ಲಹರಿ

ಯುವ ಪೀಳಿಗೆ ಮತ್ತು ಆಧ್ಯಾತ್ಮಿಕ ಜಾಗೃತಿ

Share Button

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಯುವ ಜನರು ಆಧ್ಯಾತ್ಮಿಕತೆಯ ಕಡೆಗೆ ಒಲವು ತೋರುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಬದಲಾಗುತ್ತಿರುವ ತಂತ್ರಜ್ಞಾನ, ಸ್ಪರ್ಧಾತ್ಮಕ ಬದುಕು, ಮಾನಸಿಕ ಒತ್ತಡ, ಒಂಟಿತನ, ದಿನನಿತ್ಯದ ಒತ್ತಡ ಮತ್ತು ಜೀವನದ ಅನಿಶ್ಚಿತತೆಯ ನಡುವೆ ಯುವಜನತೆ ಮಾನಸಿಕ ನೆಮ್ಮದಿ ಹಾಗೂ ಶಾಂತಿಯನ್ನು ಬಯಸಿ ಧ್ಯಾನ, ಯೋಗ, ಸತ್ಸಂಗ, ಪ್ರಾಣಾಯಾಮ ಮುಂತಾದ ಆಧ್ಯಾತ್ಮಿಕ ತಂತ್ರಗಳಿಗೆ ಮೊರೆಹೋಗುವುದು ಸಾಮಾನ್ಯವಾಗಿದೆ. ಯುವ ಉದ್ಯೋಗಿಗಳು ಕೇವಲ ಕಂಪೆನಿಗಾಗಿ ಅತಿಯಾಗಿ ಕಷ್ಟ ಪಡುವುದನ್ನು ಬಿಟ್ಟು, ಮಾನಸಿಕ ಒತ್ತಡವಿಲ್ಲದ, ನೆಮ್ಮದಿಯ ಜೀವನ ಮತ್ತು ಸ್ವತಂತ್ರ ಜೀವನಶೈಲಿಗೆ ಹೆಚ್ಚಿನ ಒಲವನ್ನು ತೋರಿಸುತ್ತಾರೆ. ಈ ತಲೆಮಾರಿಗೆ ಉದ್ಯೋಗ ಎನ್ನುವುದು ಬರೀ ಜೀವನೋಪಾಯದ ಮಾರ್ಗವಲ್ಲದೆ, ತಮ್ಮ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರುವ ಒಂದು ಮುಖ್ಯ ಭಾಗವಾಗಿದೆ. ಓಶೋ ಫೌಂಡೇಶನ್, ಆರ್ಟ್ ಆಫ್ ಲಿವಿಂಗ್ ಮುಂತಾದ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಆಯೋಜಿಸಲಾಗುವ ಸತ್ಸಂಗ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಯುವಜನರೇ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ಕಂಡು ಬರುತ್ತಿದೆ. ಧಾರ್ಮಿಕರಲ್ಲದ ಹದಿಹರೆಯದವರೂ, ಯಾವುದೋ ಒಂದು ಸೂಪರ್ ಪವರ್‌ನಲ್ಲಿ ನಂಬಿಕೆ ಇಟ್ಟಿರುತ್ತಾರೆ. ತಮ್ಮ ಜೀವನವನ್ನು ಸಮತೋಲನಗೊಳಿಸಿ, ಸರಳ ಜೀವನ, ಉನ್ನತ ಚಿಂತನೆಯನ್ನು ಮೂಲಮಂತ್ರವಾಗಿರಿಸಿರುವ ಇಂದಿನ ಯುವಜನತೆ, ದೈಹಿಕ ಆರೋಗ್ಯದ ಜೊತೆಗೆ, ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಡುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ ಎಂದರೆ ತಪ್ಪಾಗಲಾರದು. ಆಧುನಿಕ ಯುವಪೀಳಿಗೆಯು ಮೌಲ್ಯಾದಾರಿತ ಆಧ್ಯಾತ್ಮಿಕೆಯತ್ತ ಸಾಗುವುದು ಸ್ವಯಂ ಅರಿವಿನ ಒಂದು ಹೊಸ ಆಯಾಮವಾಗಿ ಬದಲಾಗಿದೆ.

ಪ್ರಸ್ತುತ ಯುವ ಪೀಳಿಗೆಯು ಸಂಪೂರ್ಣವಾಗಿ ಡಿಜಿಟಲ್ ತಂತ್ರಜ್ಞಾನ ಮತ್ತು ಸಾಪ್ಟ್ವೇರ್ ಕ್ರಾಂತಿಯ ಪರಿಸರದಲ್ಲೇ ಬೆಳೆದ ಕಾರಣ, ಅವರ ಆಧ್ಯಾತ್ಮಿಕತೆಯು ಡಿಜಿಟಲ್ ಮಾಧ್ಯಮಗಳಿಂದ ಆಳವಾಗಿ ಪ್ರಭಾವಿತವಾಗಿದೆ. ಸಾಮಾಜಿಕ ಜಾಲತಾಣಗಳು ಮತ್ತು ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ಯುವಜನತೆ ವರ್ಚುವಲ್ ಸತ್ಸಂಗಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಫೇಸ್ ಬುಕ್, ಯೂಟ್ಯೂಬ್, ಇನ್ಸ್ಟಾ ಗ್ರಾಮ್, ಮುಂತಾದ ಸಾಧನಗಳ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಅಧ್ಯಾತ್ಮಿಕ ಅರಿವು ತಂತ್ರಜ್ಞಾನದ ಮುಖಾಂತರ ಯುವಜನತೆಗೆ ಹೊಸ ಅನುಭವವನ್ನೂ ನೀಡುತ್ತಿದೆ. ಅದೆಷ್ಟೋ ಯುವಕ ಯುವತಿಯರು ಆನ್‌ಲೈನ್‌ನಲ್ಲಿ ಅಥವಾ ಗೂಗಲ್ ಮೀಟ್‌ನ ಮೂಲಕ ಪ್ರಪಂಚದಾದ್ಯಂತ ಇರುವ ಧಾರ್ಮಿಕ ಗುರುಗಳಾಗಲೀ ಅಥವಾ ಮಾರ್ಗದರ್ಶಕರೊಡನೆ ಒಂದೆಡೆ ಸೇರುವ ವರ್ಚುವಲ್ ಸಭೆ, ಸತ್ಸಂಗಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಎಐ ಆಧಾರಿತ ಆಪ್‌ಗಳು ಮುಕ್ತವಾಗಿ ಯೋಗ, ಪ್ರಾಣಾಯಾಮದ ಮಾರ್ಗದರ್ಶನವನ್ನೂ ನೀಡುತ್ತಿವೆ. ಸೂಪರ್‌ಮೈಂಡ್ ಮೆಕಾನಿಸಂ ಆಪ್‌ಗಳು ಯೋಗನಿದ್ರೆಯ ಅಭ್ಯಾಸದ ಪ್ರಮಾಣವನ್ನು ಹೆಚ್ಚಿಸಿದೆ. ಇನ್ಸ್ಟಾಗ್ರಾಮ್ ರೀಲ್ಸ್, ಯೂಟ್ಯೂಬ್ ಶಾರ್ಟ್್ಸ ಮೂಲಕ ಸಣ್ಣ ಸಣ್ಣ ಧಾರ್ಮಿಕತೆಗೆ ಸಂಬಂಧಿಸಿದ ವಿಡೀಯೊ ತುಣುಕುಗಳನ್ನು ನೋಡುವ ಪ್ರವೃತ್ತಿ ಬೆಳೆಯುತ್ತಿದೆ. ಇಂದಿನ ಯುವಕರು ಕನಸಿನ ತುಡಿತ, ಭಾವುಕತೆಯ ಮಿಡಿತಗಳಿಂದ ಉತ್ತೇಜಿತರಾಗಿ, ಸಾಧನೆಯತ್ತ ಸಾಗುವ ಹಾದಿಯಲ್ಲಿ ಸರಿಯಾದ ಮಾರ್ಗದರ್ಶಕರಿಲ್ಲದೆ, ಗೊಂದಲಕ್ಕೀಡಾಗುವ ಸಂದರ್ಭಗಳಲ್ಲಿ ಇಂಥಹಾ ವರ್ಚುವಲ್ ಗುರುಗಳ ಉಪನ್ಯಾಸಕ್ಕೆ ಮೊರೆ ಹೋಗುತ್ತಾರೆ. ತಮ್ಮ ಭಾವನೆಗಳನ್ನು ನಿಯಂತ್ರಿಸಲು ಮತ್ತು ಆಂತರಿಕ ಶಾಂತಿಗಾಗಿ ತಕ್ಷಣದ ಸಹಾಯ ಪಡೆಯಲು ಇದು ಸಹಕಾರಿಯಾಗಿದೆ.

ಇತ್ತೀಚಿನ ‘ಇಂಡಿಯನ್ ಎಕ್ಸ್ಪ್ರೆಸ್’ ದಿನಪತ್ರಿಕೆಯ ವರದಿಯ ಪ್ರಕಾರ, ಭಕ್ತಿಗೆ ಹೊಸ ರೂಪ ಕೊಡುವ ‘ಭಜನ್ ಕ್ಲಬ್ಬಿಂಗ್’ ಎಂಬ ಪ್ರವೃತ್ತಿಯು ಹುಟ್ಟಿಕೊಂಡಿದ್ದು, ಯುವ ಜನತೆಯನ್ನು ಅತ್ಯಧಿಕವಾಗಿ ಸೆಳೆಯುತ್ತಿದೆ. ಭಕ್ತಿಗೀತೆ ಮತ್ತು ದೇವರ ನಾಮಸ್ಮರಣೆಯನ್ನು ಆಧುನಿಕ ಸಂಗೀತದೊಂದಿಗೆ ಸಂಯೋಜಿಸಿ ಲಯಬದ್ಧವಾಗಿ ಹಾಡುತ್ತಾ, ಚಪ್ಪಾಳೆ ತಟ್ಟುತ್ತಾ ಯುವಜನರು ಭಕ್ತಿಭಾವದಲ್ಲಿ ಒಂದಾಗುತ್ತಾರೆ. ಇದನ್ನೇ ‘ಭಜನ್ ಕ್ಲಬ್ಬಿಂಗ್’ ಅನ್ನುತ್ತಾರೆ. ಇಲ್ಲಿ ಸಾಂಪ್ರಾದಾಯಿಕ ಭಜನೆಗಳು ಆಧುನಿಕ ಸ್ಪರ್ಶದೊಂದಿಗೆ ಹೊಸ ರೂಪವನ್ನು ಪಡೆದುಕೊಳ್ಳುತ್ತಿವೆ. ಇಂದಿನ ಯುವ ಜನತೆ ತಮ್ಮದೇ ಆದ ಶೈಲಿಯಲ್ಲಿ ಆಧ್ಯಾತ್ಮಿಕ ಅನುಭವ ಪಡೆಯಲು ಈ ಮೂಲಕ ಯತ್ನಿಸುತ್ತಿದ್ದಾರೆ.

ಇನ್ನೊಂದು ಅಧ್ಯಯನದ ಪ್ರಕಾರ, ಜೆನ್ ಜೀಯ ( Z )ಯ ಒಂದು ವರ್ಗದ ಯುವಜನತೆ ಮದ್ಯಪಾನ ಮತ್ತು ಇತರ ವ್ಯಸನಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸುವ ಬಗ್ಗೆ ಉಲ್ಲೇಖಿಸಿದೆ. ಇದು ಯುವ ಜನರಲ್ಲಿ ತಮ್ಮ ಜೀವನದ ಆಯ್ಕೆಗಳ ಬಗ್ಗೆ ಹೆಚ್ಚುತ್ತಿರುವ ಜಾಗೃತಿಯನ್ನು ಪ್ರತಿಬಿಂಬಿಸುತ್ತದೆ. ಹಿಂದಿನ ಪೀಳಿಗೆಗೆ ಹೋಲಿಸಿದರೆ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕುರಿತಾದ ಇವರ ದೃಷ್ಟಿಕೋನ ಮತ್ತು ಮನೋಭಾವಗಳಲ್ಲಿ ಭಿನ್ನತೆ ಕಂಡು ಬರುತ್ತಿದೆ ಎಂಬುದನ್ನು ಈ ಅಧ್ಯಯನಗಳು ದೃಢಪಡಿಸಿವೆ.

ಒಟ್ಟಿನಲ್ಲಿ, ಇಂದಿನ ಯುವಪೀಳಿಗೆ ತಂತ್ರಜ್ಞಾನದ ಮೂಲಕ ಆಧ್ಯಾತ್ಮಿಕತೆಯಲ್ಲಿ ನೆಮ್ಮದಿಯನ್ನು ಹುಡುಕುತ್ತಿರುವುದು ಒಂದು ಕುತೂಹಲಕಾರಿ ಬೆಳವಣಿಗೆ. ಅದಲ್ಲದೆ, ಆಧ್ಯಾತ್ಮಿಕ ಸಂದೇಶಗಳನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸುವ ಮೂಲಕ ಶಿಸ್ತಿನ ಜೀವನಶೈಲಿಯನ್ನು ಅಳವಡಿಸುವುದು ಆಶಾದಾಯಕ ಸಂಗತಿಯಾಗಿದೆ. ಪ್ರಯಾಣಿಸುವಾಗ ಅಥವಾ ಕಛೇರಿಯ ಬಿಡುವಿನ ವೇಳೆಯಲ್ಲಿ ಆಧ್ಯಾತ್ಮಿಕ ಚಿಂತಕರ ಪೋಡ್‌ಕಾಸ್ಟ್, ಸಂದರ್ಶನ, ಆಲಿಸುವುದನ್ನೂ ಹೆಚ್ಚಿನ ಯುವಕ ಯುವತಿಯರು ಹವ್ಯಾಸವಾಗಿ ಬೆಳೆಸಿಕೊಳ್ಳುತ್ತಿದ್ದಾರೆ. ಧಾರ್ಮಿಕ ಗುರುಗಳ ಕಿರು ಪ್ರವಚನಗಳೂ ಅವರನ್ನು ಹೆಚ್ಚು ಆಕರ್ಷಿಸುತ್ತವೆ. ಒಂದು ಹೆಲ್ತ್ಕೇರ್ ವರದಿಯ ಪ್ರಕಾರ ಶೇಕಡ ೭೦ರಷ್ಟು ಹದಿಹರೆಯದವರು ತಮ್ಮ ದೈನಂದಿನ ಬದುಕಿನಲ್ಲಿ, ಸರಾಸರಿ ಆರು ಗಂಟೆಗಳಿಗಿಂತ ಹೆಚ್ಚು ಸಮಯ ಸ್ಮಾರ್ಟ್ಫೋನ್‌ನಲ್ಲಿ ಕಳೆಯುತ್ತಿದ್ದಾರೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಆನ್ ಲೈನ್ ಮಾಧ್ಯಮದ ಮೂಲಕ ಅಭ್ಯಸಿಸಲು ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನದ ಅದ್ಭುತ ಕೊಡುಗೆಗಳು ಮನುಷ್ಯನ ಮನಸ್ಥಿತಿಯನ್ನು ವಿಕಾರಗೊಳಿಸುವ ಈ ಕಾಲಘಟ್ಟದಲ್ಲಿ, ಯುವಜನರು ಮನಸ್ಸಿನ ಶಾಂತಿ, ಏಕಾಗ್ರತೆಯನ್ನು ಬಯಸುವುದರೊಂದಿಗೆ, ತಮ್ಮ ಸಾಂಸ್ಕೃತಿಕ ನಂಟಿನೊಂದಿಗೆ ಬೆಸೆಯುವ ಆಸಕ್ತಿ ತೋರುತ್ತಿರುವುದು ಸಂತೋಷದ ವಿಷಯವೇ ಸರಿ. ಆದರೆ, ಇಂದಿನ ಯುವಪೀಳಿಗೆಯ ಆಲೋಚನಾ ವಿಧಾನ ಸಂಪೂರ್ಣ ಭಿನ್ನವಾಗಿರುವ ಈ ಕಾಲದಲ್ಲಿ, ಇಂಥಹಾ ಬೆಳವಣಿಗೆಗಳು ಕೇವಲ ತಾತ್ಕಾಲಿಕವಾಗಿರದೆ, ಭವಿಷ್ಯದಲ್ಲೂ ನಿಶ್ಚಿತವಾಗಿ ಮುಂದುವರಿದು, ಅರ್ಥಪೂರ್ಣ ಮತ್ತು ಮೌಲ್ಯಾಧಾರಿತ ಬದುಕಿನ ದಾರಿದೀಪವಾಗಲಿ ಎಂಬುದೇ ನಮ್ಮೆಲ್ಲರ ಆಶಯ.

ಶೈಲಾರಾಣಿ ಬಿ, ಮಂಗಳೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *