ಕಾದಂಬರಿ: ನೆರಳು…ಕಿರಣ 32

Spread the love
Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..
ಕಾಲಚಕ್ರವು ಉರುಳುತ್ತಾ ನಡೆದಿತ್ತು. ಪಾಠಕ್ಕೆ ಬರುವ ಮಕ್ಕಳ ಒಡನಾಟದಲ್ಲಿ ತನ್ನೆಲ್ಲಾ ದುಗುಡವನ್ನು ಮರೆಯುತ್ತಿದ್ದಳು ಭಾಗ್ಯ. ಹಾಗೆಯೇ ಮಕ್ಕಳಿಲ್ಲವೆಂಬ ಕೊರತೆಯೊಂದನ್ನು ಬಿಟ್ಟು ಮಿಕ್ಕೆಲ್ಲವನ್ನು ಹೊಂದಿದ್ದ ಅವಳ ಬದುಕು ನೆಮ್ಮದಿಯಿಂದ ಸಾಗಿತ್ತು.

ಬೆಳಗಿನಿಂದ ಸಂಜೆಯವರೆಗೆ ಎಲ್ಲರೂ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿದ್ದ ಮನೆಯವರು ರಾತ್ರಿಯ ಊಟದ ಸಮಯದಲ್ಲಿ ಒಟ್ಟಾಗಿ ಕುಳಿತು ತಮ್ಮತಮ್ಮ ದಿನದ ಅನುಭವ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಆಚರಣೆ, ಸಭೆ ಸಮಾರಂಭಗಳು, ಬಂಧುಬಾಂಧವರ ಮನೆಗಳ ಕಾರ್ಯಕ್ರಮಗಳು, ಅಷ್ಟೇ ಅಲ್ಲದೆ ತಮ್ಮ ಜಮೀನು ಉಸ್ತುವಾರಿಕೆ ಎಲ್ಲವೂ ಯಥಾರೀತಿಯಲ್ಲಿ ಸಾಗುತ್ತಿದ್ದವು.  ಬಹುದಿನಗಳ ಬಯಕೆಯಾದ ಕಾರೊಂದು ಮನೆಯ ಮುಂದಿನ ಜಾಗಕ್ಕೆ ಆಗಮಿಸಿತ್ತು. ಡ್ರೈವಿಂಗ್ ಕಲಿತಿದ್ದ ಶ್ರೀನಿವಾಸ ಕೆಲವೆಡೆಗೆ ತಾನೇ ಚಲಾಯಿಸಿಕೊಂಡು ಹೋಗುತ್ತಿದ್ದ. ಬಹಳ ದೂರಸ್ಥಳಗಳಿಗೆ ಹೋಗಬೇಕಾದರೆ ಮಾತ್ರ ಯಥಾಪ್ರಕಾರ ನಂಜುಂಡನೇ ಸಾರಥಿ. ಇತ್ತೀಚಿನ ದಿನಗಳಲ್ಲಿ ಸಂಗೀತ ಕಛೇರಿ ನಡೆಸುತ್ತಿದ್ದವರಿಗೆ ಸಾಥ್ ಕೊಡಲು ಪಕ್ಕವಾದ್ಯಗಾರನಾಗಿಯೂ ಭಾಗವಹಿಸುವ ಪರಿಪಾಠ ಬೆಳೆಸಿಕೊಂಡಿದ್ದ ಶ್ರೀನಿವಾಸ. ಬಿಡುವಾಗಿದ್ದಾಗ ತನ್ನ ಪೂಜಾಕಾರ್ಯಗಳಿಗೆ ಆಧ್ಯತೆ ಕೊಡುತ್ತಿದ್ದ.

ಈ ಮಧ್ಯದಲ್ಲಿ ಜೋಯಿಸರ ಮುತ್ತಾತ ಬರೆದಿದ್ದ ಮನೆಮದ್ದು, ದಾಸರ ಪದಗಳು, ಜನಪದ ಹಾಡುಗಳು, ದೇವರ ನಾಮಗಳ ಸಂಗ್ರಹವನ್ನು ಆಮೂಲಾಗ್ರವಾಗಿ ನೋಡಿ ಜೋಯಿಸರ ದೊಡ್ಡಪ್ಪನವರು  ತಮಗೆ ಪರಿಚಯವಿದ್ದ ಪ್ರಕಾಶಕರನ್ನು ಪರಿಚಯಿಸಿಕೊಟ್ಟರು. ಜೋಯಿಸರ ಸಂಗೀತದ ಗುರುಗಳಾದ ರಾಘವೇಂದ್ರರವರು ರಾಗಗಳ ಬಗ್ಗೆ ಬರೆದಿರುವ ಪುಸ್ತಕದ ಕೆಲಸ ಮುಗಿದಿದ್ದರೆ ಅದನ್ನೂ ಕೊಟ್ಟುಬಿಡಿ. ನಾನೊಮ್ಮೆ ನೋಡಿ ಒಟ್ಟಿಗೇ ಪ್ರಕಟಣೆಗೆ ಕೊಡೋಣವೆಂದು ಒತ್ತಾಯ ಮಾಡಿದರು. ಅಂತೂ ಅವರೆಲ್ಲರ ಮುತುವರ್ಜಿಯಿಂದ ಆ ಕೆಲಸವನ್ನು ಪೂರೈಸಲು ಸಾಧ್ಯವಾಯಿತು. ನಂತರವೂ ಪುಸ್ತಕಗಳನ್ನು ಗ್ರಂಥಾಲಯಕ್ಕೆ, ಮಾರುಕಟ್ಟೆಯ ಅಂಗಡಿಗಳಿಗೆ ಕೊಡುವ, ಕೆಲವು ಆತ್ಮೀಯರಿಗೆ ಕೊಟ್ಟು ಪ್ರಚಾರ ಮಾಡಿ ಹೆಚ್ಚು ರೀತಿಯಲ್ಲಿ ಪ್ರಚಲಿತವಾಗುವಂತೆ ಮಾಡುವ ಹಂತದಲ್ಲೂ ಅವರ ಪಾತ್ರವೇ ಹಿರಿದಾಗಿತ್ತು. ಅದೃಷ್ಟವೂ ಕೂಡಿಬಂದು ಪುಸ್ತಕಗಳು ಪ್ರಕಟಣೆಯಾದ ಆರು ತಿಂಗಳುಗಳಲ್ಲೇ ಪ್ರತಿಗಳು ಖಾಲಿಯಾಗಿ ಮತ್ತೊಮ್ಮೆ ಎರಡನೆಯ ಬಾರಿಗೆ ಮುದ್ರಿಸುವಂತಾಯಿತು.

ಅಂತೂ ಎಷ್ಟೋ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಪೂರ್ವ ಮಾಹಿತಿಗಳು ಪುಸ್ತಕ ರೂಪದಲ್ಲಿ ಹೊರ ಬಂದುದಷ್ಟೇ ಅಲ್ಲ, ಅವರು ಅಂದಿನ ಕಾಲದಲ್ಲಿ ಮಾಡಿದ್ದ ಕೆಲಸಕ್ಕೆ ಇಂದು ಗೌರವ ಸಂದಂತಾಯಿತು. ಈ ಕೆಲಸವು ಮನೆಯಲ್ಲಿ ಎಲ್ಲರಿಗೂ ಸಂತಸವನ್ನು ತಂದ್ದದ್ದು ಮಾತ್ರವಲ್ಲ, ಭಾಗ್ಯಳ ಜಾಣ್ಮೆ, ಕಾರ್ಯ ತತ್ಪರತೆಗೆ ಮತ್ತೊಂದು ಕೀರ್ತಿಯ ಗರಿಯಾಯಿತು. 

ದಿನೇ ದಿನೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಮಗಳ ವಿಶೇಷತೆಯ ಬಗ್ಗೆ ತಂದೆ ತಾಯಿಗಳಿಗೆ ಹೆಮ್ಮೆಯೆನಿಸಿದರೂ ಅವಳೊಮ್ಮೆ ತಾಯಿಯಾಗಲಿಲ್ಲವಲ್ಲ ಎಂದು ಮನಸ್ಸು ಕೊರಗುತ್ತಿತ್ತು. ಇದ್ದಬದ್ದ ದೇವರುಗಳಿಗೆಲ್ಲ ಹರಕೆ ಹೊತ್ತುಕೊಳ್ಳುವುದು, ಮಗಳ ಪರವಾಗಿ ತಾವೇ ಪೂಜೆ ಪುನಸ್ಕಾರಗಳನ್ನು ಮಾಡುತ್ತಾ, ಹಲವಾರು ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತಿದ್ದ ಮಡದಿ ಲಕ್ಷ್ಮಿಯ ಸ್ಥಿತಿಯನ್ನು ಕಂಡು ಭಟ್ಟರಿಗೆ ವಿಚಿತ್ರವೆನ್ನಿಸಿದರೂ ಅವಳೊಳಗಿನ ನೋವಿನಾಳವನ್ನು ಗಮನಿಸಿ ಮರುಗುತ್ತಿದ್ದರು. ಆದರೆ ಮಗಳು ತವರಿಗೆ ಬಂದಾಗ,  ತಾವು ಅವಳ ಮನೆಗೆ ಹೋದಾಗ ಅಪ್ಪಿತಪ್ಪಿಯೂ ಮಕ್ಕಳ ವಿಚಾರವಾಗಿ ಮಾತನಾಡಬಾರದೆಂದು ಹೆಂಡತಿಗೆ ಮತ್ತು ಇತರ ಮಕ್ಕಳಿಗೆ ಕಟ್ಟಪ್ಪಣೆ ಮಾಡಿದ್ದರು ಭಟ್ಟರು. ಹೀಗಾಗಿ ಯಾರೂ ಆ ವಿಷಯವನ್ನು ಪ್ರಸ್ತಾಪಿಸುತ್ತಿರಲಿಲ್ಲ. ಈ ಬದಲಾವಣೆ ಭಾಗ್ಯಳ ಅರಿವಿಗೆ ಬಂದರೂ ಕೆದಕದೆ ನಿರಾಳವಾಗಿ ಬಂದುಹೋಗುತ್ತಿದ್ದಳು.

ಇತ್ತ ಭಾಗ್ಯಳ ಮನೆಯಲ್ಲಿ ಸೀತಮ್ಮನವರು ಸೊಸೆಗೆ ನೇರವಾಗಿ ಏನನ್ನೂ ಹೇಳದಿದ್ದರೂ ಪರೋಕ್ಷವಾಗಿ ಕೆಲವು ಪೂಜೆಗಳನ್ನು ಮಾಡಿಸುತ್ತಿದ್ದರು. ಹಾಗೇ “ಭಾಗ್ಯಾ ಬೆಳಗ್ಗೆ ನೀನು ಹೇಗೂ ಬೇಗನೆ ಎದ್ದು ನಿನ್ನ ಕೆಲಸಗಳನ್ನು ಪೂರೈಸುತ್ತೀಯೆ, ನಾನೂ ನಾರಣಪ್ಪನಿಗೆ ಏನೇನು ಅಡುಗೆ ಮಾಡಬೇಕೆಂದು ಹೇಳಿ ಬೇಕಾದ ಪದಾರ್ಥಗಳನ್ನೊದಗಿಸಿ ಸ್ನಾನ ಮುಗಿಸುತ್ತೇನೆ. ಇಬ್ಬರೂ ಕೂಡಿ ನಮ್ಮ ಬೀದಿಯ ಕೊನೆಯಲ್ಲಿರುವ ಗುಡಿಯಲ್ಲಿನ ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಬರೋಣ. ಕಳೆದಕೊಳ್ಳುವುದೇನು. ಬೆಳಗಿನ ಹೊತ್ತು ಶುದ್ಧ ಹವೆಯಲ್ಲಿ ಓಡಾಟವಾದಂತಾಗುತ್ತದೆ. ಏನು ಹೇಳ್ತೀ?” ಎಂದಾಗ ಭಾಗ್ಯ ಮನಸ್ಸಿನಲ್ಲೇ ಅವರ ಕಳಕಳಿಗೆ ತಲೆಬಾಗಿ ತನ್ನ ಸಮ್ಮತಿ ಸೂಚಿಸಿದ್ದಳು.

ಚಿಕ್ಕಂದಿನಿಂದಲೂ ಅರಳಿಕಟ್ಟೆ, ಅಶ್ವತ್ಥಕಟ್ಟೆ, ಜಗುಲಿಕಟ್ಟೆ, ನಾಗರಕಟ್ಟೆ, ಪಂಚಾಯಿತಿಕಟ್ಟೆ ಮುಂತಾದ ಹೆಸರಿನಿಂದ ಕರೆಯುವ ರೂಢಿ ಇರುವುದು ಮತ್ತು ಅದಕ್ಕಿರುವ ಮಹತ್ವವನ್ನು ತನ್ನ ತಾಯಿಯ ಬಾಯಿಂದ ಅನೇಕ ಸಾರಿ ಕೇಳಿದ್ದಳು ಭಾಗ್ಯ. ಅರಳೀಮರವು ಬೆಳಗಿನ ಹೊತ್ತು ಜೊತೆಗಿರುವ ಬೇವಿನ ಮರದೊಡನೆ ಕೂಡಿ ಅತಿ ಹೆಚ್ಚು ಆಮ್ಲಜನಕವನ್ನು ಸರಬರಾಜು ಮಾಡುತ್ತದೆ. ಸುತ್ತಮುತ್ತಲಿನ ಗಾಳಿಯನ್ನು ಶುದ್ಧೀಕರಿಸಿ ಅದರಲ್ಲಿರುವ ಸೂಕ್ಷ್ಮ ಕ್ರಿಮಿ ಕೀಟಗಳನ್ನು ನಾಶಪಡಿಸುತ್ತದೆ. ಅದಕ್ಕೆ ಹೆಚ್ಚು ಇಂಗಾಲದ ಆಕ್ಸೈಡನ್ನು ಹೀರಿಕೊಳ್ಳುವ ಸಾಮರ್ಥ್ಯವಿದೆ. ಆದುದರಿಂದಲೇ ನಮ್ಮ ಪೂರ್ವಜರು ಪ್ರತಿಯೊಂದು ಹಳ್ಳಿಯಲ್ಲೂ ಊರಿನ ಅಂಚಿನಲ್ಲಿಯೇ ಇವುಗಳನ್ನು ನೆಟ್ಟು ಬೆಳೆಸುತ್ತಿದ್ದರು. ಇವನ್ನು ಕಡಿಯಬಾರದೆಂದು ಇವುಗಳಿಗೆ ದೈವತ್ವದ ಪ್ರಭಾವವನ್ನು ನೀಡಿದ್ದರು. ಇಲ್ಲಿ ನಿರಂತರ ಪೂಜೆ, ಇಲ್ಲಿಯೇ ನಾಗರ ಕಲ್ಲಿನ  ಪ್ರತಿಷ್ಠಾಪನೆ ಮಾಡುತ್ತಿದ್ದರು.

ಅರಳಿಕಡ್ಡಿ, ಬೇವಿನ ಕಡ್ಡಿಗಳನ್ನು ಪೂಜೆಯಲ್ಲಿ ಮಾಡುವ ಹವನ, ಹೋಮಕಾಲದಲ್ಲಿ ಸಮಿತ್ತುಗಳಾಗಿ ಉಪಯೋಗಿಸುತ್ತಿದ್ದರು. ಅದರ ಹಿಂದಿರುವ ವೈಜ್ಞಾನಿಕ ಕಾರಣವೆಂದರೆ ಮನೆ ಮತ್ತು ವಾತಾವರಣ ಶುದ್ಧೀಕರಣ ಮಾಡುವುದು. ಹಾಗೇ ಸಂತಾನ ಭಾಗ್ಯವಿಲ್ಲದವರು ಅಶ್ವತ್ಥ ವೃಕ್ಷದ ಪ್ರದಕ್ಷಿಣೆ ಮತ್ತು ನಮಸ್ಕಾರಗಳನ್ನು ಬೆಳಗಿನ ಹೊತ್ತು ಮಾಡಿದರೆ ಅವರಿಗೆ ಶುದ್ಧ ಗಾಳಿಯ ಸೇವನೆಯಲ್ಲದೆ ದೇಹಕ್ಕೂ ಒಂದು ರೀತಿಯ ವ್ಯಾಯಾಮವಾಗಿ ಅಂಗಾಂಗಗಳು ಪುನಶ್ಚೇತನಗೊಳ್ಳುತ್ತವೆ. ಇದರಿಂದ ಸಂತಾನೋತ್ಪತ್ತಿ ಅಂಗಗಳಲ್ಲಿರುವ ದೋಷಗಳು ಮಾಯವಾಗುತ್ತವೆ ಎಂಬ ನಂಬಿಕೆಯಿದೆ. ನಂಬಿಕೆಯಿಂದ ಮನಸ್ಸಿನ ಸ್ಥಿತಿಯೂ ಶಾಂತವಾಗುತ್ತದೆ. ರಾತ್ರಿಯ ಕಾಲದಲ್ಲಿ ಅಶ್ವತ್ಥಕಟ್ಟೆಯ ಹತ್ತಿರ ಹಣತೆಯ ದೀಪವನ್ನು ಹಚ್ಚುವುದು ರೂಢಿಯಲ್ಲಿದೆ. ಅದನ್ನು ದೇವರಕಟ್ಟೆಯೆಂದು ಯಾರೂ ಅಲ್ಲಿ ಮಲಗುವುದಿಲ್ಲ. ತನ್ನ ಅಮ್ಮ ಗುಡಿಗೆ ಬಂದಾಗಲೆಲ್ಲ ಸಂಜೆಯ ಕಾಲದಲ್ಲಿ “ಮೂಲತೋ ಬ್ರಹ್ಮ ರೂಪಾಯ, ಮಧ್ಯತೋ ವಿಷ್ಣು ರೂಪಾಯ, ಅಗ್ರತೋ ಶಿವ ರೂಪಾಯ, ವೃಕ್ಷ ರಾಜತೇ ನಮೋನಮಃ” ಎಂಬ ಶ್ಲೋಕವನ್ನು ಹೇಳಿಕೊಂಡು ನಮಸ್ಕಾರ ಹಾಕುತ್ತಿದ್ದರು.

ಈಗ ಅತ್ತೆಯೊಡನೆ ಬಂದು ಹಿಂದಿನದೆಲ್ಲವನ್ನೂ ನೆನೆಸಿಕೊಂಡು ಅವರು ಹೇಳಿದಂತೆ ನಡೆದುಕೊಳ್ಳುತ್ತಿದ್ದಳು. ಇದರ ಜೊತೆಗೆ “ಭಗವಂತಾ ನನ್ನ ಗಂಡನಿಗೆ ಆತನ ಜಾತಕಫಲ, ಲೆಕ್ಕಾಚಾರಗಳನ್ನು ಪಕ್ಕಕ್ಕಿಟ್ಟು ಒಮ್ಮೆ ವೈದ್ಯರಲ್ಲಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವ ಮನಸ್ಸು ಕೊಡು” ಎಂದೂ ಬೇಡಿಕೊಳ್ಳುತ್ತಿದ್ದಳು.

ಜೋಯಿಸರು ಮಕ್ಕಳ ಕುಂಡಲಿ ಬರೆಯುವುದು, ಜಾತಕ ಬರೆಯುವುದು, ಶಾಂತಿ ಪೂಜೆಗಳನ್ನು ಮಾಡಿಸುವಾಗಲೆಲ್ಲ ಸೊಸೆಯು ಬಿಡುವಾಗಿದ್ದರೆ ಆಕೆಯನ್ನು ತಮ್ಮ ಕೆಲಸಕ್ಕೆ ನೆರವಾಗಲು ಕರೆಯುತ್ತಿದ್ದರು. ಆಗೆಲ್ಲ ಸೀತಮ್ಮನವರು “ರೀ..ಅವಳನ್ಯಾಕೆ ಇದಕ್ಕೆಲ್ಲ ಸಹಾಯ ಮಾಡಲು ಒತ್ತಾಯಿಸುತ್ತೀರಿ, ಬೆಳಗ್ಗೆ ಸಂಜೆಯೆಲ್ಲಾ ಪಾಠ ಮಾಡಿ. ಮಿಕ್ಕ ಸಮಯದಲ್ಲಿ ಬೇಡವೆಂದರೂ ಮನೆಗೆಲಸಗಳಲ್ಲಿ ಕೈಹಾಕುತ್ತಲೇ ಇರುತ್ತಾಳೆ. ಈ ಮಧ್ಯೆ ಹಿತ್ತಲಿನ ಕೈತೋಟದ ಕೆಲಸವನ್ನೂ ನೋಡುತ್ತಾಳೆ” ಎನ್ನುವರು.

ಭಾಗ್ಯ ಅತ್ತೆಯ ಮಾತು ಕೇಳಿ “ಬಿಡಿ ಅತ್ತೆ, ಮಾಡಲಾಗದ, ಹೊರಲಾಗದ ಕೆಲಸವೇ ಇದು. ಮಾವಯ್ಯ ನನ್ನಿಂದ ಅವರು ಮನೆಗಳನ್ನು ಗುರುತುಹಾಕಿ ಹೀಗೀಗೆ ಬರೆಯಬೇಕೆಂದು ಹೇಳುತ್ತಾರೆ. ನಾನು ಬರೆಯುತ್ತೇನಷ್ಟೇ. ಮಧ್ಯೆ ಮಧ್ಯೆ ಅವುಗಳ ವಿಶೇಷತೆ ಬಗ್ಗೆ ಹೇಳುತ್ತಾರೆ. ನನಗೂ ಅವೆಲ್ಲಾ ತಿಳಿದುಕೊಳ್ಳಬೇಕೆಂಬ ಕುತೂಹಲವಿದೆ.” ಎನ್ನುತ್ತಾ ಅವರಿಬ್ಬರೂ ಕುಳಿತಿದ್ದ ಕಡೆಗೆ ಬಂದಳು.

“ಹೂ ಹಾಗೆ ಹೇಳಮ್ಮ, ನೋಡಿಲ್ಲಿ ಇವತ್ತೇನೂ ಕುಂಡಲಿ, ಜಾತಕ ಬರೆಯುವ ಕೆಲಸಗಳಿಲ್ಲ. ಇಗೋ ಇಲ್ಲಿ ಗುರುತು ಹಾಕಿರುವ ಸಾಮಾನುಗಳನ್ನು ಕ್ರಮವಾಗಿ ಪಟ್ಟಿ ಮಾಡಿಡು. ಮುಂದಿನ ತಿಂಗಳಲ್ಲಿ ಒಂದೆರಡು ಕಡೆ ಅರವತ್ತು ವರ್ಷದ ಶಾಂತಿ ಕಾರ್ಯಗಳನ್ನು ಮಾಡಿಸುವುದಿದೆ.

“ಮಾವಯ್ಯಾ ಈ ಅರವತ್ತು ವರ್ಷ ತುಂಬಿದಾಗ ಶಾಂತಿಪೂಜೆ ಮಾಡಿಸುವುದೇಕೆ? ಇದರಿಂದೇನು ಪ್ರಯೋಜನ? ಕೆಲವರಂತೂ ಇದನ್ನು ಮದುವೆ ಸಮಾರಂಭದ ರೀತಿಯಲ್ಲಿ ಆಚರಿಸಿಕೊಳ್ಳುತ್ತಾರೆ” ಎಂದು ಕೇಳಿದಳು.

“ನೋಡು ತಾಯೀ, ಜ್ಯೋತಿಷ್ಯ ಎನ್ನುವುದರ ಅರ್ಥವೇ ಗ್ರಹಗತಿಗಳ ಲೆಕ್ಕಾಚಾರ. ಮಗುವೊಂದು ಹುಟ್ಟಿದಾಗ ಆ ಮನೆಯ ಹಿರಿಯರು ಆ ಸಮಯ, ಜನನದ ಊರು, ಹೆತ್ತವರ ಹೆಸರು ಎಲ್ಲವನ್ನೂ ನಮಗೆ ಕೊಟ್ಟು ಕುಂಡಲಿ ಬರೆದುಕೊಡಿ ಎಂದು ಕೇಳುತ್ತಾರೆ. ನಾವು ಅವುಗಳನ್ನು ಉಪಯೋಗಿಸಿಕೊಂಡು ಆ ಸಮಯದ ಗ್ರಹಗತಿಗಳ ಸ್ಥಾನಗಳನ್ನು ಲೆಕ್ಕಹಾಕಿ ಕುಂಡಲಿ ಬರೆದುಕೊಡುತ್ತೇವೆ. ಆ ರಾಶಿ, ನಕ್ಷತ್ರಕ್ಕೆ ಮಗುವಿಗೆ ಯಾವ ಅಕ್ಷರದಿಂದ ಹೆಸರನ್ನಿಡಬೇಕೆಂದು ಹೇಳುತ್ತೇವೆ. ಜನ್ಮಕಾಲದ ದೋಷವೇನಾದರೂ ಇದ್ದರೆ ಅದಕ್ಕೆ ಸೂಕ್ತ ಪರಿಹಾರಾರ್ಥವಾಗಿ ಪೂಜೆಪುನಸ್ಕಾರಗಳನ್ನು ಮಾಡಿಸಲೂ ಸೂಚಿಸುತ್ತೇವೆ. ಅದನ್ನು ಮಾಡಿಸುವುದು ಬಿಡುವುದು ಅವರಿಷ್ಟ. ಆ ನಂತರ ಆಗ ಇದ್ದ ಗ್ರಹಗತಿಗಳ ಬಲಾಬಲದಲ್ಲಿ ಶುಭ, ಅಶುಭ ಫಲಗಳೇನೆಂಬುದನ್ನು ಹೇಳಿ ಅವೆಲ್ಲವೂ ಅರವತ್ತು ವರ್ಷಗಳಾದಾಗ ಮರಳಿ ಬರುತ್ತವೆ ಎಂಬುದು ನಂಬಿಕೆ. ಆಗ ನಾವೇನೇನು ಪೂಜಾಕಾರ್ಯಗಳನ್ನು ಆರಂಭದಲ್ಲಿ ದೋಷಪರಿಹಾರಕ್ಕೆ ಮಾಡಿರುತ್ತೇವೆಯೋ ಅವೆಲ್ಲವೂ ಮತ್ತೊಮ್ಮೆ ಪುನರಾವರ್ತನೆಯಾಗುತ್ತವೆ. ವ್ಯಕ್ತಿಯು ಸಂಸಾರವಂದಿಗರಾಗಿದ್ದರೆ ದಂಪತಿಗಳು ಜೊತೆಗೂಡಿ ಶಾಂತಿ ಪೂಜೆ ಮಾಡಿಸಬೇಕು. ಮಾಂಗಲ್ಯಧಾರಣೆಯಿಂದ ಹಿಡಿದು ಎಲ್ಲವೂ ಪುನರಾವರ್ತನೆಯಾಗುತ್ತದೆ. ಅದು ಮುಂದಿನ ಹಂತಕ್ಕೆ ಮೆಟ್ಟಿಲು. ನಂತರದ್ದೆಲ್ಲ ಆಯುಸ್ಸಿರುವವರೆಗೂ ಆರೋಗ್ಯವಾಗಿದ್ದು ನಿರಾಯಾಸ ಮರಣ ಪ್ರಾಪ್ತಿಯಾಗಲೆಂದು ಪೂಜೆ ಮಾಡಿಸುವುದಷ್ಟೆ. ಉಳ್ಳವರು ಈ ಸಮಯದಲ್ಲಿ ದಾನಧರ್ಮಗಳನ್ನು ಯತೇಚ್ಛವಾಗಿ ಮಾಡುವುದುಂಟು. ಅವರವರ ಅನುಕೂಲ. ಏನೂ ಇಲ್ಲದವರು ದೇವಸ್ಥಾನಕ್ಕೆ ಹೋಗಿ ಹಣ್ಣುಕಾಯಿ ಅರ್ಚನೆ ಮಾಡಿಸಿ ನಮಸ್ಕರಿಸಿ ಕಾಪಾಡು ರಕ್ಷಕ, ಅನಾಥಬಂಧು, ದಯಾಸಿಂಧು, ಎಂದು ಬೇಡಿಕೊಳ್ಳುತ್ತಾರೆ.

ಹುಟ್ಟಿದಾಗಲೇ ನಮ್ಮ ಆಯುಸ್ಸು, ಕೊನೆಯ ನಿಲ್ದಾಣ ನಿಗದಿಯಾಗಿರುತ್ತದೆ. ಅದು ಬರುವವರೆಗೆ ಮರಣವಿಲ್ಲ. ಆದರೆ ಆಯುಸ್ಸು ಮುಗಿದ ಕ್ಷಣವೇ ನಾವು ಇರುವುದಿಲ್ಲ. ನಂಬಿದರೆ ವಿಶ್ವಾಸವಿಟ್ಟರೆ ಜ್ಯೋತಿಷ್ಯ, ಇಲ್ಲದಿದ್ದರೆ ಅದು ಬರಿಯ ಸುಳ್ಳೆಂದು ಹೇಳಲಿಕ್ಕಾಗದು. ಯಾರೂ ನೂರಕ್ಕೆ ನೂರರಷ್ಟು ನಿಖರವಾಗಿ ಹೇಳಲಾಗದು. ಕಣ್ಣು ಮಿಟುಕಿಸಿ ತೆಗೆಯುವಷ್ಟರಲ್ಲಿ ಘಳಿಗೆಗಳು ವ್ಯತ್ಯಾಸವಾಗುತ್ತವೆ. ಮಗುವಿನ ಜನನದ ಕರಾರುವಾಕ್ಕಾದ ಸಮಯದಲ್ಲಿನ ಗ್ರಹಗತಿಗಳ ಲೆಕ್ಕಾಚಾರವನ್ನು ಹೇಳಲು ಕ್ರಮವಾಗಿ ಕಲಿತಿರಬೇಕು. ಶ್ರದ್ಧಾಭಕ್ತಿಯಿಂದ ಅದನ್ನು ಸತತ ಅಭ್ಯಾಸ ಮಾಡಬೇಕು. ಯಾರಾದರೂ ವಿಷಮ ಪರಿಸ್ಥಿತಿಯಲ್ಲಿ ನಮ್ಮಲ್ಲಿಗೆ ಬಂದಾಗ ಅವರಿಗೆ ಇಲ್ಲಸಲ್ಲದ್ದನ್ನು ಹೇಳಿ ಹೆದರಿಸುವುದರ ಬದಲು ಅದನ್ನೇ ಜಾಣ್ಮೆಯಿಂದ ನಿವಾರಿಸಿಕೊಳ್ಳುವ ಬಗೆಯನ್ನು ತಿಳಿಸುವ ತಾಳ್ಮೆ ಬೆಳೆಸಿಕೊಂಡು ಭರವಸೆ ಮೂಡಿಸಬೇಕು. ನಾನು ಹನ್ನೆರಡು ರಾಶಿಗಳಲ್ಲಿ ಆಯುಸ್ಸು, ಆರೋಗ್ಯಕ್ಕೆ ಸಂಬಂಧಿಸಿದ್ದನ್ನು ಅಧ್ಯಂiನ ಮಾಡಿದ್ದೇನೆ. ಏನೇ ಸಮಸ್ಯೆಯಿದ್ದರೂ ಸರಿಯಾಗಿ ಲೆಕ್ಕಾಚಾರ ಹಾಕಿದರೆ ತೊಂದರೆ, ತಾಪತ್ರಯದ ಮೂಲ ತಿಳಿದು ಹೋಗುತ್ತದೆ. ಆದರೆ ಒಂದು ಮಾತು, ಮೂರುಹೊತ್ತೂ ಅದರದ್ದೇ ಜಪಮಾಡುತ್ತಾ ಮೂಢನಂಬಿಕೆಯಂತೆ ಬೆಳೆಸಿಕೊಂಡು, ಗೀಳು ಹತ್ತಿಸಿಕೊಂಡು ಜೀವನದ ಸುಖ ಸಂತೋಷಗಳನ್ನು ಕಳೆದುಕೊಳ್ಳಬಾರದು” ಎಂದರು.

“ಓ..ಇದೆಲ್ಲ ಸರಿ, ನಿಮ್ಮ ಮುತ್ತಾತನವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಉದ್ದಾಮ ಪಂಡಿತರಾಗಿದ್ದರಂತೆ. ಸುತ್ತಮುತ್ತಲಿನ ಜನರು ಅವರ ಮಾತಿಗೆ ಎರಡಿಲ್ಲದಂತೆ ನಡೆದುಕೊಳ್ಳುತ್ತಿದ್ದರೆಂದು ಹಿರಿಯಜ್ಜ ಇಲ್ಲಿಗೆ ಬಂದಾಗಲೆಲ್ಲ ಹೇಳುತ್ತಿರುತ್ತಾರೆ. ಆದರೆ ಅವರು ಸಂಗೀತ, ಆಯುರ್ವೇದ, ಜನಪದ ಸಂಗ್ರಹಗಳನ್ನು ಅಚ್ಚುಕಟ್ಟಾಗಿ ಮಾಡಿಟ್ಟಿದ್ದಾರಾದರೂ ಜ್ಯೋತಿಷ್ಯದ ಬಗ್ಗೆ ಯಾವುದೇ ಪುಸ್ತಕವಾಗಲೀ, ಸಂಗ್ರಹವಾಗಲೀ ಮಾಡಿಲ್ಲವೇ?” ಎಂದು ಕೇಳಿದಳು. 

“ಮಾಡಿದ್ದರಂತೆ ಅದು ಲಭ್ಯವಿಲ್ಲ ತಾಯಿ, ಏನೋ ಕೆಟ್ಟ ಗಳಿಗೆಯಲ್ಲಿ ದಂಪತಿಗಳ ಜೀವನದಲ್ಲಿ ಅಸಮಾಧಾನದ ಹೊಗೆ ಹುಟ್ಟಿಕೊಂಡಿತಂತೆ. ಆ ಸಿಟ್ಟಿನಲ್ಲಿ ಮುತ್ತಜ್ಜಿ ಅದನ್ನು ಬೆಂಕಿಗೆ ಆಹುತಿ ಮಾಡಿದರೆಂದು ಹೇಳುತ್ತಾರೆ. ನಿಜವೋ ಸುಳ್ಳೋ ತಿಳಿಯದು. ನೀನೀಗ ಪ್ರತಿಮಾಡಿದೆಯಲ್ಲಾ ಅವನ್ನೆಲ್ಲ ಮನೆಯವರು ಎತ್ತಿಟ್ಟದ್ದು . ನಾನು ಅವುಗಳನ್ನು ಕಾಪಾಡಿಕೊಂಡು ಬಂದಿದ್ದೆ. ನಿನ್ನಿಂದ ಅವೆಲ್ಲವೂ ಪುಸ್ತಕರೂಪದಲ್ಲಿ ಬೆಳಕು ಕಂಡವು.” ಎಂದರು. ಅಷ್ಟರಲ್ಲಿ ಶ್ರೀನಿವಾಸನ ಆಗಮನವಾದದ್ದರಿಂದ ಚರ್ಚೆಗೆ ವಿರಾಮ ಬಿದ್ದಿತು.

ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=36048

ಬಿ.ಆರ್.ನಾಗರತ್ನ, ಮೈಸೂರು

4 Responses

  1. ನಯನ ಬಜಕೂಡ್ಲು says:

    Beautiful story

  2. Padmini Hegade says:

    Interesting story!

  3. ಧನ್ಯವಾದಗಳು… ನಯನ..ಮತ್ತು… ಪದ್ಮಿನಿ ಮೇಡಂ.

  4. Padma Anand says:

    ಸಂಸಾರದಲ್ಲಿ, ಸೇರಿದ ಮನೆಯ ಬಗ್ಗೆ ಭಾಗ್ಯಳಿಗೆ ಇರುವ ಆಸಕ್ತಿ ಮೆಚ್ಚಬೇಕಾದದ್ದೇ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: