ಹೆರಳೆಕಾಯಿ…ಹೆರಳೆಕಾಯಿ…
ಮನೆ ಮುಂದಿನ ರಸ್ತೆಯಲ್ಲಿ ಇಂದು ‘ಹೆರಳೆಕಾಯಿ…ಹೆರಳೆಕಾಯಿ’ ಎಂದು ಕೂಗುತ್ತಾ ಒಬ್ಬರು ಬುಟ್ಟಿ ತುಂಬಾ ಹೆರಳೆಕಾಯಿ ತುಂಬಿಕೊಂಡು ಬರುತ್ತಿದ್ದರು. ನಾಲ್ಕಾರು ಹೆರಳೆಕಾಯಿಗಳನ್ನು ಕೊಂಡೆವು. ಹೆರಳೆಕಾಯಿ ನಿಂಬೆಯ (Citrus) ಜಾತಿಗೆ ಸೇರಿದ ತಳಿ. ವಿಶಿಷ್ಟ ಸುವಾಸನೆ ಮತ್ತು ರುಚಿ ಹೊಂದಿದೆ, ನಿಂಬೆಹಣ್ಣಿನಷ್ಟು ಹುಳಿ ಇಲ್ಲ ಹಾಗೂ ಅದರ ಸಿಪ್ಪೆ ಬಲು ದಪ್ಪ. ನಿಂಬೆ ಹಣ್ಣಿನ ಪಾನಕ, ಚಿತ್ರಾನ್ನ, ಗೊಜ್ಜು, ಉಪ್ಪಿನಕಾಯಿ, ತೊಕ್ಕು ಇತ್ಯಾದಿಗಳನ್ನು ಹೆರಳೆಕಾಯಿಯಿಂದಲೂ ತಯಾರಿಸಬಹುದು. ಇದು ಪಿತ್ತಶಮನಕಾರಿ.
ಹೆರಳೆಕಾಯಿಯ ಚಿತ್ರಾನ್ನ ಮಾಡಲು ಅತಿ ಸುಲಭ. ಬಾಣಲಿಯಲ್ಲಿ ಸ್ವಲ್ಪ ಎಣ್ಣೆ ಇಟ್ಟು, ಕಡಲೇಬೀಜ, ಉದ್ದಿನಬೇಳೆ, ಕಡಲೇಬೇಳೆ, ಸಾಸಿವೆ, ಒಣಮೆಣಸು, ಕರಿಬೇವಿನ ಸೊಪ್ಪು ಸೇರಿಸಿ ಒಗ್ಗರಣೆ ಮಾಡಿಟ್ಟುಕೊಳ್ಳಬೇಕು.ಬೇಕಿದ್ದರೆ ಹೆಚ್ಚಿದ ಈರುಳ್ಳಿ, ಹಸಿರುಮೆಣಸಿನಕಾಯಿ..ಇತ್ಯಾದಿ ಸೇರಿಸಬಹುದು. ಒಗ್ಗರಣೆಗೆ ಹದವಾಗಿ ಬೆಂದ ಅನ್ನ, ರುಚಿಗೆ ತಕ್ಕಷ್ಟು ಉಪ್ಪು, ಹೆಚ್ಚಿದ ಕೊತ್ತಂಬರಿ ಸೊಪ್ಪು, ಸ್ವಲ್ಪ ಕಾಯಿತುರಿ ಸೇರಿಸಿ ಬೆರೆಸಬೇಕು. ಕೊನೆಯದಾಗಿ ಹೆರೆಳೆಕಾಯಿಯ ರಸವನ್ನು ಸೇರಿಸಿ, ಪುನ: ಬೆರೆಸಿದರೆ ಹೆರಳೆಕಾಯಿ ಚಿತ್ರಾನ್ನ ಸಿದ್ದ. (ಚಿತ್ರಾನ್ನ ತಯಾರಿಸಲು ಅನ್ನ ಉದುರಾಗಿದ್ದರೆ ಉತ್ತಮ.ಹೆರಳೆಕಾಯಿಯ ರಸವನ್ನು ಸೇರಿಸಿದ ಮೆಲೆ ಬಿಸಿ ಮಾಡುವುದು ಒಳ್ಳೆಯದಲ್ಲ, ಯಾಕೆಂದರೆ ಬಿಸಿಯಾದಾಗ ಅದರಲ್ಲಿರುವ ವಿಟಮಿನ್ ಸಿ ನಾಶವಾಗುತ್ತದೆ)
ರಸ ತೆಗೆದಾಗ ಮೇಲೆ ಹೆರೆಳೆಕಾಯಿಯ ಸಿಪ್ಪೆಯನ್ನು ಎಸೆಯುವ ಬದಲು, ಗೊಜ್ಜನ್ನು ತಯಾರಿಸಬಹುದು.
ಒಂದು ಹೆರಳೆಕಾಯಿಯ ಸಿಪ್ಪೆಯನ್ನು ಸಣ್ಣಗೆ ಹೆಚ್ಚಿ, ಹುಣಸೇಹಣ್ಣಿನ ರಸ, ಉಪ್ಪು, ಬೆಲ್ಲ, ಅರಶಿನ ಪುಡಿ ಸೇರಿ ತಕ್ಕಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಬೇಕು. ಇದಕ್ಕೆ ಕಹಿ ರುಚಿ ಬರುವುದರಿಂದ ಬೆಲ್ಲ ಸ್ವಲ್ಪ ಜಾಸ್ತಿ ಬೇಕಾಗುತ್ತದೆ. ಬೆಂದ ಸಿಪ್ಪೆಗೆ ರುಬ್ಬಿದ* ಮಸಾಲೆಯನ್ನು ಸೇರಿಸಿ, ಗೊಜ್ಜಿನ ಹದಕ್ಕೆ ಬೇಕಾಗುವಷ್ಟು ನೀರು ಸೇರಿಸಿ, ಕುದಿಸಿ, ಕರಿಬೇವಿನ ಒಗ್ಗರಣೆ ಕೊಟ್ಟರೆ ಹೆರೆಳೆಕಾಯಿ ಸಿಪ್ಪೆಯ ಗೊಜ್ಜು ಸಿದ್ಧ. ಅನ್ನ ಅಥವಾ ಚಪಾತಿಯೊಂದಿಗೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.
ಸಿಹಿ,ಕಹಿ,ಉಪ್ಪು,ಖಾರ,ಹುಳಿ,ಒಗರು- ಈ ಷಡ್ರಸಗಳು ಒಂದೇ ಅಡುಗೆಯಲ್ಲಿ ಸೇರಿರುವುದು ಬಹುಶ: ಹೆರಳೆಕಾಯಿ ಗೊಜ್ಜಿನಲ್ಲಿ ಮಾತ್ರ ಅಂತ ನನ್ನ ಅನಿಸಿಕೆ!
(*ರುಬ್ಬಲು ಮಸಾಲೆ: 5-6 ಒಣಮೆಣಸು, ಧನಿಯಾ, ಉದ್ದಿನಬೇಳೆ, ಕಡಲೇಬೇಳೆ – ತಲಾ ಒಂದು ಚಮಚ, ಜೀರಿಗೆ, ಎಳ್ಳು- ತಲಾ ಅರ್ಧ ಚಮಚ, ಒಂದು ಕಾಳು ಇಂಗು…ಇವೆಲ್ಲವನ್ನೂ ಹುರಿದು, ಅರ್ಧ ಕಪ್ ತೆಂಗಿನಕಾಯಿಯ ತುರಿ ಸೇರಿಸಿ ರುಬ್ಬಬೇಕು).
– ಹೇಮಮಾಲಾ.ಬಿ
ಇಂದೆ ಮಾಡಿರಿ ಎಲ್ಲ ಹೆರಳೆಕಾಯ್ಗೊಜ್ಜು
ಹೆರಳೆಸಿಪ್ಪೆಯ ಜೊತೆಗೆ ಮೆಣ್ಸಿನ್ಕಾಯ್ ಜಜ್ಜು.
ಇಂಗು ಸಾಸಿವೆ ಒಗ್ಗರಣೆಯೊಡನೆ ಸಜ್ಜು
ಆರೋಗ್ಯಕರ ತಿನ್ನಲಿದ ಬರದು ಬೊಜ್ಜು.
ಹೇರಳ ಪೋಷಕಾಂಶವುಳ್ಳ ಹೇರಳೆ 🙂 🙂 ಬಾಣಂತಿಯರಿಗೆ ಈ ಹೇರಳೇಕಾಯಿಯ ಉಪ್ಪಿನಕಾಯಿ ಬೆಸ್ಟು