ಏಕಾದಶ ಸ್ಕಂದ – ಅಧ್ಯಾಯ – 2
ಯಾದವ ನಾಶ
ದ್ವಾರಕೆಯಲಿ ಅತಿ ಭಯಂಕರ ಮಹೋತ್ಪಾತವ ಕಂಡು ಕೃಷ್ಣ
ಯಾದವ ಮುಖ್ಯರಿಗೆ ಉತ್ಪಾತಗಳು ಯಾದವ ವಂಶದವನತಿಯ
ಸೂಚ್ಯಕವೆಂದರುಹಿ ಆ ಸ್ಥಳದಿ ಕ್ಷಣಮಾತ್ರ ನಿಲ್ಲದೆ
ಶಂಖೋದ್ಧಾರ ಕ್ಷೇತ್ರಕೆ ಎಲ್ಲರ ಹೊರಡಿಸಿ
ಪ್ರಭಾಸ ಕ್ಷೇತ್ರಕೆ ಬಲರಾಮನೊಂದಿಗೆ ತಾನು ತೆರಳುವೆನೆಂದು ತಿಳಿಸೆ
ಕೃಷ್ಣನಾಣತಿಯಂತೆ ಶಂಖೋದ್ಧಾರ ಕ್ಷೇತ್ರವ ಸೇರಿ
ಸ್ನಾನ ಸಂಧ್ಯಾದಿಗಳಾಚರಿಸಿ ದೇವತಾರಾಧನೆ
ದಾನ ಧರ್ಮವ ಮಾಡಿ ನಂತರದಿ ಭೋಜನವ ಮಾಡಿ
ದೈವಪ್ರೇರಣೆ ಎಂಬಂತೆ ಪಾನಾಪೇಕ್ಷೆ ಉಂಟಾಗೆ
ಮೈರೇಯ ಮಹಾಮಾದಕ ಮದ್ಯವ ಮನಸೇಚ್ಛೆ
ಪಾನ ಮಾಡೆ ಸರ್ವರಿಗೂ ಮತ್ತೇರಿ ವಾಗ್ವಾದದಲಿ
ಬಿರುಸಿನ ಮಾತುಗಳನ್ನಾಡುತ ಸ್ವಾಧೀನ ತಪ್ಪಿ
ಕತ್ತಿ ಈಟಿ ಬಿಲ್ಲು ಬಾಣಗಳಿಂದ ಭಯಂಕರ ಕಾಳಗವ ಮಾಡಿ
ಆಯುಧಗಳೆಲ್ಲ ತೀರೆ ಬಾಹು ಯುದ್ಧಕ್ಕಿಳಿದು
ದಂಡೆಯಲಿ ಬ್ರಾಹ್ಮಣ ಶಾಪದಲಿ
ಮುಸಲದ ಚೂರ್ಣದಿಂ ಬೆಳೆದ ಜೊಂಡು
ಹೊಡೆತೆಯಲಿ ಹೋರಾಡಿ ಅಣ್ಣ ತಮ್ಮ
ಬಾವ ಮೈದನರೆಂಬ ಮಾವ ಅಜ್ಜ ಮೊಮ್ಮಗ ಎಂಬ
ವಿವೇಚನೆ ಇಲ್ಲದೆ ಒಬ್ಬರನ್ನೊಬ್ಬರ ಕೊಲ್ಲುತ
ದೈವಮಾಯಾಮೋಹಿತರಾಗಿ
ಕೃಷ್ಣ ಬಲರಾಮರ ಮೇಲೂ ಏರಿಹೋಗಿ
ಬಲರಾಮ ತನ್ನ ದೇಹದಿ ನೆಲೆಸಿರ್ಪ
ಸಂಕರ್ಷಣನಂಶವನು ಮೂಲ ಸಂಕರ್ಷಣ ಮೂರ್ತಿಯಲಿ
ಐಕ್ಯ ಹೊಂದುವಂತೆ ಧ್ಯಾನಿಸಿ
ಮಾನವ ದೇಹವ ತ್ಯಜಿಸಿದ
ತನ್ನ ಸಂಕಲ್ಪಾನುಸಾರ ಭೂಭಾರಹರಣ ಕಾರ್ಯ
ಪೂರ್ಣವಾದುದ ತಿಳಿದು ಕೃಷ್ಣ
ಅಶ್ವತ್ಥ ವೃಕ್ಷದ ಬಳಿ ನೆಲದಿ ಮೌನದಲಿ ಕುಳಿತಿರೆ
ಜರಾ ಎಂಬ ವ್ಯಾಧನು ತನ್ನ ಬಾಣಕೆ
ಶಾಪಗ್ರಸ್ಥ ಮುಸಲದ ಗೆಣಸಿನ ತುಂಡಿನ
ಚೂಪಾದ ಅಲುಗಲಿ ಶ್ರೀ ಕೃಷ್ಣನ ತೊಡೆಯ ಮೇಲಿರ್ಪ
ದಿವ್ಯ ಪಾದವ ದೂರದಿಂ ನೋಡಿ
ಯಾವುದೋ ಪ್ರಾಣಿಯ ಕಿವಿಯೆಂದು ಭ್ರಮಿಸಿ
ಬಾಣಸಂಧಾನವ ಮಾಡೆ
ಬಾಣ ಕೃಷ್ಣಪಾದಕೆ ತಗುಲಿ
ನಂತರದಿ ಸಮೀಪಕೆ ಬಂದ ವ್ಯಾಧ
ಕೃಷ್ಣ ಸ್ವಾಮಿಯ ದಿವ್ಯ ರೂಪವ ಕಂಡು
ಆದ ಪ್ರಮಾದಕೆ ಭಯದಿಂ ಕಂಪಿತನಾಗೆ
ಕೃಷ್ಣ ವ್ಯಾಧನ ಕಾರ್ಯ ದೈವಸಂಕಲ್ಪವೆಂದರುಹಿ
ಅವನಿಗೆ ಸ್ವರ್ಗಪದವಿಯನನುಗ್ರಹಿಸಿದನು
ಚತುರ್ಮುಖ ಬ್ರಹ್ಮ ಪಾರ್ವತೀ ಪರಮೇಶ್ವರ
ಇಂದ್ರಾದಿ ಸಕಲರೂ ಧರಣಿಯಲಿ ಶ್ರೀ ಕೃಷ್ಣ ನಿರ್ಯಾಣವ
ನೋಡಲಾಗಮಿಸೆ ದೇವೇಶನು ಪ್ರಸನ್ನ ದೃಷ್ಠಿಯಲಿ
ಬ್ರಹ್ಮಾದಿ ದೇವ ಮುಖ್ಯರನ್ನೆಲ್ಲ ನೋಡಿ
ಯಾವ ಪರಬ್ರಹ್ಮನ ದಿವ್ಯಾಂಶದಿ ಅವತರಿಸಿದೆನೋ
ಆ ಪರಮ ವಸ್ತುವಿನಲಿ ಏಕೀಭವಿಸಿದಂತೆ ಧ್ಯಾನಿಸಿ
ತನ್ನ ನಿಜಧಾಮ ವೈಕುಂಠವ ಸೇರಿದನು
ಕೃಷ್ಣ ಸಾನಿಧ್ಯದಿ ಭೂಮಿಯಲಿ ನೆಲೆಗೊಂಡಿದ್ದ
ಸತ್ಯ ಧರ್ಮ ದೃತಿ ಕೀರ್ತಿ ದೈವಿಕಗುಣಗಳೆಲ್ಲವೂ
ಧರೆಯಿಂದ ಮರೆಯಾದವು
ದ್ವಾರಕೆಯಲ್ಲಿದ್ದ ಉಗ್ರಸೇನ ವಸುದೇವ ದೇವಕಿಯರು
ಸಕಲ ಸ್ತ್ರೀಯರೂ ದ್ವಾರಕೆಯಿಂದ ಹೊರಟು
ಮೃತರಾದ ಯಾದವ ಪರಿವಾರವ ಕಂಡು
ಶೋಕಗ್ರಸ್ಥರಾಗಿ ಶ್ರೀ ಕೃಷ್ಣ ಬಲರಾಮರು
ತಮ್ಮನ್ನೆಲ್ಲ ತೊರೆದರೆಂದಪಾರ ದುಖಃದಿ
ಅಸುನೀಗಿದರು
ಯಾದವ ಸ್ತ್ರೀಯರೂ ರುಕ್ಮಿಣೀ ಸತ್ಯಭಾಮಾ
ಕೃಷ್ಣ ಪತ್ನಿಯರೂ ಅಗ್ನಿಯಲಿ ತಂತಮ್ಮ ಪತಿಯ
ದೇಹವನ್ನಾಲಂಗಿಸಿ ಪ್ರಾಣ ತ್ಯಜಿಸಿದರು
ಅರ್ಜುನನೂ ಪರಮಾತ್ಮ ಮಿತ್ರ
ಕೃಷ್ಣನಗಲಿಕೆಯ ಸಹಿಸಲಾರದೆ ದುಃಖಿಸಿದರೂ
ಮನವ ಸ್ವಾದೀನಕೆ ತಂದುಕೊಂಡು
ಎಲ್ಲ ಮೃತರಿಗೂ ಅಗ್ನಿ ಸಂಸ್ಕಾರ
ಅಪರ ಕ್ರಿಯೆಗಳ ನಡೆಸಿದನು
ನಂತರದಿ ಸಮುದ್ರವು ಉಕ್ಕೇರಿ
ಅಪಾರ ಜಲರಾಶಿ ದ್ವಾರಕೆಯ ಪ್ರವೇಶಿಸಿ
ಕೃಷ್ಣನರಮನೆಯೊಂದ ಬಿಟ್ಟು
ಮಿಕ್ಕೆಲ್ಲವ ಮುಳುಗಿಸಿತು
ಯಾದವರ ದುರಂತ ಮರಣ
ಶ್ರೀಕೃಷ್ಣ ಬಲರಾಮ ನಿರ್ಯಾಣದ
ದುಃಖವ ಸಹಿಸಲಾಗದೆ
ಧರ್ಮರಾಜಾದಿ ಪಾಂಡವರು
ಮಹಾಪ್ರಸ್ಥಾನಕೆ ಹೊರಟರು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=46144

-ಎಂ. ಆರ್. ಆನಂದ, ಮೈಸೂರು

