ನಾನೂ ಶಿಲ್ಪವಾಗಬೇಕು….
ಬನ್ನಿ ಯಾರಾದರೂ
ಎತ್ತಿಕೊಳ್ಳಿ,
ಶಿಲ್ಪವಾಗಿಸಿ,
ಕಪ್ಪು ಕಲ್ಲಿನಂತೆ ನಾನು
ಗರ್ಭಗುಡಿಯ ಸೇರಬೇಕು,
ಶಿಲ್ಪವಾಗಬೇಕು.
ದೂಪ-ದೀಪ,
ನೈವೇದ್ಯ, ಹೂವು
ಎಲ್ಲದರಿಂದ ನಾ
ಸಿಂಗಾರಗೊಳ್ಳಬೇಕು.
ಮಂತ್ರ-ಘೋಷ, ಗಂಟೆ,
ವಾದ್ಯ ವೃಂದದ ನಡುವೆ
ಪ್ರಸನ್ನಳಾಗಬೇಕು.
ಆಕಾರಕೊಡಿ ನನಗೆ
ನಾ ಶಿಲ್ಪವಾಗಬೇಕು.
ಮಣ್ಣೊಳಗೆ ಮಣ್ಣಾಗಿ
ಸೇರಲಾರೆ ನಾನು.
ಸೂರಿಗೆ ಹೊರೆಯಾಗಿ
ಬದುಕಲಾರೆ ನಾನು.
ಆಕಾರಕೊಡಿ ನನಗೆ
ನಾನೂ ಶಿಲ್ಪವಾಗಬೇಕು
ಗರ್ಭಗುಡಿಯ ಸೇರಬೇಕು.
– ಉಮೇಶ ಮುಂಡಳ್ಳಿ , ಭಟ್ಕಳ