ಲಹರಿ

ಕೊನೆಗೂ ದಕ್ಕಿತು ಕನ್ನಡಕ

Share Button

ಕೆಲ ಆಸೆಗಳು ಹಾಗೇ, ಏನಕ್ಕೆ ಹುಟ್ಟುತ್ತವೆ ಎಂದು ಯಾರಿಗೂ ಅರ್ಥವಾಗಲ್ಲ. ಯಾವಾಗ ಹುಟ್ಟಿತೆಂಬ ನೆನಪೂ ಇರಲ್ಲ. ಆದರೂ ಮನದ ಒಂದು ಮೂಲೆಯಲ್ಲಿ ಸುಮ್ಮಗೆ ಗೂಡು ಕಟ್ಟಿ ಕುಳಿತಿರುತ್ತವೆ.ಜೀರುಂಡೆಯಂತೆ ಒಂದೇ ಸಮನೆ ಸದ್ದು ಮಾಡದೆ ಹೋದರೂ , ಸಮಯದೊರೆತಾಗೆಲ್ಲಾ ತನ್ನ ಇರುವಿಕೆಯನ್ನು ತೋರಿಸುತ್ತಿರುತ್ತದೆ. ನನ್ನದೇನೂ ಮಹಾದಾಸೆಯಲ್ಲ. ಅದೊಂದು ಪುಟ್ಟ ಆಸೆ. ಪುಟ್ಟ ಪುಟ್ಟ ಆಸೆಗಳಿಲ್ಲದೆ ಅದೇನು ಜೀವನ, ಅಲ್ಲವೇ?

ಬಹುಶಃ ಶಾಲೆಗೇ ಸೇರಿದ ಹೊಸತರಲೆಲ್ಲೋ ಮೂಡಿದ ಒಂದು ಸಣ್ಣ ಕುತೂಹಲ. ತರಗತಿಯಲ್ಲಿ ನನ್ನ ಪಕ್ಕಕ್ಕೆ ಬಂದು ಕುಳಿತ ಹೊಸ ಕೂಸಿನ ಕಣ್ಣ ಮೇಲಿದ್ದ ಇನ್ನೆರೆಡು ಕಣ್ಣುಗಳು.ಅದನ್ನು ಜೋಪಾನವಾಗಿ ಇಡಲು ಅದೊಂದು ಪುಟ್ಟ ಡಬ್ಬಿ. ಅದರೊಳಗೆ ಒಂದು ಮೃದುವಾದ ವಸ್ತ್ರ. ಗಂಟೆಗೊಮ್ಮೆ ಆ ವಸ್ತ್ರದಿಂದ ತನ್ನ ಕನ್ನಡಕವನ್ನು ಉಜ್ಜುವ ಅವಳನ್ನು ನೋಡಿ “ಇದ್ಯಾಕಪ್ಪ್ಪಾ” ಅಂತ ಕೇಳುತಿತ್ತು ನನ್ನ ಮನಸ್ಸು. ಊರಲ್ಲಿ ಅಜ್ಜ-ಅಜ್ಜಿಯ ಬಳಿ ಕನ್ನಡಕಗಳನ್ನು ನೋಡಿದ್ದರೂ, ಎಂದೂ ಧರಿಸುವ ಅವಕಾಶ ದೊರೆತಿರಲಿಲ್ಲ . ಮುಂದಿನ ರಜೆಯಲ್ಲಂತೂ ಅಜ್ಜಿಯ ಕನ್ನಡಕವನ್ನು ತನ್ನದಾಗಿಸಿಕೊಳ್ಳುವುದು ಅಂತ ನಾನು ನಿರ್ಧರಿಸಿ ಬಿಟ್ಟಿದ್ದೆ. “ಕನ್ನಡಕವೆಲ್ಲಾ ಆಟದ ಸಮಾನಲ್ಲ. ಮಕ್ಕಳಿಗ್ಯಾಕೆ. ನಿನಗೇನೂ ಕಣ್ಣು ಕಾಣಲ್ಲವೇ?” ಏಂದು ಕೇಳಿ ಸುಮ್ಮನಾಗಿಸಿದರು ಅಜ್ಜಿ. ಅಲ್ಲಿಗೆ ಆ ಆಸೆ ಮನದ ಗೂಡು ಸೇರಿ ಬಿಟ್ಟಿತು.

ವರ್ಷಗಳು ಕಳೆದು ಹೋದವು.ಕನ್ನಡಕದ ಆಸೆ ತೆಪ್ಪಗೆ ಕುಳಿತಿತ್ತು. ಹೈಸ್ಕೂಲ್ ಸಮಯ. ನನಗಿಂತ ಒಂದು ವರ್ಷ ಕಿರಿಯವಳಾದ ಅತ್ತೆ ಮಗಳು ಮನೆಗೆ ಬಂದಳು. ಕಳ್ಳ-ಪೊಲೀಸ್ ಆಟವು ಪ್ರಾರಂಭವಾಯಿತು. ಅವಳ ಚೀಲದಿಂದ ಹೊರ ಬಂತು ಮತ್ತದೇ ಡಬ್ಬಿ. ಅಮ್ಮ ಕೇಳಿಯೇ ಬಿಟ್ಟರು ” ಸ್ಮಿತಾ, ಇದು ಯಾವಾಗ ಬಂತು?”. ಅವಳು ಕನ್ನಡಕವನ್ನು ಸರಿ ಮಾಡುತ್ತಾ “ಜಾಸ್ತಿ ಓದಲು ಇರುವುದರಿಂದ ಕಣ್ಣಿಗೆ ಸ್ಟ್ರೈನ್ ಆಗ್ತಾ ಇದೆ. ಡಾಕ್ಟರ ಸಲಹೆಯ ಮೇರೆಗೆ ಕಳೆದ ತಿಂಗಳಷ್ಟೇ ಮಾಡಿಸಿದ್ದು ಎಂದು ಬಿಟ್ಟಳು. ಬಂತು ನೋಡಿ ನನ್ನ ಮನಸಲ್ಲಿ ಮುಂದಿನ ಪ್ರಶ್ನೆ, ಹಾಗಿದ್ದರೆ ನನಗೆ ಯಾಕೆ ಇನ್ನೂ ಸ್ಟ್ರೈನ್ ಆಗಿಲ್ಲ. ಒತ್ತಡ ಬರುವಷ್ಟು ಓದಿದರೆ ಮಾತ್ರ ಕನ್ನಡಕದ ಸಲುಹೆ ಸಿಗಲು ಸಾಧ್ಯ ಎಂಬ ಅರಿವಾಯಿತು. ಅದಕ್ಕಾಗಿ ಕಷ್ಟ ಪಡುವಷ್ಟೇಲ್ಲಾ ಒಳ್ಳೆ ಹುಡುಗಿ ನಾನಲ್ಲ. ಮತ್ತೆ ಆ ಆಸೆಯನ್ನ ನಾನೇ ತಳ್ಳಿ ಮೂಲೆಗೆ ಕೂರಿಸಿದೆ.

ಇನ್ನೊಂದಷ್ಟು ವರ್ಷ ಕಳೆದು ಹೋಯಿತು. ದ್ವಿತೀಯ ಪಿ.ಯು.ಸಿ ಅನಿಸುತ್ತದೆ. ತಂಗಿಗೆ ಅದೇನೂ ತಲೆ ನೋವು ಶುರುವಾಗಿತ್ತು.ಪರವಾಗಿಲ್ಲ ತಲೆ ಇದೆ ಅಂತಾಯಿತಲ್ಲಾ ಎಂದೆಲ್ಲಾ ಕಾಲು ಎಳೆಯುತಿದ್ದೆ ನಾನು. ಅಷ್ಟರಲ್ಲಿ ಅಪ್ಪ ಅಂದೇ ಬಿಟ್ಟರು “ಕಣ್ಣು ಟೆಸ್ಟ್ ಮಾಡುವ. ಬಹುಶಃ ಕಣ್ಣಿನ ತೊಂದರೆ ಇರಬಹುದು”. ನನಗೂ ತಲೆ ಎಲ್ಲಾ ಸಿಡಿಯಲು ಪ್ರಾರಂಭವಾಯಿತು. ಇಬ್ಬರೂ ಹೋದೆವು ಡಾಕ್ಟರ ಬಳಿ. ನಾನು ಸಂಶಯಿಸಿದ ಹಾಗೇ ಅವಳಿಗೂ ಬಂತು ಕನ್ನಡಕ. ನನಗೆ ಸುಮ್ಮನೆ ಬೆನ್ನ ತಟ್ಟಿ ಕಳುಸಿಬಿಟ್ಟರು. ಅಲ್ಲಿಗೆ ನನ್ನ ಮನಸ್ಸು ಮತ್ತೆ ಹೇಳಿತು “ಎಲ್ಲರಿಗೂ ಬಂತು ಕನ್ನಡಕ. ಈಗ ನೀನು ಮಾತ್ರ ದಡ್ಡಿ ಅಂತ ಎಲ್ಲರಿಗೂ ಗೊತ್ತಾಗಿ ಬಿಡುತ್ತೆ!”. ತಂಗಿಯನ್ನು ಗದರಿಸಿ ಒಂದೆರಡು ಬಾರಿ ಹಾಕಿ ನೋಡುವುದಲ್ಲದೆ ನನ್ನಲ್ಲಿ ಬೇರೆ ಏನೂ ಮಾರ್ಗವಿರಲಿಲ್ಲ.

ಇಂಜಿನಿಯರಿಂಗ್ ಸೇರಿ ಆಯಿತು. ಹಾಸ್ಟೆಲ್ ಜೀವನ. ಹೊಸ ಗೆಳೆಯರ ಬಳಗ. ಎಲ್ಲವು ಹೊಸತು. ಅಲ್ಲೂ ಸಿಗಬೇಕೇ 4 ಕಂಗಳ ಗೆಳತಿ!. ಅದೂ ನನ್ನದೇ ರೂಮಿನಲ್ಲೇ. ಗೆಳೆತನ ಬೆಳೆದಂತೆ ಅವಳಲ್ಲಿ ಮೆಲ್ಲಗೆ ಹೇಳಿಕೊಂಡೆ ನನ್ನೀ ಆಸೆಯನ್ನು. “ಹಾಕಿಕೋ, ನನ್ನ ಕನ್ನಡಕ ಹಾಕಿದವರಿಗೆಲ್ಲಾ ಅತೀ ಶೀಘ್ರದಲ್ಲೇ ಕನ್ನಡಕ ಭಾಗ್ಯ ಸಿಗುತ್ತೆ” ಅಂತ ಹರಸಿದಳು. ಅದರಂತೆ ತಲೆ ನೋವು ಶೀಘ್ರದಲ್ಲೇ ಪ್ರಾರಂಭವಾಯಿತು. ಹೋಗಾಯಿತು ಡಾಕ್ಟರ ಬಳಿ. ಈ ಬಾರಿ ನಿರೀಕ್ಷೆ ಇನ್ನೂ ಹದ ಮೀರಿತ್ತು. ಆದರೆ ಮತ್ತೆ ನಿರಾಸೆ. “ನಿಮಗೆ ಶೀತದ ತಲೆನೋವಷ್ಟೇ.ಕನ್ನಡಕದ ಅಗತ್ಯವಿಲ್ಲ” ಎಂದೇ ಬಿಟ್ಟರು ಡಾಕ್ಟರು. ಅಷ್ಟರಲ್ಲಿ ಅಪ್ಪನಿಗಂತೂ ನನ್ನ ರೋಗದ ಮನವರಿಕೆ ಆಗಿತ್ತು. ಅಂತೂ ತೆಗೆಸಿ ಕೊಟ್ಟರು ಒಂದು “ಆಂಟಿ ಗ್ಲೈರೆಸ್”. ಮುನ್ನೆಚ್ಚರಿಕೆಗಾಗಿ ಯಾರುಬೇಕಾದರೂ ಉಪಯೋಗಿಸಬಹುದಾದ ಹೊಸ ನಮೂನೆ ಕನ್ನಡಕ. ಅಂತೂ ಬಹುಕಾಲದ ಇಂಗಿತವನ್ನು ಆ ಮೂಲಕ ತೀರಿಸಿಕೊಂಡಾಯಿತು.

ಕೆಲಸಕ್ಕೆ ಸೇರಿದಮೇಲಂತೂ ಸುತ್ತಲೂ ಕನ್ನಡಕಧಾರಿಗಳೇ ಸರಿ. ಒಂದಷ್ಟು ಬಗೆಯ ಪ್ಲೈನ್ ಗ್ಲಾಸುಗಳನ್ನು ನಾನೂ ಕೊಂಡುಕೊಂಡೆ. ದಿನಾ ಕನ್ನಡಕಗಳ ಜೊತೆ ಹೆಣಗಾಡುವವರ ರಗಳೆಗಳು ಅರಿವಾಗತೊಡಗಿತು. ಮೂಗಿನ ಮೇಲೆ ಗಟ್ಟಿಯಾಗಿ ಕೂರಬಲ್ಲ ಆ ಕೃತಕ ಕಣ್ಣುಗಳು ಬಾರಿ ಆಟಿಕೆಗಳಲ್ಲ. ಹಲವರ ಅನಿವಾರ್ಯ ವಸ್ತು. ಅಲ್ಪ-ಸ್ವಲ್ಪ ಏರು ಪೇರುಗಳನ್ನು ಅಲ್ಲಗಳೆದು ಅದೆಷ್ಟೋ ಜನರ ದೈನಂದಿಕ ಜೀವನನ್ನು ಸೊಗಸಾಗಿಸುವುದೇ ಈ ಸುಲೋಚನಗಳು ಎಂಬುವುದು ತಿಳಿಯತೊಡಗಿತು. ಕಂಪ್ಯೂಟರುಗಳಿಂದ ಬರುವ ನೇರಳಾತೀತ ಕಿರಣಗಳಿಂದಾಗಿ ನಮ್ಮಲ್ಲಿನ ಎಳೆಯ ಮಕ್ಕಳಿಗೂ ಈಗ ಕನ್ನಡಕ ಅನಿವಾರ್ಯವಾಗಿ ಬಿಟ್ಟಿದೆ. ಆರೋಗ್ಯಕರವಾದ ಕಣ್ಣುಗಳು ಒಂದು ಭಾಗ್ಯ ಎಂದು ಯಾರೇ ಹೇಳಲಿ ಥಟ್ಟಂತ ನನ್ನ ಈ ಹೆಡ್ಡು ಆಸೆಯು ನೆನಪಿಗೆ ಬರುತ್ತದೆ.ಜೊತೆಗೆ ಒಂದು ಮುಗುಳು ನಗೆಯೂ ಕೂಡ.
 .

 

– ಪಲ್ಲವಿ ಭಟ್, ಬೆಂಗಳೂರು

15 Comments on “ಕೊನೆಗೂ ದಕ್ಕಿತು ಕನ್ನಡಕ

  1. ಸುಂದರ ಬರಹ. ಕನ್ನಡಕದ ಆಸೆ ನನಗೂ ಇತ್ತು.. ನಿನ್ನ ಹಾಗೇ ಅಜ್ಜಿ ಅಜ್ಜನ ಕನ್ನಡಕ ಹಾಕಿ ಬೈಯಿಸಿಕೊಂಡು ಕೂತದ್ದೂ ಇದೆ. ಕನ್ನಡಕಧಾರಿಗಳ ಕಷ್ಟಗಳ ನೋಡಿ ಆ ಆಸೆ ಮಾತ್ರ ಹಿಮ್ಮೆಟ್ಟಿ ಹೋಗಿದೆ. ☺️

  2. ಉತ್ತಮ ಬರಹ, ಇಷ್ಟವಾಯಿತು. ಬಾಲ್ಯದಲ್ಲಿ ಹಿರಿಯರನ್ನು ಅನುಕರಿಸಬಯಸುವ ನಾವು, ದೊಡ್ಡವರಾದ ಮೇಲೆ, ಬಾಲ್ಯ ಕಳೆದು ಹೋಯಿತು..ಮಕ್ಕಳಾಗಿದ್ದಾಗ ಎಷ್ಟು ಚೆನ್ನಾಗಿತ್ತು ಅಂತ ಹಪಹಪಿಸುತ್ತೇವೆ!

    1. ಧನ್ಯವಾದಗಳು ಮಾಮ್ 🙂 ನಿಮ್ಮ ಮಾತು ನೂರಕ್ಕೆ ನೂರರಷ್ಟು ನಿಜ 🙂

  3. ತುಂಬಾ ಇಷ್ಟವಾಯಿತು ಬರಹ. ನಿನಗಿದ್ದ ಆಸೆಗಳೆಲ್ಲವೂ ಇನ್ನೂ ಕಥೆಗಳ ರೂಪದಲ್ಲಿ ಬರಲಿ. .

  4. ಹ್ಹ ಹ್ಹು .. ಕನ್ನಡಕಕದ ಆಸೆಯು ಕೊನೆಗೆ ಈ ಬರಹಕ್ಕಾದರೂ ಮೂಲವಾಯಿತಲ್ಲ ! ಚೆನ್ನಾಗಿತ್ತು ಬರಹ…..

  5. ಅದ್ಭುತ ಪ್ರಯತ್ನ . ಕನ್ನಡಕದ ಆಸೆ ಇರದವರು ಅಪರೂಪ .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *