ಬೆಳಕು-ಬಳ್ಳಿ

ಕಥೆ ಹೇಳುವ ಕಲ್ಲುಗಳು

Share Button

ಹಾದಿ ಬದಿಯ ಕಡು ಕಪ್ಪು ಕಲ್ಲುಗಳು ಕಥೆ ಹೇಳಿವೆ
ಮನುಜ ಬುದ್ದಿಯ ಓರೆ ಕೊರೆಗಳಿಗೆ ಸಾಕ್ಷಿಯಾಗಿವೆ

ಬೀಸಿದ ಗಾಳಿಗೆ ಬಗ್ಗದೆ ಎದೆಯೊಡ್ಡಿ ನಿಂತಿವೆ
ಸುರಿದ ಮಳೆಗೆ ಕರಗದೆ ಘಟನೆಗಳ ಹೇಳಲು ಕಾಯುತ್ತಿವೆ

ಹರಿದ ನೆತ್ತರಿನ ಕಟುಕನ್ನು ಕಳೆದುಕೊಂಡು
ಬರಿದಾದ ಊರುಗಳ ನೆನಪಿಸಿಕೊಂಡು

ಉಸಿರು ಚೆಲ್ಲಿ ಕಣ್ಮುಚ್ಚಿ ಮರೆಯಾದ ಎಷ್ಟೋ ಜೀವಗಳ
ಒಡಲಲ್ಲಿ ಹಸಿವು ತುಂಬಿಕೊಂಡು ನಿಂತುಹೋದ ಹೃದಯಗಳ

ಸ್ಮಾರಕವಾಗಿ ಅರಸಿನ ಕುಂಕುಮಗಳ ಬಳಿದುಕೊಂಡು ಕಾದಿವೆ
ಕಣ್ಣೀರು ಕೋಡಿಯಾಗಿ ಹರಿದ ಕ್ಷಣಗಳ ನೆನೆದು ಬಿಕ್ಕುತ್ತಿವೆ

ಕೈ ಕಾಲುಗಳ ಕಳೆದುಕೊಂಡು ಹೆಳವರಾದವರ
ಧರ್ಮ ಬದಲಿಸಿಕೊಂಡು ಮತಾಂತರಗೊಂಡವರ

ನಿಟ್ಟುಸಿರು ಶಾಪಗಳ ಪಟ್ಟಿಮಾಡಿಕೊಂಡು
ಭಯಗ್ರಸ್ತ ಮನಸ್ಸುಗಳ ಕನವರಿಕೆ ಕಟ್ಟಿಕೊಂಡು

ಎಲ್ಲಾ ಒಪ್ಪಿಸಿ ಹೇಳಲು ಹಾತೊರೆಯುತ್ತಿವೆ
ನೋಡಿರುವುದೆನೆಲ್ಲಾ ಹಂಚಿಕೊಂಡು ಹಗುರವಾಗಲು ಬಯಸುತ್ತಿವೆ

ಕಾಳಗದಲ್ಲಿ ಗಂಡನ ಕಳೆದುಕೊಂಡು ಸತಿಯಾದವರ
ಘನಘೋರ ಸಂಗ್ರಾಮದಲ್ಲಿ ವೀರ ಸ್ವರ್ಗ ಹೊಂದಿದವರ

ಮಾಸ್ತಿಗಲ್ಲು ವೀರಗಲ್ಲುಗಳಾಗಿ ಚಿತ್ರದ ರೂಪದಲ್ಲಿ ಸಾರುತ್ತಿವೆ
ಕಾಲ ಗರ್ಭದಲ್ಲಿ ಹುದುಗಿ ಹೋದ ಭಾವನೆಗಳ ಹೊರತೆಗೆಯುತ್ತಿವೆ

ಚರಿತ್ರೆಯ ಹಸಿ ಹಸಿ ಸತ್ಯವ ಅನಾವರಣ ಮಾಡುತ್ತಿವೆ
ಬರೀ ಕಾಡುಗಲ್ಲುಗಳಲ್ಲ ಇವು ಇತಿಹಾಸದ ಪುಟಗಳ ತಿರುವಿ ಹಾಕುವ ಆಕರಗಳು….

ಕೆ.ಎಂ ಶರಣಬಸವೇಶ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *