್ಧಂಬರ್ಧ ಕುಡಿದು ಬಿಟ್ಟಿರುವ ಕಾಫಿಲೋಟ ಇಲ್ಲಿಯೇ ಇದೆ. ನಾನು ನಿನಗೆ ಎಷ್ಟು ಸಾರಿ ಹೇಳಿದ್ದೇನೆ ಈ ಕಾಫಿಚಟವನ್ನು ಕಡಿಮೆ ಮಾಡಿಕೋ ಎಂದು. ಇದರಿಂದ ಅಸಿಡಿಟಿ ಹೆಚ್ಚಾಗುತ್ತೆ. ಅದರಿಂದಾಗಿ ಅನೇಕ ಸಾರಿ ಒದ್ದಾಡುತ್ತಿರುತ್ತೀ. ವಯಸ್ಸಾದಂತೆಲ್ಲ ನಾವುಗಳು ನಮ್ಮ ಇಂತಹ ಚಟಗಳನ್ನು ಆದಷ್ಟೂ ಕಡಿಮೆ ಮಾಡಿಕೊಳ್ಳಬೇಕು. ನಡೆ ಊಟಕ್ಕೆ ರೆಡಿಮಾಡು. ನನ್ನದೂ ಊಟವಾಗಿಲ್ಲ’ ಎಂದು ಉಡುಪು ಬದಲಾಯಿಸಲು ರೂಮಿನಕಡೆ ಹೊರಟ ಅವರನ್ನು ಎಂದೂ ನೋಡೇ ಇಲ್ಲವೆಂಬಂತೆ ನೋಡುತ್ತಾ ನಿಂತುಬಿಟ್ಟಳು ಸುಕನ್ಯಾ.

ಬಟ್ಟೆ ಬದಲಿಸಿ ಕೈಕಾಲು ತೊಳೆದು ಬಂದವರಿಗೆ ನಿಂತಲ್ಲೇ ನಿಂತಿದ್ದ ಅವಳನ್ನು ನೋಡಿ ಹತ್ತಿರ ಬಂದು ‘ಲೇ ಸುಕನ್ಯಾ, ಏನು ಯೋಚಿಸುತ್ತಿದ್ದೀ?’ ಎಂದರು ಆಕೆಯ ಪತಿ. ಅವನ ಮಾತಿಗೆ ಬೆಚ್ಚಿಬಿದ್ದವಳೇ ‘ಅಲ್ಲಾ ಲೇಟಾಗಿ ಬರುತ್ತೇನೆಂದು ಹೇಳಿ ಹೋದವರು ಇದೇನು ಬೇಗನೆ ಬಂದಿದ್ದೀರಿ? ಅದೂ ನಿಮ್ಮ ಗೆಳೆಯರ ಹಿಂಡಿನೊಡನೆ ಊಟಮಾಡದೆ ! ನನ್ನ ಬಗ್ಗೆ ಇಷ್ಟೊಂದು ಕಾಳಜಿ ಬೇರೆ ತೋರುತ್ತಿದ್ದೀರಿ. ನಾನೇನು ಕನಸು ಕಾಣುತ್ತಿಲ್ಲವಷ್ಟೇ?’ ಎಂದಳು ಸುಕನ್ಯಾ.

‘ಕನಸೇನಿಲ್ಲ ಇದು ವಾಸ್ತವವೇ. ನಾನೇನು ಭಾವನೆಗಳೇ ಇಲ್ಲದ ಕಲ್ಲುಬಂಡೆಯೇ? ಇಲ್ಲಿನ ಪ್ರತಿಯೊಂದು ವಿದ್ಯಮಾನಗಳನ್ನೂ ಗಮನಿಸುತ್ತಲೇ ಬರುತ್ತಿದ್ದೇನೆ. ನೀನು ಮಕ್ಕಳ ಮೇಲಿಟ್ಟಿರುವ ಅಪಾರ ಪ್ರೀತಿ, ವಿಶ್ವಾಸ, ನಂಬಿಕೆ. ಅದಕ್ಕೆ ಪ್ರತಿಯಾಗಿ ಅವರಿಂದ ನಿನಗೆ ಸಿಗುತ್ತಿರುವ ಗೌರವ, ಮರ್ಯಾದೆಗಳು ಎಲ್ಲವೂ ನನಗೆ ತಿಳಿಯುತ್ತವೆ. ಅದರಿಂದ ಹತಾಶಳಾದ ನೀನು ಆ ಕಹಿಯನ್ನು ಮರೆಯಲು ಮಾಡುತ್ತಿರುವ ಕಸರತ್ತುಗಳೆಲ್ಲವನ್ನೂ ಗಮನಿಸುತ್ತಿದ್ದೇನೆ. ಇವೆಲ್ಲವನ್ನೂ ನಮ್ಮ ಪಾಲಿನ ಕರ್ತವ್ಯವೆಂದು ತಿಳಿದು ನೆಮ್ಮದಿಯಾಗಿರುವುದನ್ನು ಕಲಿ’ ಎಂದರು.

‘ಹೂ ಹೇಳುವುದು ಸುಲಭ, ಆಚರಣೆಗೆ ತರುವುದು ಕಷ್ಟ. ಆದರೂ ನಿಮ್ಮ ಹಾಗೆ ಗಟ್ಟಿಮನಸ್ಸು ನನ್ನಲ್ಲಿ ಇಲ್ಲ. ಇವೆಲ್ಲವನ್ನೂ ಹೊರತುಪಡಿಸಿ ನೀವೊಬ್ಬರಾದರೂ ನನ್ನೊಡನೆ ಜೊತೆಯಾಗಿ ಇರುತ್ತೀರೆಂದರೆ ಎಲ್ಲಾ ಹೀಗೇ. ಈಗ ತೋರಿದ ಅಕ್ಕರೆ ಆತ್ಮೀಯತೆ’ ಎಂದು ಒಳಮನಸ್ಸಿನಲ್ಲೇ ಮಾತನಾಡಿಕೊಳ್ಳಲು ತೊಡಗಿದಳು ಸುಕನ್ಯಾ. ತಾನು ಇಷ್ಟೆಲ್ಲಾ ಮಾತನಾಡಿದರೂ ತುಟಿಪಿಟಕ್ಕೆನ್ನದೆ ಗರಬಡಿದವಳಂತೆ ನಿಂತಿದ್ದಾಳಲ್ಲಪ್ಪಾ ಎಂದುಕೊಂಡು ದಯಾನಂದ ‘ಹಲೋ, ಸುಕನ್ಯಾದೇವಿಯವರೇ ಹೊಟ್ಟೆ ತಾಳಹಾಕುತ್ತಿದೆ ಊಟಕ್ಕೆ ಬಡಿಸುತ್ತೀರಾ?’ ಎಂದ. ಸುಕನ್ಯಾ ತನ್ನ ಭ್ರಮಾಲೋಕದಿಂದ ಎಚ್ಚೆತ್ತು ‘ಸಾರೀ..ಬನ್ನಿ’ ಎಂದು ಅಡುಗೆಯ ಮನೆಯಕಡೆ ನಡೆದಳು. ಊಟದ ಮನೆಯಲ್ಲಿನ ಡೈನಿಂಗ್ ಟೇಬಲ್ ಹತ್ತಿರವಿದ್ದ ಖುರ್ಚಿಯನ್ನೆಳೆದುಕೊಂಡು ಸುಕನ್ಯಾ ‘ಎಲ್ಲಾ ಪಾತ್ರೆಗಳನ್ನೂ ಇಲ್ಲೇ ತಂದುಬಿಡು, ಒಟ್ಟಿಗೇ ಊಟಮಾಡೋಣ, ಆಗಲೇ ರಾತ್ರಿ ಹತ್ತರ ಮೇಲಾಗಿದೆ’ ಎಂದು ತಟ್ಟೆಗಳನ್ನು ಸಜ್ಜುಗೊಳಿಸಿ ಲೋಟಗಳಿಗೆ ನೀರು ತುಂಬಿಸಿಟ್ಟ ದಯಾನಂದ. ಊಟ ಮಾಡುತ್ತಲೇ ‘ಸುಕನ್ಯಾ ಮುಂದಿನವಾರ ನಿನಗೊಂದು ಸರ್‍ಪ್ರೈಸ್ ಇದೆ’ ಎಂದ.

ಚಪಾತಿ ಮುರಿದು ಬದನೇಕಾಯಿ ಪಲ್ಯಸೇರಿಸಿ ಬಾಯಿಗಿಟ್ಟುಕೊಳ್ಳುತ್ತಿದ್ದ ಸುಕನ್ಯಾ ಕೈಯನ್ನು ಹಾಗೇ ಹಿಡಿದು ‘ಏನೆಂದಿರಿ ! ಸರ್‍ಪ್ರೈಸ್ ನನಗಾ’ ಎಂದು ಕೇಳಿದಳು ಅಚ್ಚರಿಪಡುತ್ತಾ.

‘ಹುಂ. ಹೌದು’ ಎಂದ. ಸರ್‍ಪ್ರೈಸ್ ಅಂದಮೇಲೆ ಕೇಳುವುದಿನ್ನೇತಕ್ಕೆ, ಅದೇನು ನೋಡೋಣವೆಂದು ಮೌನವಾಗಿ ಊಟ ಮುಂದುವರಿಸಿ ಮುಗಿಸಿದಳು.

ಒಂದು ವಾರವೂ ಮುಗಿಯಿತು. ಊಹುಂ..ಯಾವ ಸರ್‍ಪ್ರೈಸ್ ಕೂಡ ಇಲ್ಲ. ಮತ್ತೊಂದು ವಾರವೂ ಕಳೆಯಿತು. ಅಂತಹ ಯಾವುದೇ ಸೂಚನೆಯೂ ಇಲ್ಲ. ಯಥಾರೀತಿಯಲ್ಲಿ ದಿನಗಳು ಸಾಗುತ್ತಿದ್ದವು. ಈ ಮಹಾರಾಯನ ಬಾಯಿಂದ ಸರ್‍ಪ್ರೈಸ್ ಪದವನ್ನು ಕೇಳಿ ಮೋಸಹೋದೆನೇನೋ ಅನ್ನಿಸತೊಡಗಿತು ಸುಕನ್ಯಾಳಿಗೆ. ಇವರು ಒಮ್ಮೊಮ್ಮೆ ಅರ್ಥವಾದವರಂತೆ ಕಾಣುತ್ತಾರೆ, ಮತ್ತೊಮ್ಮೆ ನಿಗೂಢವಾಗಿಯೇ ಇರುತ್ತಾರೆ, ನೋಡೋಣವೆಂದು ಸುಮ್ಮನಾದಳು.

ಎಂದಿನಂತೆ ಒಂದು ಸಂಜೆ ಗೇಟಿನ ಬಳಿ ನಿಂತು ಎದುರುಗಡೆ ಪಾರ್ಕಿನಲ್ಲಾಡುತ್ತಿದ್ದ ಮಕ್ಕಳಾಟ, ಹಿರಿಯರ ಓಡಾಟ ನೋಡುತ್ತಿದ್ದ ಸುಕನ್ಯಾಳಿಗೆ ಗಂಡ ದಯಾನಂದನ ಸ್ಕೂಟರ್ ಸದ್ದು ಕೇಳಿಸಿತು. ಆದರೂ ಅವರೆಲ್ಲಿ ಇಷ್ಟುಬೇಗ ಬರುತ್ತಾರೆ? ನನ್ನ ಕಿವಿಗೆ ಅದೇ ಭ್ರಮೆ. ಬೆಳಗ್ಗೆ ಹೋದವರು ರಾತ್ರಿ ಹತ್ತರ ಒಳಗೆ ಹಿಂದಿರುಗಿ ಬಂದರೆ ಪುಣ್ಯ. ಭಾನುವಾರ ಹೊರತುಪಡಿಸಿ ಉಳಿದೆಲ್ಲಾ ದಿನಗಳು ಹಾಗೆಯೇ. ಅಂದುಕೊಳ್ಳುತ್ತಿದ್ದಂತೆ ಆತನೇ ಪ್ರತ್ಯಕ್ಷನಾದನು. ‘ಏನು ಸುಕನ್ಯಾ ನೀನು ವಾಕಿಂಗ್ ಹೋಗಲಿಲ್ಲವೇ?’ ಎಂದು ಕೇಳಿದ ದಯಾನಂದ.

‘ಬೆಳಗ್ಗೇನೇ ಹೋಗಿಬಂದೆ’ ಎನ್ನುತ್ತಾ ಗೇಟು ತೆರೆದು ಆತನಿಗೆ ಒಳಬರಲು ದಾರಿಮಾಡಿಕೊಟ್ಟು ಒಳಕ್ಕೆ ಬಂದಳು. ಗಾಡಿಯನ್ನು ನಿಲ್ಲಿಸಿ ದಯಾನಂದನೂ ಒಳಬಂದ.

‘ಟೀ ಮಾಡಲೇ?’ ಎಂದು ಕೇಳಿದಳು. ‘ಹಾ’ ಎಂದು ಉಡುಪು ಬದಲಿಸಿ ಕೈಕಾಲುಮುಖ ತೊಳೆದು ಸೋಫಾ ಮೇಲೆ ಕುಳಿತುಕೊಂಡ.

ಆ ಹೊತ್ತಿನಲ್ಲಿ ತನ್ನವರನ್ನು ನಿರೀಕ್ಷಿಸಿರದ ಸುಕನ್ಯಾ ತಾನು ಬಿಡಬೇಕೆಂದರೂ ಬಿಡಲಾಗದೆ ಅಂಟಿಕೊಂಡಿದ್ದ ಕಾಫಿ ಚಟವನ್ನು ನಿವಾರಿಸಿಕೊಳ್ಳಲು ಅಷ್ಟೊತ್ತಿಗಾಗಲೇ ಕಾಫಿ ಮಾಡಿ ಕುಡಿದು ಬಿಟ್ಟಿದ್ದಳು. ಆದ್ದರಿಂದ ದಯಾನಂದನಿಗೊಬ್ಬನಿಗೇ ಟೀ ಮಾಡಿಕೊಂಡು ಜೊತೆಗೆ ಸ್ವಲ್ಪ ಹುರಿಗಾಳು ಬಾಳೆಹಣ್ಣು ಇಟ್ಟಿದ್ದ ತಟ್ಟೆಯನ್ನು ತಂದು ಟೀಪಾಯಿಯ ಮೇಲಿಟ್ಟು ದಯಾನಂದನಿಗೆದುರಾಗಿ ಕುರ್ಚಿಯಮೇಲೆ ಕುಳಿತಳು.

‘ಸುಕನ್ಯಾ ನಾಳೆ ನಂಜನಗೂಡಿನ ದೇವಸ್ಥಾನದಲ್ಲಿ ನಮ್ಮಿಬ್ಬರ ಐವತ್ತನೆಯ ವರ್ಷದ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಪೂಜೆಗೆ ಎಲ್ಲಾ ಏರ್ಪಾಡು ಮಾಡಿಸಿದ್ದೇನೆ. ಬೆಳಗ್ಗೆ ಏಳುಗಂಟೆಯೊಳಗೆ ಅಲ್ಲಿರಬೇಕು. ಬೇಗನೆ ಎದ್ದು ತಯಾರಾಗಿರು’ ಎಂದು ಹೇಳಿದ ದಯಾನಂದ. ‘ಹಾಗೆಯೇ ಛೇಂಜಿಗೆ ಒಂದೆರಡು ಜೊತೆ ಬಟ್ಟೆಗಳು, ಟವೆಲ್‌ಗಳನ್ನು ಹಾಕಿಕೋ’ ಎಂದ. ಅವನ ಮಾತನ್ನು ಕೇಳಿದ ಸುಕನ್ಯಾಳಿಗೆ ಸಖೇದಾಶ್ಚರ್ಯವಾಯಿತು. ಮದುವೆಯಾದ ಹೊಸದರಲ್ಲಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಗಳ ಆಚರಣೆಗಳ ಬಗ್ಗೆ ಕೇಳಿದಾಗಲೆಲ್ಲ ಅವನಿಂದ ಬರುತ್ತಿದ್ದ ಉತ್ತರ ಒಂದೇ’ ಅವೆಲ್ಲವೂ ತುಂಬ ವೈಯಕ್ತಿಕ, ಅದನ್ನೇನು ಇತರರ ಮುಂದೆ ಪ್ರದರ್ಶನ ಮಾಡಿಕೊಂಡು ಆಚರಿಸುವುದು. ಇದೆಲ್ಲ ನನಗೆ ಇಷ್ಟವಿಲ್ಲ. ದೇವರ ಪೂಜೆಮಾಡಿ ಏನಾದರೂ ಸಿಹಿ ತಯಾರಿಸು ‘ಎಂದು ಬಿಡುತ್ತಿದ್ದರು. ಸುಮ್ಮನೆ ವಾದವಿವಾದಗಳನ್ನು ಎಬ್ಬಿಸುವುದೇಕೆಂದು ಸುಕನ್ಯಾ ಸುಮ್ಮನಾಗುತ್ತಿದ್ದಳು. ಹೀಗಾಗಿ ಮಾರನೆಯ ದಿನದ ವಿವಾಹ ವಾರ್ಷಿಕೋತ್ಸವ ನೆನಪಿದ್ದರೂ ಎಂದಿನಂತೆ ಮನೆಯಲ್ಲೇ ಪೂಜೆ ಮಾಡಿ ಸಿಹಿ ಮಾಡೋಣವೆಂದು ತಯಾರಿ ಮಾಡಿಕೊಂಡಿದ್ದವಳಗೆ ಗಂಡನ ಬಾಯಿಂದ ಈ ಮಾತು ! ಅಬ್ಬಾ ಇಷ್ಟು ವರ್ಷಕ್ಕಾದರೂ ತಮ್ಮ ಕೊಳದಿಂದ ಹೊರಗೆಬಂದು ನನ್ನ ಒಂದಾದರೂ ಇಂಗಿತವನ್ನು ತಿಳಿದುಕೊಂಡರಲ್ಲ ಅಷ್ಟೇಸಾಕು. ಒಹೋ ಇದನ್ನೇ ಸರ್‍ಪ್ರೈಸ್ ಎಂದಿರಬೇಕು. ಹೌದು ಹಾಗೆ ನೋಡಿದರೆ ಇದು ನನಗೆ ನಿಜವಾಗಲೂ ಸರ್‍ಪ್ರೈಸೇ. ಎಂದು ಮನದಲ್ಲಿ ಅಂದುಕೊಳ್ಳುತ್ತಾ ‘ರೀ ಮಾಧವಿ, ಭರತ್ ಕೂಡ ಅಲ್ಲಿಗೆ ಬರುತ್ತಾರಾ?’ ಎಂದು ಕೇಳಿದಳು.

‘ಅವರು ನಮ್ಮಜೊತೆಯಲ್ಲಿ ಬರೋಲ್ಲ. ಹಾಗೇ ನೇರವಾಗಿ ಅಲ್ಲಿಗೆ ಬರುತ್ತಾರೆ. ನಾಳೆ ನೀನೇ ನೋಡುವಿಯಂತೆ ‘ಎಂದ ದಯಾನಂದ.

‘ಸರಿ’ ಎಂದು ಮಾತು ಮುಂದುವರಿಸದೆ ಸುಮ್ಮನಾದಳು ಸುಕನ್ಯಾ.

ರಾತ್ರಿ ಊಟವಾದನಂತರ ಅಂಗಳ, ಮುಂಬಾಗಿಲ ಹೊಸ್ತಿಲನ್ನು ತೊಳೆದು, ರಂಗವಲ್ಲಿಯನ್ನಿಟ್ಟು, ಪಾತ್ರೆಗಳೆಲ್ಲವನ್ನೂ ತೊಳೆದಿಟ್ಟು, ದೇವರ ಮನೆಯಲ್ಲಿ ಪೂಜೆಗೆ ಅಣಿ ಮಾಡಿದಳು. ಅಷ್ಟೆಲ್ಲ ಕೆಲಸಗಳನ್ನು ಮುಗಿಸಿದಾಗಲೂ ದಯಾನಂದ ಇನ್ನೂ ಫೋನ್ ಕಿವಿಗಿಟ್ಟುಕೊಂಡಿದ್ದನ್ನು ಕಂಡಳು. ಹಾಗೇ ಬೆಳಗ್ಗೆ ಉಡುವ ಸೀರೆ ತೊಡುವ ಒಡವೆಗಳನ್ನು ತೆಗೆದಿರಿಸಿಕೊಂಡಾದಮೇಲೆ ಮಲಗಿಕೊಂಡಳು.

ಬೆಳಗ್ಗೆ ನಾಲ್ಕು ಗಂಟೆಗೇ ಎದ್ದಳು. ಲಗುಬಗೆಯಿಂದ ಮುಂಜಾನೆಯ ಕೆಲಸಗಳನ್ನು ಮುಗಿಸಿ ಸ್ನಾನಮಾಡಿ, ಹಾಲುಕಾಯಿಸಿ, ದೇವರ ಪೂಜೆಮಾಡಿದಳು. ಹಣ್ಣು ಹಾಲುತುಪ್ಪಗಳನ್ನೇ ನೈವೇದ್ಯಮಾಡಿದಳು.’ ಭಗವಂತಾ ನನಗೆ ಎಲ್ಲವೂ ಇದ್ದೂ, ಎಲ್ಲರೂ ಇದ್ದರೂ ನಾನು ಒಂಟಿಯೆಂಬ ಭಾವ ಕಾಡುತ್ತದೆ. ಇನ್ನಾದರೂ ನನ್ನವರು ತಮ್ಮ ಲೆಕ್ಕಾಚಾರದ ವ್ಯವಹಾರಕ್ಕೆ ಮುಕ್ತಾಯ ಹಾಡಿ ನನ್ನೊಡನೆ ಸಮಯ ಕಳೆಯುವಂತೆ ಅವರಿಗೆ ಮನಸ್ಸುಕೊಡು’ ಎಂದು ಬೇಡಿಕೊಂಡಳು.

ಅಡುಗೆಮನೆಗೆ ಬಂದವಳೇ ಕಾಫಿ ಡಿಕಾಕ್ಷನ್ ಹಾಕಲೇ? ಬೇಡವೆಂದು ಕಾಯಿಸಿದ ಹಾಲೇ ಇದೆ. ಅದನ್ನೇ ಕುಡಿದರಾಯಿತು. ಬೆಳಗ್ಗೆಬೆಳಗ್ಗೆ ಅವರಿಂದ ಬೈಗಳು ಕೇಳಬಾರದು ಎಂದುಕೊಳ್ಳುವಷ್ಟರಲ್ಲಿ ದಯಾನಂದ ಎದ್ದ ಸದ್ದಾಯಿತು.

ಅವರೇನು ಫಟಾಫಟ್ ಎಂದು ತಯಾರಾಗಿಬಿಡುತ್ತಾರೆ, ನಾನು ತಡಮಾಡುವುದು ಬೇಡ. ಎಂದು ರೂಮಿಗೆ ಹೋಗಿ ರಾತ್ರಿಯ# ತೆಗೆದಿರಿಸಿದ್ದ ವಸ್ತ್ರ ಒಡವೆಗಳನ್ನು ಮಂಚದಮೇಲಿಟ್ಟು ಡ್ರೆಸ್ಸಿಂಗ್ ಟೇಬಲ್ ಮುಂದೆ ಕುಳಿತಳು. ತಲೆಬಾಚಿ ಜಡೆ ಹೆಣೆದು, ಮುಖದ ಅಲಂಕಾರ ಮುಗಿಸಿದಳು. ಹೆತ್ತವರು ತೆಗೆದುಕೊಟ್ಟಿದ್ದ ಧಾರೆಯ ಸೀರೆಯನ್ನುಟ್ಟು ತನ್ನತ್ತೆ ಅಮ್ಮ ಕೊಟ್ಟಿದ್ದ ಒಡವೆಗಳನ್ನು ಧರಿಸಿ ಮುಡಿಗೆ ಮಲ್ಲಿಗೆಯ ದಂಡೆ ಮುಡಿದಳು. ಕನ್ನಡಿಯಲ್ಲಿ ಮುಖವನ್ನು ನೋಡಿಕೊಂಡಳು ಸುಕನ್ಯಾ. ದಪ್ಪಗೆ ನಿಡಿದಾಗಿದ್ದ ಜಡೆಯೀಗ ಸಣ್ಣಗಾಗಿದೆ. ಯಾವ ಕೃತಕ ಬಣ್ಣವನ್ನೂ ಉಪಯೋಗಿಸದ ತಲೆಗೂದಲು ಎಪ್ಪತರ ಸಮೀಪವಾಗಿದ್ದರೂ ಅಷ್ಟೊಂದು ನರೆತಿಲ್ಲ. ಮುಖದಲ್ಲಿನ ಮುಗ್ಧತೆ ಮಾಯವಾಗಿ ಈಗ ಗಾಂಭೀರ್ಯ ಆವರಿಸಿದೆ. ಬಣ್ಣ ಸ್ವಲ್ಪ ಕುಂದಿದೆ. ಅದೂ ಬಿಡುವಿಲ್ಲದೆ ಮಾಡಿದ ಪ್ರವಾಸದ ಸುತ್ತಾಟದಿಂದಿರಬೇಕು. ಮೈಮಾಟವಿನ್ನೂ ಉಳಿದಿದೆ, ಪರವಾಗಿಲ್ಲ. ಈಗಲೂ ನನ್ನ ಚೆಲುವು ಪೂರ್ಣವಾಗಿ ಮಾಸಿಲ್ಲ. ಎಂದುಕೊಳ್ಳುತ್ತಿರುವಷ್ಟರಲ್ಲಿ ಸುಕನ್ಯಾ ರೆಡೀನಾ? ಎರಡು ಲೋಟ ಹಾಲು ಬೆರೆಸಿಬಿಡು ಎಂದು ಹೇಳುತ್ತಾ ರೂಮಿನೊಳಗೆ ಬಂದ ದಯಾನಂದ ಅಲಂಕೃತಳಾಗಿ ನಿಂತಿದ್ದ ಸುಕನ್ಯಳನ್ನು ನೋಡಿ ‘ಗುಡ್..ವೆರಿನೈಸ್’  ಎಂದು ಮೆಚ್ಚುಗೆಯ ನೋಟ ಬೀರಿದ.

ಗಂಡನ ಹೊಗಳಿಕೆಯಿಂದ ಮುದಗೊಂಡ ಸುಕನ್ಯಾ ತನ್ನ ಪತಿಯ ಕಡೆಗೆ ನೋಟ ಹರಿಸಿದಳು. ಆತನೂ ಮದುಮಗನಂತೆ ಸಿಂಗರಿಸಿಕೊಂಡಿದ್ದರು. ರೇಷಿಮೆಯ ಪಂಚೆಯುಟ್ಟು, ಜುಬ್ಬಾ ಮೇಲೊಂದು ರೇಷಿಮೆಯದೇ ಶಲ್ಯ ಹಾಕಿಕೊಂಡಿದ್ದನು. ತಲೆತುಂಬ ಒತ್ತಾಗಿದ್ದ ಕೂದಲನ್ನು ಒಪ್ಪವಾಗಿ ಬಾಚಲಾಗಿತ್ತು. ಆಕೆಗೂ ಅವನಿಗೂ ಕೇವಲ ಐದುವರ್ಷಗಳ ಅಂತರವಿದ್ದರೂ ತಲೆಯಲ್ಲಿ ಹುಡುಕಿದರೂ ಒಂದು ಕರಿಯಕೂದಲು ಸಿಗಲಾರದಷ್ಟು ಬಿಳಿಯಾಗಿತ್ತು. ನಗುಬಂತು. ಪುಣ್ಯಕ್ಕೆ ನನ್ನ ಮನದಿಂಗಿತದಂತೆಯೇ ಸಿದ್ಧರಾಗಿದ್ದಾರೆ. ಅಷ್ಟು ಸಾಕು ಎಂದುಕೊಂಡು ಹೊರನಡೆದು ಹೋಗುವಾಗ ‘ವೆಲ್ ಡ್ರೆಸ್ಸ್‌ಡ್, ಲುಕಿಂಗ್ ನೈಸ್’ ಎಂದಳು.

‘ಆಯಿತು ದೇವಿಯವರೇ, ಬೇಗಬೇಗ ಹೊರಡುವಂಥವರಾಗಿ’ ಎಂದ ನಾಟಕೀಯವಾಗಿ. ದಯಾನಂದ. ಇಬ್ಬರೂ ತಮಗೆ ಮೆಚ್ಚುವಂತೆ ಸಿದ್ಧರಾಗಿ ಬೆರೆಸಿದ ಹಾಲನ್ನು ಕುಡಿದು ಮುಗಿಸುವಷ್ಟರಲ್ಲಿ ಹೊರಗಡೆ ಯಾವದೋ ಕಾರು ನಿಂತ ಸದ್ದು ಕೇಳಿಬಂತು.

‘ಮಾಧವಿ ಇಲ್ಲಿಗೆ ಬರೋಲ್ಲಾಂದ್ರೀ, ಅವಳು ಬಂದಂಗಾಯ್ತು’
‘ಬಂದವಳು ಮಾಧವಿಯಲ್ಲ, ಕಾರು ನನ್ನ ಫ್ರೆಂಡ್ ವಿಶ್ವನದ್ದು. ಹಿಂದಿನ ಬಾಗಿಲು ಹಾಕಿದೆಯಾ? ಕೀ ಎಲ್ಲಿ?’ ಎನ್ನುತ್ತಾ ಅವಸರಿಸಿದ ದಯಾನಂದ.

‘ಹೌದೇ? ಕೀ ಅಲ್ಲೇ ಇದೆ’ ಎಂದು ಹಾಲು ಕುಡಿದು ಖಾಲಿಯಾದ ಲೋಟಗಳನ್ನು ಸಿಂಕಿನಲ್ಲಿ ಹಾಕಿ ಹಿಂದಿನ ಬಾಗಿಲನ್ನು ಭದ್ರಪಡಿಸಿದಳು. ಚಪ್ಪಲಿ ಮೆಟ್ಟಿ ಹೊರನಡೆದಳು ಸುಕನ್ಯಾ.

ಮನೆಯ ಮುಂಬಾಗಿಲನ್ನು ಭದ್ರಪಡಿಸಿ ಗೇಟನ್ನೂ ಮುಚ್ಚಿ ದಯಾನಂದ ಕಾರನಲ್ಲಿ ಕುಳಿತು ಸುಕನ್ಯಾಳಿಗೂ ಕೂಡಲು ಆಹ್ವಾನಿಸಿದ.
ಕಾರು ನಂಜನಗೂಡಿನತ್ತ ಮುಂದುವರಿಯಿತು. ಡ್ರೈವರ್ ಹೊಸಬನಾದ್ದರಿಂದ ಸುಕನ್ಯಾ ಯಾವ ಮಾತೂ ಆಡದೇ ಕುಳಿತಿದ್ದಳು.

‘ಸುಕನ್ಯಾ ನೀನು ಇತ್ತೀಚೆಗೆ ನಂಜನಗೂಡಿಗೆ ಹೋಗಿಲ್ಲ ಅಲ್ಲವೇ?’ ಎಂದು ಕೇಳಿದ ದಯಾನಂದ.
‘ಇಲ್ಲಾ ರೀ, ಅತ್ತೆಯವರಿದ್ದಾಗ ಹೋಗಿಬಂದದ್ದಷ್ಟೇ. ಅವರು ನಮ್ಮಿಂದ ದೂರಾದನಂತರ ಅಲ್ಲಿಗೆ ಹೋಗಬೇಕೆಂಬ ಮನಸ್ಸಾಗಲಿಲ್ಲ’ ಎಂದುತ್ತರಿಸಿದಳು.

ನಂತರ ಯಾವ ಹೆಚ್ಚಿನ ಮಾತುಕತೆ ನಡೆಯಲಿಲ್ಲ. ಆದರೆ ಸುಕನ್ಯಾಳ ಮನಸ್ಸು ಐವತ್ತು ವರ್ಷಗಳ ಹಿಂದೆ ವಧುವಾಗಿ ಇದೇ ನಂಜನಗೂಡಿಗೆ ಹೊರಟ ದಿನಗಳತ್ತ ಹೊರಳಿತು. ಮೈಮನ ಪುಳಕಿತವಾಯಿತು. ಆ ದಿನಗಳು ಎಷ್ಟೊಂದು ಸುಂದರವಾಗಿದ್ದವು. ನಾನು ಹೊಸಮನೆಯಲ್ಲೂ ಒಂಟಿಯೆಂದೆನ್ನಿರಲಿಲ್ಲ. ಹಿರಿಯರಿದ್ದ ಮನೆ, ನಂತರ ಊರಿನ ಜನರೊಡನೆ ಒಡನಾಟ, ಅವರುಗಳ ನಿಷ್ಕಲ್ಮಷ ಪ್ರೀತಿ, ಗೌರವ, ವಾವ್ ! ನಂತರದ ಬದುಕಿನಲ್ಲಿ ಅತ್ತೆಯವರ ನಿರ್ಗಮನ, ನಗರವಾಸ, ಮಕ್ಕಳ ಉಸ್ತುವಾರಿ, ಇದರಲ್ಲೇ ಕಾಲ ಕಳೆದುಹೋಯ್ತು. ಎಲ್ಲ ಜವಾಬ್ದಾರಿಗಳು ಮುಗಿದಮೇಲೆ ನಾನು ಒಂಟಿಯೆನ್ನಿಸತೊಡಗಿತ್ತು. ಅದನ್ನು ನಿವಾರಿಸಿಕೊಳ್ಳಲು ನಾನು ನನ್ನವರು ಹೇಳಿದಂತೆ ಮಾಡಿದ ಸರ್ಕಸ್ ಎಲ್ಲವೂ ಮುಗಿದಿದೆ. ‘ದೇವರೇ ನಾನು ನಿನ್ನನ್ನು ಮತ್ತೇನನ್ನೂ ಬೇಡಲಾರೆ, ನನಗೆಲ್ಲಾ ಕೊಟ್ಟಿದ್ದೀಯೆ, ಯಾರೇ ನನ್ನಿಂದ ದೂರಾಗಲಿ, ನನ್ನ ಕೈಹಿಡಿದವ ನನ್ನೊಂದಿಗೆ ಸ್ವಲ್ಪ ಸಮಯ ಕಳೆಯುವಂತಹ ಬುದ್ಧಿಯನ್ನು ಅವರಿಗೆ ಕೊಡು ತಂದೆ. ಬದುಕಿನಲ್ಲಿ ಲೆಕ್ಕಾಚಾರ ಇನ್ನು ಸಾಕು ಎಂಬ ಭಾವನೆ ಅವರ ಮನದಲ್ಲಿ ಮೂಡಿಸು. ನಿರ್ಲಿಪ್ತತೆ, ನೆಮ್ಮದಿ ಇರಲಿ. ದುಡಿಯುತ್ತಲೇ ಇರಬೇಕೆಂಬ ವ್ಯಾಮೋಹ ತಗ್ಗಲಿ. ಇನ್ನಾದರೂ ವಿಶ್ರಾಂತಿ ಪಡೆಯುವಂತಾಗಲಿ’ ಎಂದು ಮನಸ್ಸಿನಲ್ಲಿ ಪ್ರಾರ್ಥನೆ ಮಾಡುತ್ತಲೇ ಇದ್ದಳು.

ಆಕೆಯ ಪ್ರಾರ್ಥನೆ ಮುಂದುವರಿಯುತ್ತಿದ್ದಂತೆ ದಯಾನಂದ ‘ಸುಕನ್ಯಾ ಇಳಿ’ ಎಂದು ಕರೆದದ್ದು ಅವಳನ್ನು ವಾಸ್ತವಕ್ಕೆ ತಂದು ನಿಲ್ಲಿಸಿತು.

(ಮುಂದುವರಿಯುವುದು)

ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ:   http://surahonne.com/?p=31937

-ಬಿ.ಆರ್ ನಾಗರತ್ನ, ಮೈಸೂರು

10 Responses

  1. Hema says:

    ಕಾದಂಬರಿಯ ಹೊಸ ತಿರುವು..ಕುತೂಹಲಕಾರಿಯಾಗಿದೆ..

  2. ಸುಮ ಕೃಷ್ಣ says:

    ಮುಂದೆ ಏನಾಗುತ್ತೋ ಏನೋ, ಕುತೂಹಲದ ದಂಡೆಗೆ ತಂದು ನಿಲ್ಲಿಸಿದ್ದೀರಾ….. ಮಗನ ಸಂಸಾರದ ಆಗಮನ ಇದೆಯೇನೋ…?

  3. sudha says:

    surprise..??..waiting for next week…..

  4. ನಯನ ಬಜಕೂಡ್ಲು says:

    Very nice

  5. ಮಾಲತಿ says:

    Surprise ಏನು ಅಂತ ಕಾದು ನೋಡಬೇಕು.

  6. ಬಿ.ಆರ್.ನಾಗರತ್ನ says:

    ಧನ್ಯವಾದಗಳು ಸಾಹಿತ್ಯ ಸಹೃದಯರಿಗೆ.

  7. ಶಂಕರಿ ಶರ್ಮ says:

    ಕುತೂಹಲಕಾರಿಯಾಗಿ ಸಾಗುತ್ತಿರುವ ಸಾಮಾಜಿಕ ಧಾರಾವಾಹಿಯು ಬಹಳ ಸೊಗಸಾಗಿದೆ.

  8. ವಿದ್ಯಾ says:

    ನಮಗೂ ಕಲ್ಪನೆಯಲ್ಲಿ ಕತೆ ಹೆಣೆಯುವಂತಾಗಿದೆ
    ಮುಂದೆ ಏನಾಗಬಹುದು ಅಂತ ಅಕ್ಕಾ

  9. ತನುಜಾ says:

    ಕಥಾನಾಯಕಿ ಸುಕನ್ಯಾ ಅಸಂಖ್ಯ ಹೆಣ್ಣುಮಕ್ಕಳ ಬದುಕು ಭಾವಗಳ ಪ್ರತೀಕದಂತೆ ಕಾಣಿಸುತ್ತಾಳೆ. ಅಂತೆಯೇ ದಯಾನಂದರು ಕೂಡ ಭಾವನೆಗಳನ್ನು ಹಿಡಿದಿಟ್ಟು ಪ್ರಬುದ್ಧವಾಗಿ ಬದುಕು ನಡೆಸುವ ಸಹಜ ಸಮರ್ಥ ಗಂಡಿನಂತೆ ಕಾಣಸಿಗುತ್ತಾರೆ. ಎಂದಿನಂತೆ ಚಂದದ ನಿರೂಪಣೆ .
    ಕಥೆ ಕುತೂಹಲದ ಘಟ್ಟವನ್ನು ತಲುಪಿದೆ . ಮುಂದಿನ ಭಾಗದ ನಿರೀಕ್ಷೆ ಹೆಚ್ಚಿಸಿದೆ.

  10. ಬಿ.ಆರ್.ನಾಗರತ್ನ says:

    ಧನ್ಯವಾದಗಳು ಸಾಹಿತ್ಯ ಸಹೃದಯರಿಗೆ

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: