ಲಹರಿ

ನೆನೆದವರು ಎದುರಲ್ಲಿ..

Share Button

ನೆನೆದವರು ಎದುರಲ್ಲಿ- ಇದೇನಿದು ತಪ್ಪಾಗಿ ಬರೆದೆ ಅಂದ್ಕೊಂಡ್ರಾ? ಛೇ ಛೇ …ನಾನು ಬರೆಯಹೊರಟಿರುವುದು ಇದೇ ವಿಷಯದ ಬಗ್ಗೆ. “ನೆನೆದವರ ಮನದಲ್ಲಿ” ಅನ್ನುವ ಪದಪುಂಜಕ್ಕೂ, ನಾನೀಗ ಬರೆಯಹೊರಟಿರುವ ನೆನೆದವರು ಎದುರಲ್ಲಿ ಅನ್ನುವುದಕ್ಕೂ ತುಸು ಸಾಮ್ಯತೆ ಇರುವುದಂತೂ ಸತ್ಯ. ನೆನೆದವರ ಮನದಲ್ಲಿ ಅನ್ನುವ ಮಾತನ್ನು ಭಗವಂತನ ಬಗ್ಗೆ ವಿವರಿಸುವಾಗ ಹೆಚ್ಚಾಗಿ ಬಳಸುವರು. ಭಗವಂತನು ಸರ್ವಾಂತರ್ಯಾಮಿ, ಅಣು ರೇಣು ತೃಣ ಕಾಷ್ಠಗಳಲ್ಲಿಯೂ ಭಗವಂತನಿರುವನು, ಹಾಗೆಯೇ ಭಕ್ತಿಯಿಂದ ಭಜಿಸುವವರ/ಪೂಜಿಸುವವರ ಹೃದಯದಲ್ಲಿಯೂ ಭಗವಂತನಿರುವನು ಅನ್ನುವರು. ಪುಟ್ಟ ಬಾಲಕ ಪ್ರಹ್ಲಾದನು ತನ್ನ ತಂದೆ ಹಿರಣ್ಯಕಶಿಪುವಿನ ಬಳಿ ಎಲ್ಲೆಲ್ಲೂ ಹರಿ ಇರುವನೆಂದನಲ್ಲಾ ಹಾಗೆ. ಆ ವಿಷಯ ಅಂತಿರಲಿ. ಈಗ ವಿಷಯಕ್ಕೆ ಬರುವೆ.

ಕಾಲೇಜಿನಲ್ಲಿ ನಡೆಯಲಿರುವ ಒಂದು ಕಾರ್ಯಕ್ರಮಕ್ಕೆ ಚಂದದ ಪ್ರಾರ್ಥನಾ ಗೀತೆಯನ್ನು ಹಾಡಿಸಬೇಕೆಂದು, ಕಾರ್ಯಕ್ರಮದ ಸಂಘಟಕರು ಆದಿತ್ಯವಾರ ನನ್ನ ಬಳಿ ಹೇಳಿದ್ದರು. ಸುಶ್ರಾವ್ಯವಾಗಿ ಹಾಡುವ ತುಂಬಾ ವಿದ್ಯಾರ್ಥಿಗಳು ಇರುವುದರಿಂದ ಪ್ರತಿ ಬಾರಿಯೂ ಬೇರೆ ಬೇರೆ ತರಗತಿಯ ವಿದ್ಯಾರ್ಥಿ/ವಿದ್ಯಾರ್ಥಿನಿಗೆ ಅವಕಾಶ ಕೊಡುವುದು ನನ್ನ ಕ್ರಮ. ಎಲ್ಲ ವಿದ್ಯಾರ್ಥಿಗಳಿಗೂ ಅವಕಾಶ ಸಿಗಲಿ ಅನ್ನುವ ಹಂಬಲ. ನನ್ನ ಮನಸ್ಸಿನಲ್ಲಿ ಈ ಸಲ ಆ ವಿದ್ಯಾರ್ಥಿನಿಗೆ ಅವಕಾಶ ಕೊಡೋ ಣ ಅನ್ನುವ ನಿರ್ಧಾರ ಮಾಡಿಯಾಗಿತ್ತು. ಆದರೆ ಆ ಹುಡುಗಿಯ ಮೊಬೈಲ್ ಸಂಖ್ಯೆ ನನ್ನಲ್ಲಿರಲಿಲ್ಲ. ಸೋಮವಾರ ಕಾಲೇಜಿಗೆ ಹೋದ ಕೂಡಲೇ ಆ ವಿದ್ಯಾರ್ಥಿನಿಯ ತರಗತಿಗೆ ಹೋಗಿ ಹೇಳಬೇಕು ಅಂದುಕೊಂಡಿದ್ದೆ. ಸೋಮವಾರ ಕಾಲೇಜಿನೊಳಗೆ ಪ್ರವೇಶಿಸುತ್ತಿದ್ದಂತೆ ಆ ಹುಡುಗಿಯೇ ಎದುರಾದಾಗ ನೆನೆದವರು ಎದುರಲ್ಲಿ ಮಾತು ನಿಜವಾಗಿತ್ತು.

ವಿದ್ಯಾರ್ಥಿಯೊಬ್ಬ ಸಾಂಸ್ಕೃತಿಕ ಸ್ಪರ್ಧೆಯೊಂದರಲ್ಲಿ ಭಾಗವಹಿಸಲು ನೋಂದಾವಣಾ ಶುಲ್ಕವನ್ನು ಪಾವತಿಸಿದ್ದ. ಆ ಶುಲ್ಕವನ್ನು ಕಾಲೇಜಿನ ವತಿಯಿಂದ ಭರಿಸಿ, ಅಷ್ಟು ಹಣವನ್ನು ವಿದ್ಯಾರ್ಥಿಗೆ ನೀಡಲು ನನ್ನ ಬಳಿ ನೀಡಿದ್ದರು. ಕಾಲೇಜಿನಲ್ಲಿ ಮೌಲ್ಯಮಾಪನ ಕಾರ್ಯ ನಿಮಿತ್ತ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳು ನಡೆಯುತ್ತಿದ್ದ ಕಾರಣ ಆ ವಿದ್ಯಾಥಿಯನ್ನು ನಾನು ಭೇಟಿಯಾಗದೇ ಎರಡು ವಾರಗಳ ಮೇಲಾಗಿತ್ತು. ಅಲ್ಲದೆ ಅವನ ಮೊಬೈಲ್ ಸಂಖ್ಯೆ ನನ್ನಲ್ಲಿರಲಿಲ್ಲ. ಆ ವಿದ್ಯಾರ್ಥಿಯ ಗೆಳೆಯನ ಮೊಬೈಲ್ ಸಂಖ್ಯೆ ನನ್ನಲ್ಲಿತ್ತು. ವಿದ್ಯಾರ್ಥಿಯ ಗೆಳೆಯನಿಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಬೇಕೆಂದು ಆ ದಿನ ಬೆಳಗ್ಗೆ ಅಡುಗೆ ಮಾಡುತ್ತಿರುವಾಗ ಆಲೋಚನೆ ಮಾಡಿದ್ದೆ. ಆದರೆ ಸಂದೇಶ ಕಳುಹಿಸಿರಲಿಲ್ಲ. ಕಾಕತಾಳೀಯವೆಂಬಂತೆ, ಅದೇ ದಿನ ಬೆಳಗ್ಗೆ ನಾನು ಕಾಲೇಜು ಪ್ರವೇಶಿಸುತ್ತಿದ್ದಂತೆ ನಾನು ಹಣ ಕೊಡಬೇಕಾಗಿದ್ದ ವಿದ್ಯಾರ್ಥಿಯೇ ಎದುರಾದ. ನೆನೆದವರು ಎದುರಲ್ಲಿ….!

10. Be interested in their story
PC:Internet

ಇಂತಹ ಅನುಭವಗಳು ತುಂಬಾ ಸಲ ಆಗಿವೆ. ನಾವು ಭೇಟಿ ಆಗಬೇಕಲೇ ಬೇಕು ಅಂದುಕೊಂಡವರು ನಮಗೆ ಎದುರು ಸಿಕ್ಕಾಗ ಖುಷಿ ಆಗುವುದು. ನಮ್ಮ ಕೆಲಸ ಸುಲಭವಾಯಿತು ಅನ್ನುವ ಭಾವನೆಯೇ ನೆಮ್ಮದಿ ನೀಡುವುದು. ಮೇಲೆ ಉದಾಹರಿಸಿದ ಉದಾಹರಣೆಗಳಲ್ಲಿ ಭೇಟಿಯ ಹಿಂದೆ ಒಂದು ಉದ್ದೇಶ ಇತ್ತು. ಒಂದು ವೇಳೆ ಆ ವಿದ್ಯಾರ್ಥಿಗಳು ಎದುರು ಸಿಗದಿದ್ದರೆ. ಅವರನ್ನು ಹುಡುಕಿಕೊಂಡು ಹೋಗಲೇಬೇಕಾದ ಅನಿವಾರ್ಯತೆ ಇತ್ತು. ಆ ಶ್ರಮ ಉಳಿತಾಯವಾಯಿತು ಅಷ್ಟೇ!

ಆದರೆ ಕೆಲವೊಮ್ಮೆ ಹೀಗೂ ನಡೆಯುತ್ತದೆ. ಯಾರನ್ನೋ ನೆನೆಸಿಕೊಂಡೆವು ಅಂದುಕೊಳ್ಳೋಣ- ಸಂಬಂಧಿಯಾ ಸ್ನೇಹಿತ ಯಾರೂ ಇರಬಹುದು- “ಓ ಅವರನ್ನು ನೋಡದೆ ತುಂಬಾ ದಿನವಾಯಿತು. ಹೇಗಿರಬಹುದು ಈಗ?” ಅನ್ನುವ ಯೋಚನೆ ಮನದಲ್ಲಿ ಸುಳಿದಾಡಿರುತ್ತದೆ. ಫೋನೂ ಇಲ್ಲ, ಮೆಸೇಜೂ ಇಲ್ಲ ಅನ್ನುವ ನೆನಪಾಗುತ್ತದೆ. ಇವತ್ತಾದರೂ ಕರೆ ಮಾಡಿ ಮಾತನಾಡಬೇಕು ಅಂತ ಯೋಚನೆ ಮನದಲ್ಲಿ ಹಾದು ಹೋಗಿರುತ್ತದೆ. ಅದೇ ವ್ಯಕ್ತಿ ಕಣ್ಣೆದುರು ಬಂದು ನಿಂತಾಗ ಅನಿರ್ವಚನೀಯ ಆನಂದ, ಆ ಖುಷಿಯನ್ನು ವರ್ಣಿಸಲು ಸಾಧ್ಯವಿಲ್ಲ.

ಕೆಲವರಿಗೆ ಈ ರೀತಿಯ ಅನುಭವವೂ ಆಗುವುದುಂಟು. “ಒಳ್ಳೆಯ ಕೆಲಸಕ್ಕೆ ಹೊರಟಿದ್ದೇನೆ. ಆ ವ್ಯಕ್ತಿ ಒಂದು ಎದುರು ಸಿಕ್ಕದಿದ್ದರೆ ಸಾಕು. ಮಾತುಕತೆಗೆ ನಿಂತು ಬಿಟ್ಟರೆ ಬಿಡುವುದೇ ಇಲ್ಲ” ಅಂತ ಎಣಿಸಿಕೊಂಡು ಹೋದಾಗ ಆ ವ್ಯಕ್ತಿಯೇ ಎದುರು ಸಿಕ್ಕಾಗ ಆಗುವ ಅವಸ್ಥೆ ಇದೆಯಲ್ಲಾ ಆದನ್ನು ಹೇಳಿ ಪ್ರಯೋಜನವಿಲ್ಲ. ನೆನೆದವರು ಎದುರಲ್ಲಿ…..!!! ಅಯ್ಯೋ ವಕ್ಕರಿಸಿತಲ್ಲಾ ಶನಿ ಅನ್ನುವ ಭಾವ ಮನದೊಳಗೆ. ಈ ಪೀಡೆಯಿಂದ ಹೇಗೆ ತಪ್ಪಿಸಿಕೊಳ್ಳಲಿ ಅನ್ನುವ ಚಿಂತೆ! ಆದರೂ ಯಾವೊಂದು ಭಾವವನ್ನೂ ಮುಖದಲ್ಲಿ ತೋರ್ಪಡಿಸದೆ ದೇಶಾವರಿ ನಗು ನಕ್ಕು ಮುಂದೆ ನಡೆಯಬೇಕಾದ ಪರಿಸ್ಥಿತಿ.

ನೆನೆದವರು ಎದುರಲ್ಲಿ ಅನ್ನುವಾಗ ಯಾಕಾಗಿ ನೆನೆಯುವುದು ಅಥವಾ ನೆನಪಿಸುವುದು ಅನ್ನುವ ಪ್ರಶ್ನೆ ಬರುತ್ತದೆ. ಒಬ್ಬ ವ್ಯಕ್ತಿಯ ನೆನಪು ಬಂತು ಅನ್ನುವಾಗ ಅದು ಆ ವ್ಯಕ್ತಿಯ ಸಕಾರಾತ್ಮಕ ಗುಣಗಳಿಂದ ಪ್ರಭಾವಿತರಾಗಿ ಇರಬಹುದು ಅಥವಾ ವ್ಯಕ್ತಿಯ ನಕಾರಾತ್ಮಕ ಗುಣಗಳಿಗೋಸ್ಕರವೂ ಇರಬಹುದು. ನಾವು ನೆನಪಿಸಿಕೊಂಡ ವ್ಯಕ್ತಿಗಳು ನಾವಿಷ್ಟಪಡುವಂತಹವರಾಗಿದ್ದರೆ, ಆ ವ್ಯಕ್ತಿಗಳು ಎದುರು ಸಿಕ್ಕರೆ ಮನ ಸಂತಸದ ಗೂಡಾಗುವುದು. ಇಷ್ಟಪಡದ ವ್ಯಕ್ತಿಗಳಾಗಿದ್ದರೆ “ಹೇಗಪ್ಪಾ ಈ ವ್ಯಕ್ತಿಯಿಂದ ತಪ್ಪಿಸಿಕೊಳ್ಳಲಿ” ಅಂತ ಮನಸ್ಸು ಯೋಚಿಸುತ್ತದೆ. ಸಾಲ ಮಾಡಿದ ಅನೇಕ ವ್ಯಕ್ತಿಗಳು ಸಾಲ ಕೊಟ್ಟ ವ್ಯಕ್ತಿಗಳ ಎದುರು ಬರುವುದೇ ಇಲ್ಲ. ಎದುರು ಸಿಕ್ಕರೆ ಹಣ ಎಲ್ಲಿ ಕೇಳಿಬಿಡುವರೋ ಅಂತ!

ಕೊನೆಯಲ್ಲೊಂದು ಮಾತು
ನಮ್ಮ ವ್ಯಕ್ತಿತ್ವದಲ್ಲಿ ಒಳ್ಳೆಯ ಗುಣಗಳು, ಸಕಾರಾತ್ಮಕ ಚಿಂತನೆಗಳು ತುಂಬಿರಲಿ. ಬದುಕಿರುವಷ್ಟು ದಿನ, ನಮ್ಮನ್ನು ನೆನೆದವರ ಎದುರಲ್ಲಿ ನಾವು ಸಿಕ್ಕಾಗ ಅವರು ನಮ್ಮನ್ನು ಮನಃಪೂರ್ವಕ ಇಷ್ಟಪಡುವಂತೆ ನಮ್ಮ ಜೀವನ ಇರಲಿ. ಏನಂತೀರಿ ಸ್ನೇಹಿತರೇ?

ಡಾ. ಕೃಷ್ಣಪ್ರಭ ಎಂ, ಮಂಗಳೂರು

16 Comments on “ನೆನೆದವರು ಎದುರಲ್ಲಿ..

  1. ಚಿಕ್ಕ ದಾದರೂ ಚೊಕ್ಕ ವಾಗಿ ಬಂದಿದೆ.. ನೆನೆದವರು..ಎದುರಲ್ಲಿ..
    ಧನ್ಯವಾದಗಳು ಮೇಡಂ..ಬಹಳ ದಿನಗಳನಂತರ ನಿಮ್ಮ ಲೇಖನ ನೋಡಿ ಸಂತಸವಾಯಿತು…ಹಾಗೇ..ನಿಮ್ಮ ಪುಸ್ತಕ ಒಂದು ಲೋಕಾರ್ಪಣೆ ಯಾಗಿ ಅದರ ಪರಿಚಯ ಇಲ್ಲೇ.. ಬಂದಿತ್ತು…ಅಭಿನಂದನೆಗಳು…

    1. ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ. ಮೇಡಂ, ಕೆಲವು ಪುಸ್ತಕಗಳಲ್ಲಿ ನನ್ನ ಬರಹ ಅಡಕವಾಗಿದೆ ಮಾತ್ರ. ನನ್ನ ಪುಸ್ತಕ ಇನ್ನೂ ಹೊರತಂದಿಲ್ಲ. ತಮ್ಮ ಆಶೀರ್ವಾದದ ಬಲದಿಂದ ಆ ಭಾಗ್ಯ ಬೇಗ ಬರಲಿ.

  2. ಚಂದದ ಲೇಖನ. ಕೊನೆಯ ಮಾತುಗಳು ಸೊಗಸಾಗಿವೆ.

    1. ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು ನಯನಾ

  3. ನನಗೂ ಈ ನೆನೆದವರು ಎದುರಲ್ಲಿ ಹಲವು ಬಾರಿ ಅನುಭವಕ್ಕೆ ಬಂದಿದೆ..ಚಂದದ ಲೇಖನ

  4. ಹೌದು…ಇಂತಹ ಸಾಕಷ್ಟು ಅನುಭವಗಳು ಆಗಾಗ ಆಗ್ತಾ ಇರ್ತವೆ.. ಆಶ್ಚರ್ಯ ವೆನಿಸುತ್ತದೆ! ಸರಳ, ಸುಲಲಿತ ಲೇಖನ ಆತ್ಮೀಯವೆನಿಸಿತು.

    1. ಮೆಚ್ಚುಗೆಯ ಪ್ರತಿಸ್ಪಂದನೆಗೆ ಪ್ರೀತಿಯ ಧನ್ಯವಾದಗಳು ಶಂಕರಿ ಅಕ್ಕ

  5. ಕೌತುಕತೆಯಿಂದ ಪ್ರಾರಂಭಗೊಂಡ ಲೇಖನ ಜೀವನದ ಸರಳ ತತ್ವವನ್ನೂ ಬಿಚ್ಚಿಟ್ಟ ಪರಿ ಸೊಗಸಾಗಿದೆ

    1. ಆಪ್ತವಾಗಿ ಪ್ರತಿಕ್ರಿಯಿಸಿದ ನಿಮಗೆ ಧನ್ಯವಾದಗಳು ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *