(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಕಲ್ಪಾ …’ಕಿನ್ನೌರ್ ಕೈಲಾಶ್’
‘ಕಲ್ಪಾ’ ಎಂಬಲ್ಲಿಗೆ ನಾವು ಬರುವಷ್ಟರಲ್ಲಿ ರಾತ್ರಿಯಾಗಿದ್ದುದರಿಂದ ಹೋಟೆಲ್ ನ ಪರಿಸರವನ್ನು ಗಮನಿಸಿರಲಿಲ್ಲ. ಅಲ್ಲಿ ನಾವು ಉಳಕೊಂಡಿದ್ದ ಹೋಟೆಲ್ ಶೀತಲ್ ಅನುಕೂಲಕರವಾಗಿತ್ತು. ಅಲ್ಲಿ ಉದ್ಯೋಗಿಯಾಗಿದ್ದ ಎಳೆಯ ವಯಸ್ಸಿನ ಹಸನ್ಮುಖಿ ದಂಪತಿ ಅಂಕಿತ್ ಮತ್ತು ಸುನೀತಾ ನಮ್ಮ ಊಟೋಪಚಾರದ ವ್ಯವಸ್ಥೆಯನ್ನು ಚೆನ್ನಾಗಿ ನಿರ್ವಹಿಸಿದರು. ಮರುದಿನ (08/08/2026) ಮುಂಜಾನೆ ನೋಡಿದಾಗ, ದೇವದಾರು ಮರಗಳ ಕೋಟೆಯ ನಡುವೆ ಇದ್ದ ಹೋಟೆಲ್ ಸೊಗಸಾಗಿತ್ತು. ಹೊರಾಂಗಣದಲ್ಲಿ ತೂಗಾಡುತ್ತಿದ್ದ ಬುಟ್ಟಿಯಾಕಾರದ ಉಯ್ಯಾಲೆಗಳು ಎಳೆಬಿಸಿಲಿನಲ್ಲಿ ಕುಳಿತುಕೊಂಡು ಛಾಯಾಗ್ರಹಣ ಮಾಡಲು ಸೂಕ್ತವಾಗಿದ್ದುವು. ಪಕ್ಕದಲ್ಲಿದ್ದ ತೋಟದಲ್ಲಿ ಸಾಕಷ್ಟು ಸೇಬು ಮತ್ತು ಆಪ್ರಿಕೋಟ್ ಹಣ್ಣುಗಳು ಇದ್ದರೂ, ಅದಾಗಲೆ ನಮಗೆ ‘ಸೇಬು ವೈರಾಗ್ಯ’ ಬಂದಂತಿತ್ತು. ಎರಡು-ಮೂರು ದಿನಗಳ ಮೊದಲು ಗಿಡದಿಂದ ‘ಕದಿಯುವ’ ಉತ್ಸಾಹದಲ್ಲಿದ್ದ ನಾವು ಈಗ ಸೇಬಿನ ಗಿಡದ ಬಗ್ಗೆ ಗಮನ ಹರಿಸದಷ್ಟು ನಿರ್ಲಿಪ್ತರಾಗಿದ್ದೆವು . “ಕನಿಷ್ಟ ಫೊಟೊ ಆದರೂ ಕ್ಲಿಕ್ಕಿಸಿ ಕನ್ನಡಿಗರೇ” ಎಂದು ಸೇಬಿನ ಮರಗಳು ಗೋಗರೆದಂತಾಯಿತು. ಕಾರಣವಿಷ್ಟೆ. “ಎಲ್ಲಿ ನೋಡಿದರೂ ಇದೇ ಆಯ್ತು, ಮೊನ್ನೆ ಕಿತ್ತಿದ್ದ ಆಪಲ್ ಬಲಿತಿರಲಿಲ್ಲ, ಸಪ್ಪೆ, ಹುಳಿ ಇತ್ತು” ಎಂಬ ನಿರುತ್ಸಾಹದ ಉದ್ಗಾರ ಕೇಳಿ ಬಂತು.
ಯಾವುದೇ ವಸ್ತುವಿಗೆ ಅದನ್ನು ಬೆಳೆಯುವ ಸ್ಥಳದಲ್ಲಿ ತಾತ್ಸಾರ. ಇತರ ಕಡೆ ದುಬಾರಿ ದುಡ್ಡು ಕೊಟ್ಟು ತಿನ್ನುವ ಅನಿವಾರ್ಯತೆ. ಕರಾವಳಿಯಲ್ಲಿರುವ ನಮ್ಮ ಮೂಲ ಊರಿನ ತೋಟದಲ್ಲಿ ಉಚಿತವಾಗಿ ಕೊಟ್ಟರೂ, ಮರದಿಂದ ಕೊಯ್ಯುವವರಿಲ್ಲದೆ, ಕೊಯ್ದರೆ ತಿನ್ನುವವರಿಲ್ಲದೆ ಕೊಳೆತು ಹೋಗುವ ಹಲಸಿನಹಣ್ಣನ್ನು ನೆನೆಯುತ್ತಾ , ನಗರದಲ್ಲಿ ನಾಲ್ಕಾರು ಹಲಸಿನ ಹಣ್ಣಿನ ತೊಳೆಗಳನ್ನು ದುಡ್ಡು ಕೊಟ್ಟು ತಿನ್ನುವ ನಮ್ಮಂತೆ!
‘ಆಕಾಶ ನೋಡಲು ನೂಕು ನುಗ್ಗಲೇ” ಎಂಬ ಗಾದೆ ಮಾತಿದೆ. ಇದ್ದಕ್ಕಿದ್ದಂತೆ, ನಮ್ಮ ತಂಡದವರು, ಆಕಾಶದ ಒಂದು ಕಡೆ ನೋಡಲು ಮುಗಿಬೀಳುವುದು ಕಾಣಿಸಿತು. ಆ ಹೋಟೆಲ್ ನ ಒಂದು ಭಾಗದಲ್ಲಿ, ದೂರದಲ್ಲಿ ‘ ಕಿನ್ನೌರ್ ಕೈಲಾಶ್ ‘ ಪರ್ವತದ ಶಿಖರವು ಕಾಣಿಸುತ್ತಿದೆ ಎಂದು ಹೋಟೆಲ್ ನ ನಿರ್ವಾಹಕಿ ತಿಳಿಸಿದ ಕಾರಣ, ಎಲ್ಲರೂ ಓಡೋಡಿ ಹೋದೆವು. ಮೋಡದೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ‘ಕಿನ್ನೌರ್ ಕೈಲಾಶ್ ಪರ್ವತದ ಶಿಖರ’ದ ಹಿನ್ನೆಲೆಯಲ್ಲಿ ಮುಂಜಾನೆಯ ಛಾಯಾಗ್ರಹಣವೂ ಸಂಪನ್ನಗೊಂಡಿತು.
ಹಿಮಾಲಯದ ಹೆಚ್ಚಿನ ಪರ್ವತ ಪ್ರದೇಶದಲ್ಲಿ ವಾಸಿಸುವ ‘ಪಹಾಡಿ’ ಜನರು ತಲೆಗೆ ಟೋಪಿ ಅಥವಾ ಸ್ಕಾರ್ಫ್ ಅನ್ನು ಧರಿಸಿರುತ್ತಾರೆ. ಹೋಟೆಲ್ ಶೀತಲ್ ನ ನಿರ್ವಾಹಕಿ ಸುನೀತಾ ಅವರು ಸ್ಕಾರ್ಫ್ ಧರಿಸಿದ ಶೈಲಿ ಅಚ್ಚುಕಟ್ಟಾಗಿತ್ತು. ಸ್ಥಳೀಯ ಜನರು ‘ ಧಟು’ ಎಂದು ಕರೆಯುವ ಸ್ಕಾರ್ಪ್ ಅವರಿಗೆ ಸಂಸ್ಕೃತಿಯ ಪ್ರತೀಕವೂ ಹೌದು, ಪರ್ವತ ಪ್ರದೇಶದ ಮಂಜು, ಚಳಿ, ಬಿಸಿಲಿನಿಂದ ತಲೆಗೆ ರಕ್ಷಣೆ ಕೊಡುವ ಸರಳ ವಿಧಾನವೂ ಹೌದು ಎಂದು ಆಕೆ ತಿಳಿಸಿದರು. ನಮ್ಮ ಕೋರಿಕೆ ಮೇರೆಗೆ, ಶ್ರೀಮತಿ ಲೀಲಾ ಅವರ ತಲೆಗೆ ‘ಧಟು’ ಕಟ್ಟಿ ಪ್ರಾತ್ಯಕ್ಷಿಕೆಯನ್ನೂ ಮಾಡಿ ತೋರಿಸಿದರು. ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು, ಕೇಸರಿಭಾತ್, ಫೋಹಾ, ಬ್ರೆಡ್ ಸ್ಯಾಂಡ್ ವಿಚ್ ಇದ್ದುವು. ಗ್ರೂಪ್ ಫೊಟೊ ಒಂದನ್ನು ಕ್ಲಿಕ್ಕಿಸಿ ‘ಕಲ್ಪ’ ಕ್ಕೆ ವಿದಾಯ ಹೇಳಿ ‘ ಟಾಬೋ’ ಕಡೆಗೆ ಹೊರಟೆವು.
‘ಖಾಬಾ’ದಲ್ಲಿ ಸ್ಪಿತಿ- ಸಟ್ಲೇಜ್ ನದಿ ಸಂಗಮ
ಹೋಟೆಲ್ ಶೀತಲ್ ನಿಂದ ಉಪಾಹಾರದ ನಂತರ ಸುಮಾರು ಒಂದುವರೆ ಗಂಟೆ ಟಿಬೆಟ್ ನ ಕಡೆಗೆ ಹೋಗುವ ರಸ್ತೆಯಲ್ಲಿ ಪ್ರಯಾಣಿಸಿದೆವು. ‘ಖಾಬಾ’ ಎಂಬಲ್ಲಿ ನಮ್ಮ ವಾಹನಗಳು ನಿಂತವು. ಸುಮಾರು 8600 ಅಡಿ ಹಿಮಾಲಯದ ಹಸಿರಿನ ಸಾಂದ್ರತೆ ಕಡಿಮೆಯಾಗಿ, ಕಿನ್ನೌರ್ ಕಣಿವೆ ಮುಗಿದು ಸ್ಪಿಟಿ ಕಣಿವೆ ಆರಂಭವಾಗುವ ಸುಂದರವಾದ ತಾಣವಿದು. ಇಲ್ಲಿಂದ ಟಿಬೆಟ್ ಗೆ 80 ಕಿಮೀ ದೂರವಿದೆ ಎಂದು ಮೈಲಿಗಲ್ಲು ಸೂಚಿಸುತ್ತಿತ್ತು. ಈ ಸ್ಥಳದಲ್ಲಿ ಸಟ್ಲೆಜ್ ನದಿಯೊಂದಿಗೆ ಸ್ಪಿಟಿ ನದಿಯ ಸಂಗಮವಾಗುತ್ತದೆ. ಸಟ್ಲೆಜ್ ನದಿಯು ಕೆಸರು ಮಣ್ಣಿನ ಬಣ್ಣದಲ್ಲಿದ್ದು ರಭಸವಾಗಿ ಹರಿಯುತ್ತಿತ್ತು, ಸ್ಪಿಟಿ ನದಿಯು ಶುಭ್ರ ತಿಳಿನೀಲಿ ಬಣ್ಣ ಹೊಂದಿದ್ದು ಲಾವಣ್ಯವತಿಯಂತೆ ಹರಿಯುತಿತ್ತು. ಎತ್ತರದಲ್ಲಿರುವ ಈ ಸ್ಥಳದಲ್ಲಿ ಮರಗಿಡಗಳು ಇರಲಿಲ್ಲ.
ಬೀಸಿ ಬರುತ್ತಿದ್ದ ಗಾಳಿಯ ವೇಗ ಎಷ್ಟು ಜೋರಾಗಿತ್ತೆಂದರೆ, ನಾವು ತೊಟ್ಟಿದ್ದ ಬಟ್ಟೆಯನ್ನು ಸಾವರಿಸಿಕೊಂಡು ಫೊಟೊಕ್ಕೆ ಫೋಸ್ ಕೊಡುವುದೂ ಕಷ್ಟ ಎನಿಸಿತ್ತು. ಇಂತಹ ಜಾಗದಲ್ಲಿ, ವಿಶಾಲವಾದ ಸೇತುವೆ ಮತ್ತು ಬಂಡೆಯನ್ನು ಕೊರೆದು ಮಾಡಿದ ರಸ್ತೆಯನ್ನು ನಿರ್ಮಿಸಿದ ಬಾರ್ಡರ್ ರೋಡ್ ಆರ್ಗನೈಸೇಶನ್ ನವರಿಗೆ ಜೈ ಹೋ!
ಫೊಟೋ ತೆಗೆದಾದವರು, ಅಲ್ಲಿಯೇ ಕೆಳಗಡೆ ಇದ್ದ ಚಹಾ ಶಾಪ್ ಗೆ ಹೋಗಿ ಎಂದಿದ್ದರು ನಮ್ಮ ತಂಡದ ನಾಯಕರು. ಚಹಾ ಶಾಪ್ ನ ಎದುರು ವಾಹನಗಳ ಚಕ್ರಗಳನ್ನು ಅಚ್ಚುಕಟ್ಟಾಗಿ ಜೋಡಿಸಿ, ಅದರಲ್ಲಿ ಜಲ್ಲಿಕಲ್ಲುಗಳನ್ನು ಇರಿಸಿದ್ದರು. ಇದು ಯಾವುದೋ ಕಲಾಕೃತಿ ಇರಬಹುದೆಂದು ಊಹಿಸಿದ್ದ ನಾನು, ಅಂಗಡಿಗೆ ಕೆಳಗಿಳಿಯಲು ಮೆಟ್ಟಿಲು ಎಲ್ಲಿದೆ ಎಂದು ಅತ್ತಿತ್ತ ಹುಡುಕುತ್ತಿದ್ದೆ. ಅಷ್ಟರಲ್ಲಿ ಅಲ್ಲಿದ್ದ ಒಬ್ಬ ಸ್ಥಳೀಯರು ನನ್ನ ಪೆದ್ದುತನವನ್ನು ಗುರುತಿಸಿ “ದೀದಿ, ಇಧರ್ ಆಯಿಯೇ, ಸ್ಟೆಪ್ ಹೈ” ಎಂದರು.
ನನಗೆ ಆ ಚಕ್ರದ ಮೆಟ್ಟಿಲುಗಳ ಸೃಜನಶೀಲತೆ ಇಷ್ಟವಾಗಿ, ಅಲ್ಲಿಯೇ ಕುಳಿತು ಆತನ ಕೈಗೆ ಮೊಬೈಲ್ ಕೊಟ್ಟೆ. “ಬೈಠಿಯೇ, ಫೊಟೋ ಕೀಂಚ್ಲೂಂ…” ಎಂದರು ನಗುನಗುತ್ತಾ. ‘ಭೈಯಾ ಅಪ್ನಾ ಸ್ಟೆಪ್ ಬಹುತ್ ಬಡಿಯಾ ಹೈ ‘ ಎಂದಾಗ ಆತನ ಮುಖದಲ್ಲಿ ನಗೆ ಹೊಮ್ಮಿತು.
ಈ ಪ್ರವಾಸಕಥನದ ಹಿಂದಿನ ಭಾಗ ಇಲ್ಲಿದೆ: https://surahonne.com/?p=46215
(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು




