ಪುಸ್ತಕ-ನೋಟ

ಅಗ್ನಿಹಂಸದ ಸರಸ್ಸಿನಲ್ಲಿ

Share Button

“ಯುಗ ಕಂಡ ಮಹಾನ್ ಕವಿ “ಯುಗದ ಕವಿ ಜಗದ ಕವಿ” ಕುವೆಂಪು ಎನ್ನುವುದರಲ್ಲಿ ಎರಡು ಮಾತಿಲ್ಲ. ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಎಷ್ಟು ಹಿರಿದೋ ಆಧ್ಯಾತ್ಮ ಧಾರ್ಮಿಕ ವಿಚಾರಗಳಲ್ಲಿಯೂ ಸಹ ಅವರ ಕಾಣಿಕೆ ದೊಡ್ಡದು. ರಾಮಕೃಷ್ಣ ಪರಮಹಂಸರ ಪರಮಾನುಯಾಯಿಯಾಗಿ, ಶಾರದಾಮಾತೆ ವಿವೇಕಾನಂದರ ಭಕ್ತರಾಗಿ ಆಧ್ಯಾತ್ಮ ಕ್ಷೇತ್ರದಲ್ಲಿ ಅವರು ಸಾಗಿದ ದಾರಿ ಎಲ್ಲರೂ ತಿಳಿದದ್ದೇ. ಅವರ ಪ್ರಥಮ ಕವನ ಸಂಕಲನದಿಂದ ಹಿಡಿದು ಪ್ರತಿಯೊಂದು ಕವನ ಸಂಕಲನದಲ್ಲಿಯೂ ಈ ರೀತಿಯ ಗುರುವಿನೆಡೆಗೆ ತುಡಿತ, ಆಧ್ಯಾತ್ಮ ಜ್ಞಾನದ ತಹತಹ , ತಮ್ಮೊಳಗೆ ತಾವೇ ಹೊಕ್ಕು ಆಂತರ್ಯವನ್ನು ಅರಿಯುವ ಪರಿ ಎಲ್ಲವೂ ಇದ್ದರೂ ಅವರ “ಅಗ್ನಿಹಂಸ” ಕವನ ಸಂಕಲನದಲ್ಲಿ ಇದು ಪರಾಕಾಷ್ಠತೆಯ ತುದಿಗೇರಿರುವುದು ಗಮನಾರ್ಹ. ಆ ನಿಟ್ಟಿನಲ್ಲಿ ನೋಡಿದಾಗ ಅಗ್ನಿಹಂಸ ಅವರ ಉಳಿದ ಕವನಗಳಿಗಿಂತ ವಿಭಿನ್ನ ವಿಶಿಷ್ಟ ಎನಿಸುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ ಗುರು ಪರಂಪರೆಗೆ ಕೊಟ್ಟಿರುವ ಸ್ಥಾನ ಅತಿ ಮಹತ್ತರವಾದದ್ದು

ಗುರುಬ್ರಹ್ಮಾ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರಾ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ

ಎಂದು ಗುರುವನ್ನು ಅತ್ಯುನ್ನತ ಸ್ಥಾನದಲ್ಲಿಟ್ಟಿದೆ ನಮ್ಮ ಧರ್ಮ. ಮುಂದಿನ ದಾಸಪರಂಪರೆ ಸಹ “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದು ಹಾಡಿ ಹೊಗಳಿವೆ. ಕುವೆಂಪು ಅವರ ಜೀವನದಲ್ಲಿಯೂ ಅಷ್ಟೇ ಶ್ರೀರಾಮಕೃಷ್ಣ ಪರಮಹಂಸರನ್ನು ತಮ್ಮ ಗುರುವೆಂದು ಸ್ವೀಕರಿಸಿ ಆ ಪಥದಲ್ಲಿ ನಡೆಯಲಾರಂಭಿಸಿದ ಮೇಲೆ ಅವರ ಕವನಗಳಲ್ಲಿಯೂ ಸಹ ಅದರ ಛಾಯೆ ತೋರಿದೆ.

“ಲೋಕರಂಗದ ಹುಚ್ಚನ್ನು ಕಲಾರಂಗಕ್ಕೆ ವರ್ಗಾಯಿಸುವುದೆ ಕಾವ್ಯರಂಗದ ಯಶಸ್ಸಿದ್ಧಿ” – ಕುವೆಂಪು, ನೆನಪಿನ ದೋಣಿಯಲ್ಲಿ (ಪುಟ 819).

ಹೀಗೆ ಗುರುವಿಗಾಗಿ ಹುಡುಕಾಟ ಆಂತರ್ಯದ ಜ್ಞಾನೋದಯದ ಅನ್ವೇಷಣೆ ಪ್ರಥಮ ಕವನ ಸಂಕಲನ ದಿಂದಲೂ ಇದ್ದೇ ಇತ್ತು ಪ್ರಾರ್ಥನೆ (ಕೊಳಲು ಕವನ ಸಂಗ್ರಹ) ಕವನದಲ್ಲಿ,
ನಿನ್ನಾತ್ಮದಾನಂದ
ನನ್ನದಾಗಿರಲಿ
ನಿನ್ನೊಳಿರುವಾ ಶಾಂತಿ
ನನ್ನೆದೆಗೆ ಬರಲಿ

ಎನ್ನುವ ಕವಿಯ ಮನಸ್ಸು ಎಲ್ಲಿಹೆ ಎಂತಿಹೆ ಎಂಬ ಕವನಗಳಲ್ಲಿ ದೇವರ ಜಾಡನ್ನು ಹಿಡಿದು ಅರಸುತ್ತಾ ಹೊರಡುತ್ತದೆ. ಮುಂದೆ ರಸೋ ವೈ ಸ: ಕವನದಲ್ಲಿ ವೈರಾಗ್ಯ ಸಾಧನೆಗೆ ಪ್ರಕೃತಿಯ ಆಸ್ವಾದನೆಯೂ ಮುಖ್ಯ ಎಂದು ಹೇಳಿ ಅದೇ ಸಂಕಲನದ ಮದ್ಗುರುಃ ಶ್ರೀ ಜಗದ್ಗುರುಃ ಕವನದಲ್ಲಿ ತಮ್ಮ ಗುರುವಿನ ಅರಸುವಿಕೆ ಪೂರ್ಣವಾದ ವಿಷಯವನ್ನು ಅರಹುತ್ತಾರೆ .

ನಂತರದ ಕವನ ಸಂಕಲನವೇ ಅಗ್ನಿ ಹಂಸ (೧೯೪೬). ರಾಮಕೃಷ್ಣಾಶ್ರಮದ ಅಂದಿನ ಗುರು ಸ್ವಾಮಿ ಶ್ರೀ ಸಿದ್ದೇಶ್ವರಾನಂದರಿಗೆ ಮತ್ತು ರಾಮಕೃಷ್ಣ ಪರಮಹಂಸ ಗುರುದೇವನಿಗೆ ಅರ್ಪಿಸುವ ಈ ಕವನ ಸಂಕಲನದಲ್ಲಿ ಆಧ್ಯಾತ್ಮ ಚಿಂತನೆ ಗುರುವಿನ ಪಾದಕ್ಕೆ ಶರಣಾಗುವಿಕೆ ಇವುಗಳ ಬಗ್ಗೆ ಹೆಚ್ಚು ಒತ್ತಿರುವ ಕವನಗಳು ಇವೆ . ಮೊದಲಿಗೆ ಮನ ಮನ್ಮನೋಮಂದಿರಕೆ ಬಂದು ನೆಲೆಸಲೆಂದು ಲೋಕಗುರುಗಳಿಗೆ ಆಹ್ವಾನ ನೀಡುವ ಕವಿಗಳು ತನ್ನ ಗುರುಗಳನ್ನು ಕರೆಯುವ ಬಗೆ ನೋಡಿ:

ಬಾ ಶ್ರೀಗುರುದೇವನೆ ಬಾ
ಶ್ಯಾಮಲ ಕಾನನ ಶೃಂಗತರಂಗಿತ
ಸಹ್ಯಾದ್ರಿಯ ಸುಂದರ ಮಂದಿರಕೆ
ಚಿನ್ಮಯ ಮಮ ಹೃನ್ಮಂದಿರಕೆ
ಬಾ ಶ್ರೀಗುರುದೇವನೆ ಬಾ

ಗುರುದೇವರ ಪಾದ ತಾವರೆಯಲ್ಲಿ ಮರಿದುಂಬಿ ನಾನು ಎಂದು ಹೇಳುವ ಕವಿ ಗುರುಗಳ ಮೇಲಿನ ಭರವಸೆಯನ್ನು ಹೀಗೆ ವ್ಯಕ್ತಪಡಿಸುತ್ತಾರೆ :

ನನ್ನೆದೆಯ ಬಾನಿನಲಿ
ಧ್ರುವತಾರೆ ನೀನಿರಲು
ದಾರಿ ತಪ್ಪಿದರೇನು?
ದಿಕ್ಕು ತಪ್ಪೆನೊ ನಾನು
ಜೀವಯಾತ್ರೆಯಲಿ!

ಗುರುವಿನಲ್ಲಿ ಪೂರ್ಣ ಶರಣುಹೊಕ್ಕ ಭಕ್ತಮನ ಹೇಳುವುದು ಹೀಗೆ:
ಇದುವರೆಗೆ ನೀನೆನ್ನ ಕೈಹಿಡಿದು ನಡೆಸಿರುವೆ ಇನ್ನಾದರೂ ನನ್ನ ಕೈಬಿಡದಿರು
ಅಂದಿನಂತೆಯೆ ಇಂದು ನಾನೊಂದು ಶಿಶು ಎಂದು
ಎಂದಿಗೂ ಕೈಬಿಡದೆ ಸಲಹೈ, ಗುರೂ …

ಏಕೋ ಇದನ್ನು ಓದಿದಾಗ “ಕರುಣಾಳು ಬಾ ಬೆಳಕೆ” ಬಿಎಂಶ್ರೀಯವರ ಅನುವಾದವೂ ಥಟ್ಟನೆ ನೆನಪಿಗೆ ಬಂತು. ಎರಡರ ಭಾವವೂ ಒಂದೇ ಆದದ್ದಕ್ಕೇನೋ!

ಅಂತರ್ವಾಣಿಯ ಕರೆಯನ್ನು ಆಲಿಸತೊಡಗುವ ಶಕ್ತಿ ಗುರು ಕೃಪೆಯಿಂದಲೇ ತಾನೆ ?ಹಾಗೆಯೇ ಮಹಾಮಾತೆ ಶಾರದಾದೇವಿ ಅವರ ಬಗ್ಗೆ ಬರೆದ ಮಹಾಮಾತೆ ಕವನ ಹಾಗೂ ಸ್ವಾಮಿ ವಿವೇಕಾನಂದ ಕವನಗಳು ಸಹ ಬಹಳ ಅರ್ಥಪೂರ್ಣವಾಗಿವೆ.

ಅಂತೆಯೇ “ಗುರುದೇವ”ನಿಗೆ ಪದ್ಯದಲ್ಲಿ ಮಾಡುವ ಪ್ರಾರ್ಥನೆ ಹಾಗೂ “ಅನಾದಿ ಗಾನ”ದಲ್ಲಿ ಗುರುವೇ ಗಾಯಕ ತಾನು ಅವನಿಂದ ಹೊರಟ ಗಾನ ಎಂಬ ಉಪಮೆ ನಿಜಕ್ಕೂ ಧ್ವನಿಪೂರ್ಣ .

ಇನ್ನು ಈ ಸಂಕಲನದಲ್ಲಿ ಕೆಲವು ನೀಳ್ಗವಿತೆ ಗಳಿದ್ದು ಕಥಾ ಕವನಗಳಂತೆ ಭಾಸವಾಗಿ ವಿಸ್ತಾರ ಹರಿವಿನ ಘಟನೆಗಳನ್ನು ಸಂದರ್ಭಗಳನ್ನು ಭಾವನೆಗಳನ್ನು ವಿಶದವಾಗಿ ನಿರೂಪಿಸುತ್ತವೆ . ಗಣೇಶಗಾಥಾ, ದೇವಕೇತು, ಮುಕ್ತ ಮಹಾಪುರುಷ, ರೋರಿಕ್ ಚಿತ್ರಕಲಾ ಸ್ಮೃತಿ, ಗೊಮ್ಮಟೇಶ್ವರನ ಸನ್ನಿಧಿಯಲ್ಲಿ, ಸಭ್ಯತಾ ದೇವತೆ, ಶ್ರೀ ಕೃಷ್ಣ ಜನ್ಮಾಷ್ಟಮಿ ಈ ಕವಿತೆಗಳು ಕೆಲವೊಂದು ಉದಾಹರಣೆಗಳು .

ಮಂಗಳಾರತಿ ಕವನದಲ್ಲಿ ಕವಿಯ ಮಂಗಳಾರತಿಯ ಬಗೆಗಿನ ಪರಿಕಲ್ಪನೆಯ ಪರಿ ನೋಡಿ:

ದೇಹದ ಬತ್ತಿಯಿನಾತ್ಮ ಜ್ವಾಲೆಯ
ರೂಪದೊಳನುದಿನ ಬಾಳುತಿವೆ!
ಸ್ವರ್ಗ ದ್ವಾರಕೆ ಏಳುತಿವೆ!

ಸೂರ್ಯನೇ ಭೂಮಿಗೆ ನಿರುತದ ಮಂಗಳಾರತಿ ಎಂಬ ಭಾವನೆಯಲ್ಲಿ ಮನುಜರೆಂಬ ಬತ್ತಿಗಳು ಸೂರ್ಯನ ಆತ್ಮ ಎನ್ನುವ ಜ್ಯೋತಿಯಿಂದ ನಿರಂತರ ಲೋಕಕ್ಕೆ ಮಂಗಳಾರತಿಯಾಗಿದೆ ಎನ್ನುವ ಭಾವ .

ಶಂಕರಾಚಾರ್ಯರ ನಿರ್ವಾಣಷಟ್ಕಂ ನ ಅನುವಾದವು ಸಹ ಈ ಸಂಕಲನದಲ್ಲಿದೆ .
ಇನ್ನೂ ಅತಿ ಜನಪ್ರಿಯವಾದ ಕೆಲವು ಭಾವಗೀತೆಗಳು ಈ ಸಂಕಲನದಿಂದ ಆಯ್ದವೇ .
“ತನುವು ನಿನ್ನದು ಮನವು ನಿನ್ನದು” ಹಾಡಿನ

ನನ್ನ ಮನದಲಿ ನೀನೆ ಯುಕ್ತಿ
ನನ್ನ ಹೃದಯದಿ ನೀನೆ ಭಕ್ತಿ
ನೀನೆ ಮಾಯಾಮೋಹಶಕ್ತಿಯು
ನನ್ನ ಜೀವನ ಮುಕ್ತಿಯು

ಸಾಲುಗಳನ್ನು ಕೇಳದವರುಂಟೇ?

ತೇನವಿನಾ ತೇನವಿನಾ
ತೃಣಮಪಿ ನಚಲತಿ ತೇನವಿನಾ
ಮಮತೆಯ ಬಿಡು ಹೇ ಮೂಢಮನಾ

ಮನಸ್ಸನ್ನು ತಟ್ಟಿದ ಪ್ರಸಂಗ ನೆನಪಾಗದೆ?
ಅಂತರತಮ ನೀ ಗುರು ಕವನದ ಹಾಗೆ ಆತ್ಮ ತಮೋಹಾರಿ ಯನ್ನು ಕರೆಯದವರು ಇದ್ದಾರೆಯೇ?

‘ಮುಚ್ಚು ಮರೆ ಇಲ್ಲದೆಯೆ’ ಎಂಬ ಕವಿತೆ ಕೇಳಿ ಭಾವುಕರಾಗದ ಕನ್ನಡಿಗರೇ ಇಲ್ಲವೆಂಬುದು ನನ್ನ ಭಾವನೆ .
ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯಾವತಾರ ? ಅಶ್ವತ್ಥರ ಕಂಚಿನ ಕಂಠದ ಈ ಹಾಡು ಬಡಿದೆಚ್ಚರಿಸದಿರುವುದೇ?

ಗುರುಗಳಂತೆಯೇ ಜಗನ್ಮಾತೆಯು ಕುವೆಂಪು ಅವರ ಆರಾಧ್ಯ ದೇವತೆ ಋತುಚಿನ್ಮಯಿ ಜಗನ್ಮಾತೆಗೆ ಎಂಬ ಕವನದಲ್ಲಿ ತಾಯಿಯನ್ನು ಹೀಗೆ ಕರೆಯುತ್ತಾರೆ:

ಹೃದಯಪದ್ಮ ತಾನರಳೆ ಕರೆವೆ ಬಾರಮ್ಮ ಬಾ ಇಳಿದು ಬಾ
ಮನೋ ದ್ವಾರ ತಾ ಬಿರಿಯೆ ಕರೆವೆ ಜಗದಂಬೆ ಬಾ ಇಳಿದು ಬಾ
ಅಗ್ನಿ ಹಂಸ ಗರಿಗೆದರೆ ಕರೆವೆ ಬಾ ತಾಯಿ ಇಳಿದು ಬಾ
ಚೈತನ್ಯ ಪುರುಷ ಯಜ್ಞಕ್ಕೆ ನೀನೆ ಅಧ್ವರ್ಯು ಬಾ ಇಳಿದು ಬಾ

ಮೈ ಜುಮ್ಮೆಂದು ರೋಮಾಂಚನ ಆಗುತ್ತದೆ ಈ ಸಾಲುಗಳನ್ನು ಓದಿದಾಗ .

ಕವಿ ಹೃದಯದ ಭಾವಗಳು ಅನುಭವಗಳು ಅನುಭಾವಗಳು ಅನುಭೂತಿಯಾಗಿ ಶಬ್ದಗಳಾದಾಗ ಕಾವ್ಯಗಂಗೆಯ ರಸ ಹೊನಲು. ಸಾಹಿತ್ಯದ ಕ್ಷೀರಕ್ಕೆ ಆಧ್ಯಾತ್ಮದ ಜೇನು ಬೆರೆತಾಗಲಂತೂ ಸವಿಯ ಸವಿಯುವ ಓದುಗರ ಗಮನಕ್ಕೆ ಅನಿರ್ವಚನೀಯ ಆನಂದಾನುಭೂತಿ.

ಅಗ್ನಿಹಂಸ ದ ಸಾಲುಸಾಲುಗಳಲ್ಲಿಯೂ ಈ ರೀತಿಯ ಅನುಭವ ಅನುಭೂತಿಗಳು ಬೆರೆತು ದೈವಿಕತೆಯ ದರ್ಶನವಾಗುತ್ತದೆ . ಕುವೆಂಪು ಅವರ ದಾರ್ಶನಿಕತೆಯ ದಿಗ್ದರ್ಶನವಾಗುತ್ತದೆ. ಅವರ ನೀಳ್ಗಾವ್ಯಗಳನ್ನು ಓದಿದಾಗಲಿನ ರಸಾನುಭವವೇ ಬೇರೆ .ಈ ರೀತಿ ಕವನ ಸಂಕಲನಗಳಲ್ಲಿ ನ ಆಧ್ಯಾತ್ಮಿಕ ತಿರುಳಿನ ಕವಿತೆಗಳ ಆಸ್ವಾದವೇ ಬೇರೆ .ಬೇರೆ ಕವನ ಸಂಕಲನಗಳ ಮಧ್ಯದ ಈ ರೀತಿಯ ಕವನಗಳು ಪಾಯಸದ ಮಧ್ಯದಲ್ಲಿ ಸಿಕ್ಕುವ ದ್ರಾಕ್ಷಿಗೋಡಂಬಿಗಳಂತೆ . ಆದರೆ ಈ ಕವನ ಸಂಕಲನ ಸವಿ ಸಿಹಿ ಹಣ್ಣುಗಳ ರಸಾಯನದಂತೆ ಶಾಂತಿ ನೆಮ್ಮದಿ ಸಂತೃಪ್ತಿಗಳನ್ನು ಕೊಡುತ್ತದೆ . ಕಾಣದ ಅನುಭವಿಸದ ಯಾವುದೋ ಅನಂತತೆಯ ಸ್ವಾಂತನದ ತೆರೆಗಳಲ್ಲಿ ಮುಳುಗೆದ್ದ ನಿರಮ್ಮಳತೆ ನಿರಾಳತೆಯನ್ನೀಯುತ್ತದೆ.

ಆತ್ಮ ಸಂಸ್ಕಾರ ಮತ್ತು ಸಾಕ್ಷಾತ್ಕಾರಗಳಿಗಾಗಿ ಕಾವ್ಯ ಕಲೆ ಎಂಬುದು ಕುವೆಂಪು ಅವರ ದೃಷ್ಟಿಕೋನ ಹಾಗಾಗಿ ಅವರ ಕಾವ್ಯಧೋರಣೆಯ ಆಧ್ಯಾತ್ಮಿಕತೆ ಸಂಪೂರ್ಣ ಸಮರ್ಪಣೆಯ ಶರಣಾಗತಿ ಇವೆಲ್ಲಾ ಇಲ್ಲಿ ಮೇಳೈಸಿದೆ ಯಾವುದೇ ಆಧ್ಯಾತ್ಮ ತತ್ವಜ್ಞಾನದ ಕೇಂದ್ರಬಿಂದು ವ್ಯಕ್ತಿನಿಷ್ಠತೆ ಮತ್ತು ವ್ಯಕ್ತಿ ಉದ್ಧಾರ. ಆತ್ಮೋದ್ಧಾರದಿಂದಲೇ ಉತ್ತಮ ಸಮಾಜದ ನಿರ್ಮಾಣ .ಆತ್ಮೋನ್ನತಿಯ ಕಡೆಗೆ ನಡೆಯುವ ಕೈಹಿಡಿದು ನಡೆಸುವ ಭಾವ ಸಾಮರ್ಥ್ಯ ಇಲ್ಲಿನ ಕವಿತೆಗಳದು.

ಮಹಾ ಕವಿಗಳ ಅನಿಶ್ಚಯ_ ಸುನಿಶ್ಚಯ ಕವನದೊಂದಿಗೆ ಈ ಬರಹದ ಮುಕ್ತಾಯ ಮಾಡುವೆ

ಎಲ್ಲ ಅನಿಶ್ಚಯ ಒಂದೆ ಸುನಿಶ್ಚಯಃ
ನಿನ್ನ ಅಚಿಂತ್ಯ ಅಪಾರ ದಯಾ
ದುಃಖಹಿರಣ್ಯನ ಸುಖನಖಕೃಪೆಯಿಂ
ಸೀಳ್ವ ನೃಸಿಂಹನ ಮುಖದ ದಯಾ!

ಎಲ್ಲ ಸುಚಂಚಲ ಒಂದೆ ಅಚಂಚಲಃ
ನಿನ್ನ ಚರಣತಲ ಭಕ್ತಿ ಬಲ
ಎಲ್ಲ ಬಲಗಳಿಗೆ ತಾ ಮೂಲದ ಬಲ
ಸಕಲ ತಪೋತರು ಪರಮಫಲ

-ಸುಜಾತಾ ರವೀಶ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *