ಕಾದಂಬರಿ

ಕಾದಂಬರಿ : ಬದುಕು ಭ್ರಮೆ , ಭಾಗ 23

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಭಾರ್ಗವಿಗೆ ಹಿಂದಿನ ದಿನದ ಪ್ರಸಂಗ ಮತ್ತು ಈಗ ಗೆಳತಿಯ ಕಾಳಜಿ ಎಲ್ಲ ತಲೆಯೊಳಗೆ ಹೋಯಿತು. ನೆನ್ನೆ ಗೆಳತಿಯ ಮನೆಗೆ ಬರುವಾಗ ಇದ್ದಂತಹ ಮನಸ್ಥಿತಿ ಅವ್ವಯ್ಯಾ ಊಹಿಸಲೂ ಆಗದು. ಏನೂ ಇಲ್ಲದಿದ್ದರೆ ನನ್ನೆಲ್ಲ ದುಗುಡವನ್ನು ಕಾರಿಕೊಳ್ಳುತ್ತಿದ್ದೆನೇನೋ. ಆದರೆ ಈಗ ಅದೆಲ್ಲ ಬೇಡವೆನ್ನಿಸಿತು. ಏನು ಹೇಳಿದರೇನು, ಹಾರಾಡಿದರೇನು ಆಗಿರುವ ಘಟನೆ ಹಿಂದಕ್ಕೆ ಹೋಗಬಲ್ಲುದೇ. ಕಣ್ಣೀರಿನಲ್ಲಿ ಎಲ್ಲವೂ ನೆನ್ನೆಯೇ ಕೊಚ್ಚಿಹೋಗಿ ಮನಸ್ಸು ಗಟ್ಟಿಯಾಗಿದೆ. ಯಾರನ್ನೂ ಯಾವುದನ್ನೂ ಪ್ರಶ್ನಿಸಬಾರದೆಂದು ತೀರ್ಮಾನಿಸಿದ್ದೇನೆ. ಅನುಕಂಪದ ನೋಟ, ವಾದವಿವಾದಗಳ ಕಾಟ, ಬೇಡವೇಬೇಡ ಎನ್ನಿಸುತ್ತಿದೆ. ಎಲ್ಲರ ಬಾಯಿಗೆ ಅಹಾರವಾಗಿ ಜಗಿಯುವ ವಸ್ತುವಾಗುತ್ತೇನೆ. ಬೇಡ ಬೇಡ, ಮಕ್ಕಳಿಗೂ ಹೇಳಬೇಕು. ಕೆದಕಲು ಹೋಗಬೇಡಿರೆಂದು. ಅವರುಗಳ ಬದುಕಿಗೊಂದು ನೆಲೆಕಾಣಿಸಲು ಹುಟ್ಟಿಸಿದವನ ಪಾತ್ರ ಸಮಾಜದಲ್ಲಿ ವ್ಯಾವಹಾರಿಕವಾಗಿ ಬಹಳ ಮುಖ್ಯ. ಹಾಗೇ ನನ್ನ ಅಸ್ಥಿತ್ವವನ್ನು ಕಾಪಾಡಿಕೊಳ್ಳಬೇಕು. ಇದೇ ಊರಿನಲ್ಲಿದ್ದು ಮುಂದುವರಿಯಬೇಕು.

“ಏ ಭಾರ್ಗವಿ..ಏನಾಯಿತೇ? ನಾನು ಕೇಳಿದ್ದು ತಪ್ಪಾಯಿತಾ? ನಿನಗೆ ಅಷ್ಟೊಂದು ನೋವಾಗುವಂತಿದ್ದರೆ ಬೇಡಬಿಡು” ಎಂದಳು ಸುಮನಾ.

“ಛೇ..ಛೇ..ಹಾಗೇನಿಲ್ಲವೇ ಈಗ ನೀನು ಹೇಳಿದೆಯಲ್ಲ ಮಕ್ಕಳ ವಿಚಾರ, ಅದೇ ಇಷ್ಟು ದಿವಸಗಳು ಅವರು ಹೇಳಿದಂತೆ ನಾನು ಕೇಳಿದ್ದಾಯಿತು. ಈಗ ನಾನು ಹೇಳುವುದನ್ನು ಕೇಳಿ, ಜೊತಗಾರರನ್ನು ಹುಡುಕಿಕೊಂಡಿದ್ದರೆ ನನಗೆ ತಿಳಿಸಿ, ಇಲ್ಲವೇ ನಾವೇ ನಿಮ್ಮ ಆಶಯದಂತೆ ಹುಡುಕುತ್ತೇನೆ. ನಿಮ್ಮ ಕನ್ಯಾಸೆರೆ ಬಿಡಿಸಿಕೊಂಡು ನೆಮ್ಮದಿಯಿಂದಿರಿ ಎಂದರೆ ಇನ್ನೂ ಕಾಯ್ದು ನೋಡುತ್ತಾರಂತೆ. ಹೀಗಾದರೆ ಹೇಗೆ? ನಾನು ಊರಿಗೆ ಹೋಗಿರುವುದು ಇವರಿಗೆ ಇಷ್ಟವಿಲ್ಲವೇನೋ ಅನ್ನಿಸುತ್ತಿದೆ. ಒಟ್ಟಾರೆ ನನಗೆ ಬಿಡುಗಡೆಯೇ ಇಲ್ಲವೇನೋ ಅನ್ನಿಸುತ್ತಿದೆ ಸುಮನಾ. ಅದೇ ಸಂಕಟ. ಅದನ್ನೇ ಹೇಳಿಕೊಳ್ಳಬೇಕೆಂದು ಬರುತ್ತಿದ್ದೆ. ಅಷ್ಟರಲ್ಲಿ ದಾರಿಯಲ್ಲೇ ನಿಮ್ಮ ಅಮ್ಮನ ಅವಸಾನದ ಸುದ್ಧಿ ತಿಳಿದುಬಂತು. ಎಲ್ಲವೂ ಕಣ್ಮುಂದೆ ಬಂತು ತಡೆದುಕೊಳ್ಳಲಾಗಲಿಲ್ಲ. ನಿಮ್ಮೊಡನೆ ಮಾತನ್ನೂ ಆಡದೆ, ನಿಮಗೇನಾದರೂ ಸಹಾಯ ಬೇಕೆ ಎಂದೂ ಕೇಳದೆ ಹಾಗೇ ಹೋಗಿಬಿಟ್ಟೆ” ಎಂದಳು ಭಾರ್ಗವಿ.

“ಓ..ಅಷ್ಟೇನಾ..ನಿನ್ನ ಮಗಳು ಹೇಳಿದಂತೆ ನೀನು ಇತ್ತೀಚೆಗೆ ತುಂಬ ಭಾವುಕಳಾಗುತ್ತಿದ್ದೀ. ಮಕ್ಕಳು ಈಗಿನ ಕಾಲದವರಲ್ಲವೇ ತಮ್ಮ ಜೀವನಕ್ಕೆ ಭದ್ರತೆಯನ್ನು ಮಾಡಿಕೊಂಡು ಆಮೇಲೆ ಮುಂದಿನದನ್ನು ಯೋಚಿಸುತ್ತಾರೆ. ನಾವೆಲ್ಲ ನಿನ್ನ ಜೊತೆಗಿದ್ದೇವೆ ಯೋಚಿಸಬೇಡ. ನಮ್ಮ ಜನನಿಯ ನಿರ್ಗಮನದಿಂದ ನಾವುಗಳೀಗ ಬಂಧಮುಕ್ತರು. ನಿನ್ನ ಮಕ್ಕಳ ಜಾತಕ, ಅವರ ಇಷ್ಟಪ್ರಕಾರ ಬೇಡಿಕೆಗಳ ಪಟ್ಟಿ ಎಲ್ಲವನ್ನೂ ನಮಗೆ ಕಳಿಸು. ಈಗಿನ ಕಾರ್ಯಕಲಾಪಗಳೆಲ್ಲ ಪೂರ್ತಿಯಾದ ಮೆಲೆ ವಿಚಾರಿಸುತ್ತೇವೆ” ಎಂದಳು ಸುಮನಾ.

“ನೀವಲ್ಲದೆ ನನಗಿನ್ಯಾರು ಆತ್ಮೀಯರಿದ್ದಾರೆ. ಖಂಡಿತ ಬೇಗನೆ ನಿಮಗೆ ಮಾಹಿತಿಗಳನ್ನು ತಲುಪಿಸುತ್ತೇನೆ. ಅದು ಸರಿ, ಅದೇನೋ ನಿಮ್ಮಮ್ಮ ಕೂಡಿಸಿಟ್ಟಿದ್ದ ಕಾಗದಗಳ ಕಟ್ಟಿನ ಬಗ್ಗೆ ಹೇಳಿದಿರಿ, ನನಗೆ ಅಷ್ಟಾಗಿ ಸ್ಪಷ್ಟವಾಗಿ ತಿಳಿಯಲಿಲ್ಲ. ಏನೆಂದು ಕೇಳಬಹುದೇ” ಎಂದಳು ಭಾರ್ಗವಿ.

“ಅಯ್ಯೋ ಅದು ಹೊಸದೇನಲ್ಲ ಭಾರ್ಗವಿ. ನಾವು ಕೆಲಸಕ್ಕೆಂದು ಹೊರಗಿರುತ್ತಿದ್ದೆವು. ಮನೆಯಲ್ಲಿ ಇರುತ್ತಿದ್ದವರು ನಮ್ಮಮ್ಮರೊಬ್ಬರೇ ತಾನೇ. ಅಗ ಈಗಿನಂತೆ ಮೊಬೈಲ್ ಸಂಪರ್ಕವಿರಲಿಲ್ಲ ಬರಿಯ ಲ್ಯಾಂಡ್‌ಲೈನು. ನಮ್ಮ ಮನೆಗೆ ಸಂಬಂಧ ಕೇಳಿಕೊಂಡು ಬರುತ್ತಿದ್ದವರ ಹತ್ತಿರ ಅವರು ಅದರಲ್ಲಿ ಏನು ಮಾತನಾಡಿದರೋ, ಏನು ಮಾತುಕತೆಯಾಡುತ್ತಿದ್ದರೋ ಯಾರಿಗೂ ಗೊತ್ತಿಲ್ಲ. ಮೇಲಾಗಿ ಅವರಿಂದ ಬಂದ ಪತ್ರಗಳೆಲ್ಲವನ್ನೂ ಉತ್ತರಿಸದೆ ಗಂಟುಕಟ್ಟಿ ತಮ್ಮ ಅಲಮಾರಿಯೊಳಗಡೆ ಇಟ್ಟಿದ್ದರು. ಅದರ ಕೀ ಯಾವಾಗಲೂ ಅವರ ಕೊರಳ ಸರದಲ್ಲಿ ಇರುತ್ತಿತ್ತು. ಯಾರೂ ತೆರೆದು ನೋಡುವ ಹಾಗಿರಲಿಲ್ಲ. ಆಸ್ಪತ್ರೆಯಲ್ಲಿ ಸರವನ್ನು ತೆಗೆದಿಟ್ಟರೂ ಅಲಮಾರಿಯನ್ನು ಯಾರೂ ತೆಗೆದು ನೋಡಬಾರದೆಂಬ ಕಟ್ಟಾಜ್ಞೆಯಿತ್ತಿದ್ದರು. ಅವರ ದೇಹಾಂತವಾದಾಗ ಇದು ಬಯಲಿಗೆ ಬಂತು. ಅವನ್ನೆಲ್ಲ ನೋಡಿ ನಮ್ಮ ಮನಸ್ಸುಗಳು ಒದ್ದಾಡಿಹೋದವು. ಇನ್ನು ಇವುಗಳು ಇನ್ಯಾರ ಕೈಗೋ ಸಿಕ್ಕಿ ಅವಕ್ಕೆ ರೆಕ್ಕೆಪುಕ್ಕ ಬಂದು ಕತೆಗಳಾಗುವ ಮೊದಲು ನಾವೇ ಅವನ್ನು ಬೆಂಕಿಗಾಹುತಿಮಾಡಿ ಮುಕ್ತಿ ಕಾಣಿಸಿಬಿಟ್ಟೆವು ಕೈತೊಳೆದುಕೊಂಡೆವು. ಅದೇನೋ ಹೇಳ್ತಾರಲ್ಲಾ ‘ಊರೆಲ್ಲ ಕೊಳ್ಳೇ ಹೊಡೆದ ಮೇಲೆ ದಿಡ್ಡಿಬಾಗಿಲು ಹಾಕಿದರೂಂತ’ ಮೊದಲೇ ಧೈರ್ಯವಹಿಸಿ ಸ್ವಲ್ಪ ತಡಕಾಡಿದ್ದರೆ ಕೊನೆಯ ಪಕ್ಷ ನಮ್ಮಲ್ಲಿ ಒಬ್ಬರಿಗಾದರೂ ಮದುವೆಯಾಗಬಹುದಿತ್ತು. ಅಕ್ಕ ಭಾವನ ಸ್ವಬಾವ ನಿನಗೆ ಗೊತ್ತಿದೆ, ಅವರೇನೂ ಪ್ರಯತ್ನ ಮಾಡುತ್ತಿರಲಿಲ್ಲ. ಎಲ್ಲಕ್ಕೂ ನಮ್ಮಮ್ಮನ ಅಪ್ಪಣೆಯೇ ಅಂತಿಮ” ಎಂದು ನಿಟ್ಟುಸಿರು ಬಿಟ್ಟಳು ಸುಮನಾ.
ನಂತರ ಭಾರ್ಗವಿ ಬೇಡವೆಂದರೂ ಕೇಳದೆ ಪಕ್ಕದ ಬೀದಿಯಲ್ಲಿದ್ದ ಚಿಕ್ಕ ಹೋಟೆಲಿನಿಂದ ಕಾಫಿ ತರಿಸಿ ಮನೆಯಲ್ಲಿದ್ದ ಒಂದೆರಡು ಭಾಳೆಹಣ್ಣು ಬಿಸ್ಕತ್ ಕೊಟ್ಟು ಉಪಚಾರ ಮಾಡಿದರು. ಅಪರ ಕರ್ಮಗಳು ಪೂರ್ತಿಯಾಗಿ ಮುಗಿಯುವವರೆಗೂ ಮನೆಯಲ್ಲೇನೂ ಮಾಡುವುದಿಲ್ಲ. ತಿಂಡಿ ಊಟಕ್ಕೆ ಮೆಸ್ಸನ್ನು ಗೊತ್ತು ಮಾಡಿಕೊಂಡಿರುವುದಾಗಿ ಹೇಳಿದಳು ಸುಮನಾ. ಸ್ವಲ್ಪ ಹೊತ್ತು ಆಶ್ರಮದ ವಿಚಾರವಾಗಿ ಮಾತನಾಡಿ ತನ್ನ ಮನೆಯ ದಾರಿ ಹಿಡಿದಳು ಭಾರ್ಗವಿ.

ಇತ್ತ ತನ್ನ ಒಂದು ಟರ್ಮಿನ ಕೆಲಸ ಮುಗಿಸಿ ಹೊರಗಿನ ಅಂಗಳದ ಮುಂದೆ ತನ್ನಮ್ಮ ಬೆಳೆಸಿದ್ದ ಗಿಡಗಳ ಕಡೆಗೆ ನಡೆದಳು ಮಾಲಿನಿ. ಇರುವ ಸ್ವಲ್ಪ ಜಾಗದಲ್ಲೇ ಎಷ್ಟು ಅಚ್ಚುಕಟ್ಟಾಗಿ ಗಿಡಗಳನ್ನು ಬೆಳೆಸಿದ್ದಾರೆಂದು ಅಚ್ಚರಿಪಟ್ಟಳು. ಕಾಂಪೌಂಡಿನ ಅಂಚಿಗೆ ಕರಿಬೇವಿನ ಗಿಡ, ಕಣಗಿಲೆ, ದಾಸವಾಳ, ಗಿಡಗಳಿದ್ದವು. ಅದರ ಮುಂದಕ್ಕೆ ಗುಲಾಬಿ, ಪಚ್ಚೆತೆನೆ, ಮರುಗ, ನಂದಿಬಟ್ಟಲು ನಂತರ ಅದರ ಪಕ್ಕದ ಸಾಲಿನಲ್ಲಿ ದೊಡ್ಡಪತ್ರೆ, ಒಂದೆಲಗ, ತುಳಸಿ ಜೊತೆಗೆ ಭದ್ರವಾದ ಕಡ್ಡಿಗಳನ್ನು ಗೂಟದಂತೆ ನಿಲ್ಲಿಸಿ ಅವುಗಳಿಗೆ ಹಬ್ಬುವಂತೆ ಹಾಗಲ, ವೀಳ್ಯದೆಲೆ, ಸೀಮೆ ಬದನೆ, ಕೆಳಗೆ ಟೊಮ್ಯಾಟೋ, ಕೊತ್ತಂಬರಿ, ನಾಗದಾಳಿ ಎಲ್ಲವೂ ಸೊಂಪಾಗಿದ್ದವು. ಹೌದು ಮನೆ, ಗಿಡ ಎಲ್ಲವೂ ಆರೋಗ್ಯವಾಗಿವೆ, ಆದರೆ ಮನೆಯೊಡತಿ ಮತ್ತು ಮಕ್ಕಳ ಮನಗಳು ಮಾತ್ರ ಸೊರಗುತ್ತಿವೆ ಎಂದುಕೊಳ್ಳುತ್ತಿದ್ದಂತೆ ಗೇಟಿನ ಸದ್ದಾಯಿತು. ತಲೆಯೆತ್ತಿ ನೋಡಿದಳು ಮಾಲಿನಿ. ತಾಯಿ ಬರುತ್ತಿದ್ದರು. ಬೆಳಗ್ಗೆ ಹೊರಟವರು ಕತ್ತಲಾಗುವ ಹೊತ್ತಿಗೆ ಮನೆಗೆ ಹಿಂದಿರುಗಬೇಕಿತ್ತಲ್ಲವೇ ಎಂದುಕೊಂಡಳು.

“ಏಕೆ ಮಗಳೇ, ಪುರುಸೊತ್ತಾಗಿ ಸಸ್ಯಕಾಶಿ ನೋಡಲು ಬಂದಿದ್ದೀಯೆ. ನಿನ್ನ ಪೆಟ್ಟಿಗೆ ಬಿಡುವು ಕೊಟ್ಟಿತ್ತೇ?” ಎನ್ನುತ್ತಾ ಚಪ್ಪಲಿ ಕಳಚಿ ಮನೆಯೊಳಕ್ಕೆ ನಡೆದರು.
ಓಹೊ ಹರ್ಷಚಿತ್ತರಾಗೇ ಹೊರಳಿ ಬಂದಹಾಗಿದೆ. ಇರಲಿ ಸ್ವಲ್ಪ ಹೊತ್ತು ಈ ತಂಪಾದ ಗಾಳಿಗೆ ಮೈ ಒಡ್ಡೋಣವೆಂದುಕೊಂಡು ಅಲ್ಲೇ ಅಂಗಳದಲ್ಲಿದ್ದ ಕುರ್ಚಿಯಲ್ಲಿ ಕುಳಿತಳು ಮಾಲಿನಿ. ಒಂದೈದು ನಿಮಿಷ ಕಳೆದಿರಲಿಲ್ಲ “ಪುಟ್ಟೀ ಒಳಗೆ ಬಾಮ್ಮಾ, ಸೊಳ್ಳೆಕಾಟ, ಕಿಟಕಿ ಬಾಗಿಲು ಬಂದ್ ಮಾಡು.” ಎಂದಮಾತಿಗೆ ನಿರ್ವಾಹವಿಲ್ಲದೆ ಕುಳಿತಲ್ಲಿಂದ ಎದ್ದು ಕಿಟಕಿ, ಬಾಗಿಲುಗಳನ್ನು ಬಂದ್ ಮಾಡಿ ಹಾಲಿನಲ್ಲಿದ್ದ ಸೋಫಾದ ಮೇಲೆ ಆಸೀನಳಾದಳು.

“ಮಗಳೇ ಟೀ ಮಾಡುತ್ತಿದ್ದೇನೆ. ನಿನಗೂ ಸ್ವಲ್ಪ ಬೇಕಾ? ನೀನೇನೂ ಮಾಡಿಕೊಂಡ ಹಾಗೆ ಕಾಣಿಸುತ್ತಿಲ್ಲ” ಎಂದು ಕೇಳಿದಳು ಭಾರ್ಗವಿ.
ತಾಯಿಯ ಮಾತಿಗೆ “ಹೌದು ಬೇಕಮ್ಮಾ” ಎಂದುತ್ತರಿಸಿದಳು ಮಾಲಿನಿ.

ಸರಿ ಎರಡು ಲೋಟಗಳಲ್ಲಿ ಟೀ ಹಾಕಿಕೊಂಡು ಒಂದು ಪ್ಲೇಟಿನಲ್ಲಿ ಖಾರದ ಅವಲಕ್ಕಿಯನ್ನು ಇರಿಸಿ ಎರಡನ್ನೂ ಹಾಲಿಗೆ ತಂದ ಭಾರ್ಗವಿ ಟೀಪಾಯಿಯ ಮೇಲೆ ಇಟ್ಟಳು. ಬೆಳಗಿನಿಂದ ಮುಗಿಸಿದ ಕೆಲಸಗಳ ಬಗ್ಗೆ ಮಾತುಕತೆ ಆಡುತ್ತ ಮಗಳಿಗೆ “ಸದ್ಯಕ್ಕೆ ಊರಿಗೆ ಹೋಗುವ ವಿಚಾರವನ್ನು ಮುಂದೂಡಿದ್ದೇನೆ. ಸುಮನಾಳ ಮನೆಯಲ್ಲಿ ಕ್ಲೀನಿಂಗ್ ಅದೂ ಇದೂ ಪ್ರಾರಂಭಿಸುತ್ತಿದ್ದಾರೆ. ಊಟತಿಂಡಿಯನ್ನು ಒದಗಿಸಲು ಮೆಸ್ಸಿಗೆ ಹೇಳಿಟ್ಟಿದ್ದಾರೆ. ಇನ್ನೊಂದು ಮುಖ್ಯವಾದ ವಿಷಯ. ನೀನು ಹೇಳಿದ ನಿಮ್ಮ ಪಪ್ಪನ ವಿಚಾರದಬಗ್ಗೆ ಯಾರನ್ನೂ ಪ್ರಶ್ನಿಸುವುದಾಗಲಿ ನೀನು ಮತ್ತು ಮಾನಸ ಮಾಡಬೇಡಿ. ಇದು ನನ್ನ ಬೇಡಿಕೆ ಎಂದಾಗಲಿ, ಆಜ್ಞೆ ಎಂದಾಗಲಿ ಭಾವಿಸಿಕೊಳ್ಳಿ. ನಾವು ಕಾದುನೋಡೋಣ.” ಎಂದುಹೇಳಿ ಖಾಲಿಯಾದ ಲೋಟ ತಟ್ಟೆ ತೆಗೆದುಕೊಂಡು ಎದ್ದುನಿಂತು “ರಾತ್ರಿಗೆ ಏನು ಮಾಡಿಕೊಳ್ಳೋಣ ಹೇಳು” ಎಂದು ಕೇಳಿದಳು ಭಾರ್ಗವಿ.

ನಾನು ಬೆಳಗ್ಗೆಯಿಂದ ಎರಡು ಸಾರಿ ಆ ಬಿಸಿಬೇಳೆ ಬಾತ್ ತಿಂದು ಸಾಕಾಗಿದೆಯಮ್ಮ. ಲೈಟಾಗಿ ಬ್ರೆಡ್‌ಟೋಸ್ಟ್ ಮಾಡಿಬಿಡಿ ಸಾಕು “ ಎಂದಳು ಮಾಲಿನಿ.
ಆಯಿತೆಂದು ತಲೆ ಅಳ್ಳಾಡಿಸಿ ಹೋದ ತಾಯಿಯತ್ತ ನೋಡಿದಳು ಮಾಲಿನಿ. ಅವರು ಏನು ಆಲೋಚಿಸಿದ್ದಾರೆ? ಅದರ ಹಿಂದೆ ಬಲವಾದ ಕಾರಣವೇನೋ ಇದ್ದೇಇರುತ್ತೆ ಎಂದರಿತು ಮತ್ತೇನೂ ಪ್ರಶ್ನಿಸದೆ ತನ್ನ ಕೆಲಸವನ್ನು ಮುಂದುವರಿಸಲು ಅಲ್ಲೇ ಇದ್ದ ಲ್ಯಾಪ್‌ಟಾಪಿನ ಮುಂದೆ ಕುಳಿತಳು.

ಇತ್ತ ಸಿದ್ಧಾರ್ಥನ ಅಕ್ಕನ ಮಗಳು ಮಂಗಳಾ “ಯಾರೋ ಒಂದು ಹುಡುಗಿ ಇಲ್ಲಿಗೆ ಬಂದು ಅಕ್ಕಪಕ್ಕದ ಮನೆಯಲ್ಲಿ ನಮ್ಮ ಬಗ್ಗೆ ವಿಚಾರಿಸಿದಳಂತೆ. ಪಕ್ಕದ ಮನೆಯವರು ಹೇಳಿದರು. ಈಗೇನು ಮಾಡುವುದು?” ಎಂದು ಸಿದ್ಧಾರ್ಥನನ್ನು ಕೇಳಿದಳು.

ಅದನ್ನು ಕೇಳಿದ ಸಿದ್ಧಾರ್ಥನಿಗೆ ತನ್ನ ಮಗಳೇ ಇಲ್ಲಿಗೆ ಬಂದಿರುವುದು ಎಂಬುದು ಖಾತ್ರಿಯಾಯಿತು. ಈ ನಗರದಲ್ಲಿ ಒಬ್ಬರ ಮುಖ ಇನ್ನೊಬ್ಬರು ನೋಡಲು ಪುರುಸೊತ್ತೇ ಸಿಗದು. ಅಂತಹುದರಲ್ಲಿ ವಿಚಾರಿಸುವುದು ದೂರದ ಮಾತು ಎಂದುಕೊಂಡನು. “ತಿಳಿದುಕೊಳ್ಳಲಿ ಬಿಡು ಮಂಗಳಾ, ಎಂದಾದರೊಂದು ದಿನ ಗೊತ್ತಾಗುವಂತದ್ದೇ. ಅದರಲ್ಲೇನಿದೆ. ದಂಡಿಗೆ ಹೆದರಲಿಲ್ಲ, ಧಾಳಿಗೆ ಹೆದರಲಿಲ್ಲ, ಇಷ್ಟಕ್ಕೆಲ್ಲ ಹೆದರೋದೇನಿದೆ. ಈಗೇನು ಹೌದು ನಾನು ಕಟ್ಟಿಕೊಂಡಿದ್ದೇನೆ ಎಂದೇ ಹೇಳುತ್ತೇನೆ. ಅವಳಮ್ಮ ಈಗಿರುವ ಸ್ಥಾನಮಾನ ದೊರಕಿಸಿಕೊಳ್ಳಲು ನಾನೇ ಕಾರಣ. ಅದು ಆಕೆಗೆ ಚೆನ್ನಾಗಿ ಗೊತ್ತು.” ಎಂದು ಸ್ವಲ್ಪವೂ ಪಶ್ಚಾತ್ತಾಪ ಪಡದೆ ಉತ್ತರಿಸಿದ ಸಿದ್ಧಾರ್ಥ. ಈಗ ಮಗಳು ಹೋಗಿ ಅವರ ಅಮ್ಮನಿಗೆ ಹೇಳಿರಕ್ಕೂ ಸಾಧ್ಯವಿದೆ. ಕಾದು ನೋಡೋಣ ಏನಾಗುತ್ತೋ” ಎಂದು ಸಮಾಧಾನ ಹೇಳಿದ.

ಮಾವನ ಮಾತು ಕೇಳಿದ ಮಂಗಳಾ ಅವನೇ ನನ್ನ ಪರವಾಗಿರುವಾಗ ನಾನೇಕೆ ಹೆದರಬೇಕು. ಮೊದಲಿನಿಂದಲೂ ಅವನನ್ನು ಇಷ್ಟಪಟ್ಟಿದ್ದೆ. ಮಧ್ಯದಲ್ಲಿ ಈ ಮಾವನೇ ಏನೋ ಉದಾರ ಪುರುಷೋತ್ತಮನಂತೆ ಆಗಲು ಬೇರೆ ದಾರಿ ತುಳಿದಿದ್ದ. ಹೀಗೆ ತನ್ನನ್ನು ತಾನೇ ಸಮರ್ಥಿಸಿಕೊಳ್ಳುತ್ತ ಹಾಗೇನಾದರೂ ಪ್ರಶ್ನಿಸಿದರೆ ಹೇಳುತ್ತೇನೆ ನೀವು ಹೆಸರಿಗೆ ಮಾತ್ರ ಅವನ ಬಾಳಸಂಗಾತಿಯಗಿದ್ದಿರಿ, ಏನಿದ್ದರೂ ನಿಮ್ಮಚಿತ್ತ ನಿಮ್ಮ ಏಳಿಗೆ ಮತ್ತು ಮಕ್ಕಳ ಭವಿಷ್ಯದ ಕಡೆಗೇ ಹರಿದಿತ್ತು. ಬಹಳ ಸೀಮಿತವಾಗಿ ಊರಿಗೆ ಬಂದು ಹೋಗುತ್ತಿದ್ದುದು ಬಿಟ್ಟರೆ ಬೇರೆಯ ಸಮಯದಲ್ಲಿ ಅವನಿಂದ ಬೇರೆಯಾಗಿಯೇ ಇದ್ದಿರಿ. ನಿಮಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರನ್ನು ಮದುವೆಮಾಡಿ ದಡ ಸೇರಿಸಬೆಕಾದರೆ ಮಾವನ ಹೆಸರು ಬೇಕೇಬೇಕು. ಇದರ ಬಗ್ಗೆ ಈಗಲೇ ಎಚ್ಚರಿಸುತ್ತಿದ್ದೇನೆ. ಇದ್ದರೆ ನೀವೂ ಇರಬಹುದು ಇಲ್ಲವಾದರೆ ನಿಮ್ಮ ದಾರಿ ನೀವು ಹುಡುಕಿಕೊಳ್ಳಬೇಕಾಗುತ್ತದೆ ಎಂದು ಸಮಾಧಾನ ಹೊಂದಿದಳು.

ಹೀಗೆ ಒಬ್ಬರಿಗೊಬ್ಬರು ತಾವು ಅನುಸರಿಸಿದ್ದೇ ಸರಿ ಎನ್ನುವ ತೀರ್ಮಾನಕ್ಕೆ ಬದ್ದರಾಗಿದ್ದರು. ವಿಷಯ ತಿಳಿದವರೇ ಯಾರೂ ಏನೂ ಮಾಡಿಲ್ಲ. ಇನ್ನು ಇರ‍್ಯಾವ ಲೆಕ್ಕ ಎನ್ನುವ ಧೋರಣೆ. ಅದೇನೋ ಹೇಳುತ್ತಾರಲ್ಲಾ ‘ಮೂರೂ ಬಿಟ್ಟವರು ಊರಿಗೇ ದೊಡ್ಡವರು’ ಅಂತ ಹಾಗೆ.

ಮಾಲಿನಿ ಬೆಂಗಳೂರಿಗೆ ಹೋದಮೇಲೆ ಭಾರ್ಗವಿ ಆಶ್ರಮದ ಕೆಲಸಗಳಿಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡುಬಿಟ್ಟಳು. ದಿನಗಳೆದಂತೆ ಸಿದ್ಧಾರ್ಥನ ವಿಷಯದಲ್ಲಿ ಒಂದು ರೀತಿಯ ನಿರ್ಲಿಪ್ತತೆ ಮೂಡತೊಡಗಿತು. ಈ ಮಧ್ಯದಲ್ಲಿ ಒಂದೆರಡು ಸಾರಿ ಫೋನ್ ಮಾಡಿದ್ದರೂ ಎಂದಿನಂತೆ ಮಾತನಾಡಿ ಮಕ್ಕಳ ಬಗ್ಗೆ ವಿಚಾರಿಸಿಕೊಂಡಿದ್ದ. ವಿಪರೀತ ಕೆಲಸದ ನೆಪವೊಡ್ಡಿ ಮೈಸೂರಿಗೆ ಬರಲಾಗದ್ದಕ್ಕೆ ಪೇಚಾಡಿಕೊಂಡಿದ್ದ. ಆದರೂ ಭಾರ್ಗವಿ ತನಗೆ ಅವನ ವಿಷಯ ತಿಳಿದಿದೆಯೆಂದು ತೋರ್ಪಡಿಸಿಕೊಳ್ಳದೆ ಎಚ್ಚರವಹಿಸಿದಳು. ಅಯಿತು ನಿಮಗಾದಾಗ ಬನ್ನಿ. ಸದ್ಯಕ್ಕೆ ನಾನಂತೂ ಊರಿಗೆ ಬರಲಾಗುವುದಿಲ್ಲ. ಮಕ್ಕಳಿಗೂ ಅಲ್ಲಿಗೆ ಓಡಾಡುವುದು ಕಷ್ಟವಾಗುತ್ತದೆ ಎಂದು ತೇಲಿಸಿ ಮಾತನಾಡಿದ್ದಳು. ಒಟ್ಟಿನಲ್ಲಿ ದಂಪತಿಗಳಿಬ್ಬರೂ ಮುಸುಕಿನೊಳಗೇ ಗುದ್ದಾಟ ನಡೆಸಿದ್ದರು.

(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ  : https://surahonne.com/?p=46223

-ಬಿ.ಆರ್.ನಾಗರತ್ನ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *