ಪರಾಗ

ಉಚ್ಛಾಟನೆ.

Share Button

ಮಕ್ಕಳನ್ನು ಶಾಲೆಗೆ ಗಂಡನನ್ನು ಆಫೀಸಿಗೆ ಕಳುಹಿಸಿ ಮನೆಯ ಗೇಟಿನ ಬಳಿ ನಿಂತಿದ್ದ ನಂದಿನಿಗೆ ಮನೆಗೆಲಸದ ಮಾಯಮ್ಮ ದೂರದಲ್ಲಿ ಬರುತ್ತಿರುವುದು ಕಾಣಿಸಿತು. ಅವಳನ್ನು ಕಂಡಕೂಡಲೇ ಹೋದಜೀವ ಬಂದಂತಾಯಿತು. ಸುಮಾರು ಎರಡು ತಿಂಗಳಿಂದಲೂ ಅವಳ ಪತ್ತೆಯಿರಲಿಲ್ಲ. ಊರಿನಲ್ಲಿ ಯಾವುದೋ ಆಸ್ತಿಯ ವ್ಯವಹಾರಕ್ಕೆಂದು ಹೋದವಳು ಇವತ್ತು ಪ್ರತ್ಯಕ್ಷಳಾಗಿದ್ದಾಳೆ. ಫೋನ್ ಮಾಡಿದಾಗಲೆಲ್ಲ ಬರ‍್ತೀನಿ ಅಮ್ಮ ಸ್ವಲ್ಪ ದಿನ ತಡೆದುಕೊಳ್ಳಿ, ಈವಾಗ ನಾನು ಇಲ್ಲಿ ಪಟ್ಟಾಗಿ ಕೂಡ್ಲಿಲ್ಲಾಂದ್ರೆ ನಮ್ಮ ಭಾವ ಇಲ್ಲದ್ದೆಲ್ಲ ಸಾಲಸೋಲದ ಲೆಕ್ಕ ತೋರಿಸಿ ಎಲ್ಲಕ್ಕೂ ಕೈಎತ್ತಿಬಿಡ್ತಾನೆ. ನಿಮಗೆ ತೊಂದರೆಯಾಗಬಾರದೆಂದು ಕೆಲಸಕ್ಕೆ ಸುಂದ್ರೀಗೆ ಹೇಳಿದ್ದೀನಿ. ಅವಳು ಬರ‍್ತಾವಳಂತೆ. ನಾನು ಫೋನ್ ಮಾಡಿ ವಿಚಾರಿಸಿಕೊಂಡಿವ್ನಿ. ಏನು ಮಾಡಲಿ ನಮ್ಮನೆ ಗಂಡಸು ನೇರುಪಾಗಿದ್ರೆ ನಾವ್ಯಾಕೆ ಅವರುಗಳ ಕೂಟೆ ಜಗಳ ಆಡ್ಬೇಕಿತ್ತು. ಇಬ್ಬರು ಹೆಣ್ಣುಮಕ್ಕಳು ಬೇರೆ ಅವರೆ. ಅವುರುಗಳಿಗೂ ಒಂದು ದಾರಿ ಮಾಡ್ಬೇಕಲ್ಲ. ಅದಕ್ಕೆ ಸಹಾಯ ಆಗ್ತದೇ ಅಂತ ಅಂಗಲಾಚಿದ್ದಳು. ನಾನು ಈ ಮನೆಗೆ ಮದುವೆಯಾಗಿ ಹತಿರ ಹತ್ತಿರ ಹನ್ನೆರಡು ವರ್ಷಗಳಾಗುತ್ತ ಬಂತು. ಅದಕ್ಕೂ ಮುಂಚಿನಿಂದಲೇ ಮಾಯಮ್ಮ ನಮ್ಮನೆ ಕೆಲಸ ಮಾಡ್ತಾವಳೆ. ನಿಯತ್ತಿನ ಹೆಂಗಸು. ಕೈಬಾಯಿ ಶುದ್ಧ. ಬೇರೆಯವರ ಹಾಗೆ ಎಲ್ಲರ ಸುದ್ಧಿಗಳಿಗೆ ಬಾಯಿ ಹಾಕಲ್ಲ. ತಾನೂ ಹೋಗಲ್ಲ. ಊರಿನಲ್ಲಿದ್ದ ಅವಳ ಅತ್ತೆ ಮಾವ ಸರಿದುಹೋದ ಮೇಲೆ ಊರಿನಲ್ಲಿದ್ದ ಜಮೀನನ್ನೆಲ್ಲ ಅವಳ ಭಾವನೇ ನೋಡಿಕೊಳ್ಳುತ್ತಿದ್ದ. ಈಚೆಗೆ ಅವನು ಸಿಕ್ಕಾಪಟ್ಟೆ ಸಾಲಮಾಡಿ ತೀರಿಸಲಿಕ್ಕಾಗದೆ ಆಸ್ತಿಯನ್ನು ಮಾರಾಟಕ್ಕಿಟ್ಟು ಊರಿನ ಸಾಹುಕಾರನೇ ಕೊಂಡುಕೊಳ್ತಾನೆಂಬ ಸಂಗತಿ ತಿಳಿದುಬಂತು. ಇದಕ್ಕೆ ತನ್ನ ಗಂಡನನ್ನು ಬಿಟ್ಟರೆ ಆಗೋದಿಲ್ಲಾಂತ ತಾನೇ ಹೋಗಿದ್ದವಳು ಈಗ ಕಾಣಿಸುತ್ತಿದ್ದಾಳೆ.

ಬಂದವಳೇ ಮಾಯಮ್ಮ “ಅಯ್ಯಾವ್ರನ್ನ ಆಫೀಸಿಗೆ ಸಾಗಹಾಕಿ ನಿಂತುಕೊಂಡಂಗದೆ?” ಎಂದು ಕೇಳಿದಳು.
“ಹಾ.. ಮಾಯಮ್ಮಾ ನೀನು ಕಾಣಿಸಿದೆಯಲ್ಲ ಹಾಗೇ ನಿಂತೆ. ಹೋಗಿದ್ದ ಕೆಲಸ ಹಣ್ಣೋ ಕಾಯೋ? ಬಾ..ಬಾ ಇತ್ತೀಚೆಗೆ ಫೋನ್ ಮಾಡಲಿಕ್ಕಾಗದಷ್ಟು ಬಿಜಿಯಾಗಿಬಿಟ್ಟಿದ್ದೀ” ಎನ್ನುತ್ತಾ ಗೇಟು ತೆರೆದು ಅವಳನ್ನು ಒಳಕ್ಕೆ ಬರಮಾಡಿಕೊಂಡಳು.
“ಹೂನಮ್ಮಾ ಅದನ್ನು ಹೇಳಕ್ಕೇ ಅಂತಾನೇ ಬಸ್ಸಿಳಿದು ಚೀಲಗಳನ್ನೆಲ್ಲ ಮಕ್ಕಳ ಕೈಗೆ ಕೊಟ್ಟು ನೇರ ಇಲ್ಲಿಗೇ ಬಂದಿದ್ದೀನಿ. ನಡರ‍್ರೀ ಒಳಕ್ಕೆ ಹೋಗಮಾ.” ಎಂದು ನಂದಿನಿಗೂ ಮುಂಚೆಯೇ ನಡೆದಳು ಮಾಯಮ್ಮ. ಅವಳ ಹಿಂದೆಯೆ ಬಂದ ನಂದಿನಿ ಮುಂಬಾಗಿಲು ಭದ್ರಪಡಿಸಿದಳು.
“ಏನು ಮಾಯಮ್ಮಾ ಹೊಟ್ಟೆಗೇನದ್ರೂ ಹಾಕ್ಕೊಂಡಿದ್ದೀಯೋ ಹೆಂಗೇ? ಹಾಕ್ಕೊಂಡಿದ್ರೂ ಸ್ವಲ್ಪ ನನ್ನ ಜೋಡಿ ಕಂಪನಿ ಕೊಡುವಂತೆ ಬಾ. ನನ್ನದಿನ್ನೂ ತಿಂಡಿ ಆಗಿಲ್ಲ” ಎಂದು ಹೇಳುತ್ತ ಅಡುಗೆ ಮನೆ ಹೊಕ್ಕಳು ನಂದಿನಿ.

“ಊರಲ್ಲಿ ನಮ್ಮಕ್ಕ ಕಾಫಿ ಕಾಯಿಸಿ ಕೊಟ್ಟಿದ್ದಳು. ಅಡುಗೆ ಮಾಡ್ತೀನಿ, ಉಂಡ್ಕೊಂಡು ಮಧ್ಯಾನ್ಹದ ಬಸ್ಸಿಗೆ ಹೋಗುವ್ರಂತೆ ಅಂದ್ಲು. ನೆನ್ನೆ ನನ್ನ ಮಕ್ಕಳು ಬಂದಿದ್ದೊ. ಅವರಿಬ್ಬರೂ ಆಗಾಕಿಲ್ಲ ನಾಳೆ ನಮಗೆ ಕ್ಲಾಸಿದೆ ಅಂತೇಳಿ ಹೊರಟು ಬಂದೇಬಿಟ್ಟೋ. ಸುಂದ್ರೀ ಕೆಲಸಕ್ಕೆ ಬಂದಿಲ್ಲೇನು? ತಪ್ಪಿಸಬೇಡಾಂತ ಫೋನ್ ಮಾಡಿದ್ದೆ ಅವಳಿಗೆ” ಎಂದಳು ಮಾಯಮ್ಮ.
“ಬಂದು ಹೋಗುತ್ತಿದ್ದಾಳೆ. ಒಂದು ದಿನವೂ ತಪ್ಪಿಸಿಲ್ಲ. ಇವತ್ತು ಎಲ್ಲಿಗೋ ಹೋಗ್ಬೇಕಂತ ಬೇಗನೆ ಬಂದು ಕೆಲಸ ಮುಗಿಸಿಕೊಟ್ಟು ಹೋದಳು. ಹೋಗು ನೀನು ಕೈಕಾಲು ಮುಖ ತೊಳೆದು ಬಾ” ಎಂದಳು ನಂದಿನಿ.
ಸರಿ ಎಂದು ಹೇಳುತ್ತ ಹಿಂದಿನ ಬಾಗಿಲು ತೆರೆದು ಕೈಕಾಲುಮುಖ ತೊಳೆದುಕೊಂಡು ಸೆರಗಿನಿಂದಲೇ ಒರೆಸುತ್ತ ಒಳ ಬಂದವಳೇ ಊಟದ ಮನೆಯ ಬಾಗಿಲಿಗೆ ಒರಗಿ ಕುಳಿತುಕೊಂಡಳು ಮಾಯಮ್ಮ. ಒಂದೆರಡು ಚಪಾತಿ, ಹುರುಳಿಕಾಯಿ ಪಲ್ಯ, ಚಟ್ನಿಪುಡಿ ತಟ್ಟೆಗೆ ಹಾಕಿ ಮಾಯಮ್ಮನ ಕೈಗೆ ಕೊಟ್ಟಳು. ತಾನೂ ಇನ್ನೊಂದು ತಟ್ಟೆ ತೆಗೆದುಕೊಂಡು ಡೈನಿಂಗ್ ಟೇಬಲ್ಲಿನ ಕುರ್ಚಿಯಲ್ಲಿ ಕುಳಿತಳು ನಂದಿನಿ. ಇಬ್ಬರೂ ತಿಂಡಿ ತಿಂದು ಕಾಫಿ ಬೆರೆಸಿಕೊಂಡು ಕುಡಿದರು. ಪಾತ್ರೆಗಳೆಲ್ಲವನ್ನೂ ತೆಗೆಯುತ್ತ “ಇನ್ನೇನಾದರೂ ಪಾತ್ರೆ ಇದ್ದರೆ ಹಾಕಿ ತೊಳೆಯುತ್ತೇನೆ” ಎಂದು ಒಳ ನಡೆದಳು ಮಾಯಮ್ಮ.

“ಇಲ್ಲಾ ಎಲ್ಲ ಆಗಿದೆ. ನೀನು ಅವನ್ನಿಷ್ಟು ತೊಳೆದಿಟ್ಟು ಬಾ ಏನಾಯಿತೆಂದು ಹೇಳುವಿಯಂತೆ. ನಾನು ನಿನ್ನ ಹತ್ತಿರ ಸ್ವಲ್ಪ ಮಾತನಾಡಬೇಕು” ಎಂದು ಹಾಲಿನಲ್ಲಿ ಸೋಫಾದ ಮೇಲೆ ಕುಳಿತಳು ನಂದಿನಿ.
ಎಲ್ಲವನ್ನೂ ಮುಗಿಸಿ ಬಂದವಳೇ ಮಾಯಮ್ಮ ಹಾಲಿನಲ್ಲಿ ನಂದಿನಿಗೆದುರಾಗಿ ನೆಲದಮೇಲೆ ಕುಳಿತುಕೊಂಡು “ಏನೋ ನನ್ನತ್ರ ಮಾತನಾಡಬೇಕಂದ್ರೀ ಹೇಳಿ” ಎಂದಳು.
“ಮೊದಲು ನೀನು ಹೇಳು, ನಿನಗೇನಾದ್ರೂ ಗಿಟ್ಟಿತಾ?” ಎಂದು ಕೇಳಿದಳು ನಂದಿನಿ.

“ಹೂ..ಹೋದಮೇಲೆ ನಾನು ಬಿಡ್ತೀನಾ. ಎಲ್ಲ ಸಾಲಸೋಲ ಚುಕ್ತಾ ಆಗಿ ಇಬ್ಬರು ಹೆಣ್ಣುಮಕ್ಕಳು, ನನ್ನ ಗಂಡ, ಭಾವ ನಾಲ್ಕೂ ಜನಕ್ಕೆ ಹತ್ತುಹತ್ತು ಲಕ್ಷ ಬಂತು” ಎಂದಳು ಮಾಯಮ್ಮ.
“ಅಷ್ಟೇನಾ ! ಈಗ ಜಮೀನಿನ ಬೆಲೆ ಬಹಳ ಹೆಚ್ಚಾಗಿದೆ. ಸರೀಗೆ ಹೊಡೆದವನೆ ಬಿಡು. ಮನೆಗೆಷ್ಟು ಬಂತು?” ಎಂದು ಕೇಳಿದಳು.
“ಏ..ತಕಳ್ಳಿ ಜಮೀನಿದ್ದದ್ದು ಒಂದೂಕಾಲು ಎಕರೆಗೆ ಅಷ್ಟೇಯಾ. ಮನೆ ಮಾರಿಸಲಿಲ್ಲ. ಸಾವುಕರ‍್ರು ಅದನ್ನು ಮಾರಿ ನೀವೆಲ್ಲರ‍್ತೀರೋ ಮೂಳಾ, ದುಡ್ಡು ಬಂದದಲ್ಲಾ ಇದ್ದುದರಲ್ಲಿ ವಸಿ ರಿಪೇರಿ ಮಾಡಿಸಿಕೊಂಡು ಇರಿ. ಒಂದು ಪೆಟ್ಟಿಗೆ ಅಂಗಡಿ ಇಟ್ಟುಕೊಡ್ತೀನಿ. ಇರೋಗಂಟ ಬೇಕಾಗುತ್ತೆ ಆಮ್ಯಾಕೆ ನೋಡಾನ” ಅಂದ್ರು.

ಭಾವನ ಹೆಂಡ್ರು ಜಾಣೆ. ಅವಳೇಯಾ ಸಂಸಾರ ನಡಸೋಳು. ಈಗ ಕುತ್ತಿಗೆಗಂಟ ಸಾಲ ಮಾಡವ್ನೆ ಅಂತ ಗೊತ್ತಾದ ಮೇಲಂತೂ ಒಸಿ ಬಿಗಿ ಬಂದೋಬಸ್ತು ಮಾಡವ್ಳೆ. ಇದ್ದೊಬ್ಬ ಮಗಳ್ನ ಪಕ್ಕದೂರಿನ ಹುಡುಗನಿಗೇ ಮಾತುಕತೆಯಾಗದೆ. ಈಗ ಬಂದಿರೋ ದುಡ್ಡಲ್ಲಿ ಹೇಗೋ ಓಲಗ ಊದಿಸಿಬಿಡಬೋದು. ನನ್ನ ಗಂಡನ ವಿಚಾರಾನೂ ಆ ಸಾವ್ಕಾರಂಗೆ ಗೊತ್ತದೆ. ಅದಕ್ಕೆ ನನ್ನ ಕೈಗೇ ದುಡ್ಡಿನ ಚೆಕ್ ಕೊಟ್ಟರು. ಮಕ್ಕಳು ಅದನ್ನಾಗಲೆ ಈಸಿಕೊಂಡು ಮನೆಗೋದ್ರು. ನಾಳೆ ನಾಡಿದ್ರಲ್ಲಿ ಬ್ಯಾಂಕಿಗೆ ಜಮ ಮಾಡ್ತವ್ರೆ. ಎನೋ ಎಂತೋ ನಾನಂತೂ ಯಾವತ್ತೂ ಈ ಪಾಟಿ ದುಡ್ಡನ್ನು ಕಣ್ಣಿಂದ ನೋಡಿರಲಿಲ್ಲ. ಮಕ್ಕಳೇನೊ ಚೆನ್ನಾಗೇ ಓದ್ತಾ ಅವೆ. ಮುಂದೆ ಅವುಗಳಿಗೊಂದು ಕೆಲಸ ಅಂತ ಸಿಕ್ಕಿಬಿಟ್ಟರೆ ವೈನಾಗ್ತೈತೆ. ಅಮೇಲೆ ಮದುವೆ ಸುದ್ಧಿಗೋಗೋದು. ಅವು ನಮ್ಮಂಗೆ ಆಗೋದು ಬೇಡ. ಇಷ್ಟು ದಿನ ನಾನು ಬರದೇ ಏನಾನ ಕಷ್ಟವಾಗಿದ್ರೆ ಕ್ಷಮಿಸಿಬುಡಿ” ಎಂದಳು ಮಾಯಮ್ಮ.

“ಇರಲಿ ಬಿಡು, ಹೇಗೋ ನಿನ್ನ ಬದಲಿಗೆ ಸುಂದರಿನ ಒಪ್ಪಿಸಿದ್ದೆಯಲ್ಲಾ ಸರಿಹೋಗಿತ್ತು. ಆದರೆ ನಿನ್ನ ಕೆಲಸ ನಮಗೆ ರೂಢಿಯಾಗಿದೆ. ಅವಳೂ ಚೆನ್ನಾಗೇ ಮಾಡಿದ್ರೂ ನಿನ್ನಷ್ಟಲ್ಲ ಅನ್ನಿಸುತ್ತಿತ್ತು.” ಎಂದಳು ನಂದಿನಿ.
“ಸರಿಬಿಡಿ, ನಂದೇನೋ ಆಯ್ತು ಈಗ ನೀವೇಳಬೇಕಾದ್ದನ್ನು ಹೇಳಿ. ಅಂದಹಾಗೆ ದೊಡ್ಡಮ್ಮಾವ್ರು ಎಂಗವ್ರೆ? ಅಪ್ಪಾವ್ರು ಹೋದಮೇಕೆ ಒಂಟಿಜೀವ, ಬಾಳಾ ಸೊರಗಿಹೋಗವ್ರೆ. ನೀವೇ ಎತ್ತಾಕ್ಕೊಂಡು ಬನ್ನಿ. ಅದೇನು ಇಲ್ಲಿಗೆ ಬರಾಕೆ ಮೊಂಡಾಟ. ಅಕ್ಕಪಕ್ಕದ ಮನೇವ್ರು ಏನೇನೋ ಹೇಳ್ತಾರೆ. ಆ ಮನೇಲಿ ನೋಡ್ಕೊಳ್ಳಾವ್ರು ಸರಿಯಿಲ್ಲಾಂತ. ನಾನೂ ಕೇಳಿ ನಿಮಗೂ ಹೇಳಿದ್ದೆ. ನೀವು ಯಾಕೋ ಕಿವಿಮೇಲೇ ಹಾಕ್ಕೊಂಡಿಲ್ಲ” ಎಂದು ಆಕ್ಷೇಪಿಸಿದಳು ಮಾಯಮ್ಮ.

“ಈಗ ಅದೇ ವಿಷ್ಯ ಮಾತನಾಡಬೇಕೂಂತ ಇದ್ದದ್ದು. ಇತ್ತೀಚೆಗಂತೂ ನಮ್ಮಮ್ಮನ್ನ ನೋಡಕ್ಕೇ ಆಗುತ್ತಿಲ್ಲ. ಅವರನ್ನು ನೋಡಿಕೊಳ್ಳೋಕೇಂತ ಊರಿನಿಂದ ಕರೆದುಕೊಂಡು ಬಂದವರ ದರ್ಬಾರು ಜೋರಾಗಿದೆಯಂತೆ. ಇದು ನಿಮ್ಮಿಂದಲೇ ಕೇಳಿದ್ದು, ನಾನಂತೂ ಕಣ್ಣಾರೆ ಕಂಡಿಲ್ಲ. ಅದನ್ನು ಸರಿಯಾಗಿ ಹೆಂಗೆ ಕಂಡು ಹಿಡಿಯೋದು ಅಂತ. ನಿಮ್ಮ ಅಯ್ಯನೋರಿಗೆ ಹೇಳಿದ್ರೆ ನಮ್ಮತ್ತೆ ಇಲ್ಲಿಗೆ ಬಂದಿರೋದ್ರಿಂದ ನನಗೇನೂ ತೊಂದರೆಯಿಲ್ಲ. ಅವರೂ ನನ್ನ ತಾಯಿಯಿದ್ದಂತೆ. ಅವರೇಕೆ ಇಲ್ಲಿಗೆ ಬರಲು ಸಂಕೋಚ ಪಡುತ್ತಾರೆಯೋ ನಾಕಾಣೆ. ಹೇಗಾದರೂ ನೀನೆ ಒಪ್ಪಿಸಿ ಕರೆದುಕೊಂಡು ಬಾ. ನಮ್ಮ ಕಣ್ಣೆದುರಿಗಿದ್ರೆ ನಿನಗೂ ಸಮಧಾನವಾಗುತ್ತೆ. ಮಕ್ಕಳ ಜೊತೆ ಕಾಲಕಳೆದರೆ ಅವರಿಗೂ ಸ್ವಲ್ಪ ಲವಲವಿಕೆ ಬರಬಹುದು. ನಾವೆಲ್ಲ ಇದ್ದೂ ಅವರು ಒಂಟಿಯಾಗಿ ಏಕಿರಬೇಕು. ನಾನ್ಹೇಳಿದ್ರೆ ಕೇಳಲ್ಲ. ಈ ಕಾಲದಲ್ಲೂ ಅದೇನು ಸಂಪ್ರದಾಯ ಹೆಣ್ಣುಮಗಳ ಮನೇಲಿ ಇರಬಾರದು ಅಂತ. ಜನರು ಹೇಗಿದ್ದರೂ ಆಡುತ್ತಲೇ ಇರ‍್ತಾರೆ. ಅದಕ್ಕೇನು ಮಾಡೋಕಾಗುತ್ತೆ. ಅಂದರು. ನನಗೇನು ಮಾಡಬೇಕೆಂಬುದೆ ಹೊಳೆಯುತ್ತಿಲ್ಲ. ಊರಿಂದ ಬಂದು ಅವರನ್ನು ನೋಡಿಕೊಳ್ಳೋದು ಬಿಟ್ಟು ಮನೆಯಲ್ಲಿ ಠಿಕಾಣಿ ಹೂಡಿ ತಮಗೆ ಬೇಕಾಬಿಟ್ಟಿ ನಡೆಯೋರನ್ನು ಹೇಗೆ ಅಲ್ಲಿಂದ ವಕ್ಕಲೆಬ್ಬಿಸಬೇಕು ಅಂತ ತಿಳಿಯುತ್ತಿಲ್ಲ. ಅಮ್ಮನ ಜೊತೆಯಲ್ಲಿ ಅವರೂ ಇಲ್ಲಿಗೆ ಬರುವುದು ನನಗಿಷ್ಟವಿಲ್ಲ. ನಮ್ಮಪ್ಪ ಯಾವುದೊ ಘಳಿಗೇಲಿ ಅವರನ್ನು ಇಲ್ಲಿಗೆ ಕರೆತಂದರೋ ಕಾಣೆ. ಏನಾದರೂ ಉಪಾಯ ಹೊಳೆದರೆ ಹೇಳು ಮಾಯಮ್ಮ” ಎಂದಳು ನಂದಿನಿ.

ಅಯ್ಯೋ ನಿಮ್ಮನ್ನೀಗಿಂದ ನೋಡ್ತಿದ್ದೀನಾ ತಕ್ಕಳಿ. ನೀವು ಮದುವೆಯಾಗಿ ಪಡಿಯಕ್ಕಿ ಒದ್ದು ಹೊಸ್ತಿಲು ದಾಟಿ ಬಂದಾಗಿನಿಂದ ನೋಡಿವ್ನಿ. ನಿಮ್ಮ ಅಪ್ಪನ ಮನೆಯೂ ನನಗೆ ಗೊತ್ತಿಲ್ಲದ್ದೇನಲ್ಲಾ. ಹೀಗೆ ಮಾಡ್ರೆಲಾ” ಎಂದು ಮೇಲೆದ್ದು ನಂದಿನಿಯ ಬಹು ಸಮೀಪಕ್ಕೆ ಬಂದು ನಂದಿನಿಯ ಕಿವಿಯಲ್ಲೇನೋ ಉಪಾಯ ಹೇಳಿಕೊಟ್ಟಳು ಮಾಯಮ್ಮ.

ಅದನ್ನು ಕೇಳಿದ ನಂದಿನಿಗೆ ಅರೆ ! ಮಾಯಮ್ಮನ ತಲೆಗೆ ಹೊಳೆದದ್ದು ನನಗೇಕೆ ಹೊಳೆಯಲಿಲ್ಲ ಅಂದುಕೊಂಡು “ತುಂಬಾ ತುಂಬಾ ಥ್ಯಾಂಕ್ಸ್. ನಾನು ಆದಷ್ಟು ಬೇಗ ಈ ಪ್ರಯೋಗ ಮಾಡ್ತೀನಿ” ಎಂದಳು.
“ನನ್ನಿಂದ ಏನಾರಾ ಸಹಾಯ ಬೇಕಂದ್ರೆ ಹೇಳಿ. ಹಿಂಗೆ ಮಾಡಿದಮೇಲೆ ಏಳೀರಂತೆ. ನಾನಿನ್ನು ಬರ‍್ತೀನಿ. ಒತ್ತಾರೆ ಕೆಲಸಕ್ಕೆ ನಾನೇ ಬರ‍್ತೀನಿ” ಎಂದು ಮಾಯಮ್ಮ ಹೊರಟಳು. ಅವಳನ್ನು ಕಳುಹಿಸಿ ಬಾಗಿಲು ಹಾಕಿಕೊಂಡು ಒಳಬಂದ ನಂದಿನಿ ಅಲ್ಲಿಯೇ ಇದ್ದ ದೀವಾನಾ ಮೇಲೆ ಒರಗಿಕೊಂಡಳು. ಅವಳಿಗೆ ಹಿಂದಿನ ಮೂವತ್ತೈದು ವರ್ಷಗಳಲ್ಲಿ ನಡೆದ ಘಟನೆಗಳು ಕಣ್ಮುಂದೆ ಬಂದವು.

ಮೈಸೂರು ಶ್ರೀರಂಗಪಟ್ಟಣ ದಾರಿಯಲ್ಲಿರುವ ಪಾಲಹಳ್ಳಿಯಲ್ಲಿ ತಾವು ವಾಸವಾಗಿದ್ದ ಮನೆಯ ಮುಂದೆಯೇ ಒಂದು ಶೆಡ್ ಹಾಕಿಕೊಂಡು ಹೋಟೆಲ್ ನಡೆಸುತ್ತಿದ್ದರು ಮುದ್ದೀರಯ್ಯ, ಸಣ್ಣಮ್ಮ ದಂಪತಿಗಳು. ಬಸ್ಸುಗಳು ಒಡಾಡುವ ರಸ್ತೆ ಬದಿಯಲ್ಲಿದ್ದುದರಿಂದ ವ್ಯಾಪಾರ ಚೆನ್ನಾಗಿತ್ತು. ಅವರಿಗೊಬ್ಬನೇ ಮಗ ಚೆಲುವ. ಹೆಸರಿಗೆ ತಕ್ಕಂತೆ ಅಂದಗಾರನಾಗೇ ಇದ್ದ. ಅಷ್ಟೇ ಅಲ್ಲ ಅವನಿಗೆ ಜೀವನದಲ್ಲಿ ಏನನ್ನಾದರೂ ಹೆಚ್ಚಿನದನ್ನು ಸಾಧಿಸಬೇಕೆಂಬ ಛಲವಿತ್ತು. ಓದುವುದರಲ್ಲಿ ಆಸಕ್ತಿಯಿತ್ತು. ಮೈಸೂರಿಗೆ ಓಡಾಡಿಕೊಂಡೆ ಬಿ.ಎಸ್.ಸಿ., ಪದವಿ ಮುಗಿಸಿ ಬಿ.ಎಡ್., ಕೂಡ ಮುಗಿಸಿದ. ತಮ್ಮೂರಿನ ಹುಡುಗರೆಲ್ಲರಿಗೆ ಮಾದರಿಯಾದ. ಖಾಸಗಿ ಹೈಸ್ಕೂಲೊಂದರಲ್ಲಿ ಕೆಲಸ ಮಾಡುತ್ತಲೇ ತನ್ನದೇ ಒಂದು ಟ್ಯುಟೋರಿಯಲ್ ಪ್ರಾರಂಭಿಸಬೇಕೆಂದು ಆಶಿಸಿದ. ಸೈನ್ಸ್ ಮತ್ತು ಮ್ಯಾತ್ಸ್ ಎರಡು ವಿಷಯಗಳನ್ನು ಮಾತ್ರ ಹೇಳಿಕೊಡಲು ಸಿದ್ಧಪಡಿಸಿಕೊಂಡು ಒಂದು ಜಾಹಿರಾತು ಕೊಟ್ಟ. ಅವನ ನಿರೀಕ್ಷೆ ಮೀರಿ ಪ್ರತಿಕ್ರಿಯೆ ಬಂತು.

ತಾನು ಬಾಡಿಗೆಗಿದ್ದ ಮನೆಯಲ್ಲಿ ಜಾಗ ಸಾಲದೆಂದು ವಿಶಾಲವಾದ ಜಾಗವಿರುವ ಸ್ಥಳದ ಹುಡುಕಾಟದಲ್ಲಿದ್ದಾಗ ಅವನ ಸಹಪಾಠಿ ಪ್ರಸಾದ ನೆರವಿಗೆ ಬಂದ. ಒಂಟಿಕೊಪ್ಪಲಿನಲ್ಲಿದ್ದ ತನ್ನ ತಾತನ ಮನೆಯ ಮಹಡಿ ಮೇಲಿದ್ದ ಮನೆಯಲ್ಲಿ ಅವನ ಟ್ಯುಟೋರಿಯಲ್ ಮುಂದುವರೆಸಿಕೊಂಡು ಹೋಗಲು ವ್ಯವಸ್ಥೆ ಮಾಡಿದ ಪ್ರಸಾದ್. ಅವನನ್ನು ಓದುವಾಗಿನಿಂದಲೂ ನೋಡಿದ್ದ ಪ್ರಸಾದನ ತಾತ ಅಜ್ಜಿ ವಯಸ್ಸಾದವರು ತಮಗೆ ಈ ಹುಡುಗರು ಆಸರೆಯಾಗುತ್ತಾರೆ ಎಂದು ತಿಳಿದು ಲೈಟುಚಾರ್ಜ್, ವಾಟರ್ ಚಾರ್ಜ್ ಬಿಟ್ಟು ಬೇರೇನೂ ತಮಗೆ ಬೇಡವೆಂದು ಧಾರಾಳವಾಗಿ ಮನೆಯಲ್ಲಿ ಸ್ಥಳಾವಕಾಶ ಮಾಡಿಕೊಟ್ಟರು. ತಡಮಾಡದೆ ತನ್ನ ನಿವಾಸವನ್ನು ಅ ಮನೆಗೆ ಸ್ಥಳಾಂತರಿಸಿದ ಚೆಲುವ. ಹಾಗೇ ಟ್ಯಟೋರಿಯಲ್ ನಡೆಸಲು ಲೈಸೆನ್ಸ್ ಪಡೆದುಕೊಂಡು ಒಂದೊಳ್ಳೆಯ ದಿವಸ ನೋಡಿ ಪೂಜೆಮಾಡಿ ಪ್ರಾರಂಭಿಸಿಯೇಬಿಟ್ಟ “ವಾಣಿ ವಿದ್ಯಾಲಯ ಟ್ಯುಟೋರಿಯಲ್ಸ್”. ಬಹಳ ಬೇಗ ಇದು ಸುತ್ತಮುತ್ತಲಿನ ಬಡಾವಣೆಗಳಿಗೆಲ್ಲ ಚಿರಪರಿಚಿತವಾಯಿತು. ಒಂದಿಬ್ಬರು ಶಿಕ್ಷಕರನ್ನೂ ತನ್ನ ಜೊತೆಯಾಗಿಸಿಕೊಂಡ. ತಾನು ಖಾಸಗಿ ಶಾಲೆಯ ಕೆಲಸ ತೊರೆದು ಪೂರ್ಣಾವಧಿ ಟ್ಯುಟೋರಿಯಲ್ ಕೆಲಸಕ್ಕೆ ಬದ್ಧನಾದನು.

ಪಾಲಹಳ್ಳಿಯಲ್ಲಿದ್ದ ತಂದೆತಾಯಿಗಳನ್ನು ಒಪ್ಪಿಸಿ ತಾನಿರುವ ಕಡೆಗೇ ಕರೆದುಕೊಂಡು ಬಂದ. ಅವರು ಹೊಸಜಾಗಕ್ಕೆ ಹೊಂದಿಕೊಂಡರೆಂದು ತಿಳಿದಾಕ್ಷಣ ಊರಿನಲ್ಲಿದ್ದ ಮನೆ, ಹೋಟೆಲ್ ಮಾರಾಟಮಾಡಿ ಅದರಿಂದ ಲಭ್ಯವಾದ ಹಣದಿಂದ ಮೈಸೂರಿನ ವಿಜಯನಗರ ಬಡಾವಣೆಯಲ್ಲೊಂದು 50*80 ಖಾಲಿ ನಿವೇಶನವನ್ನು ಖರೀದಿಸಿದ. ತನ್ನ ಬಳಿ ಉಳಿತಾಯ ಮಾಡಿದ್ದ ಹಣ ಮತ್ತು ಬ್ಯಾಂಕಿನಿಂದ ಲೋನ್ ತೆಗೆದು ಎರಡಂತಸ್ಥಿನ ಮನೆಯನ್ನು ಕಟ್ಟಿಸಿದ. ಮಹಡಿಯ ಮೇಲೆ ತನ್ನ ಟ್ಯುಟೋರಿಯಲ್ಸ್ ನಡೆಸಲು ಅನುಕೂಲವಾಗುವಂತೆ ವಿಶಾಲವಾದ ಹಾಲ್, ಅದಕ್ಕೆ ಒಂದು ಅಟ್ಯಾಚ್ಡ್ ಬಾತ್‌ರೂಮ್ ಕಟ್ಟಿಸಿ ಸಿದ್ಧಮಾಡಿದ. ಆದರೆ ಅಲ್ಲಿಗೆ ಶಿಫ್ಟ್ ಆಗಲು ಪ್ರಸಾದನ ಅಜ್ಜಿ ತಾತ ಬಿಡಲಿಲ್ಲ. ಇನ್ನೂ ಸ್ವಲ್ಪ ಕಾಲ ಇಲ್ಲೇ ಇದ್ದು ಸಾಲಸೋಲವನ್ನು ತೀರಿಸಿಕೊಂಡು ನಂತರ ಹೋಗುವಿಯಂತೆ ಎಂದು ಸಲಹೆ ನೀಡಿದರು.
ಹೀಗಾಗಿ ಹೊಸಮನೆಯನ್ನು ಬಾಡಿಗೆಗೆ ಕೊಟ್ಟು ತಾನಿದ್ದ ಮನೆಯಲ್ಲೇ ಮುಂದುವರಿದ. ಅಷ್ಟೊತ್ತಿಗೆ ಚೆಲುವನಿಗೂ ಮದುವೆ ವಯಸ್ಸು ಮೀರಿ ಹೆಣ್ಣು ಸಿಗುವುದು ಕಷ್ಟವಾಯಿತು. ಆಗ ಚೆಲುವನ ಟ್ಯುಟೋರಿಯಲ್‌ನಲ್ಲಿ ಪಾಠ ಹೇಳುತ್ತಿದ್ದ ಶಿಕ್ಷಕ ಸಾಂಬಯ್ಯನ ಸೋದರಿ ಕಾವೇರಿಗೆ ಒಂದೆರಡು ಕಡೆ ಮದುವೆಯ ಮಾತುಕತೆಯಾಗಿ ಯಾವುದೂ ಮುಂದುವರೆಯದೆ ನಿಂತುಹೋಗಿತ್ತು. ನೊಂದ ಹೆಣ್ಣುಮಗಳು ತನ್ನ ಅತ್ತಿಗೆಯ ಕೈಕೆಳಗೆ ಮೂಕೆತ್ತಿನಂತೆ ದುಡಿಯುತ್ತಿದ್ದಾಳೆಂಬ ಸಂಗತಿ ಚೆಲುವನ ಕಿವಿಗೆ ಬಿದ್ದಿತ್ತು. ಈ ವಿಷಯದಲ್ಲಿ ಸಾಂಬಯ್ಯನು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದುದು ಸೇರಿತ್ತು. ಆಕೆಯನ್ನು ತನ್ನ ಬಾಳಸಂಗಾತಿಯಾಗಿ ಏಕೆ ಮಾಡಿಕೊಳ್ಳಬಾರದು ಎಂದು ಆಲೋಚಿಸಿ ತನ್ನ ಹೆತ್ತವರ ಕಿವಿಗೆ ಸುದ್ಧಿ ತಲುಪಿಸಿದ.

ಮಗನ ಅಭಿಪ್ರಾಯವನ್ನು ತಿಳಿದು ಅವರು ನಮ್ಮ ಹೈದನಿಗೂ ಮೂವತ್ತೈದರ ಮೇಲಾಯಿತು. ಆ ಹೆಣ್ಣುಮಗುವಿಗೂ ತಿಳಿದುಬಂದಂತೆ ಮೂವತ್ತರ ಆಸುಪಾಸು. ಜೋಡಿ ಸರಿಹೋಗುತ್ತದೆಂದು ಒಪ್ಪಿಗೆ ಇತ್ತರು. ಎರಡೂ ಕುಟುಂಬದ ಒಮ್ಮತದಿಂದ ಓಲಗ ಊದಿಸಿಯೇ ಬಿಟ್ಟರು. ಅಂತೂ ಚೆಲುವನ ಬದುಕು ಒಂದು ಘಟ್ಟ ಮುಟ್ಟಿತೆನ್ನಬಹುದು.

ಮನೆತುಂಬಿದ ಕಾವೇರಿಗೆ ಮಡಿಲು ತುಂಬಲು ಐದು ವರ್ಷ ಬೇಕಾಯಿತು. ಕೆಲವರು ಮೊಮ್ಮಕ್ಕಳನ್ನು ಕಾಣುವ ವಯಸ್ಸಿನಲ್ಲಿ ಚೆಲುವ, ಕಾವೇರಿ ದಂಪತಿಗಳು ಮಗಳನ್ನು ಪಡೆದರು. ಅವಳೇ ನಂದಿನಿ. ಮನೆಯವರಿಗೆಲ್ಲ ಮುದ್ದಿನ ಕಣ್ಮಣಿಯಾಗಿ ಬೆಳೆದಳು. ಅಷ್ಟು ಹೊತ್ತಿಗಾಗಲೆ ಚೆಲುವನ ಕುಟುಂಬ ಹೊಸಮನೆಗೆ ಬಂದಿದ್ದರು ಸ್ಥಿತಿಗತಿಗಳೂ ಬದಲಾಗಿದ್ದವು. ಮನೆಗೆಲಸಕ್ಕೆ ಆಳುಕಾಳುಗಳು, ಓಡಾಡಲು ಕಾರು, ಎಲ್ಲ ಆಧುನಿಕ ಸೌಲಭ್ಯಗಳೂ ಬಂದಿದ್ದವು. ಹೀಗಾಗಿ ನಂದಿನಿಗೆ ಯಾವುದಕ್ಕೂ ಕೊರತೆಯಿಲ್ಲದಂತೆ ಬೆಳೆದು ದೊಡ್ಡವಳಾದಳು. ಆದರೆ ಅವಳಿಗೆ ಓದಿನಲ್ಲಿ ಮಾತ್ರ ಆಸಕ್ತಿ ಇರಲಿಲ್ಲ. ಹಾಗೂ ಹೀಗೂ ಕುಂಟುತ್ತಾ ತೆವಳುತ್ತಾ ಮೆಟ್ರಿಕ್ ಮುಗಿಸಿ ಕಾಲೇಜಿನ ಮೆಟ್ಟಿಲು ಹತ್ತಿದ್ದಳು. ಮುಂದೆ ಪದವಿ ತರಗತಿಗಳ ಕತೆ ದೇವರೇ ಬಲ್ಲ. ಒಂದೊಂದು ವರ್ಷಕ್ಕೆ ಒಂದೊಂದು ಕೋರ್ಸ್ ಬದಲಾಯಿಸುತ್ತ ಯಾವುದನ್ನೂ ಪೂರ್ತಿಮಾಡದೇ ಗೆಳತಿಯರ ಕೂಟದಲ್ಲಿ ಜಾಲಿಯಾಗಿ ಮೋಜುಮಾಡುತ್ತ ಕಾಲಕಳೆಯುತ್ತಿದ್ದಳು. ಇದನ್ನು ಮನಗಂಡ ಮನೆಯ ಹಿರಿಯರು ನಂದಿನಿಯ ಹೆತ್ತವರೊಡನೆ ಸಮಾಲೋಚಿಸಿ ಅವಳಿಗೆ ವಿವಾಹ ಮಾಡುವುದೆಂದು ತೀರ್ಮಾನಿಸಿ ವರಾನ್ವೇಷಣೆಗೆ ತೊಡಗಿದರು.

ಚಿಕ್ಕಂದಿನಲ್ಲೇ ತಂದೆತಾಯಿಗಳನ್ನು ಕಳೆದುಕೊಂಡು ತನ್ನ ದೊಡ್ಡಪ್ಪ ದೊಡ್ಡಮ್ಮನವರ ಆಶ್ರಯದಲ್ಲಿದ್ದು ವಿದ್ಯಾಭ್ಯಾಸ ಮಾಡಿ ಇಂಜಿನಿಯರಿಂಗ್ ಪದವಿಪಡೆದು ತನ್ನದೇ ಸ್ವಂತ ಕನಸ್ಟ್ರನ್ ಕನ್ಸ್ಲ್ಟೆಂಟ್ ಆಫೀಸು ತೆರೆದು ತಾನೇ ಒಂದಿಷ್ಟು ಜನರಿಗೆ ಕೆಲಸ ನೀಡಿ ಬದುಕು ಕಟ್ಟಿಕೊಂಡಿದ್ದ ವಿಶ್ವನಾಥ್ ಅವರ ಕಣ್ಣಿಗೆ ಬಿದ್ದನು. ಅವನು ತಾವಿದ್ದ ಬೀದಿಯಿಂದ ಒಂದೆರಡು ಕ್ರಾಸುಗಳ ಮುಂದಿದ್ದ ಮನೆಯಲ್ಲಿದ್ದ. ಅವನ ಹಿನ್ನೆಲೆಯನ್ನೆಲ್ಲ ಅರಿತಿದ್ದುದರಿಂದ ಅವನ ದೊಡ್ಡಪ್ಪ ದೊಡ್ಡಮ್ಮನವರನ್ನು ಕೇಳೋಣವೆಂದು ನಿಶ್ಚಯಿಸಿ ತಾವೇ ಅವರ ಮನೆಗೆ ಹೋಗಿ ವಿಚಾರಿಸಿದರು. ತಮಗೆ ಜಾತಕ ಪಾತಕದಲ್ಲಿ ನಂಬಿಕೆಯಿಲ್ಲ. ನಿಮಗೆ ನಮ್ಮ ಹುಡುಗಿಯ ಜಾತಕ ಕೊಡುತ್ತೇವೆ. ನಿಮಗೆ ನಂಬಿಕೆಯಿದ್ದರೆ ತೋರಿಸಿ. ಸರಿಹೋದರೆ ನಿಮ್ಮ ಹುಡುಗನಿಗೆ ನಮ್ಮ ಮಗಳನ್ನು ಸ್ವಿಕರಿಸುತ್ತೀರಾ? ಎಂದು ಕೇಳಿದರು.

ನಂದಿನಿಯು ಅಪ್ಪನಂತೆ ಅಂದಗಾತಿ, ಒಬ್ಬಳೇ ಮಗಳು. ತಾವಾಗಿಯೇ ಮನೆವರೆಗೆ ಬಂದು ಕೇಳಿದ್ದಾರೆ. ಜಾತಕವನ್ನೂ ಕೊಟ್ಟಿದ್ದಾರೆ. ಸರಿಹೊಂದಿದರೆ ಯಾಕಾಗಬಾರದು ಎಂದು ವಿಶ್ವನ ಪೋಷಕರು ಅಲೋಚಿಸಿದರು. ಲಗುಬಿಗಿ ನೋಡಿಕೊಂಡು ತಮ್ಮ ಸಾಕುಮಗ ವಿಶ್ವನಾಥನನ್ನೂ ಕೇಳಿದರು. ಇದಕ್ಕೆ ಮೊದಲೇ ನಂದಿನಿಯನ್ನು ಕೆಲವು ಸಾರಿ ನೋಡಿದ್ದ ವಿಶ್ವ ಅವಳ ಅಂದಚಂದಕ್ಕೆ ಮರುಳಾಗಿದ್ದನಾದರೂ ತಿರುಗಾಟದ ಚಟಕ್ಕೆ ಬಿದ್ದ ಹುಡುಗಿ ಸಂಸಾರಮಾಡಬಲ್ಲಳೇ, ಅವಳ ಅಭಿಪ್ರಾಯವನ್ನೂ ತಿಳಿಯೋಣ. ಮನೆವರೆಗೆ ಬಂದ ಭಾಗ್ಯವನ್ನು ನಾನೇಕೆ ಒಮ್ಮೆಗೇ ಬೇಡವೆನ್ನಲಿ ಎಂದು ತಿಳಿಸಿದನು.
ಮನೆಯಲ್ಲಿ ತನ್ನ ಮದುವೆಗಾಗಿ ಪ್ರಯತ್ನಗಳು ನಡೆಯುತ್ತಿವೆ. ಸಮೀಪದಲ್ಲಿಯೇ ಇರುವ ಹಾಗೂ ಪರಿಚಿತನಾದ ವಿಶ್ವನಾಥ್‌ರೊಡನೆ ಎಂಬ ಸಂಗತಿ ಅರಿತ ನಂದಿನಿ ಮನದಲ್ಲೇ ಮಂಡಿಗೆ ತಿನ್ನುತ್ತಿದ್ದಳು. ತನಗೇನೂ ಗೊತ್ತಿಲ್ಲವೆಂಬಂತೆ ಸೋಗು ಹಾಕಿಕೊಂಡು ಮೊದಲಿನಂತೆಯೇ ತಿರುಗಾಟ ಮುಂದುವರಿಸಿದ್ದಳು. ತಂದೆತಾಯಿಗಳು ಅವಳಿಗೆ ವಿಷಯ ತಿಳಿಸಿ ಅವಳ ಅಭಿಪ್ರಾಯ ಕೇಳಿದರು. “ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ” ಎಂಬಂತಾಗಿ ಪುಸ್ತಕಗಳ ಕಟ್ಟನ್ನು ಅವತ್ತೇ ಪಕ್ಕಕ್ಕೆ ಸರಿಸಿ ಮದುವೆಗೆ ಸಿದ್ದಳೆಂದು ಹೇಳಿದಳು.

ಸರಿ ಮುಂದಿನದೆಲ್ಲ ಸರಾಗವಾಗಿ ನಡೆದು ನಂದಿನಿ ವಿಶ್ವನಾಥನ ಮಡದಿಯಾಗಿ ಅದೇ ಬಡಾವಣೆಯಲ್ಲಿದ್ದ ಗಂಡನ ಮನೆಗೆ ಗೃಹಿಣಿಯಾಗಿ ಕಾಲಿಟ್ಟಳು. ಅವಳ ಹುಡುಗುತನವನ್ನು ಮೊದಲಿಂದಲೂ ತಿಳಿದಿದ್ದ ವಿಶ್ವನಾಥನಿಗೆ ತನ್ನ ಮನೆಗೆ ಬಂದ ನಂತರ ಅವಳೆಷ್ಟರ ಮಟ್ಟಿಗೆ ಗೃಹಿಣಿಯಾಗಿ ನಿಭಾಯಿಸುತ್ತಾಳೆ ಎಂಬ ಸಂದೇಹವಿತ್ತು. ಆದರೆ ಅವಳ ನಡೆವಳಿಕೆಯಲ್ಲಿ ಅಗಾಧವಾದ ಬದಲಾವಣೆಯಾಯಿತು. ಅವಳು ಮನೆಯ ಹಿರಿಯರಿಗೆ ಗೌರವ ತೋರುವುದು, ಗೃಹಕೃತ್ಯಗಳಲ್ಲಿ ಭಾಗಿಯಾಗುವುದು, ತಾನೇನಾದರೂ ಹೊರಗಿನ ಕೆಲಸಕಾರ್ಯಕ್ಕಾಗಿ ಹೋದ ಸಮಯದಲ್ಲಿ ಆಫೀಸಿನ ಮೇಲ್ವಿಚಾರಣೆ ಮಾಡುವುದು ಇವೆಲ್ಲವನ್ನೂ ಕಂಡು ಅಚ್ಚರಿಯಾಯಿತು. ತನ್ನ ಸಂತೋಷವನ್ನು ಹತ್ತಿಕ್ಕಿಕೊಳ್ಳಲಾಗದೆ “ನಂದಿನಿ ಇಷ್ಟೆಲ್ಲಾ ತಿಳಿವಳಿಕೆ ನಿನಗಿದೆ ಎಂದು ನನಗೆ ಗೊತ್ತೇ ಇರಲಿಲ್ಲ. ನಾನು ಹುಡುಗಾಟದ ಹುಡುಗಿ ಎಂದು ತಿಳಿದಿದ್ದೆ” ಎಂದನು.

“ಅಯ್ಯೋ ನನಗೆ ಮೊದಲಿನಿಂದಲೂ ಓದುವುದರಲ್ಲಿ ಆಸಕ್ತಿ ಇರಲಿಲ್ಲ. ನಮ್ಮ ಅಪ್ಪನೋ ನಾನು ಚೆನ್ನಾಗಿ ಓದಿ ಪದವಿಗಳನ್ನು ಗಳಿಸಿ ಅವರು ಕಟ್ಟಿರುವ ಟ್ಯುಟೋರಿಯಲ್ ಮುಂದೆ ನಡೆಸಿಕೊಂಡು ಹೋಗು ಮಗಳೇ ಎಂದು ಪದೇಪದೆ ಹೇಳುತ್ತಿದ್ದರು. ಅದಕ್ಕೇ ಕಾಲೇಜಿನ ದಿನಗಳಲ್ಲಿ ಆರಾಮವಾಗಿದ್ದೆ.” ಎಂದಳು.
ಓ ಹಾಗೋ ಸಮಾಚಾರ, ಈಗ ಗೊತ್ತಾಯಿತು ನನ್ನ ಮನದನ್ನೆಯ ಒಳಗುಟ್ಟು. ನಾನೇನಾದರೂ ಬೇಡವೆಂದಿದ್ದರೆ ಇಂಥಹ ಮಾಣಿಕ್ಯವನ್ನು ಕಳೆದುಕೊಳ್ಳುತ್ತಿದ್ದೆ ಎಂದು ಮನದಲ್ಲಿ ಗೊಣಗಿಕೊಂಡು ಹೊರಗೆ “ಒಳ್ಳೆಯದಾಯಿತು ಬಿಡು. ಒಂದುವೇಳೆ ಆ ಕಡೆಗೆ ಗಮನ ಹರಿಸಿದ್ದರೆ ನೀನು ನನಗೆಲ್ಲಿ ಸಿಗುತ್ತಿದ್ದೆ” ಎಂದಿದ್ದ.

ಆ ಮನೆ ಈ ಮನೆ ಓಡಾಡಿಕೊಂಡೇ ಎರಡು ಮಕ್ಕಳ ತಾಯಿಯಾದಳು ನಂದಿನಿ. ಈ ಅವಧಿಯಲ್ಲಿ ಎರಡೂ ಮನೆಯ ಹಿರಿಯ ಜೀವಗಳು ದೈವಾಧೀನರಾದರು. ನಂದಿನಿಯ ತಂದೆ ಗಟ್ಟುಮುಟ್ಟಾಗಿ ಆರೋಗ್ಯದಿಂದಿದ್ದರೆ ತಾಯಿ ಕಾವೇರಿ ಯಾವಾಗಲೂ ಒಂದಲ್ಲ ಒಂದು ಖಾಯಿಲೆಯಿಂದ ನರಳುತ್ತಿದ್ದರು. ಅವಳ ತಂದೆ ಇದ್ದಾಗಲೇ ತಾನು ಹುಟ್ಟಿಬೆಳೆದ ಊರಾದ ಪಾಲಳ್ಳಿಯಲ್ಲಿದ್ದ ಗುರುತು ಪರಿಚಯದವರಾದ ನಿಂಗಪ್ಪ, ನಾಗಮ್ಮ ದಂಪತಿಗಳನ್ನು ಮೈಸೂರಿಗೆ ಕರೆತಂದು ಅವಳನ್ನು ನೋಡಿಕೊಳ್ಳಲು ವ್ಯವಸ್ಥೆ ಮಾಡಿದ್ದ. ಇದರಿಂದ ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅವರಿಗೂ ಒಂದು ಆಶ್ರಯ ದೊರೆತಂತಾಯಿತು. ಆ ದಂಪತಿಗಳು ಮನೆಗೆಲಸ ಮಾಡಿಕೊಂಡು ನಂದಿನಿಯ ತಾಯಿಯ ಅರೈಕೆಯನ್ನು ಬಹಳ ಮುತುವರ್ಜಿಯಿಂದ ಮಾಡತೊಡಗಿದರು. ಚೆಲುವ ಇದರಿಂದ ಸಂತೋಷಗೊಂಡು ತನ್ನ ಟ್ಯುಟೋರಿಯಲ್ ಕೆಲಸಗಳಿಗೆ ನೆಮ್ಮದಿಯಿಂದ ಪೂರ್ತಿಯಾಗಿ ತೊಡಗಿದ್ದ. ಈ ವ್ಯವಸ್ಥೆ ಕೆಲವು ವರ್ಷಗಳ ವರೆಗೆ ನಡೆಯಿತು. ನಂತರ ಚೆಲುವಯ್ಯನವರು ಹೃದಯಾಘಾತದಿಂದ ಇದ್ದಕ್ಕಿದ್ದಂತೆ ಕಾಲವಾದರು. ಇದರಿಂದ ನಂದಿನಿಯ ತಾಯಿ ಪೂರ್ಣವಾಗಿ ಹಾಸಿಗೆ ಹಿಡಿದುಬಿಟ್ಟರು. ಅವರು ಎಷ್ಟು ಹೇಳಿದರೂ ಮಗಳೊಟ್ಟಿಗೆ ಬಂದು ಇರಲು ಇಷ್ಟಪಡದೆ ತಮ್ಮ ಮನೆಯಲ್ಲಿ ಒಬ್ಬಂಟಿಯಾಗೇ ಇದ್ದರು. ನಿಂಗಪ್ಪ ದಂಪತಿಗಳು ಮನೆಯ ಪೂರ್ಣ ಜವಾಬ್ದಾರಿಯನ್ನು ನೋಡಿಕೊಳ್ಳುವಂತಾಯಿತು. ಅವರು ಈ ಮುದುಕಿ ಹೇಗಿದ್ದರೂ ಎದ್ದು ಬಂದು ತಮ್ಮನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದರಿತು ಅವರನ್ನು ಒಂದು ಬೆಡ್‌ರೂಮಿನಲ್ಲಿರಿಸಿ ಊಟ, ತಿಂಡಿಗಳನ್ನು ಅಲ್ಲಿಗೇ ಕೊಡುತ್ತಿದ್ದರು. ನಂತರ ಅವರ ಕೊಠಡಿಯ ಬಾಗಿಲನ್ನು ಹೊರಗಿನಿಂದ ಚಿಲುಕ ಹಾಕಿ ಉಳಿದ ಕೋಣೆಗಳು ಮತ್ತು ಹಾಲ್‌ನಲ್ಲಿ ಒಂದು ಜೂಜು ಅಡ್ಡೆಯನ್ನೇ ಸೃಷ್ಟಿಸಿಬಿಟ್ಟಿದ್ದರು. ಹಲವಾರು ಆಸಕ್ತರು ಅಲ್ಲಿಗೆ ಬಂದು ಜೂಜಾಡುವುದರಲ್ಲಿ ಶಾಮೀಲಾಗುತ್ತಿದ್ದರು. ಅವರಿಗೆ ಬೇಕಾದ ತಿನಿಸು, ಪಾನೀಯಗಳನ್ನು ನಿಂಗಪ್ಪ ದಂಪತಿಗಳು ಹೋಟೆಲ್, ಅಂಗಡಿಗಳಿಂದ ತಂದು ಒದಗಿಸುತ್ತಿದ್ದರು. ಇದರಿಂದ ಸಾಕಷ್ಟು ಹಣವನ್ನು ಸಂಪಾದಿಸಿಕೊಳ್ಳುತ್ತಿದ್ದರು. ಯಾರಾದರೂ ಬರುತ್ತಾರೆಂದು ತಿಳಿದರೆ ಆ ತಕ್ಷಣ ವ್ಯವಹಾರಗಳನ್ನು ನಿಲ್ಲಿಸಿ ಸಾಮಾನ್ಯವಾಗಿ ಕಾವೇರಿಯ ಆರೈಕೆ ಮಾತುಕತೆಗಳು ನಡೆಯುತ್ತಿದ್ದವು. ಇದರಿಂದ ಬಂದವರಿಗೆ ಯಾವ ಅನುಮಾನವೂ ಬರುತ್ತಿರಲಿಲ್ಲ. ಅಶಕ್ತರಾಗಿದ್ದ ಕಾವೇರಿ ಅವರನ್ನೇ ಆಶ್ರಯಿಸಿದ್ದರಿಂದ ಏನೂ ಕಂಪ್ಲೇಂಟ್ ಹೇಳುತ್ತಿರಲಿಲ್ಲ. ಅವರ ಮನಸ್ಸಿನಲ್ಲಿ ಮಗಳು ಅಳಿಯನ ಮನೆಯಲ್ಲಿ ಉಳಿಯುವುದು ಅವಮಾನಕರ, ಜನರು ಆಡಿಕೊಳ್ಳುತ್ತಾರೆ ಎಂಬ ಮಾತು ಭದ್ರವಾಗಿ ಮನೆಮಾಡಿತ್ತು. ಅದೇ ಕಾರಣದಿಂದ ಅವರು ನಂದಿನಿ ಎಷ್ಟು ಪ್ರಯತ್ನ ಮಾಡಿದರೂ ಅವಳ ಮನೆಗೆ ಹೋಗಲು ಒಪ್ಪಿರಲಿಲ್ಲ. ಈಗ ಮನೆಯಲ್ಲಿ ತಾಯಿಗೆ ತಿಳಿಯದಂತೆ ನಡೆಯುತ್ತಿದ್ದ ಕುಕೃತ್ಯಗಳ ಬಗ್ಗೆ ಕೆಲಸದವಳಿಂದ, ಅಕ್ಕಪಕ್ಕದವರಿಂದ ಕೇಳಿ ತಿಳಿದುಕೊಂಡ ನಂದಿನಿಗೆ ಅವರಿಬ್ಬರನ್ನು ಅಲ್ಲಿಂದ ಉಚ್ಛಾಟಿಸಲು ಒಳ್ಳೆಯ ಕಾರಣ ಸಿಕ್ಕಿತ್ತು.

ಮಾಯಮ್ಮ ಹೇಳಿಕೊಟ್ಟ ಉಪಾಯದಂತೆ ಅದನ್ನು ಕಾರ್ಯರೂಪಕ್ಕೆ ತರಲು ಸರಿಯಾದ ಸಮಯವೆಂದು ಗಡಿಯಾರದ ಕಡೆ ನೋಡಿದಳು ನಂದಿನಿ. ಹನ್ನೆರಡೂವರೆ. ಮಕ್ಕಳು ಮನೆಗೆ ಬರುವುದು ಸಂಜೆಗೇ, ಗಂಡ ವಿಶ್ವನಾಥ್ ಮೀಟಿಂಗ್ ಇದೆಯೆಂದದ್ದರಿಂದ ಎಷ್ಟೊತ್ತಿಗೆ ಬರುತ್ತಾರೋ ತಿಳಿದು. ಅಷ್ಟರಲ್ಲಿ ಒಂದ್ಹೆಜ್ಜೆ ಇದ್ದಕ್ಕಿದ್ದಂತೆ ಮುನ್ಸೂಚನೆ ಇಲ್ಲದಂತೆ ತಾಯಿಯ ಮನೆಗೆ ಹೋಗಿ ಬಂದು ಬಿಡೋಣವೆಂದು ಮನೆಗೆ ಬೀಗ ಹಾಕಿ ದ್ವಿಚಕ್ರ ವಾಹನ ಇದ್ದರೂ ಕಾಲ್ನಡಿಗೆಯಿಂದಲೇ ಹೋಗುವುದೊಳ್ಳೆಯದೆಂದು ನಡೆದುಕೊಂಡೇ ಹೊರಟಳು.

ಮನೆ ತಲುಪಿತ್ತಿದ್ದಂತೆ ಅವಳಿಗೆ ಕಣ್ಣಿಗೆ ಬಿದ್ದಿದ್ದು ಹಾರುಹೊಡೆದಿದ್ದ ಗೇಟು. ಮತ್ತು ಬೀಗ ಹಾಕಿದ್ದ ಮುಂಬಾಗಿಲು. ಕಿಟಕಿಗಳು ಮುಚ್ಚಿದ್ದವು. ನಿಧಾನವಾಗಿ ಬೆಕ್ಕಿನ ಹೆಜ್ಜೆಯಲ್ಲಿ ಸರಿಯುತ್ತಾ ತನ್ನ ಬಳಿಯಿದ್ದ ಇನ್ನೊಂದು ಬೀಗದಕೈಯಿಂದ ಬೀಗ ತೆರೆದು ಒಳಹೊಕ್ಕಳು. ಲೈಟುಗಳು ಉರಿಯುತ್ತಿದ್ದವು. ಒಳಗಿನ ಕೋಣೆಯಲ್ಲಿ ಸದ್ದುಗಳು. ಮೆತ್ತಗೆ ಇಣುಕಿದಳು. ಅಲ್ಲಿ ಕಂಡ ದೃಶ್ಯ, ಅವಳ ಊಹೆ, ಅಕ್ಕಪಕ್ಕದವರ ಮಾತುಗಳು, ಮಾಯಮ್ಮನ ಎಚ್ಚರಿಕೆಯ ನುಡಿಗಳನ್ನು ಪುಷ್ಟೀಕರಿಸುವಂತಿತ್ತು. ಫೋನ್ ಮಾಡದೆ ಆಕಸ್ಮಿಕವಾಗಿ ಒಳಬಂದಿದ್ದ ಚಿಕ್ಕ ಯಜಮಾನಿಯನ್ನು ಕಂಡು ಕಕ್ಕಾಬಿಕ್ಕಿಯಾದರು ನಿಂಗಪ್ಪ ದಂಪತಿಗಳು. ಅಲ್ಲಿ ಇಸ್ಪೀಟಾಟದಲ್ಲಿ ಮಗ್ನರಾಗಿದ್ದ ಗುಂಪು ಎದ್ದು ಮಿಂಚಿನ ಓಟದಲ್ಲಿ ನಂದಿನಿಯನ್ನು ತಳ್ಳಿಕೊಂಡೇ ಬಾಗಿಲು ಮುಖಾಂತರ ಓಡಿದರು. ನಖಶಿಖಾಂತವಾಗಿ ಕೋಪಾವಿಷ್ಟಳಾದ ನಂದಿನಿ ಸುತ್ತಲೂ ಕಣ್ಣಾಡಿಸಿದಳು. ಸುತ್ತಮುತ್ತ ಬಿದ್ದಿದ್ದ ಸಿಗರೇಟಿನ ತುಂಡುಗಳು, ಖಾಲಿ ಕಾಫಿ ಗ್ಲಾಸುಗಳು, ಒಂದೆಡೆ ಕೂಡಿಹಾಕಿದ್ದ ಬಾಟಲುಗಳು ಅವಳಿಗೆ ಅಸಹ್ಯವನ್ನು ಉಂಟುಮಾಡಿದ್ದವು. ಅಷ್ಟರಲ್ಲಿ ಕಂಗಾಲಾಗಿದ್ದ ದಂಪತಿಗಳು ಏನೋ ಹೇಳಲು ಬಾಯಿತೆಗೆದರು.

ನಂದಿನಿ ಏನನ್ನೂ ಕೇಳಲು ಸಿದ್ಧಳಿರಲಿಲ್ಲ. ಆವೇಶಕ್ಕೊಳಗಾದವಳಂತೆ ಸಿಟ್ಟಿನಿಂದ ಕುದಿಯುತ್ತ ತನ್ನ ಮೊಬೈಲಿನಿಂದ ಅಲ್ಲಿನ ದೃಶ್ಯಾವಳಿಗಳನ್ನು ನಾಲ್ಕೈದು ಫೋಟೋಗಳಲ್ಲಿ ಸೆರೆಹಿಡಿದಳು. “ಈ ಫೋಟೋ ಸಮೇತ ಪೋಲೀಸರಿಗೆ ಕಂಪ್ಲೇಂಟ್ ಕೊಡುತ್ತೇನೆ. ಅವರೇ ನಿಮಗೆ ಸರಿಯಾದ ಪಾಠ ಕಲಿಸುತ್ತಾರೆ. ಬೇಡವೆಂದರೆ ನಿಮ್ಮ ಗಂಟುಮೂಟೆ ಕಟ್ಟಿ ಈಗಿಂದೀಗಲೇ ಇಲ್ಲಿಂದ ಜಾಗ ಖಾಲಿಮಾಡಿ. ಮತ್ತೆ ಮುಖ ತೋರಿಸಬೇಡಿ. ಕಾಣಿಸಿಕೊಂಡರೆ ಪರಿಣಾಮ ನೆಟ್ಟಗಾಗದು.” ಎಂದು ಹೇಳಿದಳು. ಅವರಾಗಲೇ ಗಂಟುಮೂಟೆ ಸಮೇತ ಸಿದ್ಧರಾದರು. ತನ್ನಮ್ಮನ ಕೋಣೆಗೆ ಹೋಗಿ “ಅಮ್ಮಾ ಇಲ್ಲೇನು ನಡೆಯುತ್ತಿತ್ತು ನಿಮಗೆ ತಿಳಿದಿತ್ತೋ ಇಲ್ಲವೋ ಗೊತ್ತಿಲ್ಲ. ಇವರ ಸೇವೆ ಸಾಕು. ನಿಮಗೆ ನಮ್ಮ ಮನೆಯಲ್ಲೇ ಇರುವುದು ಇಷ್ಟವಾಗದಿದ್ದರೆ ಹಿಂದುಗಡೆಯಿರುವ ಔಟ್‌ಹೌಸಿನಲ್ಲಿ ಪ್ರತ್ಯೇಕವಾಗಿರಿ. ಊಟತಿಂಡಿ ಆರೈಕೆ ವ್ಯವಸ್ಥೆ ನಾನು ಮಾಡುತ್ತೇನೆ. ಹೀಗೆಯೇ ಇವರನ್ನು ಬಿಟ್ಟರೆ ಮುಂದೊಂದು ದಿನ ನಿಮ್ಮ ಪ್ರಾಣಕ್ಕೇ ಅಪಾಯ ಮಾಡಬಹುದು.” ಎಂದು ಮಾಯಮ್ಮನಿಗೆ ಫೋನ್ ಮಾಡಿದಳು. ಅವಳಿಗೆ ಬಂದು ಮನೆಯನ್ನೆಲ್ಲ ಕ್ಲೀನ್ ಮಾಡಲು ತಿಳಿಸಿದಳು. ಕಾವೇರಿ ಮಲಗಿದ್ದವರು ಮಗಳ ಮಾತಿಗೆ ಎದ್ದು ತಲೆ ಆಡಿಸಿ ತಮ್ಮ ಸಮ್ಮತಿ ಸೂಚಿಸಿದರು.

ಮಾಯಮ್ಮನ ಕಿವಿಮಾತಿನ ಪ್ರಕಾರ ಆಪರೇಷನ್ ನಡೆಸಿ ನಂದಿನಿ, ಕುಕೃತ್ಯ ನಡೆಸುತ್ತಿದ್ದ ನಿಂಗಪ್ಪ ದಂಪತಿಗಳನ್ನು ಆ ಮನೆಯಿಂದ ಉಚ್ಛಾಟಿಸುವ ಕಾರ್ಯ ಸುಸೂತ್ರವಾಗಿ ನಡೆಸಿ ಅಮ್ಮನನ್ನು ಮನೆಗೆ ಕರೆತಂದಳು.

ಬಿ.ಆರ್.ನಾಗರತ್ನ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *