ಶಿಕ್ಷಣ ಪ್ರತಿಯೊಬ್ಬ ವ್ಯಕ್ತಿಯ ಹಕ್ಕು. ವ್ಯಕ್ತಿತ್ವ ವಿಕಸನಕ್ಕಾಗಿ, ಜೀವನ ನಿರ್ವಹಣೆಗಾಗಿ, ಸಾಧನೆಯ ಶಿಖರವನ್ನು ಏರಲು ಶಿಕ್ಷಣ ಖಂಡಿತವಾಗಿಯೂ ಬೇಕು. ನಮ್ಮ ಸಂವಿಧಾನದಲ್ಲಿ ಶಿಕ್ಷಣಕ್ಕಾಗಿ ಅನೇಕ ಕಾನೂನುಗಳನ್ನು ರಚಿಸಿ ಜಾರಿಗೊಳಿಸಲಾಗಿದೆ. ಸರ್ಕಾರಗಳು ತಮ್ಮ ಕಾಲ ಘಟ್ಟಗಳಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಅನೇಕ ಕ್ರಮಗಳನ್ನೂ ಕೈ ಗೊಂಡಿವೆ. ಆದರೆ ನಿರಂತರವಾದ ಪರಿವೀಕ್ಷಣೆ ಹಾಗು ಮೇಲ್ವಿಚಾರಣೆ ಮಾಡದೆ ಸೋತಿವೆ. ತಾವು ಪರಿಚಯಿಸಿದ ಕ್ರಮಗಳು ತಕ್ಕ ಫಲಿತಾಂಶ ಕೊಡುತ್ತಿವೆಯೋ ಇಲ್ಲವೋ ಎಂದು ತಿಳಿಯುವುದರಲ್ಲಿ ಅಸಫಲವಾಗಿವೆ.
ಮಕ್ಕಳು ಕೆಳ ಹಂತದ ತರಗತಿಗಳಲ್ಲಿ ಓದುತ್ತಿರುವಾಗಲೇ ಪ್ರತಿಯೊಂದು ವಿಷಯ ಹಾಗು ಭಾಷೆಯ ಕುರಿತು ಅವರಿಗೆ ಗಟ್ಟಿಯಾದ ಬುನಾದಿಯನ್ನು ಹಾಕಬೇಕಾಗುತ್ತದೆ. ವಿಷಯವನ್ನು ಆಳವಾಗಿ ಅರ್ಥ ಮಾಡಿಸಲು ಜ್ಞಾನವಂತ, ಇಚ್ಛಾಶಕ್ತಿಯುಳ್ಳ ಶಿಕ್ಷಕರು ಬೇಕಾಗುತ್ತಾರೆ. ಭಾಷೆಯ ಮೇಲೆ ಹಿಡಿತ ಸಾಧಿಸಲು, ವಾಕ್ಯಗಳನ್ನು ತಪ್ಪಿಲ್ಲದೆ ಶುದ್ಧವಾಗಿ ಬರೆಸುವ ಬದ್ಧತೆಯುಳ್ಳ ಶಿಕ್ಷಕರ ಅನಿವಾರ್ಯತೆ ಇದೆ.
ಬಹಳಷ್ಟು ಶಾಲೆಗಳಲ್ಲಿ ವಿದ್ಯಾರ್ಥಿಗಳು ಒಂಭತ್ತನೇ ತರಗತಿಗೆ ಬಡ್ತಿ ಪಡೆದಿದ್ದರೂ ಸಹ, ಅವರಿಗೆ ಕೂಡು ಕಳೆಯುವ, ಭಾಗಾಕಾರ, ಗುಣಾಕಾರ ಲೆಕ್ಕಗಳೇ ಸರಿಯಾಗಿ ಬರದು. ಇನ್ನು ಮಗ್ಗಿ ಕಲಿಕೆ ದೂರದ ಮಾತೇ ಸರಿ.
ಭಾಷೆಗಳ ಬಗ್ಗೆ ಹೇಳುವುದಾದರೆ, ತಪ್ಪಿಲ್ಲದೆ ಶುದ್ಧವಾಗಿ ವಾಕ್ಯಗಳನ್ನು ರಚಿಸಲಾರರು. ಪಠ್ಯ ಪುಸ್ತಕದಲ್ಲಿನ ಪಾಠಗಳನ್ನು ಸರಾಗವಾಗಿ ಓದಲಾರರು. ಸುಮಾರು ಹತ್ತು ವರ್ಷಗಳ ಕಾಲ ಶಾಲೆಯಲ್ಲಿ ಕಲಿತು, ಶಾಲಾ ಶಿಕ್ಷಣದ ಅಂತಿಮ ಘಟ್ಟಕ್ಕೆ ತಲುಪಿದರೂ ಈ ಮಕ್ಕಳಿಗೆ ಮೂಲಭೂತವಾಗಿ ಬೇಕಾಗಿರುವ ಕಲಿಕೆಯೇ ಇಲ್ಲವಾದರೆ ಇಷ್ಟೊಂದು ದೀರ್ಘ ಕಾಲದ ಹೆತ್ತವರ ಪರಿಶ್ರಮ, ಹಣ, ಸಮಯ ವ್ಯರ್ಥವಾಗಿದ್ದಲ್ಲದೆ ತಮ್ಮದಲ್ಲದ ತಪ್ಪಿಗೆ ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಇಂತಹ ವಿದ್ಯಾರ್ಥಿಗಳು, ಕಲಿಕೆಯಲ್ಲಿ ಹಿಂದುಳಿದಿಲ್ಲ. ಕಲಿಕೆಯಿಂದ ವಂಚಿತರಾಗಿದ್ದಾರಷ್ಟೇ. ಇದಕ್ಕೆ ಕಾರಣಗಳು ಹಲವಾರು, ಕಾರಣಕರ್ತರು ಹಲವರು.
ಅ) ಕಲಿಸುವ ಶಿಕ್ಷಕರಲ್ಲಿ ವಿದ್ಯಾರ್ಥಿಗಳೆಡೆಗೆ ಪ್ರೀತಿ ಮತ್ತು ತಮ್ಮ ವೃತ್ತಿಯ ಬಗ್ಗೆ ಬದ್ಧತೆ ಇಲ್ಲದಿರುವುದು ಮುಖ್ಯ ಕಾರಣ.
ಆ) ದೇಶದ ಭಾವಿ ಪ್ರಜೆಗಳ ಶಿಲ್ಪಿ ತಾವೆಂದು ಅರಿತುಕೊಳ್ಳದಿದ್ದಾಗ ಶಿಕ್ಷಕರಲ್ಲಿ ಕಲಿಸುವ ಇಚ್ಛಾಶಕ್ತಿಯೇ ಹುಟ್ಟುವುದಿಲ್ಲ.
ಇ) ಪಠ್ಯ ಪುಸ್ತಕಗಳ ಹೊರತಾಗಿ ಪ್ರಾಪಂಚಿಕ ಜ್ಞಾನದಿಂದ ವಂಚಿತರಾದ ಶಿಕ್ಷಕರಿಂದ ಮಕ್ಕಳಲ್ಲಿ ಆತ್ಮವಿಶ್ವಾಸವನ್ನೂ, ಸಾಧಿಸಬೇಕೆಂಬ ಛಲವನ್ನೂ ಬೆಳೆಸಲು ಸಾಧ್ಯವಾಗುವುದಿಲ್ಲ.
ಈ) ಶಾಲೆಗೆ ಬರುವ ವಿದ್ಯಾರ್ಥಿಗಳು ತಮ್ಮ ಸ್ವಂತ ಮಕ್ಕಳೆಂದು ಭಾವಿಸುವ ಶಿಕ್ಷಕರು ಬೆರಳೆಣಿಕೆಯಷ್ಟು ಇರುವುದರಿಂದ ವಿದ್ಯಾರ್ಥಿಗಳು ಕಗ್ಗತ್ತಲಲ್ಲಿ ದಿಕ್ಕು ತಪ್ಪಿದವರಂತೆ ನರಳುತ್ತಾರೆ.
ಉ) ಶಿಕ್ಷಕರಿಗೆ, ‘ಕಲಿಸುವ’ ಕೆಲಸಕ್ಕಿಂತ ಇನ್ನಿತರೆ ಕೆಲಸಗಳನ್ನು ವಹಿಸುವುದರಿಂದ, ಶಿಕ್ಷಕರಲ್ಲಿ ಸಮಯ ಹಾಗು ಆಸಕ್ತಿಯ ಅಭಾವ ಕಂಡು ಬರುತ್ತವೆ. ಆಗ ಮೂಲಭೂತ ಅಂಶಗಳಲ್ಲಿ (basics) ಹಿನ್ನಡೆ ಹೊಂದಿರುವ ಮಕ್ಕಳ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ.
ಊ) ಖಾಸಗಿ ಶಾಲೆಯ ಶಿಕ್ಷಕರು, ಅನೇಕ ಶಾಲೆಗಳಲ್ಲಿ ಕೆಲಸ ಮಾಡುವುದರಿಂದಲೂ, ಸರ್ಕಾರಿ ಶಿಕ್ಷಕರು ಕಾಲ ಕಾಲಕ್ಕೆ ವರ್ಗಾವಣೆ ಆಗುವುದರಿಂದಲೂ ವಿದ್ಯಾರ್ಥಿಗಳೆಡೆಗೆ ಬದ್ಧತೆಯನ್ನು ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ.
ಉದಾಹರಣೆಗೆ ಒಬ್ಬ ಶಿಕ್ಷಕ 1 – 2 ವರ್ಷಗಳ ಕಾಲ ಒಂದು ಶಾಲೆಯಲ್ಲಿ ಕೆಲಸ ಮಾಡಿದರೆ, ಅಲ್ಲಿ ಶಿಕ್ಷಕ ಹಾಗು ವಿದ್ಯಾರ್ಥಿಗಳ ನಡುವೆ ಪರಸ್ಪರ ಹೊಂದಾಣಿಕೆಯಾಗಿ ಅಲ್ಲಿನ ಮಕ್ಕಳ ಕಲಿಕಾ ಹಂತವನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಆತ ಬೇರೆ ಶಾಲೆಗೆ ಹೋಗಿ ಬಿಟ್ಟಿರುತ್ತಾನೆ. ಸರ್ಕಾರಿ ಶಾಲೆಯಾದರೆ ಬೇರೆಡೆಗೆ ವರ್ಗವಾಗಿ ಹೋಗಿರುತ್ತಾನೆ. ಹೀಗೆ ಪದೇ ಶಿಕ್ಷಕರು ಬದಲಾಗುತ್ತಿದ್ದರೆ ಮಕ್ಕಳು ಮೂಲಭೂತವಾಗಿ ಕಲಿಯಬೇಕಾಗಿರುವುದನ್ನು ಹೇಗೆ ತಾನೇ ಕಲಿಯಲು ಸಾಧ್ಯ?
ಎ) ಕೆಲವು ವಿದ್ಯಾರ್ಥಿಗಳ ಹೆತ್ತವರು ಅವಿದ್ಯಾವಂತರಾಗಿರುವುದೂ ಅಥವಾ ತಂದೆ ತಾಯಿ ಇಬ್ಬರೂ ಉದ್ಯೋಗಿಗಳಾಗಿದ್ದೂ ಮಕ್ಕಳ ಓದಿಗೆ ಸಮಯ ಕೊಡದೇ ಇರುವುದು ಹಾಗು ಇನ್ನೂ ಕೆಲವು ಪೋಷಕರ ನಿರ್ಲಕ್ಷ್ಯತನದಿಂದ ವಿದ್ಯಾರ್ಥಿಗಳು ಹಿನ್ನಡೆಯನ್ನು ಅನುಭವಿಸಬೇಕಾಗಿದೆ.
ಏ) ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗಳಲ್ಲಿ ನಪಾಸಾದರೂ ಸಹ ಮುಂದಿನ ತರಗತಿಗೆ ಪ್ರವೇಶ ಪಡೆಯಬಹುದಾಗಿದೆ. ಕೇವಲ ಒಂಭತ್ತನೇ ತರಗತಿಯ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರೆ ಮಾತ್ರ ಅವರಿಗೆ ಹತ್ತನೇಯ ತರಗತಿಗೆ ಬಡ್ತಿ ಕೊಡುವಂತಿಲ್ಲ. ಆದರೂ ಶಾಲೆಗಳು ಹರಸಾಹಸ ಮಾಡಿ ಅಂತಹ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ಕೊಟ್ಟು ಮುಂದಿನ ತರಗತಿಗೆ ತಳ್ಳುವ ಪ್ರಯತ್ನ ಮಾಡುತ್ತವೆ. ಮೂಲಭೂತ ಅಂಶಗಳಲ್ಲಿ (basics) ತಿಳುವಳಿಕೆಯ ಕೊರತೆ ಇರುವವರು ಹತ್ತನೆಯ ತರಗತಿಯ ಪಾಠಗಳನ್ನು ಅರ್ಥ ಮಾಡಿಕೊಳ್ಳಲು ಹೆಣಗಾಡುತ್ತಾರೆ.
ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಗು ಪೋಷಕರಿಗೆ ಕೇವಲ ಹತ್ತನೇ ತರಗತಿಯನ್ನು ಹೇಗಾದರೂ ಮಾಡಿ ದಾಟುವ ಬಗ್ಗೆ ಹೆಚ್ಚು ಗಮನವಿರುತ್ತದೆಯೇ ಹೊರತು, ಶಾಲೆ ಬಿಟ್ಟ ನಂತರ ಅಂತಹ ವಿದ್ಯಾರ್ಥಿಗಳ ಬದುಕಿನ ಜಟಕಾಬಂಡಿ ಹೇಗೆ ಸಾಗುತ್ತದೆ ಎನ್ನುವುದರ ಬಗ್ಗೆ ಯೋಚನೆ ಇರುವುದಿಲ್ಲ. ಅಕ್ಷರ ಜ್ಞಾನವಿರದ, ಲೆಕ್ಕಗಳ ಪಕ್ಕ ಸುಳಿಯದ ಮಕ್ಕಳ ಜೀವನ, ಗುರಿ ಗುರುತುಗಳಿಲ್ಲದ ಅಲೆಮಾರಿ ಜೀವನವಾಗುವುದಂತೂ ಸರಿ.
ಐ) ಒಂಭತ್ತನೇ ತರಗತಿಯ ಮರು ಪರೀಕ್ಷೆಯಲ್ಲಿಯೂ ನಪಾಸಾದರೆ ವರ್ಗಾವಣೆ ಪ್ರಮಾಣ ಪತ್ರವನ್ನು (Transfer certificate) ಕೊಡಲಾಗುತ್ತದೆ ಅಥವಾ ಒಂಭತ್ತನೇ ತರಗತಿಯಲ್ಲಿಯೇ ಇನ್ನೊಂದು ವರ್ಷ ವ್ಯಾಸಂಗ ಮಾಡಬೇಕಾಗುತ್ತದೆ. ಶಿಕ್ಷಕರ ನೆರಳಿನಲ್ಲಿ ಎಂಟತ್ತು ವರ್ಷಗಳಲ್ಲಿ ಕಲಿಯಲಾಗದ ಮಕ್ಕಳು ಮತ್ತೊಂದು ವರ್ಷದಲ್ಲಿ ಏನು ತಾನೇ ಕಲಿಯಲು ಸಾಧ್ಯ? ವರ್ಗಾವಣೆ ಪ್ರಮಾಣ ಪತ್ರವನ್ನು ತೆಗೆದುಕೊಂಡು ಬೇರೆ ಶಾಲೆಗಳಲ್ಲಿ ದಾಖಲಾತಿಗಾಗಿ ಪ್ರಯತ್ನಿಸಿದರೆ, ಅಂಕಪಟ್ಟಿಯಲ್ಲಿ ಉತ್ತೀರ್ಣನಾಗಿದ್ದಾನೆಂದು ತೋರಿಸಬೇಕಾಗುತ್ತದೆ. ಇಲ್ಲದಿದ್ದರೆ ಅಲ್ಲಿಯೂ ಸಹ ದಾಖಲಾತಿ ಮರೀಚಿಕೆಯೇ ಸರಿ. ಹಾಗೆ ಉತ್ತೀರ್ಣವಾಗಲು ಬೇಕಾಗಿರುವಷ್ಟು ಅಂಕಗಳನ್ನು ಮರು ಪರೀಕ್ಷೆಯಲ್ಲಿ ಬರುವ ಹಾಗೆ ಮಾಡಿ, ಹತ್ತನೇ ತರಗತಿಗೆ ದಬ್ಬುವ ಪ್ರಯತ್ನ ಮಾಡಿದ ಅನೇಕ ಉದಾಹರಣೆಗಳು ಸಿಗುತ್ತವೆ.
ಹೆತ್ತವರಿಗೆ ಇನ್ನೊಂದು ವರ್ಷದ ಶಾಲೆಯ ಶುಲ್ಕ ಉಳಿದ ಸಂತೋಷ ಒಂದು ಕಡೆಯಾದರೆ, ನೆಂಟರಿಷ್ಟರ ಮುಂದೆ ಮರ್ಯಾದೆ ಉಳಿಸಿಕೊಂಡ ಸಮಾಧಾನ ಮತ್ತೊಂದು ಕಡೆಯದಾಗುತ್ತದೆ. ತಾವೇನೋ ದೊಡ್ಡ ಉಪಕಾರ ಮಾಡಿರುವಂತೆ ಶಾಲಾ ಆಡಳಿತ ಮಂಡಳಿ ಬೀಗುತ್ತದೆ.
ಒ) ಶಿಕ್ಷಣ ವ್ಯವಸ್ಥೆ, ಶಿಕ್ಷಣ ಇಲಾಖೆ, ಶಿಕ್ಷಣ ಸಂಸ್ಥೆಗಳು, ಪೋಷಕರು, ಉದ್ಯೋಗ ಮಾರುಕಟ್ಟೆಗಳು ಹಾಗು ಸಮಾಜ, ಜ್ಞಾನ ಮತ್ತು ಕೌಶಲ್ಯಕ್ಕಿಂತ ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಮಣೆ ಹಾಕುತ್ತಾರೆ. ಅಂಕಪಟ್ಟಿಯಲ್ಲಿ ನಮೂದಿಸಿರುವ ಅಂಕಗಳು ವಿದ್ಯಾರ್ಥಿಗಳ ಶ್ರಮದಿಂದ ಪಡೆದ ಅಂಕಗಳೋ ಅಥವಾ ಶಿಕ್ಷಕರ ಕೃಪಾ ಕಟಾಕ್ಷದಿಂದ (ಆಂತರಿಕ ಅಂಕಗಳು) ದೊರೆತ ಭಿಕ್ಷೆಯೋ ಎಂದು ತಿಳಿಯುವುದು ಬಹಳ ಮುಖ್ಯ. ಮೂಲಭೂತ ಕಲಿಕೆಯ ಅಭಾವದಿಂದ ಬಳಲುವ ಮಕ್ಕಳು ಬೋರ್ಡ್ ಪರೀಕ್ಷೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ಉತ್ತೀರ್ಣರಾಗುತ್ತಿರುವ ಬಗ್ಗೆ ಸರ್ಕಾರ ತನ್ನ ಚಿತ್ತವನ್ನು ಹರಿಸಿದರೆ ಮಾತ್ರ ಸತ್ಯ ಬಯಲಿಗೆ ಬರುತ್ತದೆ. ಪ್ರತಿ ವರ್ಷ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುತ್ತಿರುವುದು ಸರ್ಕಾರಗಳಿಗೆ ಹೆಮ್ಮೆಯ ವಿಷಯವಾದರೂ, ಪರಿಪೂರ್ಣವಾದ ಕಲಿಕೆಯಿಲ್ಲದೆ ಕೇವಲ ಹಾಳೆಯ ಮೇಲೆ ಗಳಿಸಿದ ಅಂಕಗಳನ್ನು ಹೊತ್ತು ಹೊರ ಬರುವ ನಾಳಿನ ಪ್ರಜೆಗಳಿಂದ ದೇಶಕ್ಕೆ ಕಂಟಕವಾಗಲಿದೆ.
ಸರ್ಕಾರ ಎಚ್ಚೆತ್ತುಕೊಳ್ಳುವ ಸಮಯ ಬಂದಾಗಿದೆ. ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇದೆ. ಆದರೆ ಪರಿಹರಿಸಿಕೊಳ್ಳುವ ಇಚ್ಛಾಶಕ್ತಿ ಸರ್ಕಾರಕ್ಕಿರಬೇಕು.
ಅ) ಸರ್ಕಾರ ಒಂದನೇ ತರಗತಿಯಿಂದ ಪ್ರತಿವರ್ಷ ಆಯಾ ತರಗತಿಗಳ ಮಟ್ಟಕ್ಕೆ ಅನುಸಾರವಾಗಿ, ಪದಗಳನ್ನು, ವಾಕ್ಯಗಳನ್ನು ತಪ್ಪಿಲ್ಲದೆ ಶುದ್ಧವಾಗಿ ಬರೆಸುವುದರ ಕಡೆಗೆ ಗಮನ ಹರಿಸಬೇಕು. ಮೂಲ ಗಣಿತ ಹಾಗು ವಿಜ್ಞಾನದ ಬಗ್ಗೆ ದಿಢೀರ್ ಪರೀಕ್ಷೆಗಳನ್ನು ಸರ್ಕಾರ ಹಮ್ಮಿಕೊಳ್ಳಬೇಕು. ಶಾಲಾ ಆಡಳಿತ ಮಂಡಳಿ ಹಾಗು ಶಾಲೆಯ ಶಿಕ್ಷಕರನ್ನು ಇದರಿಂದ ಹೊರಗುಳಿಸಿ, ಸರ್ಕಾರವೇ ಖುದ್ದು ಈ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳ ಮೌಲ್ಯ ಮಾಪನ ಮಾಡಬೇಕು.
ಆ) ನಾಲ್ಕು ಹಾಗು ಏಳನೇ ತರಗತಿಗಳಲ್ಲಿ ಸರ್ಕಾರದ ವತಿಯಿಂದ ಕಡ್ಡಾಯವಾಗಿ ಬೋರ್ಡ್ ಪರೀಕ್ಷೆಯನ್ನು ನಡೆಸಬೇಕು. ಅದರಲ್ಲಿ ಸರಿಯಾಗಿ ನಿರ್ವಹಿಸದ ಮಕ್ಕಳನ್ನು ಅನುತ್ತೀರ್ಣಗೊಳಿಸಬೇಕು. ಅಂತಹ ಮಕ್ಕಳನ್ನು ಅದೇ ತರಗತಿಯಲ್ಲೇ ಉಳಿಸಿ, ಅವರಿಗೆ ವಿಶೇಷವಾದ ತರಬೇತಿಯನ್ನು ಕೊಟ್ಟು ಪ್ರೋತ್ಸಾಹಿಸಬೇಕು. ಆಯಾ ತರಗತಿಯಲ್ಲಿ ಕಲಿಯಲೇ ಬೇಕಾದ ಮೂಲ ಪಾಠಗಳನ್ನು ಕಲಿತೇ ಮುಂದಿನ ತರಗತಿಗಳಿಗೆ ಹೋಗಬೇಕು.
ಇ) ಮೂಲಭೂತ ಕಲಿಕೆಯನ್ನು ಕಲಿಸದೆ ಅಥವಾ ಅದಕ್ಕೆ ಸರಿಯಾದ ನ್ಯಾಯಯುತವಾದ ಪುರಾವೆ ತೋರಿಸದೆ ಇದ್ದಲ್ಲಿ ಅಂತಹ ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡಬೇಕು. ಹೊಣೆ ಹೊತ್ತು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು, ಇಲ್ಲದಿದ್ದರೆ ಅದಕ್ಕೆ ತಕ್ಕಂತಹ ದಂಡವನ್ನು ತೆರಬೇಕಾಗುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ಖಾಸಗಿ ಶಿಕ್ಷಕರ ರಾಜಿನಾಮೆ ಅಂಗೀಕರಿಸುವ ಮೊದಲು ಅವರ ಕಾರ್ಯ ಕ್ಷಮತೆಯ ವಿಮರ್ಶೆಯನ್ನು ಕಡ್ಡಾಯವಾಗಿ ಮಾಡಿ ಅದನ್ನು ಅವರ ಬಿಡುಗಡೆಯ ಪತ್ರದಲ್ಲಿ (Relieving letter) ನಮೂದಿಸಿರಬೇಕು. ಇದರಿಂದ ನಿಷ್ಠಾವಂತರಲ್ಲದ, ಕಲಿಸುವ ಉಮೇದಿಲ್ಲದ ಶಿಕ್ಷಕರನ್ನು ಶಿಕ್ಷಣ ಕ್ಷೇತ್ರದಿಂದ ಹೊರಗೆ ಉಳಿಸುವಂತಾಗುತ್ತದೆ.
ಈ) ಅನೇಕರು, ಮನೆಯಲ್ಲಿ ಕೂತು ಸಮಯ ಕಳೆಯುವ ಬದಲು ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿದರಾಯಿತು ಎಂದು ಬರುವವರಾದರೆ, ಇನ್ನೂ ಕೆಲವರು, ಹಣ ಸಂಪಾದನೆಗಾಗಿಯೇ ಬರುತ್ತಾರೆ. ಶಿಕ್ಷಕರಾಗಿ ಬರುವವರಿಗೆ ಮೊಟ್ಟ ಮೊದಲನೆಯದಾಗಿ ಬೇಕಿರುವುದು ‘ಕಲಿಸಬೇಕೆಂಬ ಅಗಾಧವಾದ ಹಂಬಲ’. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ. ಇದು ಬೇರೆಲ್ಲಾ ವೃತ್ತಿಗಳ ಹಾಗೆ ಕೇವಲ ಹಣ ಗಳಿಸುವ ವೃತ್ತಿಯಾಗಬಾರದು. ಹಣ ಸಂಪಾದನೆಯ ಜೊತೆಗೆ ಬದ್ಧತೆ, ಕಾರ್ಯಕ್ಷಮತೆ, ಮಕ್ಕಳ ಬಗ್ಗೆ ಪ್ರೀತಿ ಮತ್ತು ಕಾಳಜಿಯನ್ನೂ ಹೊಂದಿರಬೇಕು.
ಉ) ಶಿಕ್ಷಕರಿಗೆ ಕಲಿಸುವ ಸಮಯವನ್ನು ಹೆಚ್ಚಾಗಿ ಕೊಟ್ಟು, ಶಾಲೆಯಲ್ಲಿ ನಿರ್ವಹಿಸುವ ಕಲಿಕೆಯೇತರ ಚಟುವಟಿಕೆಗಳಿಂದ ಮುಕ್ತರನ್ನಾಗಿ ಮಾಡಬೇಕು. ಇದರಿಂದ ಮಕ್ಕಳಿಗೆ ಕಲಿಸಲು ಮತ್ತು ಪಠ್ಯಕ್ಕೆ ಸಂಬಂಧಿಸಿದ ಹೆಚ್ಚಿನ ವಿಷಯಗಳನ್ನು ಕಲೆ ಹಾಕಿ ಹೆಚ್ಚು ತಯಾರಿ ಮಾಡಿಕೊಳ್ಳಲು ಅವಕಾಶವಾಗುತ್ತದೆ. ಶಿಕ್ಷಕರು ಮಾನಸಿಕ ಒತ್ತಡದಿಂದ ದೂರವಿದ್ದಷ್ಟೂ ಅವರ ಕಲಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ. ಮಕ್ಕಳ ಜೊತೆ ಮಕ್ಕಳಾಗಿ ಬೆರೆಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ, ಅವರು ಹೊತ್ತ ಒತ್ತಡ, ಅನಾಯಾಸವಾಗಿ ಮಕ್ಕಳ ಮೇಲೆ ಬೀಳುತ್ತದೆ.
ರಾಜ್ಯದಲ್ಲಾಗಲಿ ಅಥವಾ ದೇಶದಲ್ಲಾಗಲಿ ಒಳ್ಳೆಯ ಶಾಲೆಗಳು ಅಥವಾ ಸಮರ್ಥ ಶಿಕ್ಷಕರು ಇಲ್ಲವೆಂದಲ್ಲ. ಉತ್ತಮ ಶಾಲೆಗಳು ಹಾಗು ದಕ್ಷ ಶಿಕ್ಷಕರು ಇರುವುದರಿಂದಲೇ ಇಂದಿಗೂ ಉತ್ತಮೋತ್ತರ ವಿದ್ಯಾರ್ಥಿಗಳು ಪದವಿ ಪಡೆದು ಹೊರ ಬರುತ್ತಿದ್ದಾರೆ. ಆದರೆ ಇವರ ಎಣಿಕೆ, ನಮ್ಮಲ್ಲಿರುವ ಶೇಕಡಾವಾರು ಶಾಲೆಗಳಿಗೆ ಹೋಲಿಸಿದರೆ ಬಹಳ ಕಡಿಮೆಯಿದೆ.
ಇಂದಿನ ಮಕ್ಕಳು ದೇಶದ ನಾಳೆಯ ಆಸ್ತಿ. ಮೂಲಭೂತ ಕಲಿಕೆಯಿಂದ ವಂಚಿತರಾದರೆ, ಭಾರತದಂತಹ ‘ಯುವ ದೇಶ’ದಲ್ಲಿ ಅನಕ್ಷರಸ್ಥ ಶಿಕ್ಷಿತರೇ ನಾಯಿ ಕೊಡೆಗಳಂತೆ ಎದ್ದು ನಿಲ್ಲುತ್ತಾರೆ. ಸರ್ಕಾರವಷ್ಟೇ ಅಲ್ಲ, ಪೋಷಕರು, ಶಿಕ್ಷಕ ವರ್ಗ, ಶಾಲಾ ಆಡಳಿತ ಮಂಡಳಿ ಹಾಗು ಸಮಾಜ ಈ ಕುರಿತು ಗಹನವಾದ ಆಲೋಚನೆ ಮಾಡಬೇಕಿದೆ.

–ಮಾಲಿನಿ ವಾದಿರಾಜ್, ಬೆಂಗಳೂರು

