ರಾಮೇಶ್ವರ….ಮಧುರೈ- ಭಾಗ 1

Share Button

 

ಅಂದು ಡಿಸೆಂಬರ್ 23 2016.ಬೆಳಗಿನ ಚುಮು ಚುಮು ಚಳಿಯಲ್ಲಿ ಹೊರಟಿತ್ತು ನಮ್ಮ ಪ್ರಯಾಣ ಶ್ರೀ ಕ್ಷೇತ್ರ ರಾಮೇಶ್ವರದತ್ತ. ಇದು ನಮ್ಮ ಮನೆಯ ಹಿರಿಯರೆಲ್ಲ ಸೇರಿ ಕೈಗೊಂಡ ಯಾತ್ರೆ.

ಶಾಸ್ತ್ರದಲ್ಲಿ ಹೇಳುತ್ತಾರೆ ಮೊದಲು ಶ್ರೀ ಕ್ಷೇತ್ರ ರಾಮೇಶ್ವರ ದಶ೯ನ ಮಾಡಿ ಅಲ್ಲಿಯ ಮರಳನ್ನು ತೆಗೆದುಕೊಂಡು ಬಂದು ಶ್ರೀ ಕ್ಷೇತ್ರ ಕಾಶಿಯ ಗಂಗಾ ತಟದಲ್ಲಿ ಹಾಕಿ ಕಾಶಿ ವಿಶ್ವನಾಥನ ದಶ೯ನ ಮಾಡಿ ಗಂಗಾ ತೀಥ೯ವನ್ನು ತೆಗೆದುಕೊಂಡು ಬಂದು ಮತ್ತೆ ಶ್ರೀ ಕ್ಷೇತ್ರ ರಾಮೇಶ್ವರದಲ್ಲಿ ಮಹಾಸ್ವಾಮಿಗೆ ಅಭಿಷೇಕ ಮಾಡಿಸಬೇಕೆನ್ನುವ ಉಲ್ಲೇಖವಿದೆ.

ಆದರೆ ಇದು ನನಗೊದಗಿದ ಕಾಕತಾಳೀಯವೊ ಅಥವಾ ನನ್ನ ಅದೃಷ್ಟವೊ ಗೊತ್ತಿಲ್ಲ 2016ರ ಆಕ್ಟೋಬರ್ 8 ರಂದು ಮೂರು ತಿಂಗಳ ಮುಂಚೆಯೇ ಮುಂಗಡ ಕಾಯ್ದಿರಿಸಿದ ಟಿಕೆಟ್ ಕ್ಯಾನ್ಸಲ್ ಮಾಡಬೇಕಾಯಿತು. ಕಾರಣ ಆರೋಗ್ಯ ಎಚ್ಚರ ತಪ್ಪಿತ್ತು. ಆಗ ಅದೆಷ್ಟು ದುಃಖ ಬೇಸರವಾಗಿತ್ತು. ಆದರೆ ಈಗನಿಸುತ್ತದೆ; ನಮ್ಮಲ್ಲಿ ಒಂದು ಗಾದೆಯಿದೆ. “ಆಗೋದೆಲ್ಲ ಒಳ್ಳೆಯದಕ್ಕೆ”. ಮನೆಯ ಹಿರಿಯರ ಜೊತೆ ಕಾಶಿಗೆ ಹೋಗಲಾಗದಿದ್ದರೂ ಶ್ರೀ ಕ್ಷೇತ್ರ ರಾಮೇಶ್ವರಕ್ಕೆ ಅವರೊಟ್ಟಿಗೆ ಹೋಗುವ ಅವಕಾಶ ಒದಗಿ ಬಂದಿದೆ. ನಂತರದ ಪ್ರಯಾಣ ಕಾಶಿಗೆ ಹೋಗುವ ಯೋಚನೆ.

ಇನೋವಾ ಬಾಡಿಗೆ ವಾಹನದಲ್ಲಿ ಒಂದು ದಿನದ ಊಟದ ತಯಾರಿಯೊಂದಿಗೆ ಬೆಳಗ್ಗೆ ಆರು ಗಂಟೆಗೆ ಬೆಂಗಳೂರನ್ನು ಬಿಟ್ಟೆವು. ಸಾಗುವ ದಾರಿಗೆ ಕೊನೆಯಿಲ್ಲ, ಕಾಣುವ ಸೊಬಗಿಗೆ ಕಣ್ಣೆರಡೂ ಸಾಲದು. ಕಾಂಕ್ರೀಟ್ ಸಮತಟ್ಟಾದ ರಸ್ತೆ ತಮಿಳುನಾಡು ಪ್ರವೇಶಿಸುತ್ತಿದ್ದಂತೆ ಬದಲಾದ ಸೃಷ್ಟಿಯ ಸೌಂದರ್ಯ, ಫಲವತ್ತಾದ ಗದ್ದೆ, ತೋಟ ಎಲ್ಲೆಲ್ಲೂ ಹಸಿರ ಕುಚ್ಚು ಭೂರಮೆಯನ್ನು ಅಪ್ಪಿ ಹಿಡಿದ ಪೈರು. ಮನತಣಿಯೆ ಆಸ್ವಾಧಿಸುತ್ತ ಸಾಗುತ್ತಿತ್ತು ಪಯಣ. ಮಧ್ಯಾಹ್ನದ ಉರಿಬಿಸಿಲು ಏರುತ್ತಿದ್ದಂತೆ ಹೈವೇ. ಬದಿಯಲ್ಲಿ ಕಂಡ ಉಪಹಾರ ಕೇಂದ್ರದಲ್ಲಿ ಹೊಟ್ಟೆ ತಣಿಸಿ ಸಾಗುವ ದಾರಿಯ ಇಕ್ಕೆಲಗಳಲ್ಲಿ ಹುಲುಸಾದ ಸೀಬೆ ಹಣ್ಣಿನ ರಾಶಿ, ಪರಂಗಿ ಹಣ್ಣಿನ ಸೆಳೆತ ಖರೀದಿಸಿದ ಕೈಗಳು ಮೆಲ್ಲನೆ ನಾಲಿಗೆಗೆ ರುಚಿಯ ರಂಗೇರಿಸಿತ್ತು. ಮುಂದಿನ ಊರು ಮಧುರೈ 425 ಕಿ.ಮೀ.ತಲುಪಿದಾಗ ಮಧ್ಯಾಹ್ನ ಮೂರುಗಂಟೆ.

ಅಲ್ಲಿಂದ ಮುಂದೆ 160 ಕೀ ಮೀ. ದೂರದಲ್ಲಿರುವ ರಾಮೇಶ್ವರದತ್ತ ಹೊರಟ ನಮ್ಮ ಪ್ರಯಾಣ ಕಾಶಿಯಿಂದ ತಂದ ಗಂಗಾ ತೀಥ೯ವನ್ನು ಶಿವನಿಗೆ ಅಭಿಷೇಕ ಮಾಡುವ ಉದ್ಧೇಶ ಹಿರಿಯರದು. ನಾವು ಶ್ರೀ ಕ್ಷೇತ್ರವನ್ನು ತಲುಪಿದಾಗ ರಾತ್ರಿ ಏಳು ಗಂಟೆ ಕಳೆದಿತ್ತು. ವಸತಿಗೆ ರೂಮಿನ ಅನ್ವೇಷಣೆ ಪೂರೈಸಿ ಒಮ್ಮೆ ಶಿವನ ದರ್ಶನ ಮಾಡುವ ಧಾವಂತದಲ್ಲಿ ದೇವಸ್ಥಾನದತ್ತ ನಮ್ಮ ನಡಿಗೆ.

ತಮಿಳುನಾಡಿನಲ್ಲಿ ಈ ಕ್ಷೇತ್ರವು ಶಿವ ಮತ್ತು ವಿಷ್ಣುವಿಗೆ ಪವಿತ್ರ ಮತ್ತು ದಿವ್ಯ ಸ್ಥಳವೆಂದು ಭಾವಿಸಲಾಗಿದೆ. ಹಾಗೂ ಹಿಂದೂಗಳ ಯಾತ್ರಾ ಸ್ಥಳ ಕೂಡಾ.  ಶಂಖು ಆಕಾರವನ್ನು ಹೋಲುವ ಈ ಕ್ಷೇತ್ರವು  ರಾಮಾಯಣ ಕಾಲದಲ್ಲಿ  ಪುರಾತನ ಹಿನ್ನೆಲೆ ಇದೆ.

ಶ್ರೀ ರಾಮೇಶ್ವರವು ಪಾಂಬನ್ಗೆ ಈಶಾನ್ಯ ಭಾಗವಾಗಿಯೂ ಧನುಷ್ಕೋಟಿಯು ಆಗ್ನೇಯ ಭಾಗವಾಗಿಯೂ ಸ್ಥಾಪಿತವಾಗಿದೆ.    ಶ್ರೀ ಮಹಾವಿಷ್ಣುವು ರಾಮಾವತಾರ ತಾಳಿದಾಗ ಎರಡೂ ಕೈಗಳಲ್ಲಿ ಶಂಖು ಮತ್ತು ಚಕ್ರವಿತ್ತಲ್ಲವೆ? ಆದ್ದರಿಂದ ವಿಷ್ಣುವಿಗೆ ಪ್ರಿಯವಾದ ರಾಮೇಶ್ವರವು ಶಂಖು ಆಕಾರವನ್ನು ಹೋಲುತ್ತಿದೆ.

ಶ್ರೀ ರಾಮನು ಈಶ್ವರನನ್ನು ಪ್ರತಿಷ್ಠಾಪಿಸಿರುವುದರಿಂದ ಈ ಕ್ಷೇತ್ರವನ್ನು ರಾಮೇಶ್ವರವೆಂದು ಹೆಸರು ಬಂದಿದೆ.  ಇಲ್ಲಿ ಭಗವಂತನನ್ನು ರಾಮೇಶ್ವರ, ರಾಮ ಲಿಂಗ,ರಾಮನಾಥ ಎಂದು ಕರೆಯುತ್ತಾರೆ. ಲಂಕಾಧಿಪತಿಯಾದ ರಾವಣನು ಸೀತೆಯನ್ನು ಲಂಕೆಯಲ್ಲಿ ಬಂಧಿಸಿದ್ದರಿಂದ ಆಕೆಯನ್ನು ರಕ್ಷಿಸಲು ಶ್ರೀ ರಾಮನು ರಾಮೇಶ್ವರದಿಂದ ಲಂಕೆಗೆ ಹೊರಟನೆಂದು ರಾಮಾಯಣ ಇತಿಹಾಸವು ಹೇಳುತ್ತದೆ.  ರಾಮನು ಸಮುದ್ರ ದೇವನನ್ನು ಹನುಮಂತನಿಗೆ ದಾರಿ ಕೊಡೆಂದು ಕೇಳಿದಾಗ ಆಜಂನೇಯನು ವಾನರ ಸೈನ್ಯದ ಸಹಾಯದಿಂದ ದೊಡ್ಡ ದೊಡ್ಡ ಬಂಡೆಗಳಿಂದ ಸೇತುವೆ ನಿರ್ಮಿಸಿ ಲಂಕೆಗೆ ಮಾರ್ಗವನ್ನು ಏರ್ಪಡಿಸಿದನು. ರಾಮನು ಸೀತೆಯನ್ನು ಬಿಡಿಸಿ ನಂತರ ಸೀತೆಯೊಂದಿಗೆ ರಾಮೇಶ್ವರಕ್ಕೆ ಬಂದು ರಾವಣನನ್ನು ಕೊಂದ ಬ್ರಹ್ಮಹತ್ಯಾ ಪಾಪವನ್ನು ತೊಲಗಿಸೆಂದು ಶಿವನನ್ನು ಪ್ರಾರ್ಥಿಸಿದನು.

ರಾಮನಾಥನ ಪ್ರತಿಷ್ಟೆಗೆ ಕೈಲಾಸ ಪವ೯ತದಿಂದ ಶಿವ ಲಿಂಗವನ್ನು ತರಲು ರಾಮನಾಜ್ಞೆಯಂತೆ ಹೊರಟ ಹನುಮಂತ.  ಅವನು ಬರುವಷ್ಟರಲ್ಲೆ ಸೀತಾ ಮಾತೆಯು ಮರಳಿನ ಶಿವಲಿಂಗವನ್ನು ಪ್ರತಿಷ್ಟಾಪಿಸಲಾಗಿ ಅದು ಗಟ್ಟಿಯಾಗಿ ಅಲ್ಲೆ ನೆಲೆನಿಂತಿತು.  ಇತ್ತ ಹನುಮಂತ ಕುಪಿತಗೊಂಡು ಲಿಂಗವನ್ನು ಛಿದ್ರಗೊಳಿಸುವಲ್ಲಿ ವಿಫಲನಾದಾಗ ರಾಮನು ಸಂತೈಸಿ ನೀನು ತಂದ ಲಿಂಗಕ್ಕೆ ಮೊದಲ ಪೂಜೆ ಇದು ವಿಶ್ವಲಿಂಗವೆಂದೂ ಸೀತಾ ದೇವಿಯಿಂದ ನೆಲೆಗೊಂಡ ಲಿಂಗಕ್ಕೆ ರಾಮ ಲಿಂಗವೆಂದೂ ಕರೆಯಲ್ಪಡುತ್ತದೆ.
ವಿಶ್ವ ಲಿಂಗ ದೇವಾಲಯವು ರಾಮ ಲಿಂಗ ದೇವಾಲಯಕ್ಕೆ ಉತ್ತರದಲ್ಲಿದೆ.  ವಿಶಾಲಾಕ್ಷಿ ಗುಡಿಯೂ ಪಕ್ಕದಲ್ಲಿ ಇದೆ.  ಏಕ ಕಾಲದಲ್ಲಿ ಪೂಜೆ ನಡೆಯುತ್ತದೆ.ಈಶ್ವರ ಮತ್ತು ದೇವಿಯ ಬಂಗಾರದ ವಿಗ್ರಹಗಳು ರಾತ್ರಿ ಪೂಜೆಯ ನಂತರ ಪ್ರಾಕಾರವನ್ನು ಸುತ್ತಿ ವಿಶಾಲಾಕ್ಷಿ ಗುಡಿಯಲ್ಲಿ ಉಯ್ಯಾಲೆ ಸೇವೆ ಪಡೆಯುತ್ತದೆ. ಇಲ್ಲಿ ಅಷ್ಟ ಲಕ್ಷ್ಮಿ, ಸಂತಾನ ಗಣಪತಿ, ನಟರಾಜ ಸ್ವಾಮಿ,ಆಂಜನೇಯ ಸ್ವಾಮಿ ದೇವರುಗಳನ್ನು ಕಾಣಬಹುದು.  ದೇವರ ಗುಡಿಗೆ ಎದುರಾಗಿ ವಿಶಾಲವಾದ ಹಜಾರ.

ಒಳಕ್ಕೆ ಹೋಗುವಾಗ  ದಾರಿಯಲ್ಲಿ 12 ಅಡಿ ಉದ್ದ 9 ಅಡಿ ಎತ್ತರವಾದ ನಂದಿ ವಿಗ್ರಹವನ್ನು ದೇವರಿಗೆ ಎದುರಾಗಿ ನಿರ್ಮಿಸಿದ್ದಾರೆ. ಇದನ್ನು ಶಂಖ,ಪಾಷಾಣ ಪುಡಿಯಿಂದ ಮಾಡಿದ್ದಾರೆ.


ನಂದಿಯ ಹಿಂದೆ ಧ್ವಜ ಸ್ಥಂಭವೂ ಇದೆ. ಮೂತ೯, ಸ್ಥಳ, ತೀಥ೯ ಈ ಮೂರೂ ಲಕ್ಷಣಗಳೂ ಈ ಕ್ಷೇತ್ರದಲ್ಲಿ ಕಂಡುಬರುತ್ತದೆ. ನಮ್ಮ ದೇಶದ ದ್ವಾದಶ ಜ್ಯೋತೀರ್ಲಿಂಗಗಳಲ್ಲಿ ರಾಮೇಶ್ವರವೂ ಒಂದು.    ಇಲ್ಲಿ ಎಲ್ಲಾ ಜಾತಿಯವರನ್ನು ಒಂದೆ ರೀತಿ ಸ್ನೇಹದಿಂದ ಕಾಣಲಾಗುತ್ತದೆ.

ಈ ಕ್ಷೇತ್ರವು ಆಳವಾದ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದೆ.  ಪಂಬನ್ ರೈಲ್ವೆ ಸ್ಟೇಷನ್ನನ್ನು ಮತ್ತು ಮಂಟಪಂ ರೈಲ್ವೆ ಸ್ಟೇಷನ್ನನ್ನು ಸೇರಿಸಲು ಒಂದು ಬ್ರಿಟಿಷರ ಕಾಲದ ಅತ್ಯಂತ ಉದ್ದವಾದ ಸೇತುವೆ ಇದೆ. ಈ ಕ್ಷೇತ್ರಕ್ಕೆ ಹೋಗುವಾಗ ಇದರ ಮೇಲೆ ವಾಹನ ಸಾಗುತ್ತಿದ್ದರೆ ಒಮ್ಮೆ ಇಳಿದು ನೋಡದೆ ಮುಂದಡಿಯಿಡಲಾರಿರಿ.  ಎರಡೂ ಕಡೆ ದಟ್ಟನೀಲ ನೀರು, ಸ್ವಚ್ಚಂದ ಆಕಾಶ, ಸಮತಟ್ಟಾದ ಹಾದಿ. ವಾವ್! ಸೂರ್ಯಾಸ್ತಮಾನ ಅಥವಾ ಸೂರ್ಯೋದಯದಲ್ಲಿ ಅದೆಷ್ಟು ರುದ್ರ ರಮಣೀಯವಾಗಿರುವುದೊ ವಣಿ೯ಸಲಾಧ್ಯ. ಕೆಳಗೆ ಬಗ್ಗಿ ನೋಡಿದರೆ ಅಲ್ಲಲ್ಲಿ ನಿಂತ ದೋಣಿಗಳು ಒಂದು ಕಡೆ ರೈಲ್ವೆ ಹಳಿ ನೀರಿನ ಮಧ್ಯೆ ಹಾದು ಹೋಗಿದೆ.  ಸುಂದರವಾದ ಬ್ರಿಡ್ಜ ಇದು.

.
ಬೆಳಿಗ್ಗೆ ನಾಲ್ಕು ಗಂಟೆಗೆ ಗುಡಿಯ ಬಾಗಿಲು ತೆಗೆಯುತ್ತದೆ. ರಾತ್ರಿ ಎಂಟು ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚುತ್ತಾರೆ. ಬೇರೆ ದಿನಗಳಲ್ಲಿ ಬೆಳಗಿನ 5 ಗಂಟೆಯಿಂದ ರಾತ್ರಿ 10 ಗಂಟೆಯವರಗೂ ಪೂಜೆ ಇದೆಯೆಂದು ಪ್ರತೀತಿ. ಧನುಮಾ೯ಸವಲ್ಲವೆ?

ಶ್ರೀ ಕ್ಷೇತದಲ್ಲಿ ದೇವರಿಗೆ ಬೆಳಗಿನ ಜಾವ ನಾಲ್ಕು ಗಂಟೆಗೆ ದೇವರ ಸನ್ನಿಧಿಯಲ್ಲೇ ಹಸುವಿನ ಹಾಲು ಕರೆದು ಅಭಿಷೇಕ ಮಾಡಲಾಗುತ್ತದೆ.  ದೀಪಾರಾಧನೆ ನಡೆಯುತ್ತದೆ. ಭಕ್ತರು ದಷ೯ನಕ್ಕೆ ಆಗಲೆ ತಂಡೋಪತಂಡವಾಗಿ ಬರಲು ಶುರು ಮಾಡುತ್ತಾರೆ. ಭಕ್ತರಿಗೆ ಬೆಳಗಿನ ಆರು ಗಂಟೆಗೆ ದೇವಸ್ಥಾನದ ಪ್ರಾಂಗಣದೊಳಗಿರುವ ಇಪ್ಪತ್ತೆರಡು ತೀಥ೯ಗಳ ಸ್ನಾನದ ವ್ವಸ್ಥೆಯಿದೆ. ಆ ತಿರ್ಥಗಳ ಹೆಸರು ಹೀಗಿವೆ ;

1. ಮಹಾಲಕ್ಷ್ಮಿ ತೀರ್ಥ, 2. ಸಾವಿತ್ರಿ ತೀರ್ಥ, 3. ಗಾಯತ್ರಿ ತೀರ್ಥ, 4. ಸರಸ್ವತಿ ತೀರ್ಥ 5. ಸೇತು ಮಾಧವ ತೀರ್ಥ 6. ಗಂಧ ಮಾದವ ತೀರ್ಥ 7. ಕವಚ ತೀರ್ಥ 8. ಗವಯ ತೀರ್ಥ 9.ಸಳ ತೀರ್ಥ 10.ನೀಲ ತೀರ್ಥ 11.ಶಂಕರ ತಿರ್ಥ 12.ಚಕ್ರ ತೀರ್ಥ 13ಬ್ರಹ್ಮ ಹತ್ಯಾ ಪಾತಕ ವಿಮೋಚನಾ ತೀರ್ಥ 14. ಸೂರ್ಯ ತೀರ್ಥ 15. ಚಂದ್ರ ತೀರ್ಥ 16. ಗಂಗಾ ತೀರ್ಥ 17. ಯಮುನಾ ತೀರ್ಥ 18.ಗಯಾ ತೀರ್ಥ 19.ಶಿವ ತೀರ್ಥ 20. ಸತ್ಯಾಮೃತ ತೀರ್ಥ 21ಸರ್ವ ತೀರ್ಥ 22.ಕೋಟಿ ತೀರ್ಥ.

ಪ್ರತಿಯೊಂದು ತೀರ್ಥದಲ್ಲೂ ತಲೆಯ ಮೇಲೆ ನೀರು ಹಾಕಿಸಿಕೊಳ್ಳುತ್ತಾ ಸಾಗಿದಂತೆ ಮನಸ್ಸು ಅತ್ಯಂತ ಪ್ರಶಾಂತವಾದಂತೆ ಆ ಭಗವಂತನಲ್ಲಿ ಭಕ್ತಿಯ ತನ್ನಷ್ಟಕ್ಕೆ ಉದ್ಭವ ಆಗುವುದಂತೂ ದಿಟ.  ಇಡೀ ದೇಹ ತಣ್ಣೀರ ಅಭಿಷೇಕ.  ಮನಸ್ಸಿನ ಕಾಮನೆಗಳು ದೂರ ತಳ್ಳಿ ಸಮಪ೯ಣಾ ಭಾವದೆಡೆಗೆ ತನು ಬಾಗುವ ಪರಿ ಇಲ್ಲಿ ಬಂದು ಅನುಭವಿಸಿಯೇ ಅರಿಯಬೇಕು. ಕೊನೆಯ ತೀರ್ಥ ಕೋಟಿ ತೀರ್ಥದಲ್ಲಿ ಸ್ನಾನವಾದ ನಂತರ ಸರತಿ ಸಾಲಿನಲ್ಲಿ ಸ್ಪಟಿಕ ಲಿಂಗದ ರೂಪಿ ಆ ಮಹಾಶಿವನ ದರ್ಶನ ನಮಸ್ಕಾರ.

ಗರ್ಭ ಗುಡಿಯ ಹೊರಗಿನಿಂದ ಶಿವಲಿಂಗ ದರ್ಶನ. ಭಸ್ಮವನ್ನು ಎಲ್ಲರಿಗೂ ಕೊಡುತ್ತಾರೆ.  ಬೆಳಗಿನ ಏಳು ಗಂಟೆಗೆ ಮಹಾ ಮಂಗಳಾರತಿ.  ನಂತರ ಆಗಾಗ ಆರತಿ ಬೆಳಗುತ್ತಿರುತ್ತಾರೆ.  ಕಾಶಿಯಿಂದ ತೆಗೆದುಕೊಂಡು ಹೋದ ಗಂಗಾ ತೀರ್ಥ ಶಿವನಿಗೆ ಅರ್ಚಿಸುತ್ತಾರೆ. ಎಣ್ಣೆ ದೀಪದ ಬೆಳಕು ಮಾತ್ರ ಗರ್ಭ ಗುಡಿಯಲ್ಲಿ.ಬೆಳ್ಳಿ ಅಥವಾ ಬಂಗಾರದ ಶೃಂಗಾರ ದೇವಸ್ಥಾನದಲ್ಲಿ ಇಲ್ಲ. ಹಳೆಯ ಕಾಲದ ದೇವಸ್ಥಾನದ ಗರ್ಭ ಗುಡಿ ನಿರಾಭರಣ ಸುಂದರಿ.

ಸರತಿ ಸಾಲಿನಲ್ಲಿ ಬಂದರೆ ಭಕ್ತರ ಕ್ಯೂ ಹನುಮಂತನ ಬಾಲದಂತೆ ಬೆಳೆದಿರುತ್ತದೆ.  ಈ ವ್ಯವಸ್ಥೆಗಾಗಿ ಅಲ್ಲಲ್ಲಿ ಏಜಂಟರು ಓಡಾಡುತ್ತಿರುತ್ತಾರೆ.  ಅವರಿಗೆ ಕೇಳಿದಷ್ಟು ಹಣ ಪಾವತಿಸಿದರೆ ತೀಥ೯ ಸ್ನಾನ ದೇವರ ದಷ೯ನ ಸುಲಭ.  ನಾವೆಲ್ಲರೂ ಅವರ ಸಹಾಯದಿಂದ ಬೆಳಗಿನ ಜಾವ ಐದು ಗಂಟೆಗೆ ದೇವಸ್ಥಾನಕ್ಕೆ ಹೋದವರು ದರ್ಶನ ಪಡೆದು ಹೊರ ಬಂದಾಗ ಬೆಳಗಿನ ಎಂಟು ಗಂಟೆ ದಾಟಿತ್ತು.

 

ಈ ದೇವಸ್ಥಾನ ಅತ್ಯತ್ಭುತ ವಾಸ್ತು ಶಿಲ್ಪ ಒಳಗೊಂಡಿದೆ. ದ್ರಾವಿಡ ಶಿಲ್ಪಕ್ಕೆ ಗುರುತಾಗಿ ದೇವಾಲಯವು ನಿಂತಿದೆ.  ದ್ವೀಪದ ಒಂದು ಸಮುದ್ರ ತೀರದಲ್ಲಿ ಮೂರು ಮಂಟಪಗಳಿವೆ. ದೇವಾಲಯವು 865 ಅಡಿ ಉದ್ದ 657 ಅಡಿ ಅಗಲ 49 ಅಡಿ ಎತ್ತರವನ್ನು ಹೊಂದಿದೆ.  ಗ್ರಾನೈಟ್ ಕಲ್ಲಿನಿಂದ ಕಟ್ಟಲ್ಪಟ್ಟಿದೆ. ದೇವಾಲಯದ ಪಕ್ಕದ ಮೂರು ಮಂಟಪಗಳು 4000 ಅಡಿಗಳ ಉದ್ದ ಹೊಂದಿರುವುದರಿಂದ ಪ್ರಪಂಚದ ಅದ್ಭುತದಲ್ಲಿ ಸೇರಿದೆ.  ಮಂಟಪಕಕ್ಕೆ 5 ಅಡಿ ಎತ್ತರ, ಅದರ ಮೇಲಿನ ಸ್ಥಂಭಗಳು 25 ಅಡಿಗಳು. ದೇವಾಲಯದ ಮಂಟಪವು 1200  ಸ್ಥಂಭಗಳ ಭಾರವನ್ನು ಹೊತ್ತಿದೆ.  ಪೂರ್ವ ಗೋಪುರ 130 ಅಡಿ ಎತ್ತರ ಮತ್ತು ಪಶ್ಚಿಮ ಗೋಪುರ 80 ಅಡಿ ಎತ್ತರವದೆ. ಸೀತಾ ರಾಮರು ಪ್ರತಿಷ್ಠಾಪಿಸಿದ ಲಿಂಗಗಳು ಮೊದಲಿನಂತೆಯೆ ಇವೆ.  12ನೆ ಶತಮಾನದ ಈ ದೇವಾಲಯವನ್ನು ಕಾಲಾನಂತರ ಭಕ್ತರು ಅಭಿಮಾನಿಗಳು ವಿಸ್ತೀಣ೯ವಾದ ಗರ್ಭ ಗುಡಿಯನ್ನು ಕಟ್ಟಿಸಿದರೆಂದು ಚರಿತ್ರೆ ಹೇಳುತ್ತದೆ.  ಈ ದೇವಾಲಯದಲ್ಲಿ ಶ್ರೀ ಚಕ್ರವಿದೆ.  ಪ್ರತಿ ಶುಕ್ರವಾರ ಬಂಗಾರದ ಪಲ್ಲಕ್ಕಿಯಲ್ಲಿ ತಾಳ ಮೇದೊಂದಿಗೆ ಮೆರವಣಿಗೆ ನಡೆಯುತ್ತದೆ.


ಪ್ರವೇಶ ದ್ವಾರದಿಂದ ಹಿಡಿದು ಗಭ೯ಗುಡಿ ಸುತ್ತ ಚಂದ್ರಶಾಲೆ ವಿವಿಧ ದೆವರ ಶಿಲಾ ಮೂತಿ೯ಗಳ ದರ್ಶನ ಎರಡು ಕಣ್ಣು ಸಾಲದು. ಸುತ್ತ ಪ್ರಾಂಗಣದ ಶಿಲಾ ಕಂಬದಲ್ಲಿ ಒಂದೊಂದು ಕಂಬಕ್ಕೂ ಒಂದೊಂದು ಮೂತಿ೯ಗಳ ಕೆತ್ತನೆ.   ಅಂದವಾಗಿ ಬಣ್ಣ ಬಳಿದು ರಾಜರ ಕಾಲದ ಒಡ್ಡೋಲಗ  ಮಂಟಪದ ನೆನಪು ತರಿಸುತ್ತದೆ.  ಒಳಗಿನ ಪ್ರಾಂಗಣ ಶಿಲೆಯ ಬಣ್ಣ ಉಳಿಸಿಕೊಂಡು ಶಿಲ್ಪಿಯ ಕೆತ್ತನೆಯ ಕುಶಲತೆ ಎತ್ತಿ ತೋರಿಸುತ್ತದೆ. ಒಳಗಡೆ ಹೋದರೆ ಇದು ದೇವಸ್ಥಾನವೊ ಅಥವಾ ಯಾವ ರಾಜನರಮನೆಗೆ ಪ್ರವೇಶಿಸುತ್ತಿದ್ದೇವೊ, ಅನ್ನುವಷ್ಟು ವೈಭೋಗದಿಂದ ಕೂಡಿದೆ.  ಸುತ್ತ ಪ್ರಾಂಗಣದಲ್ಲಿ ವಿವಿಧ ದೇವರುಗಳ ಮೂರ್ತಿಗಳಿವೆ.

ಅಲ್ಲಿ ಪಕ್ಕದಲ್ಲೊಂದು ಭಾವಿ ಇದೆ. ಅದು ತೀರ್ಥವೆಂದು ಪರಿಗಣಿಸುವ ಜನ ಹಣ ಕೊಟ್ಟು ಬಾಟಲಿಗಳಲ್ಲಿ ನೀರು ಪಡೆಯುತ್ತಾರೆ.ದೇವಾಲಯದ ನೂರು ಮೀಟರ್ ದೂರದಲ್ಲಿ ಸಮುದ್ರವಿದೆ.  ಗುಡಿಯ ಮುಖ್ಯ ದ್ವಾರ ಸಮುದ್ರದ ಕಡೆಗಿದೆ. ಇಲ್ಲಿಯ ನೀರಿಗೆ ಅಗ್ನಿ ತೀರ್ಥವೆಂದು ಹೆಸರು. ಇಲ್ಲಿ ಉತ್ತಮವಾದ ಊಟ, ವಸತಿ,ಸಾರಿಗೆ ಸೌಕರ್ಯವಿದೆ. ಚಿಕ್ಕ ಪಟ್ಟಣ. ಆದರೆ ಸರಕಾರ ಇಷ್ಟೊಂದು ದೊಡ್ಡದಾದ ಪವಿತ್ರ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಲ್ಲ.

(ಮುಂದುವರಿಯುವುದು)

 – ಗೀತಾ ಜಿ. ಹೆಗಡೆ

 

2 Responses

  1. Shruthi Sharma says:

    ಚೆಂದದ ಬರಹ. ಓದುತ್ತಾ ನಾನೂ ಅಲ್ಲೆಲ್ಲಾ ಹೋದಂತೆ ಭಾಸವಾಯಿತು ☺️

  2. Pushpalatha Mudalamane says:

    ಮಾಹಿತಿ ಪೂರ್ಣ ಲೇಖನ !

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: