ಹಸಿರನುಟ್ಟ ಚೆಲುವೆ ನಾನು
ನೀಲಿ ತೊಟ್ಟ ನಲ್ಲ ನೀನು
ದೂರ ದಾರಿ ಎಲ್ಲೆ ಮೀರಿ ಬೆಸೆದುಕೊಂಡ
ಜಗದ ಯುಗದ ಒಲವ ಜೋಡಿ
ಭೂಮಿ ಬಾನು ನಾನು ನೀನು
ತೀಸು ಗಾಳಿ ಬೀಸಿಕೊಂಡು
ನಿನ್ನ ಬಳಿಗೆ ಏರಿ ಬರುವೆ
ಮೇಘ ಮಾಲೆ ಸಾಲೆ ಆಗಿ
ನೀನು ಜೊತೆಗೆ ಸಾಗಿ ಬರುವೆ
ಹರುಷ ತುಂಬಿ ವರ್ಷವಾಗೆ
ಹರಿವೆ ನಾನು ಕಳೆದು ಬೇಗೆ
ಚೆಲುವ ಬಣ್ಣ ತುಂಬಿಕೊಂಡು
ಮಳೆಯಬಿಲ್ಲ ಹಿಡಿದು ನನ್ನ ಸೆಳೆವೆ
ಮುತ್ತ ಮಳೆಯ ಮೆತ್ತ ಹಿಡಿದು
ಮತ್ತೆ ಮತ್ತೆ ನಿನ್ನ ನೆನೆದು
ತುಂಬಿಕೊಳುವೆ
ನಿಶೆಯ ಗಳಿಗೆ ಶಶಿಯ ತಂದು
ಬೆಳದಿಂಗಳ ಮಳೆಯ
ನೀನು ಸುರಿಸಿ ಸೂರೆಗೊಳುವೆ
ಹೊನಲು ಬೆಳಕ ಅಪ್ಪಿಕೊಂಡು
ತರಂಗವಾಗಿ ತೇಲಾಡಿ
ಹಾಡಿ ನಾನು ಕುಣಿವೆ
ಮುಂಜಾವಿನ ಮುಸುಕಿನಲಿ
ಮಂಜಿನ ಹನಿಯಾಗಿ ಇರುವೆ
ಮೊಗ್ಗಾಗಿ ನಿನಗಾಗಿ ಕಾಯುವೆ
ಮೂಡಣದಿ ಮುಗಿಲಿಂದ ಹೊನ್ನ ತೇರಿನಲಿ ಚೆನ್ನಿಗನೆ ಬರುವೆ
ಉಷೆ ಚೆಲ್ಲಿ ಹೂ ಅರಳಿಸಿ ನಗಿಸಿ
ಕಾದಿಹ ಹನಿಯ ಕರಗಿಸಿ ಕರೆದೊಯ್ಯುವೆ
ಹೂಗಂಧ ಘಮಲ ಮಣ್ಣ ಕಣದ ಫಲವ ಮೆದ್ದ ನಲ್ಲೆ ನಾನು
ಬೆಳ್ಳಿಯ ಮೋಡಗಳ ಹೊದ್ದ ಬೆಳ್ಮುಗಿಲ ಚೆಲುವ ನೀನು
ದೂರ ದಾರಿ ಎಲ್ಲೆ ಮೀರಿ ಬೆಸೆದುಕೊಂಡ
ಜಗದ ಯುಗದ ಒಲವ ಜೋಡಿ
ಭೂಮಿ ಬಾನು ನಾನು ನೀನು

–ನಂದಿನಿ, ಮೈಸೂರು


ಅಂತರ, ವ್ಯತ್ಯಾಸಗಳ ಹೊರತಾಗಿಯೂ ಅವನ ಮೇಲಿನ ಆಕೆಯ ಒಲವಿನ ಸ್ವಯಂ ವರ್ಣನೆಯೇ ಸೊಗಸು,
ಅದ್ಭುತ ಸಾಲುಗಳು, Nandini K G
ಅದ್ಭುತವಾದ ಕಲ್ಪನೆ ಮತ್ತು ಸುಂದರವಾದ ಪದಜೋಡಣೆ! ನಿಮ್ಮ ಬರಹ ಸದಾ ಹೀಗೆ ಹೂವಾಗಿ ಅರಳುತ್ತಿರಲಿ
ವಿಶೇಷ ಕಲ್ಪನೆ.. ಅರ್ಥ ಪೂರ್ಣ ವಾದ.. ಪದಪುಂಜ.. ಸೊಗಸಾದ ಚೌಕಟ್ಟು.. ಚಂದದ ಕವಿತೆ.. ಅಭನಂದನೆಗಳು ಹುಡುಗಿ ನಂದಿನಿ ಶುಭವಾಗಲಿ..