ದ್ವಾದಶ ಸ್ಕಂದ – ಅಧ್ಯಾಯ – 1
ಕಲಿಯುಗ ಕಾಲ
ಕೃತಯುಗವು ಚತುರ್ಯುಗಗಳಲಿ ಪ್ರಥಮ
ಅದು ಧರ್ಮಯುಗ
ಸತ್ಯ ದಯೆ ತಪಸ್ಸು ದಾನಗಳೆಂಬ ಧರ್ಮಗಳು
ನಾಲ್ಕು ಪಾದಗಳಲಿ ನೆಲೆಗೊಂಡಿರ್ಪ
ಆ ಕಾಲದ ಜನರು ಶಾಂತರೂ
ಸುಖದುಃಖಾದಿದ್ವಂದಗಳ ಸಹಿಸತಕ್ಕವರು
ಸರ್ವರಲೂ ಭಗವದಾತ್ಮಕ ದೃಷ್ಟಿಯನಿಟ್ಟ
ಸಮದೃಷ್ಟಿಯುಳ್ಳವರೂ ಆತ್ಮಾನುಸಂದಾನದಲಿ
ಆನಂದಿಸುವವರೂ ಆಗಿರುವರು
ತ್ರೇತಾಯುಗವು ದ್ವಿತೀಯ ಯುಗ
ನಾಲ್ಕು ಧರ್ಮಗಳಲೂ ಒಂದೊಂದು ಪಾದ ಪಾಲು
ಕಡಿಮೆಯಾಗುತ್ತಾ ಅಧರ್ಮ ಪಾದಗಳಾದ
ಅನೃತ ಹಿಂಸೆ ಅಸಂತುಷ್ಟಿ ಭೂತದ್ರೋಹಗಳು
ತಲೆದೋರುವುವು
ಜನರು ಕರ್ಮನಿಷ್ಠೆಯಲ್ಲಿದ್ದು ಪ್ರಾಣಿಹಿಂಸೆ
ವಿಷಯಾಸಕ್ತರಾಗಿದ್ದರೂ ಮಿತಿಯಲ್ಲಿರ್ಪರು
ದ್ವಾಪರಯುಗದಿ ತಪಸ್ಸು ದಾನ ಸತ್ಯ ದಯೆ
ಎಂಬ ನಾಲ್ಕರಲಿ ಎರಡು ಪಾದಗಳ ಕಳೆದುಕೊಂಡು
ಅಧರ್ಮಪಾದಗಳಲಿ ಅರ್ಧದಷ್ಟನ್ನು ಹೆಚ್ಚಿಸಿಕೊಂಡರೂ
ಯಜ್ಞಕಾರ್ಯಗಳಲಿ ತೊಡಗಿ ಕುಟುಂಬ ಜೀವನದಲಿ
ಹೆಮ್ಮೆಗೊಂಡು ಮಹಾಕಾರ್ಯಗಳಲಿ ನಿರತರಾಗಿರುವರು
ಮುಂದೆ ಕಲಿಯುಗದಿ, ಪ್ರಾರಂಭದಲಿ
ದಯೆ ತಪ ದಾನಾದಿಗಳ ಕಾಲುಭಾಗ ಕಂಡುಬಂದರೂ
ಮುಂದೆ ಎಲ್ಲವೂ ಲೋಪವಾಗಿ ಅಧರ್ಮ ಪಾದಗಳೇ
ಸಂಪೂರ್ಣವಾಗಿ ಕಂಡುಬಂದು ಜನರು ಲುಬ್ದರೂ
ದುರಾಚಾರಿಗಳೂ ದಯಾಶೂನ್ಯರೂ ಭಾಗ್ಯಹೀನರೂ ಆಗಿ
ಅರ್ಥ ಕಾಮಾಸಕ್ತಿಯೇ ಪ್ರಧಾನವಾಗಿ
ಶೂದ್ರ ಕೈವರ್ತಕಾದಿ ದಾಸ ಜಾತಿಯವರು
ಪ್ರಧಾನ ಸ್ಥಾನೀಯರಾಗುವರು
ಯುಗಬೇಧದ ಜೊತೆಗೆ ಮನುಷ್ಯ ಬೇಧ
ಉಂಟಾಗುವುದಕೆ ಮನುಜರಲಿ ಕಲೆತಿರುವ
ಸತ್ವ ರಜಸ್ಸು ಹಾಗೂ ತಮಸ್ಸು ಗುಣಗಳೇ
ಕಾರಣೀಭೂತವು
ಕಾಲಪ್ರೇರಿತವಾಗಿ ಈ ಗುಣಗಳ
ಹೆಚ್ಚುವಿಕೆ ತಗ್ಗುವಿಕೆಯಲಿ ಮನುಜನ
ಮನ ಬುದ್ಧಿ ಇಂದ್ರಿಯ ಮೂಲದ ಕಾರ್ಯಗಳು ವ್ಯತ್ಯಾಸವಾಗಿ
ಸತ್ವಗುಣದಿ ಧ್ಯಾನ ಜ್ಞಾನ ತಪದಿ ಅಭಿರುಚಿಯುಂಟಾಗೆ
ರಜೋಗುಣದಿ ಕಾಮ್ಯ ಕರ್ಮಗಳು ಪ್ರೇರಿಸುವ
ಯಜ್ಞ ಯಾಗಾದಿಗಳಲಿ ಅಭಿರುಚಿಯುಂಟಾಗುವುದು
ಅದುವೇ ತ್ರೇತಾಯುಗಧರ್ಮವು
ಕಾಮ್ಯ ಕರ್ಮಾಭಿಲಾಷೆಯೊಡನೆ ದಂಭ ಅಸಂತುಷ್ಟಿ
ಕಾಮಲೋಭ ಅಹಂಭಾವ ಮಾತ್ಸರ್ಯಗಳ
ರಜೋಗುಣ ತಮೋಗುಣಗಳ ಮಿಶ್ರಣದಿ ಪುಟ್ಟಿದ ಕಾರ್ಯವಾದ
ಇದು ದ್ವಾಪರಯುಗ ಧರ್ಮವು
ಕಲಿಯುಗದಲಿ ಕೇವಲ ತಮೋಗುಣ ಪ್ರಾಚುರ್ಯವೇ ಪ್ರಧಾನ
ಅನೃತ ಮಾಯೆ ಸೋಮಾರಿತನ ನಿದ್ರೆ ಹಿಂಸೆ ಮನೋವ್ಯಾಧಿ
ಶೋಕ ಮೋಹ ಭಯ ಕೃಪಣತನ
ಇದುವೇ ಜನರ ಪ್ರಧಾನ ಗುಣ
ಪಾಷಂಡಿಗಳು ಪ್ರಭಲಿಸಿ ವೇದಗಳ
ಪ್ರಾಶಸ್ತ್ಯ ಕ್ಷಯಿಸುವುದು, ರಾಜ್ಯಾಧಿಪತಿಗಳು
ಪ್ರಜೆಗಳ ಹಿಂಸಿಸುವರು
ಬ್ರಾಹ್ಮಣರಲಿ ಕರ್ಮಶ್ರದ್ಧೆ ಲೋಪವಾಗಿ
ಶಿಶ್ನೋದರ ಪಾರಾಯಣತೆ ಹೆಚ್ಚುವುದು
ತಪಸ್ವಿಗಳೂ ಸನ್ಯಾಸಿಗಳೂ ದ್ರವ್ಯಾಶಾಪೀಡಿತರಾಗಿ
ನಗರವಾಸಿಗಳಾಗುವರು
ಹಿರಿಯರಲಿ ಕಿರಿಯರಿಗೂ ಯಜಮಾನರಲಿ ಭೃತ್ಯರಿಗೂ
ಪ್ರೀತಿ ವಿಶ್ವಾಸ ಕ್ಷೀಣಿಸೆ, ಧರ್ಮಗಂಧವನರಿಯದವರು
ಗುರುಪೀಠಗಳನ್ನೇರಿ ಧರ್ಮೋಪದೇಶಕರಾಗೆ
ಪಾಷಂಡಿಗಳು ಎಲೆಲ್ಲೂ ಹೆಚ್ಚಿ ವಿಷ್ಣುಭಕ್ತಿಯು ಲೋಪವಾಗುವುದು
ಇಂತಹ ದುರಂತ ಕಾಲದಿ, ಕಲಿಯುಗದಿ
ಕಲಿದೋಷವ ನೀಗುವ ಉಪಾಯವೊಂದಿದೆ
ಅದುವೇ “ಶ್ರೀಹರಿ ನಾಮ ಸಂಕೀರ್ತನೆ”
ಕೃತಯುಗದಿ ಧ್ಯಾನ ಯೋಗ
ತ್ರೇತಾಯುಗದಿ ಯಜ್ಞಯಾಗಾದಿಗಳು
ದ್ವಾಪರಯುಗದಿ ಭಾಗವತ ಪೂಜಾರಾಧನೆ
ಕಲಿಯುಗದಿ ಕೇವಲ ಹರಿಭಕ್ತಿಯೇ ಯೋಗವಹುದು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=46147

-ಎಂ. ಆರ್. ಆನಂದ, ಮೈಸೂರು
