ಬೆಳಕು-ಬಳ್ಳಿ

ಕಾವ್ಯ ಭಾಗವತ 115 : ಭಾಗವತರು

Share Button

ಏಕಾದಶ ಸ್ಕಂದ – ಅಧ್ಯಾಯ – 1
ಭಾಗವತರು

ಭಾಗವತರೆಂದರೆ ಎಂಥವರು
ಅವರ ಧರ್ಮಗಳೇನು
ಇತರರಿಗೂ ಅವರಿಗೂ ಇರುವ
ವೈಕಲಕ್ಷಣಗಳೇನು
ಎಂಬ ಜನಕರಾಜನ ಪ್ರಶ್ನೆಗೆ
ರವಿ ಎಂಬ ಮಹರ್ಷಿ ನೀಡಿದುದತ್ತರವಿದು

ಸಮಸ್ತ ಭೂತಗಳಲ್ಲೂ ತನ್ನಲ್ಲೂ
ಪರಮಾತ್ಮ ಸಾನಿಧ್ಯವ ಕಾಣುತ
ಸರ್ವಭೂತಗಳಿಗೂ ಪರಮಾತ್ಮನೇ
ಆಧಾರವೆಂದು ತಿಳಿದಿರ್ಪನು
ಭಾಗವತರಲ್ಲಿ ಉತ್ತಮನು

ಭಗವಂತನ ಸರ್ವರ ಅಂತರ್ಯಾಮಿ
ಎಂದರಿಯದೆ ಕೇವಲ ದೇವತಾಭಾವನೆಯಲಿ
ಜನರಲಿ ಸ್ನೇಹವ ಕನಿಕರವ
ಶತ್ರುಗಳಲಿ ಉದಾರಭಾವವ ತೋರುವವ
ಭಾಗವತರಲಿ ಮಧ್ಯಮನು

ಯಾವನು ಭಗವಂತನ ಲೋಹ ಕಾಷ್ಟ ಶಿಲಾದಿ
ಅರ್ಚ ಮೂರ್ತಿಗಳ ಮಾತ್ರ ಪೂಜಿಸುತ
ಗೋವು ಮತ್ತಿತರ ಭೂತಗಳಲಿ
ಗೌರವವಿರದೆ ನಿಷ್ಠೂರನಾಗೆ
ಅವನು ಮೂಢ ಭಕ್ತ

ತಾನು ಅನುಭವಿಪ ಇಷ್ಟಾನಿಷ್ಟ ಭೋಗದಲಿ
ಆಶಾಮೋಹಗಳಿಲ್ಲದೆ ನಿರ್ವಿಕಾರ ಮನಸ್ಥಿತಿಯಲಿ
ಸಕಲವೂ ವಿಷ್ಣುಮಾಯೆಯೆಂದು
ತಿಳಿದವ ಉತ್ತಮ ಭಾಗವತನು

ದೇಹದ ಸಹಜ ಧರ್ಮಗಳಾದ
ಉತ್ಮತ್ತಿ ವಿನಾಶಗಳು
ಹಸಿವು ಭಯ ತೃಷ್ಣೆ
ಇಂದ್ರಿಯ ಶ್ರಮಗಳಿಂದ ಮೋಹಗೊಳ್ಳದೆ
ಹರಿಯ ಧ್ಯಾನಿಪ ಭಕ್ತ
ಉತ್ತಮ ಭಕ್ತನೆನಿಸುವನು

ತಾನು ಆಚರಿಸುವ ಕರ್ಮಗಳಿಂದ
ಇತರರಿಗಿಂತ ಅಧಿಕನೆಂಬ
ಅಹಂಭಾವವಿಲ್ಲದವ
ಭಗವತ್‌ ಪ್ರೀತಿಗೆ ಅರ್ಹ
ಯಾವ ಪುಣ್ಯಶಾಲಿಗೆ
ತಾನೂ-ಪರರೂ ತನ್ನದೂ-ಪರರದೂ
ಎಂಬ ಅಹಂಕಾರ ಮಮಕಾರಗಳಿಲ್ಲದೆ
ಸರ್ವಭೂತಗಳಲೂ ಸಮಬುದ್ಧಿಯಲಿ
ಮನಃಶ್ಯಾಂತಿಯ ಪಡೆವನೋ
ಅವನೇ ಭಾಗವತೋತ್ತಮನು

ಬ್ರಹ್ಮಾದಿ ದೇವತೆಗಳಿಗೂ
ದುರ್ಲಭವಾಗಿರ್ಪ ಶ್ರೀಹರಿಯ ಪಾದಾರವಿಂದವ
ತನ್ನ ಪರಮ ಪ್ರಾಪ್ಯವೆಂದು ನಂಬಿ
ಅದ ನಿರಂತರವೂ ಜಪಿಸುತ್ತಾ, ಧ್ಯಾನಿಸುತ್ತಾ
ಅನನ್ಯ ಶರಣಾಗುವವನು
ವೈಷ್ಣವಾಗ್ರಗಣ್ಯನೆನಿಸುವನು
ಆ ಪುಣ್ಯ ಜೀವಿಯ ಹೃದಯದಲಿ
ಭಗವತ್‌ ಪಾದಾರವಿಂದಗಳ
ನಖಕಾಂತಿಯೆಂಬ ಬೆಳದಿಂಗಳು ಪ್ರಕಾಶಿಸೆ
ಕ್ಷುದ್ರ ಕಾಮಗಳ ಪ್ರಸಕ್ತಿ
ಹೇಳಹೆಸರಿಲ್ಲದಂತಾಗುವುದು

ಭಾಗವತರ ಭಗವದ್ಭಕ್ತಿ
ಅನನ್ಯ ಮೋಕ್ಷದಾಯಕ

ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :
https://surahonne.com/?p=45887

-ಎಂ. ಆರ್.‌ ಆನಂದ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *