ಪುಸ್ತಕ-ನೋಟ

ಪುಸ್ತಕಾವಲೋಕನ : “ದಿವ್ಯಯಾನ”, ಲೇಖಕಿ : ಪೂರ್ಣಿಮಾ ಸುರೇಶ್

Share Button

ಬದುಕು ನಿನ್ನನ್ನು ಎಷ್ಟು ಬಾರಿ
ನೆಲಕ್ಕುರುಳಿಸಿದರೂ ನಿನ್ನ ಬೇರುಗಳು
ಗಟ್ಟಿಯಾಗಿದ್ದರೆ ನೀನು ಮತ್ತೆ ಚಿಗುರುತ್ತೀಯೆ,
ನಿನ್ನೊಳಗಿನ ಶಕ್ತಿಯನ್ನು ನೀನೇ ಮರೆತಾಗ ಮಾತ್ರ
ನೀನು ಸೋಲುವುದು ಆರಂಭವಾಗುತ್ತದೆ.

ದಾರ್ಶನಿಕರೊಬ್ಬರು ಬದುಕಿನ ಬಗ್ಗೆ ಹೇಳಿರುವ ಮಾತಿದು. ಹಾಗೇ ಬದುಕನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಾರೆ. ಕಾಲಕ್ಕೆ ತಕ್ಕಂತೆ ಅದನ್ನು ಸವರಿಕೊಳ್ಳುತ್ತಾ ಮಾರ್ಪಾಡಿಗೆ ಒಗ್ಗಿಸಿಕೊಳ್ಳುತ್ತಾ ತಮ್ಮನ್ನು ತಾವೇ ಸಂಭಾಳಿಸಿಕೊಳ್ಳುತ್ತ ಸಾಗುತ್ತಾರೆ. ಬದುಕೆಂದರೆ ಬರಿಯ ಉಂಡುಟ್ಟು ಎದ್ದು ಹೋಗುವುದಲ್ಲ. ಇನ್ನೊಬ್ಬರಿಗೂ ಮಾದರಿಯಾಗುವಂತೆ ನಡೆಸಿ ಸೈ ಎನ್ನಿಸಿಕೊಳ್ಳಬೇಕೆಂಬಂತೆ ತಮ್ಮ ಛಾಪನ್ನು ಮೂಡಿಸಿ ನಡೆಯುವುದು. ಇಂಥಹವರ ಸಾಲಿಗೆ ಶ್ರೀಮತಿ ಪೂರ್ಣಿಮಾ ಸುರೇಶ್ ಅವರನ್ನು ಸೇರಿಸಬಹುದೆಂದರೆ ಅತಿಶಯೋಕ್ತಿಯಾಗಲಾರದು.

ಗೃಹಿಣಿಯಾಗಿ, ಬರಹಗಾರಳಾಗಿ, ಸಂಘಟಕರಾಗಿರುವ ಶ್ರೀಮತಿ ಪೂರ್ಣಿಮಾ ಸುರೇಶ್‌ರವರು ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಸಾರಸ್ವತ ಕುಟುಂಬದಲ್ಲಿ ಜನಿಸಿದವರು. ಇವರು ಚಿಕ್ಕಂದಿನಿಂದಲೇ ಸಾಹಿತ್ಯಿಕ, ಸಾಂಸ್ಕೃತಿಕ ಪರಿಸರದ ಪ್ರಭಾವಕ್ಕೆ ಒಳಗಾದವರು. ತದನಂತರ ಬಾಲ್ಯಕಾಲದ ಗೆಳೆಯನನ್ನೇ ತಮ್ಮ ಬಾಳಸಂಗಾತಿಯಾಗಿ ವರಿಸಿದರು. ಇವರ ಪತಿ ಶ್ರೀ ಸುರೇಶ್ ಶೆಣೈ ರವರು “ಶೆಣೈ ಇಂಜಿನಿಯರ‍್ಸ್” ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದವರು. ಸಾಹಿತ್ಯ, ಸಂಗೀತದಲ್ಲಿ ಸದಭಿರುಚಿ ಹೊಂದಿದವರು. ಅವರ ಒತ್ತಾಸೆಯ ಫಲವಾಗಿ ಪೂರ್ಣಿಮಾರವರು ವಿವಹಾನಂತರ ಸಮಾಜಶಾಸ್ತ್ರ ಮತ್ತು ಕನ್ನಡ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಹಿಂದೀ ಭಾಷೆಯಲ್ಲಿ ರಾಷ್ಟ್ರಭಾಷಾ ವಿಶಾರದ ಪದವಿಯನ್ನೂ ಪಡೆದರು.

ಗೃಹಿಣಿಯಾಗಿ ಮೂರು ಮಕ್ಕಳ ತಾಯಿಯಾದ ಇವರು ಸಾಹಿತ್ಯಾಸಕ್ತಿಯನ್ನು ಮುಂದುವರೆಸಿ ಇದುವರೆಗೆ “ಬಾಳೆಂಬ ಫಥದಲ್ಲಿ”, “ಚೈತನ್ಯ ದೀಪ”, “ಭರವಸೆಯ ಬದುಕು”, “ಬದುಕು ಜಟಕಾ ಬಂಡಿ” ಮುಂತಾದ ಕನ್ನಡ ಕಾದಂಬರಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ನಿಯತಕಾಲಿಕ ಪತ್ರಿಕೆಗಳಲ್ಲಿಯೂ ತಮ್ಮ ಲೇಖನಗಳನ್ನು ಪ್ರಕಟಿಸಿದ್ದಾರೆ. ತಮ್ಮ ಸಾಂಸಾರಿಕ ಜವಾಬ್ದಾರಿಗಳು ಒಂದು ಹಂತಕ್ಕೆ ಬಂದನಂತರ ಹಲವು ಸಮಾನ ಮನಸ್ಕರೊಡಗೂಡಿ “ಸಿರಿಗನ್ನಡ ಓದುಗರ ಒಕ್ಕೂಟ” ಸಂಘಟನೆಯನ್ನು ಪ್ರಾರಂಭಿಸಿ ಸುಮಾರು ಹನ್ನೆರಡು ವರ್ಷಗಳಿಂದ ನಿರ್ವಹಿಸಿಕೊಂಡು ಬಂದಿದ್ದಾರೆ.

ಜೊತೆಗೆ ಇವರ ಚಿಕ್ಕಂದಿನ ಕನಸಾಗಿದ್ದ ಪ್ರವಾಸದ ಆಶಯವನ್ನು ಅವಕಾಶ ಸಿಕ್ಕಾಗ ನನಸು ಮಾಡಿಕೊಂಡಿದ್ದಾರೆ. ಇವರ ಅನುಭವಗಳನ್ನು ನಾನು ಮೂರು ಬೇರೆ ಹಂತಗಳಾಗಿ ವಿಭಜಿಸುತ್ತೇನೆ. ಹೇಗೆ ನಮ್ಮ ಬದುಕು ಬಾಲ್ಯ, ಯೌವನ, ವೃದ್ಧಾಪ್ಯಗಳಾಗಿ ಹಂತಗಳಾಗಿವೆಯೋ ಹಾಗೆ.

ಪ್ರಥಮದಲ್ಲಿ ತಮ್ಮೊಡನೆ ಕರುಳ ಕುಡಿಗಳನ್ನು ಮಡಿಲಲ್ಲಿ ಕಟ್ಟಿಕೊಂಡು ಬಾಳಸಂಗಾತಿಯೊಡನೆ ಮಾಡಿದಂತಹ ಪ್ರವಾಸಗಳು. ಇದರಲ್ಲಿ ಮಕ್ಕಳೊಡನೆ ಮಕ್ಕಳಾಗಿ ಅವರ ಆಮೋದ, ಪ್ರಮೋದಗಳಲ್ಲಿ ಒಂದಾಗಿ ಎಚ್ಚರಿಕೆಯಿಂದ. ಸಹನೆಯಿಂದ ವ್ಯವಹರಿಸುತ್ತಾ ಪರವಾಗಿಲ್ಲ ಎನ್ನುವಂತೆ ಬೀಗಿದ ಪ್ರವಾಸಗಳು.

ನಂತರ ಮಕ್ಕಳ ಜವಾಬ್ದಾರಿ, ಕುಟುಂಬದ ಜವಾಬ್ದಾರಿಗಳನ್ನು ಪುರೈಸಿದ ನಂತರ ನಿರಾತಂಕವಾಗಿ ದೇಶವಿದೇಶಗಳನ್ನು ಸುತ್ತಿದ ಪ್ರವಾಸಗಳಲ್ಲಿ ತಮ್ಮ ಬಾಳಸಂಗಾತಿಯೊಡಗೂಡಿ ಜೋಡಿಹಕ್ಕಿಗಳಂತೆ ವಿಹರಿಸಿ ಬಂದ ಪ್ರವಾಸಗಳು. ಬಂದನಂತರ ಅವರು ಅದರಿಂದ ಪಡೆದ ನೈಜ ಅನುಭವಗಳನ್ನು ಒಳಗೊಂಡ “ವಿಶ್ವಯಾನ” ಎಂಬ ಪ್ರವಾಸ ಕಥನದ ಮೂಲಕ ಓದುಗರಿಗೆ, ಪ್ರವಾಸಿಗರಿಗೆ ಮಾರ್ಗದರ್ಶನ ನೀಡಿದ್ದಾರೆ.
ಇದೀಗ ಮಾಗಿದ ಮನ ಹೊತ್ತು “ದಿವ್ಯಯಾನ”. ಆಂತರಿಕವಾಗಿ ಮನಸ್ಸಿಗೆ ಹತ್ತಿರವಾದ ಆಧ್ಯಾತ್ಮಿಕ ನೆಲೆಗಟ್ಟಿನ ಪ್ರವಾಸ ಕೈಗೊಂಡಿದ್ದಾರೆ. ವಯಸ್ಸಿಗೆ ಅನುಗುಣವಾಗಿ ಪಕ್ವಗೊಂಡ ಮನಸ್ಸು ಅಗೋಚರ ಶಕ್ತಿಗಳಿರುವ ತಾಣಗಳನ್ನು ನೋಡುವ ಅಭೀಪ್ಸೆಯಿಂದ ತಮ್ಮ ಪತಿಯೊಡನೆ ಹೋಗಿಬಂದಿರುವ ಪ್ರವಾಸಗಳು.

ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕವಿಮ ಬಂಧನಾತ್ ಮೃತ್ಯೋರ್ಮಕ್ಷೀಯ ಮಾಮೃತಾತ್

ಮನುಷ್ಯನ ಎಲ್ಲಾ ದುಃಖಗಳು, ತೊಂದರೆಗಳು, ಮತ್ತು ಅಹಂಕಾರವನ್ನು ದೂರಮಾಡು. ಇನ್ನು ಸಾವಿನ ಭಯದಿಂದ ಮುಕ್ತಿನೀಡಿ ದುಷ್ಟಶಕ್ತಿಗಳಿಂದ ನಮ್ಮನ್ನು ರಕ್ಷಿಸುತ್ತದೆಂಬುದು ಇದರ ಸರಳ ಅರ್ಥ. ಹನ್ನೆರಡು ಜ್ಯೋತಿರ್ಲಿಂಗಗಳು ಶ್ರೀ ಸೋಮನಾಥನಿಂದ ಪ್ರಾರಂಭಿಸಿ ಶ್ರೀ ಗ್ರಿಶ್ನೇಶ್ವರನ ವರೆಗೆ ದರ್ಶನ ಮಾಡಿದ್ದಾರೆ. ಅವುಗಳ ವಿವರಗಳನ್ನು ಸರಳ ಸುಂದರ ಶೈಲಿಯಲ್ಲಿ ಈ ಕೃತಿಯಲ್ಲಿ ಅನಾವರಣ ಮಾಡಿರುತ್ತಾರೆ.

ಆಯಾಯ ಸ್ಥಳಗಳಿಗೆ ಹೋಗುವುದು ಹೇಗೆ? ಅಲ್ಲಿ ದೊರಕುವ ಸೌಲಭ್ಯಗಳ ಬಗ್ಗೆ ಮಾಹಿತಿ, ಅಲ್ಲಿನ ಪದ್ಧತಿಗಳಂತೆ ಹೇಗೆ ನಡೆದುಕೊಳ್ಳಬೇಕೆಂಬ ವಿವರಗಳು, ಎಚ್ಚರಿಕೆಗಳು, ಸ್ಥಳೀಯರಲ್ಲಿ ಬೇರುಬಿಟ್ಟಿರುವ ದಂತಕಥೆಗಳು, ಇತಿಹಾಸದ ಹಿನ್ನೆಲೆ, ಕ್ಷೇತ್ರಗಳಲ್ಲಿ ಒದಗಿಬಂದ ತೊಂದರೆ ತಾಪತ್ರಯಗಳನ್ನು ನಿವಾರಿಸಿ ಪುನರುಜ್ಜೀವನಕ್ಕಾಗಿ ಶ್ರಮಿಸಿದವರ ವಿವರಗಳು ಎಲ್ಲವನ್ನೂ ಕೂಲಂಕುಷವಾಗಿ ಚಿತ್ರಿಸಿದ್ದಾರೆ.

ಪ್ರತಿಯೊಂದು ದೇಗುಲ ಪ್ರವೇಶಿಸಿದಾಗ ತಾವು ಕಂಡುಂಡ ಅನುಭವಗಳನ್ನು ವೈಭವೀಕರಿಸದೆ ಯಥಾವತ್ತಾಗಿ ಚಿತ್ರಿಸಿದ್ದಾರೆ. ನಂತರ ತಾವು ಸಂದರ್ಶಿಸಿದ ಹದಿಮೂರು ಶಿವ ದೇವಾಲಯಗಳಲ್ಲಿನ ಕಲಾತ್ಮಕ ನೋಟಕ್ಕೆ ಬೆರಗಾಗಿ ಮೂಕವಿಸ್ಮಿತರಾಗಿದ್ದಾರೆ. ಅನಿರ್ವಚನೀಯ ಆನಂದವನ್ನು ಹೇಗೆ ಅನುಭವಿಸಿದೆವೆಂಬುದನ್ನು ಪಡಿಮೂಡಿಸಿದ್ದಾರೆ. ಶ್ರೀ ಕಾಳಹಸ್ತಿಕ್ಷೇತ್ರದಿಂದ ಪ್ರಾರಂಭಿಸಿ ತಮ್ಮ ಮನೆದೇವರಾದ ಮುಲ್ಕಿಯ ವೆಂಕಟರಮಣಸ್ವಾಮಿ, ಎಡೆಯೂರು ಸಿದ್ಧಲಿಂಗೇಶ್ವರ ದೇವಾಲಯದ ವರೆಗೆ ಅದ್ಭುತ ಶಿಲಾಕೃತಿಗಳ ರೂಪರೇಷೆಗಳನ್ನು ಕಂಡು ತಮ್ಮ ಮನೋಭಿಲಾಷೆಗೆ ತಕ್ಕಂತೆ ನಿರೂಪಿಸಿದ್ದಾರೆ. ಭಾರತ, ಭಾರತದರ್ಶನ ವಿಭಾಗದಲ್ಲಿ ಸ್ವರ್ಣಮಂದಿರವನ್ನು ದರ್ಶಿಸಿ ಅಲ್ಲಿನ ಸಂಸ್ಕೃತಿ , ಸದಾಚಾರ, ಸಹಿಷ್ಣುತೆಯ ಬಗ್ಗೆ ತಮಗಿರುವ ಅಭಿಮಾನ, ಗೌರವ ಹೇಳಿಕೊಂಡು ಬಾರತದ ಪ್ರಜೆಯೆಂಬುದನ್ನು ಹೆಮ್ಮೆ ಪಡುವ ಸಮಷ್ಠಿಪ್ರಜ್ಞೆಯನ್ನು ಮೆರೆದಿದ್ದಾರೆ.

ಅಂತಿಮವಾಗಿ ತಮ್ಮಲ್ಲೇ ಅಂತರ್ಗತವಾಗಿದ್ದ ಭಾವನೆಗಳನ್ನು ಭಗವಂತನೊಡನೆ ಮುಕ್ತವಾದ ಸಂವಾದದೊಡನೆ ಆತ್ಮಾವಲೋಕನ, ಆತ್ಮವಿಶ್ಲೇಷಣೆ, ಆತ್ಮನಿವೇದನೆಯ ಮೂಲಕ ಹೊರಹಾಕಿರುವ ರೀತಿ ಅಂತಃಕರಣಪೂರಕವಾಗಿವೆ. ತಮ್ಮ ಬಾಳಸಂಗಾತಿಯ ಒಡನಾಟ ತಾವು ಬದುಕಿನ ಆರಂಭಕ್ಕಿಂತ ವೃದ್ಧಾಪ್ಯದಲ್ಲಿ ಎಷ್ಟು ಅಗತ್ಯ, ಅನಿವಾರ್ಯ, ಆವಶ್ಯಕ ಎಂಬುದನ್ನು ಭಾವಪೂರ್ಣವಾಗಿ ಹೇಳಿಕೊಳ್ಳುತ್ತಾ ಅಂತಹ ಭಾಗ್ಯವನ್ನು ಕರುಣಿಸಿದ ಭಗವಂತನಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಅದನ್ನೇ ಕೊನೆವರೆಗೆ ನಿಭಾಯಿಸಿಕೊಂಡು ಹೋಗುವ ಶಕ್ತಿ ನೀಡೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ತಮ್ಮ ಅನುಭವಗಳ ಸಾರಸತ್ವವನ್ನು ಅಭಿವ್ಯಕ್ತಿಗೊಳಿಸಿದ್ದಾರೆಂದರೆ ತಪ್ಪಾಗಲಾರದು.

ಇಲ್ಲಿ ಕೆಲವು ವಾಕ್ಯಗಳು ‘ಬದುಕು ಸವೆಸುವುದಲ್ಲ ಸಂಭ್ರಮಿಸುವುದು’
‘ಜೀವಿಸು, ಜೀವಿಸಲು ಬಿಡು, ಜಗತ್ತಿನಿಂದ ನಾವು ಪಡೆದದ್ದನ್ನು ಜಗತ್ತಿಗೇ ಮರಳಿಸುವ ಮನೋಭಾವ ಬೆಳೆಸಿಕೋ’ ಇವೆಲ್ಲವೂ ಭಗವದ್ಗೀತೆ, ಭಾಗವತ, ಸಾಧುಸಂತರು, ದಾರ್ಶನಿಕರುಗಳು ಹೇಳಿರುವಂತಹ ಸುಭಾಷಿತಗಳು, ಅವರ ಅನುಭಾವದ ನುಡಿಗಳು. ಸುಮ್ಮನೆ ಇನ್ನೊಬ್ಬರಿಗೆ ರವಾನಿಸುವುದಲ್ಲ, ಅದರಲ್ಲಿನ ಏನನ್ನಾದರೂ ನಮ್ಮಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಬದುಕಲು ಪ್ರಯತ್ನಿಸೋಣ.

ಒಟ್ಟಾರೆಯಾಗಿ “ದಿವ್ಯ ಯಾನ” ಕೃತಿ ಅನುಭವಗಳ, ಅಭಿವ್ಯಕ್ತಿಯ, ಆಧ್ಯಾತ್ಮಿಕ ನೆಲೆಗಟ್ಟಿನ ಸಾರ ಎಂದು ಹೇಳಬಹುದು. ಹೂರಣಕ್ಕೆ ತೋರಣವಾಗಿ ಜನ್ಮದಾತರಿಗೆ, ಬಾಳಿನ ಸಂಗಾತಿಗೆ, ಸಂಭ್ರಮಿಸುವ ಕರುಳ ಕುಡಿಗಳಿಗೆ, ಏಕಾಂತವಾಗಿ ಕುಳಿತು ಬರೆದ ಈ ಬರಹವನ್ನು ಲೋಕಾಂತವಾಗಿಸಲು ಅದಕ್ಕೆ ಪುಸ್ತಕದ ರೂಪಕೊಟ್ಟ ಪ್ರಕಾಶಕರಾದ ಭಾರತೀ ಪ್ರಕಾಶನದ ಶ್ರೀ ಶ್ರೀನಿವಾಸರವರಿಗೆ , ಓದುಗರ ಒಕ್ಕೂಟದ ಆತ್ಮೀಯ ಗೆಳತಿಯರಿಗೆ , ಮಿಗಿಲಾಗಿ ಈ ದಿನ ಕೃತಿಯ ಲೋಕಾರ್ಪಣೆಗೊಂಡ “ದಿವ್ಯಯಾನ” ದ ಬಗ್ಗೆ ನನಗೆ ಮಾತನಾಡಲು ಅವಕಾಶ ನೀಡಿದ ಅದರ ಕರ್ತೃ ಶ್ರೀಮತಿ ಪೂರ್ಣಿಮಾ ಸುರೇಶ್‌ರವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

-ಬಿ.ಆರ್.ನಾಗರತ್ನ, ಮೈಸೂರು.


One comment on “ಪುಸ್ತಕಾವಲೋಕನ : “ದಿವ್ಯಯಾನ”, ಲೇಖಕಿ : ಪೂರ್ಣಿಮಾ ಸುರೇಶ್”

  1. ನಾನು ಬರೆದ ಪುಸ್ತಕ ಅವಲೋಕನ.. ಪ್ರಕಟಿಸಿ.. ಪ್ರೋತ್ಸಾಹ ನೀಡಿದ.. ಸಂಪಾದಕರಿಗೆ.. ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *