“ಸಂತೆಯೊಳಗೊಂದು ಮನೆಯ ಮಾಡಿ ಶಬ್ಧಕ್ಕೆ ನಾಚಿದೊಡೆಂತಯ್ಯಾ…?” ಅನ್ನೋ ಸಾಲುಗಳನ್ನು ಜ್ಞಾಪಿಸಿಕೊಳ್ಳುತ್ತಾ ‘ಮೇನ್ರೋಡಿನ ಬದಿಯಲ್ಲಿ ಮನೆ ಮಾಡಿದ ಮೇಲೆ ಮನಸ್ಸಿಗೆ ಘಾಸಿ ಮಾಡಿಕೊಳ್ಳುವುದೇಕಯ್ಯಾ’ ಅಂತಗುನುಗುತ್ತಾ ಕಾಲ ಕಳೆಯುತ್ತಿರುವ ನಾನು ನಿಮ್ಮೊಡನೆ ನನ್ನ ಅನುಭವವನ್ನು ಹಂಚಿಕೊಳ್ಳಲೇ ಬೇಕು ಅನ್ನುವ ನಿರ್ಧಾರ ಮಾಡಿಬಿಟ್ಟಿದ್ದೀನಿ.
ಮೇನ್ ರೋಡಿನ ಪಕ್ಕದಲ್ಲಿ ಸೈಟ್ ಖರೀದಿಸಿ ಮನೆ ಕಟ್ಟಿಸಿ ಗೃಹ ಪ್ರವೇಶಕ್ಕೆ ಬೇಕಾದವರನ್ನೆಲ್ಲಾ ಕರೆದು ಸತ್ಕರಿಸಿದಾಗ “ಅರರೇ… ಮೈನ್ರೋಡಿನ ಪಕ್ಕದಲ್ಲೇ ನಿಮಗೆ ಸೈಟು ಸಿಕ್ಕಿಬಿಟ್ಟಿದೆ… ನೀವು ತುಂಬಾ ಲಕ್ಕಿ ಕಣ್ರೀ…” ಅಂತ ಎಲ್ರೂ ನನ್ನ ಕೈ ಕುಲುಕಿದಾಗ ಉದ್ದು ಉಬ್ಬುವುದಕ್ಕಿಂತ ಹೆಚ್ಚಾಗಿ ಉಬ್ಬಿ ಹೋಗಿದ್ದೆ. ಆದರೆ ದಿನ ಕಳೆಯುತ್ತಿದ್ದಂತೆ ನಾನೆಷ್ಟು ಲಕ್ಕಿ ಅನ್ನುವುದು ಅರ್ಥವಾಗತೊಡಗಿತ್ತು…
ಗೃಹಪ್ರವೇಶವಾಗಿ ಕೆಲವೇ ದಿನಗಳು ಕಳೆದಿತ್ತು. ಒಂದು ರಾತ್ರಿ ಮನೆಯವರೆಲ್ಲಾ ಹಾಯಾಗಿ ಮಲಗಿದ್ದಾಗ ಬೆಳಗಿನ ಜಾವ ಭಯಂಕರ ಸದ್ದು ಕೇಳಿಸಿತು. ಅಯ್ಯಯ್ಯೋ… ಇದೇನು ಭೂಕಂಪವೋ… ಬಾಂಬ್ ಬಿತ್ತೋ… ಅಂತ ಗಾಬರಿಯಾಗಿ ಮನೆಯವರೆಲ್ಲಾ ನಿದ್ದೆಗಣ್ಣಿನಲ್ಲೇ ಹೊರಕ್ಕೆ ಓಡಿ ಬಂದಾಗ ಆ ಭಾರೀ ಸದ್ದು ಲಾರಿಚಕ್ರ ಪಂಚರ್ ಆದಾಗ ಬಂದ ಸದ್ದು ಅಂತ ಅರ್ಥವಾಗಿ ಸಮಾಧಾನದ ಉಸಿರುಬಿಟ್ಟೆವು.” ಅಮ್ಮಾ… ನಾಲ್ಕು ಚಕ್ರಗಳೂ ಒಟ್ಗೇ ಪಂಚರ್ ಆಗಿರಬಹುದು ಅಲ್ವಾ…?” ಅಂತ ಮಗ ಕೇಳಿದಾಗ ‘ಇರಬಹುದು’ ಅಂತ ಚಿಕ್ಕದಾಗಿ ಉತ್ತರ ಕೊಟ್ಟೆ. ನಂಗೂ ಕನ್ಫ್ಯೂಸ಼್ ಆಗಿತ್ತು. ಆಮೇಲಾಮೇಲೆ ಅಂತ ಸದ್ದು ಕೇಳೋದು ಮಾಮೂಲಾಗಿ ಬಿಡ್ತು. ಈಗ ನಿಜವಾಗ್ಲೂ ಬಾಂಬ್ ಬಿದ್ರೂ ಕೂಡ ನಾವು ಅಪಾರ್ಥ ಮಾಡ್ಕೊಂಡು ಬೆಚ್ಚಗೆ ಮನೆಯೊಳಗೇ ಇದ್ದು ಬಿಡ್ತೀವೇನೋ ಅನ್ನೋ ಆತಂಕವಾಗಿ ಬಿಡುತ್ತೆ ಒಮ್ಮೊಮ್ಮೆ.
ಅದೊಂದು ದಿವಸ ತರಕಾರಿ ಮಾರುವ ರಾಮಕ್ಕ ಮನೆ ಮುಂದೆ ಬಂದು ‘ಒಂದು ಕೆಜಿ ಹುರುಳೀಕಾಯಿಗೆ ನಲವತ್ತು ರೂಪಾಯಿ ಕಣಕ್ಕ, ನಾನೇ ಬೆಳೆದದ್ದು ತಗೋಳಿ’ ಅಂತ ಕೊಟ್ಟು ಹೋದಳು. ಹುರುಳೀಕಾಯಿ ಚೆನ್ನಾಗಿದ್ದರಿಂದ ನಾನು ಎರಡು ಕೆಜಿ ತಗೊಂಡು ದುಡ್ಡು ಕೊಟ್ಟು ಕಳಿಸಿದೆ. ಸಂಜೆ ಪಾರ್ಕಿನಲ್ಲಿ ಸಿಕ್ಕಿದ ಗೆಳತಿ ಪರಿಮಳಾ ‘ಈವತ್ತು ಬೆಳಿಗ್ಗೆ ರಾಮಕ್ಕನ ಹತ್ರ ಹುರಳೀಕಾಯಿ ತಗೊಂಡೆ ಕಣೆ, ಮೂವತ್ತು ರೂಪಾಯಿ’ ಅಂದಾಗ ನನ್ನ ಸಿಟ್ಟು ನೆತ್ತಿಗೇರಿತು. ಮಾರನೇ ದಿವಸ ಬೆಳಿಗ್ಗೆ ಸೊಪ್ಪು ಮಾರಲು ಬಂದ ರಾಮಕ್ಕನಿಗೆ “ಯಾಕೆ ರಾಮಕ್ಕ? ಬೇರೆಯವರಿಗೆ ಮೂವತ್ತು ರುಪಾಯಿಗೆ ಹುರಳೀಕಾಯಿ ಕೊಟ್ಟಿದ್ದೀಯ, ನನ್ನ ಹತ್ರ ನಲವತ್ತು ರುಪಾಯಿ ತಗೊಂಡಿದೀಯ?” ಅಂತ ಗಟ್ಟಿಯಾಗಿ ಕೇಳಿದಾಗ “ಅಕ್ಕಾ… ಬೇಜಾರು ಮಾಡ್ಕೋಬೇಡಿ… ನಿಮ್ಮದು ದೊಡ್ಡ ರಸ್ತೆ, ದೊಡ್ಡ ಮನೆ, ಅದಕ್ಕೇ ಅತ್ತು ರುಪಾಯಿ ಜಾಸ್ತಿ ಅಷ್ಟೇಯಾ…’ ಅಂತ ನಕ್ಕಾಗ ನಾನು ಪೆಚ್ಚು ಪೆಚ್ಚಾಗಿ ಅವಳ ಮುಖವನ್ನೇ ನೋಡಿದೆ.
ನಾವು ಮನೇ ಕಟ್ಟಿ ನಾಲ್ಕಾರು ವರ್ಷಗಳು ಕಳೆದ ಮೇಲೆ ನಮ್ಮ ಅಕ್ಕಪಕ್ಕದ ಸೈಟಿನವರೂ ಮನೆ ಕಟ್ಟಲು ಪ್ರಾರಂಭಿಸಿದಾಗ ಒಂಥರಾ ಸಮಾಧಾನವಾಯಿತು. ಆದರೆ ಆ ಸೈಟಿನ ಓನರ್ಗಳು ತುಂಬಾ ಬುದ್ಧಿವಂತರು, ಸೈಟಿನ ಹಿಂಭಾಗಕ್ಕೆ ಮನೆ ಕಟ್ಟಿಸಿಕೊಂಡು ಮುಂಭಾಗದಲ್ಲಿ ಮಳಿಗೆ ಕಟ್ಟಿಸಿಬಿಟ್ಟರು. ಹೀಗಾಗಿ ನಮ್ಮನೆ ಬಲಗಡೆಗೆ ಜ್ಯೂಸ್ ಅಂಗಡಿ ಮತ್ತು ಎಡಗಡೆಗೆ `ರುಚಿದರ್ಶಿನಿ’ ಪ್ರಾರಂಭವಾಯ್ತು. ಬಾಯಾರಿಕೆಯಾದರೆ ಈ ಕಡೆಗೆ ತಿರುಗಿ ಜ್ಯೂಸ್ ಕುಡೀಬಹುದು… ಹೊಟ್ಟೆ ಹಸಿದರೆ ಆ ಕಡೆಗೆ ತಿರುಗಿ ದೋಸೆ ತಿನ್ನಬಹುದು. ಅಂತ ಹೊಟ್ಟೆ ಉರಿದುಕೊಂಡವರಿಗೆಲ್ಲಾ ಮನೆಗೆ ಕರೆದು ಪಕ್ಕದಂಗಡಿಯಿಂದ ಜ್ಯೂಸ್ ತರಿಸಿಕೊಟ್ಟು ಅವರ ಹೊಟ್ಟೆ ತಂಪಾಗಿಸಿದ್ದೂ ಆಯ್ತು. ಆದರೆ ದಿನಕಳೆಯುತ್ತಿದ್ದಂತೆ ಆ ಅಂಗಡಿಗಳ ಮುಂದೆ ಸೇರುತ್ತಿದ್ದ ಜನರ ಗುಂಪು, ಗದ್ದಲ ಗಲಾಟೆಯಿಂದಾಗಿ ತಲೆಚಿಟ್ಟು ಹಿಡಿಯತೊಡಗಿದಾಗ ‘ತಾಳುವಿಕೆಗಿಂತ ತಪವು ಇಲ್ಲ…’ ಅಂತಜೋರಾಗಿ ಹಾಡಕೊಳ್ತಾ ತೆಪ್ಪಗಿರೋದನ್ನ ಅಭ್ಯಾಸ ಮಾಡಿಕೊಂಡೆ.
ಮೇನ್ರೋಡಿನಲ್ಲಿ ರಾಜಕಾರಿಣಿಗಳ ಓಡಾಟ ಸಹಜ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹೀಗಾಗಿ ರೊಂಯ್…ರೊಂಯ್ ಅಂತ ಸದ್ದು ಮಾಡಿಕೊಂಡು ಹೋಗುವ ಪೋಲೀಸ್ ವಾಹನಗಳ ಜೊತೆ ಇತರ ವಾಹನಗಳ ಸದ್ದು ಕಿವಿಗಪ್ಪಳಿಸುವುದು ಅಪರೂಪವೇನಲ್ಲ.
ಇನ್ನು ಮೋಟಾರ್ ಬೈಕುಗಳ ಕತೆ ಹೇಳುವ ಹಾಗೇ ಇಲ್ಲ. ಅವುಗಳ ಸೈಲೆನ್ಸರುಗಳಿಗೆ ಅದೇನು ಗತಿ ಕಾಣಿಸರ್ತಾರೋ ಏನ್ಕತೆಯೋ… ಆ ಭಯಂಕರ ಸದ್ದನ್ನು ಕೇಳುವುದಕ್ಕೆ, ತಾಳುವುದಕ್ಕೆ ಸಾಧ್ಯವೇ ಇಲ್ಲ.
ಅದೊಂದು ದಿವಸ ಪಕ್ಕದ ಬೀದಿಯಲ್ಲಿರುವ ದೇವಸ್ಥಾನಕ್ಕೆ ಹೋಗಿ ಬರೋಣವೆಂದು ರೆಡಿಯಾಗಿ ಗೇಟಿನ ಬಳಿಗೆ ಬಂದಾಗ ಯದ್ವಾತದ್ವಾ ಶರೀರವನ್ನು ಬೆಳೆಸಿಕೊಂಡಿದ್ದ ವ್ಯಕ್ತಿಯೊಬ್ಬ ನಮ್ಮನೆ ಗೇಟಿಗೊರಗಿ ಚಾಟ್ಸ್ ಪ್ಲೇಟ್ ಖಾಲಿ ಮಾಡ್ತಾ ಇದ್ದ. ನಾನು “ಸ್ವಲ್ಪಜಾಗ ಬಿಡ್ತೀರಾ?” ಅಂದಾಗ ನನ್ನ ಕಡೆಗೆ ದೂರ್ವಾಸ ಮುನಿಯ ನೋಟ ಬೀರಿ ಪಕ್ಕಕ್ಕೆ ಸರಿದ. ನಾನು ‘ಕತ್ತೆ ಬಡವ…’ ಅಂತ ಮನಸ್ಸಿನಲ್ಲೇ ಬೈದುಕೊಂಡು ಗೇಟಿನ ಬೋಲ್ಟನ್ನು ಬಿಗಿಯಾಗಿ ಜಡಿದು ರಸ್ತೆಗಿಳಿದೆ.
‘ಅರೆ…! ಆ ಟೊಣಪ ಇವರ ಗೇಟಿನ ಮುಂದ್ಯಾಕೆ ಚಾಟ್ಸ್ ತಿಂತಾ ಇದ್ದ?’ ಅಂತ ನಿಮಗೆ ಆಶ್ಚರ್ಯವಾಯ್ತ? ಅದನ್ನೂ ಹೇಳಿ ಬಿಡ್ತೀನಿ ಬಿಡಿ. ನಮ್ಮನೆ ಮುಂದೆ ಸಾಕಷ್ಟು ಖಾಲಿ ಜಾಗವಿದೆ. ಆ ಜಾಗದಲ್ಲಿ ಪಾನಿಪೂರಿ, ಮಸಾಲಪೂರಿ, ಗೋಬಿಮಂಜೂರಿ, ಬಜ್ಜಿ, ಬೋಂಡ… ಇತ್ಯಾದಿ ಇತ್ಯಾದಿ ತಿಂಡಿಗಳನ್ನು ತಯಾರಿಸುವ ಗಾಡಿ ಬಂದು ನಿಲ್ಲುತ್ತವೆ. ಆದ್ರಿಂದ ಅಲ್ಲಿಯ ಪ್ಲೇಟುಗಳನ್ನು ಹಿಡಿದು ನಮ್ಮನೆ ಮುಂದೆ ತಿನ್ನುವ ಆಸೆ ಕೆಲವರಿಗೆ. ಮೊದ ಮೊದಲು ನಂಗೂ ಆ ತಿಂಡಿ ತಿನಿಸುಗಳ ಪರಿಮಳ ಖುಷಿ ಕೊಡ್ತಾ ಇತ್ತು. ಆದ್ರೆ ಈಗೀಗಂತೂ ಆ ವಾಸನೆಯಿಂದ ಹೊಟ್ಟೆ ತೊಳೆಸುವ ಹಾಗಾಗ್ತಾ ಇದೆ. ಜೊತೆಗೆ ಒಂಥರಾ ಭಯವೂ ಶುರುವಾಗಿದೆ. ಇತ್ತೀಚೆಗೆಯಾರೋ ಹೇಳಿದ ವಿಷಯವೇ ನನ್ನ ಭಯಕ್ಕೆ ಕಾರಣ. “ರೀ… ಸಿಗರೇಟು ಸೇದದೇ ಇದ್ರೂ ಆ ಹೊಗೆಯನ್ನು ಸೇವಿಸಿಬಿಟ್ರೆ ಲಂಗ್ಸ್ ಪ್ರಾಬ್ಲಂ ಗ್ಯಾರಂಟಿ ಅಂತೆ. ಹಾಗೇ ನೀವು ಆ ತಿಂಡಿಗಳನ್ನ ತಿನ್ನದೇ ಇದ್ರೂ ಆ ವಾಸನೆ ನಿಮ್ಮ ಹೊಟ್ಟೆಯೊಳಗೆ ನುಗ್ಗಿ ನಿಮ್ಮ ಇಂಟಸ್ಟೈನ್ ಗೆ ತೊಂದ್ರೆ ಮಾಡಬಹುದು. ಕೇರ್ಪುಲ್ ಆಗಿರಿ…” ಅಂತ ಅವರು ನಂಗೆ ಅಡ್ವೈಸ್ ಮಾಡಿ ಹೋದ್ಮೇಲೆ ಯಾಕೋ ಅರಿಯದ ಆತಂಕ ಶುರುವಾಗಿಬಿಟ್ಟಿದೆ.
ಮೇನ್ರೋಡಿನ ಪಕ್ಕದಲ್ಲಿ ಮನೆ ಮಾಡಿದಾಗ ಆಗುವ ತೊಂದರೆಗಳ ಬಗ್ಗೆಯೇ ಹೇಳ್ತಾ ಇದ್ದೀನಿ ಅಂತ ಬೇಸರಪಡಬೇಡಿ. ಅಲ್ಲೊಂದು…ಇಲ್ಲೊಂದು…ಅನುಕೂಲಗಳೂ ಇವೆ. “ನಿಮ್ಮನೆಗೆ ಬರ್ಬೇಕು ಅನ್ಕೊಂಡಿದ್ದೀನಿ, ವಿಳಾಸ ಹೇಳಿ” ಅಂತ ಯಾರಾದ್ರೂ ಕೇಳಿದರೆ “… ಇಂತ ಮೇನ್ ರೋಡು… ನಮ್ಮನೆ ಅಕ್ಕ-ಪಕ್ಕದಲ್ಲಿ ಜ್ಯೂಸ್ ಅಂಗಡಿ ಮತ್ತು ರುಚಿದರ್ಶಿನಿ ಇದೆ. ಮಧ್ಯದಲ್ಲಿರೋದೇ ನಮ್ಮನೆ” ಅಂತ ಹೇಳಿಬಿಟ್ರೆ ಸಾಕು. ಒಂದಿಷ್ಟೂ ಕಷ್ಟಪಡದೇ ನಮ್ಮನೆಗೆ ಬಂದು ಪಾನಕ ಅಥವಾ ಟೀ ಕುಡಿದು ಹರಟೆ ಹೊಡೆದು ಜಾಗ ಖಾಲಿ ಮಾಡ್ತಾರೆ.
ಅದೇನೇ ಇರಲಿ… ನಾನು ನನ್ನ ಅನುಭವ ಹಂಚಿಕೊಂಡಿದ್ದೀನಿ. ನಿಮಗೆ ಹೊಸ ಮನೆ ಕಟ್ಟಬೇಕು ಅನ್ನುವ ಆಲೋಚನೆ ಇದ್ದರೆ ಸೈಟು ಮೇನ್ ರೋಡಿನಲ್ಲಿರಬೇಕೋ… ಅಥವಾ ಸೈಡ್ ರೋಡಿನಲ್ಲಿರಬೇಕೋ…? ಅನ್ನೋದನ್ನ ನೀವೇ ಡಿಸೈಡ್ ಮಾಡಿಕೊಳ್ಳಿ.

ಸವಿತಾ ಪ್ರಭಾಕರ್ , ಮೈಸೂರು


ತುಂಬಾ ಚೆನ್ಮಾಗಿ ಬರೆದಿದ್ದೀರಿ. ಬೆಂಗಳೂರಿನಲ್ಲಿ ಙ್ನ ತಂ್ಇಯ ಮನೆಯೂ ಹೋಗೇ ಮೇನ್ ರೋಡ್ನಲ್ಲಿ.. ಅವರದೂ ಇದೇ ತರಹ ಸಮಸ್ಯೆಗಳು.
ಸುಜಾತಾ ರವೀಶ್
ಸೂಗಸಾದ ಲೇಖನ..ಇದನ್ನು ಈ ಮೊದಲೇ ಓದಿದ್ದರೂ.. ಮತ್ತೊಮ್ಮೆ ಓದಿದೆ.. ಚಂದದ ಅನುಭವದ.. ಕಥಾನಕ ಗೆಳತಿ
ಹೇಳಿ ಕೇಳಿ ಯೋಗ ಶಿಕ್ಷಕಿ ಬೆಂಗಳೂರಿನಲ್ಲಿ ನಮ್ಮದೇ ಅಂತ
ಒಂದು ಸೂರು ಇದ್ರೆ ಸಾಕು