ಒಂಟಿ ಹಕ್ಕಿಯ ಪಯಣ
ಕಾರ್ಯನಿಮಿತ್ತ ಹೈದರಾಬಾದಿನ ಯೂನಿವರ್ಸಿಟಿಯೊಂದಕ್ಕೆ ಹೋಗಬೇಕಾಗಿತ್ತು. ಅಲ್ಲಿನ ವಸತಿ, ವಾಸ್ತವ್ಯಕ್ಕೆ ವ್ಯವಸ್ಥೆ ಇಲ್ಲಿಂದಲೇ ನಿಗದಿಪಡಿಸದೆ ಹೊರಡುವಂತಿಲ್ಲ. ಹೆಣ್ಣುಮಕ್ಕಳಿಗೆಂದೇ ಪ್ರತ್ಯೇಕ ಹಾಸ್ಟೆಲ್ ಇರದಿದ್ದಲ್ಲಿ ಹೇಗಪ್ಪಾ ಎಂಬ ಚಿಂತೆ. ಕೊನೆಗೆ ಗಂಡ, ಮಗಳು ಹೀಗೆ ಸಂಸಾರ ಸಮೇತ ಹೋಗಿ ಪಿಕ್ನಿಕ್ಕೂ ಮಾಡಿ ಬಂದೆವೆನ್ನಿ.
ಸ್ತ್ರೀ ಸ್ವಾತಂತ್ರ್ಯ, ಸಮಾನತೆ ಎಂದೆಲ್ಲ ಮಾತನಾಡುತ್ತಿರುವಾಗಲೇ ಈ ರೀತಿಯ ಅಪ್ಪಟ ನಿಸ್ಸಹಾಯಕತೆ , ಆತಂಕ, ಭಯಗಳಿಂದ ಮುಕ್ತವಾಗಿ ಹೆಣ್ಣು ಬದುಕುವುದು ಯಾವಾಗ ಎಂದು ಯೋಚಿಸುವಂತಾಗಿದೆ. ಈ ಜಗತ್ತಿನ ಸಂಕಷ್ಟಗಳು ಗಂಡು ಹೆಣ್ಣೆನ್ನದೆ ಸಮಾನವಾಗಿರುವುದು ಹೌದಾದಾರೂ ತನ್ನ ದೇಹವೇ ಶತ್ರುವಾಗಿರುವ ದೌರ್ಭಾಗ್ಯ ಆಕೆಯದು. ಯಾವುದೇ ಕ್ಷೇತ್ರದಲ್ಲಿ ಉನ್ನತಿಗೇರುವುದೂ ಆಕೆಗೆ ಕಷ್ಟವೇ. ಯಾಕೆಂದರೆ ಸಾಮಾಜಿಕ ಜೀವನದ ಹೆಚ್ಚಿನ ಉನ್ನತ ಹುದ್ದೆಗಳಲ್ಲಿ ಗಂಡಸರೇ ಇರುತ್ತಾರೆ. ಈ ರೀತಿಯ ಗಾಡ್ ಫಾದರ್ ಗಳಿಂದ ಬೆಂಬಲ ಪಡೆಯುವುದೂ ಅನೇಕ ಸಂಕೀರ್ಣ ಸಮಸ್ಯೆಗಳಿಗೆ ಕಾರಣವಾಗಬಹುದು.
ನಮ್ಮ ಸಮಾಜದಲ್ಲಿ ಹೆಣ್ಣು ಒಂಟಿಯಾಗಿ ಪ್ರಯಾಣಿಸುವಂತಿಲ್ಲ. ಒಂಟಿಯಾಗಿ ಬಾಡಿಗೆ ಮನೆಯಲ್ಲಿ ವಾಸಿಸುವಂತಿಲ್ಲ. ಬಾಳಿನಲ್ಲಿಯೂ ಅಷ್ಟೆ. ಮದುವೆ ಆಗದೆಯೋ, ಬಾಳ ಸಂಗಾತಿಯನ್ನು ಕಳೆದುಕೊಂಡೋ ಒಂಟಿಯಾಗಿರುವವರ ಜೀವನ ದುಸ್ತರ. ಈ ಜಗತ್ತಿನ ಸಂಕಷ್ಟಗಳು ಸಾಕೆಂದು ಯಾವುದಾದರು ಆಶ್ರಮಕ್ಕೆ ಸೇರಿಕೊಂಡರೂ ಹೆಣ್ಣಿಗೆ ರಕ್ಷಣೆ ಎಷ್ಟರ ಮಟ್ಟಿಗೆ ಎನ್ನುವುದು ಅನುಮಾನ.
ಹೀಗಾಗಿಯೇ ಅನೇಕ ಹೆಣ್ಣು ಮಕ್ಕಳು ತಮ್ಮ ಹೃದಯ ಹತ್ತಿ ಉರಿಯುತ್ತಿದ್ದರೂ ಒಲ್ಲದ ಮದುವೆಗಳಲ್ಲಿ , ಬೇಡವಾದ ಸಂಬಂಧಗಳಲ್ಲಿ ಬದುಕು ಸವೆಸುತ್ತಿರುತ್ತಾರೆ. ನಮ್ಮ ಸಮಾಜದಲ್ಲಿ ಸಂಗಾತಿಯಿಲ್ಲದೆ ಒಂಟಿಯಾಗಿ ಬದುಕುವ ಹೆಣ್ಣನ್ನು ಪ್ರಶ್ನಿಸುವ ನೂರು ಕಣ್ಣುಗಳಿರುತ್ತವೆ. ಭಾರತೀಯ ಸಮಾಜ ಮದುವೆಗೆ, ಸಂಸಾರಕ್ಕೆ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡುವುದರಿಂದಲೇ ನಾವೂ ಕೂಡ ನಮಗೇ ಅರಿವಿಲ್ಲದೆ ಒಂಟಿಹೆಣ್ಣಿನ ಜೀವನ ಪ್ರೀತಿಯನ್ನು , ಸ್ವಾಭಿಮಾನವನ್ನು ತಗ್ಗಿಸುತ್ತೇವೇನೋ.
ಒಂಟಿಯಾಗಿರುವವರು, ಸಲಿಂಗಕಾಮಿಗಳು, ಹಿಜಡಾಗಳು…ಹೀಗೆ ಅಂಚಿಗೆ ತಳ್ಳಲ್ಪಟ್ಟವರೂ ಮನುಷ್ಯರೇ ಎಂದೂ ತಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳುವ ಹಕ್ಕು ಅವರಿಗಿದೆ ಎಂದೂ ನಾವೆಲ್ಲ ಮನಗಾಣಬೇಕಾಗಿದೆ.
-ಜಯಶ್ರೀ. ಬಿ. ಕದ್ರಿ
So true and very effective narration! 🙂
ನಿಮ್ಮ ಬರಹ ಅಪ್ಪಟ ಸತ್ಯ….ಕಾಲ ಬದಲಾದರು ಒಂಟಿ ಹಕ್ಕಿಯ ಪಯಣದಲ್ಲಿ ಏನು ಬದಲಾವಣೆಯಿಲ್ಲ. ಚೆನ್ನಾಗಿದೆ ಬರಹ.
ಒ೦ಟಿ ಹಕ್ಕಿಯ ಪಯಣ ನಿಜವಾಗಿಯೂ ಕಟು ಸತ್ಯ .