‘ಬದುಕೆಂದ ಮೇಲೆ ಬವಣೆ ಇದ್ದಿದ್ದೇ’ ಎಂದು ನಮ್ಮಜ್ಜಿ ಹೇಳುತ್ತಿದ್ದರು. ನಾವು ತಂದಿದ್ದು ಅನುಭವಿಸಿಯೇ ತೀರಬೇಕು ಎಂದೂ ಹೇಳುತ್ತಾ ಕರ್ಮ ಸಿದ್ಧಾಂತದ ಮೊರೆ ಹೋಗುತ್ತಿದ್ದರು. ಇದು ನಮ್ಮ ಹಿಂದಿನವರ ಮನೋಧರ್ಮ. ಧರ್ಮವನ್ನೂ ಅದರ ಮರ್ಮವನ್ನೂ ಅರಿತು ಆಚರಿಸುತ್ತಿದ್ದರೂ ನೋವು ಕಟ್ಟಿಟ್ಟ ಬುತ್ತಿ ಎಂಬುದನ್ನು ಮನಸಾರೆ ಒಪ್ಪಿಕೊಂಡಿದ್ದರು. ಪ್ರವಾಹದ ವಿರುದ್ಧ ಈಜುವ ದುಸ್ಸಾಹಸ ಮಾಡುತ್ತಿರಲಿಲ್ಲ. ಈ ಮಾತನ್ನೇಕೆ ಇಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆಂದರೆ, ಮಾತೆತ್ತಿದರೆ ‘ಅದೇನು ಪಡಿಪಾಟ್ಲೋ ಏನೋ, ತೊಂದರೆ ತಾಪತ್ರಯಗಳನ್ನು ಹುಡುಕಿಕೊಂಡು ಹೋಗ್ತಾರೆ. ಕೆಲವು ಇವರ ಹಿಂದೇನೇ ಬರುತ್ವೆ; ಇನ್ನು ಹಲವನ್ನು ಇವರೇ ಅಂಟಿಸಿಕೊಂಡು ಒದ್ದಾಡ್ತಾರೆ’ ಎಂದು ಅಂತಿಮ ಷರಾ ಬರೆಯುತ್ತಿದ್ದರು. ‘ಅದೇನಜ್ಜಿ, ಪಡಿಪಾಟಲು ಎಂದರೆ’ ಅಂತ ನಾನು ಕೇಳಿದರೆ, ‘ದೊಡ್ಡೋರ ಮಾತಿಗೆ ಬಾಯಿ ಹಾಕ್ಬೇಡ, ಬಡಿಸಿದ್ದನ್ನು ತಿಂದು ಎದ್ಹೋಗು’ ಎಂದು ರೇಗುತ್ತಿದ್ದರು. ಆಗಿನಿಂದಲೂ ನನಗೆ ಈ ‘ಪಡಿಪಾಟ್ಲು’ ಎಂಬ ಪದ ಮನದ ಮೂಲೆಯಲ್ಲಿ ಅಚ್ಚೊತ್ತಿದೆ. ಮೊನ್ನೆ ಯಾರೋ ಒಬ್ಬರು ‘ನಿಮಗ್ಯಾವ ಗಾಳಿಗಂಟಿದೆ ಸರ್, ಇರೋರು ಇಬ್ಬರೇ, ಸುಖವಾಗಿ ಮನೆಯಲ್ಲಿ ಇರೋದು ಬಿಟ್ಟು, ಈ ಚಳಿಯಲ್ಲಿ ನಾಯಿ ಥರ ಗರಗರ ಅಂತ ಸುತ್ತುತಾ ಇದೀರಾ, ನಾವೇನೋ ಸಾಕುನಾಯಿಯ ಸಹವಾಸ, ಮಕ್ಕಳನ್ನ ಸ್ಕೂಲಿಗೆ ಬಿಡೋದು, ವಯಸಾದ ತಾಯ್ತಂದೆಯರು, ಮಡದಿಯ ಉದ್ಯೋಗ, ಬೆಳಗಿನ ತಿಂಡಿಗೆ ಹೆಲ್ಪ್ ಮಾಡ್ಬೇಕು ಅಂತ ನೂರೆಂಟು ತಾಪತ್ರಯ ಗಂಟು ಹಾಕಿಕೊಂಡು ಬದುಕ್ತಿದೀವಿ, ನಮ್ಮ ಪಡಿಪಾಟ್ಲು ಯಾಕ್ ಹೇಳ್ತೀರಿ?’ ಅಂತ ಗೊಳೋ ಎಂದಾಗ ನನಗೆ, ‘ಅರೆ ನಮ್ಮಜ್ಜಿ ಬಾಯಲ್ಲಿ ಕೇಳುತಿದ್ದ ಪದ!’ ಅಂತ ಮತ್ತೆ ಜ್ಞಾಪಕಕ್ಕೆ ಬಂದು ಮನಸು ನಲವತ್ತೈದು ವರುಷಗಳ ಹಿಂದೆ ಹೋಯಿತು.
ತೊಡಕು, ತೊಂದರೆ, ತಾಪತ್ರಯ, ನೋವು, ಬವಣೆ, ಯಾತನೆ, ಕಷ್ಟ, ಸಂಕಷ್ಟ, ವೇದನೆ, ಹಿಂಸೆ ಅಂತೆಲ್ಲಾ ನಮ್ಮ ಜನರು ತಮ್ಮ ದುಃಖ ದುಮ್ಮಾನಗಳನ್ನು ಹೇಳಿಕೊಳ್ಳುವಾಗ ಇವನ್ನೆಲ್ಲಾ ಪಡಿಪಾಟಲು ಎಂಬ ಒಂದು ಶಬ್ದದಲ್ಲಿಟ್ಟು ತೂಗಬೇಕೆನಿಸುವುದು. ಸುಖಕ್ಕಿಂತ ದುಃಖವು ಅತ್ಯಾಳದ್ದು. ಸುಖವು ಅಗಲಕ್ಕೆ ಹರಡಿಕೊಳ್ಳುವ ಸ್ವಭಾವದ್ದು. ಆದರೆ ನೋವಿನದು ಆಳಕ್ಕೆ ಪ್ರವೇಶಿಸುವಂಥದು. ಸಾಗರದ ಆಳಕ್ಕಿಂತಲೂ ದುಃಖದ ಆಳ ಹೆಚ್ಚು, ಅದರ ತೀವ್ರತೆಗೆ ಜೀವ ಅಲ್ಲಾಡಿ ಹೋಗುತ್ತದೆ, ಆತ್ಯಂತಿಕ ನೋವು ಕೊನೆಗೆ ಸಾವನ್ನು ಸ್ವಾಗತಿಸುತ್ತದೆ. ಹಾಗಾಗಿಯೇ ಸುಖವು ನಮಗೆ ಕಲಿಸುವ ಪಾಠ ಸೊನ್ನೆ, ದುಃಖದ್ದು ನೂರಂಕ. ದುಃಖವು ಕಲಿಸುವ ಪಾಠಗಳು ಜೀವನಪೂರ್ತ. ದುಃಖದಿಂದ ಪಾಠ ಕಲಿತವರು ಹೆಚ್ಚು ಮೌನಿಯಾಗುತ್ತಾರೆ, ಮುಖ್ಯವಾಗಿ ಅಂತರ್ಮುಖಿಗಳಾಗುತ್ತಾರೆ. ಹೆಚ್ಚು ಹೆಚ್ಚು ತತ್ತ್ವಜ್ಞಾನದತ್ತ ವಾಲುತ್ತಾರೆ. ವಿಚಿತ್ರವೆಂದರೆ, Human emotions are unique. The peak of happiness is crying; the peak of sadness is laughing, and the peak of anger is silence (ಮನುಷ್ಯರ ಭಾವನೆಗಳೇ ಅನನ್ಯ. ಸಂತೋಷದ ಪರಾಕಾಷ್ಠೆಯಲ್ಲಿ ಅಳು, ದುಃಖದ ಪರಾಕಾಷ್ಠೆ ನಗು ಮತ್ತು ಕೋಪದ ಪರಾಕಾಷ್ಠೆಯಲ್ಲಿ ಮೌನ!) ಈ ಮಾತನ್ನು ಓಶೋ ರಜನೀಶರು ಹೇಳುವಾಗ ಅವರ ಗಮನವೆಲ್ಲಾ ಇದ್ದದ್ದು ಸುಖದುಃಖಗಳೆರಡರಲ್ಲೂ ಬರುವ ಅಶ್ರುಜಲ. ಒಂದರದು ಕಣ್ಣನೀರು; ಇನ್ನೊಂದರದು ಆನಂದಬಾಷ್ಪ. ಅಂದರೆ ಬದುಕಿನ ಉಬ್ಬರವಿಳಿತಗಳು ಇವೆರಡನ್ನು ಆಧರಿಸಿಯೇ ನಿರ್ಧಾರಿತ. ಆದರೆ ಸುಖವು ಬಂದು ಹೋಗುವುದು ನಮ್ಮರಿವಿಗೇ ಬರುವುದಿಲ್ಲ; ಬಂದರೂ ಹೋದದ್ದು ಗೊತ್ತಾಗುವುದೇ ಇಲ್ಲ. ದುಃಖದ್ದು ಹಾಗಲ್ಲ. ಅದು ಡಂಗುರ ಬಾರಿಸಿಕೊಂಡೇ ಬರುತ್ತದೆ; ಅಥವಾ ನಾವು ಡಂಗುರ ಬಾರಿಸಿಕೊಂಡು ದುಃಖಿಸುತ್ತೇವೆ.
ಸುಖದುಃಖಗಳೆಂಬವು ಮೂಲತಃ ನಮ್ಮ ಮನೋಭಾವ. ಇದು ನಮ್ಮ ಕಣ್ಣಿಗೆ ಗೋಚರಿಸದು; ಏನಿದ್ದರೂ ಇವುಗಳ ಪರಿಣಾಮವಷ್ಟೇ ಗೋಚರಿತ. ನಾವು ಆರಾಮವಾಗಿದ್ದಾಗ ಇವುಗಳನ್ನು ಕುರಿತು ಮಾತಾಡುತ್ತೇವೆ. ದೊಡ್ಡವರ ಹೇಳಿಕೆ, ಪ್ರಹೇಳಿಕೆಗಳನ್ನು ಸ್ಮರಿಸಿಕೊಳ್ಳುತ್ತೇವೆ. ಚಿಂತಕರೆಂದು ಕರೆಸಿಕೊಳ್ಳುತ್ತೇವೆ. ಆದರೆ ಸ್ವತಃ ಅನುಭವಿಸುವಾಗ ಇವೆಲ್ಲವನ್ನೂ ಮರೆತು ಬಿಡುತ್ತೇವೆ. ನಮ್ಮ ಪಡಿಪಾಟಲುಗಳಲ್ಲಿ ತೊಳಲಾಡುವಾಗ ಇದಾವುದೂ ನೆನಪಾಗುವುದಿಲ್ಲ. ಜಗತ್ತಿನಲ್ಲಿ ನನಗೇ ಏಕೆ ಈ ಕಷ್ಟ ನಷ್ಟ, ಸಂಕಷ್ಟಗಳೆಂದು ಭಗವಂತನಲ್ಲಿ ಮೊರೆಯಿಡುತ್ತೇವೆ. ಸಂತಸದಲ್ಲಿದ್ದ ಕ್ಷಣಗಳನ್ನು ಮರೆತು ಗೋಳಿನ ಬಾಳನ್ನೇ ಮುಂದು ಮಾಡಿಕೊಂಡು ವ್ಯಸನಚಿತ್ತರಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತೇವೆ. ಮನೋಬೇನೆಗೆ ತುತ್ತಾಗಿ ದೈಹಿಕ ಆರೋಗ್ಯವನ್ನೂ ಕಳೆದುಕೊಂಡು ಇನ್ನಷ್ಟು ಯಾತನೆಗೀಡಾಗುತ್ತೇವೆ. ಇದೊಂದು ವಿಷವರ್ತುಲ ಎಂದರಿವಾಗುವುದರೊಳಗೆ ನಮ್ಮ ಗೋರಿಯನ್ನು ನಾವೇ ತೋಡಿಕೊಂಡು, ಮಣ್ಣು ಮುಚ್ಚಿಕೊಳ್ಳುತ್ತೇವೆ. ಸುಖದಿಂದ ಮೈ ಮರೆಯುವುದು ಸಹ ಅಹಮಿನ ಇನ್ನೊಂದು ರೂಪ; ದುಃಖವನ್ನು ಅನುಭವಿಸಿ ಅಭ್ಯಾಸ ಮಾಡಿಕೊಳ್ಳದೇ ಪ್ರದರ್ಶನಕ್ಕಿಡುವುದು ಸಹ ಅಹಮಿನ ಮತ್ತೊಂದು ಸ್ವರೂಪವೇ. ಇಂಥಲ್ಲಿ ನಾವೇ ಕೈಯಾರೆ ತಂದುಕೊಳ್ಳುವ ಪಡಿಪಾಟಲುಗಳನ್ನು ಕುರಿತು ಒಂದಷ್ಟು ಸಂಗತಿಗಳನ್ನು ಹಂಚಿಕೊಳ್ಳಲು ಇಲ್ಲಿ ಹೊರಟಿದ್ದೇನೆ.
ನಮ್ಮೊಳಗೆ ವಿಶ್ವವಿದೆ; ನಾವು ವಿಶ್ವದ ಒಂದು ಭಾಗ ಎಂಬುದೇ ಅಧ್ಯಾತ್ಮ. ನಾನು ಪ್ರತ್ಯೇಕವಲ್ಲ; ಪ್ರತ್ಯೇಕದಂತೆ ತೋರುವುದು ಕೇವಲ ಭ್ರಮೆ. ನಾನು, ನನ್ನದು, ನನ್ನ ತೊಡಕು ತೊಂದರೆ ಎಂಬುದು ವ್ಯಕ್ತಿಗತ ಅನುಭವ. ಇದು ಸತ್ಯವಲ್ಲ. ನೋವುಣ್ಣುವುದು ಸತ್ಯವೇ, ಆದರೆ ಆ ನೋವಿಗೆ ಪರರು ಕಾರಣ ಎಂಬುದು ಅರ್ಧಸತ್ಯ. ಎಲ್ಲವೂ ಫಿಫ್ಟಿ ಫಿಫ್ಟಿ! ಈ ಸಮೀಕರಣದಲ್ಲಿ ಹೆಚ್ಚೂ ಕಡಮೆ ಆಗಬಹುದು. ಆದರೆ ಜಗತ್ತಿನ ಎಲ್ಲಕೂ ಅದು ಒಳಿತಿರಲಿ, ಕೆಡುಕಿರಲಿ, ನಾವೂ ಜವಾಬ್ದಾರರೇ ಎಂಬುದು ಪ್ರಬುದ್ಧ ಆಲೋಚನೆ. ಏಕೆಂದರೆ ಇರುವುದೊಂದೇ ಭೂಮಿ, ಕುಡಿವುದೊಂದೇ ನೀರು, ಸುಡುವಗ್ನಿಯೊಂದೇ! ಎಲ್ಲೋ ಯಾರೋ ಯಾವ ದೇಶದಲ್ಲೋ ಪರಿಸರಕ್ಕೆ ಹಾನಿ ಮಾಡಿದರೆ ಅದರ ಪರಿಣಾಮ ಎಲ್ಲರ ಮೇಲೂ. ನಾವೊಂದು ಕುಟುಂಬದಂತೆ. ಕುಟುಂಬದ ಯಾರೊಬ್ಬರು ತಪ್ಪು ಮಾಡಿದರೂ ಅದರ ಫಲಿತವನ್ನು ಎಲ್ಲರೂ ಅನುಭವಿಸಬೇಕು. ನನ್ನ ತಮ್ಮನೋ ತಂಗಿಯೋ ಮಾಡಿಕೊಂಡ ಎಡವಟ್ಟು. ನನಗೂ ಅದಕ್ಕೂ ಸಂಬಂಧವಿಲ್ಲ ಎನ್ನಬಹುದು. ಸಮಸ್ಯೆಗಳು ಸೃಷ್ಟಿಯಾಗುವಾಗ ಎಲ್ಲರೂ ಒಂಟಿಯೇ; ಆದರೆ ಅದರ ಪರಿಹಾರಕ್ಕೆ ಜೊತೆ ಬೇಕು, ಜೊತೆಗಾರರು ಬೇಕು. ನಾನು ನನ್ನ ಸಮಸ್ಯೆ, ನಿನಗೂ ಅದಕ್ಕೂ ಸಂಬಂಧವಿಲ್ಲ ಎಂದು ಮೇಲ್ನೋಟಕ್ಕೆ ಹೇಳಿ ಬಿಡಬಹುದು. ಆದರೆ ಅದರ ಅಂತರಾಳ ಹಾಗಿರುವುದಿಲ್ಲ. ನಮ್ಮ ಪೂರ್ವಜರು ಅದಕ್ಕೇ ‘ವಸುಧೈವ ಕುಟುಂಬಕಂ’ ಎಂಬ ಮಂತ್ರ ಜಪಿಸುತ್ತಿದ್ದರು. ಇಡೀ ಭೂಮಿಯೇ ಒಂದು ಕುಟುಂಬದಂತೆ. ಕುಟುಂಬದ ಸದಸ್ಯರ ನಡುವೆ ಅನುನಯ ಮತ್ತು ಹೊಂದಾಣಿಕೆ ಇದ್ದರೇನೇ ಅದು ಕುಟುಂಬ. ಇಲ್ಲದಿದ್ದರೆ ಅದು ‘ಕುಂಟುಂಬ’ ಅಷ್ಟೇ! ಇದೀಗ ಕುಟುಂಬದ ವ್ಯಾಪ್ತಿ ಪುಟ್ಟದಾಗಿರಬಹುದು. ಗಂಡ ಹೆಂಡತಿ ಮತ್ತು ಮಕ್ಕಳು ಎಂದೀಗ ಇದ್ದರೆ ಹಿಂದೆ ಕೂಡುಕುಟುಂಬದಲ್ಲಿ ಹತ್ತಾರು ಮಂದಿ ಇರುತ್ತಿದ್ದರು. ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದರು. ಮನೆ, ಮನೆತನ ಎಂಬುದು ಪ್ರತಿಷ್ಠೆಯ ವಿಷಯವಾಗಿತ್ತು. ಕುಟುಂಬವು ಕೇವಲ ಮನೆತನಕ್ಕೆ ಮಾತ್ರ ಸೀಮಿತವಾಗುತ್ತಿರಲಿಲ್ಲ. ಇದರ ಮುಂದುವರಿದ ಭಾಗವಾಗಿ, ವಂಶ, ಕುಲಗಳಿಗೆ ವಿಸ್ತೃತಗೊಂಡು, ಒಟ್ಟೂ ಸಮುದಾಯದ ಸಂಕಲ್ಪಬಲವನ್ನು ಹೆಚ್ಚಿಸಿತ್ತು. ವಂಶಕ್ಕಾಗಿ ಏನೆಲ್ಲ ತ್ಯಾಗ ಮಾಡಿದವರ ಉದಾಹರಣೆಗಳು ಎಲ್ಲರ ಮನೆಗಳ ಹಿಂದಿನ ಕತೆ. ಇದು ಭಾರತೀಯ ಸಮಾಜದ ವಿಶಿಷ್ಟ ವ್ಯವಸ್ಥೆಯಾಗಿತ್ತು. ಈಗಲೂ ಇಡೀ ಪ್ರಪಂಚದಲ್ಲಿ ಕುಟುಂಬ ಮತ್ತು ಮನೆತನ ಎಂಬುದು ಉಳಿದುಕೊಂಡು ಬಂದಿದ್ದರೆ ಅದು ನಮ್ಮ ದೇಶದಲ್ಲಿ ಮಾತ್ರ. ಖಾಸಗೀತನ ಮತ್ತು ಪ್ರೈವೆಸಿ ಎಂಬವು ತಲೆ ಹಾಕಿ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವವು ಎಲ್ಲೆಡೆ ಆವರಿಸಿ, ನಿಧಾನವಾಗಿ ಕುಟುಂಬದ ಪರಿಕಲ್ಪನೆಯು ಶಿಥಿಲವಾಗುತ್ತಿದೆ. ಮೈಕ್ರೋ ಫ್ಯಾಮಿಲಿಯು ಈಗ ಅತಂತ್ರವಾಗಿದೆ. ಗಂಡ ಹೆಂಡತಿ ಮತ್ತು ಮಗು ಎಂಬುದು ಹೊರಟುಹೋಗುತ್ತಾ ಸಿಂಗಲ್ ಪೇರೆಂಟ್ ವ್ಯವಸ್ಥೆ ಕಾಣಿಸಿಕೊಂಡಿದೆ. ನಾನು ಮತ್ತು ನನ್ನದು ಅಷ್ಟೇ ಎಂಬ ಭಾವ ವ್ಯಾಪಕಗೊಳ್ಳುತ್ತಿದೆ. ಇದನ್ನು ಸಂವೇದನೆಯ ಹೆಸರಿನಲ್ಲಿ ಪರಿಭಾವಿಸುತ್ತಾ, ನಮ್ಮ ಹಿಂದಿನ ಸಾಮಾಜಿಕ ಪರಿಕಲ್ಪನೆಗಳನ್ನು ಅಪಹಾಸ್ಯ ಮಾಡುವಂಥ ಕಿರಿಯರು ಹಲವಾರು ಮನೋಬೇನೆಗಳಲ್ಲಿ ಬಳಲುತ್ತಾ ಸಂಸಾರವನ್ನು ಸಾಗಿಸಲು ದುಸ್ಸಾಹಸ ಪಡುತ್ತಿರುವುದನ್ನು ಕಾಣುತ್ತಿದ್ದೇವೆ, ಕೇಳುತ್ತಿದ್ದೇವೆ. ಅದು ಏನೇ ಬಂದರೂ ಕುಟುಂಬದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಲು ಹೊರಡುತ್ತಿದ್ದ ನಮ್ಮ ಹಿಂದಿನವರು ಆದರ್ಶ ಸಂಸಾರಿಗಳಾಗಿ ತ್ಯಾಗವನ್ನು ಮೌಲ್ಯವೆಂದು ಪರಿಗಣಿಸುತ್ತಿದ್ದ ಕಾಲ ಹಳೆಯದಾಗಿದೆ. ‘ಅಂಥ ತ್ಯಾಗಕ್ಕೆ ಅರ್ಥವಿಲ್ಲ, ಅವರದು ವ್ಯರ್ಥ ಜಿಜ್ಞಾಸೆ’ ಎಂಬುದಾಗಿ ಯುವಜನತೆ ವ್ಯಾಖ್ಯಾನಿಸುತ್ತಿದೆ. ಕಾಲ ಬದಲಾಗಿದೆ ಎಂದರೆ ಈ ಅರ್ಥದಲ್ಲಿ ಎಂದು ಪರಿಭಾವಿಸಬೇಕಾಗಿದೆ. ‘ಆಗ ಅದು ಸರಿ; ಈಗ ಇದು ಸರಿ’ ಎಂದರೆ ಪಕ್ವ ಮನಸ್ಥಿತಿ ಎಂದು ಅಂದುಕೊಳ್ಳಬೇಕಾಗಿದೆ. ತೀರಾ ಹಳೆಯದನ್ನು ನೆನಪಿಸಿಕೊಂಡರೆ, ನಾಸ್ಟಾಲ್ಜಿಯಾ ಎನ್ನಲಾಗುತ್ತದೆ. ಹಳೆಗಾಲದ ‘ಗೊಡ್ಡುಜನ’ ಎಂದು ಬಯ್ಯಿಸಿಕೊಳ್ಳಬೇಕು. ಬಹುಶಃ ಇದು ಪ್ರತಿ ಪೀಳಿಗೆಯ ಪಡಿಪಾಟಲು ಎಂದರೆ ತಪ್ಪಾಗದು. ತಮ್ಮ ತಾಯ್ತಂದೆಯರ ಕಾಲಕ್ಕೆ ಹೊಂದಿಕೊಳ್ಳಲು ಆಗದಂಥ ಮತ್ತು ತನ್ನ ಕಾಲಕ್ಕೆ ಅನುಗುಣವಾಗಿ ಜೀವಿಸಲು ಹೊರಡುವ ಸಂದಿಗ್ಧತೆಯನ್ನು ಎಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಎದುರಿಸಿ, ಅಷ್ಟೋ ಇಷ್ಟೋ ರಾಜಿಯಾಗಿ ನಿಟ್ಟುಸಿರು ಬಿಡುವ ಹೊತ್ತಿಗೆ ಅವರ ಮಕ್ಕಳ ಕಾಲ ಶುರುವಾಗಿರುತ್ತದೆ. ಇದಕ್ಕಾಗಿಯೋ ಏನೋ ಬದುಕಿಡೀ ಹೊಂದಿಕೊಂಡು ಬಾಳಬೇಕೆಂದು ನಮ್ಮ ಹಿರಿಯರು ಉಪದೇಶಿಸುತ್ತಿದ್ದರು. ಈ ದಿಸೆಯಲ್ಲಿ ನಮ್ಮ ಹಲವು ತೆರನಾದ ಪಡಿಪಾಟಲುಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅದು ಹನುಮಂತನ ಬಾಲವೇ ಆದೀತು. ಅಂಥವುಗಳಲ್ಲಿ ಒಂದಷ್ಟನ್ನು ಕುರಿತು ಬರೆಯುತ್ತೇನೆ.
ಮೊದಲಿಗೆ ಈ ಪದದ ನಿಷ್ಪತ್ತಿ. ಪಡಿ ಮತ್ತು ಪಾಟಲು ಸೇರಿ ಆದುದಿದು. ಪಡಿ ಎಂಬುದರ ಮೂಲ ರೂಪವು ಪರಿ ಎಂದು. ಪರಿ ಎಂದರೆ ವಿಧ, ವಿವಿಧ ಎಂದರ್ಥ. ಪಾಟಲು ಎಂದರೆ ಗೋಜಲು. ಹತ್ತು ಹಲವಾರು ತೆರದ ಸಿಕ್ಕು, ಗೋಜಲುಗಳು ಎಂದರ್ಥ ಮಾಡಬಹುದು. ತೆಲುಗಿನಲ್ಲಿ ವ್ಯಾಪಕ ಬಳಕೆಯಿದೆ, ಎಡವಟ್ಟು ಎಂದರ್ಥದಲ್ಲಿ. ಪಾಡಲು ಎಂಬುದು ಪಾಟಲು ಎಂದಾಯಿತು. ಪಾಡು ಎಂಬುದರಿಂದ ಪಾಡಲು>ಪಾಟಲು. ಒಟ್ಟಿನಲ್ಲಿ ʼಈ ಪರಿಯ ಪಾಡುʼ ಎಂದು ತಿಳಿಯಬಹುದು. ‘ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ’ ಎಂಬ ಕವಿಬೇಂದ್ರೆಯವರ ಸಾಲಿನಲ್ಲಿ ಪಾಡು ಎಂದರೆ ಬದುಕಿನ ದುಃಖವೆಂದೂ ಹಾಡು ಎಂದರೆ ಅದನ್ನು ಸುಖಮಯವಾಗಿಸಿದ ಚೆಂದದ ಲಹರಿಯೆಂದೂ ತಿಳಿಯಬಹುದು. ಈ ಪರಿಯ ಪಾಡು ಎಂದಾಗ ಎಷ್ಟೊಂದು ಬಗೆಯ ದುಃಖ ದುಮ್ಮಾನ ಎಂದಾಗಬಹುದು. ‘ಈ ಪರಿಪಾಟಲು ಯಾರಿಗೆ ಬೇಕು?’ ಎಂದಾಗ ಬವಣೆ, ತೊಂದರೆ, ತೊಳಲಾಟ ಎಂದೆಲ್ಲಾ ಅರ್ಥಭಾವಗಳು ಸ್ಫುರಿಸುತ್ತವೆ. ಭಾಷಾವಿಜ್ಞಾನದಲ್ಲಿ ರಕಾರವನ್ನು ಮೂರ್ಧನ್ಯ ಎನ್ನುತ್ತೇವೆ. ಇದರ ಉಚ್ಚಾರ ತುಂಬ ನಾಜೂಕಿನದು. ಬಾಯಿಂದ ಉಸಿರನ್ನು ಹೊರಗೆ ಬಿಡುವಾಗ ನಾಲಗೆಯ ತುದಿಯನ್ನು ಮೇಲ್ಭಾಗದ ವಸಡಿನ ಬಳಿ ತೆಗೆದುಕೊಂಡು ಹೋಗಬೇಕು. ಆದರೆ ಸ್ಪರ್ಶಿಸಬಾರದು. ಸ್ಪರ್ಶಿಸಿಬಿಟ್ಟರೆ ಟಕಾರ ಉಚ್ಚರಿತವಾಗುತ್ತದೆ. ಹಾಗಾಗಿ ನಾಲಗೆಯ ಅನುಕೂಲಕ್ಕೆ ಪರಿ ಎಂಬುದು ಪಟಿ ಎಂದಾಗಿ ಅದು ಪಡಿ ಎಂಬ ರೂಪ ಪಡೆದು ಪಾಟಲಿಗೆ ಲಗತ್ತಾಗಿದೆ. ಕೆಲವರು ಪರಿಪಾಟಲು ಎನ್ನುವರು; ಇನ್ನು ಹಲವರು ಪಡಿಪಾಟಲು ಎನ್ನುವರು. ಒಟ್ಟಿನಲ್ಲಿ ನಮ್ಮ ಬಾಯಲ್ಲಿ ‘ಪಡಿಪಾಟ್ಲು’ ಎಂದಾಗಿದೆ; ಸದ್ಯಕ್ಕೆ ಬಗೆಹರಿಯದ ತೊಂದರೆ ಎಂಬುದನ್ನು ಹೇಳುವಾಗ ಬಳಸುವರು. ಅಸಹನೀಯ ಪರಿಸ್ಥಿತಿಗಳಲ್ಲಿ ಸಿಲುಕಿಕೊಂಡ ದಯನೀಯ ವೇದನೆಯಿದು. ನೇರವಾಗಿ ತೊಡಕು, ತೊಂದರೆ, ಬವಣೆ ಎಂದೇ ಉಚ್ಚರಿಸಬಹುದು. ಆದರೆ ಎಲ್ಲೋ ಕೆಲವರು ಅದರಲ್ಲೂ ಸ್ವಲ್ಪ ಹಿಂದಿನ ತಲೆಮಾರಿನ ಸಂಪರ್ಕ ಇರುವವರು ಮಾತ್ರ ಈ ಪಡಿಪಾಟ್ಲು ಎಂದು ಹೇಳುವುದನ್ನು ಗಮನಿಸಬೇಕು. ಇನ್ನು ಕೆಲವರು ಇದಕ್ಕೆ ಪರ್ಯಾಯವಾಗಿ ‘ಗಾಳಿಗಂಟ್ಲು’ ಎನ್ನುವರು. ಗಾಳಿಗಂಟು ಎಂಬುದನ್ನು ಹೀಗೆ ಉಚ್ಚರಿಸುವರು. ಆದರೆ ಇದೇ ಬೇರೆ; ಪಡಿಪಾಟಲೇ ಬೇರೆ. ಕೈಗೆ ಸಿಕ್ಕ ದಾರಕ್ಕೆ ಗಂಟು ಹಾಕಬಹುದು. ಆದರೆ ಹಿಡಿತಕ್ಕೇ ಸಿಗದ ಗಾಳಿಯನ್ನು ಗಂಟು ಹಾಕುವುದು ಹೇಗೆ? ಅಂದರೆ ಅಸಾಧ್ಯವಾದುದೇ ಗಾಳಿಗಂಟು. ಇದಕ್ಕೆ ಹಲವು ಅನ್ಯಾರ್ಥಗಳೂ ಚಾಲ್ತಿಯಲ್ಲಿವೆ. ಮೋಸ, ವಂಚನೆ, ತೊಡಕು, ಸಿಕ್ಕು, ಬಗೆಹರಿಯಲಾರದ ಬಿಕ್ಕಟ್ಟು ಇತ್ಯಾದಿ.
ನಮ್ಮ ಹಲವು ಬಗೆಯ ಪಡಿಪಾಟಲುಗಳೆಲ್ಲ ಪ್ರಾರಂಭದಲ್ಲಿ ಇಷ್ಟಪಟ್ಟು ಕೈಗೊಂಡ ಕೆಲಸಕಾರ್ಯಗಳೇ ಆಗಿದ್ದವು ಕ್ರಮೇಣ ಅವು ತೊಂದರೆ ಕೊಡಲು ಶುರುವಾಗುವಂಥವೇ. ಮೊದಲಿಗೆ ಇದ್ದ ಉತ್ಸಾಹ, ಸಡಗರಗಳೆಲ್ಲ ಕುಗ್ಗಿ ಹೋಗಿ ಪೇಚಾಟಕ್ಕಿಟ್ಟುಕೊಂಡವೇ. ಉದಾಹರಣೆಗೆ ನಾಯಿ ಸಾಕುವಿಕೆ. (ಶ್ವಾನೋದ್ಯಮ ಬೇರೆ; ಇದೊಂದು ಅಪ್ಪಟ ಬ್ಯುಸಿನೆಸ್ಸು) ದೊಡ್ಡದೊಂದು ಉಪಕಾರ ಮಾಡುವ ಮನಸ್ಸಿನಲ್ಲಿ ಸಂಬಂಧಿಕರ ಮಕ್ಕಳನ್ನು ಮನೆಯಲ್ಲಿಟ್ಟುಕೊಂಡು ಸಲಹುವಿಕೆ. ನಮ್ಮ ಜೀವನದ ಮೊತ್ತ ಮೊದಲ ಅಸೆಟ್ಟು, ಪ್ಯಾಷನ್ನು ಎಂದು ಹಳೆಗಾಲದ ವಾಹನಗಳನ್ನು ಮಾರಲಾಗದೇ ಅತ್ತ ಓಡಿಸಲೂ ಆಗದೇ ಮನೆಯಲ್ಲಿಟ್ಟುಕೊಂಡು ಪರದಾಡುವಿಕೆ. ಈ ವರ್ಗಕ್ಕೆ ಪದಾರ್ಥಗಳೂ ಪ್ರಾಣಿಗಳೂ ಮನುಷ್ಯರೂ ಸೇರ್ಪಡೆಯಾಗುವುದೇ ಬಹು ದೊಡ್ಡ ಚೋದ್ಯ. ಮೊದಲಿಗೆ ಖುಷಿಯಿಂದ ಗುಟ್ಟಾಗಿ ಕೈಗೊಂಡ ಅಕ್ರಮ ಅನೀತಿ ಸಂಬಂಧಗಳು ಕ್ರಮೇಣ ತಲೆನೋವಾಗಿ ಪರಿಣಮಿಸುವಿಕೆ. ಅಂದರೆ ಜೀವನದಲ್ಲಿ ತಾನಾಗಿಯೇ ಎದುರಾಗುವ ಸಮಸ್ಯೆಗಳ ಜೊತೆಗೆ ನಾವೇ ತಂದುಕೊಳ್ಳುವಂಥ ಇಂಥ ತೊಡಕು ತೊಂದರೆಗಳೇ ಪರಿ ಪರಿ ಪಾಟಲು!
ಶ್ವಾನ, ಬೆಕ್ಕು ಮೊದಲಾದ ಸಾಕುಪ್ರಾಣಿಗಳ ಮುದ್ದುಮಾಧುರ್ಯದ ಸವಿಯನ್ನು ಎಲ್ಲರೂ ಬಲ್ಲವರೇ. ಇವು ಕೊಡುವ ಪ್ರೀತಿ ನಂಬಿಕೆಗಳನ್ನು ಮನುಷ್ಯರೂ ನೀಡಲಾರರು. ಏಕೆಂದರೆ ಇವುಗಳದು ನಿಸ್ವಾರ್ಥತೆ. ಒಂದು ತುತ್ತು ಅನ್ನ ಹಾಕಿದವರಿಗೆ ಕೊನೆವರೆಗೂ ನಿಷ್ಠೆ ತೋರುವ ಮೂಕಸಂತತಿ. ʼಉಪ್ಪು ಹಾಕಿದವರನು ಮುಪ್ಪಿನ ತನಕ ನೆನೆʼ ಎಂಬುದೀಗ ಸಾಕುಪ್ರಾಣಿಗಳಿಗೇ ಅನ್ವಯ. ಆದರೆ ಇವುಗಳು ತಂದಿಡುವ ಫಜೀತಿಯೂ ಒಂದೆರಡಲ್ಲ! ಎಲ್ಲಿಗೂ ಹೋಗುವಂತಿಲ್ಲ, ಭವಬಂಧನ. ಆರೈಕೆ ಪಾರೈಕೆ, ನಿಗಾ ನೋಡಬೇಕು. ಇದೀಗ ತಾತ್ಕಾಲಿಕವಾಗಿ ನೋಡಿಕೊಳ್ಳುವ ಶ್ವಾನಾಶ್ರಮ, ಸಾಕುಪ್ರಾಣಿಗಳ ಪೇ ಪಾರ್ಕ್‌ಗಳು ಇರುವುದಾದರೂ ಬಿಟ್ಟು ಹೋದ ಮೇಲೆ ನಮ್ಮ ಮನಸೆಲ್ಲಾ ಅಲ್ಲೇ. ನಮ್ಮದು ಎಂದಾದ ಮೇಲೆ ಬರುವ ವಾಂಛಲ್ಯವೇ ಬೇರೆ. ಅವುಗಳು ನಮ್ಮನ್ನು ಕಾಯುವುದಿರಲಿ, ಅವುಗಳನ್ನೇ ನಾವು ಕಾಯಬೇಕು. ಒಂದು ಹಂತ ಕಳೆದ ಮೇಲೆ ನಾವು ಪಡೆದ ಪ್ರೀತಿಗೆ ಕಂದಾಯ ಕಟ್ಟಲೇಬೇಕಲ್ಲವೇ? ಈ ಲೋಕದಲ್ಲಿ ಯಾವುದೂ ಸುಖಾ ಸುಮ್ಮನೆ ದೊರಕದು. ನಮ್ಮ ಸ್ನೇಹಿತರೊಬ್ಬರು ವಿದೇಶಕ್ಕೆ ಹೋಗಿ ಬಂದ ಮೇಲೆ ಮಂಕಾದರು. ಏಕೆಂದರೆ ಅವರು ಬಿಟ್ಟು ಹೋಗಿದ್ದ ನಾಯಿ ಬೆಕ್ಕುಗಳು ಸಮರ್ಪಕ ಆರೈಕೆಯಿಲ್ಲದೇ ಪ್ರಾಣ ಬಿಟ್ಟಿದ್ದವು. ಮಾಲೀಕರ ಪ್ರೀತಿಯಿಲ್ಲದೇ ಅವುಗಳು ಬದುಕಲಾಗದೇ ಹೋದವು. ದುಡ್ಡು ಕೊಟ್ಟರೂ ಸಾಕುವ ಷೆಲ್ಟರಿನವರು ಅಸಹಾಯಕರಾದರು. ಯಾರೂ ಬೇಡ, ಸಂಬಂಧಗಳು ಬೇಡ, ನೆರೆಹೊರೆಯವರು ಬೇಡ ಎಂಬ ವ್ಯಕ್ತಿ ಪ್ರತಿಷ್ಠೆಯಿಂದ ಪ್ರಾಣಿಗಳನ್ನೇ ಸಾಕಿಕೊಂಡು ಸರ್ವಸ್ವ ಎಂದುಕೊಳ್ಳುತ್ತಾರೆ. ಇಂಥವೆಲ್ಲವೂ ಜನ್ಮಾಂತರ ನಂಟೇ ಇರಬೇಕು. ಏಕೆಂದರೆ ಋಣಸಂದಾಯ ಈ ಜನ್ಮದಲ್ಲೇ ಆಗಬೇಕಲ್ಲವೇ? ಕೊನೆಗೆ ಇವು ಕೊಡುವ ಪ್ರೀತಿಯೂ ಸಾಕು; ರಗಳೆಯೂ ಸಾಕು ಎನಿಸಿಬಿಡುತ್ತದೆ. ಹೆತ್ತ ಮಕ್ಕಳು ದೂರದಲ್ಲಿದ್ದಾರೆಂದು ಪ್ರಾಣಿಪಕ್ಷಿಗಳನ್ನು ಸಾಕಿಕೊಳ್ಳುತ್ತಾರೆ. ಕೊನೆಗವು ನಿವಾರಿಸಿಕೊಳ್ಳಲಾಗದ ಪಡಿಪಾಟಲೇ ಆಗಿಬಿಡುತ್ತವೆ. ಒಂಟಿತನದಿಂದ ಒದಗಿದ ದುಃಖದ ನಿವಾರಣೆಗೆ ಮದ್ದು ಸುಲಭವಲ್ಲ. ಪ್ರಾಣಿಗಳು ಯಂತ್ರಗಳಲ್ಲ. ಸ್ವಿಚಾಫ್ ಮಾಡಲಾಗದು. ಅವುಗಳ ಬೊಗಳುವಿಕೆ, ಬೀದಿನಾಯಿಗಳ ಅವಾಂತರ ಇತ್ಯಾದಿಯು ರಾಷ್ಟ್ರೀಯ ಸಮಸ್ಯೆಯೇ ಆಗಿಬಿಟ್ಟಿದೆ. ನಮ್ಮ ಸ್ನೇಹಿತರ ಬಡಾವಣೆಯಲ್ಲಂತೂ ನಾಯಿಗಳ ವಿಚಾರದಿಂದಾಗಿ ಮನುಷ್ಯ ಸಂಬಂಧಗಳು ಶಿಥಿಲವಾಗಿವೆ; ಒಂದೇ ಕುಟುಂಬದಂತಿದ್ದ ಸ್ನೇಹ ವಿಶ್ವಾಸಗಳು ಮರೆಯಾಗಿ ಆ ಜಾಗದಲ್ಲಿ ಅಹಂಭಾವ ತಲೆ ಹಾಕಿ, ಬೀದಿನಾಯಿ ವರ್ಸಸ್ ಸಾಕುನಾಯಿ ಜಗಳವು ಮನಶ್ಶಾಂತಿಯನ್ನೇ ಹಾಳುಮಾಡಿವೆ. ಮನುಷ್ಯರು ಮನುಷ್ಯರಿಗೋ ಪ್ರಾಣಿಗಳಿಗೋ ಎಂಬುದು ಬಗೆಹರಿಯಲಾಗದ ಬಿಕ್ಕಟ್ಟಾಗಿದೆ. ನಾನೇನೂ ಪ್ರಾಣಿದ್ವೇಷಿಯಲ್ಲ; ಆದರೆ ಅವು ತಂದಿಡುವ ಇಕ್ಕಟ್ಟು ಬಿಕ್ಕಟ್ಟುಗಳತ್ತ ನನ್ನ ಗಮನ ಅಷ್ಟೇ! ಕಟ್ಟಿಕೊಂಡು ಹೆಣಗುವುದು ಎಂದರೆ ಇದೇ, ಇದನ್ನೇ ಪಡಿಪಾಟಲು ಎನ್ನುವುದು.
ಇನ್ನು ಹಲವರು ವಸ್ತುಮೋಹಿಗಳು. ತಮಗೆ ಬಂದ ಪ್ರಶಸ್ತಿ, ಫಲಕ, ಸನ್ಮಾನದ ಪ್ರದರ್ಶಕಗಳನ್ನು ಮನೆ ತುಂಬ ತುಂಬಿಕೊಂಡು, ಆಂತರ್ಯದಲ್ಲಿ ಒದ್ದಾಡುತ್ತಿರುತ್ತಾರೆ. ಒಂದು ಹಂತ ಕಳೆದ ಮೇಲೆ ಜನಪ್ರಿಯತೆಯು ಬದುಕಿಗೆ ಶಾಪವಾಗಿ ಪರಿಣಮಿಸಿ ಬಿಡುತ್ತದೆ. ಕಾರ್ಯಕ್ರಮಕ್ಕೆ ಸಂಬಂಧಿಸಿದ ಆಹ್ವಾನಪತ್ರಿಕೆಗಳು, ಹಾರ, ಶಾಲು, ಸ್ಮರಣಿಕೆಗಳು ಕಾಲಕ್ರಮೇಣ ಕಸವಾಗಿ ಪರಿಣಮಿಸುತ್ತವೆ. ಅವನ್ನು ಅಲ್ಲಲ್ಲೇ ವಿಲೇವಾರಿ ಮಾಡುವ ಜಾಣತನ ಇಟ್ಟುಕೊಳ್ಳದೇ ಹೋದರೆ ಇದೊಂದು ಪಡಿಪಾಟಲು. ಮನುಷ್ಯರು ಪ್ರಾಕ್ಟಿಕಲ್ಲಾಗದೇ ಅತಿಯಾದ ಭಾವನಾತ್ಮಕತೆ ಬೆರೆಸಿಟ್ಟು ಬದುಕಿದಾಗ ಇಂಥವೆಲ್ಲಾ ನುಂಗಲಾರದ ತುತ್ತು. ವಯಸಾದಂತೆಲ್ಲಾ ಸರಳತೆ ಮತ್ತು ವಿನೀತತೆಗಳೇ ಆಸ್ತಿಯಾಗಬೇಕು; ಅದು ಬಿಟ್ಟು ಅಹಮನ್ನು ವಿಜೃಂಭಿಸಿಕೊಂಡು, ಲೌಕಿಕ ವಸ್ತುಪದಾರ್ಥಗಳ ಮೂಲಕ ಗುರುತಿಸಿಕೊಳ್ಳುವ ಅಪಕ್ವತೆಗೆ ವಶವಾಗಬಾರದು. ವಯಸು ಕಳೆದಂತೆಲ್ಲಾ ನಮ್ಮ ಶರೀರವೇ ಭಾರ ಎನಿಸುವಾಗ ಇಂಥವನ್ನೆಲ್ಲ ಕೈ ಬಿಟ್ಟು ಹಗೂರವಾಗುವುದನ್ನು ಕಲಿಯದೇ ಹೋದರೆ ನಾವು ಆ ಮಟ್ಟಿಗೆ ಅಪ್ರಬುದ್ಧರು. ಮನೆಗೆ ಬಂದವರಿಗೆಲ್ಲಾ ತಮ್ಮ ಪ್ರಶಸ್ತಿ ಫಲಕಗಳನ್ನೂ ಮಾನ ಸಮ್ಮಾನಗಳನ್ನೂ ತೋರಿಸಿಕೊಂಡು ಅಥವಾ ನೋಡುವಂತೆ ಜೋಡಿಸಿಟ್ಟು, ನಾವು ನಿಮಗಿಂತ ಬೇರೆ; ವಿಶೇಷ ಎಂಬ ಪ್ರತ್ಯೇಕತಾವಾದ ಸ್ಥಾಪನೆಯಾದರೆ ಅಂಥವರ ಸಾಧನೆಯೇ ಶೂನ್ಯ; ಜೀವನ ನಿರರ್ಥಕ. ಏಕೆಂದರೆ ಇವೆಲ್ಲಾ ಬೇಸಿಕಲಿ, ಬೆನ್ನು ತಟ್ಟುವ, ವಿಶ್ವಾಸ ಮೂಡಿಸುವ, ಪ್ರಾರಂಭಿಕ ಮೆಚ್ಚುಗೆ ಮತ್ತು ಶ್ಲಾಘನೆಯ ಜಗತ್ತು. ಬೆಳೆಯುವ ಮಕ್ಕಳಿಗೆ ಇವು ಬೇಕು; ನಾವು ಬೆಳೆದ ಮೇಲೂ ಇವನ್ನು ಸಲಹುತ್ತಾ ಚೀಪಾಗಬಾರದು. ಕೊನೆಯಲ್ಲಿ ದೇಹಕೆ ಉಸಿರೇ ಭಾರವಾಗಿ ಬಿಡುತ್ತದೆ. ಇವನ್ನೆಲ್ಲಾ ಹೊತ್ತುಕೊಂಡು ಹೋಗಿ ಸ್ಮಶಾನದಲ್ಲಿ ಹುಗಿಯಲು ಆದೀತೆ? ನಮ್ಮನ್ನೇ ಹುಗಿಯಲು ಜಾಗವಿಲ್ಲದೇ ಸುಡುವ ಚಿತಾಗಾರಗಳು ಇರುವಾಗ! ಪ್ರಾರಂಭದಲ್ಲಿ ಅತ್ಯುತ್ಸಾಹದಿಂದ ಸಂಗ್ರಹಿಸುವ ಪುಸ್ತಕಗಳದೂ ಇದೇ ಹಣೆಬರೆಹ. ಸರಿಯಾಗಿ ನಿರ್ವಹಿಸಲಾಗದೇ ಧೂಳು-ಹುಳು ತಿನ್ನುವ, ಅತ್ತ ಇಟ್ಟುಕೊಳ್ಳಲಾಗದೇ ಇತ್ತ ಕೊಡಲಾಗದೇ ಒದ್ದಾಡುವ ಪರಿಯಂತೂ ನಮ್ಮ ಪೀಳಿಗೆಯ ನ್ಯಾಷನಲ್ ಪ್ರಾಬ್ಲಮ್ಮು! ಹಾಗಾಗಿಯೇ ನನ್ನ ವಿದ್ಯಾಗುರುಗಳಾದ ಡಾ. ಹಾ ಮಾ ನಾಯಕರು ಹೃದಯಾಘಾತದಿಂದ ಮರಣಿಸಿದ ಮೇಲೆ ಸಂಗ್ರಹಿಸಿದ್ದ ಮನೆಯ ಗ್ರಂಥಾಲಯದ ಸುಮಾರು ಐವತ್ತು ಸಾವಿರ ಪುಸ್ತಕಗಳನ್ನು ಅವರ ಮನೆಯವರು, ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯಕ್ಕೆ ದಾನ ಮಾಡಿಬಿಟ್ಟರು! ನಾನಿಲ್ಲಿ ಸ್ಪಷ್ಟಪಡಿಸಬೇಕಾದ್ದೇನೆಂದರೆ, ಪುಸ್ತಕಗಳು, ತಾಳೆಗರಿ ಪ್ರತಿಗಳು, ನಮ್ಮ ಪೂರ್ವಿಕರು ಬಳಸುತ್ತಿದ್ದ ಗೃಹೋಪಯೋಗಿ ಜಾನಪದೀಯ ಪದಾರ್ಥಗಳು ಮೊದಲಾದವುಗಳನ್ನು ಜತನದಿಂದ ಸಂಗ್ರಹಿಸಿಟ್ಟು, ಅದಕೆಂದೇ ಸಂಗ್ರಹಾಗಾರಗಳನ್ನು ಕಟ್ಟಿ, ಶ್ರದ್ಧಾಪೂರ್ವಕವಾಗಿ ನೋಡಿಕೊಳ್ಳುವ ಸಂಘ ಸಂಸ್ಥೆಗಳೇ ಇವೆ; ನಾವು ಏಕಾಂಗಿಸಾಹಸಿಗಳಾಗಿ, ಜೀವನ ಮಾಡುವ ಮನೆಯನ್ನೇ ಅಂಥ ಸಂಗ್ರಹಾಗಾರ ಮಾಡಿಕೊಳ್ಳಬಾರದಷ್ಟೇ.
ಇನ್ನು ಹಲವರಿಗೆ ಹಳೆಯ ವಸ್ತುಗಳಲ್ಲಿ ವಿಪರೀತ ವ್ಯಾಮೋಹ. ಚಿನ್ನ, ಬೆಳ್ಳಿ ಹೋಗಲಿ, ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳ ಸಂಗ್ರಹ. ಇಂಥ ಆಂಟಿಕ್ ಐಟಮ್ಮುಗಳನ್ನು ಒಟ್ಟುಗೂಡಿಸುವುದೇ ಕೆಲವರ ಜೀವನವಿಧಾನ. ಅವನ್ನು ಮನೆಯಲ್ಲಿ ಇಡಲೆಂದೇ ಪ್ರತ್ಯೇಕವಾದ ಷೋಕೇಸುಗಳು. ಮನುಷ್ಯರು ಒಂದಲ್ಲಾ ಒಂದು ವಿಧವಾದ ಹುಚ್ಚುಚ್ಚು ಹವ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಒಬ್ಬರಿಗೆ ಹುಚ್ಚೆನಿಸಿದರೆ ಇನ್ನೊಬ್ಬರಿಗೆ ಅದು ಅಚ್ಚುಮೆಚ್ಚು! ನಮ್ಮ ಸ್ನೇಹಿತರೊಬ್ಬರು ತಮ್ಮ ಮದುವೆಯ ಕಾಲದಲ್ಲಿ ಕೊಟ್ಟ ವಾಹನವೆಂಬ ಮಧುರಾನುಭೂತಿಯಿಂದಾಗಿ ಕೆಟ್ಟು ಹೋದ ಬೈಕ್ ಒಂದನ್ನು ಮನೆಯಲ್ಲಿ ನಿಲ್ಲಿಸಿಕೊಂಡು ಒದ್ದಾಡುತ್ತಿದ್ದಾರೆ. ಆ ಕಡೆ ಗುಜರಿಗೂ ಹಾಕುವುದಿಲ್ಲ; ಈ ಕಡೆ ಅದು ರಸ್ತೆಯಲ್ಲಿ ಓಡುವುದೂ ಇಲ್ಲ! ಇಂಥ ಭಾವನಾತ್ಮಕ ಭ್ರಮೆಗಳೇ ನಮ್ಮನ್ನು ಕಟ್ಟಿ ಹಾಕುವಂಥವು. ಮನೆಯಲ್ಲಿ ಕಸವಾಗಿ ನಿರ್ವಹಣೆಯೇ ಪಡಿಪಾಟಲಾಗಿ ಬಾಯಿ ಬಿಟ್ಟು ಹೇಳುವಂತಿಲ್ಲ; ಇಟ್ಟುಕೊಂಡು ನೆಮ್ಮದಿಯಾಗಿ ಇರುವಂತಿಲ್ಲ. ಕಾಲ ಕಳೆದ ಮೇಲೆ, ಅವುಗಳ ಮಹತ್ವ ಮುಗಿದ ಮೇಲೆ ಎಲ್ಲವೂ ಕಸವೇ. ನಾವೇ ಕಾಲಕಸವಾಗುವಾಗ ವಸ್ತುಪದಾರ್ಥಗಳ ವಿಷಯದಲ್ಲಿ ಎಲ್ಲಿದೆ ಶಾಶ್ವತತೆ? ನಮ್ಮ ಬಂಧುಗಳೊಬ್ಬರು ಗತಿಸಿದ ಮೇಲೆ ಅವರು ಕಾಪಾಡಿಕೊಂಡು ಬಂದಿದ್ದ ಒಂದು ಅಲಮಾರನ್ನು ಓಪನಿಸಿದಾಗ ಮನೆಯವರಿಗೆ ಗಾಬರಿಯಾಯಿತು. ಅವರ ತಾಯ್ತಂದೆಯರು ಬಳಸುತ್ತಿದ್ದ ವಸ್ತುಗಳು, ಮರಿದು ಹೋದವು, ಹಾಳಾದವು, ತುಕ್ಕು ಹಿಡಿದವು. ಒಂದೂ ಪ್ರಯೋಜನಕ್ಕೆ ಬರುವಂತಿರಲಿಲ್ಲ. ಈ ವಿಚಾರದಲ್ಲಿ ಅವರದು ಭಾವನಾತ್ಮಕ ಸಂಬಂಧ. ತಾಯ್ತಂದೆಯರು ನೆನಪಾದಾಗಲೆಲ್ಲಾ ಅವರ ಭಾವಚಿತ್ರಗಳನ್ನು ನೋಡುವಂತೆ, ಇಂಥ ಹಾಳಾದ ಪದಾರ್ಥಗಳನ್ನು ನೋಡಿ ತೃಪ್ತರಾಗುತ್ತಿದ್ದರೆನಿಸುತ್ತದೆ. ತಮ್ಮ ತಾಯಿಯವರ ಮದುವೆಯ ರೇಷ್ಮೆಸೀರೆಯನ್ನೂ ಇಟ್ಟುಕೊಂಡಿದ್ದರು. ತಂದೆ ಬಳಸುತ್ತಿದ್ದ ಜೀಬಿಜೀಬಿಯಾದ (ಹರಕಲು) ಚಡ್ಡಿ ಬನಿಯನ್ನು ಟವೆಲುಗಳೂ ಇದ್ದವು! ಇವನ್ನೆಲ್ಲ ಸರಿತಪ್ಪುಗಳ ತಕ್ಕಡಿಗೆ ಹಾಕದೇ ಅವರ ವೇದನೆ ಮತ್ತು ಸಂವೇದನೆಗಳನ್ನು ಅರಿಯಬೇಕೆಂಬ ಪ್ರಜ್ಞೆ ಇಟ್ಟುಕೊಂಡೇ ಅರ್ಥ ಮಾಡಿಕೊಳ್ಳಬೇಕು, ನಿಜ. ಆದರೆ ಈ ಪಡಿಪಾಟಲು ಎಲ್ಲಿಯವರೆಗೆ? ಸ್ವಂತ ಮನೆಯಿದ್ದರೇನೋ ಸರಿ; ಬಾಡಿಗೆ ಮನೆಯಾದರೆ ಹೋದ ಕಡೆಯೆಲ್ಲಾ ಇವನ್ನು ಹೊತ್ತುಕೊಂಡು ಸಾಗಬೇಕಲ್ಲ! ನಮ್ಮ ಬಂಧುಗಳು ಸತ್ತ ಮೇಲೆ ಅವರ ಮಕ್ಕಳು ಇಂಥ ಇಡೀ ʼಕಸʼವನ್ನು ಅಕ್ಷರಶಃ ಎಸೆದರು. ಏಕೆಂದರೆ ಅವರು ತಮ್ಮ ತಂದೆಯವರ ಭಾವಾತ್ಮಕ ಮನೋಧರ್ಮವನ್ನು ಅರಿತೂ ಹೆಚ್ಚು ಹೆಚ್ಚು ಪ್ರಾಕ್ಟಿಕಲ್ ಆಗಿದ್ದರು. ನನ್ನ ಪ್ರಶ್ನೆಯೇನೆಂದರೆ ನಮ್ಮ ನಂತರ ನಮ್ಮ ವಸ್ತುಗಳು ನಮ್ಮವರಿಗೆ ತಲೆನೋವಾಗದ ಹಾಗೆ ಬದುಕನ್ನು ರೂಪಿಸಿಕೊಳ್ಳುವುದು ಹೇಗೆ? ಜೀವಂತವಿರುವಾಗಲೇ ನಾವು ವಾಸ್ತವವಾದಿಗಳಾಗಿ ವಸ್ತು ಮತ್ತು ವ್ಯಕ್ತಿಮೋಹವನ್ನು ಕಳಚಿಕೊಂಡು, ಭೂತಕಾಲದ ಸವಿನೆನಪನ್ನು ಮರೆಯದೇ, ಭವಿತವ್ಯದ ಸೌಂದರ್ಯ ಇನ್ನಷ್ಟು ಪ್ರಜ್ವಲಿಸಲು ಇಂಥ ಪಡಿಪಾಟಲುಗಳಿಂದ ಹೊರಬರಬೇಕು. ನಾವು ಮಾತ್ರವಲ್ಲ, ನಮ್ಮ ವಸ್ತುಪದಾರ್ಥಗಳೂ ಪ್ರವೃತ್ತಿಯೇ ಮೊದಲಾದ ಅಭ್ಯಾಸಗಳೂ ನಮ್ಮ ವಾರಸುದಾರರಿಗೆ ಹೊರೆಯಾಗಬಾರದು. ಒಂದು ಗೊತ್ತಿರುವ ಪ್ರಸಂಗದಲ್ಲಿ, ತಮ್ಮ ತಂದೆಯವರು ಸತ್ತ ಮೇಲೆ ಅವರ ಮಕ್ಕಳು ವಿದೇಶದಿಂದ ಬಂದು, ಇಡೀ ಮನೆಯ ವಸ್ತುಗಳನ್ನು ಗುಜರಿಗೆ ಹಾಕಿಬಿಟ್ಟರು. ಅದರಿಂದ ಬಂದ ದುಡ್ಡನ್ನೇ ವೃದ್ಧಾಶ್ರಮವೊಂದಕ್ಕೆ ದೇಣಿಗೆಯಾಗಿ ಕೊಟ್ಟರು. ಕೆಲವರು ಇರುತ್ತಾರೆ. ಅವರೇ ಹೋದ ಮೇಲೆ ಅವರು ಕಾಪಾಡಿಕೊಂಡಿದ್ದ ವಸ್ತಗಳೇತಕೆ? ಎಂದುಕೊಂಡು, ಆರ್ಕಾಸು, ಮೂರ್ಕಾಸಿಗೆ ಮಾರಿಯೋ ಅಥವಾ ದಾನ ಮಾಡಿಯೋ ಕೈ ತೊಳೆದುಕೊಳ್ಳುತ್ತಾರೆ. ಹಿಂದಿನ ಕಾಲದಲ್ಲಿ ದೊಡ್ಡ ಮನೆ ಇರುತ್ತಿತ್ತು; ಮನೆ ತುಂಬ ಜನರೋ ಸಂಬಂಧಿಕರೋ ಇರುತ್ತಿದ್ದರು. ಸಂಗ್ರಹಿಸಿಟ್ಟುಕೊಂಡಿದ್ದ ವಸ್ತುಪದಾರ್ಥಗಳು ಉಪಯೋಗಕ್ಕೆ ಬರುತ್ತಿದ್ದವು. ಈಗ ಹಾಗಿಲ್ಲ. ನಗರ ಜೀವನ, ಜಗತ್ತೇ ಕುಟುಂಬ. ಕುಟುಂಬದ ಸದಸ್ಯರು ಒಬ್ಬೊಬ್ಬರು ಒಂದೊಂದು ಕಡೆ. ಇದರ ಪಡಿಪಾಟಲುಗಳೇ ಬೇರೆ. ಹಾಗಿರುವಾಗ ಸೆಂಟಿಮೆಂಟಲ್ಲು, ಎಮೋಷನಲ್ಲು ಎಂದುಕೊಂಡು ಏನು ಮಾಡುವುದು? ವೇಗದ ಜಗದಲ್ಲಿ ಅವುಗಳಿಗೆಲ್ಲಾ ಜಾಗವೆಲ್ಲಿದೆ? ಬದಲಾದ ಕಾಲಮಾನಕ್ಕೆ ಮತ್ತು ಜಾಯಮಾನಕ್ಕೆ ನಾವು ಹೊಂದಿಕೊಳ್ಳದೇ ಹೋದರೆ ನಮ್ಮವರಿಗೇ ನಾವು ತಲೆನೋವಾಗುತ್ತೇವೆ. ಸಂಗ್ರಹಿಸುವುದನ್ನು ಕೈ ಬಿಟ್ಟು ಬೇಡದೇ ಇರುವುದನ್ನು ಎಸೆಯುವ ಮನಸ್ಸು ಮಾಡಬೇಕು. ನಮ್ಮವರ ಘನತೆ ಮತ್ತು ಮಮತೆಗಳನ್ನು ಉಳಿಸಿಕೊಳ್ಳಬೇಕಾದರೆ ಗೌತಮ ಬುದ್ಧರು ಹೇಳುವ ಅಸಂಗ್ರಹ ಪ್ರವೃತ್ತಿಯನ್ನು ಹೊಂದಬೇಕು. ಈ ವಿಚಾರದಲ್ಲಿ ಅಗತ್ಯಗಳು ಬೇರೆ; ಬಯಕೆಗಳು ಬೇರೆ ಎಂಬುದರ ಬೋಧನೆಯಾಗದಿದ್ದರೆ ಬದುಕು ದುರ್ಬರವಾಗುತ್ತದೆ. ನಮ್ಮ ಪ್ರೀತಿಯ ಹವ್ಯಾಸಗಳೂ ಭಾವನಾತ್ಮಕ ವಸ್ತುಸಂಗ್ರಹಗಳೂ ನಮ್ಮ ನಂತರದವರಿಗೆ ಏನೋ ತಿಕ್ಕಲು, ಕೆಲಸಕ್ಕೆ ಬಾರದವು, ತಾವಿದ್ದಾಗಲೇ ವಿಲೇವಾರಿ ಮಾಡಲಾಗದೆ ನಮಗೆ ತಲೆಬೇನೆ ತಂದವು ಎನಿಸಬಾರದು! ಪಡಿಪಾಟಲು ಎಂದರೆ ಇಂಥವು ಕೂಡ. ಬಾಳಿನಲ್ಲಿ ಎದುರಾಗುವ ಭಾವನೆ ಮತ್ತು ಚಿಂತನೆಗಳನ್ನು ಸರಿದೂಗಿಸಿಕೊಳ್ಳಲಾಗದೇ ವಿವೇಕ ಮತ್ತು ವಿವೇಚನೆಗಳನ್ನು ಹೊಂದಲಾರದೇ ಭಾವುಕತೆಗೆ ವಿಪರೀತ ಮನ್ನಣೆಯಿತ್ತು, ನಿರ್ವಹಣೆಯ ಸಮಸ್ಯೆ ಎದುರಿಸುವುದು. ನಮಗೆ ಮುಚ್ಚಟೆಯಾದುವೆಲ್ಲಾ ನಮ್ಮವರಿಗೆ ಆಪ್ಯಾಯಮಾನವಾಗಬೇಕೆಂದೇನಿಲ್ಲ! ತಂತ್ರಜ್ಞಾನದ ಕಾಲವಿದು. ಮಾರುಕಟ್ಟೆಗೆ ಹೊಸ ಬಗೆಯ, ಹೊಸ ವಿನ್ಯಾಸದ ಆಕರ್ಷಕ ನಮೂನೆಗಳು ಬರುತ್ತಿರುತ್ತವೆ. ಕೆಟ್ಟು ಹೋದ, ಹಳೆಯ ವಿನ್ಯಾಸದ ಪ್ರಯೋಜನಕ್ಕೆ ಬಾರದ ಎಷ್ಟು ವಸ್ತುಗಳನ್ನು ನಾವು ಗುಡ್ಡೆ ಹಾಕಿಕೊಂಡು ಗೊಳೋ ಎನ್ನುತ್ತಿಲ್ಲ!? ಮದುವೆ ಕಾಲದಲ್ಲಿ ಕೊಟ್ಟಿದ್ದ ವಾಚು, ತಾನು ತೆಗೆದುಕೊಂಡಿದ್ದ ನಲವತ್ತು ವರುಷಗಳ ಹಿಂದಿನ ಸೈಕಲ್ಲು, ಸ್ತಬ್ಧವಾದ ಆ ಕಾಲದ ಕರೆಂಟು ರೇಡಿಯೊ, ಗೋಡೆ ಗಡಿಯಾರ, ಬಾಲ್ಯಕಾಲದಲಿ ಬಳಸುತ್ತಿದ್ದ ಒಡೆದು ಹೋದ ಗೋಲಿ, ಬುಗುರಿ, ಚೆಂಡುಗಳು, ತಮ್ಮ ತಂದೆಯವರು ತೆಗೆದುಕೊಡುತ್ತಿದ್ದ ಬಿಸ್ಕತ್ತು, ಚಾಕೊಲೇಟುಗಳ ಸಿಪ್ಪೆ- ಕವರುಗಳು, ಪ್ರಯಾಣಿಸಿದ್ದ ಬಸ್ ಟಿಕೇಟು, ನೋಡಿದ್ದ ಸಿನಿಮಾ ಟಿಕೇಟು ಇತ್ಯಾದಿ ಕಸವನ್ನು ನನ್ನ ಗೆಳೆಯರೊಬ್ಬರು ಇಟ್ಟುಕೊಂಡು, ವಾರಕ್ಕೊಮ್ಮೆ ಅವನ್ನು ನೋಡುತ್ತಾ, ನಮ್ಮ ಕಾಲದ್ದು ಎಂದು ಭಾವಾವೇಶಕ್ಕೊಳಗಾಗುತ್ತಾ ಒಂಥರಾ ಮತಿಭ್ರಾಂತಿಗೊಂಡವರಂತೆ ವರ್ತಿಸುತ್ತಿದ್ದರು; ಅವರ ಮನೆಯವರ ಪಾಲಿಗೆ ಹುಚ್ಚರೇ ಆಗಿಬಿಟ್ಟಿದ್ದರು. ಅವರು ಕೈಲಾಸವಾಸಿಗಳಾದ ಮೇಲೆ ರೂಮನ್ನು ತಲಾಷು ಮಾಡಿದಾಗ ಈ ವಸ್ತುಗಳ ಜೊತೆಗೇ ಅವರು ಬಳಸಿ ಕೆಟ್ಟು ಹೋಗಿದ್ದ ಸೀಮೆಯೆಣ್ಣೆ ಸ್ಟವ್ವುಗಳು, ಅದರ ಬತ್ತಿ, ಹಚ್ಚಿಡುತ್ತಿದ್ದ ಉರಿದು ಸುಟ್ಟ ಬೆಂಕಿಕಡ್ಡಿಗಳ ಪೊಟ್ಟಣರಾಶಿ, ಸುತ್ತಿಟ್ಟ ಸುತ್ತಲೀದಾರ ಹೀಗೆ ಕಸವನ್ನು ಕಂಡು ದಿಗ್ಭ್ರಾಂತರಾದರು. ನಾವೆಲ್ಲ ಗಮನಿಸಿದಂತೆ, ಹಲವರಿಗೆ ಹಳೆಯ ವಸ್ತುಗಳ ಮೇಲೆ ಅದೆಂಥ ಕಕ್ಕುಲಾತಿಯೆಂದರೆ, ಮಡದಿ-ಮಕ್ಕಳನ್ನಾದರೂ ದೂರವಿಟ್ಟಾರು; ಅವನ್ನು ಜೊತೆಯಲ್ಲಿಟ್ಟುಕೊಂಡು ಅವುಚಿಕೊಂಡೇ ಬದುಕುತ್ತಿರುತ್ತಾರೆ. ಇಂಥ ಹಳೆಯ ವಸ್ತುಗಳ ಅತಿಯಾದ ಮೋಹವು ಸೈಕಾಲಜಿಯ ಪ್ರಕಾರ ಮನೋಬೇನೆ ಎನಿಸಿಕೊಂಡು ಬಿಡುತ್ತದೆ. ಇಷ್ಟಕೂ ಭಾವನೆಗಳಿಗೆ ಬೆಲೆ ಕೊಡುವುದೆಂದರೇನು? ವಸ್ತು ಮೋಹವೇ? ತ್ಯಾಗವೇ? ಸಂಗ್ರಹವೇ? ಅಸಂಗ್ರಹವೇ? ಅಟ್ಯಾಚುಮೆಂಟು ಎಲ್ಲಿವರೆಗೆ? ಚಿಕ್ಕಂದಿನಲ್ಲಿ ನಾನು ತಿನ್ನುತ್ತಿದ್ದ ತಟ್ಟೆ ಎಂದಿಟ್ಟುಕೊಳ್ಳಬಹುದು; ಆದರೆ ನಾನು ಮಾಡಿದ್ದ ಮೊದಲನೆಯ ವಾಂತಿ ಎಂದು ಅದನ್ನೂ ಸಂಗ್ರಹಿಸಿಟ್ಟುಕೊಂಡರೆ ಎಂಥ ಅತಿರೇಕ? ಒಂದು ಕಾಲದ ಇಷ್ಟಗಳು ಮುಂದೊಂದು ಕಾಲಕೆ ಕಷ್ಟಗಳಾಗುವ ಪರಿಸ್ಥಿತಿಯನ್ನು ಪಡಿಪಾಟಲುಗಳ ವ್ಯಾಪ್ತಿಗೆ ತರಬಹುದೇನೊ?
ಮೆಮೊರಿ ಎಂಬುದಾಗಲೀ ಪ್ರೀತಿ ಗೌರವ ಎಂಬುದಾಗಲೀ ಹೃತ್ಪೂರ್ವಕ ಕಾಳಜಿ ಎಂಬುದಾಗಲೀ ವಸ್ತುವಿನಲ್ಲಿದೆಯೋ? ವ್ಯಕ್ತಿಯ ವರ್ತನೆಯಲ್ಲಿದೆಯೋ? ಬದುಕಿದ್ದಾಗ ಆರೈಕೆ ಮಾಡದೇ ಸತ್ತ ಮೇಲೆ ನಮ್ಮ ತಂದೆಯದು ಅಂತಲೋ ತಾಯಿಯದು ಅಂತಲೋ ವಸ್ತುಪದಾರ್ಥಗಳನ್ನು (ಬೆಲೆ ಬಾಳುವ ಚಿನ್ನಾಭರಣಗಳು ಇದರ ವ್ಯಾಪ್ತಿಗೆ ಬರುವುದಿಲ್ಲ!) ಸಂಗ್ರಹಿಸಿಟ್ಟುಕೊಂಡು ನೆನಪಿಗೆ ಎಂದು ಪ್ರದರ್ಶಿಸುವುದು ಕೇವಲ ಠಕ್ಕುತನವಲ್ಲ; ಆತ್ಮವಂಚನೆ ಕೂಡ. ಇಲ್ಲೊಂದು ನನ್ನ ಸ್ವಂತ ಉದಾಹರಣೆ ಹೇಳಿದರೆ ತಪ್ಪಾಗಬಹುದು: ಸ್ನಾತಕೋತ್ತರ ಪದವಿ ಮುಗಿಸಿದ ಮೇಲೆ ವಿಶ್ವವಿದ್ಯಾಲಯ ಗೌರವಿಸಿ ನೀಡಿದ ಹದಿಮೂರು ಚಿನ್ನದಪದಕ (ಹೆಸರಿಗೆ ಇವು ಚಿನ್ನದ ಪದಕ; ಆದರೆ ಬೆಳ್ಳಿಗೆ ಚಿನ್ನದ ಲೇಪನ ಮಾಡಿರುತ್ತಾರಷ್ಟೇ) ಗಳನ್ನು ಷೋಕೇಸಿನಲ್ಲಿಟ್ಟು ಪ್ರದರ್ಶನ ಮಾಡದೇ, ನನ್ನ ಸಹೋದರಿಯ ವಿವಾಹ ಸಂದರ್ಭದಲ್ಲಿ, ಅಷ್ಟನ್ನೂ ಅಕ್ಕಸಾಲಿಗರಿಗೆ ಕೊಟ್ಟು, ಬೆಳ್ಳಿ ಪದಾರ್ಥಗಳನ್ನು ಮಾಡಿಸಿಬಿಟ್ಟೆ; ಖರ್ಚಿಗೆ ಹಣವೂ ಲಭಿಸಿತು. ಇದಕ್ಕೆ ಬಡತನವೂ ಕಾರಣವಾಗಿತ್ತು, ನನ್ನ ನಿರ್ಮೋಹದ ಸ್ವಭಾವವೂ ಜೊತೆಗೂಡಿತ್ತು. ತಪ್ಪೋ ಸರಿಯೋ ಗೊತ್ತಿಲ್ಲ; ನನಗಂತೂ ರಿಗ್ರೆಟ್ಸು ಕಾಡಿಲ್ಲ! ಕಷ್ಟಕ್ಕೆ ಕೈ ಹಿಡಿಯದಿದ್ದ ಮೇಲೆ ಒಡವೆ ವಸ್ತ್ರಗಳಿಗೆ ಅರ್ಥವೆಲ್ಲಿ? ಇನ್ನೊಬ್ಬರು ನೋಡಲೆಂದೇ ಅವನ್ನು ಸಾಕಿಕೊಂಡು ಇರಬೇಕೆ? ಇದು ನನ್ನ ಮೂಲಭೂತ ಪ್ರಶ್ನೆ.
ಪಡಿಪಾಟಲುಗಳಲ್ಲಿ ಪ್ರಧಾನವಾಗಿ ಎರಡು ವರ್ಗ. ಒಂದು ನಮ್ಮಿಂದ ಇನ್ನೊಂದು ನಾವೇ. ನಮ್ಮಿಂದಾದವನ್ನು ನಿವಾರಿಸಿಕೊಳ್ಳಲೂ ನಾವೇ ಇನ್ನೊಬ್ಬರಿಗೆ ತೊಡಕಾಗದಂತೆ ನೋಡಿಕೊಳ್ಳಲೂ ಇರುವುದೊಂದೇ ಮಾರ್ಗ: ‘ಅದುವೇ ಬಿ ಪ್ರಾಕ್ಟಿಕಲ್.’ ಸರಳವಾದ ಮತ್ತು ಸುಗಮವಾದ ಜೀವನಶೈಲಿಯ ಅಳವಡಿಕೆ. ಕಟ್ಟಿಕೊಂಡು ಒದ್ದಾಡುವುದಕಿಂತ ಬಿಟ್ಟು ಬದುಕುವುದು ಎಲ್ಲ ರೀತಿಯಲ್ಲೂ ಯೋಗ್ಯ ಮತ್ತು ಸೂಕ್ತ ಎಂದು ತೀರ್ಮಾನಿಸುವುದು. ಇದಷ್ಟು ಸುಲಭವಲ್ಲ. ಅರಿವನ್ನು ಅಳವಡಿಸಿಕೊಂಡು ಅದರ ಒಂದು ಭಾಗವಾಗುವುದು ಕಡುಕಷ್ಟ. It is very simple to be happy; but it is very difficult to be simple ಎಂದಿದ್ದಾರೆ ವಿಶ್ವಕವಿ ರವೀಂದ್ರನಾಥ ಟಾಗೋರ್ ಅವರು. ಒಂದು ಮಟ್ಟದ ವಸ್ತು ವಿಷಯಗಳ ನಿವೃತ್ತಿಯೇ ಪ್ರವೃತ್ತಿಯಾಗದೇ ಹೋದರೆ, ಜೀವವು ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಯನ್ನು ಧರಿಸದೇ ಹೋದರೆ, ಕಡು ಲೌಕಿಕದಲ್ಲೇ ಬಿದ್ದು ಒದ್ದಾಡುವುದು ನಿರರ್ಥಕ ಎಂಬ ಸ್ವಭಾವ ವೈರಾಗ್ಯ ಮೂಡದಿದ್ದರೆ ಸರಳವಾಗಿರುವುದು ಸಾಧ್ಯವಾಗದು; ನಮ್ಮ ಹಲವು ತೆರನಾದ ಪಡಿಪಾಟಲುಗಳನ್ನು ಕಟ್ಟಿಕೊಂಡು ಒದ್ದಾಡುವುದು ಸಹ ನಿಲ್ಲದು. ವಯಸಾದ ಮೇಲೆ ದೇಹಾರೋಗ್ಯವು ಕ್ಷೀಣಿಸುವುದು ಪ್ರಕೃತಿ ಸಹಜ. ಅಂತಹುದರಲ್ಲಿ ಈ ಪಡಿಪಾಟಲುಗಳಿಂದ ಮಾನಸಿಕ ಆರೋಗ್ಯವನ್ನೂ ಹಾಳುಮಾಡಿಕೊಳ್ಳುವುದು ಸುತರಾಂ ಜಾಣತನವಲ್ಲ. ಆದರೆ ನಾವು ಹುಲುಮಾನವರು; ಅರಿಷಡುವರ್ಗಗಳಿಂದ ಬಾಧಿತರು! ಅಷ್ಟು ಸುಲಭವಾಗಿ ಕಾಮಾದಿ ಮೋಹ ಮಮಕಾರಗಳನ್ನು ತ್ಯಜಿಸೆವು. ಒಂದಲ್ಲ ಒಂದು ವಿಧವಾದ ಮೋಹ ವ್ಯಾಮೋಹಗಳಿಗೆ ಸಿಕ್ಕಿಕೊಂಡು ನರಳುತ್ತೇವೆ. ವ್ಯಕ್ತಿಪ್ರೀತಿ, ಪ್ರಾಣಿಪ್ರೀತಿ ಮತ್ತು ವಸ್ತುಪ್ರೀತಿಗಳು ಆಗಿಂದಾಗ್ಗೆ ಶಿಫ್ಟಾಗುತ್ತಿರುತ್ತವೆ; ಗೋಳುಗರೆವ ಬಾಳು ರೋತೆಯಾಗಿ, ನೆಮ್ಮದಿಯನ್ನು ನಾಳೆಯ ಕೈಗೆ ಕೊಟ್ಟು ಪರಿ ಪರಿ ಪಾಟಲುಗಳಲ್ಲಿ ಹಿಂಸೆ ಪಡುತ್ತಾ, ನುಂಗಲೂ ಆಗದ, ಉಗುಳಲೂ ಆಗದ ಬಿಸಿತುಪ್ಪವಾಗಿರುತ್ತೇವೆ; ‘ನಿಮ್ಮದು ಕೈಯ್ಯಾರೆ ತಂದುಕೊಂಡ ಮಾಡಿಕೊಂಡ ಎಡವಟ್ಟು, ವಿಧಿಲಿಖಿತವಲ್ಲ’ ಎಂದು ಇನ್ನೊಬ್ಬರು ತಿಳಿವಳಿಕೆ ಹೇಳುವತನಕ! ನಾವು ಗತಿಸಿದ ಮೇಲೆ ನಮ್ಮ ಬೆಲೆ ಬಾಳದ ಅರ್ಥಹೀನ ಉಪದ್ವ್ಯಾಪಗಳನ್ನೂ ಇಂಥ ಹತ್ತಾರು ಪಡಿಪಾಟಲುಗಳ ವಸ್ತುಪದಾರ್ಥಗಳ ಸಂಗ್ರಹವನ್ನೂ ಕಂಡ ನಮ್ಮ ಮಕ್ಕಳು / ವಾರಸುದಾರರು ಬಯ್ದುಕೊಂಡು, ಕಸವಾಗಿ ಎಸೆಯುವ ಮೊದಲೇ ಬದುಕಿದ್ದಾಗ ನಾವೇ ಮರ್ಯಾದೆಯಿಂದ ವಿಲೇವಾರಿ ಮಾಡಿ, ಎಲ್ಲ ರೀತಿಯಲ್ಲೂ ನಮ್ಮ ಲಗೇಜುಗಳ ಭಾರವನ್ನು ಕಳೆದುಕೊಂಡು, ಹಗುರವಾಗುವುದು ಸೂಕ್ತ, ಶ್ರೇಷ್ಠ ಮತ್ತು ಮೆಚೂರಾದ ನಿಸೂರಿನ ಬಾಳು. ಏನಂತೀರಿ?

–ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

