ಪರಾಗ

ವಾಟ್ಸಾಪ್ ಕಥೆ 76 : ಸಮಸ್ಯೆ-ಪರಿಹಾರ.

Share Button


ಒಂದೂರಿನಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿಯಿದ್ದನು. ಅವನು ಬಹಳ ಬುದ್ಧಿಶಾಲಿ. ತನ್ನೆಲ್ಲ ವ್ಯವಹಾರಗಳನ್ನು ಚತುರತೆಯಿಂದ ನಿರ್ವಹಿಸುತ್ತಾ ಸಾಕಷ್ಟು ಹಣವನ್ನು ಗಳಿಸಿದ್ದ. ಮನೆ, ಮಡದಿ, ಮಕ್ಕಳು ಎಲ್ಲ ವಿಷಯಗಳಲ್ಲೂ ಅವನು ಅದೃಷ್ಟವಂತನಾಗಿದ್ದ. ಆದರೂ ಅವನು ಸಂತೋಷವಾಗಿರುವ ಬದಲು ಯಾವಾಗಲೂ ಅತೃಪ್ತಿ, ಅಸಹನೆಯಿಂದ ಪೀಡಿತನಾಗಿದ್ದ.

ಒಮ್ಮೆ ಕೆಲವು ಜನರು ಅವನ ಅಂಗಡಿಗೆ ಬಂದವರು ಸಂದರ್ಭಾನುಸಾರವಾಗಿ ಪಕ್ಕದೂರಿನಲ್ಲಿರುವ ಸಾಧುಗಳೊಬ್ಬರ ಬಗ್ಗೆ ಮಾತನಾಡಿದರು. ಅವರು ಮಹಾತ್ಮರು, ಎಂಥಹ ಸಮಸ್ಯೆಗೂ ಸೂಕ್ತ ಪರಿಹಾರ ಸೂಚಿಸುತ್ತಾರೆ. ನೂರಾರು ಜನರು ಪರವೂರುಗಳಿಂದ ಅವರ ಬಳಿಗೆ ಸಲಹೆ ಪಡೆಯಲು ಬರುತ್ತಾರೆ ಎಂಬ ಸುದ್ಧಿಯನ್ನು ಹೇಳಿದರು. ಶ್ರೀಮಂತನಿಗೆ ನಾನೂ ಏಕೆ ಒಂದು ಬಾರಿ ಅವರ ಬಳಿಗೆ ಹೋಗಿ ಬರಬಾರದೆಂಬ ಆಲೋಚನೆ ಬಂದಿತು.

ಬಿಡುವು ಮಾಡಿಕೊಂಡು ಶ್ರೀಮಂತನು ಒಂದು ಮಧ್ಯಾಹ್ನ ಅಂಗಡಿ ಮುಚ್ಚಿ ಪಕ್ಕದೂರಿಗೆ ಹೋದ. ಅಲ್ಲಿ ಗುರುಗಳ ಆಶ್ರಮ ವಿಶಾಲವಾಗಿತ್ತು. ಬಹಳಷ್ಟು ಜನ ಭಕ್ತರು ಅವರ ದರ್ಶನ ಮತ್ತು ಸಲಹೆ ಕೇಳಲು ಬಂದಿದ್ದರು. ಪಕ್ಕದಲ್ಲೇ ಗೋಶಾಲೆ ಕೂಡ ಇತ್ತು. ಬಂದವರ ಸಾಲಿನಲ್ಲಿ ಶ್ರೀಮಂತನೂ ನಿಂತುಕೊಂಡ. ಒಬ್ಬರಾದ ಮೇಲೆ ಒಬ್ಬರಂತೆ ಸರದಿಯ ಪ್ರಕಾರ ಗುರುದರ್ಶನಕ್ಕೆ ಅವಕಾಶ ಸಿಗುತ್ತಿತ್ತು. ಶ್ರೀಮಂತನ ಸರದಿ ಬರುವಷ್ಟರಲ್ಲಿ ಸಂಜೆ ಕತ್ತಲಾವರಿಸಿಕೊಂಡಿತು. ಗುರುಗಳ ಬಳಿಗೆ ಹೋದವನನ್ನು ಗುರುಗಳು ಪರಿಚಯ ಮಾಡಿಕೊಂಡರು. ಅವನ ಸಮಸ್ಯೆಯನ್ನು ವಿವರವಾಗಿ ಕೇಳಿದರು. ನಂತರ “ಮಹನೀಯರೇ, ಹೇಗೂ ಸಾಯಂಕಾಲ ಬಹುಹೊತ್ತಾಗಿದೆ. ಈದಿನ ರಾತ್ರಿ ಇಲ್ಲೇ ಇದ್ದು ನಾನು ಹೇಳುವ ಒಂದು ಕೆಲಸ ಮಾಡಿ. ನಾಳೆ ಬೆಳಗ್ಗೆ ನಿಮ್ಮ ಸಮಸ್ಯೆಗೆ ನಾನು ಪರಿಹಾರ ತಿಳಿಸುತ್ತೇನೆ” ಎಂದರು. ಶ್ರೀಮಂತನಿಗೆ ಕೆಲಸವೇನೆಂದು ತಿಳಿಯದೆ “ಆಯಿತು ಗುರುಗಳೇ” ಎಂದು ಒಪ್ಪಿಕೊಂಡ.

ಗುರುಗಳು “ನೋಡಿ ಈದಿನ ನಮ್ಮ ಗೋಶಾಲೆಯನ್ನು ನೋಡಿಕೊಳ್ಳುವ ಮನುಷ್ಯ ಬಂದಿಲ್ಲ. ನೀವು ಇವತ್ತು ರಾತ್ರಿ ಗೋಶಾಲೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಬೇಕು. ನಾಳೆ ಬೆಳಗ್ಗೆ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸಿ ನಿಮ್ಮನ್ನು ಕಳುಹಿಸುತ್ತೇನೆ” ಎಂದು ಹೇಳಿದರು. ಬೇರೆ ಮಾರ್ಗವಿಲ್ಲದೆ ಅಲ್ಲೇ ರಾತ್ರಿ ಉಳಿಯಬೇಕಾಯಿತು.

ಗೋಶಾಲೆಯಲ್ಲಿ ಸುಮಾರು ಮೂವತ್ತು ಹಸು, ಕರುಗಳಿದ್ದವು. ಅವುಗಳಲ್ಲಿ ಕೆಲವು ಮಲಗಿದ್ದವು, ಕೆಲವು ಮೇವು ತಿನ್ನುತ್ತಿದ್ದವು, ಇನ್ನು ಕೆಲವು ಸುಮ್ಮನೆ ನಿಂತಿದ್ದವು. ಶ್ರೀಮಂತನಿಗೆ ಎಂದೂ ಹಸುಗಳನ್ನು ನೋಡಿಕೊಂಡ ಅಭ್ಯಾಸವಿರಲಿಲ್ಲ. ಆದರೂ ಗುರುಗಳ ಆಜ್ಞೆಯಂತೆ ಒಂದು ದಿನ ತಾನೇ ಎಂದು ರಾತ್ರಿಯೆಲ್ಲ ನಿದ್ರೆಗೆಟ್ಟು ಕಾಲಕಾಲಕ್ಕೆ ಹಸುಗಳಿಗೆ ಹುಲ್ಲು, ನೀರು ಒದಗಿಸುತ್ತ ಕಾಲಹಾಕಿದ. ಬೆಳಕು ಕಾಣಿಸಿತು. ಸೂರ್ಯೋದಯದ ಕಾಲಕ್ಕೆ ಗುರುಗಳೇ ಗೋಶಾಲೆಗೆ ಬಂದರು. “ಏನಪ್ಪಾ ಚೆನ್ನಾಗಿ ನಿದ್ರೆ ಮಾಡಿದಿರಾ?” ಎಂದು ಪ್ರಶ್ನಿಸಿದರು. ಅದಕ್ಕೆ ಶ್ರೀಮಂತನು “ಎಲ್ಲ್ಲಿಯ ನಿದ್ರೆ ಸ್ವಾಮಿ. ಒಂದು ಕಡೆಯಿಂದ ಹುಲ್ಲ್ಲು ನೀರು ಕೊಟ್ಟು ಮುಗಿಸುವ ವೇಳೆಗೆ ಇನ್ನೊಂದು ಕಡೆಯಿಂದ ಹಸುಗಳು ಎದ್ದು ನಿಲ್ಲುತ್ತಿದ್ದವು. ಅವುಗಳನ್ನು ಸುಧಾರಿಸುವಷ್ಟರಲ್ಲಿ ಬೆಳಕೇ ಆಗಿಬಿಟ್ಟಿತು. ನಿದ್ರೆ ಮಾಡಲು ಸಮಯವೇ ಸಿಗಲಿಲ್ಲ” ಎಂದನು.

ಅದಕ್ಕೆ ಗುರುಗಳು “ಇದೊಂದು ಸಣ್ಣ ಕೆಲಸ ನಿಮಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು. ನಮ್ಮ ಗೋಶಾಲೆ ನೋಡಿಕೊಳ್ಳುವವರು ವರ್ಷಗಟ್ಟಲೆಯಿಂದ ಈ ಕೆಲಸವನ್ನು ಬೇಸರವಿಲ್ಲದೆ ಮಾಡುತ್ತಿದ್ದಾರೆ. ಎಂದೂ ಯಾವ ತೊಂದರೆಯನ್ನೂ ಹೇಳಿಕೊಂಡಿಲ್ಲ. ಹೀಗೆ ಬದುಕಿನಲ್ಲಿ ನಮಗೆ ಸಮಸ್ಯೆಗಳು ಅನೇಕ ರೀತಿಯವು ಬರುತ್ತಲೇ ಇರುತ್ತವೆ. ಕೆಲವು ಸಮಸ್ಯೆಗಳು ದಿನಗಳೆದಂತೆ ತಾವೇ ಮಾಯವಾಗುತ್ತವೆ. ಏನೂ ಮಾಡಬೇಕಿಲ್ಲ. ಕೆಲವನ್ನು ನಾವೇ ಪ್ರಯತ್ನಪೂರ್ವಕವಾಗಿ ಪರಿಹರಿಸಿಕೊಳ್ಳಬೇಕು. ಇನ್ನೂ ಕೆಲವಕ್ಕೆ ಪರಿಹಾರ ಸಿಗುವುದೇ ಇಲ್ಲ. ಅವನ್ನು ತಲೆಗೆ ಹಚ್ಚಿಕೊಳ್ಳಬಾರದು. ಕೆಲವಂತೂ ಸಮಸ್ಯೆಗಳೇ ಅಲ್ಲ. ನಾವೇ ಸಾಸಿವೆಯನ್ನು ಗುಡ್ಡದಷ್ಟು ಮಾಡಿಕೊಂಡು ಒದ್ದಾಡುತ್ತೇವೆ. ಅವನ್ನು ಮರೆತು ಬಿಡಬೇಕು. ನಿಮಗೆ ಸಕಲ ಸೌಕರ್ಯಗಳೂ ದೊರಕಿವೆ. ಉತ್ತಮವಾದ ರೀತಿಯಲ್ಲಿ ಜೀವನ ನಡೆಸುತ್ತಿದ್ದೀರಿ, ಇರುವುದರಲ್ಲಿ ತೃಪ್ತಿಹೊಂದುವ ಬದಲಿಗೆ ನೀವೇ ಸಮಸ್ಯೆಗಳನ್ನು ಊಹಿಸಿಕೊಂಡು ಸಂಕಟಪಡುತ್ತೀರಿ, ಅದಕ್ಕೆ ಪರಿಹಾರ ನಿಮ್ಮಲ್ಲಿಯೇ ಇದೆ. ಮನಸ್ಸಿನಲ್ಲಿ ಹುಡುಕಬೇಕು. ಸಣ್ಣ ಸಮಸ್ಯೆಯನ್ನು ಭೂತಾಕಾರವಾಗಿ ಕಲ್ಪಿಸಿಕೊಂಡು ಮತಿಗೆಡುವುದರ ಬದಲಿಗೆ ಸಮಸ್ಯೆಯನ್ನು ಸಮಸ್ಯೆಯೆಂದೇ ಬಹಳ ಕಾಲ ಮುಂದುವರಿಸಿದರೆ ಅದು ಕಾಡುತ್ತದೆ. ಅದರ ಬದಲು ಸಣ್ಣದಾಗಿರುವಾಗಲೇ ಅದನ್ನು ನೀವೇ ಪರಿಹರಿಸಿಕೊಂಡರೆ ಅದು ದೂರಾಗುತ್ತದೆ. ವ್ಯಾವಹಾರಿಕವಾಗಿ ನಿಮಗೆ ಯಾವುದೇ ಗಹನವಾದ ಸಮಸ್ಯೆಯಿಲ್ಲ. ನೀವು ಹೆಚ್ಚುಹೆಚ್ಚು ಕಾಲವನ್ನು ಕುಟುಂಬದವರೊಡನೆ ಕಳೆಯಲು ಪ್ರಯತ್ನಿಸಿ. ಅವರೊಡನೆ ನಿಮ್ಮ ನೋವು, ನಲಿವುಗಳನ್ನು ಹಂಚಿಕೊಳ್ಳಿರಿ. ಆಗ ಖಂಡಿತವಾಗಿಯೂ ನಿಮ್ಮ ಬದುಕು ಸುಂದರವಾಗುತ್ತದೆ” ಎಂದು ಸಲಹೆ ನೀಡಿದರು. ಗುರುಗಳಿಗೆ ವಂದಿಸಿ ಅವನು ತನ್ನೂರಿಗೆ ಹಿಂತಿರುಗಿದನು.

ಶ್ರೀಮಂತನಿಗೆ ತನ್ನ ತಪ್ಪಿನ ಅರಿವಾಯಿತು. ಅವನು ತನ್ನ ವ್ಯವಹಾರದಲ್ಲಿಯೇ ಮುಳುಗಿದ್ದು ಪತ್ನಿ, ಮಕ್ಕಳು, ತಂದೆ, ತಾಯಿಯರೊಡನೆ ಮಾತನ್ನೂ ಸರಿಯಾಗಿ ಆಡುತ್ತಿರಲಿಲ್ಲ. ಯಾವಾಗಲೂ ಒತ್ತಡದಲ್ಲಿಯೇ ಮುಖ ಗಂಟಿಕ್ಕಿಕೊಳ್ಳುತಿದ್ದ, ಗುರುಗಳ ಮಾತಿನಂತೆ ಅವನ ದಿನಚರಿ ಬದಲಾಯಿತು. ಅವನ ಕುಟುಂಬದವರೆಲ್ಲ ಅವನಿಗೆ ಸಂತೋಷವಾಗುವಂತೆ ನಡೆದುಕೊಳ್ಳುತ್ತಿದ್ದರು. ಅವನಿಗೆ ನಿಜವಾದ ಆನಂದದ ಅರಿವಾಗಿ ಸುಖವಾಗಿದ್ದನು. ಸಮಸ್ಯೆ ಪರಿಹಾರವಾಗಿತ್ತು.

ಸಂಗ್ರಹಣೆ ಮತ್ತು ರೇಖಾಚಿತ್ರ ರಚನೆ : ಬಿ.ಆರ್.ನಾಗರತ್ನ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *