ಬೆಳಕು-ಬಳ್ಳಿ

ಮಧುರ ಮೀಮಾಂಸೆ

Share Button

कभी तो चौंक के देखे
कोई हमारी तरफ़
किसी की आँख में हम को
भी इंतिज़ार दिखे

(Kabhi to hchauk ke dekhe
koi humaari taraf
Kisi ki aankh mein humko
bhi intezaar dikhe he)

– GULZAR
(ಕೆಲವೊಮ್ಮೆ ಯಾರೋ ನಮ್ಮನು
ಅರೆಕ್ಷಣ ನೋಡುವರು ;
ಅದನು ನಾವೂ ನೋಡಿದ್ದನ್ನು
ಅವರು ಗುರುತಿಸುವರು!)

ಉರ್ದು ಕವಿ ಗುಲ್ಜಾರ್

ತೊಂಬತ್ತೊಂದರ ಹರಯದ ಗುಲ್ಜಾರ್ ಅವರು ಸಂವೇದನಾಶೀಲ ಉರ್ದು ಕವಿ, ಕತೆಗಾರರು ಮತ್ತು ಹಿಂದಿ ಚಿತ್ರರಂಗದ ಹಿರಿಯ ಗೀತರಚನೆಕಾರರು, ನಾಟಕಕಾರರು, ಚಿತ್ರಕತೆಗಾರರು ಮತ್ತು ನಿರ್ದೇಶಕರು. ಬಾಳ್ವೆಯ ಪ್ರತಿ ಗುಟ್ಟುಗಳ, ಹಾಡಿನ ನಡುವಿರುವ ನಿಶ್ಶಬ್ದ ಮಟ್ಟುಗಳ ಅನುರಣನ ಬಲ್ಲ ಅಪ್ರತಿಮ ಪ್ರತಿಭಾವಂತ ಸಾಹಿತಿ. ನಿಜ ನಾಮಧೇಯ ಸಂಪೂರಣ್ ಸಿಂಗ್ ಕಲ್ರಾ ಅವರು ‘ಗುಲ್ಜಾರ್’ ಎಂದೇ ಪ್ರಸಿದ್ಧರು. ‘ಸ್ಲಮ್ ಡಾಗ್ ಮಿಲಿಯನೇರ್’ ಎಂಬ ಚಲನಚಿತ್ರಕ್ಕೆ ರಚಿಸಿದ ‘ಜೈ ಹೋ’ ಎಂಬ ಗೀತೆಗೆ 2009 ರಲ್ಲಿ ಆಸ್ಕರ್ ಪುರಸ್ಕಾರ ಲಭಿಸಿತು. 2013 ರಲ್ಲಿ ದಾದಾಸಾಹೇಬ್‌ ಫಾಲ್ಕೆ ಪುರಸ್ಕಾರ, 2024 ರಲ್ಲಿ ಅತ್ಯುನ್ನತ ಜ್ಞಾನಪೀಠ ಪುರಸ್ಕಾರ – ಇವು ಇವರ ಪ್ರತಿಭೆಗೆ ಸಂದ ಮಹೋನ್ನತ ಗೌರವ.

ಅವರದೇ ಎರಡು ಸಾಲುಗಳಿಂದ ಪ್ರಭಾವಿತವಾಗಿ ಬರೆದ ಮಧುರ ಮೀಮಾಂಸೆಯಿದು.

ಕಣ್ಣಂಚಿನ ನೋಟಕೆ ಮನದ
ಮಾಟಕೂಟಕೆ ನಾ ವಶವಾದೆ
ಅದನೂ ಕಣ್ಣಂಚಲೇ ಗಮನಿಸುತ
ಬಿಸಿಲಲೂ ನೀ ಬೆಸಲಾದೆ

ಇಂಥ ಜನಸಾಗರದಲಿ ನೀ ನನ್ನ
ನಾ ನಿನ್ನ ಗುರುತಿಸುವಂತಾದುದು
ಇದು ಸೋಜಿಗ, ಸೂಜಿಮೊಲ್ಲೆಯ
ಥರದಿ ಸೆಳೆಯುತ ಕಂಪಾದುದು

ಇನ್ನೊಬ್ಬರ ಕಂಗಳಲಿ ನಮ್ಮನು
ಹುಡುಕುವ ಪರಿಯೇ ಚೆಂದ
ನಾವಿಷ್ಟಪಡುವುದಕಿಂತ ನಮ್ಮನಿಷ್ಟ
ಪಡುವವರ ಗುರುತೇ ಆನಂದ

ಹೀಗೇ ಕಳೆದು ಹೋಗುವ ಸುಖವ
ಹುಡುಕಿ ನೇವರಿಸಿ ಸಾವರಿಸುವ ಬಂಧ
ಹೂವಿನಾಕರ್ಷಕೆ ದುಂಬಿಯಾಗುವ ಬದಲು
ಗಾಳಿಯಾಗಪ್ಪುವ ಖುಷಿಯೇ ನಿಜ ಬಿನದ

ಬದುಕೆಂದರೆ ಎಲ್ಲಕೂ ಕಾಯುವುದು,
ಕುದಿಯುವುದಲ್ಲ
ಪ್ರೀತಿಸುವುದೆಂದರೆ ಬದುಕುವುದು;
ನೋಯುವುದಲ್ಲ!

ಕಲ್ಪನೆಯಲೇ ಕವಿತ್ವ ;
ಅನುರಕ್ತಿ ಇದರ ತತ್ತ್ವ!
ಪ್ರೀತಿಸುತ್ತ ಪ್ರೀತಿಯೇ
ಆಗಿಬಿಡುವ ಮಹತ್ವ !!

-ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *