ಚಿಚಂ ತೂಗು ಸೇತುವೆ….
ಧಂಕರ್ ಗೊಂಪಾದಿಂದ ಮುಂದುವರಿದು ಮಧ್ಯಾಹ್ನ ಊಟದ ಸಮಯಕ್ಕೆ ‘ಕಾಜಾ’ ತಲಪಿದೆವು. ಅಲ್ಲಿ ಎಂದಿನಂತೆ ರೋಟಿ, ದಾಲ್, ಅನ್ನ , ಪಲ್ಯ, ಸಲಾಡ್ ಇದ್ದುವು, ನಮಗೆ ಕೆಲವರಿಗೆ ‘ತುಕ್ಪಾ’ ಎಂಬ ಸ್ಥಳೀಯ ಆಹಾರದ ರುಚಿ ನೋಡೋಣ ಅನಿಸಿತು. ನೂಡಲ್ಸ್, ತರಕಾರಿ, ಸ್ವಲ್ಪ ಉಪ್ಪು, ಮಸಾಲೆ ಸೇರಿಸಿ, ನೀರು ಹಾಕಿ ಕುದಿಸಿದ ‘ತುಕ್ಪಾ’ ದಲ್ಲಿ ಸೂಪ್ ನಂತೆ ಕುಡಿಯಲೂ, ನೂಡಲ್ಸ್ /ತರಕಾರಿ ತಿನ್ನಲೂ ಸಿಗುತ್ತದೆ. ಕಡಿಮೆ ಮಸಾಲೆಯುಳ್ಳ ಸರಳ ಆಹಾರ, ತಂಪು ಹವೆಗೆ ಬಿಸಿಯಾಗಿ ಸೇವಿಸಲು ರುಚಿಯಾಗಿತ್ತು.
ಅನಂತರ ಇನ್ನೂ ಸ್ವಲ್ಪ ಮುಂದುವರೆದು, ‘ಚಿಚಂ ತೂಗುಸೇತುವೆಯನ್ನು ತಲಪಿದೆವು. ಇದು ಏಶ್ಯಾದಲ್ಲಿ ಅತಿ ಎತ್ತರದಲ್ಲಿ ನಿರ್ಮಿಸಲಾದ ತೂಗುಸೇತುವೆಯಾಗಿದ್ದು ಸಮುದ್ರಮಟ್ಟದಿಂದ 13586 ಅಡಿ ಎತ್ತರದಲ್ಲಿದೆ. ಸುಮಾರು 375 ಅಡಿ ಉದ್ದದ ಈ ಸೇತುವೆಯ ಕೆಳಗಡೆ ಹರಿಯುತ್ತಿರುವ ಸ್ಪಿತಿ 1000 ಅಡಿ ಆಳದ ಪ್ರಪಾತದಲ್ಲಿದೆ. ಬಾರ್ಡರ್ ರೋಡ್ ಆರ್ಗನೈಸೇಶನ್ ನವರು ನಿರ್ಮಿಸಿದ ಈ ಸೇತುವೆಯನ್ನು 2017 ರಲ್ಲಿ ಪೂರ್ಣಗೊಳಿಸಲಾಯಿತು. ಇದರಿಂದಾಗಿ ಚಿಚಂ ಮತ್ತಿ ಕಿಬ್ಬರ್ ಗ್ರಾಮಗಳ ಮಧ್ಯೆ ಸಂಪರ್ಕ ಸುಲಭವಾಯಿತು. ಅಲ್ಲಿ ಅಸ್ಸಾಂ ಮತ್ತು ನೇಪಾಳದಿಂದ ಬೈಕ್ ಸವಾರಿ ಮಾಡಿಕೊಂಡು ಬಂದಿದ್ದ ಎಬ್ಬರು ಎಳೆ ಯುವತಿಯರಿದ್ದರು. ಬೆಂಗಳೂರಿನಿಂದ ಬಂದು ಸ್ಥಳೀಯ ಬೈಕ್ ಬಾಡಿಗೆ ಪಡೆದು ಸುತ್ತಾಡುತ್ತಿದ್ದ ಯುವ ದಂಪತಿಯೂ ಕಾಣಸಿಕ್ಕಿದರು. ಇವರ ಸಾಹಸ ಪ್ರವೃತ್ತಿ, ಲವಲವಿಕೆಗೆ ಮೆಚ್ಚುಗೆ ಸೂಸಿದೆವು.
ಪುನ: ಟೆಂಪೋ ಟ್ರಾವೆಲ್ಲರ್ ಏರಿ ಹೊರಟಾಗ ಗಣೇಶ್ ಗಟ್ಟಿಯವರು ಕ್ವಿಜ಼್ ಮಾದರಿಯಲ್ಲಿ ‘ ನಾವು ಮೊದಲ ದಿನ ಉಳಕೊಂಡಿದ್ದ ಜಾಗ ಎಲ್ಲಿ? ಮೊನ್ನೆ ಎಲ್ಲಿದ್ದೆವು ? ನಿನ್ನೆ ಎಲ್ಲಿದ್ದೆವು…. ” ಹೀಗೆ ಪ್ರಶ್ನೆ ಕೇಳಿದರು. ನಾವೂ ನಾರ್ಕಂಡ್, ಸಾಂಗ್ಲಾ, ಕಲ್ಪ, ಟಬೋ ಎಂದು ಸರಿಯಾಗಿಯೇ ಉತ್ತರಿಸಿದೆವು. ಜೊತೆಗೆ, “ನಿನ್ನೆ ಕಂಡ ಹಿಮಾಲಯದ ಪ್ರಾಣಿಯೆ ಹೆಸರೇನು? ಧನ್ಕರ್ ನಲ್ಲಿ ಸ್ಪಿತಿಯ ಜೊತೆಗೆ ಸಂಗಮವಾದ ನದಿ ಯಾವುದು? ಮೊನ್ನೆ ಹೋಗಿದ್ದ ಕೋಟೆ ಯಾವುದು?.” ಇತ್ಯಾದಿ ಮರು ಪ್ರಶ್ನಿಸಿದೆವು. ಅವರೂ ಸರಿಯಾಗಿ ‘ ಗಾಬೂ, ಪಿನ್, ಕಮ್ರು….” ಹೀಗೆ ಉತ್ತರಿಸಿದರು.
ಪಹಾಡಿ ಜನರು ಅಕ್ಷರ ಮಿತವ್ಯಯಿಗಳೇ?
ಈಗ ನನ್ನ ತಲೆಯಲ್ಲಿ ‘ಯುರೇಕಾ’. ಎಂಬಂತೆ, ಇದರಲ್ಲಿ ಏನೋ ಸ್ವಾರಸ್ಯ ಇದೆ ಎಂದು ಹೊಳೆಯಿತು. ಯಾಕೆಂದರೆ, ಹಿಮಾಚಲ ಪ್ರದೇಶ ತಲಪಿದ ಮೇಲೆ ನಾವು ನೋಡಿದ ಅಥವಾ ಗಮನಿಸಿದ ಸ್ಥಳಗಳ ಹೆಸರು ಹೆಚ್ಚಿನವು ಕನ್ನಡದ ಎರಡಕ್ಷರ ಅಥವಾ ಮೂರಕ್ಷರಗಳಲ್ಲಿ ಬರೆಯಲು ಸಾಧ್ಯವಿರುವಂತವು. ಉದಾ: ಶಿಮ್ಲಾ, ಕುಫ್ರಿ, ಸಾಂಗ್ಲಾ, ಕಲ್ಪಾ, ಟಬೋ, ಕಾಜಾ ಇತ್ಯಾದಿ. ಕಂಡಿದ್ದ ನದಿಗಳ ಹೆಸರು ಸಟ್ಲೆಜ್, ಸ್ಪಿತಿ, ಪಿನ್, ಬಾಸ್ಪಾ. ನಡೆದಾಡಿದ್ದ ಸೇತುವೆಗಳು ಕಾಭಾ, ಚಿಚಂ. ಭೇಟಿ ಕೊಟ್ಟಿದ್ದ ಹಳ್ಳಿಗಳ ಹೆಸರು ಚಿತ್ಕುಲ್, ಕರ್ಚಮ್, ನಾಕೋ, ಚಿಚಂ…ಇತ್ಯಾದಿ.
ಇನ್ನು ತಿಂದ ಸ್ಥಳೀಯ ಆಹಾರಗಳು ಮೊಮೊ, ತುಕ್ಪಾ. ರೋಟಿ, ದಾಲ್, ಸಬ್ಜಿ. ಅಲ್ಲಿ ಸ್ಥಳೀಯವಾಗಿ ಬೆಳೆಯುವ ಕೃಷಿ ಉತ್ಪನ್ನಗಳು ಸೇಬ್, ಜಾವ್ (ಬಾರ್ಲಿ), ಓಗ್ಲಾ ಅಥವಾ ಕುಟು (ಬಕ್ ವೀಟ್), ಛರ್ಮಾ (ಸೀಬಕ್ ಥೋರ್ನ್ ಚಹಾ). ನಾನು ಮಾತನಾಡಿಸಿದ ಕೆಲವು ಸ್ಥಳೀಯರ ಹೆಸರು ವಿಮ್ಲಾ (ವಿಮಲಾ), ದೋಲ್ಮಾ, ಸುನ್ತಾ (ಸುನೀತ), ತೆಂಜಿನ್, ದೋರ್ಜೆ, ನೊಬ್ರು . ಇನ್ನು ಮೊನಾಸ್ಟ್ರಿ ಅಥವಾ ಗೊಂಪಾಗಳು ಕನ್ನಡದ ಮೂರಕ್ಷರ, ಎರಡಕ್ಷರ ಬೇಕು, ಕೊನೆಗೆ ಒಂದಕ್ಷರವೂ ಸಾಕು ಎಂಬಂತೆ ಇದ್ದುವು! ಉದಾ: ಧಂಕರ್, ಟಾಬೋ, ಗ್ಲ್ಯೂ, ಕೀ . ನಮ್ಮ ‘ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯ’ದ ಹೆಸರು ಮತ್ತು ‘ಕೀ ಗೊಂಪಾ’ ದ ಹೆಸರನ್ನು ಹೋಲಿಸಿ ನೋಡಿ! ನಾವು ಮಾತನಾಡಾಲು, ಬರೆಯಲು, ಅದೆಷ್ಟು ಅಕ್ಷರ ಧಾರಾಳಿಗಳು ಎಂದು ಗೊತ್ತಾಗುತ್ತದೆ!
ಈ ಬಗ್ಗೆ, ಕುತೂಹಲದಿಂದ ಗೂಗಲ್ ನಲ್ಲಿ ಜಾಲಾಡಿದಾಗ ಗೊತ್ತಾದುದೇನೆಂದರೆ, ಹಿಮಾಲಯದ ಉನ್ನತ ಪ್ರದೇಶದಲ್ಲಿ ಅಲ್ಲಲ್ಲಿ ಹರಡಿಕೊಂಡಿರುವ ಹಲವಾರು ಹಳ್ಳಿಗಳು ಸಂಸ್ಕೃತ ಭಾಷೆ ಮತ್ತು ಟಿಬೆಟಿಯನ್ ಸಂಸ್ಕೃತಿಯಿಂದ ಪ್ರಭಾವಿತಗೊಂಡಿವೆ. ಸಂಸ್ಕೃತ ಭಾಷೆಯಲ್ಲಿ ಹಾಗೂ ದೇವನಾಗರಿ ಲಿಪಿಯಲ್ಲಿ ಪ್ರತಿ ವ್ಯಂಜನಾಕ್ಷರಕ್ಕೆ ಮೂಲಾಕ್ಷರದ ಜೊತೆಗೆ ಸ್ವರಾಕ್ಷರ ಇರುತ್ತದೆ. ಕಾಲಾನಂತರದಲ್ಲಿ ಪ್ರಚಲಿತಗೊಂಡ ಪ್ರಾಕ್ರಿತ್ ಮತ್ತು ಪಹಾಡಿ ಭಾಷೆಗಳ ಹಲವಾರು ರೂಪಗಳಲ್ಲಿ ಶಬ್ದದ ಕೊನೆಯ ‘ಸ್ವರವನ್ನು’ ಕಡಿತಗೊಳಿಸಿ ಮೂಲಾಅಕ್ಷರವನ್ನು ಮಾತ್ರ ಉಚ್ಚರಿಸುವ ಪದ್ದತಿ ರೂಢಿಯಾಯಿತು. ಉದಾ: ರಾಮ- ರಾಮ್ , ಫಲ್ -ಫಲ್. ಹೀಗೆ ಕೊನೆಯ ಅಕ್ಷರದ ‘ಅ’ ಕಾರ ಕಡಿತವಾಯಿತು. ಇದನ್ನು ಭಾಷಾ ಶಾಸ್ತ್ರದ ಅಧ್ಯಯನದಲ್ಲಿ Apocope (ಆಪೊಕೊಪೆ) ಎನ್ನುತ್ತಾರೆ. ಇನ್ನು ಪದದ ನಡುವೆ, ಒತ್ತಿ ಹೇಳದ, ತೇಲಿಸಿದಂತೆ ಹೇಳುವ ಸ್ವರಗಳನ್ನೂ ಉಚ್ಚರಿಸದೆ ಇರುವ ಪದ್ಧತಿ ಆರಂಭವಾಯಿತು. ಉದಾ: ಉಮರ್- ಉಮ್ರ್ , ವಿಮಲಾ- ವಿಮ್ಲಾ. ಇದನ್ನು Syncope (ಸಿನೊಕೋಪಿ) ಎಂದು ಗುರುತಿಸುತ್ತಾರೆ. ಇನ್ನು ಹಿಮಾಲಯದ ಎತ್ತರದ ಪರ್ವತ ಪ್ರದೇಶಗಳಲ್ಲಿ, ಬಹುತೇಕ ಸಮಯ ಪ್ರತಿಕೂಲ ವಾತಾವರಣವಿರುವಲ್ಲಿ, ದೈಹಿಕ ಶ್ರಮದ ಕೆಲಸ ಮಾಡುತ್ತಿದ್ದ ಜನರು ಉದ್ದುದ್ದ ಹೆಸರುಗಳನ್ನೂ ಹೇಳುತ್ತಾ, ಹೆಚ್ಚು ಮಾತನಾಡಿ ಶಕ್ತಿ ವ್ಯಯ ಮಾಡುವ ಬದಲು ಸರಳವಾದ ಪದಗಳ ಮೂಲಕ ಸಂವಹನದ ಅಭ್ಯಾಸವನ್ನು ರೂಢಿಸಿಕೊಂಡಿರುವುದೂ ಇನ್ನೊಂದು ಕಾರಣವಂತೆ.
ಇದನ್ನೂ ದಾಖಲಿಸೋಣ ಅನಿಸಿತು . ವಿಷಯಾಂತರಯಾಯಿತೇ? ಊಊಊಊಊದ್ದ ಶೈಲಿಯ ಬರಹ… ಬೋರ್ ಹೊಡೆಸಿತೆ? ಕ್ಷಮೆಯಿರಲಿ… ಎಷ್ಟಾದರೂ ನಾವು ಅಕ್ಷರ ಧಾರಾಳಿಗಳು!
ಈ ಪ್ರವಾಸಕಥನದ ಹಿಂದಿನ ಭಾಗ ಇಲ್ಲಿದೆ: https://surahonne.com/?p=46365

(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು



ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತು.. ಸೊಗಸಾದ ನಿರೂಪಣೆ… ಪೂರಕ ಚಿತ್ರ.. ಮನಕ್ಕೆ ಹಿತ ತಂದಿತು…
ಧನ್ಯವಾದಗಳು