ದಸರಾ ಎಂದರೆ ಪುರಾತನ ಮೈಸೂರು
ಅರಮನೆ ಅಂಬಾರಿಯೂರು ಉತ್ಸವ ಜೋರು
ಹಸಿರು ದೀಪದ ಆಕರ್ಷಕ ಚಪ್ಪರ ಹತ್ತೂ ದಿವಸ
ಪೇಟೆಯಲಿ ಜನಕೋಟೆ ; ದಿನವೂ ಸಂತೆ ಗದ್ದಲ!
ದಸರಾ ಎಂದರೆ ಸಾಲು ಸಾಲು ಜಂಭೂ ಸವಾರಿ
ಎಲ್ಲದರ ಸಂಕಲನ ಪಥಸಂಚಲನ ವಿದ್ಯುತ್ ಚಾಲನ
ಆನೆ ಕುದುರೆ ಪದಾತಿ ಜನ-ಪದರ ಸಾರೋಟು
ಪೊಲೀಸು ದಿರಿಸು ಸ್ತಬ್ಧ ಸಚಿತ್ರ ಕಣ್ ಬೀಟು
ದಸರಾ ಎಂದರೆ ಸಂಸ್ಕೃತಿ ಸಂಗತ ಇತಿಹಾಸ
ಲಲಿತಕಲೆ ಸಕಲ ಸರ್ವಾಂಗ ದರ್ಶನ ಸಹವಾಸ
ಜೊತೆಗೆ ಮನರಂಜನ ; ನೇತ್ರ ತೆರೆದು ಮಾಡುವ ಧ್ಯಾನ
ಪಂಚೇಂದ್ರಿಯ ರಸದೂಟ ; ಹಲವು ತೆರನ ಉತ್ಸವ ಯಾನ
ದಸರಾ ಎಂದರೆ ನಮ್ಮೊಳ ಆಳ ನಿರಾಳದಂತರಾಳ
ಕಾಲದ ಚಿತ್ರಚಿತ್ತಾರ ಪ್ರತಿ ಧ್ವನಿತ ಸಮನ್ವಿತ ವಿರಳ
ಪರಂಪರೆಯ ಪೊರೆ ; ಥರಾವರಿ ವಹಿವಾಟಿನೇರುಬ್ಬರ ತೆರೆ
ಚಿಕ್ಕವರಿಂ ದೊಡ್ಡವರೆಗುಂ ಬೆರಗು ಬಿನ್ನಾಣ ಜನರೇ ದೊರೆ !
ಹೆಚ್ ಎನ್ ಮಂಜುರಾಜ್, ಮೈಸೂರು

