ಕಾಶಿಯಾತ್ರೆ.. ಗಂಗಾರತಿ.. ಭಾಗ -1/3
ಉತ್ತರ ಭಾರತ ಪ್ರವಾಸದಲ್ಲಿದ್ದ ನಮ್ಮ ತಂಡ 27 ಫೆಬ್ರವರಿ 2017 ರಂದು ವಾರಣಾಸಿಯ ದರ್ಶನಕ್ಕೆ ಅಣಿಯಾಗಿತ್ತು. ಅಲ್ಲಿ ನಾವು ಉಳಕೊಂಡಿದ್ದ ಹೋಟೆಲ್ ನ ಹೆಸರು ಪದ್ಮಿನಿ ಇಂಟರ್ನ್ಯಾಶನಲ್.
ನಮ್ಮ ಟ್ರಾವೆಲ್ಸ್ ನ ಮುಖ್ಯಸ್ಥ ಗಿರೀಶ್ ಅವರು ಎಲ್ಲರನ್ನೂ ಉದ್ದೇಶಿಸಿ “ ನಾವಿನ್ನು ಕಾಶಿಗೆ ಹೋಗ್ತೀವಿ. ಅಲ್ಲಿ ಕ್ಯಾಮೆರಾ, ಮೊಬೈಲ್ , ಬ್ಯಾಗ್ , ಪೆನ್ನು ಕೂಡ ಒಳಗೆ ಬಿಡುವುದಿಲ್ಲ. ಏನನ್ನೂ ತೆಗೆದುಕೊಂಡು ಹೋಗುವುದು ಬೇಡ. ಮೊದಲು ಹನುಮಾನ್ ಘಾಟ್ ಗೆ ಹೋಗ್ತೀವಿ . ಅಲ್ಲಿ ಗಂಗಾಸ್ನಾನ ಮಾಡುವವರು ಸ್ನಾನ ಮಾಡಿ ಸಿದ್ಧರಾಗಿ. ಬೆಳಗಿನ ಉಪಾಹಾರ ಅಲ್ಲಿಗೇ ಬರುತ್ತದೆ. ಉಪಾಹಾರದ ನಂತರ ದೋಣಿಯ ಮೂಲಕ ಮಣಿಕರ್ಣಿಕಾ ಘಾಟ್ ಪಕ್ಕದಲ್ಲಿರುವ ದಾರಿಯ ಮೂಲಕ ಕಾಶಿ ದೇವಸ್ಥಾನಕ್ಕೆ ಹೋಗೋಣ. ಪಕ್ಕದಲ್ಲಿಯೇ ವಿಶಾಲಾಕ್ಷಿ ಮತ್ತು ಅನ್ನಪೂರ್ಣ ದೇವಾಲಯಗಳಿವೆ. ಒಂದು ಕಡೆ ಚಪ್ಪಲಿ ಬಿಡುವ ವ್ಯವಸ್ಥೆ ಮಾಡ್ತೀವಿ. ಅಲ್ಲಿ ಲಾಕರ್ ಕೂಡ ಇರುತ್ತದೆ ನಿಮ್ಮ ಬ್ಯಾಗ್ ಇರಿಸಬಹುದು.
ಈವತ್ತು ಸೋಮವಾರ, ತುಂಬಾ ರಶ್ ಇರುತ್ತದೆ, ಅಲ್ಲಿ ಬಹಳಷ್ಟು ಗಲ್ಲಿಗಳಿವೆ, ಎಲ್ಲಿಗೆ ಹೋಗುತ್ತೇವೆ, ಎಲ್ಲಿಂದ ಬರುತ್ತೇವೆ ಅಂತ ಗೊತ್ತಾಗಲ್ಲ, ದಾರಿ ತಪ್ಪಿ ಗಲ್ಲಿಗಳಲ್ಲಿಯೇ ಸುತ್ತಾಡುವ ಹಾಗೆ ಆದರೆ ಕಷ್ಟ ಆಗುತ್ತೆ , ಆದರೆ ಯಾರೂ ಭಯಪಡಬೇಕಾಗಿಲ್ಲ, ಎಲ್ಲರೂ ಕಡ್ಡಾಯವಾಗಿ, ಈ ಹೋಟೆಲ್ ನ ಕಾರ್ಡ್ ಇಟ್ಟುಕೊಳ್ಳಿ. ಒಂದು ಮನೆಯಿಂದ 3-4 ಜನ ಬಂದಿದ್ದರೆ, ಪ್ರತಿಯೊಬ್ಬರೂ ಕಾರ್ಡ್ ಇಟ್ಟುಕೊಳ್ಳಲೇಬೇಕು, ಕಾರ್ಡ್ ಮನೆಯವರ ಬಳಿ ಇದೆ ಅಂತ ಸುಮ್ಮನಾಗಬೇಡಿ, ಅಕಸ್ಮಾತ್ ಅಲ್ಲಿ ಗ್ರೂಪ್ ನಿಂದ ಬೇರ್ಪಟ್ಟರೆ, ಪೋಲೀಸ್ ನವರ ಬಳಿ ಮುಖ್ಯರಸ್ತೆಗೆ ಹೇಗೆ ಹೋಗುವುದು ಅಂತ ಕೇಳಿ. ಅವರು ಹೇಳಿದ ಕಡೆಯಿಂದ ಬನ್ನಿ, ಮೈನ್ ರೋಡ್ ನಲ್ಲಿ ಆಟೊ ಹಿಡಿದು ಡ್ರೈವರ್ ಗೆ ಹೋಟೆಲ್ ನ ಕಾರ್ಡ್ ತೋರಿಸಿ, ಸೀದಾ ಇಲ್ಲಿಗೇ ಬನ್ನಿ..’ ಹೀಗೆ ಸಾಕಷ್ಟು ಮುನ್ನೆಚ್ಚರಿಕೆ, ಸಲಹೆ ಕೊಟ್ಟಿದ್ದರು.
ಆಟೋದಲ್ಲಿ ಗಂಗಾನದಿ ತೀರದ ಹನುಮಾನ್ ಘಾಟ್ ಗೆ ಬಂದೆವು. ಹೆಚ್ಚಿನವರು ಗಂಗಾಸ್ನಾನ ಮಾಡಿ ಅತ್ತಿತ್ತ ನೋಡುತ್ತಿರುವಾಗ ಬೆಳಗಿನ ಉಪಾಹಾರ ಅಲ್ಲಿಗೇ ಬಂತು. ‘ದೇವರ ದರ್ಶನಕ್ಕೆಂದು ಹೊರಟಿರುವಾಗ, ತಿಂಡಿ ತಿನ್ನದಿದ್ದರೂ ಆಗುತ್ತಿತ್ತು, ಗಂಗಾಸ್ನಾನವಾದ ಕೂಡಲೇ ಹೊರಡಬಹುದಾಗಿತ್ತು’ ಎಂದು ಕೆಲವರು ಗೊಣಗಿದ್ದೂ ಆಯಿತು. ತಿಂಡಿ ತಿಂದು ದೋಣಿಯೊಂದರಲ್ಲಿ ಗಂಗಾನದಿಯಲ್ಲಿ ಪಯಣಿಸಿದೆವು .
ಆ ದೋಣಿಯಲ್ಲಿದ್ದ ಸ್ಥಳೀಯ ಮಾರ್ಗದರ್ಶಕರೊಬ್ಬರು ನದಿದಂಡೆಯುದ್ದಕ್ಕೂ ಕಾಣಿಸುವ ವಿವಿಧ ಘಾಟ್ ಗಳನ್ನು ಪರಿಚಯಿಸಿದರು.ವಾರಣಾಸಿಯ ಗಂಗಾತೀರದಲ್ಲಿ ಒಟ್ಟು 88 ಘಾಟ್ ಗಳಿವೆಯಂತೆ. ಘಾಟ್ ಎಂದರೆ , ನದಿಗೆ ಇಳಿಯಲು ಕಟ್ಟಿಸಿದ ಮೆಟ್ಟಿಲುಗಳ ಮತ್ತು ಸಂಬಂಧಿತ ಕಟ್ಟಡಗಳ ಸಮೂಹ. ಆಯಾ ಘಾಟ್ ಗಳಿಗೆ ಅದನ್ನು ಕಟ್ಟಿಸಿದ ರಾಜರುಗಳ ಅಥವಾ ಇತರ ಗಣ್ಯರ ಹೆಸರಿವೆ. ಉದಾ: ರಾಜೇಂದ್ರ ಪ್ರಸಾದ್ ಘಾಟ್, ಅಹಲ್ಯಾ ಬಾಯಿ ಘಾಟ್ , ಮನಮಂದಿರ್ ಘಾಟ್, ನೇಪಾಲಿ ಘಾಟ್, ಮೆಹ್ತಾ ಘಾಟ್… ಇತ್ಯಾದಿ. ಕೇದಾರ್ ಘಾಟ್, ಅಸ್ಸಿ ಘಾಟ್ , ತುಳಸಿ ಘಾಟ್ ಗಳಲ್ಲಿ ಚಲನ ಚಿತ್ರಗಳ ಚಿತ್ರೀಕರಣವಾಗುವುದು ಜಾಸ್ತಿಯಂತೆ. ಪ್ರಸಿದ್ಧ ಗಂಗಾರತಿ ಕಾರ್ಯಕ್ರಮ ಜರಗುವ ಸ್ಥಳ ‘ದಶಾಶ್ವಮೇಧ ಘಾಟ್ . ಈ ಘಾಟ್ ನಲ್ಲಿ ಬ್ರಹ್ಮನು ಹತ್ತು ಅಶ್ವಮೇಧ ಯಾಗಗಳನ್ನು ಮಾಡಿದ್ದನಂತೆ.
ಕಟ್ಟಡವೊಂದನ್ನು ತೋರಿಸಿದ ಮಾರ್ಗದರ್ಶಕರು ‘ಅದು ವೀರಬಾಹುವಿನ ಮನೆ’ ಇದ್ದ ಜಾಗ ಅಂದರು. ಪೌರಾಣಿಕ ಕತೆಯ ರಾಜಾ ಸತ್ಯ ಹರಿಶ್ಚಂದ್ರನು ಸ್ಮಶಾನದ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಸ್ಥಳವು ‘ಹರಿಶ್ಚಂದ್ರ ಘಾಟ್’ . ಇಲ್ಲಿ ಮತ್ತು ಮಣಿಕರ್ಣಿಕಾ ಘಾಟ್ ಗಳಲ್ಲಿ ಅವಿರತವಾಗಿ ಶವಸಂಸ್ಕಾರ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ . ಹರಿಶ್ಚಂದ್ರ ಘಾಟ್ ನಲ್ಲಿ ವಿದ್ಯುತ್ ಚಿತಾಗಾರವೂ ಇದೆ. ಈ ಎರಡೂ ಘಾಟ್ ಗಳ ಪಕ್ಕ ದೋಣಿಯಲ್ಲಿ ಹೋಗುತ್ತಿರುವಾಗ ಉರಿಯುವ ಚಿತೆಗಳು, ಪೇರಿಸಿದ ಸೌದೆಯ ರಾಶಿ, ನದಿಯಲ್ಲಿ ತೇಲಿಬಿಟ್ಟ ಹೂವು, ಚಿತಾಭಸ್ಮ ಇತ್ಯಾದಿ ಕಾಣಿಸಿದುವು.
‘ಕಾಶಿಯಲ್ಲಿ ಗಂಗಾನದಿಯು ಅತ್ಯಂತ ಕೊಳಕಾಗಿದೆ, ನದಿಯಲ್ಲಿ ಅಲ್ಲಲ್ಲಿ ಶವಗಳು ಕಾಣಿಸುತ್ತವೆ’ ಎಂದು ಓದಿದ್ದೆ. ನಾವು ಅಂದುಕೊಂಡಷ್ಟು ಕೆಟ್ಟದಾಗಿಲ್ಲ ಅನಿಸಿತು. ಇವೆರಡು ಘಾಟ್ ಗಳ ಬಳಿ ಮಾತ್ರ ನದಿಯಲ್ಲಿ ಹೂವಿನ ಹಾರಗಳು ಕಾಣಸಿಕ್ಕಿದುವು . ಉಳಿದ ಕಡೆಗಳಲ್ಲಿ ಗಂಗಾನದಿಯ ನೀರು ಶುಭ್ರವಾಗಿಯೇ ಇತ್ತು. ಇದು ಕೇಂದ್ರ ಸರಕಾರವು ಹಮ್ಮಿಕೊಂಡ ‘ನಮಾಮಿ ಗಂಗಾ’ ಯೋಜನೆಯ ಫಲಶ್ರುತಿ.
….ಮುಂದುವರಿಯುವುದು
-ಹೇಮಮಾಲಾ.ಬಿ
ಈಗ ಓದಿದೆ. ಚಂದಿದೆ. ನಮಾಮಿ ಗಂಗಾಗೂ ಮೊದಲಿನಿಂದಲೇ ಘಾಟ್ಗಳ ಬಳಿ ಗಂಗೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಪರಿಪಾಟ ಇದೆ. ಮಹಾಕುಂಭ ಮೇಳಕ್ಕೆ ಸೇರುವ ಒಂದು ಸಾಧುಗಳ ಗುಂಪಿಗೆ ಇದೇ ಕೈಂಕರ್ಯ. ನಾಗಾಸಾಧುಗಳು ಮತ್ತು ಕೆಲವು ಅಘೋರಿಗಳ ಪಂಗಡಕ್ಕೆ ಈ ಸ್ವಚ್ಛತೆಯು ಒಂದು ವ್ರತಸಾಧನೆಯೂ ಹೌದು.
ಧನ್ಯವಾಗಳು ಮೆಡಮ್ ! ಪ್ರೇಕ್ಷಣಿಯ ಸ್ಥಳದ ವಿವರಣೆ
ಧನ್ಯವಾದಗಳು ಹೇಮಾ, ಮುಂದೆ ಹೋಗುವ ತೀರ್ಥಯಾತ್ರಿಗಳಿಗೆ ಈ ಮಾಹಿತಿಗಳೆಲ್ಲ ಬಹಳ ಪ್ರಯೋಜನಕಾರಿಯಾಗಬಹುದು.
ಧನ್ಯವಾದಗಳು