(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮುಂದಾಗಬಹುದಾದ ಅನಾಹುತವನ್ನು ಊಹಿಸಿ ಭಾರ್ಗವಿ ತಡಮಾಡದೆ “ಎಷ್ಟು ಅವಸರವೇ ನಿನಗೆ, ನಾನಿನ್ನೂ ಈ ವಿಷಯವಾಗಿ ಏನನ್ನೂ ಅವರಿಗೆ ಹೇಳಿಲ್ಲ. ನಾನು ರಿಟೈರ್ ಆದಮೇಲೆ ಇಲ್ಲಿನ ಕೆಲಸಗಳೆಲ್ಲ ಪೂರ್ತಿಯಾಗಬೇಕಾದರೆ ಸಮಯ ಬೇಕು. ಸುಮಾರು ಆರು ತಿಂಗಳಾದರೂ ಬೇಕಾಗಬಹುದು. ಆನಂತರ ನನ್ನ ತಲೆಯೊಳಗೆ ಕುಳಿತಿರುವ ಯೋಜನೆಗಳನ್ನು ಸಮಯ ಬಂದಾಗ ಹೇಳೋಣವೆಂದು ಅಂದುಕೊಂಡಿದ್ದೆ. ರೀ ನೀವು ತಪ್ಪು ಭಾವಿಸಬೇಡಿ. ಈಗ ತಿಂಡಿ ತೊಗೊಳ್ಳಿ ತಿನ್ನಿ. ಟೀ ತಣ್ಣಗಾಯಿತೇನೋ ಬಿಸಿ ಮಾಡಿಕೊಂಡು ತರುತ್ತೇನೆ” ಎಂದು ಮೇಲೆದ್ದ ಭಾರ್ಗವಿಯನ್ನು ತಡೆದ ಸಿದ್ಧಾರ್ಥ.
“ಅಷ್ಟೇಕೆ ಗಾಭರಿಯಾಗುತ್ತೀ, ನಾನೇನೂ ತಪ್ಪು ತಿಳಿದುಕೊಂಡಿಲ್ಲ. ನೀನೇ ಹೇಳಿದಂತೆ ಇನ್ನೂ ಆರು ತಿಂಗಳಿದೆಯಲ್ಲ. ಅಗ ನೋಡೋಣ. ಬಿಸಿ ಮಾಡೋದೇನೂ ಬೇಡ.” ಎಂದು ಟೀ ಲೋಟವನ್ನು ಕೈಗೆತ್ತಿಕೊಂಡು ಗಟಗಟನೆ ಕುಡಿದು “ಇಲ್ಲೇ ನನ್ನ ಗೆಳೆಯನೊಬ್ಬನನ್ನು ನೋಡಿಕೊಂಡು ಊಟದ ಹೊತ್ತಿಗೆ ಬರುತ್ತೇನೆ” ಎಂದು ಅವರುಗಳ ಉತ್ತರಕ್ಕೆ ಕಾಯದೆ ಹೊರನಡೆದನು ಸಿದ್ಧಾರ್ಥ.
ಅವನು ಹೋದಮೇಲೆ ಗೇಟು ಭದ್ರಪಡಿಸಿ ಒಳಬಂದಳು ಭಾರ್ಗವಿ. “ದೇವಿಕಾ ನನ್ನ ಮನಸ್ಸಿನಲ್ಲಿ ಮೂಡಿದ್ದ ವಿಚಾರಗಳನ್ನು ನಾನಿನ್ನೂ ಬೇರೆ ಯಾರಿಗೂ ಹೇಳಿಲ್ಲ, ಹಂಚಿಕೊಂಡೂ ಇಲ್ಲ. ನಿನ್ನನ್ನೂ ಸೇರಿಸಿಕೊಂಡು ಅಂಥಹ ಯೋಜನೆಯ ಬಗ್ಗೆ ಹೇಗೆ ಹೇಳಿದೆ. ಸಿದ್ಧಾರ್ಥ ತಡಬಡಾಯಿಸಿಬಿಟ್ಟರು. ಇದರ ಪರಿಣಾಮ ಮತ್ಯಾವಾಗಲೋ ಅವರ ಬಾಯಿಂದ ಹೊರಬರಬಹುದು. ಅದು ಯಾವರೂಪ ಹೊಂದಿ ಬರುತ್ತದೋ ಗೊತ್ತಿಲ್ಲ. ಅವರ ಸ್ವಾಭಿಮಾನಕ್ಕೆ ಇದರಿಂದ ಧಕ್ಕೆ” ಎಂದು ಹೇಳುತ್ತ ಖಾಲಿಯಾಗಿದ್ದ ತಟ್ಟೆ ಲೋಟಗಳನ್ನು ಎತ್ತಿಕೊಂಡು ಒಳನಡೆದಳು.
“ ನೋಡಿದಿರಾ ಬಾಲು, ನಿಮ್ಮ ಗೆಳೆಯರ ವರಸೆ. ಅಕ್ಕ ಊರಿಗೆ ಬರಲು ಅದೇಕೆ ಇವರು ಅಡ್ಡಗಾಲು ಹಾಕುತ್ತಿದ್ದಾರೆ. ಈಗಲಾದರೂ ಒಟ್ಟಿಗೆ ಇರಬಹುದು ಎಂದು ಸಂತೋಷಪಡುವುದು ಬಿಟ್ಟು ಹೀಗೆ ಇಲ್ಲದ ಕಾರಣಗಳನ್ನು ಮುಂದಿಟ್ಟುಕೊಂಡು” ಎಂದಳು ದೇವಿಕಾ.
ಹೆಂಡತಿ ಹೇಳಿದ್ದನ್ನು ಕೇಳಿ ಬಾಲು “ಹೂಂ.. ನನ್ನ ತಂಗಿ ಒಂದು ಕ್ಷಣವೂ ಸುಮ್ಮನೆ ಕೂಡುವವಳಲ್ಲ. ಈಗ ನೀನು ಸುಮ್ಮನೆ ಒಂದು ಲಹರಿ ಹರಿಯಬಿಟ್ಟೆಯಲ್ಲ, ಹಾಗೇನಾದರೂ ಆಗಿಬಿಟ್ಟರೆ ಈ ಸೋಮಾರಿಗೆ ಪೆಟ್ಟು ಬೀಳುತ್ತದೆಲ್ಲಾ. ಆಗಿಂದಾಗ್ಗೆ ಮೈಸೂರಿಗೆ ಎಡತಾಕುತ್ತ ಆ ಪುಂಡ ಪಟಾಲಂಗಳ ಜೊತೆಗೂಡಿ ಮೋಜುಮಸ್ತಿ ಮಾಡುವುದಕ್ಕೆ ಸಂಚಕಾರ ಬರಬಹುದೂಂತ ಇರಬಹುದು. ಅವನ ಅಕ್ಕನ ಗಂಡ ತೀರಿಕೊಂಡು ಹೋದಾಗಿನಿಂದ ಅಲ್ಲಿಗೆ ಓಡಾಟ ಮಾಡುವುದು ಹೆಚ್ಚಾಗಿದೆ. ಅಗತ್ಯಕ್ಕಿಂತಲೂ ಹೆಚ್ಚಾಗತೊಡಗಿದೆ. ನನಗನ್ನಿಸುವುದು ಅದಕ್ಕೆಲ್ಲ ಕಡಿವಾಣ ಬೀಳುತ್ತದೆ ಎಂದು. ಈ ಎಲ್ಲ ಕಾರಣಗಳೂ ನನ್ನ ಕಣ್ಮುಂದೆ ಸುಳಿದಾಡುತ್ತಿವೆ. ದೇವಿಕಾ ಹೇಗಾದರೂ ಭಾರ್ಗವಿಯು ಊರಿಗೆ ಬರುವಂತೆ ಮಾಡಲೇಬೇಕು. ಈಗಲಾದರೂ ನನ್ನ ಗೆಳೆಯನಿಗೆ ಮೂಗುದಾರ ಬಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಅವನು ಮುರೂಬಿಟ್ಟ ಗೂಳಿಯಂತೆ ಆಗಿಬಿಡುತ್ತಾನೆ. ಮದುವೆಗೆ ಮೊದಲು ನನ್ನ ತಂಗಿಗೆ ಮಾತುಕೊಟ್ಟಂತೆ ನಿಭಾಯಿಸಿದ. ಅದರಲ್ಲಿ ಬೊಟ್ಟು ಮಾಡಿ ತೋರಿಸುವಂತಿಲ್ಲ. ಆದರೆ ನಂತರ ಅವಳಿಂದ ಹಿರಿದದ್ದೆಷ್ಟು? ಸೆಳೆದದ್ದೆಷ್ಟು.? ಲಂಗುಲಗಾಮಿಲ್ಲದೆ ಮೆರೆದದ್ದೆಷ್ಟು? ಹೂಂ ಅವೆರಡೂ ಮಕ್ಕಳ ಜವಾಬ್ದಾರಿಗೆ ಹೆಗಲುಕೊಟ್ಟು ದಡ ಹತ್ತಿಸಿದ್ದರೆ, ಅವರ ಭವಿಷ್ಯದ ಕಡೆಗೆ ಗಮನ ಹರಿಸಿದ್ದರೆ ಸಾಕಿತ್ತು. ಆ ಮಕ್ಕಳೋ ಒಂದಾದ ಮೇಲೊಂದರಂತೆ ಓದುತ್ತಲೇ ಇದ್ದಾರೆ. ತಮ್ಮ ಮದುವೆಯ ಕಡೆಗೆ ಗಮನವೇ ಇಲ್ಲ. ಹಾಗೇ ವಯಸ್ಸು ನಿಲ್ಲುತ್ತದೆಯೇ? ಭಗವಂತನೇ ನನ್ನ ತಂಗಿಯನ್ನು ಕಾಪಾಡಬೇಕು” ಎಂದು ನಿಡಿದಾದ ಉಸಿರುಬಿಟ್ಟ ಬಾಲಕೃಷ್ಣ.
ಅಷ್ಟೊಂದು ನಿರಾಶರಾಗಬೇಡಿ, ಏನಾದರೂ ಮಾಡಿದರಾಯಿತು. ಅಕ್ಕ ಒಬ್ಬರೇ ಅಡುಗೆ ಮಾಡುತ್ತಿದ್ದಾರೆ. ನಾನು ಹೋಗಿ ಸ್ವಲ್ಪ ಸಹಾಯ ಮಾಡುತ್ತೇನೆ” ಎಂದು ಅಡುಗೆ ಮನೆಯತ್ತ ಹೆಜ್ಜೆ ಹಾಕಿದಳು ದೇವಿಕಾ.
ಇತ್ತ ಮನೆಯಿಂದ ಹೊರಬಿದ್ದ ಸಿದ್ಧಾರ್ಥ ಸ್ವಲ್ಪ ದೂರದಲ್ಲಿದ್ದ ಚಿಕ್ಕ ಪಾರ್ಕಿನ ಬೆಂಚಿನಮೇಲೆ ಕುಳಿತುಕೊಂಡ. ಅವನ ತಲೆ ಕುದಿಯುತ್ತಿರುವ ಕಡಾಯಿಯಂತಾಗಿತ್ತು. ಹೇಗಾದರೂ ಮಾಡಿ ಭಾರ್ಗವಿಯು ಊರಿಗೆ ಬರದಿರುವಂತೆ ಮಾಡಬೇಕು. ಅಲ್ಲಿಗೆ ಅವಳು ಬಂದರೆ ನನಗೇನು, ಏಕೋ ಊಹಿಸಿಕೊಳ್ಳಲೂ ಆಗುತ್ತಿಲ್ಲ. ಅವಳೇ ಹೇಳಿದಂತೆ ರಿಟೈರ್‌ಮೆಂಟ್ ಫಾರ್ಮಾಲಿಟೀಸ್ ಮುಗಿಯಲು ಆರುತಿಂಗಳಾದರೂ ಬೇಕು. ಅಷ್ಟರಲ್ಲಿ ಏನಾದರೂ ಉಪಾಯ ಯೋಚಿಸಿದರಾಯ್ತು. ಮಕ್ಕಳಿಗೋ ಊರಿನ ಬಗ್ಗೆ ಅಷ್ಟಕ್ಕಷ್ಟೇ. ಅವರುಗಳ ಮೂಲಕವೇ ಏನಾದರೂ.. ಹೌದು ಅದೇ ಸರಿ..ಹೀಗೆ ಆಲೋಚಿಸುತ್ತ ಕೈಗಡಿಯಾರದತ್ತ ನೋಡಿದ. ಗಂಟೆ ಆಗಲೇ ಎರಡರ ಮೇಲಾಗಿತ್ತು. ಇಲ್ಲ..ನಾನು ಹೀಗೆಲ್ಲ ಆಡಿದರೆ ಅವರುಗಳಿಗೆ ಅನುಮಾನ ಬಂದೀತು. ಸಹಜವಾಗಿರಬೇಕೆಂದುಕೊಂಡು ಮನೆಯ ಕಡೆ ಹೆಜ್ಜೆ ಹಾಕಿದ.
ಅಡುಗೆಯನ್ನೆಲ್ಲ ಮುಗಿಸಿ ಮುಚ್ಚಿಟ್ಟು ದೇವಿಕಾಳೊಂದಿಗೆ ಹಾಲಿಗೆ ಬಂದಳು ಭಾರ್ಗವಿ. ಮುಂಬಾಗಿಲು ತೆರೆದು ಅತ್ತಿತ್ತ ದೃಷ್ಟಿ ಹಾಯಿಸುತ್ತ ಮನಸ್ಸಿನಲ್ಲಿ “ಈ ಪುಣ್ಯಾತ್ಮ ಎಲ್ಲಿ ಹೋದರಪ್ಪಾ, ಇನ್ನೂ ಬರಲಿಲ್ಲವಲ್ಲ. ನಾಳೆ ನನ್ನ ಬೀಳ್ಕೊಡುಗೆ ಸಮಾರಂಭಕ್ಕೆ ಬನ್ನಿರೆಂದಾಗ ಮಾತಿಗೆ ಮನ್ನಣೆಕೊಟ್ಟು ಬಂದರೆಂಬ ಖುಷಿಯಿತ್ತು. ದೇವಿಕಾ ಆಡಿದ ಮಾತಿನಿಂದ ಏನಾದರೂ ವಿಶೇಷವಾಗಿ ಅರ್ಥೈಸಿಕೊಂಡು.. ತನಗೇನೂ ಆಗಿಲ್ಲವೆಂದು ಹೇಳಿದರು. ಆದರೆ ಅಂತರಂಗದಲ್ಲಿ ಏನನ್ನೋ ಯೋಚಿಸಿ ಕೋಪಗೊಂಡು ಊರಿಗೆದ್ದುಬಿಟ್ಟರೆ ! ಹೀಗೆ ಎಷ್ಟೋ ಬಾರಿ ಮಾಡಿದ್ದಿದೆ. ಇಲ್ಲ ಈ ಸಾರಿ ಹಾಗೆ ಮಾಡಲಾರರು, ಅದೂ ಅವರ ಬಾಲ್ಯ ಗೆಳೆಯನ ಮುಂದೆ..”
ಅಷ್ಟೊತ್ತಿಗೆ ದೂರದಲ್ಲಿ ಸಿದ್ಧಾರ್ಥ ಬರುತ್ತಿರುವುದು ಕಾಣಿಸಿತು. ತಕ್ಷಣ ತನ್ನ ಊಹಾಪೋಹಗಳಿಗೆ ತೆರೆಯೆಳೆದು ಊಟಕ್ಕೆ ಸಿದ್ಧತೆಗಳನ್ನು ಮಾಡಲು ಒಳಬಂದಳು.
ಬಂದವನೇ ಬಟ್ಟೆ ಬದಲಾಯಿಸಿ ಕೈಕಾಲುಮುಖ ತೊಳೆದು ಊಟಕ್ಕೆ ಕುಳಿತ ಸಿದ್ಧಾರ್ಥ. “ಏನೇನು ಸ್ಪೆಷಲ್ ಮಾಡಿದ್ದೀರಾ ಅತ್ತಿಗೆ ನಾದಿನಿ ಸೇರಿಕೊಂಡು?” ಎಂದು ವಿಚಾರಿಸಿದ. “ಹೋಳಿಗೆ, ಚಿತ್ರಾನ್ನ, ಕೋಸಂಬರಿ, ತೊಂಡೇಕಾಯಿ ಪಲ್ಯ, ಹೋಳಿಗೆಸಾರು, ಹಪ್ಪಳ, ಉಪ್ಪಿನಕಾಯಿ, ಮೊಸರು, ಕುಡಿಯಲು ತಿಳಿಮಜ್ಜಿಗೆ” ಎಂದುತ್ತರಿಸಿದಳು ದೇವಿಕಾ. “ಇದರಲ್ಲಿ ನನ್ನ ಪಾತ್ರ ಬರಿಯ ಸಹಾಯ ಮಾತ್ರ. ಅಕ್ಕ ಸಾಕಷ್ಟು ತಯಾರಿ ಮಾಡಿಬಿಟ್ಟಿದ್ದರು. ಮಿಕ್ಕ ಅಲ್ಪಸ್ವಲ್ಪದ್ದಕ್ಕೆ ಕೈಜೋಡಿಸಿದ್ದಷ್ಟೇ” ಎಂದಳು.
ಗೆಳೆಯರಿಬ್ಬರೂ ಲೋಕಾಭಿರಾಮವಾಗಿ ಮಾತನಾಡುತ್ತ ಊಟ ಮುಗಿಸಿ ಎದ್ದುಹೋದರು. ನಂತರ ಅತ್ತಿಗೆ ನಾದಿನಿಯರು ಒಬ್ಬರಿಗೊಬ್ಬರು ಉಪಚಾರ ಮಾಡುತ್ತ ತಾವೂ ಊಟವನ್ನು ಮುಗಿಸಿ ಮಿಕ್ಕದ್ದನ್ನು ಎತ್ತಿಟ್ಟು ಅಡುಗೆ ಕೋಣೆಯಿಂದ ಹೊರಬಂದರು.
ಭಾರ್ಗವಿಯು ತನ್ನ ಗಂಡ ಮತ್ತೆ ಯಾವುದೇ ವರಸೆಯನ್ನೂ ತೆಗೆಯದೆ ನಗುನಗುತ್ತ ಇದ್ದದ್ದು ಕಂಡು “ಸದ್ಯ ಗೆದ್ದೆ, ಉಳಿದದ್ದನ್ನು ರಾತ್ರಿಗೆ ಮೀಸಲಿಟ್ಟಿರಬಹುದು, ಊಹುಂ..ಸಂಜೆಗೆ ಹಿರಿಯ ಮಗಳು ಆಗಮಿಸುತ್ತಾಳೆ. ಆಗ ಇಂತಹ ಸುದ್ಧಿ ತೆಗೆಯಲಾರರು. ಅವಳ ಮುಂದೆ ತಮ್ಮ ದೊಡ್ಡತನ ತೋರಿಸಿಕೊಳ್ಳಬೇಕಲ್ಲ. ಹಿಂದಿನಿಂದ ಹೀಗೇ ತಾನೇ ನಡೆದುಕೊಂಡು ಬಂದಿರುವುದು. ಅದಕ್ಕೇ ಅಲ್ಲವೇ ನಾನು ಎಷ್ಟೆ ಆಕ್ಷೇಪಿಸಿದರೂ ಮಕ್ಕಳು ಅಪ್ಪನನ್ನು ಬಿಟ್ಟುಕೊಡುವುದಿಲ್ಲ” ಎಂದುಕೊಂಡಳು.
ಸಂಜೆಗೆ ಮಾಲಿನಿಯ ಆಗಮನವಾಯಿತು. ಮನೆಯಲ್ಲಿ ಗಲಗಲ ಸಂತಸದ ಹೊನಲು ಭಾರ್ಗವಿಯ ನಿರೀಕ್ಷೆಗೂ ಮೀರಿತು. ಸಮಾರಂಭದಲ್ಲಿಯೂ ಸಿದ್ದಾರ್ಥ ಬಹಳ ಡಿಗ್ನಿಫೈಡ್ ಆಗಿ ನಡೆದುಕೊಂಡನು. ಅಣ್ಣ, ಅತ್ತಿಗೆ, ಮಗಳು, ಇನ್ನೊಬ್ಬ ಮಗಳೂ ಇದ್ದಿದ್ದರೆ ಎಂದು ಮನಸ್ಸು ಬಯಸಿತ್ತು. ಗೆಳತಿ ಸುಮನಾ ಸೋದರಿಯರೊಡಗೂಡಿ ಬಂದಿದ್ದಳು. ಮೈಸೂರಿಗೆ ಮೊಟ್ಟಮೊದಲು ಬಂದಾಗ ಮನೆ ಬಾಡಿಗೆ ನೀಡಿದ್ದ ಕುಟುಂಬದವರೂ ಬಂದಿದ್ದರು. ಮತ್ತೆ ಕೆಲವು ಹಿತೈಷಿಗಳು ಸೇರಿದ್ದರು. ಅಬ್ಬಾ ! ಆಕ್ಷಣ ಮರೆಯಲಾಗದಂತಿತ್ತು. ಕೆಲವು ಕೆಟ್ಟ ಕುತೂಹಲಿಗಳಿಗೆ, ಕುಹಕಿಗಳಿಗೆ ಉತ್ತರ ಸಿಕ್ಕಿತ್ತು. ಇದು ಭಾರ್ಗವಿಗೆ ಸಮಾಧಾನ ತಂದಿತ್ತು. ವಿದೇಶದಲ್ಲಿದ್ದ ಮಗಳಿಂದ ಶುಭಾಶಯ ಸಂದೇಶವೂ ಫೋನಿನ ಮೂಲಕ ಬಂದಿತ್ತು. ಅವಳ ಆನಂದವನ್ನು ಹೆಚ್ಚಿಸಿತ್ತು.
ಮಾರನೆಯ ದಿವಸ ಎಲ್ಲರೂ ಹೊರಟು ನಿಂತಾಗ ಭಾರ್ಗವಿ ಸಿದ್ಧಾರ್ಥನಿಗೆ “ನೀವಾದರೂ ಒಂದೆರಡು ದಿನ ಇದ್ದುಹೋಗಿ” ಎಂದಳು. “ಹೂಂ ಹಾಗೇ ಅಂದುಕೊಂಡಿದ್ದೆ. ನೆನ್ನೆ ಅಮ್ಮನಿಂದ ಫೋನ್ ಬಂದಿತ್ತು. ನೀನೇ ನೋಡಿದೆಯಲ್ಲ, ಜಮೀನು ವಹಿಸಿಕೊಂಡವರೇನೋ ತಕರಾರು ಮಾಡುತ್ತಿದ್ದಾರೆ ತಕ್ಷಣ ಹೊರಟು ಬಾ ಎಂದರು. ಅದೇನೆಂದು ನೋಡಿ ಬರುತ್ತೇನೆ. ಯಾವುದಕ್ಕೂ ಫೋನ್ ಮಾಡುತ್ತೇನೆ” ಎಂದು ಹೇಳಿ ಎಲ್ಲರಿಗಿಂತ ಮೊದಲೇ ಹೊರಟುಬಿಟ್ಟ.
ಅಣ್ಣ ಬಾಲಕೃಷ್ಣ, ಅತ್ತಿಗೆ ದೇವಿಕಾ ತಮ್ಮ ಗೆಳೆಯರ ಮನೆಗೆ ಹೋಗಿ ಅಲ್ಲಿಂದ ಹಾಗೇ ಊರಿಗೆ ಹೋಗುತ್ತೇವೆಂದು ಹೇಳಿ ಹೊರಟರು. ಮಗಳು ತಾನು ಹೊಸದಾಗಿ ಸೇರಿರುವ ಕಂಪನಿ..ಅದೂ..ಇದೂ ಎಂದು ಹೇಳಿ ಹೊರಡುವ ತರಾತುರಿ ತೋರಿದಳು. ಎಲ್ಲರನ್ನೂ ಕಳುಹಿಸಿ ಒಳಬಂದ ಭಾರ್ಗವಿ ಇನ್ನೇನು ಸೋಫಾದ ಮೇಲೆ ಕುಳಿತುಕೊಳ್ಳುವುದರಲ್ಲಿ ಮುಂದಿನ ಗೇಟು ತೆರೆದ ಸದ್ದು ಕೇಳಿಸಿತು. ತಕ್ಷಣ ಬಾಗಿಲು ತೆರೆದು ಬಂದವರನ್ನು ನೋಡಿದಳು. ಮನೆಯವರಲ್ಲ, ಒಂದಿಬ್ಬರು ಮಹಿಳೆಯರು ಮತ್ತು ಒಬ್ಬಪುರುಷ. ಗೇಟುಮುಚ್ಚಿ ಒಳಕ್ಕೆ ಬರುತ್ತಿರುವುದು ಕಾಣಿಸಿತು. ಮಹಡಿ ಮನೆಯವರ ಕಡೆಯವರಿರಬೇಕು ಎಂದುಕೊಂಡಳು.
ಅಷ್ಟರಲ್ಲಿ ಅವರು “ನಮಸ್ತೆ ಮೇಡಂ” ಎಂದಿವಳನ್ನೇ ಮಾತನಾಡಿಸಿದಾಗ ಅವರಿಗೆ ಪ್ರತಿವಂದಿಸಿ “ತಾವು ಯಾರು? ತಿಳಿಯಲಿಲ್ಲ” ಎಂದಳು.
“ಹಾಂ, ನಾವು ಇಲ್ಲಿನ ‘ಮಮತಾ’ ಎನ್ನುವ ಅಬಲಾಶ್ರಮದವರು. ನೀವು ಬಾರ್ಗವಿ ಮೇಡಂ ತಾನೇ? ನಿಮ್ಮ ಬಳಿ ಸ್ವಲ್ಪ ಮಾತನಾಡಬೇಕಾಗಿದೆ. ಒಳಗೆ ಬರಬಹುದೇ?” ಎಂದರು.
ಅವರ ಮಾತನ್ನು ಕೇಳಿ ಬಹುಶಃ ಯಾವುದೋ ಚಂದಾ ವಸೂಲಿಗೆ ಬಂದಿರಬಹುದು ಎಂದುಕೊಂಡು“ಬನ್ನಿ ಬನ್ನಿ” ಎಂದು ಪಕ್ಕಕ್ಕೆ ಸರಿದು ಒಳಗೆ ಬರಲು ಅನುವು ಮಾಡಿಕೊಟ್ಟಳು. ಅವರನ್ನು ಕುಳಿತುಕೊಳ್ಳಲು ಹೇಳಿದಳು.
ಬಂದಿದ್ದವರು ಅವರವರೇ ಮೆಲುದನಿಯಲ್ಲಿ ಏನನ್ನೋ ಮಾತನಾಡಿಕೊಂಡು ತಮ್ಮ ಕೈಚೀಲದಿಂದ ಒಂದು ಫೈಲ್ ತೆಗೆದು ಭಾರ್ಗವಿಯ ಮುಂದಿಟ್ಟರು. ಅದನ್ನು ಕಂಡು ಭಾರ್ಗವಿಗೆ ಇವರು ಚಂದಾಕ್ಕಾಗಿಯೇ ಬಂದಿರುವರೆಂದು ಖಚಿತವಾಯಿತು. “ನಿಮ್ಮ ಉದ್ದೇಶ ಪ್ರಯತ್ನ ಎರಡೂ ಸ್ತುತ್ಯವಾದುದೇ. ಸದ್ಯಕ್ಕೆ ನಾನು ಹೆಚ್ಚಿಗೆ ಕೊಡಲಾರೆ” ಎಂದು ಮೇಲೆದ್ದಳು.
ಅವಳನ್ನು ಕುಳಿತುಕೊಳ್ಳುವಂತೆ ಹೇಳಿ ಅವರು “ಮೇಡಂ ನಾವು ನಿಮ್ಮ ಬಳಿಗೆ ಚಂದಾ ವಸೂಲಿಗೆ ಬರಲಿಲ್ಲ. ಅದಕ್ಕಾಗಿ ನಿಮಗೆ ಫೈಲನ್ನು ಕೊಡಲಿಲ್ಲ.” ಎಂದರು.
“ಹಾಗಾದರೆ ಮತ್ತೇನು ಕಾರಣ?” ಕೇಳಿದಳು ಭಾರ್ಗವಿ.
“ನಾವು ಈಗಾಗಲೇ ಹೇಳಿರುವಂತೆ ನಮ್ಮ ‘ಮಮತಾ’ ಅಬಲಾಶ್ರಮದ ಹೆಣ್ಣುಮಕ್ಕಳಿಗೆ ಸ್ವಯಂ ಉದ್ಯೋಗ ತರಬೇತಿ ನೀಡುತ್ತಿದ್ದೇವೆ. ಈ ಸಾರಿ ಅಲ್ಲಿ ಮಕ್ಕಳಿಗಾಗಿ ಒಂದು ಶಾಲೆ ಪ್ರಾರಂಭಿಸಲು ಉದ್ದೇಶಿಸಿದ್ದೇವೆ. ತಾವು ಶಿಕ್ಷಣಕ್ಷೇತ್ರದಲ್ಲಿ ಕೆಲಸ ಮಾಡಿ ಅನುಭವಿಗಳಾಗಿರುವುದರಿಂದ ಕೆಲವು ಸಲಹೆಗಳು ಹಾಗೂ ಇದಕ್ಕೆ ಸರ್ಕಾರದ ವತಿಯಿಂದ ಏನೇನು ಸೌಲಭ್ಯಗಳನ್ನು ಪಡೆಯಬಹುದು? ಇದಕ್ಕೆ ಯಾವ ಕ್ರಮವನ್ನು ಅನುಸರಿಸಬೇಕು ಎಂಬುದರ ಬಗ್ಗೆ ನಮಗೆ ತಿಳಿವಳಿಕೆ ನೀಡಬೇಕು. ತಾವು ಡಿ.ಡಿ.ಪಿ.ಐ., ಹುದ್ದೆಯಲ್ಲಿದ್ದು ನಿವೃತ್ತಿ ಹೊಂದಿದ್ದೀರಿ. ನಿಮ್ಮ ಮಾತು ವಿದ್ಯಾಇಲಾಖಾ ವಲಯದಲ್ಲಿ ನಡೆಯುತ್ತದೆ ಎಂದು ನಿಮ್ಮ ಪರಿಚಯದವರೊಬ್ಬರು ನಮಗೆ ಹೇಳಿದರು. ತಾವು ಒಳ್ಳೆಯ ಹೆಸರು ಗಳಿಸಿದ ಅಧಿಕಾರಿಗಳು ಎಂದು ತಿಳಿದುಬಂತು. ದಯವಿಟ್ಟು ನಮಗೆ ಮಾರ್ಗದರ್ಶನ ಮಾಡಿ ಮೇಡಂ. ಓಡಾಟಗಳಿಗೆಲ್ಲ ನಾವು ಖರ್ಚುವೆಚ್ಚಗಳನ್ನು ಭರಿಸುತ್ತೇವೆ. ಇಲ್ಲವೆನ್ನಬೇಡಿ ಪ್ಲೀಸ್” ಎಂದು ಪ್ರಾರ್ಥಿಸಿಕೊಂಡರು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://surahonne.com/?p=45864

-ಬಿ.ಆರ್.ನಾಗರತ್ನ, ಮೈಸೂರು
