(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಇತ್ತ ಮಾಲಿನಿಯ ಪರಿಸ್ಥಿತಿಯೂ ಭಾರ್ಗವಿಗಿಂತ ಭಿನ್ನವಾಗಿರಲಿಲ್ಲ. ಆದರೂ ಅಮ್ಮನನ್ನು ಬಹಳ ವರ್ಷಗಳಿಂದ ನೋಡಿದ್ದ, ನೋಡುತ್ತಿದ್ದ ಗೆಳತಿಯರಿಗೆ ಅವರು ದುಃಖಿಸುತ್ತಿದ್ದುದು ಅಚ್ಚರಿಯ ಸಂಗತಿಯಾಗಿತ್ತು. ಪಾಪ ಅವರುಗಳಿಗೇನು ಗೊತ್ತು ರಾತ್ರಿಯೆಲ್ಲ ಒಡಲಲ್ಲಿ ತುಂಬಿಟ್ಟುಕೊಂಡಿದ್ದ ದುಗುಡವು ಆಕೆಯ ನಿಯಂತ್ರಣ ಮೀರಿ ಹೊರಗೆ ಬಂದಿತ್ತೆಂಬುದು. ಛೇ..ಏನು ಮಾಡಬೇಕೆಂಬುದೇ ತೋಚುತ್ತಿಲ್ಲ. ಕಾಯ್ದು ನೋಡೋಣ, ನಿರ್ಧಾರವನ್ನು ಅವರಿಗೇ ಬಿಡುವುದು ಒಳಿತು.ಪದೇಪದೇ ವಿಷಯ ಪ್ರಸ್ತಾಪಿಸಿ ನೋವುಂಟು ಮಾಡುವುದು ಬೇಡ. ತನ್ನ ಅಫೀಸಿಗೆ ಅನಾರೋಗ್ಯದ ಕಾರಣ ಕೊಟ್ಟು ಇನ್ನೂ ಸ್ವಲ್ಪ ದಿನ ವರ್ಕ್ಫ್ರಂಹೋಂ ಕಂಟಿನ್ಯೂ ಮಾಡೋಣವೆಂದು ತೀರ್ಮಾನಿಸಿ ನಿದ್ರೆಗೆ ಶರಣಾದಳು.
ಮಾರನೆಯ ದಿನ ಮಾಲಿನಿ ಏಳುವಷ್ಟರಲ್ಲಿ ತಾಯಿ ಎದ್ದು ಎಂದಿನಂತೆ ತಮ್ಮ ಕೆಲಸದಲ್ಲಿ ನಿರತಳಾಗಿದ್ದು ಕಂಡು ಅಚ್ಚರಿಯಾಯಿತು. ಅವಳು ರೂಮಿನಿಂದ ಬಂದಿದ್ದು ಗಮನಿಸಿದ ಭಾರ್ಗವಿ “ಗುಡ್ ಮಾರ್ನಿಂಗ್ ಮಗಳೇ, ಬೇಗ ಮುಖ ತೊಳೆದು ಬಾ, ಬಿಸಿಬಿಸಿ ಕಾಫಿ ಕುಡಿಯೋಣ. ಐ ಯಾಮ್ ವೈಟಿಂಗ್ ಫಾರ್ ಯು, ಬಿ ಕ್ವಿಕ್” ಎಂದಳು. ಅದನ್ನು ಕೇಳಿದ ಮಾಲಿನಿ ಅವ್ವಯ್ಯಾ ಇದು ಯಾವ ಸುನಾಮಿಯ ಸೂಚನೆಯಪ್ಪಾ ಅಂದುಕೊಂಡೇ ಮುಖ ತೊಳೆದು ಅಮ್ಮನ ಮುಂದೆ ಹಾಜರಾದಳು. ಭಾರ್ಗವಿ ಕಾಫಿ ತುಂಬಿದ ಎರಡು ಲೋಟಗಳು, ಒಂದು ಬಟ್ಟಲಿನಲ್ಲಿ ಒಂದೆರಡು ಬಿಸ್ಕತ್‌ಗಳನ್ನು ಇಟ್ಟುಕೊಂಡು “ಬಾ ಹೊರಗೆ ಅಂಗಳದಲ್ಲಿ ಕೂರೋಣ. ಕೆಲಸದ ಗೌರಿಯದು ಹೊರಗಿನ ಕೆಲಸವಾದಂತಿದೆ. ಇನ್ನು ಒಳಗೆ ಕಸಗುಡಿಸಿ ಒರೆಸಲು ಬರುತ್ತಾಳೆ” ಎಂದು ಮುಂಬಾಗಿಲು ತೆರೆದು ಹೊರ ಅಂಗಳಕ್ಕೆ ಬಂದಳು.
ಅಚ್ಚರಿಯಿಂದಲೆ ಅಮ್ಮನನ್ನು ಅನುಸರಿಸಿ ಮಾಲಿನಿ ಅವರಿಂದ ತಟ್ಟೆ ತೆಗೆದುಕೊಂಡು ಅಲ್ಲಿದ್ದ ಟೀಪಾಯಿಯ ಮೇಲಿಟ್ಟು ಕುರ್ಚಿಗಳನ್ನು ಸರಿಸಿ ತಾಯಿಗೆದುರಾಗಿ ಕುಳಿತಳು. ಒಂದು ಲೋಟವನ್ನು ತಾಯಿಗಿತ್ತು ಮತ್ತೊಂದನ್ನು ತಾನು ಹಿಡಿದು ಬಿಸ್ಕತ್ತನ್ನು ನುರಿಸುತ್ತ ಕಾಫಿಯನ್ನು ಗುಟುಕರಿಸುತ್ತ ತಾಯಿಯತ್ತ ನೋಡಿದಳು. ರಾತ್ರಿಯೆಲ್ಲ ಮಂಜಿನಿಂದ ಒದ್ದೆಯಾಗಿದ್ದ ಹೂವೊಂದು ಬೆಳಗಿನ ಸೂರ್ಯನ ಕಿರಣಗಳಿಂದ ಶುಭ್ರವಾದಂತೆ ನೋವಿನ ಯಾವ ಭಾವವೂ ಕಾಣಿಸದಂತೆ ತಾಯಿಯ ಮುಖ ಪ್ರಶಾಂತವಾಗಿತ್ತು. ಒಂದು ಕೈಯಲ್ಲಿ ಪೇಪರ್ ಮತ್ತೊಂದರಲ್ಲಿ ಬಿಸ್ಕತ್ತನ್ನು ಮುರಿದು ಬಾಯಿಗೆ ಹಾಕಿಕೊಳ್ಳುತ್ತ ಸುದ್ದಿಗಳ ಕಡೆ ನೋಟ ಹರಿಸುತ್ತಿದ್ದಳು. “ಅಮ್ಮಾ ನನಗೆ ಆಫೀಸಿನಿಂದ ಇನ್ನೂ ಒಂದು ವಾರ ವರ್ಕ್ಫ್ರಂಹೋಂ ಅವಕಾಶವನ್ನು ಎಕ್ಟೆಂಡ್ ಮಾಡಿದ್ದಾರೆ. ಸೋ ನಾನಿಲ್ಲೇ ಇದ್ದು ಕೆಲಸ ಮಾಡಬಹುದು. ಒಂದು ವಾರ, ಆರ್ ಯು ಹ್ಯಾಪೀ” ಎಂದು ಕೇಳಿದಳು ಮಾಲಿನಿ.
“ಹೂಂ..ಅವರೇ ಕೊಟ್ಟಿದ್ದಾರೋ, ನೀನೇ ಮುಂದುವರಿಸಿದ್ದೀಯೋ ನಾಕಾಣೆ. ಏನಾದರಾಗಲೀ ನೀನು ನನ್ನ ಜೊತೆಯಲ್ಲಿ ಇನ್ನೊಂದು ವಾರ ಇರುತ್ತೇನೆಂದರೆ ಸಂತೋಷವಾಗದೇ ಇರುತ್ತೆಯೇ ಇರು. ಅಂದಹಾಗೆ ಬೇಗನೆದ್ದು ನಾನು ಎಲ್ಲ ತರಕಾರಿಗಳನ್ನು ಹಾಕಿ ಬ್ರೊಕನ್‌ವೀಟ್ ಬಿಸಿಬೇಳೆ ಬಾತ್ ಮಾಡಿದ್ದೇನೆ. ತಿಂಡಿತಿಂದು ನಿನ್ನ ಕೆಲಸ ನೋಡಿಕೋ. ನಾನು ಸ್ವಲ್ಪ ಆಶ್ರಮಕ್ಕೆ ಹೋಗಿ ಬರುತ್ತೇನೆ. ಹಾಗೇ ನನ್ನ ಗೆಳತಿ ಸುಮನಾಳ ಮನೆಗೂ ಹೋಗಿ ಬರುತ್ತೇನೆ. ಅವಳಿಗೆ ಏನಾದರೂ ಸಹಾಯ ಬೇಕಾ ಎಂದು ಕೇಳಿಕೊಂಡು ಬರುತ್ತೇನೆ. ಫೋನಿನಲ್ಲೇ ಕೇಳಬಹುದಿತ್ತು. ನೆನ್ನೆ ನಾನು ಏನೂ ಮಾತನಾಡಲಾಗಲಿಲ್ಲ ಅದಕ್ಕೇ ನಾನೇ ಹೋಗಿ ಬರುತ್ತೇನೆ” ಎಂದಳು ಭಾರ್ಗವಿ.
“ಹುಂ..ಆಯಿತು, ಅವರಲ್ಲಿ ವಿಪರೀತ ಶಾಸ್ತç ಸಂಪ್ರದಾಯ ಅಲ್ಲವೇ? ಅವರಲ್ಲಿ ಹೋದವರಿಗಿಂತ ಇದ್ದವರ ತಿಥಿಯಾಗುತ್ತೆಂದು ನನ್ನ ಗೆಳತಿಯೊಬ್ಬಳು ಹೇಳುತ್ತಿರುವುದನ್ನು ಕೇಳಿದ್ದೆ.”ಎಂದಳು ಮಾಲಿನಿ.
“ಹೌದು ಅದೆಲ್ಲ ಇದ್ದದ್ದೇ, ಹಣಕಾಸಿನ ತಾಪತ್ರಯವಿಲ್ಲ, ಅದರಿಂದ ಪರವಾಗಿಲ್ಲ” ಎಂದುಹೇಳಿ ಖಾಲಿಯಾಗಿದ್ದ ಲೋಟಗಳನ್ನು ತಟ್ಟೆಯಲ್ಲಿಟ್ಟುಕೊಂಡು ಒಳ ನಡೆದಳು ಭಾರ್ಗವಿ.
ಈ ಅಮ್ಮನನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ನೋಡೋಣ ಇನ್ನೂ ಒಂದು ವಾರ ಇರುತ್ತೇನಲ್ಲಾ ಎಂದುಕೊಂಡು ಸ್ನಾನಕ್ಕೆ ಹೊರಡಲು ಒಣಗಿದ ಬಟ್ಟೆ ತರಲು ರೂಮಿಗೆ ಹೋದಳು ಮಾಲಿನಿ. ತನ್ನ ತಾಯಿ ಹೇಳಿದಂತೆ ಸ್ನಾನ ಪೂಜೆ ಮುಗಿಸಿ ಬಂದಳು. ಅವರೊಡನೆ ಕುಳಿತು ತಿಂಡಿತಿಂದು ಮುಗಿಸಿದಳು. ಹೊರಗಿನ ಅಂಗಳದಲ್ಲಿ ಕುಳಿತು ಪೇಪರ್ ಓದುತ್ತಿದ್ದಂತೆ ಸಿದ್ಧವಾಗಿ ಬಂದ ಅಮ್ಮನನ್ನು ಬೀಳ್ಕೊಟ್ಟು ಒಳಬಂದಳು. ಬಾಗಿಲು ಭದ್ರಪಡಿಸಿ ಸ್ವಲ್ಪ ಹೊತ್ತು ಮೊಬೈಲಿನ ಮೆಸೇಜ್‌ಗಳನ್ನು ನೋಡುತ್ತಿದ್ದಂತೆ ತಂಗಿ ಮಾನಸಾಳಿಂದ ಕಾಲ್ ಬಂತು. ತಡಮಾಡದೆ ರಿಸೀವ್ ಮಾಡಿದಳು. ಅತ್ತಲಿಂದ ಹಲೋ ಅಕ್ಕಾ ನೀನು ಎಲ್ಲಿದ್ದೀಯೆ? ನೀನು ಹಾಕಿದ್ದ ಮೆಸೇಜ್ ನೋಡಿ ನಾನು ಬಹಳ ಡಿಸ್ಟರ್ಬ್ ಆಗಿದ್ದೇನೆ. ಈಗಲೇ ಅಮ್ಮನಿಗೆ ಏನೂ ಹೇಳಬೇಡ. ಮತ್ತೊಮ್ಮೆ ಸರಿಯಾಗಿ ಕನ್ಫರ್ಮ್ ಮಾಡಿಕೋ ಎಂದಳು ಮಾನಸಾ.
“ಹಲೋ ನಿಧಾನ ಸೋದರಿ” ಎಂದು ಹೇಳಿ ತಾನು ಇಲ್ಲಿಗೆ ಬಂದದ್ದು ತಿಳಿದ ಸಂಗತಿ. ಹಾಗೇ ವಿಷಯವನ್ನು ತಾಯಿಗೆ ಹೇಳಿದಾಗ ಆಕೆಯ ಪ್ರತಿಕ್ರಿಯೆ, ತದನಂತರ ನಿರ್ಲಿಪ್ತತೆಯೋ ಅಲ್ಲವೋ ತಿಳಿಯಲಾಗುತ್ತಿಲ್ಲ ಸುಮ್ಮನಿದ್ದಾರೆ. ಹೀಗಾಗಿ ತಾನು ಇನ್ನೂ ಒಂದುವಾರ ಇಲ್ಲಿಯೇ ಇರುತ್ತೇನೆ. ವರ್ಕ್ಫ್ರಂ ಹೋಂ ಮಾಡಿಕೊಂಡು” ಎಂದಳು ಮಾಲಿನಿ.
“ನೀನು ಏನೇ ಹೇಳಿದರೂ ನನಗೆ ಬಹಳ ತಳಮಳವಾಗುತ್ತಿದೆ. ಬರೋಣವೆಂದರೆ ರಜೆ ಹಾಕಲಾಗದ ಸಂದಿಗ್ಧತೆ. ಪ್ಲೀಸ್ ಏನಾಯಿತೆಂದು ನನಗೆ ತಿಳಿಸುತ್ತಿರು. ನೀನಿನ್ನೂ ಒಂದುವಾರ ಅಲ್ಲೇ ಇರುತ್ತೇನೆ ಎಂದದ್ದು ಕೇಳಿ ಸ್ವಲ್ಪ ಸಮಾಧಾನವಾಯಿತು. ಒಂದು ಸಾರಿ ಊರಿನಲ್ಲಿರುವ ಮಾವನಿಗೆ ಫೋನ್ ಮಾಡು. ಅವರಿಗೇನಾದರೂ ಇದರ ಸುಳಿವು ಇದ್ದರೆ ಅವರೇ ಮುಂದಾಗಿ ತಿಳಿಸುತ್ತಾರೆ. ಅಮ್ಮನಿಗೆ ನಾನು ಕೇಳಿದೆನೆಂದು ತಿಳಿಸು. ಬಿಡುವಾದಾಗ ಮತ್ತೆ ಮಾಡುತ್ತೇನೆ” ಎಂದಳು ಮಾನಸಾ.
ಊರಿನಲ್ಲಿರುವ ಮಾವನಿಗೆ ಫೋನ್ ಮಾಡು ಎಂದು ಹೇಳಿದ ತಂಗಿಯ ಮಾತು ಮಾಲಿನಿಗೆ ಹೌದಲ್ಲವಾ ನನ್ನ ತಲೆಗೆ ಇದು ಹೊಳೆಯಲೇ ಇಲ್ಲ. ಸಾಮಾನ್ಯವಾಗಿ ಹದಿನೈದು ದಿನ ತಪ್ಪಿದರೆ ಒಂದು ತಿಂಗಳಿಗೊಮ್ಮೆಯಾದರೂ ಅವರಿಗೆ ಫೋನ್ ಮಾಡುವ ಆಭ್ಯಾಸ ಇರಿಸಿಕೊಂಡಿದ್ದವಳಿಗೆ ಈ ಪ್ರಸಂಗದಿಂದ ಆ ಕಡೆಗೆ ಗಮನವೇ ಹೋಗಲಿಲ್ಲ. ಮಾವನಂತೂ ತಾವಾಗಿಯೇ ಫೋನ್ ಮಾಡುತ್ತಿರಲಿಲ್ಲ. ಮಾಡಿದರೆ “ನೋಡವ್ವಾ ಸೊಸೆಮುದ್ದೇ ನೀವುಗಳು ಯಾವಾಗಲೂ ಬ್ಯುಸಿ. ನೀವ್ಯಾವಾಗ ಫ್ರೀಯಾಗಿರುತ್ತೀರೋ ನಮಗೆ ತಿಳಿಯಲ್ಲ. ಆದ್ದರಿಂದ ನೀವೇ ಫೋನ್ ಮಾಡಿಬಿಡಿ” ಎಂದುಬಿಡುತ್ತಿದ್ದರು. ಹಾಗಾಗಿ ನಾವುಗಳೇ ಅವರಿಗೆ ಕಾಲ್ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದೆವು. ಈಗ ತಡಮಾಡದೆ ಸೋದರ ಮಾವ ಬಾಲಕೃಷ್ಣನಿಗೆ ಫೋನ್ ಮಾಡಿದಳು.
ಅತ್ತಲಿಂದ ಹಲೋ ಪುಟ್ಟೀ ಹೇಗಿದ್ದೀ? ಸುಮನಾ ಫೋನ್ ಮಾಡಿದ್ದಳಾ..ಅವಳು ಚೆನ್ನಾಗಿದ್ದಾಳಾ? ಯಾವಾಗ ಇಲ್ಲಿಗೆ ಬರುತ್ತಾಳಂತೆ? ಭಾರ್ಗವಿಯ ಕೆಲಸವೆಲ್ಲ ಮುಗಿಯಿತಾ? ಇತ್ತೀಚೆಗೆ ಅವಳೂ ಫೋನ್ ಮಾಡಿಲ್ಲ. ಮಾತನಾಡಲು ಹೇಳು. ಆಕೆ ಊರಿಗೆ ಬಂದರೆ ನನ್ನ ಗೆಳೆಯ ಸಿದ್ಧಾರ್ಥನ ಆಲೋಚನೆಗಳಿಗೆ ಲಗಾಮು ಬೀಳಬಹುದು. ನನಗೆ ಅವನು ಬಾಲ್ಯದ ಗೆಳೆಯನೆ. ಹಾಗೆಂದು ನಾನು ಅವನ ಬಗ್ಗೆ ತೀರಾ ಸಲುಗೆ ತೆಗೆದುಕೊಳ್ಳಲಾಗದು. ಜೊತೆಗೀಗ ಅವನು ನನ್ನ ತಂಗಿಯ ಗಂಡ ಭಾವ. ಎಷ್ಟು ಎಚ್ಚರವಾಗಿ ಮಾತನಾಡಿದರೂ ಕಷ್ಟವೇ. ಅದರ ಆರೋಪ ನನ್ನ ತಂಗಿಯ ಮೇಲಾಗುತ್ತದೆ. ನಿಮ್ಮ ತಾತನವರು ಚೆನ್ನಾಗಿದ್ದಾರೆ. ಅವರಿಗೆ ನಿಮ್ಮನ್ನು ನೋಡಬೇಕೆಂಬ ಆಸೆ. ಬಿಡುವು ಮಾಡಿಕೊಂಡು ಬನ್ನಿ. ನಿಮ್ಮ ಅಮ್ಮ ಬಂದರೆ ಆಕೆಯನ್ನು ನೋಡಲು ಬರುವ ನೆಪದಲ್ಲಿ ನೀವೂ ಊರಿಗೆ ಬರುತ್ತೀರಿ. ಆದಷ್ಟೂ ಅವಳಿಗೆ ಬೇಗ ಬರಲು ತಿಳಿಸು” ಎಂದು ಮಾತು ಮುಗಿಸಿದರು.
ಮಾವನ ಮಾತುಗಳನ್ನು ಕೇಳಿದರೆ ಅವರಿಗೆ ಈ ವಿಷಯ ಗೊತ್ತಿದ್ದಂತೆ ಇಲ್ಲ. ಗೊತ್ತಿದ್ದರೆ ಬಚ್ಚಿಟ್ಟುಕೊಳ್ಳುವ ವ್ಯಕ್ತಿಯಲ್ಲ. ಅದ್ಹೇಗೆ ಪಪ್ಪ ಹೊಸ ವ್ಯವಸ್ಥೆಯನ್ನು ನಿಭಾಯಿಸುತ್ತಿದ್ದಾರೆ? ಅವರ ಚಾಣಾಕ್ಷತನಕ್ಕೆ ಮೆಚ್ಚಲೇಬೇಕು. ಅಥವಾ ನಾನು ಮಾಡಿರುವ ವಿಚಾರಣೆ, ನೆರೆಹೊರೆಯವರು ಹೇಳಿದ್ದು ಎಲ್ಲವೂ ಸುಳ್ಳೇ? ಬೂದಿ ಮುಚ್ಚಿದ ಕೆಂಡಂದಂತೆ ಪ್ರಕರಣ ಗೋಚರವಾಗುತ್ತಿದೆ. ಮತ್ತೆ ಮತ್ತೆ ಅದನ್ನು ಊದುವುದು ಬೇಡ. ಮುಂದೆ ನೋಡೋಣ ಎಂದುಕೊಂಡು ಆಫೀಸಿನ ಕೆಲಸದ ಕಡೆಗೆ ಗಮನ ಹರಿಸಲು ಲ್ಯಾಪ್‌ಟಾಪ್ ಓಪನ್ ಮಾಡಿಕೊಂಡು ಕುಳಿತಳು.
ಇತ್ತ ಆಶ್ರಮಕ್ಕೆ ಹೋದ ಭಾರ್ಗವಿ ಅಂದಿನ ವಿದ್ಯಮಾನಗಳ ಕಡೆಗೆ ಗಮನ ಹರಿಸಿದಳು. ಹಾಗೆಯೇ ಮಾತನಾಡುತ್ತ ಆಶ್ರಮದ ಉಸ್ತುವಾರಿ ವಹಿಸಿಕೊಂಡಿದ್ದ ಗುರುರಾಜರವರಿಗೆ “ಸರ್ ನಾನು ಬಹಳಷ್ಟು ಆಲೋಚಿಸಿ ಒಂದು ತೀರ್ಮಾನಕ್ಕೆ ಬಂದಿದ್ದೇನೆ. ಸದ್ಯಕ್ಕೆ ನಾನು ಊರಿಗೆ ಹೋಗುವುದಿಲ್ಲ. ನನ್ನ ಮಕ್ಕಳ ವಿಚಾರವೆಂದರೆ ಅವರು ಬಂದು ಹೋಗಲು ತೊಂದರೆಯೆಂಬುದು. ಅವರಿಬ್ಬರಿಗೂ ಮದುವೆ ಮಾಡಿ ಮುಗಿಸುವವರೆಗೆ ನನಗೆ ಜವಾಬ್ದಾರಿಯಿದೆ. ಅದೆಲ್ಲಕ್ಕೂ ಸಿಟಿಯಲ್ಲಿರುವುದೇ ಸರಿ ಎನ್ನಿಸಿತು. ಅದಕ್ಕೆ ನೀವು ಹಿಂದೆ ಹೇಳಿದಂತೆ ಯಾವುದಾದರೊಂದು ಜವಾಬ್ದಾರಿಯನ್ನು ನನಗೆ ಕೊಡಿ. ಕೆಲಸ ಮಾಡುತ್ತಿದ್ದವಳಿಗೆ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ.” ಎಂದಳು.
ಭಾರ್ಗವಿಯ ಮಾತುಗಳನ್ನು ಕೇಳಿದ ಗುರುರಾಜರವರು “ಮೇಡಂ ನನ್ನ ಮನಸ್ಸಿನಲ್ಲಿರುವ ಮಾತಿಗೆ ಉತ್ತರ ಸಿಕ್ಕಿತು. ನಾನೇ ನಿಮ್ಮನ್ನು ಕೇಳೋಣವೆಂದು ಅಂದುಕೊಂಡಿದ್ದೆ. ಇಲ್ಲಿನ ಕಾರ್ಯಾಗಾರದ ಕೆಲಸಗಳು, ಅವರುಗಳು ತಯಾರಿಸಿದ ವಸ್ತುಗಳ ಮಾರಾಟದಿಂದ ಬರುವ ಉತ್ಪನ್ನದ ವಿಷಯದಲ್ಲಿ ಆಗಾಗ ಅಪಸ್ವರ ಕೇಳಿಬರುತ್ತಿದೆ. ನಾವುಗಳು ಗಮನಿಸುತ್ತಿದ್ದರೂ ಸರಿಯಾದ ಕಾರಣ ಏನೆಂದು ಗೊತ್ತಾಗುತ್ತಿಲ್ಲ. ನೀವು ತುಂಬ ಸೂಕ್ಷ್ಮ ಅವಲೋಕನ ಹೊಂದಿದ್ದೀರಿ. ಈ ಸಮಸ್ಯೆಗೆ ಜಾಣತನದಿಂದ ಪರಿಹಾರ ನೀವು ಕಂಡು ಹಿಡಿಯಬಹುದು ಎನ್ನಿಸುತ್ತದೆ. ನಿಮ್ಮ ನಿರ್ಧಾರದಿಂದ ನನಗಂತೂ ಖುಷಿಯಾಗಿದೆ. ಸಮಿತಿಯ ಇತರ ಸದಸ್ಯರುಗಳ ಮುಂದೆ ವಿಷಯವನ್ನಿಡುತ್ತೇನೆ. ಅವರುಗಳು ನಿಮ್ಮನ್ನು ಯಾವುದಾದರೊಂದು ಜವಾಬ್ದಾರಿ ತೆಗೆದುಕೊಳ್ಳಲು ಒಪ್ಪಿಸಬೇಕೆಂದು, ನೀವು ಊರಿಗೆ ಹೋದರೂ ಆಗೊಮ್ಮೆ ಈಗೊಮ್ಮೆ ಬಂದು ಹೋಗಿರೆಂದು ನಿಮ್ಮನ್ನು ಕೇಳಿಕೊಳ್ಳಬೇಕೆಂದು ಮಾತನಾಡಿಕೊಳ್ಳುತ್ತಿದ್ದರು. ನನ್ನ ಬಳಿಯೂ ಹೇಳಿದ್ದರು. ಈಗ ಅವರಿಗೂ ಸಂತೋಷವಾಗುತ್ತದೆ. ನಾನೀಗ ಸೂಚಿಸಿರುವ ಕೆಲಸದ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳಬೇಕೆಂದು ಅವರೊಡನೆ ಸಮಾಲೋಚಿಸಿ ತಿಳಿಸುತ್ತೇನೆ. ಆ ನಿಟ್ಟಿನಲ್ಲಿ ನೀವೂ ಯೋಚಿಸಿ” ಎಂದು ಹೇಳಿದರು. ಇದೆಲ್ಲ ಮಾತುಕತೆ ಮುಗಿಸುವ ಹೊತ್ತಿಗೆ ಮಧ್ಯಾನ್ಹದ ಊಟದ ಸಮಯವಾದ್ದರಿಂದ ಗುರುರಾಜರವರ ಒತ್ತಾಯಕ್ಕೆ ಮಣಿದು ಅಲ್ಲಿಯೇ ಊಟ ಮುಗಿಸಿ ಗೆಳತಿಯ ಮನೆಯ ದಾರಿ ಹಿಡಿದಳು ಭಾರ್ಗವಿ.
ಸುಮನಾ ಭಾರ್ಗವಿಯ ಆಗಮನದ ಸುದ್ಧಿಯನ್ನು ತನ್ನ ಸೋದರಿಯರ ಮುಂದೆ ಹೇಳುತ್ತಾ “ನೋಡಿ ಅವಳು ಬಂದಾಗ ಯಾರೂ ಯಾವುದೇ ಪ್ರಶ್ನೆಯನ್ನೂ ಮಾಡಬೇಡಿ. ನನ್ನಮ್ಮನ ಸಾವು ಅವಳಿಗೆ ಅಷ್ಟೊಂದು ದುಃಖ ತರುವಂತಹುದಲ್ಲ. ನನ್ನಮ್ಮನ ವಿಚಿತ್ರ ನಡಾವಳಿಕೆಗಳು, ಬೇಡಿಕೆಗಳು, ಆಕ್ಷೇಪಣೆಗಳು ಎಲ್ಲವನ್ನೂ ನೋಡಿ ಅವಳೇ ಬೇಸತ್ತು ಹೇಳುತ್ತಿದ್ದುದುಂಟು ಸುಮನಾ ಭಗವಂತನಲ್ಲಿ ನಾನೇ ನಿಮ್ಮ ಪರವಾಗಿ ಬೇಡಿಕೊಳ್ಳುತ್ತೇನೆ, ನಿಮ್ಮಮ್ಮನಿಗೆ ಬೇಗನೆ ಮುಕ್ತಿ ಕೊಡು ಎಂದು. ಈ ರೀತಿಯ ಹೆತ್ತಮ್ಮನನ್ನು ನಾನೆಲ್ಲೂ ಕಂಡಿಲ್ಲ ಎಂದು ಹೇಳಿದ್ದಳು. ಅಂತಹವಳು ಬಿಕ್ಕಿಬಿಕ್ಕಿ ಅಳುತ್ತಾಳೆಂದರೆ ಏನೋ ಆಗಿದೆ. ಅವಳು ತನ್ನ ಓದುವ ಹುಚ್ಚಿಗಾಗಿ ಬಾಳಸಂಗಾತಿಯಾಗಿ ಅವನನ್ನು ಕಟ್ಟಿಕೊಂಡು ಉರುಳು ಹಾಕಿಕೊಂಡಿದ್ದಾಳೆ. ಆದಷ್ಟು ಬೇಗ ಅವಳು ಊರಿಗೆ ಸೇರಿಕೊಂಡರೆ ಉತ್ತಮ. ಆ ಮಹಾರಾಯನ ಜೊತೆಗೆ ಅವನ ಪರ ಈಗ ಅವಳ ಮಕ್ಕಳೂ ಸೇರಿಕೊಂಡಿದ್ದಾರೆ. ಓದು ಎಂಬ ಹುಚ್ಚು ಯಾವಾಗ ನೆಲೆ ನಿಲ್ಲುವುದೋ ತಿಳಿಯದು, ಪಾಪದ ಪ್ರಾಣಿ” ಎಂದಳು ಸುಮನಾ.
“ಅಕ್ಕಾ ಮೆತ್ತಗೆ, ನಿನ್ನ ಫ್ರೆಂಡ್ ಬಂದಾಯಿತು, ಗೇಟು ತೆಗೆಯುತ್ತಿದ್ದಾರೆ” ಎಂಬ ಸೂಚನೆಯನ್ನು ಕ್ಷಮಾ ಕೊಟ್ಟಿದ್ದರಿಂದ ಸುಮನಾ ತನ್ನ ಮಾತಿಗೆ ಬ್ರೇಕ್ ಹಾಕಿ ಗೆಳತಿಯನ್ನು ಎದುರುಗೊಳ್ಳಲು ಹೊರಗೆ ಬಂದಳು. ಸುಮನಾಳನ್ನು ಕಂಡ ಭಾರ್ಗವಿ “ಸಾರಿ ಸುಮನಾ ನೆನ್ನೆ ಯಾಕೋ ಏನೊ ಅತಿಯಾದ ಸಂಕಟವಾಗಿ ಏನೂ ಮಾತನಾಡದೆ ಹೋದೆ. ನಿನ್ನನ್ನು ಕೇಳಲೂ ಆಗಲಿಲ್ಲ. ಅದಕ್ಕೇ ಇವತ್ತು ಬಂದೆ.” ಎಂದು ಹೇಳುತ್ತ ಅವಳ ಜೊತೆ ಮನೆಯೊಳಗೆ ಬಂದಳು.
ಅಲ್ಲೇ ಇದ್ದ ಕುರ್ಚಿಯ ಮೇಲೆ ಕುಳಿತು ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದಳು. ಅಕ್ಕತಂಗಿಯರನ್ನು ಬಿಟ್ಟರೆ ಬೇರೆ ಯಾರೂ ಕಾಣಿಸಲಿಲ್ಲ. ತನ್ನ ಮನದೊಳಗೆ ಬಂದ ಅನುಮಾನವನ್ನು ಪರಿಹರಿಸಿಕೊಳ್ಳಲು “ಇದೇನು ಸುಮನಾ ಊರಿನಿಂದ ಬಂದಿದ್ದ ನೆಂಟರಿಷ್ಟರೆಲ್ಲ ಹೊರಟುಹೋದರೇ? ನಿಮ್ಮ ಅಕ್ಕಭಾವ ಒಳಗಿದ್ದಾರೆಯೇ?” ಎಂದು ಪ್ರಶ್ನಿಸಿದಳು.
“ಸ್ವಲ್ಪ ಜನರು ತಮ್ಮೂರಿಗೆ ಹಿಂತಿರುಗಿದರು. ಉಳಿದವರು ಅಕ್ಕ ಭಾವನವರ ಮನೆಯಲ್ಲಿ ಠಿಕಾಣಿ ಹೂಡಿದ್ದಾರೆ. ನಾಳೆಯಿಂದ ಈ ಮನೆಯ ಕ್ಲೀನಿಂಗ್, ಅದೂ ಇದೂ ಕೆಲಸಗಳಿವೆಯಲ್ಲಾ ಅದಕ್ಕಾಗಿ ನಾವುಗಳಷ್ಟೇ ಇದ್ದೇವೆ.. ಅದಿರಲಿ ನೆನ್ನೆ ನಿನ್ನ ಮನೋವ್ಯಾಕುಲ ನೋಡಿ ನಮಗೆಲ್ಲ ಅಚ್ಚರಿ ಹಾಗು ವ್ಯಥೆ ಎರಡೂ ಉಂಟಾದವು. ಅಂಥಾದ್ದೇನಾಗಿದೆಯೇ ನನ್ನಲ್ಲಿ ಹೇಳು. ನಿನ್ನ ಊರಿಗೆ ಹೋಗುವ ವಿಷಯ ಎಲ್ಲಿಗೆ ಬಂತು? ಮಗಳೂ ಬಂದಿದ್ದಾಳೆ. ಮನೆಯಲ್ಲಿ ಏನಾದರೂ ಚಕಮಕಿ ನಡೆಯಿತಾ? ಇಲ್ಲ ನಿನ್ನ ಭಾರಸಂಗಾತಿ..ಸಾರಿ.. ಬಾಳಸಂಗಾತಿಯಿಂದ ಏನಾದರೂ” ಅಕರಾಸ್ತೆಯಿಂದ ವಿಚಾರಿಸಿದಳು ಸುಮನಾ.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://surahonne.com/?p=46184

-ಬಿ.ಆರ್.ನಾಗರತ್ನ, ಮೈಸೂರು

