ಬೆಳಕು-ಬಳ್ಳಿ

ವೃತ್ತವೆಂದರೆ

Share Button

ವೃತ್ತವೆಂದರೇನು ತಿಳಿಯ ಹೇಳಲೇನು ಅರಿಯಲು
ಮತ್ತೆ ಆದಿಯಂತ್ಯವಿರದ ರೇಖೆಯಿದರ ರಚನೆಯು
ಸುತ್ತುಗಟ್ಟಿಯಿರುವ ರೇಖೆ ನೋಡಲೆಷ್ಟು‌ ಚೆಂದವು
ಹತ್ತಿರದ ಹೋಲಿಕೆಯೆನೆ ತುಂಬಿ ಬರುವ ಚಂದ್ರಮ(1)

ಅಮ್ಮನವಳ ವದನಕೆಂತ‌ ಕಾಂತಿಯಿತ್ತು ಸೊಬಗನು
ಬಿಮ್ಮನೆಷ್ಟು ರಾಜಿಸಿರುವ ಹಿರಿದು ಕೆಂಪು‌ ಕುಂಕುಮ.
ಒಮ್ಮನವಿರಲಹುದೆನುವುದು ಕಪ್ಪು ಕಣ್ಣಪಾಪೆಯ
ಸುಮ್ಮನಲ್ಲವಿನ್ನದೆಷ್ಟೊ ಹತ್ತು ಹಲವು ಬಣ್ಣವು (2)

*ಹೀಗೆ ಬನ್ನಿರಿನ್ನು ಕೆಲವು ವೃತ್ತ ಪಟ್ಟಿ ಮಾಡುವ
ಹಾಗೆ ನೋಡೆ ಮಿನುಗದಿರುವ ಗ್ರಹವು ನಮಗೆ ವೃತ್ತವೆ
ಬೀಗಬಹುದು ಕಾವ್ಯ ರಚನೆಗೆನಿತೊ ಚೆಲುವ ನೀಡುವ
ಆಗಗೊಳಿಸಿಕೊಳಲು ಎಣಿಕೆಗೆಟುಕದಿರುವ ವೃತ್ತವ (3)

ವೃತ್ತನಾಮವೆಂಬುದೊಂದು ದಾಸಪದದಿ‌ ವಿರಳವು
ಚಿತ್ತವಿಟ್ಟು ಕಲಿತು ರಚಿಸಲಹಹ ಕೋಡು ಹೆಮ್ಮೆಗೆ
ಬಿತ್ತುಯೆನಲು ಗಾಡಿ ತೈಲ ರಸ್ತೆಯಲ್ಲಿ ನೀರಿಗೆ
ಸಪ್ತವರ್ಣದಿಂದ್ರಚಾಪದಂಥ ವೃತ್ತ ಬೆರಗಿಗೆ (4)

ವಾಸಕೆಂದು ಕಟ್ಟಿಕೊಂಡದೆಷ್ಟೊ ಗೃಹದ ಗೋಡೆಯು
ಆಸೆಯಿಂದ ವೃತ್ತದಲ್ಲಿ‌ ರಚಿಸಿದ ಜಾಲಂದ್ರವು
ಭಾಷೆ ಕೊಟ್ಟ ರೀತಿ‌ ಹುಚ್ಚು‌ ಮನವು ಗೀಳಿನಂತೆಯೆ
ಲೇಸದೇನು ಚಿಂತೆವೃತ್ತದಲ್ಲೆ ಮತ್ತೆ ತಿರುಗಲು (5)

ವೃತ್ತದಂತೆಯಿರಲಿ ದೇವ ನಾಮ ಜಪವು ಅನುದಿನ
ಸುತ್ತಿ‌ಸುತ್ತಿ ಸುಳಿಯುತಿರಲಿಯೇನೆ‌ ಬರಲಿ ಬವಣೆಯು
ಮತ್ತೆ‌ ತಿರುಗಿ ಪುನುಗುಬೆಕ್ಕಿನಂತೆ ಅದುವೆ ಕಂಬದ
ಸುತ್ತಲಷ್ಟೆ ತಿರುಗುವಂತೆ ನಾಮದಲ್ಲಿ ನೆಲಸಲಿ (6)

ವೃತ್ತವೆನಲು ಚಕ್ರವಹುದು ಭವದ ತಿರುಗಿನಂತೆಯೆ
ಮತ್ತೆಮತ್ತೆ ಇಳಿಯಬಹುದು ಕೆಟ್ಟ ಕರ್ಮ ಮಾರಕ
ಚಿತ್ತ ಕೀಲಿಸಿರಲು ಮುಕ್ತರಾಗುವೆಡೆಯ ಸಾಧನೆ
ಬತ್ತಿಸಿರಲು ಜನುಮ ಜಲಧಿ ಸನಿಹದಲ್ಲೆ ಮೋಕ್ಷವು (7)

–ರತ್ನ ಮೂರ್ತಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *