ಬೆಳಕು-ಬಳ್ಳಿ

ಕೆ ಎಸ್ ನ ದೃಷ್ಟಿ ಸೃಷ್ಟಿಯಲ್ಲಿ ಕವಿ ಕವಿತೆ : ಭಾಗ 8

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಈ ಪಯಣದ ಮುಂದಿನ ಹೆಜ್ಜೆ ‘ಎದೆ ತುಂಬಾ ನಕ್ಷತ್ರ‘ ಕವನ ಸಂಕಲನದ “ಕವಿತೆ” ಎಂಬ ಕವಿತೆ. ಇದರಲ್ಲಿ ಕವಿ ಕವಿತೆ ಬರೆಯಲು ಏನೇನು ಬೇಕು ಅದು ಹೇಗಿರಬೇಕು ಹಾಗೆ ಅದು ಒಂದು ಆತುರದ ಪ್ರತಿಫಲವಲ್ಲ ಸಹನೆ ತಾಳ್ಮೆಯಿಂದ ಕಾದ ಕಾಯುವಿಕೆಯ ಫಲ ಎಂದು ವರ್ಣಿಸುತ್ತಾರೆ.

ಬಿಡುವು ಒಂದೇ ಸಾಕೆ ಪದ್ಯ ಬರೆಯುವುದಕ್ಕೆ?
ಮೊದಲ ಸಾಲಿನಲ್ಲಿ ಈ ಪ್ರಶ್ನೆಯನ್ನು ಹಾಕುತ್ತಾ ಹೀಗೆ ಮುಂದುವರೆಯುತ್ತಾರೆ:
ಅದಕ್ಕೆ ಕಾಗದ ಬೇಕು, ಕಪ್ಪುಮಸಿಯು ಬೇಕು ಭಾವಗಳು ತಾವಾಗಿ ಲೇಖನಿಗಿಳಿಯಬೇಕು ಹೃತ್ಕಮಲದಿಂದ.

ಕಾಗದ ಲೇಖನಿ ಲೌಕಿಕ ಪರಿಕರಗಳಾದರೆ ಮುಖ್ಯವಾಗಿ ಬೇಕಾಗಿದ್ದು ಹೃದಯದ ಭಾವನೆಗಳು ಅದನ್ನೇ ಅವರು ಭಾವಗಳು ಹೃತ್ಕಮಕದಿಂಸ ದಿಂದ ಲೇಖನಿಗೆ ಇಳಿಯಬೇಕು ಎಂದು ಹೇಳುವುದು.

ಬಾಳಿನ ನೋವು ನಲಿವುಗಳು
ಮಾತಿಗೆ ಒಲಿಯಬೇಕು. ಚೆಲುವು ಒಲವುಗಳು
ತಾನಾಗಿ ಅರಳಿರಬೇಕು ದುಃಖ ಸೇತುವೆಯ
ದಾಟಿದ ಒಳದನಿಯ ಆಹ್ವಾನವು ಕವಿಗೆ ಇರಬೇಕು.

ಬದುಕಿನ ಅನುಭವಗಳೇ ಕವಿತೆಗೆ ಮೂಲ ಸ್ಪೂರ್ತಿ ಪ್ರೇರಣೆ. ಈ ಅನುಭವಗಳ ಜೊತೆಗೆ ಸುತ್ತಲಿನ ಚೆಲುವು ಒಲವುಗಳು ಪ್ರೇರಣೆಯಾಗಬೇಕು, ಸ್ಪೂರ್ತಿಯಾಗಬೇಕು. ಅವು ಸಹಜವಾಗಿ ತಾನಾಗಿ ಕವಿತೆಯಲ್ಲಿ ಅರಳಬೇಕು. ಹಾಗೆಯೇ ಎದುರಾದ ದುಃಖದ ವಿಷಾದದ ಒಳದನಿ ಕವಿತೆಗೆ ಆಹ್ವಾನ ನೀಡಬೇಕು. ಸಾಮಾನ್ಯವಾಗಿ ಯಾವಾಗಲೂ ಈ ರೀತಿಯ ಆಳದ ಅನುಭವಗಳು ಮಡುಗಟ್ಟಿದ ವಿಷಾದಗಳು ಕವಿತೆ ಬರೆಯಿಸುತ್ತವೆ ಎನ್ನುವುದು ಕವಿಗಳಿಗೆ ವೇದ್ಯ ಅಲ್ಲವೇ?

ಬರಿಯ ಅನುಭವಗಳೇ ಕವಿತೆಯ ವಸ್ತುವಾಗುವುದಿಲ್ಲ ಕೆಲವೊಮ್ಮೆ ಕಲ್ಪನೆಗಳು ಸಹ ಪದಗಳಾಗಿ ಮೂಡಿ ಕವಿತೆಯ ಜನನವಾಗುತ್ತದೆ. ಆ ಕಲ್ಪನೆಯ ಮೋಡಿ ಹೀಗಿದೆ ನೋಡಿ

ನಡು ಹೊಳೆಯಲ್ಲಿ ಬಂಡೆಯ ಮೇಲೆ
ಹಿಂದೊಮ್ಮೆ ಸ್ವಪ್ನದಲ್ಲಿ ಕಂಡ ರಾಜಕುಮಾರಿ
ವೀಣೆಯನ್ನು ಮಿಡಿಯುತ್ತ ಹಾಡುತ್ತಲಿರಬೇಕು

ಹೀಗೆಯ ಮುಕ್ತ ಚಂದದ ಕವಿತೆಗಳೇ ಹೆಚ್ಚಾಗಿದ್ದರು ಛಂದಸ್ಸು ಕುದುರೆಯ ನಡೆಯಂತೆ ಕುಟ್ಟಿಯುತ್ತಾ ಇದ್ದಾಗ ಕವಿತೆಯ ಅಂದ ಹೆಚ್ಚುತ್ತದೆ ಎಂಬುದು ಕವಿ ಅಂಬೋಣ ಅದನ್ನೇ ಅವರು ಈ ಸಾಲುಗಳಲ್ಲಿ ಹೇಳುತ್ತಾರೆ :

ಛಂದಸ್ಸು ಇರಬೇಕು ಕುದುರೆಗಳ ನಡೆಯಂತೆ
ಕವಿತೆ ಆಲೋಚನಾಮೃತ

ಮನದ ಭಾವಗಳ ಮಂಥನ ಕಲ್ಪನೆಗಳ ಜನನವಾದಾಗ ಹುಟ್ಟುವ ಕವಿತೆ ಈ ಆಲೋಚನೆಗಳ ಅಮೃತವಲ್ಲದೆ ಮತ್ತೆ ಇನ್ನೇನು? ಹುಟ್ಟಿದ ಇಂತಹ ಕವನ ಸುರಭಿ ಓದುಗನ ಎದೆಯಲ್ಲಿ ಹುಣ್ಣಿಮೆಯ ಹೊಂಬೆಳಕಾಗಿ ಕಂಗೊಳಿಸುತ್ತದೆ. ಹನಿಯಲ್ಲಿ ಹೊಳೆ ಆಗುತ್ತದೆ . ಅದೇ ಈ ಸಾಲುಗಳಲ್ಲಿ ಹೀಗೆ ಪ್ರತಿಫಲನವಾಗುತ್ತದೆ. ಕಡೆಯ ಸಾಲುಗಳಲ್ಲಿ ಹೀಗೆ ಹೇಳುತ್ತಾರೆ:

ಕವಿತೆ ಮೂಡುವ ತನಕ ನಾವು ಕಾದಿರಬೇಕು
ನಿಜ ಕಾಯುವಿಕೆಯ ಫಲ ಎಂದಿಗೂ ಮಧುರ ಅಲ್ಲವೇ

ಈ ಮಧುರ ಫಲದ ಕವಿತೆ ಸವಿಯಲು ರಸಿಕರೂ ಕಾಯಲೇಬೇಕು. ಕವಿಯ ಕಣ್ಣಿನಲ್ಲಿ ಕವಿತೆ ಎಂದರೆ ಸಾಮಾನ್ಯವಲ್ಲ ತಕ್ಷಣ ನೋಡಿ ಮಾಯವಾಗುವ ಮಿಂಚೂ ಸಹ ಅಲ್ಲ. ಅತ್ಯಂತ ಸಹನೆಯಿಂದ ಕಾದು ರಚಿಸುವ ಒಂದು ಮಧುರ ಕಾವ್ಯ ತಾಳ್ಮೆಯ ತಪದ ಪ್ರತಿಫಲ ಹಾಗಾಗಿಯೇ ಒಂದೊಂದು ಕಾವ್ಯ ಓದುಗರ ಎದೆಯಲ್ಲಿ ಸದಾ ಅಜರಾಮರ. ಕವಿಗಳ ಮಾಮೂಲಿ ಬೇರೆ ರಚನೆಗಳಿಗಿಂತ ಇದು ಸ್ವಲ್ಪ ವಿಭಿನ್ನವಾಗಿದ್ದು ಮಧ್ಯದಲ್ಲಿ ಪೂರ್ಣ ವಿರಾಮಗಳು ಸಾಮಾನ್ಯವಾಗಿ ಬಂದಿದೆ ಪೂರ್ಣ ಪದ್ಯಕಿಂತ ಗಪದ್ಯವಾಗಿ ಭಾಸವಾಗುವುದು ಇದರ ವಿಶೇಷ.

ಮುಂದಿನ ಕವಿತೆ “ಕವಿತೆಯಾಯಿತು ಮಾತು” ಮೌನದಲ್ಲಿ ಮಾತ ಹುಡುಕುತ್ತಾ ಕವನ ಸಂಕಲನದಿಂದ. ಈ ಕವಿತೆಯಲ್ಲಿ ಕವಿ ತಮ್ಮ ಮಾತುಗಳು ತಮಗೆ ಕವಿತೆಯಾಯಿತು ಎಂಬ ಭಾವವನ್ನು ವ್ಯಕ್ತಪಡಿಸುತ್ತಾ ಅದನ್ನು ಹಂತ ಹಂತವಾಗಿ ಸೃಷ್ಟಿಕರಿಸುತ್ತಾ ಹೋಗುತ್ತಾರೆ. ಮೊದಲಿಗೆ ಮೌನದಲ್ಲಿ ತಾವು ಮಾತನ್ನು ಹುಡುಕುತ್ತಾ ಬಂದಿದ್ದೇವೆ ಎಂದು ಕೇಳಿ ಓದುಗರನ್ನು “ಮಾತು ಸಿಕ್ಕಿತೇ” ಎಂದು ಪ್ರಶ್ನಿಸಬೇಡಿ ಎನ್ನುತ್ತಾರೆ. ಮಳೆಬಿಲ್ಲಿನ ಮೌನ ಪಡುವಣ ಬೆಟ್ಟಗಳ ಮೇಲಿನ ಬೆಳದಿಂಗಳು ತಮ್ಮನ್ನು ಆವರಿಸಿಕೊಂಡಿದೆ ಎನ್ನುತ್ತಾರೆ. ಮುಂದಿನ ಸಾಲುಗಳಲ್ಲಿ ಮಾತಿನ ಅರ್ಥವನ್ನು ಕವಿ ಕವಿತೆಯಾಗಿ ಕಂಡುಕೊಳ್ಳುವ ಪರಿ ಹೀಗಿದೆ:

“ಈ ಮಾತಿಗೀ ಅರ್ಥವಿಹುದೆ? ಎಂದೆ ನಾನು
ದೂರ ತೀರಗಳಲ್ಲಿ ಬೆಳಕ ಕಂಡೆ;
ಬಿದಿರ ಮೆಳೆಗಳ ಒಳಗೆ ತಂಗಾಳಿ ಬೀಸಿತ್ತು,
ಉದಯರಾಗವ ಕಂಡೆ ಮಬ್ಬಿನಲ್ಲಿ

ಪ್ರಶ್ನೆ ಕೇಳುವ ಕವಿಗೆ ತಿಳಿದವರು “ಈ ಮಾತಿಗೀ ಅರ್ಥ ಉಂಟು” ಎಂಬ ಅರಿವನ್ನು ಮೂಡಿಸುತ್ತಾರೆ. ಆಗ ಕವಿಗೆ ಉಂಟಾದ ಭಾವ ಹೀಗೆ ವ್ಯಕ್ತವಾಗಿದೆ:

ನಿಶಬ್ದ ಮೌನದಲ್ಲಿ ನಾನು ಚೆಲುವನು ಕಂಡೆ ನಾನು ನನ್ನನ್ನು ಕಂಡೆ ಒಲವಿನಲ್ಲಿ.

ಕವಿಯವರಿಗೆ ಕಣ್ಣಿನ ದೃಷ್ಟಿ ಹೋದ ಸಂದರ್ಭದಲ್ಲಿ ಕವಿತೆಗಳನ್ನು ಉಕ್ತಲೇಖನ ಹೇಳಿ ಬರೆಸುತ್ತಿದ್ದರು. ಆಗ ಅವರ ಚಿಂತನೆ ಹೀಗೆ ಮೂಡುತ್ತದೆ ಪದಗಳಲ್ಲಿ. ಇಂತಹ ಕಷ್ಟದಲ್ಲೂ ಧನಾತ್ಮಕ ಭಾವವನ್ನು ಕಾಣುವ ಕವಿಗಳ ಮನೋಭಾವ ಇಲ್ಲಿ ವ್ಯಕ್ತವಾಗಿರುವುದು ಈ ಸಾಲಿನಲ್ಲಿ ಹೀಗೆ:

ಕಣ್ಣಿಂಗಿ ಹೋಗಿ ಮಾತುಗಳು ಕಳೆದಿರುವಾಗ
ನಾನು ಮಾತನ್ನು ಕಂಡೆ ನನ್ನೆದೆಯಲಿ;
ಒಲಿದ ಮಾತಿಗೆ ಕೈಯ ಮುಗಿದೆ ಸಂತಸದಿಂದ
ಬೆನ್ನು ತಟ್ಟಿತು ಬದುಕು ಸಂಜೆಯಲ್ಲಿ.

ಮುಂದೆ ಮಾತೆಂಬುದು ಜ್ಯೋತಿರ್ಲಿಂಗವಾಗಿ ಹೊಳೆಯುತ್ತದೆ ಅವರ ಕಣ್ಣ ಮುಂದೆ. ಹಾಗೆಯೇ ಕಟ್ಟು ಹಾಕಿದ ಪಟದ ಚೌಕಟ್ಟಿನ ಆಚೆಗೂ ಅರ್ಥವಿದೆ ಎಂದು ಕಂಡುಕೊಳ್ಳುವಾಗ ಅವರಿಗೆ ಅವರ ಮಾತು ಹಿಡಿತಕ್ಕೆ ಸಿಕ್ಕಿದೆ ಎನಿಸುತ್ತದೆಯಂತೆ. ಹೀಗೆ ಮಾತು ಮಾತುಗಳಲ್ಲಿ ಹೆಜ್ಜೆ ಇಡುತ್ತಾ ಮುಂದೆ ಹೋಗುವಾಗ ಮಾತಿನಾಚೆ ದನಗಾಹಿಗಳನ್ನು ಕಾಣುತ್ತಾರೆ, ಮಾತು ವೀಣೆಯ ಸ್ವರವಾಗುವುದನ್ನು ಕಂಡು ಅಚ್ಚರಿಗೊಳುತ್ತಾರೆ .ಹಾಗೆಯೇ “ಕಂಡದ್ದರಲ್ಲಿ ಕಾಣದ್ದನ್ನು ಕಂಡೆ” ಎಂದು ಹೇಳುತ್ತಾ ತಮ್ಮ ಅನುಭಾವವನ್ನು ಮೆರೆಸುತ್ತಾರೆ. ಕಡೆಗೆ ತಮ್ಮ ಮಾತೇ ಕವಿತೆಯಾಗುವ ಸಾರ್ಥಕ ಕ್ಷಣಗಳನ್ನು ಅವರು ಪದಗಳಲ್ಲಿ ಹಿಡಿದಿಟ್ಟಿರುವುದು ಹೀಗೆ:

ಕಡಲ ತಡಿಯಲಿ ಮಾತು ಬೆಟ್ಟ ಮುಡಿಯಲ್ಲಿ ಮಾತು
ವನವನಾಂತರಗಳಲಿ ಒಲಿದ ಮಾತು;
ಮಾತು_ಧಾತುಗಳಲ್ಲಿ ಕಂಡುಬಂದಿತು ಚೆಲುವು,
ಕವಿತೆಯಾಯಿತು ನನಗೆ ನನ್ನ ಮಾತು

ಈ ಕವನ ಸಂಗ್ರಹಕ್ಕೆ ಮುನ್ನುಡಿ ಕವಿತೆಯನ್ನು ಬರೆದಿರುವ ಶ್ರೀ ಚನ್ನವೀರ ಕಣವಿಯವರು ಹೇಳುವ ಹಾಗೆ:
ಮೌನದಲ್ಲಿ ಮಾತ ಹುಡುಕುತ್ತ ಹೊರಟು
ಕಣ್ಮುಚ್ಚಿ ಕಂಡ ಕವಿತೆ ನೆಲಕಿಳಿದ ನಕ್ಷತ್ರ

ಎಷ್ಟು ಸಮಂಜಸವಾದ ನುಡಿಗಳು ಅಲ್ಲವೇ? ಹಾಗೆಯೇ ಅದೇ ಕವನದ ಈ ಕಡೆಯ ಸಾಲುಗಳು ಅದೆಷ್ಟು ಅರ್ಥಪೂರ್ಣ ನೋಡಿ:

ಬೆಳಗಾದ ಮೇಲೆಯೂ ಬೆಳಗ ಕಂಡ ವಿಚಿತ್ರ
ದಾರಿಯಲಿ ಹಂಚಿದ ಬುತ್ತಿ ಸಂಸಾರ ಸಾರ
ನೆಲಕೆ ಭಾರವೇ ಸ್ವಾಮಿ, ಆ ಮುಗಿಲಿಗಾಧಾರ

ಕವಿಗಳ ವ್ಯಕ್ತಿತ್ವವನ್ನು ಅವರ ಕವಿತೆಗಳ ಒಟ್ಟು ಸಾರವನ್ನು ಬಣ್ಣಿಸಲು ಇದಕ್ಕಿಂತ ಹೆಚ್ಚಿನ ಸಮರ್ಥ ಪದಗಳು ಇಲ್ಲವೇ ಇಲ್ಲ ಎಂದೆನಿಸುತ್ತದೆ.

(ಮುಂದುವರಿಯುವುದು)
ಈ ಲೇಖನ ಸರಣಿಯ ಹಿಂದಿನ ಬರಹ ಇಲ್ಲಿದೆ: https://surahonne.com/?p=45849

ಸುಜಾತಾ ರವೀಶ್ , ಮೈಸೂರು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *