ಪ್ರತಿಯೊಂದು ಶಾಲೆಯಲ್ಲೂ ಕಾಲ ಕಾಲಕ್ಕೆ, ಶಾಲಾ ಮಟ್ಟದಲ್ಲಿ ನಿಯತಕಾಲಿಕ ಪರೀಕ್ಷೆಗಳನ್ನೂ (periodic tests), ಅರ್ಧ ವಾರ್ಷಿಕ (mid-term) ಹಾಗು ವಾರ್ಷಿಕ ಪರೀಕ್ಷೆಗಳನ್ನು (final exam) ನಡೆಸಲಾಗುತ್ತವೆ. ಇವು ಆಯಾ ವರ್ಷದ, ಆಯಾ ತರಗತಿಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಪ್ರಗತಿಯ ಕುರಿತು ಬೆಳಕು ಚೆಲ್ಲುತ್ತವೆ.
ಈ ಪರೀಕ್ಷೆಗಳನ್ನು ನಡೆಸುವುದಕ್ಕೆ ಮುಂಚೆ ಪ್ರತಿಯೊಂದು ವಿಷಯದ (subjects) ಕುರಿತು, ಕಲಿಸಿದ ಪಾಠಗಳನ್ನೊಮ್ಮೆ ಮನನ ಮಾಡಿಸುವ ಅಭ್ಯಾಸ ನಡೆಯುತ್ತದೆ. ವಿದ್ಯಾರ್ಥಿಗಳು ತಮಗೆ ಅರ್ಥವಾಗಿಲ್ಲದ ವಿಷಯಗಳನ್ನು ಶಿಕ್ಷಕರಲ್ಲಿ ಕೇಳಿ ತಿಳಿದುಕೊಳ್ಳುತ್ತಾರೆ. ಇಂತಹ ವಿಶೇಷ ತರಗತಿಗಳನ್ನು ಪುನರಾವರ್ತನೆಯ ತರಗತಿಗಳೆಂದು ಕರೆಯಲಾಗುತ್ತದೆ.
ಕೆಲವು ವಿದ್ಯಾರ್ಥಿಗಳು, ವಿದ್ಯಾಭ್ಯಾಸದಲ್ಲಿ ಹಿಂದುಳಿದರೆ, ಅಂತಹವರ ಬಗ್ಗೆ ಸಾಮಾನ್ಯವಾಗಿ ಶಿಕ್ಷಕರು, ಪೋಷಕರು ಹಾಗು ಶಾಲಾ ಆಡಳಿತ ಮಂಡಳಿ ಒಟ್ಟಿಗೆ ಕುಳಿತು ಯೋಚಿಸಿ, ಅವರಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರುತ್ತಾರೆ. ಇದು ಅನೇಕ ವರ್ಷಗಳಿಂದ ರೂಢಿಸಿಕೊಂಡು ಬಂದ ಪದ್ಧತಿಯಾಗಿದೆ.
ಇಂದಿನ ಬಹಳಷ್ಟು ಶಾಲೆಗಳು ಪುನರಾವರ್ತನೆಯ ಹೆಸರಿನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಆಟವಾಡುತ್ತಿವೆ. ಪಾಠಗಳು ಮುಗಿದ ನಂತರ, ಪರೀಕ್ಷೆಗಳು ಸನಿಹಿತವಾಗುತ್ತಿದ್ದಂತೆ, ಪುನರಾವರ್ತನೆಯ ಹೆಸರಿನಲ್ಲಿ ಶಿಕ್ಷಕರು ತಾವು ತಯಾರಿಸಿದ ಪ್ರಶ್ನೆ ಪತ್ರಿಕೆಗಳಿಂದ ಪ್ರಶ್ನೆಗಳನ್ನು ಹೆಕ್ಕಿ, ಅವುಗಳ ಜೊತೆಗೆ ಮತ್ತೊಂದಷ್ಟು ಪ್ರಶ್ನೆಗಳನ್ನು ಸೇರಿಸಿ ಪುಸ್ತಕದಲ್ಲಿ ಬರೆಸುತ್ತಾರೆ. ಎಷ್ಟೋ ಬಾರಿ, ಶಿಕ್ಷಕರು, ಪುನರಾವರ್ತನೆಯಲ್ಲಿ ಕೊಟ್ಟಿರುವ ಪ್ರಶ್ನೆಗಳೇ ಪರೀಕ್ಷೆಯಲ್ಲಿ ಬರುವುದೆಂದೂ, ಅವಿಷ್ಟನ್ನು ಓದಿಕೊಂಡರೆ ಸಾಕೆಂದೂ ಮುಕ್ತವಾಗಿ ತರಗತಿಯಲ್ಲೇ ಹೇಳಿ ಬಿಡುತ್ತಾರೆ!
ಪ್ರತಿ ಪರೀಕ್ಷೆಗೂ ಮುನ್ನ, ಮಕ್ಕಳು ಪಠ್ಯ ಪುಸ್ತಕಗಳನ್ನೂ, ಶಿಕ್ಷಕರು ಬರೆಸಿದ ಟಿಪ್ಪಣಿಗಳನ್ನೂ ಸಂಪೂರ್ಣವಾಗಿ ಓದದೇ, ಪುನರಾವರ್ತನೆಯ ಹೆಸರಲ್ಲಿ ಕೊಡುವ ಪ್ರಶ್ನೆಗಳಿಗೋಸ್ಕರವೇ ಕಾದಿರುತ್ತಾರೆ.
ಬಹಳಷ್ಟು ಶಿಕ್ಷಕರು ಒತ್ತಡದ ನಡುವೆ ಸರಿಯಾಗಿ ಪಾಠ ಮಾಡದಿದ್ದರೂ, ಪುನರಾವರ್ತನೆಯ ಹೆಸರಲ್ಲಿ ಕೊಡುವ ಪ್ರಶ್ನೆಗಳನ್ನೇ ತರಗತಿಯಲ್ಲಿ ಮಕ್ಕಳಿಂದ ಮೆಲುಕು ಹಾಕಿಸಿ, ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತಾರೆ. ಹೀಗಾದಲ್ಲಿ ಸಂಪೂರ್ಣ ಕಲಿಕೆ ಸಾಧ್ಯವಾಗುವುದಿಲ್ಲ. ಶಾಲೆಗಳು ಮಕ್ಕಳ ಜ್ಞಾನಾರ್ಜನೆಯ ಹಾಗು ವ್ಯಕ್ತಿತ್ವ ವಿಕಸನದ ಮೂಲ ಕೇಂದ್ರ. ಕೇವಲ ಆಯ್ದ ಪ್ರಶ್ನೆಗಳಿಗೆ ಉತ್ತರ ಬರೆದು ಹೆಚ್ಚಿನ ಅಂಕಗಳನ್ನು ಗಳಿಸಿ, ಆ ಮೂಲಕ ಜ್ಞಾನಿಯ ಮುಖ ಕವಚ ಧರಿಸಿ, ಶಾಲೆಯಿಂದ ಹೊರ ಹೋಗುವ ಮಕ್ಕಳು, ಸ್ಪರ್ಧಾತ್ಮಕ ಜಗತ್ತನ್ನು ಗೆಲ್ಲಲು ಸಾಧ್ಯವೇ?
ಶಾಲೆಗಳ ಇಂತಹ ನಡೆಯಿಂದ ಮಕ್ಕಳ ವ್ಯಕ್ತಿತ್ವ ವಿಕಸನವಾಗದೇ ವಿಕಾರಗೊಳ್ಳುವ ಸಾಧ್ಯತೆಯೇ ಹೆಚ್ಚು. ಅಡ್ಡದಾರಿಯಲ್ಲಿ ಸುಲಭವಾಗಿ ದೊರಕುವ ಫಲಕ್ಕೆ ಆಸೆ ಪಟ್ಟು, ವಿದ್ಯಾರ್ಥಿಗಳು ಸತ್ಯ ಮತ್ತು ಪ್ರಾಮಾಣಿಕತೆಯ ಹಾದಿಯನ್ನೇ ಮರೆತು ಬಿಡುತ್ತಾರೆ. ಇಂತಹ ಶಾಲೆಗಳು ಅಜ್ಞಾನಿಗಳನ್ನೂ, ಅಪ್ರಾಮಾಣಿಕರನ್ನೂ, ಆಸೆಬುರುಕರನ್ನೂ, ನೀತಿಗೆಟ್ಟ ಅಪ್ರಯೋಜಕರನ್ನೂ ಹುಟ್ಟು ಹಾಕಿ ಸಾಮಾಜಿಕ ಪಿಡುಗೊಂದಕ್ಕೆ ನಾಂದಿ ಹಾಡುತ್ತವೆ.
ವಿದ್ಯಾರ್ಥಿಗಳ ಹೆತ್ತವರಿಗೆ ಈ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಮಕ್ಕಳು ವರ್ಷದಿಂದ ವರ್ಷಕ್ಕೆ ಮುಂದಿನ ತರಗತಿಗಳಿಗೆ ಭರ್ತಿ ಹೊಂದಿ, ಇದೇ ರೀತಿಯ ವಿದ್ಯಾಭ್ಯಾಸ ಮುಂದುವರೆದಿರುತ್ತದೆ. ತಮ್ಮ ಮಕ್ಕಳ ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯ ಕಳಪೆ ಪ್ರದರ್ಶನವನ್ನು ಕಂಡಾಗಲೇ ಶಾಲೆಯ ಬಂಡವಾಳ ಹೆತ್ತವರಿಗೆ ತಿಳಿಯುತ್ತದೆ. ಅಷ್ಟೊತ್ತಿಗಾಗಲೇ ಎಲ್ಲವೂ ಕೈ ಮೀರಿ ಹೋಗಿರುತ್ತದೆ. ಶಾಲೆಗಳು ಜ್ಞಾನ ಕೊಡುವ ದೇವಾಲಯಗಳಾಗಬೇಕೇ ಹೊರತು ಅಂಕ ಟಂಕಿಸುವ ಟಂಕ ಶಾಲೆಯಾಗಬಾರದು. ಹತ್ತನೇ ತರಗತಿಯಷ್ಟೇ ಅಲ್ಲ, ಮುಂಬರುವ ಉನ್ನತ ಶಿಕ್ಷಣಕ್ಕೂ ಸಹ ಇವು ಮಾರಕವಾಗಬಹುದು.
ಎಷ್ಟೋ ಶಾಲೆಗಳಲ್ಲಿ ಆಡಳಿತ ಮಂಡಳಿಗೆ ಈ ಅನೈತಿಕ ವಿಧಾನದ ಬಗ್ಗೆ ತಿಳಿದಿದ್ದರೂ ಸಹ ಮೌನ ವಹಿಸಿರುತ್ತದೆ. ಏಕೆಂದರೆ, ತಮ್ಮ ಮಕ್ಕಳು ಗಳಿಸಿದ ಹೆಚ್ಚಿನ ಅಂಕಗಳಿಂದ ಪೋಷಕರಿಗೆ ಸಂತೋಷವಾಗುತ್ತದೆ. ಇದರಿಂದ ಅವರು ತಮ್ಮ ಮಕ್ಕಳ ಶಾಲೆಯನ್ನು ಬದಲಾಯಿಸುವ ಯೋಚನೆಯನ್ನು ಮಾಡುವುದಿಲ್ಲ. ಇಂತಹ ಪೋಷಕರು ನಾಲ್ಕಾರು ಜನರಿಗೆ ಶಾಲೆಯ ಬಗ್ಗೆ ಒಳ್ಳೆಯ ವಿಮರ್ಶೆಯನ್ನು ಕೊಟ್ಟು ಶಿಫಾರಸ್ಸನ್ನೂ ಸಹ ಮಾಡಿಬಿಡುತ್ತಾರೆ. ಇದರಿಂದ ಹೊಸ ವಿದ್ಯಾರ್ಥಿಗಳ ದಾಖಲಾತಿಗೂ ಸಹ ಕಾರಣಕರ್ತರಾಗುತ್ತಾರೆ. ಇಂತಹ ಸನ್ನಿವೇಶದಲ್ಲಿ ನಿಷ್ಠೆಯುಳ್ಳ ಶಿಕ್ಷಕರ ಮೇಲೆ ಪ್ರಭಾವ ಬೀರಿ, ಅವರನ್ನು ಒತ್ತಡಕ್ಕೆ ಸಿಲುಕಿಸಿ, ಶಾಲೆಯ ಆಡಳಿತ ಮಂಡಳಿ ತನ್ನ ಉದ್ದೇಶವನ್ನು ನೆರವೇರಿಸಿಕೊಳ್ಳುತ್ತದೆ.
ಹೀಗಾಗಿ, ತಮ್ಮ ಉದ್ಯೋಗವನ್ನು ಉಳಿಸಿಕೊಳ್ಳಲು ಶಿಕ್ಷಕರು ಮತ್ತು ತಮ್ಮ ಶಾಲೆಯ ಹೆಸರನ್ನು ಬೆಳೆಸಿಕೊಳ್ಳಲು ಆಡಳಿತ ಮಂಡಳಿಗಳು ಈ ತರಹದ ಅನೈತಿಕ ಮಾರ್ಗವನ್ನು ಅನುಸರಿಸುತ್ತಾರೆ. ಇಲ್ಲಿ ಯಾರಿಗೂ ವಿದ್ಯಾರ್ಥಿಗಳು ಪರಿಶ್ರಮದಿಂದ ಅಭ್ಯಾಸ ಮಾಡುವುದೂ, ಜ್ಞಾನಾರ್ಜನೆಯಿಂದ ಉನ್ನತ ಶಿಕ್ಷಣವನ್ನು ಪಡೆದು ದೇಶದ ಆಸ್ತಿಯಾಗುವುದು ಬೇಡ. ತಮ್ಮ ಹೆಸರು ಉಳಿಸಿಕೊಳ್ಳಲು ಮಕ್ಕಳ ಅಮೂಲ್ಯ ವಿದ್ಯಾರ್ಥಿ ಜೀವನವನ್ನು ಬಲಿ ಕೊಡಲೂ ಹೇಸುವುದಿಲ್ಲ.
ಹಾಗಿದ್ದರೆ ಎಲ್ಲಾ ಶಾಲೆಗಳೂ ಈ ರೀತಿಯ ಶಿಕ್ಷಣವನ್ನು ಕೊಡುತ್ತಿದೆಯೇ? ಇಲ್ಲ, ನೈತಿಕತೆಯುಳ್ಳ, ವಿದ್ಯಾದಾನದ ಮಹತ್ವ ಅರಿತ, ಸಮಾಜದ ಸುಧಾರಣೆಗಾಗಿ ಮುಂದಿನ ಪೀಳಿಗೆಯನ್ನು ತಯಾರು ಮಾಡುವ ಸದುದ್ದೇಶದಿಂದ ಉತ್ಸಾಹಿ ಜನರಿಂದ ತೆರೆಯಲ್ಪಟ್ಟ ಶಾಲೆಗಳು ಪರೀಕ್ಷೆಗಳಿಗಾಗಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸುವಲ್ಲಿ ಕೇಂದ್ರೀಕೃತ ವ್ಯವಸ್ಥೆಯನ್ನು (centralised system) ಹೊಂದಿರುತ್ತವೆ. ಅದೇನೆಂದರೆ, ಶಿಕ್ಷಕರು ಪಾಠಗಳನ್ನು ಕಲಿಸಿ, ಟಿಪ್ಪಣಿಗಳನ್ನು (notes) ಬರೆಸುತ್ತಾರೆ. ಪ್ರಶ್ನೆ ಪತ್ರಿಕೆಗಳನ್ನು ಮಾತ್ರ ಆಯಾ ವಿಷಯದ ಮುಖ್ಯ ಶಿಕ್ಷಕರು (HOD) ತಯಾರಿಸುತ್ತಾರೆ. ಪ್ರತಿದಿನ ಪಾಠ ಮಾಡುವ ಶಿಕ್ಷಕರಿಗೆ ಪ್ರಶ್ನೆ ಪತ್ರಿಕೆಗಳಲ್ಲಿ ಯಾವ ಪ್ರಶ್ನೆಗಳು ಬರುತ್ತವೆ ಎಂಬುದು ತಿಳಿದಿರುವುದಿಲ್ಲ. ಅವರು ಕೇವಲ ಪಾಠ ಮಾಡಿದ ಪಠ್ಯಗಳ ಪಟ್ಟಿಯನ್ನು ಕೊಡಬೇಕಷ್ಟೇ.
ಇಂತಹ ಮತ್ತಷ್ಟು ಶಾಲೆಗಳಲ್ಲಿ, ಶಿಕ್ಷಕರಿಗೆ ತಾವು ಕಲಿಸುವ ವಿಷಯದ (subject) ಬಗ್ಗೆ ಎರಡು-ಮೂರು ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಲು ಹೇಳುತ್ತಾರೆ. ನಂತರ ಶಾಲಾ ಮಂಡಳಿ ಅಥವಾ ಪ್ರಾಂಶುಪಾಲರು ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿ ಪರೀಕ್ಷೆ ನಡೆಸುತ್ತಾರೆ. ಇದರಿಂದ ಪರೀಕ್ಷೆಗಳು ನಿಜವಾದ ಅರ್ಥವನ್ನು ಪಡೆಯುವಂತಾಗುತ್ತವೆ.
ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿದ ತಕ್ಷಣ ಪೋಷಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ವಾಸ್ತವವಾಗಿ ಅಲ್ಲಿಂದ ಹೆತ್ತವರ ಜವಾಬ್ದಾರಿ ಪ್ರಾರಂಭವಾಗುತ್ತದೆ. ಹೀಗಾಗಿ ಹೆತ್ತವರು ತಮ್ಮ ಮಕ್ಕಳ ಶಾಲಾ ಜೀವನದ ಬಗ್ಗೆ, ವಿದ್ಯಾಭ್ಯಾಸದ ಕಡೆಗೆ ಸೂಕ್ಷ್ಮವಾಗಿ ಗಮನಿಸುತ್ತಿರಬೇಕು.
ಶಿಕ್ಷಕರೂ ಸಹ ತಾವು ಮಾಡುವ ವೃತ್ತಿಗೆ ಮೋಸ ಮಾಡದೇ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನೈತಿಕತೆಯನ್ನು ಎತ್ತಿ ಹಿಡಿದು, ತಮ್ಮ ಉದಾತ್ತ ವೃತ್ತಿ ,(noble profession )ಯನ್ನು ಪ್ರೀತಿಸಿ ಗೌರವಿಸಬೇಕು. ಹೀಗಾದಲ್ಲಿ ಮಾತ್ರ ನಮ್ಮ ದೇಶ ಜ್ಞಾನಿಗಳ ಬೀಡಾಗಿ, ಸಾಧಕರ ನಾಡಾಗಿ ಪ್ರಕಾಶಿಸುತ್ತದೆ.
ಸರ್ಕಾರ ಶೇಕಡವಾರು ಎಷ್ಟು ಮಕ್ಕಳು ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೆಂದು ಲೆಕ್ಕ ಇಡುವುದರ ಜೊತೆಗೆ, ಜ್ಞಾನವಂತ ಮಕ್ಕಳು ಎಷ್ಟು ಸಂಖ್ಯೆಗಳಲ್ಲಿ ಶಾಲೆಯಿಂದ ಹೊರಗೆ ಬರುತ್ತಿದ್ದಾರೆಂದು ತಿಳಿದುಕೊಳ್ಳಬೇಕು.
ವಿದ್ಯಾರ್ಥಿಗಳು ಅಡ್ಡ ಮಾರ್ಗದಲ್ಲಿ ವಿದ್ಯಾಭ್ಯಾಸ ಮಾಡಲು ಉತ್ತೇಜಿಸುವ ವಿದ್ಯಾಸಂಸ್ಥೆಗಳನ್ನು ಮುಟ್ಟುಗೋಲು ಹಾಕಿ, ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ ಬರುವ ‘ಸೇವೆಯಲ್ಲಿನ ನ್ಯೂನ್ಯತೆ’ಗೆ ಹೊಣೆಗಾರರನ್ನಾಗಿ ಮಾಡಬೇಕು.
ಕರ್ನಾಟಕ ಶಿಕ್ಷಣ ಕಾಯ್ದೆ 1983 (ರಾಜ್ಯ ನಿಯಂತ್ರಣ ಕಾನೂನು) ಅಡಿಯಲ್ಲಿ ನಿಗದಿತ ಶೈಕ್ಷಣಿಕ ಗುಣಮಟ್ಟ, ಅಥವಾ ಸರಿಯಾದ ಬೋಧನೆಯನ್ನು ನಿರ್ವಹಿಸಲು ವಿಫಲವಾದ ಇಂತಹ ಶಾಲೆಗಳಿಗೆ ದಂಡ
ವಿಧಿಸಬೇಕು ಅಥವಾ ಶಾಲೆಯ ಮಾನ್ಯತೆಯನ್ನು ಹಿಂಪಡೆಯ ಬೇಕು.
ಸರ್ಕಾರ ಶಾಲೆಯ ಆಡಳಿತ ಮಂಡಳಿಯ ಜೊತೆಗೆ ನಿಕಟ ಸಂಪರ್ಕವನ್ನು ಸಾಧಿಸುತ್ತಾ, ಶಾಲಾ ಮಕ್ಕಳ ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು. ಮಾನವ ಸಂಪನ್ಮೂಲದ ಮೇಲೆ ಹೂಡಿಕೆ ಮಾಡಿದರಷ್ಟೇ ಸಾಲದು. ತಮ್ಮ ಹೂಡಿಕೆ ಫಲಪ್ರದವಾಗಿದೆಯೇ ಎಂದು ಸರ್ಕಾರ ಒಮ್ಮೆ ಗಮನಿಸಬೇಕು.
ಸಮರ್ಥವಾದ ಸರ್ಕಾರ, ಸಮಾಜಮುಖಿ ಶಾಲಾ ಆಡಳಿತ ಮಂಡಳಿ, ಪ್ರಾಮಾಣಿಕ ಶಿಕ್ಷಕರು, ಜವಾಬ್ದಾರಿಯುತ ಪೋಷಕರು ಮತ್ತು ಆಸಕ್ತ ಉತ್ಸಾಹಿ ವಿದ್ಯಾರ್ಥಿಗಳಿಂದ ಮಾತ್ರ ಬಲಿಷ್ಠ ಭಾರತ
ಕಟ್ಟಲು ಸಾಧ್ಯ.

-ಮಾಲಿನಿ ವಾದಿರಾಜ್


ವಾಸ್ತವಿಕ ಶಿಕ್ಷಣ ದ.. ಒಂದು ಮಾಹಿತಿ ಯುಳ್ಳ ಲೇಖನ.. ಓ. ಕೆ…