ಕಾವ್ಯ ಭಾಗವತ

ಕಾವ್ಯ ಭಾಗವತ 123 : ಮಾರ್ಕಂಡೇಯ ಚರಿತೆ

Share Button

ಏಕಾದಶ ಸ್ಕಂದ – ಅಧ್ಯಾಯ – 3
ಮಾರ್ಕಂಡೇಯ ಚರಿತೆ

ಮೃಕಂಡು ಮಹರ್ಷಿ ಪುತ್ರ ಮಾರ್ಕಂಡೇಯ
ಜಾತಕಕರ್ಮ ನಾಮಕರಣಾದಿ ಸಂಸ್ಕಾರಗಳ ಪಡೆದು
ಜನ್ಮಾಷ್ಟಮದಲಿ ಉಪವೀತನಾಗಿ
ಬ್ರಹ್ಮಚರ್ಯಾಶ್ರಮ ಧರ್ಮಾಲನೆಯಲಿ ನಿಷ್ಠನಾಗಿ
ತ್ರಿಸಂಧ್ಯೆಗಳಲಿ ಸೂರ್ಯ ಗುರು ಬ್ರಾಹ್ಮಣರ
ಹೃದಯ ಸನ್ನಿಹಿತ ಹರಿಯ ಪೂಜಿಸುತ
ಹಗಲು ಮತ್ತು ಸಾಯಂಕಾಲದಲಿ
ಶ್ರೋತ್ರೀಯ ಗೃಹಗಳಲಿ ಬೇಡಿ ಭಿಕ್ಷಾನ್ನವ
ಮೊದಲು ಗುರುವಿಗರ್ಪಿಸಿ ನಂತರದಿ ತಾನು ಭುಂಜಿಸಿ
ನೈಷ್ಠಿಕ ಬ್ಯಹ್ಮಚರ್ಯ ವ್ರತನಿಷ್ಠನಾಗಿ
ತಪಸ್ಸು ಅಧ್ಯಯನ ವ್ರತನಿಷ್ಠೆಯಲಿ
ಲಕ್ಷೋಪಲಕ್ಷ ವರ್ಷಗಳ ಕಳೆದು ಚಿರಂಜೀವಿಯಾಗಿ
ಆರು ಮನ್ವಂತರ ಕಾಲ ಕಳೆದು ಏಳನೆಯ ವೈವಸ್ವತ
ಮನ್ವಂತರದಲ್ಲೂ ತಪವ ಮುಂದುವರೆಸೆ
ದೇವೇಂದ್ರನು ಭಯಭೀತನಾಗಿ
ಮಾರ್ಕಂಡೇಯ ಮಹರ್ಷಿ ವ್ರತ ನಿಷ್ಠಯಲಿ ಬೆಳೆದು
ತನ್ನ ಇಂದ್ರ ಪದವಿಯ ಕಸಿಯುವ ಸಂಚಿನ ಭಯದಿ
ಮುನಿಯ ತಪ ಭಂಗಕೆ ಮನ್ಮಥ ವಸಂತಾದಿಗಳನೂ
ಗಂಧರ್ವ ಅಪ್ಸರಾಂಗನೆಯರೂ ಗಾಯನ ನರ್ತನದಿ
ತಪಃ ತೇಜೋವಿಶಿಷ್ಟನಾಗಿ ಕಣ್ಣುಮುಚ್ಚಿ ಧ್ಯಾನಾಸಕ್ತನಾಗಿ
ಕುಳಿತ ಮಾರ್ಕಂಡೇಯನ ಧ್ಯಾನಕೆ ವಿಘ್ನಮಾಡಲೆತ್ನಿಸಿ
ದಿವ್ಯ ಮಂಜುಳ ವಾದ್ಯಗಳ ನುಡಿಸುತ್ತಿರೆ
ಶಬ್ಧಜಾಲಕೆ ಮಹರ್ಷಿ ಕಣ್ಣತೆರೆದು ನೋಡೆ
ದೇವವೇಶ್ಯೆಯು ತನ್ನ ಅರ್ಧನಗ್ನಾವಸ್ಥೆಯಲಿ ನರ್ತಿಸುತ್ತಿರೆ
ಅದೇ ವೇಳೆಗೆ ಸರಿಯಾಗಿ ಮನ್ಮಥನು ಪಂಚಪುಷ್ಪ ಬಾಣಗಳ
ಮಹರ್ಷಿಯ ಹೃದಯಕೆ ಪ್ರಯೋಗಿಸೆ
ಚಿತ್ತ ಚಂಚಲಗೊಳ್ಳದ ಮಹರ್ಷಿ
ಪುನಃ ಕಣ್ಣುಮುಚ್ಚಿ ಧ್ಯಾನಾಸಕ್ತನಾದನು

ಮನ್ಮಥನು ನಿರಾಶನಾಗಿ ಇಂದ್ರನ ಬಳಿಗೆ ನಡೆದು
ಅನ್ನಪಜಯವ ಒಪ್ಪಿ ಮಹರ್ಷಿಯ ಅದ್ಭುತ ಸಾಮರ್ಥ್ಯವ ಹೊಗಳೆ
ಇಂದ್ರನೂ ಪರಮಾಶ್ಚರ್ಯದಿ ಮುನಿಯನ್ನು
ʼಧನ್ಯ ಧನ್ಯʼ ಎಂದು ಹೊಗಳಿದನು

ಮಾರ್ಕಂಡೇಯ ಮುನಿಯ ತಪ ಮುಂದುವರಿಯೆ
ಆತನನುಗ್ರಹಿಸಲು ಸ್ವಾಮಿಯು
ನರನಾರಾಯಣ ರೂಪದಿ ಆಗಮಿಸೆ
ಅವರಿಗೆ ದಿವ್ಯಾಸನಗಳನಿತ್ತು ಆರಾಧಿಸಿ ಸ್ತುತಿಸುತ್ತ
ಜೇಡರಹುಳು ದೇಹದಿಂದಲೇ ನೂಲನು ಹೊರಡಿಸಿ
ಅದರಿಂ ಬಲೆಯ ನಿರ್ಮಿಸಿ ಅದರ ಮಧ್ಯದಲೇ ಕುಳಿತು
ಎಲ್ಲವ ತನ್ನಲಿ ಅಡಗಿಸಿಕೊಳ್ಳುವಂತೆ
ನೀನೂ ಈ ಜಗವ ಸೃಷ್ಠಿಸಿ ಅದರ ಸ್ಥಿತಿ
ಸಂಸಾರ ಕಾರ್ಯಗಳ ನಿರ್ವಹಿಸಿಪನಾಗಿ
ಬ್ರಹ್ಮ ರುದ್ರಾದಿಗಳನು ಪರಿಗ್ರಹಿಸೆ
ಭಕ್ತಾಬೀಷ್ಠಪ್ರದವಾದ ಸತ್ಯಮೂರ್ತಿ ನೀನೇ
ನಾರಾಯಣಾ, ಎಂದು ಪರಿಪರಿಯಾಗಿ ಸ್ತುತಿಸೆ
ನಾರಾಯಣ ಸಂತಸದಿಂ
ಇಷ್ಟಾರ್ಥ ವರಪ್ರದಾನ ಮಾಡಲಿಚ್ಚಿಸಲು
ಮಾರ್ಕಂಡೇಯ, ಭಗವಂತನ ಪಾದಾರವಿಂದದ
ದರ್ಶನಕಿಂತಲೂ ಬೇರೆ ವರ ಬೇಕೇ, ಎಂದರೂ
ಬ್ರಹ್ಮನಿಂದಾರಂಭಿಸಿ ಕೀಟಪರ್ಯಂತವಾಗಿ ಸಮಸ್ತಲೋಕವು
ಭಗವಂತನ ಮಾಯೆಗೆ ಮರುಳಾಗಿರ್ಪ ಆ ಮಾಯೆಯ
ನೋಡಬೇಕೆಂಬ ಬಯಕೆಯ ಪ್ರಕಟಿಸೆ
ಸುಪ್ರೀತ ನಾರಾಯಣ, ಹಾಗೇ ಆಗಲೆಂದು ನುಡಿದು ನಡೆದನು

ಭಗವನ್ಮಾಯೆಯು ವ್ಯಕ್ತವಾಗುವ ಘಳಿಗೆಯ ನಿರೀಕ್ಷೆಯಲಿ
ಮಾನಸೋಪಚಾರದಲಿ ಹರಿಯ ಪೂಜಿಸುತ
ಆಗಾಗ ಮೈಮರೆವೆಯುಂಟಾಗಿ ಆಶ್ರಮದಿ ಕುಳಿತಿರೆ
ಸಂಧ್ಯಾಸಮಯದಲಿ ಭಯಂಕರ ಬಿರುಗಾಳಿಯೆದ್ದು
ಗುಡುಗು ಸಿಡಿಲು ಮಿಂಚುಗಳೊಡನೆ ಆನೆಯ ಸೊಂಡಿಲ ಗಾತ್ರದ
ವರ್ಷಧಾರೆಯು ಸಮುದ್ರಗಳು ಉಕ್ಕೇರಿ ಬಂದಂತೆ ಸುರಿದು
ಗುಡ್ಡ ಪರ್ವತಗಳೆಲ್ಲ ಮುಳುಗಿ
ಸೂರ್ಯ ಚಂದ್ರ ನಕ್ಷತ್ರಾದಿಗಳೂ, ದಿಕ್ಕು ವಿದಿಕ್ಕುಗಳೂ ಮುಳುಗಿ
ಗಾಡಾಂಧಕಾರ ವ್ಯಾಪಿಸೆ
ಮಾರ್ಕಂಡೇಯ ಅಗಾಧ ಜಲಪ್ರವಾಹದಿ ತೇಲುತ
ಹಸಿವು ಬಾಯಾರಿಕೆಗಳು ಅಸಾಧ್ಯವಾಗಿ ಹೆಚ್ಚುತ
ಬಹುಕಾಲ ಕಳೆದನುಭವವಾಗಿ ಮಹಾಜಲರಾಶಿಯ ಮಧ್ಯದಿ
ಸಣ್ಣದೊಂದು ದ್ವೀಪ, ಅಲ್ಲೊಂದು ಆಲದ ಮರ
ಅದರ ಈಶಾನ್ಯ ದಿಕ್ಕಿಗಿದ್ದ ಕೊಂಬೆಯೊಂದರ
ಎಲೆಯ ಮೇಲೊಂದು ಸಣ್ಣ ಮಗು ಮಲಗಿ
ಗಾಡಾಂಧಕಾರವ ನೀಗುತ್ತ, ಪ್ರಕಾಶಿಸುತ್ತ
ಶ್ಯಾಮಲ ವರ್ಣ ಕಮಲದಂತಹ ಮುಖ
ಎಳಸಾದ ನಾಸಿಕ, ಮುಂಗೂದಲು
ಮೃದು ಉಸಿರಾಟದಿ ಉಬ್ಬಿತಗ್ಗುವ ಹೃದಯ
ಹವಳದಂತ ನಸುಗೆಂಪು ತುಟಿ
ಎರಡು ಬೆರಳುಗಳು ಬಾಯಲಿಟ್ಟು ಚೀಪುತ್ತಿರೆ
ಆ ನೋಟವನು ಕಂಡ ಮಾರ್ಕಂಡೇಯ ಮಹರ್ಷಿಗೆ
ಅಗಾಧ ಆನಂದ ಉಂಟಾಗಿ ಶ್ರಮವೆಲ್ಲಾ ಕ್ಷಣಾರ್ದದಲಿ
ಪರಿಹಾರವಾಗಿ ಮಹಾಪ್ರಳಯದಲಿ ಜೀವಲೇಶವೂ ಇಲ್ಲದೆ
ನಾಶವಾಗಿರೆ, ಸಣ್ಣ ಮಗು ನಲಿದಾಡುತಿರೆ
ಮಗುವಿನ ಉಸಿರಿನ ಗಾಳಿಯಲಿ ಅದರುದರವ ಪ್ರವೇಶಿಸಿದ
ಮಾರ್ಕಂಡೇಯ, ಶಿಶುವಿನ ಗರ್ಭದಲಿ ಮತ್ತೊಂದು ಶಿಶು
ಅದರ ದೇಹದಲಿ ಭೂಮ್ಯಾಕಾಶ ಅಂತರಿಕ್ಷ
ನಕ್ಷತ್ರ ಸೂರ್ಯ ಚಂದ್ರ ಪರ್ವತ
ಮಾರ್ಕಂಡೇಯ ಮಹರ್ಷಿಗಳ ಮೊದಲ ವಾಸಸ್ಥಳ ಹಿಮಾಲಯವ ಕಂಡು
ಚಕಿತನಾಗಿ ಪರಮಾಶ್ಚರ್ಯ ಪಡುತಲಿರೆ
ಮಗುವಿನ ನಿಶ್ವಾಸದಲಿ ಶಿಶು ಶರೀರದಿಂ ಹೊರಬೀಳೆ
ಮತ್ತೆ ಜಲರಾಶಿ! ಆಲದೆಲೆಯ ಮೇಲೆ ಮೋಹಕ ಮಗು!
ಪ್ರಸನ್ನ ದೃಷ್ಠಿಯ ಮಗುವ ಬಾಚಿ ತಬ್ಬಲು ನೋಡೆ
ಭಗನ್ಮಾನೆಯ ಮಗು ಕಣ್ಮರೆ
ಪ್ರಳಯ ಜಲರಾಶಿ ಅದೃಶ್ಯ!

ಮಾರ್ಕಂಡೇಯ ತನ್ನಾಶ್ರಮದಿ ಸಮಾಧಿ ಸ್ಥಿತಿಯಲಿ
ದೇವನ ಮಾಯೆಯ ಸ್ವರೂಪವ ನೋಡಿ
ಧನ್ಯತೆಯ ಭಾವದಲಿ
ಹರಿಗೆ ವಂದಿಸಿ ಸ್ತುತಿಸಿದ

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :
https://surahonne.com/?p=46163

-ಎಂ. ಆರ್.‌ ಆನಂದ, ಮೈಸೂರು

One comment on “ಕಾವ್ಯ ಭಾಗವತ 123 : ಮಾರ್ಕಂಡೇಯ ಚರಿತೆ”

  1. ಕಾವ್ಯ ಭಾಗವತದಲ್ಲಿ ಮಾರ್ಕಂಡಯನ್ನ ಪುರಾಣ ದ ಅನಾವರಣ ಚನ್ನಾಗಿ ಅನಾವರಣ ವಾಗಿದೆ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *