(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
‘ಪಿಯೋ ಪಿಯೋ ತಾಹಿ’ಎಂಬ ಸುಂದರವಾದ ತಾಣವನ್ನು ಯೂರೋಪಿಯನ್ನರು ಮಿಲ್‌ಫೋರ್ಡ್ ಸೌಂಡ್ ಎಂದು ಕರೆದರು. ಒಂದು ಸಾವಿರ ವರ್ಷಗಳ ಹಿಂದೆ ಇಲ್ಲಿಗೆ ಆಗಮಿಸಿದ ಬುಡಕಟ್ಟು ಜನಾಂಗದವರಾದ ಮಾವೊರಿಗಳು ಈ ಸ್ಥಳದ ಚೆಲುವನ್ನು ಕಂಡು ಬೆರಗಾದರು. ಈ ಸ್ಥಳದ ಹತ್ತಿರದಲ್ಲೇ ವಾಸ್ತವ್ಯ ಹೂಡಿ ತಮ್ಮ ಆಹಾರಕ್ಕಾಗಿ ಮೀನುಗಾರಿಕೆ, ಕಾಡುಮೃಗಗಳ ಬೇಟೆ ಹಾಗೂ ಪೌನಾಮಿ ಎಂಬ ಪಚ್ಚೆಕಲ್ಲನ್ನು ಅರಸಲು ಇಲ್ಲಿಗೆ ಆಗಾಗ ಭೇಟಿ ನೀಡುತ್ತಿದ್ದರು. ಪಿಯೋ ಪಿಯೋ ತಾಹಿ ಎಂಬ ಹೆಸರು ಬಂದಿದ್ದಾರೂ ಹೇಗೆ? ಮಾವೊರಿಗಳ ದಂತಕಥೆಯೊಂದರಲ್ಲಿ ಪಿಯೋ ಪಿಯೋ ಎಂಬ ಹಕ್ಕಿಯು ತನ್ನ ಪ್ರೀತಿಯ ಗೆಳತಿಯಾದ ‘ಮಾನಿ’ಯ ಅಕಾಲಿಕ ಮೃತ್ಯುವಿನಿಂದ ನೊಂದು ಹಾಡುತ್ತಾ ಈ ಸ್ಥಳಕ್ಕೆ ಬಂದುದರಿಂದ ‘ಪಿಯೋ ಪಿಯೋ ತಾಹಿ’ ಎಂಬ ಹೆಸರು ಬಂತು. ಇಂದು ಈ ಹಕ್ಕಿಯ ಸಂತತಿ ನಶಿಸಿ ಹೋಗಿದೆ.
ಮತ್ತೊಂದು ಪೌರಾಣಿಕ ಕಥೆ ಹೀಗಿದೆ. ಈ ಚೆಲುವಾದ ಸ್ಥಳವನ್ನು ಸೃಷ್ಟಿಸಿದವಳು ಮಾವೊರಿ ಜನಾಂಗದ ದೇವತೆ ‘ತು-ತೆ-ರಾಕಿ-ವನೋವಾ’. ಈ ರಮ್ಯವಾದ ತಾಣವನ್ನು ಕಂಡು ಬೆರಗಾದ ಸಾವಿನ ದೇವತೆ ‘ಹಿನೆನುಲ್-ದೊ-ಪೋ’, ಈ ತಾಣವನ್ನು ಸಂರಕ್ಷಿಸಲು ಮುಂದಾಗುವಳು. ಸ್ವಾರ್ಥಿಗಳಾದ ಮಾನವರು ಇಲ್ಲಿಯೇ ನೆಲೆಯಾಗಿ, ಈ ಸ್ಥಳವನ್ನು ವಿರೂಪಗೊಳಿಸಿದರೆ ಎಂಬ ಭಯ ಅವಳನ್ನು ಕಾಡಿತ್ತು. ತಮ್ಮ ಐಷಾರಾಮಿ ಜೀವನಕ್ಕಾಗಿ ಪರಿಸರವನ್ನು ಹಾಳು ಮಾಡುವ ಮಾನವರನ್ನು ಯಾರು ತಾನೆ ಸಹಿಸಿಯಾರು? ಅವಳು ಮಾನವರ ಮೇಲೆ ದಾಳಿ ಮಾಡಲು ಪುಟ್ಟದಾದ ಪಿಶಾಚಿಗಳಂತಿದ್ದ ‘ಸ್ಯಾಂಡ್ ಫ್ಲೈಸ್ ’ ಎಂಬ ಕೀಟಗಳನ್ನು ಸೃಷ್ಟಿ ಮಾಡಿದಳು. ಈ ದಾಳಿಕೋರ ಕೀಟಗಳಿಗೆ ಹೆದರಿ ಜನರು ಅಲ್ಲಿ ವಾಸ್ತವ್ಯ ಹೂಡಲಿಲ್ಲ ಎಂಬ ಸಂಗತಿ ಪ್ರಚಲಿತವಾಗಿದೆ. ಈ ಕೀಟಗಳು ಸದಾ ಗುಯ್ ಎಂಬ ಸದ್ದು ಮಾಡುತ್ತಿರುವುದರಿಂದ ಮಿಲ್‌ಫೋರ್ಡ್ ಸೌಂಡ್ ಎಂಬ ಹೆಸರು ಬಂದಿರಬಹುದೇ ಎಂದು ನನ್ನ ಅನಿಸಿಕೆ.
ಇಲ್ಲಿಗೆ ಭೇಟಿಯಿತ್ತ ಇಂಗ್ಲಿಷ್ ಲೇಖಕ ‘ರಡ್‌ಯಾರ್ಡ್ ಕಿಪ್ಲಿಂಗ್’, ‘ಇದು ಜಗತ್ತಿನ ಎಂಟನೆಯ ಅದ್ಭುತವೇ ಸರಿ’ ಎಂದು ಉದ್ಗಾರ ತೆಗೆದ. ನಾವು ಕ್ವೀನ್ಸ್ ಟೌನ್‌ನಿಂದ ಹೊರಟು ಕೋಚ್ ನಲ್ಲಿ ಕುಳಿತು ಸುತ್ತಲಿನ ನಿಸರ್ಗ ಸಿರಿಯನ್ನು ನೋಡುತ್ತಾ ಮಿಲ್ ಫೋರ್ಡ್ಸ್ ರೌಂಡ್ ಕಡೆ ಹೊರಟೆವು. ಇಲ್ಲಿ ಏನುಂಟು ಏನಿಲ್ಲ ! ಆಗಸದೆತ್ತರಕ್ಕೆ ಏರಿ ನಿಂತ ಪರ್ವತ ಶ್ರೇಣಿಗಳು, ದಟ್ಟವಾದ ಮಳೆಕಾಡುಗಳು, ಬಂಡೆಗಳಿಂದ ಜಿಗಿಯುವ ಜಲಧಾರೆಗಳು, ಅಪರೂಪವಾದ ಪ್ರಾಣಿ ಹಾಗೂ ಪಕ್ಷಿ ಸಂಕುಲಗಳು, ಹಿಮಾಚ್ಛಾದಿತ ಪರ್ವತ ಶಿಖರಗಳೂ, ಗಿರಿಶಿಖರಗಳ ನೆತ್ತಿಯ ಮೇಲೆ ಕಣ್ಣಾಮುಚ್ಚಾಲೆ ಆಟವಾಡುವ ಬಿಳಿಯ ಮೋಡಗಳೂ ಎಲ್ಲರ ಕಣ್ಮನ ಸೆಳೆಯುತ್ತಿದ್ದವು. ನಾವು ಸಾಗಿದ ದಾರಿಯುದ್ಧಕ್ಕೂ ಕಣ್ಣಿಗೆ ಹಬ್ಬ, ಎಲ್ಲರೂ ಮಂತ್ರಮುಗ್ಧರಾಗಿ ಪ್ರಕೃತಿಯ ನಿತ್ಯೋತ್ಸವವನ್ನು ಕಣ್ತುಂಬಿ ಕೊಳ್ಳುತ್ತಿದ್ದರು. ಆಗ ನನಗೊಂದು ಭಕ್ತಿಗೀತೆ ನೆನಪಾಗಿತ್ತು, ‘ಕಣ್ಣು ನೂರು ಸಾಲದು, ನ್ಯೂಝೀಲ್ಯಾಂಡನ್ನು ನೋಡಲು, ನಾಲಿಗೆ ಸಾವಿರ ಸಾಲದು ಮಿಲ್‌ಫೋರ್ಡ್ ಇವಳನು ಹೊಗಳಲು’.
ನಾವು ‘ಮಿಲ್‌ಫೋರ್ಡ್ ಸೌಂಡ್’ ಕಡೆ ನಮ್ಮ ಪ್ರವಾಸಿ ಕೋಚ್‌ನಲ್ಲಿ ಪಯಣಿಸುತ್ತಿರುವಾಗ ಒಂದು ಕಡೆ ರಸ್ತೆ ಬಂದಾಗಿತ್ತು, ಅಲ್ಲೊಂದು ಕಿರಿದಾದ ಸುರಂಗ, ಒಮ್ಮೆ ಒಂದು ವಾಹನ ಮಾತ್ರ ಚಲಿಸುವಷ್ಟು ಸ್ಥಳಾವಕಾಸವಿದ್ದುದರಿಂದ ಅಲ್ಲೊಂದು ಸಿಗ್ನಲ್ ಇತ್ತು. ಹಲವು ವಾಹನಗಳು ಕ್ಯೂನಲ್ಲಿ ನಿಂತಿದ್ದವು. ನಮ್ಮ ಮುಂದಿದ್ದ ವಾಹನದ ಮೇಲೆ ಒಂದು ದೊಡ್ಡದಾದ ಹದ್ದನ್ನು ಹೋಲುವ ಪಕ್ಷಿಯೊಂದು ಕುಳಿತಿತ್ತು. ನಾವೆಲ್ಲಾ ಕುತೂಹಲದಿಂದ ಆ ಹಕ್ಕಿಯನ್ನು ನೋಡುತ್ತಿರುವಾಗ, ಹಲವರು ತಮ್ಮ ವಾಹನಗಳಿಂದ ಇಳಿದು ಬಂದು, ಆ ಪಕ್ಷಿಯ ಫೋಟೋಗಳನ್ನು ಕ್ಲಿಕ್ಕಿಸುತ್ತಾ ಅದಕ್ಕೆ ಹಣ್ಣುಗಳನ್ನೂ ಕಾಳುಗಳನ್ನೂ ನೀಡಿದರು. ಅದು ಬೆಚ್ಚದೆ ಬೆದರದೆ, ಅವರು ನೀಡಿದ ತಿನಿಸುಗಳನ್ನು ತಿನ್ನುತ್ತಾ ಫೋಟೋಗಳಿಗೆ ಚೆಂದದ ಪೋಸ್ ನೀಡುತ್ತಿತ್ತು. ನ್ಯೂಝಿಲ್ಯಾಂಡಿನ ನಿವಾಸಿಯಾದ, ಗಿಳಿಗಳ ಜಾತಿಗೆ ಸೇರಿದ ಆ ಪಕ್ಷಿಯ ಹೆಸರು ‘ಕಿಯಾ’. ನಿಮಗೆಲ್ಲಾ ಇತ್ತೀಚೆಗೆ ವಾಹನಗಳ ಗುಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ ಕಾರಿನ ನೆನಪಾಗಿರಬಹುದು ಅಲ್ವಾ? ಬಿಳಿ, ಕಪ್ಪು, ಕಂದು ಬಣ್ಣಗಳ ಮಿಶ್ರಣದ ರೆಕ್ಕೆ ಪುಕ್ಕಗಳ ಒಡೆಯ ಕಿಯಾ. ‘ಕಿಯಾ ಪಕ್ಷಿಗಳಿಗೆ ಯಾವುದೇ ಬಗೆಯ ತಿನಿಸುಗಳನ್ನು ನೀಡಬೇಡಿ, ಅವು ತಮ್ಮ ಆಹಾರವನ್ನು ಹುಡುಕುವ ಪ್ರಕ್ರಿಯೆಯನ್ನು ಮರೆತುಬಿಡುತ್ತವೆ ಎಂಬ ಫಲಕವನ್ನು ನೇತು ಹಾಕಿದ್ದರೂ, ಆ ಮುದ್ದಾದ ಪಕ್ಷಿಗಳ ಕೂಗು ಎಲ್ಲರನ್ನೂ ಸೆಳೆದಿತ್ತು. ನಾವೂ ನಮ್ಮ ಕೋಚ್‌ನಿಂದ ಇಳಿದು ಒಂದೆರೆಡು ಸ್ಟ್ರಾಬರ‍್ರಿಗಳನ್ನು ಕಿಯಾಗೆ ನೀಡಿದೆವು. ಅಷ್ಟರಲ್ಲಿ ಹಸಿರು ಬಣ್ಣದ ಸಿಗ್ನಲ್ ಕಂಡುಬಂದುದರಿಂದ ಒಂದೊಂದೇ ವಾಹನಗಳು ಚಲಿಸಲಾರಂಭಿಸಿದೆವು. ನಾವೂ ಗಡಿಬಿಡಿಯಿಂದ ವಾಹನವನ್ನೇರಿದೆವು.
‘ಮಿಲ್‌ಫೋರ್ಡ್ ಸೌಂಡ್ ’ ಸಮೀಪಿಸುತ್ತಿದಂತೆ ಅಕ್ಕ ಪಕ್ಕದ ಬೆಟ್ಟಗಳಿಂದ ಸಾಲು ಸಾಲು ಜಲಧಾರೆಗಳು ನಮ್ಮನ್ನು ಸ್ವಾಗತಿಸಿದವು. ಸಣ್ಣಗೆ ಮಳೆ ಹನಿಯುತ್ತಿತ್ತು. ಗಿಡ ಮರಗಳು ಹೊಸ ಕಾಂತಿಯಿಂದ ಕಂಗೊಳಿಸುತ್ತಿದ್ದವು. ಬಣ್ಣ ಬಣ್ಣದ ಹೂಗಳು ಅರಳಿ ನಿಂತಿದ್ದವು. ಪಕ್ಷಿಗಳ ಕಲರವ, ಜಲಪಾತಗಳ ಸದ್ದು, ಪ್ರವಾಸಿಗರ ಹರ್ಷೋದ್ಗಾರಗಳು ‘‘ಮಿಲ್‌ಫೋರ್ಡ್ ಸೌಂಡ್ ’ಗೆ ಅನ್ವರ್ಥನಾಮವಾಗಿ ಕಂಡವು. ಫಿಯಾಡ್‌ಲ್ಯಾಂಡ್ ರಾಷ್ಟ್ರೀಯ ಅಭಯಾರಣ್ಯ ಎದುರಾಯಿತು. ಅಲ್ಲಿನ ವಿಶೇಷವಾದ ಪ್ರಾಣಿ ಪಕ್ಷಿಗಳ ಪ್ರಬೇಧಗಳ ಬಗ್ಗೆ ಮಾಹಿತಿ ನೀಡುವ ಬೋರ್ಡ್ ಬರೆಸಿ ಹಾಕಿದ್ದರು. ಎರಡು ಎತ್ತರವಾದ ಬೆಟ್ಟಗಳ ಮಧ್ಯೆ ಹರಿಯುವ ಕಿರಿದಾದ ನೀಳವಾದ ನದಿಯೊಂದು ‘ಟಾಸ್‌ಮಾನ್’ ಸಮುದ್ರವನ್ನು ಸೇರುವ ಜಾಗವೇ ಮಿಲ್‌ಫೋರ್ಡ್ ಸೌಂಡ್. ಒಂದೆಡೆ ಆರ್ಭಟಿಸುತ್ತಾ ಮುನ್ನುಗ್ಗುವ ಸಮುದ್ರ ರಾಜ, ಮತ್ತೊಂದೆಡೆ ಗಾಬರಿಯಿಂದ ಹಿಂದೆ ಸರಿಯುವ ನದಿ, ಆದರೆ ಅದು ಹೋಗುವುದಾದರೂ ಎಲ್ಲಿಗೆ? ಹಿಂದೆ ಸರಿಯುವ ಮಾರ್ಗವಿಲ್ಲ, ಮುಂದೆ ಸಾಗದೆ ಬೇರೆ ದಾರಿಯಿಲ್ಲ. ಅಷ್ಟರಲ್ಲಿ ರಭಸದಿಂದ ನುಗ್ಗಿದ ಸಮುದ್ರ ಈ ಬಳುಕತ್ತಾ ಸಾಗಿದ ನದಿಯನ್ನು ತನ್ನೊಡಲೊಳಗೆ ಸೇರಿಸಿಕೊಂಡೇ ಬಿಟ್ಟ. ನದಿಯ ಬಣ್ಣವಾದರೋ ಕಪ್ಪು, ಸಮುದ್ರ ರಾಜನದು ನೀಲ ವರ್ಣ, ಅವೆರಡರ ಸಂಗಮ ಎದ್ದು ಕಾಣುತ್ತಿತ್ತು. ಈ ನದಿಯ ವರ್ಣ ಕಪ್ಪಾಗಿದ್ದು ಹೇಗೆ ಅಂತೀರಾ, ಅವಳು ದಟ್ಟವಾದ ಅರಣ್ಯಗಳ ಮಧ್ಯೆ ಸಾಗಿ ಬಂದವಳು. ಗಿಡ ಮರಗಳ ಸಾನಿಧ್ಯ, ಟಾನಿನ್ ಎಂಬ ಕೆಮಿಕಲ್‌ನ ಮಿಶ್ರಣದಿಂದ ಕಪ್ಪಾಗುವಳು. ಆದರೆ ಲಾವಣ್ಯವತಿಯಾದ ಈ ನದಿಯ ಸಂಗ ಬಯಸಿ ಬರುವನು ಸಮುದ್ರ ರಾಜ, ಸಂಗಮದ ಈ ದೃಶ್ಯವನ್ನು ನೋಡುವುದೇ ಸೊಗಸು.
‘ಮಿಲ್‌ಫೋರ್ಡ್ ಸೌಂಡ್ ’ ಕ್ರೂಸ್‌ನಲ್ಲಿ ಸಾಗಿತ್ತು ನಮ್ಮ ಪಯಣ. ನಾವೆಂದೂ ಕಂಡಿರದಿದ್ದ ಅಪರೂಪದ ದೃಶ್ಯಗಳು, ಯಾರೂ ಕ್ರೂಸಿನೊಳಗೆ ಕೂರಲಿಲ್ಲ, ಎಲ್ಲರೂ ತಮ್ಮ ತಮ್ಮ ಕಾಫಿ ಬಟ್ಟಲುಗಳನ್ನು ಹಿಡಿದು, ಹಡಗಿನ ಮೆಟ್ಟಿಲುಗಳನ್ನೇರಿ, ಮೇಲ್ಛಾವಣಿಯ ಮೇಲೆ ನಿಂತರು. ಜೋರಾಗಿ ಬೀಸುವ ತಂಗಾಳಿ, ನಾ ಮುಂದು ತಾ ಮುಂದು ಎನ್ನುತ್ತಾ ಮಕ್ಕಳಂತೆ ಕೇಕೆ ಹಾಕುತ್ತಾ ಕುಣಿಯುತ್ತಾ ನೆಗೆಯುತ್ತಾ ಬೆಟ್ಟಗಳಿಂದ ಕೆಳಗಿಳಿಯುತ್ತಿದ್ದ ಸಾಲು ಸಾಲು ಜಲಧಾರೆಗಳು, ನಮ್ಮ ಹಡಗು ಅವುಗಳ ಸಮೀಪ ಹೊದಾಗ, ನಮ್ಮ ಮೇಲೆಲ್ಲಾ ನೀರು ಚಿಮ್ಮುತ್ತಿತ್ತು. ಅಲ್ಲಿದ್ದ ಕೋಡುಗಲ್ಲುಗಳ ಮೇಲೆ ನಿಧಾನವಾಗಿ ತೆವಳುತ್ತಾ ಸಾಗುತ್ತಿದ್ದ ಸೀಲ್‌ಗಳು, ನಮ್ಮನ್ನು ಕಂಡಾಕ್ಷಣ ನೀರಿಗೆ ಚಿಮ್ಮಿ ವೇಗವಾಗಿ ಈಜುತ್ತಾ ಸಾಗುವ ಪೆಂಗ್ವ್ವಿನ್‌ಗಳು, ಸಮುದ್ರದ ಮಧ್ಯೆ ಮೇಲೆ ಮೇಲೆ ಹಾರುತ್ತಾ ಲಾಗ ಹಾಕುವ ಡಾಲ್ಫಿನ್‌ಗಳು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದ್ದವು. ಇಲ್ಲಿದ್ದ ಗಿರಿ ಶಿಖರಗಳ ಮಧ್ಯೆ ಅತ್ಯಂತ ಎತ್ತರವಾಗಿದ್ದ ‘ಮಿತ್ರೆ ಪೀಕ್’ ಎಲ್ಲರ ಗಮನ ಸೆಳೆದಿತ್ತು. ಈ ಶಿಖರವನ್ನು ಚಾರಣಗಳ ರಾಜ ಎಂದರೆ ತಪ್ಪಾಗಲಾರದು. ಚಾರಣಿಗರಿಗೆ ಹಬ್ಬದೂಟ ಇದ್ದಂತೆ ಮಿತ್ರೆ ಪೀಕ್. ಈ ಶಿಖರದ ಅಕ್ಕ ಪಕ್ಕದಲ್ಲಿ ಎಲಿಫೆಂಟ್ ಪೀಕ್. ಲಯನ್ ಪೀಕ್ ಎಂಬ ಹೆಸರು ಹೊತ್ತ ಶಿಖರಗಳೂ ಇದ್ದವು. ಇನ್ನು ಮಳೆಗಾಲ ಬಂತೆಂದರೆ ಎಲ್ಲೆಲ್ಲಿಯೂ ಜಲಪಾತಗಳದೇ ಸಾಮ್ರಾಜ್ಯ. ನೂರಾರು ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುವುವು. ಈ ಜಲಧಾರೆಗಳಲ್ಲಿ ಅತ್ಯಂತ ಪ್ರಮೂಖವಾದವು- ಸ್ಟರ್‌ಲಿಂಗ್ ಫಾಲ್ಸ್ ಹಾಗೂ ಬೊವೆಲ್ ಫಾಲ್ಸ್. ಇಲ್ಲಿ ಮಳೆ ಹೆಚ್ಚು, ಇಲ್ಲಿ ವರ್ಷಕ್ಕೆ ಸರಾಸರಿ 182 ಇಂಚು ಮಳೆಯಾಗುವುದೆಂದರೆ ನಂಬುವಿರಾ? ಹಾಗಾಗಿ ಇದನ್ನು ಅತ್ಯಂತ ಶೀತ ಪ್ರದೇಶ ಎಂದೇ ಕರೆಯಲಾಗುವುದು. ಮಳೆಗಾಲದಲ್ಲಿ ಗಿರಿಶಿಖರಗಳು ಮಂಜಿನ ಮುಸುಕು ಹೊದ್ದು ಮಲಗಿ ಬಿಡುವುವು. ಟಾಸ್ ಮಾನ್ ಸಮುದ್ರದ ಮತ್ತೊಂದು ವಿಶೇಷ ಎಂದರೆ, ಇದರ ಮೇಲ್ಭಾಗದ ನೀರು ಸಿಹಿ. ಅಚ್ಚರಿಯಾಯಿತಾ ನಿಮಗೆ? ಏಕೆಂದರೆ ನಮಗೆಲ್ಲಾ ಗೊತ್ತಿರುವಂತೆ ಸಮುದ್ರದ ನೀರು ಉಪ್ಪು. ಹೆಚ್ಚು ಮಳೆ ಬೀಳುವುದರಿಂದ, ನೂರಾರು ಜಲಪಾತಗಳು ಸಮುದ್ರದೊಳಗೆ ಬೀಳುವುದರಿಮದ ಹಾಗು ಇಲ್ಲಿಯೇ ನದಿಯು ಸಮುದ್ರದ ಒಡಲೊಳಗೆ ಸೇರುವುದರಿಂದ, ಸುಮಾರು ಹತ್ತು ಮೀಟರ್‌ನಷ್ಟು ಆಳದವರೆಗೆ ಸಿಹಿ ನೀರಿದ್ದರೆ, ಕೆಳಭಾಗದಲ್ಲಿ ಉಪ್ಪು ನೀರು. ಹಾಗಾಗಿ ಸಮುದ್ರದಲ್ಲಿ ವಾಸಿಸುವ ಜಲಚರಗಳ ಜೊತೆಗೇ ನದಿ ನೀರಿನಲ್ಲಿ ವಾಸ ಮಾಡುವ ಜಲಚರಗಳೂ ಇಲ್ಲಿ ಕಾಣಸಿಗುತ್ತವೆ, ಮಿಲ್‌ಫ್ರೆಡ್ ಸೌಂಡ್ ಸುಮಾರು ಹದಿನಾರು ಕಿ.ಮೀ. ಉದ್ದವಿದ್ದು 1,312 ಅಡಿ ಆಳವಿದೆ. ಈ ರಮಣೀಯವಾದ ಸ್ಥಳವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
‘ಮಾನಾಪೌರಿ’ ಹಾಗೂ ‘ಆನಾವು’ ಸರೋವರಗಳು ಬೆಟ್ಟದಿಂದ ಧರೆಯತ್ತ ಧುಮ್ಮಿಕ್ಕುವಾಗ ತಮ್ಮೊಂದಿಗೆ ಹೊತ್ತು ತಂದಿದ್ದ ಬಂಡೆಯ ಚೂರುಗಳನ್ನು ಸರೊವರಗಳ ಅಂಚಿನಲ್ಲಿ ಒಗೆದು ಬರುವುದರಿಂದ ಸಮುದ್ರದ ಅಲೆಗಳಿಗೆ ತಡೆಯೊಡ್ಡುವುವು. ಹಾಗಾಗಿ ಅಲೆಗಳ ರಭಸ ತಗ್ಗಿ ನೀರಿನ ಹರಿವು ಪ್ರಶಾಂತವಾಗಿ ಸಾಗುವುದು. ಅತ್ಯಂತ ಸುಂದರವಾದ ‘ಮಿಲ್‌ಫ್ರೆಡ್ ಸೌಂಡ್’ ಕ್ರೂಸ್‌ನಲ್ಲಿ ಪಯಣಿಸಿ ಹಿಂದಿರುಗುವಾಗ ನಮ್ಮೆಲ್ಲರ ಹೃದಯ ಹಾಡುತ್ತಿತ್ತು. ನಾವು ಕಂಡ ಗುಡುಗುವ ಜಲಪಾತಗಳು, ಮಳೆ ಕಾಡುಗಳು, ಎತ್ತರವಾದ ಗಿರಿ ಶಿಖರಗಳು, ಮಿತ್ರೆ ಪೀಕ್, ಸಮುದ್ರದ ಬದಿಯ ಕೋಡುಗಲ್ಲುಗಳ ಮೇಲೆ ಬಿಸಿಲು ಕಾಯಿಸುತ್ತಾ ಕುಳಿತಿದ್ದ ಸೀಲ್ ಗಳು, ಪೆಂಗ್ವಿನ್ ಗಳು, ಅಲ್ಲಲ್ಲಿ ನೀರಿನಿಂದ ಮೇಲೆದ್ದು ನಮ್ಮನ್ನು ನೋಡುತ್ತಿದ್ದ ಡಾಲ್‌ಫಿನ್‌ಗಳು ನಮ್ಮ ಕಣ್ಣ ಮುಂದೆ ತೇಲಿ ಬರುತ್ತಿದ್ದವು. ನಾವು ಮಾತಿಲ್ಲದೆ ಮೌನಕ್ಕೆ ಶರಣಾಗಿ, ಈ ಸುಂದರವಾದ ದೃಶ್ಯಾವಳಿಗಳನ್ನು ಆಸ್ವಾದಿಸುತ್ತಿದ್ದೆವು.
ಈ ಪ್ರವಾಸಕಥನದ ಹಿಂದಿನಪುಟ ಇಲ್ಲಿದೆ: http://surahonne.com/?p=43255
(ಮುಂದುವರಿಯುವುದು)

–ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ.
ಸೊಗಸಾದ ನ್ಯೂಝಿಲ್ಯಾಂಡ್ ಪ್ರವಾಸ…ಕಥನ.. ನಾವು ನಿಮ್ಮ ಜೋಡಿ… ಪ್ರವಾಸ ಮಾಡುತಿದ್ದೇವೆ…ಗಾಯತ್ರಿ ಮೇಡಂ
ನ್ಯೂಜಿಲೆಂಡಿನ ಸುಂದರ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿರುವ ಪರಿ ಸೊಗಸಾಗಿದೆ.
Nice
ಪಿಯೋ ಪಿಯೋ ತಾಹಿ ಸುಂದರ ತಾಣ, ಸ್ಯಾಂಡ್ ಫ್ಲೈಸ್ ಗಳ ಸದ್ದು, ನೋಡಲು ನೂರು ಕಣ್ಣುಗಳಿದ್ದರೂ ಸಾಲದ ಅತ್ಯಂತ ಸುಂದರ ಮಿಲ್ ಫೋರ್ಡ್, ಚಂದದ ಕಿಯಾ ಹಕ್ಕಿ, ಟಾನಿನ್ ರಾಸಾಯನಿಕದಿಂದ ಕಪ್ಪು ಬಣ್ಣ ಪಡೆದಿರುವ ನದಿ, ಅತ್ಯಂತ ಎತ್ತರದ ಮಿತ್ರೆ ಪೀಕ್, ಸಮುದ್ರದ ಮೇಲ್ಪದರದಲ್ಲಿರುವ ಸಿಹಿ ನೀರು, ಲಾಗ ಹಾಕುವ ಡಾಲ್ಫಿನ್ ಗಳು…ಅಬ್ಬಬ್ಬಾ… ಸ್ವರ್ಗವೇ ಧರೆಗಿಳಿದು ಬಂದಿರುವುದು ಸುಳ್ಳಲ್ಲ!!
ಎಂದಿನಂತೆ ಆಕರ್ಷಕ ನಿರೂಪಣೆ….ಗಾಯತ್ರಿ ಮೇಡಂ.
ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು ನಯನ, ನಾಗರತ್ನ ಮೇಡಂ ಹಾಗೂ ಪದ್ಮ ಮೇಡಂ
ವಾವ್….ಅದ್ಭುತವಾದ ನಿಸರ್ಗ ಸಿರಿ!. ಎಂದಿನಂತೆ ಚೆಂಧದ ನಿರೂಪಣೆ…