(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಇನ್ನೇನು ಅಂಕಣದ ಕೊನೆಯ ಭಾಗಕ್ಕೆ ಬಂದಾಗ ಕವಿಗಳ ದೃಷ್ಟಿಯಲ್ಲಿ ಅವರ ಕಲ್ಪನೆಯ ಕೂಸಾದ ಕವಿತೆ ಹೇಗೆ ಕಾಣುತ್ತದೆ ಅದನ್ನು ಕವಿ ಕಾಣುವ ದೃಷ್ಟಿ ಹೇಗೆ ಅದು ಕವಿಗೆ ಹೇಳುವ ಮಾತನ್ನು ಕಲಿಸುವ ಪಾಠವೇನು ಒಟ್ಟಾರೆಯಾಗಿ ಕವಿತೆಯ ಅಂತರ್ಧ್ವನಿ ಏನು ಎನ್ನುವುದನ್ನು ಈ ಕವನದಲ್ಲಿ ತುಂಬಾ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ಕವಿಗಳು ‘ದೀಪ ಸಾಲಿನ ನಡುವೆ’ ಸಂಕಲನದ ಕಡೆಯ ಕವಿತೆ ‘ನನ್ನ ಕವಿತೆ’.
ಯಾರು ಒಪ್ಪಲಿ ಬಿಡಲಿ ನನ್ನ ನೋಡುತ್ತಿರುವ
ನಕ್ಷತ್ರ ಪುಂಜವೇ ನನ್ನ ಕವಿತೆ
ಹಸಿರು ಹುಲ್ಲನು ಮೇಯ್ದು ಬಿಳಿಯ ಹಾಲನು ಕೊಡುವ
ಕಂದು ಬಣ್ಣದ ಹಸುವೆ ನನ್ನ ಕವಿತೆ
ಮೇಲಿನಿಂದ ತನ್ನನ್ನು ನೋಡುತ್ತಿರುವ ನಕ್ಷತ್ರಗಳ ಗೊಂಚಲೇ ತನ್ನ ಕವಿತೆ ಎಂಬುದು ಕವಿಯ ಭಾವನೆ. ಅದನ್ನು ಯಾರಾದರೂ ಒಪ್ಪಲಿ ಬಿಡಲಿ, ಅವರ ನಂಬಿಕೆ ಮಾತ್ರ ಅಖಂಡ. ಹಾಗೆಯೇ ಮುಂದಿನ ಸಾಲುಗಳಲ್ಲಿ ತಮ್ಮ ಕವಿತೆಯನ್ನು ಹಸುವಿಗೆ ಹೋಲಿಸುತ್ತಾರೆ ಈ ಹಿಂದೆ ಮತ್ತೊಂದು ಕವಿತೆಯಲ್ಲಿ ಕವಿಗಳು ಹೇಳಿದ ಈ ಸಾಲುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಸಪ್ತಸ್ವರಂಗಳಲಿ ಕದ ತೆರೆದ
ಯಕ್ಷಭವನದ ಹೊರಗೆ ಅರಳಿದುದ್ಯಾನದಲಿ
ಕಾಮಧೇನುವಿನ ಕೆಚ್ಚಲಿಗೆ ಚೆಂದುಟಿಯಿಟ್ಟ ನಂದಿನಿಯ ಗೆಜ್ಜೆದನಿ
ಎಂದು ಕವಿತೆಯನ್ನು ವರ್ಣಿಸುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಹಸು ಎಂದರೆ ಕಾಮಧೇನು ಸಾಧು ಪ್ರಾಣಿ ಪೂಜನೀಯ ಮತ್ತು ಪವಿತ್ರ. ಮುಕ್ಕೋಟಿ ದೇವತೆಗಳಿಗೆ ತನ್ನ ದೇಹದಲ್ಲಿ ನೆಲೆ ಕೊಟ್ಟಿರುವ ಹಸು ಮೋಕ್ಷಕ್ಕೆ ದಾರಿ ತೋರುವುದು ಎಂದು ಸಹ ಆಧ್ಯಾತ್ಮಿಕ ನಂಬಿಕೆ. ಅಂತಹ ಹಸುವಿಗೆ ತಮ್ಮ ಕವಿತೆಯನ್ನು ಹೋಲಿಸುತ್ತಾ, ಕಾವ್ಯವನ್ನು ತಪಸ್ಸು ಎಂದು ಭಾವಿಸುತ್ತಾ ಅದಕ್ಕೊಂದು ದೈವಿಕ ನೆಲೆ ಕಲ್ಪಿಸುತ್ತಾರೆ ಕವಿಗಳು.
ಹೊಳೆಯ ದಾಟಿಸುವ ಅಂಬಿಗನೇ ನಾನೆನ್ನುವುದು
ನನ್ನೊಲುಮೆಯಲ್ಲಿ ನಾನು ಬರೆದ ಕವಿತೆ
ಮಳೆಬಿದ್ದ ಸಂಜೆ ಕಾಮನ ಬಿಲ್ಲ ಹಿಡಿಯುವುದು
ಮೃದುವಾಗಿ ನುಡಿಯುವುದು ನನ್ನ ಕವಿತೆ
ಕವಿತೆಯ ಮೃದುವಾದ ಭಾವನೆಗಳನ್ನು ಕಟ್ಟಿಕೊಡುವ ಪ್ರಯತ್ನ ಕವಿಗಳದು. ನಿಸರ್ಗದ ಅಂಶಗಳಿಗೆ ಹೋಲಿಸುತ್ತಾ ಒಂದು ಮಳೆಬಿದ್ದ ಸಂಜೆಯಲ್ಲಿ ಮೂಡುವ ಕಾಮನಬಿಲ್ಲು ಮುಟ್ಟಿಸುವ ಭಾವಗಳನ್ನು ಕವಿತೆ ಮೂಡಿಸುತ್ತದೆ ಎನ್ನುತ್ತಾರೆ . ಹಾಗೆಯೇ ಮೃದು ಮಧುರವಾಗಿ ತಮ್ಮೊಂದಿಗೆ ಅದು ಸಂಭಾಷಿಸುತ್ತದೆ ಎನ್ನುವುದು ಕವಿಗಳ ಅಭಿಪ್ರಾಯ. ಹಾಗೆಯೇ ಹೊಳೆಯ ದಾಟಿಸುವ ಅಂಬಿಗನೇ ತನ್ನ ಕವಿತೆ ಎಂದು ಹೇಳಿ ನೇರವಾಗಿ ಕವಿತೆಯನ್ನು ದೇವರ ಸ್ಥಾನಕ್ಕೆ ಏರಿಸುತ್ತಾರೆ . ಸಂಸಾರವೆಂಬ ಭವಸಾಗರವನ್ನು ದಾಟಿಸುವ ಅಂಬಿಗ ದೇವರು. ಹಾಗೆಯೇ ಈ ಪ್ರಪಂಚದ ಕಷ್ಟಗಳನ್ನು ಮರೆಯುವಂತೆ ಮಾಡುವ ಶಕ್ತಿ ಇರುವ ಕವಿತೆ ದೇವರಲ್ಲಿ ಮತ್ತೇನಲ್ಲ ಎಂಬುದು ಕವಿಯ ಅಂಬೋಣ.
ಕಲ್ಪನಾ ರಾಜ್ಯದಲ್ಲಿ ನೀವು ಸಂಚರಿಸದಿರಿ
ಕೆಂಪು ಕುದುರೆಯ ಸಾಲು ನನ್ನ ಕವಿತೆ
ಅರಳಿದರೆ ಮಲ್ಲಿಗೆ ಕೆರಳಿದರೆ ಸಂಪಗೆ
ಹೂಗಳನ್ನು ತೂಗುವುದು ನನ್ನ ಕವಿತೆ.
ಹಾಗೆಯೇ ಕವಿತೆ ಎಂದರೆ ಬರಿ ಕಲ್ಪನಾ ಸಾಮ್ರಾಜ್ಯ ಅಷ್ಟೇ ಅಲ್ಲ ಹಾಗಾಗಿಯೇ ಕವಿ ಓದುಗರನ್ನು ಬರಿ ಕಲ್ಪನಾ ರಾಜ್ಯದಲ್ಲಿ ಸಂಚರಿಸಬೇಡಿ ಎಂದು ಎಚ್ಚರಿಸುತ್ತಾರೆ. ಏಕೆಂದರೆ ಕವಿತೆ ಕೆಂಪು ಕುದುರೆಗಳ ಸಾಲು ಸಹಿತ. ಅವು ರಭಸವಾಗಿ ಧಾವಿಸಿ ಬಂದಾಗ ಅಪಾಯ ಖಂಡಿತ. ಅದನ್ನೇ ಕವಿ ಇಲ್ಲಿ ತನ್ನ ಕವಿತೆಯನ್ನು ಕೆಂಪು ಕುದುರೆಯ ಸಾಲಿಗೆ ಹೋಲಿಸುತ್ತಾ ಹೇಳುವುದು. ಕವಿತೆ ಎಂದರೆ ಹೌದು ಅವು ಪುಷ್ಪಗಳೂ ಹೌದು. ಸಂತಸವನ್ನು ಮುದವನು ನೀಡುವ ಮೆದು ಸುಗಂಧದ ಮಲ್ಲಿಗೆಯ ಭಾವವನ್ನು ಹೊರ ಸೂಸುವ ಕವಿತೆ ಭಾವನೆಗಳ ತೀಕ್ಷ್ಣತೆಗೆ ಗಾಢತೆಗೆ ತಲೆ ನೋವು ತರುವ ಸಂಪಿಗೆಯು ಆಗಿ ಪರಿಣಮಿಸಬಹುದು ಎಂದು ಕವಿ ಇಲ್ಲಿ ಹೇಳುತ್ತಾರೆ. ಅಂದರೆ ಮಧುರ ಭಾವಗಳ ಒಕ್ಕಣಿಕೆಯ ಜೊತೆಗೆ ಮನದಾಳದ ರೋಷ ಆವೇಶಗಳನ್ನು ಕವಿತೆ ಅಭಿವ್ಯಕ್ತಿಸುತ್ತದೆ ಎಂಬ ಭಾವ.
ಕಡಲು ಭೋರ್ಗರೆಯುವುದು ಆಕಾಶ ಮಿಂಚುವುದು
ಎಲ್ಲವನ್ನು ಒಳಗೊಳ್ಳುವುದೆನ್ನ ಕವಿತೆ
ಯಾರು ಏನೆಂದರೂ ಸುಮ್ಮನಿರಬೇಕೆಂದು ನನಗೆ ಹೇಳಿದ್ದುಂಟು ನನ್ನ ಕವಿತೆ
ಪ್ರಕೃತಿ ಮುನಿದಾಗ ಭೋರ್ಗರೆಯುವ ಕಡಲು ಮಿಂಚು ಗುಡುಗುಗಳಿಂದ ಆರ್ಭಟಿಸುವ ಆಕಾಶ ಎಲ್ಲವನ್ನು ಕವಿತೆ ಒಳಗೊಳ್ಳುತ್ತದೆ . ಭಾವಾವೇಷಗಳ ರೌದ್ರ ರೂಪವನ್ನು ಕವಿತೆ ತಾಳಬಲ್ಲದು .ಹಾಗೆಯೇ ಅದಕ್ಕೆ ಪೂರ ವಿರುದ್ಧವಾಗಿ ಯಾರು ಏನು ಹೇಳಿದರು ಮೌನವಾಗಿ ಇರಬೇಕು ಎಂಬ ಸಂದೇಶವನ್ನೂ ಕವಿತೆ ಸಾರುತ್ತದೆ. ಅನಗತ್ಯವಾದ ವಿವಾದಗಳಿಗೆ ಒಳಗಾಗದೆ ಕೃತಿಗಳ ಮೂಲಕವೇ ಕಾಲ ಎತ್ತುವ ಎಲ್ಲ ಪ್ರಶ್ನೆಗಳಿಗೂ ಉತ್ತರವಾಗಬೇಕು ಎನ್ನುವುದು ಕವಿಗಳ ಆಶಯ.
ಹೀಗೆ ಕವಿತೆಯ ವಿವಿಧ ಆಯಾಮಗಳನ್ನು ಅದು ತೋರುವ ವಿರೋಧಾಭಾಸದ ಭಾವನೆಗಳನ್ನು ಈ ಕವನದಲ್ಲಿ ತುಂಬಾ ಚೆನ್ನಾಗಿ ಕಟ್ಟಿಕೊಡುತ್ತಾರೆ. ತಾನು ಹೆತ್ತ ಮಕ್ಕಳನ್ನು ಹೆಮ್ಮೆಯಿಂದ ದಿಟ್ಟಿಸುವ ತಾಯಿಯ ದೃಷ್ಟಿ ಇಲ್ಲಿ ತಮ್ಮ ಕವಿತೆಯ ಬಗ್ಗೆ ಕವಿಗಳದು.
ಈ ಅಂಕಣ ಮಾಲಿಕೆಗೊಂದು ಸುಂದರ ಮುಕ್ತಾಯ ಕೆ ಎಸ್ ನ ಅವರ ಮೊಟ್ಟ ಮೊದಲ ಕವನ “ಕಬ್ಬಿಗನ ಕೂಗು” ದಿಂದ ಮಾಡುವ ಆಸೆ. ಇದು 14.01.1933 ರ ಪ್ರಬುದ್ಧ ಕರ್ನಾಟಕದ ಸಂಚಿಕೆಯಲ್ಲಿ ಪ್ರಕಟಗೊಂಡಿತ್ತು.
ಎಲ್ಲಿರುವುದು ನಾವು ಸೇರುವ ಊರು ಎಂದು ಪ್ರಶ್ನಿಸುತ್ತಾ ಕಡೆಗೆ ಇಲ್ಲಿರುವುದು ನಾವು ಸೇರುವ ಊರು ಎಂದು ಕೊನೆಗೊಳ್ಳುವ ಕವಿತೆ ಎಲ್ಲರಿಗೂ ತಿಳಿದಿದೆ. ಹಾಗೆಯೇ ಇಲ್ಲಿ ಈ ಕವಿತೆಯಲ್ಲಿ ಕವಿ ತನ್ನ ಊರನ್ನು ಬಣ್ಣಿಸುತ್ತ ಅದರ ಹಾಗೆ ಬೇರೆ ಊರಿಲ್ಲ ಎಂದು ಹೇಳುತ್ತಾರೆ.
ಕೆಎಸ್ ನ ಅಂದರೆ ಮಲ್ಲಿಗೆ ಮಲ್ಲಿಗೆ ಎಂದರೆ ಕೆಎಸ್ ನ ಎನ್ನುವಷ್ಟು ಅವಿನಾಭಾವವಿರುವ ಕವಿ ಪುಷ್ಪ ಪ್ರಿಯರು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಈ ಸಾಲುಗಳು ಕೆ ಎಸ್ ನ ಅವರ ಮುದ್ರೆಯನ್ನೇ ಹೊತ್ತುಕೊಂಡು ಬಂದಿವೆ.
ಎಂದಿಗೂ ಬಾಡದು ಅಲ್ಲಿಯ ಜಾಜಿ;
ಎಂದಿಗೂ ಕಂದದು ನೈದಿಲೆಯು
ಸಗ್ಗದ ಕತ್ತುರಿ ಪುನುಗು ಜವಾಜಿ
ಕಂಪನು ಗಾಳಿಯಲೂದುವುವು
ಮುಂದಿನ ಸಾಲುಗಳಲ್ಲಿ ತಮ್ಮೂರಿನ ಗಿಡದ ಕೊಂಬೆಗಳ ಮೇಲೆ ಕೋಗಿಲೆಗಳು ಗಾನವನ್ನು ಹಾಡುತ್ತವೆ ಹಾಗೂ ಆ ಗಾನದ ಇಂಪಿನ ಮೋಡದ ಮೇಲೆ ರಸಿಕರನ್ನು ಎತ್ತೊಯುತ್ತವೆ ಎನ್ನುತ್ತಾರೆ. ಈ ಕಬ್ಬಿಗನ ಕನಸಿನ ಊರಿನಲ್ಲಿ ಸಾವು ಎಂಬ ಪದವೇ ಇಲ್ಲ ಮುಪ್ಪಿನ ಜಾಡ್ಯದ ಭಯವೂ ಇಲ್ಲ .ಹಾಗಾಗಿ ಬಣ್ಣದ ಗಿಣಿಗಳ ನಲ್ಮಾತು ಕೇಳುತ್ತ ಸೌಖ್ಯದಲ್ಲಿ ಜೀವಿಸಲು ಯಾವುದೇ ತಡೆಯಿಲ್ಲ ಎನ್ನುತ್ತಾರೆ. ಇಂತಹ ಊರಿನಲ್ಲಿ ಕಬ್ಬಿಗನಿಗೇನು ಕೆಲಸ ಎಂದು ಕೇಳಬಹುದಲ್ಲವೇ? ಹಾಗಾಗಿ ಮುಂದಿನ ಸಾಲುಗಳಲ್ಲಿ ತಮ್ಮೂರಿನ ಕಬ್ಬಿಗರು ಮಾಡುವ ಕೆಲಸವನ್ನು ಹೇಳುತ್ತಾ ಹೋಗುತ್ತಾರೆ.
ಕೊಳಗಳ ದಡಗಳ ಕುಂಜಗಳಲ್ಲಿ
ಕೊಳಲನ್ನೂದುವ ಕಬ್ಬಿಗರು
ಹೂವನು ಚುಂಬಿಸಿ ಹೃದಯಕೆ ಒತ್ತುತ
ಇನಿಯಳ ನೆನೆಯುವ ಕಬ್ಬಿಗರು
ಇಂತಹ ಸ್ವರ್ಗದಂತಹ ಬೀಡಿನಲ್ಲಿ ಕವಿಗಳಿಗೆ ಇದೇ ತಾನೆ ಕೆಲಸ. ಪ್ರೇಯಸಿಯ ಜೊತೆಗೂಡಿ ಅಡ್ಡಾಡುತ್ತಾ ಹೂವುಗಳನ್ನು ಪ್ರಿಯೆಗೆ ಮುಡಿಸುವ ಕವಿಯನ್ನು ಇಲ್ಲಿ ಕಾಣುತ್ತಾರೆ. ಹಾಗೆಯೇ ಪ್ರೇಮ ವೈಫಲ್ಯ ಹೊಂದಿದ ಕವಿ ಒಬ್ಬ “ಪ್ರೇಮವು ಸ್ವಪ್ನವು ನಂಬದಿರಿ” ಎಂದು ಹಾಡುವ ಕವಿಯನ್ನು ಕಾಣಬಹುದು ಎನ್ನುತ್ತಾರೆ. ಇದೇ ಕವಿಗಳ ಈ ಸಾಲುಗಳನ್ನು ಇಲ್ಲಿ ನೆನೆಯಬಹುದು.
ಒಲುಮೆಯೊಳಗೊಂದು ನಾವು
ನಮಗಿಲ್ಲ ನೋವು ಸಾವು
ಆದರೆ ಇಲ್ಲಿ ಬರೀ ಕಲ್ಪನೆಯ ಸುಖದ ಲೋಕ ಮಾತ್ರ ಕಾಣುವುದಿಲ್ಲ. ಯುದ್ಧಭೂಮಿಯಲ್ಲಿನ ರಥಗಳ ಓಡಾಟ ಗಜ ಅಶ್ವಗಳ ಕೂಗು ಸೈನ್ಯದ ಮೊರೆ ಹೊಳೆಯುವ ಬಾಣದ ವರ್ಷ ಇದೆಲ್ಲದರಿಂದ ಹರಿಯುವ ರಕುತದ ನದಿ ವಿಜಯದ ಬೊಬ್ಬೆ ಸೋಲಿನ ಗೋಳು ಹಾಗೂ ಶಾಕಿಣಿ ಢಾಕಿಣಿ ಪಡೆಗಳ ಬಾಳನ್ನು ಸಹ ಬಣ್ಣಿಸುವ ಕವಿಯ ಕಥೆಯನ್ನು ಇಲ್ಲಿ ಹೇಳುತ್ತಾರೆ. ಕವಿ ಸುತ್ತಲ ಸಮಾಜಕ್ಕೆ ಸ್ಪಂದಿಸಲೇಬೇಕು ಸ್ಪಂದಿಸಿಯೇ ತೀರುತ್ತಾನೆ ಎನ್ನುವಂತಹ ಭಾವವುಳ್ಳ ಸಾಲುಗಳು ಇವು:
ಕಂದನು ಸತ್ತಿರೆ ದೈವವ ಶಪಿಸುತ
ಚೀರುವ ಮಾತೆಯ ನೋಡುತಲಿ
ಬಣ್ಣದ ಮಾತಲ್ಲಿ ಮಸಣವ ಬಣ್ಣಿಸಿ
ಹೃದಯವ ಕೊರೆಯುವ ಕವಿಯೊಬ್ಬ
ಇದಕ್ಕೆ ತೀರಾ ವಿರೋಧಾಭಾಸ ಎನ್ನುವಂತೆ ರಾಧಾಕೃಷ್ಣರ ಪ್ರೀತಿಯನ್ನು ಬಣ್ಣಿಸುತ್ತಾ ಹೃದಯವನ್ನು ಕುಣಿಸುವ ಕವಿಯನ್ನು ಈ ಸಾಲುಗಳಲ್ಲಿ ಕಾಣಬಹುದು
ಯಮುನೆಯ ಬಂಡೆಯ ಮೇಲ್ಗಡೆ ಮಂಡಿಸೆ ಪಾಲ್ಬೆಳಕಲಿ ಕೊಳಲೂದುತಲಿ
ರಾಧೆಯ ಕರೆಯುವ ಕೃಷ್ಣನ ಬಣ್ಣಿಸಿ,
ಹೃದಯವ ಕುಣಿಸುವ ಕವಿಯೊಬ್ಬ
ಇಷ್ಟೆಲ್ಲಾ ಹೇಳಿ ಆದ ಮೇಲೆ ಕವಿತೆ ಜಗಕ್ಕೆ ಕೊಡುವ ಸಂದೇಶವೇನು? ಅದರಿಂದ ಆಗುವ ಪ್ರಯೋಜನವೇನು ಎನ್ನುವುದು ಈ ಕಡೆಯ ಸಾಲುಗಳಲ್ಲಿ ಮೂಡಿಬರುತ್ತದೆ:
ಸಂಜೆಯ ರಾಗದಿ ಕಾಂಬರು ಕವಿಗಳು
ದೇವನ ಸೃಷ್ಟಿಯ ಸೊಬಗೊಂದ
ಕಬ್ಬಿಗ ತನ್ನಯ ಕವನವ ಹಾಡಲು
ಜಗದಲಿ ಮೂಡುವುದಾನಂದ
ಪ್ರಕೃತಿಯ ಸೊಬಗನ್ನು ತನ್ನ ಮಾತುಗಳಲ್ಲಿ ಬಣ್ಣಿಸಿ ಕವಿಗಳು ಕವನವನ್ನು ಹಾಡಲು ಜಗದಲ್ಲಿ ಆನಂದ ಮೂಡುತ್ತದೆ. ಕಟ್ಟ ಕಡೆಯದಾಗಿ ರಸಿಕರ ಎದೆಯಲಿ ರಸಾನುಭವದ ಅನುಭೂತಿ ಮೂಡಿಸುವುದು ತಾನೆ ಶ್ರೇಷ್ಠ ಕಾವ್ಯದ ಕೆಲಸ ಹಾಗೂ ಲಕ್ಷಣ. ಅದನ್ನೇ ಇಲ್ಲಿ ಒತ್ತಿ ಹೇಳುತ್ತಾರೆ.
ಮೊಟ್ಟ ಮೊದಲ ಕವನದಲ್ಲಿಯೇ ಕವಿ ಕವಿತೆಯ ಉದ್ದೇಶವನ್ನು ತುಂಬಾ ಸುಸ್ವಷ್ಟವಾಗಿ ಕಂಡುಕೊಂಡ ಕವಿಗಳು ತಮ್ಮ ಕಾವ್ಯ ಬದುಕಿನುದ್ದಕ್ಕೂ ಇದೇ ಕಾರ್ಯವನ್ನು ಮುಂದುವರಿಸಿದ್ದಾರೆ. ಅದೇ ಸಂದೇಶವನ್ನು ಕೊಟ್ಟಿದ್ದಾರೆ.
ಕವಿಯ ದೃಷ್ಟಿಯಲ್ಲಿನ ಕಾವ್ಯ ಕಬ್ಬಿಗ ಇಬ್ಬರನ್ನು ಅನೇಕ ಕವನಗಳಲ್ಲಿ ಹೀಗೆ ಮೂಡಿಸುತ್ತಾ ಅಮರರನ್ನಾಗಿಸಿದ್ದಾರೆ. ಇಂತಹ ಕವನಗಳ ಓದು ಮತ್ತು ಅರ್ಥೈಸಿಕೊಳ್ಳುವಿಕೆ ಎರಡು ಜೀವನದ ಸುಕೃತ ಹಾಗೂ ಸೌಭಾಗ್ಯವೆಂದೇ ಭಾವಿಸಿದ್ದೇನೆ.ನಾನುಂಡ ಕಾವ್ಯ ಮಧುವಿನ ಆಸ್ವಾದವನ್ನು ನನ್ನ ಜ್ಞಾನದ ಪರಿಮಿತಿಯಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ.
ಕವಿತೆಯ ಬಗ್ಗೆ ಕೆ ಎಸ್ ನ ಅವರ ಒಂದೆರಡು ಸಾಲುಗಳನ್ನು ಇಲ್ಲಿ ಉಲ್ಲೇಖಿಸಿ ಈ ಲೇಖನ ಮಾಲಿಕೆಯನ್ನು ಸಮಾಪ್ತಗೊಳಿಸುವೆ ಎಲ್ಲರಿಗೂ ಧನ್ಯವಾದಗಳು.
ಯಾವುದನುಭವದ ಸಹಜಕ್ರಾಂತಿಯೋ
ಅದಾಗಲಿ ನನ್ನ ಕಲೆ
ಇಹದ ಪರಿಮಳವಿರದ ಹಾದಿ ಹಿಡಿದು
ಬದುಕು ದುರ್ಬಲವಾಯಿತು
ಕವಿತೆ ನೀರಸವಾಯಿತು
ಇಹದ ತಳಹದಿಯಿಂದ ದಿಟದ ದರ್ಶನವರಳಿ
ಹಂಬಲಿಸಿ ಹಾಡಾಗಬೇಕು
(ಮುಗಿಯಿತು)
ಈ ಲೇಖನ ಸರಣಿಯ ಹಿಂದಿನ ಬರಹ ಇಲ್ಲಿದೆ: https://surahonne.com/?p=45880

ಸುಜಾತಾ ರವೀಶ್ , ಮೈಸೂರು.

