ಸಮಕಾಲೀನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಾ ಒದುಗರನ್ನು ಚಿಂತನೆಗೆ ಹಚ್ಚುವಲ್ಲಿ ಸಫಲವಾಗುತ್ತಾ ಸಾಗುವ ಕಾದಂಬರಿಯೊಂದು ನುರಿತ ಲೇಖನಿಯಿಂದ ಹೊರಬಂದಾಗ ಓದುಗರ ಭಾವಲೋಕದ ಮೇಲೆ ಉಂಟಾಗುವ ಗಾಢ ಪರಿಣಾಮದ ಅನುಭವ. ಹತ್ತಿರ ಹತ್ತಿರ ಐವತ್ತು ಕೃತಿಗಳ ರಚನೆಯನ್ನು ಪೂರೈಸ ಹೊರಟಿರುವ ಹಿರಿಯ ಸೃಜನಶೀಲ ಲೇಖಕಿ ಶ್ರೀಮತಿ ಬಿ.ಆರ್.ನಾಗರತ್ನ ಅವರ ಮತ್ತೊಂದು ಕಾದಂಬರಿ “ಬದುಕು-ಭ್ರಮೆ” ಓದಿ ಮುಗಿಸಿದಾಗ ನನಗಾಯಿತು.
ಹೌದು, ಸಣ್ಣಕಥೆಗಳು, ವೈಚಾರಿಕ ಲೇಖನಗಳು, ಪುಸ್ತಕಾವಲೋಕನ, ಶರಣಸಾಹಿತ್ಯ, ಮಹಾಕಾವ್ಯಗಳ ಸಂಕ್ಷಿಪ್ತರೂಪ, ಮಕ್ಕಳಿಗಾಗಿ ಪೌರಾಣಿಕ ಕಥೆಗಳು, ಲಘು ಲೇಖನಗಳು, ಆತ್ಮಚರಿತ್ರೆಗಳ ಲಿಪಿಕಾರಳು, ಕಾದಂಬರಿಗಳು ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕೈಯಾಡಿಸಿರುವ ಲೇಖಕಿ ಶ್ರೀಮತಿ ಬಿ.ಆರ್.ನಾಗರತ್ನ ಅವರಿಂದ ರಚಿಸಲ್ಪಟ್ಟ ಮತ್ತೊಂದು ಕಾದಂಬರಿ “ಬದುಕು-ಭ್ರಮೆ” ಮುದ್ರಣಕ್ಕೆ ಹೋಗುವ ಮುನ್ನವೇ ನನಗೆ ಓದಲು ದೊರೆತದ್ದು ಒಂದು ಸದವಕಾಶವೆಂಬ ಭಾವನೆ ನನಗಾಯಿತು.
ವಿದ್ಯಾಭ್ಯಾಸ, ಉನ್ನತ ಶಿಕ್ಷಣದ ಕುರಿತಾಗಿ ಅಪಾರವಾದ ಶ್ರದ್ಧೆ ಮತ್ತು ಆಸಕ್ತಿಯನ್ನು ಹೊಂದಿದ್ದ ಸುಂದರ, ಸುಶಿಕ್ಷಿತ ಹೆಣ್ಣುಮಗಳು ಭಾರ್ಗವಿಯ ಭಾವನೆಗಳ ಸುತ್ತಲೇ ಸುತ್ತುವ ಕಾದಂಬರಿ ಇದಾದರೂ ಈ ಕಾದಂಬರಿಯ ಇನ್ನಿತರ ಪಾತ್ರಗಳೂ ಇಂದಿನ ಯುವಪೀಳಿಗೆ ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಕುರಿತಾಗಿ ವಿಶ್ಲೇಷಿಸುತ್ತಾ ಆಸಕ್ತಿಪೂರ್ಣವಾಗಿ ಸಾಗುತ್ತದೆ.
ತಾನು ಚಿಕ್ಕಂದಿನಿಂದ ಕಂಡು ಕೇಳಿದ, ನೊಡಿದ್ದ ಹುಡುಗ, ಮುಂದೆ ಓದಬೇಕೆಂಬ ತನ್ನ ಅಭಿಲಾಷೆಯನ್ನು ಪೂರೈಸಲು ಒಪ್ಪಿದ್ದಾನೆಂದು ಖುಷಿಯಾಗಿಯೇ ಕೊರಳನ್ನೊಡ್ಡುವ ಭಾರ್ಗವಿ, ಅದು ಕಚ್ಚುವ ವಿಷಸರ್ಪವೂ ಅಲ್ಲ, ಪ್ರಾಣ ತೆಗೆಯುವ ಉರುಳೂ ಅಲ್ಲ. ಆದರೆ ಪ್ರಾಣಹಿಂಡುವ, ಅರೆಉರುಳಿನಂತಾದ, ಸದಾ ಕಾಡುವ, ಕೆಣಕುವ, ಇರಿಸುಮುರಿಸನ್ನು ಉಂಟುಮಾಡುವ ಕೊರಳಿಗೆ ಸುತ್ತಿಕೊಂಡ ಬಳ್ಳಿಯಂತಾದುದು, ತನ್ನ ವಿದ್ಯಾಭ್ಯಾಸದ ಕುರಿತಾದ ಆಸಕ್ತಿ, ಆರ್ಥಿಕ ಸ್ವಾವಲಂಬನೆಯ ಗುರಿ, ತನ್ನಲ್ಲಿನ ಹುದುಗಿರುವ ಸ್ವಯಂಪ್ರತಿಭೆಯನ್ನು ಹೊರತಂದು ಸಮಾಜಕ್ಕೆ ಏನನ್ನಾದರೂ ಉಪಯುಕ್ತವಾದುದನ್ನು ನೀಡಬೇಕೆಂಬ ಮಹಾತ್ವಾಕಾಂಕ್ಷೆಯ ಬೆನ್ನೇರಿದವಳಿಗೆ ಮನವರಿಕೆಯಾಗುವಷ್ಟರಲ್ಲಿ ಸಂಸಾರ ಸಾಗರದಲ್ಲಿ ಧುಮುಕಿ, ಸಿಲುಕಿ ಎರಡು ಮಕ್ಕಳ ತಾಯಾಗಿ ಜವಾಬ್ದಾರಿಯ ಹೊರೆಯ ಭಾರ ತಾಳಲಾರದೆ ನಾಯಕಿ ಭಾರ್ಗವಿಯ ಮನೋವಿಪ್ಲವಗಳನ್ನು ಸಹಜವಾಗಿಯೆಂಬಂತೆ ಚಿತ್ರಿಸಿದ್ದಾರೆ.
ತಾನು ಹೆಚ್ಚು ಓದಿಲ್ಲದಿದ್ದರೂ ಹೆಂಡತಿಗೆ ಮುಂದೆ ಓದಲು ಅವಕಾಶ (ಅನುಮತಿ) ನೀಡಿದ್ದೇ ತಾನು ಮಾಡಿದ ಮಹದುಪಕಾರ ಎನ್ನುವಂತೆ ಸಮಾಜದಲ್ಲಿ ಬಿಂಬಿಸುತ್ತಾ ತನ್ನೊಳಗಿನ ಉಡಾಳತನಕ್ಕೆ, ಬೇಜವಾಬ್ದಾರಿತನಕ್ಕೆ ಮುಸುಕು ಹಾಕುತ್ತಾ ಅವಳನ್ನು ಬಳಸಿಕೊಳ್ಳುತ್ತಾನೆ ಸಿದ್ಧಾರ್ಥ. ತಾನು ಮೆಚ್ಚಿ ಕೈಹಿಡಿದ ಹೆಂಡತಿ ಭಾರ್ಗವಿಯನ್ನು ಸಮಾಜಕ್ಕಷ್ಟೇ ಏನು ಸ್ವತಃ ಭಾರ್ಗವಿಗೂ ಎಷ್ಟೋ ಕಾಲದ ತನಕ ಹಾಗೆಯೇ ಅನ್ನಿಸಿರುತ್ತದೆ. ಅವಳ ಎರಡು ಮಕ್ಕಳು ಮಾಲಿನಿ, ಮಾನಸಾ ಇಬ್ಬರೂ ಓದಿನಲ್ಲಿ ಚುರುಕಿದ್ದು ಉನ್ನತ ವಿದ್ಯಾಭ್ಯಾಸ ಪಡೆದು ದೇಶ ವಿದೇಶಗಳಲ್ಲಿ ತಮ್ಮ ನೆಲೆಗಳನ್ನು ಕಟ್ಟಿಕೊಳ್ಳುತ್ತಾರೆ. ಆದರೂ ತಂದೆ ಮತ್ತು ತಾಯಿಯ ಮಧ್ಯದ ಮುಸುಕಿನೊಳಗಿನ ಗುದ್ದಾಟದ ಅರಿವೇ ಇಲ್ಲದೆ ಬೆಳೆಯುತ್ತಾರೆ.
ಈ ಸಮಯದಲ್ಲಿ ಕಾದಂಬರಿ ತನ್ನ ಮನಸ್ಸನ್ನೂ ಚಿಂತನೆಗೆ ದೂಡಿ, ಮೂಡಿಬಂದ ಅಭಿಪ್ರಾಯವೊಂದನ್ನು ಹಂಚಿಕೊಳ್ಳಬೇಕೆನಿಸುತ್ತಿದೆ. ಕೆಲವೊಮ್ಮೆ ಹೇರಳವಾದ ಅವಕಾಶಗಳು ತಮ್ಮ ಮುಂದೆ ತೆರೆದುಕೊಂಡಾಗ ಯುವಜನಾಂಗ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲಗೊಂಡು ಎಡವಬಹುದಾದ ಸಾಧ್ಯತೆಗಳು ಬಹಳಷ್ಟಿರುತ್ತದೆ. ಕಣ್ಣು ಮತ್ತು ಗುರಿ ಆಕಾಶಕ್ಕೇ ನೆಟ್ಟಿರುವ ಭರದಲ್ಲಿ ಕುಟುಂಬ ಎಂಬ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ, ಹರಡಿಕೊಂಡು ಮಣ್ಣಿನ ಫಲವತ್ತತೆಯ ಸಾರವನ್ನು, ಶಕ್ರಿಯನ್ನು ಪಡೆಯುವಲ್ಲಿ ಹಿನ್ನಡೆಯಾಗಿಬಿಡುತ್ತದೇನೋ ಎನ್ನಿಸಿಬಿಡುತ್ತದೆ. ಒಬ್ಬ ಮಗಳು ಮದುವೆಯೇ ಬೇಡ ಎನ್ನುವುದೂ, ಒನ್ನೊಬ್ಬಳು ಕಾಲ, ವಯಸ್ಸು ಮೀರಿದರೂ ತನಗೊಪ್ಪುವ ಸಂಗಾತಿಗಾಗಿ ಕಾಯುವುದೂ ಮುಂತಾದ ಸಮಕಾಲೀನ ಸಮಸ್ಯೆಗಳ ಜಟಿಲತೆಗಳು ಕಾದಂಬರಿಯಲ್ಲಿ ಸಹಜವಾಗಿಯೆಂಬಂತೆ ಹಾಸುಹೊಕ್ಕಾಗಿ ಮೂಡಿ ಬಂದು ಓದುಗರನ್ನು ಯಾವುದು ಸರಿ, ಯಾವುದು ಸಮಂಜಸ ಎನ್ನುವ ಚಿಂತನೆಯಲ್ಲಿ ತೊಡಗುವಂತೆ ಮಾಡುವುದು ಕಾದಂಬರಿಯ ಗಟ್ಟಿತನವಾಗಿ ಗೋಚರವಾಗುತ್ತದೆ.
ಹಾಗೆಯೇ ಭಾರ್ಗವಿಯ ಗೆಳತಿ ಸುಮನಾಳ ಕುಟುಂಬದ ಕಥಾನಕವೂ ಜೊತೆ ಜೊತೆಯಲ್ಲಿಯೇ ಸಾಗುತ್ತಾ ಸಲ್ಲದ ವಿಚಾರಗಳ ಭ್ರಮೆಯನ್ನು ಚಿತ್ತದಲ್ಲಿ ತುಂಬಿಸಿಕೊಂಡ ತಾಯಿಯೊಬ್ಬಳು ಹೇಗೆ ತನ್ನ ಹೆಣ್ಣುಮಕ್ಕಳ ಬಾಳ ಬುಗುರಿಯ ಚಾಟಿಯನ್ನು ತಾನೇ ಬೀಸುತ್ತಾ ಅದರ ಪರಿಣಾಮ, ಅಡ್ಡ ಪರಿಣಾಮಗಳಿಗೆ ನಾಂದಿ ಹಾಕುತ್ತಾಳೆ ಮತ್ತು ತನ್ನ ಜೀವನದಲ್ಲಿ ಜರುಗಿದ ಒಂದು ಕಹಿ ಘಟನೆಗಂಜಿ ಸುಶಿಕ್ಷಿತರಾದ ತನ್ನ ಹೆಣ್ಣುಮಕ್ಕಳನ್ನು ಭಾವನಾತ್ಮಕವಾಗಿ ಶೋಷಣೆಗೊಳಪಡಿಸಿ ತನ್ನ ಸ್ವಾರ್ಥಕ್ಕೆ ಅಧಿಕವಾದ ಗಮನವೀಯುವ ತಾಯಿಯ ಪಾತ್ರವೂ ಓದುಗರನ್ನು ಚಿಂತನೆಗೆ ಹಚ್ಚುತ್ತದೆ. ಇದರ ಕುರಿತಾದ ವಿವರಗಳನ್ನೂ ಕುತೂಹಲವನ್ನೂ ಓದುಗರು ಕಾದಂಬರಿಯನ್ನು ಓದಿಯೇ ಅರ್ಥೈಸಿಕೊಳ್ಳುವುದು ಒಳ್ಳೆಯದೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ.
ಮೇಲ್ವರ್ಗದ ಸುಶಿಕ್ಷಿತ ಸಮಾಜದ ಮುಖಗಳು ಸಮಸ್ಯೆಗಳನ್ನು ಎದುರಿಸಲು ಕಷ್ಟಪಡುತ್ತಾ ಮುಂದೆ ಹರವಿಕೊಂಡಿರುವ ಅವಕಾಶಗಳನ್ನು ಬಿಟ್ಟಿರಲೂ ಆಗದೆ ತೊಳಲಾಡುತ್ತಾ ಮಾನಸಿಕ ಕ್ಷೋಭೆ ಅನುಭವಿಸುತ್ತಿದ್ದರೆ, ಅತ್ತ ಹೇಳದೇ ಕೇಳದೇ ಗಾಯಬ್ ಆದ ಮನೆಗೆಲಸದ ಗಿರಿಜೆ ಪರಿಸ್ಥಿತಿಗೆ ಹೊಂದಿಕೊಂಡು ಬಾಳನ್ನು ನೇರಗೊಳಿಸಿಕೊಂಡ ಪರಿ ಅಚ್ಚರಿ ಹುಟ್ಟಿಸುತ್ತದೆಯಾದರೂ ಆ ರೀತಿಯ ಹೊಂದಾಣಿಕೆ ಎಲ್ಲರಿಗೂ ಸಾಧ್ಯವೇ? ಎಂಬ ಚಿಂತನೆಗೆ ಮನಸ್ಸು ತೊಡಗುತ್ತದೆ.
ಹೀಗೆ ಎಲ್ಲ ಪಾತ್ರಗಳ ಪೋಷಣೆಯತ್ತಲೂ ಗಮನ ಹರಿಸುತ್ತಾ ಸಮಾಜದ ಸಮಕಾಲೀನ ಹೆಣ್ಣುಮಕ್ಕಳ ಸಮಸ್ಯೆಗಳ ಬಗ್ಗೆ ಎಚ್ಚರಿಸುತ್ತಾ ಮಾಗಿದ ಮನಸ್ಸುಗಳನ್ನು ಚಿಂತನೆಗೆ ಹಚ್ಚುವಲ್ಲಿ ಸಫಲವಾಗಿದೆ ಕಾದಂಬರಿ “ಬದುಕು-ಭ್ರಮೆ”. ಲೇಖಕಿ ಬಿ.ಆರ್.ನಾಗರತ್ನ ಅವರ ಅನುಭವದ ಮೂಸೆಯಿಂದ ಮತ್ತಷ್ಟು ಸಮಾಜಮುಖಿ, ಸೈಜನಶೀಲ ಕೃತಿಗಳು ಹೊರಬರಲಿ ಎಂದು ಶುಭ ಹಾರೈಸುವೆ.
–ಪದ್ಮಾ ಆನಂದ್, ಮೈಸೂರು.


ನನ್ನ ಕಾದಂಬರಿ ಬದುಕು ಭ್ರಮೆ ಯನ್ನು.. ಪ್ರಥಮ ಓದುಗರಾಗಿ..ಓದಿ ತಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ ಸಹೃದಯತೆಯಿಂದ.. ಹಾರೖಸಿದ ಆಪ್ತಗೆಳತಿ ಪದ್ಮಾ ಆನಂದ ಅವರಿಗೂ.. ಅವರು ಮಾಡಿದ ಪುಸ್ತಕ ದ ಅವಲೋಕನ ಲೇಖನವನ್ನು.. ಪ್ರಕಟಿಸಿದ.. ಸುರಹೊನ್ನೆ ಪತ್ರಿಕೆ ಯ ಸಂಪಾದಕರಾದ.. ಹೇಮಾಮಾಲಾ ಅವರಿಗೆ.. ಹೃತ್ಪೂರ್ವಕ ಧನ್ಯವಾದಗಳು..