ವ್ಯಕ್ತಿ ಪರಿಚಯ

ಮಡ್ಡೀಕೆರೆ ಗೋಪಾಲ್ ಅವರಿಗೆ ಅವರೇ ಸಾಟಿ

Share Button

ಮಡ್ಡೀಕೆರೆ ಗೋಪಾಲಣ್ಣ ಭೌತಿಕವಾಗಿ ಕಣ್ಮರೆಯಾಗಿದ್ದಾರೆಯೇ ಹೊರತು ಮಾನಸಿಕವಾಗಿ ನಮ್ಮಿಂದ ಎಂದೂ ದೂರವಾಗಲೂ ಸಾಧ್ಯವೇ ಇಲ್ಲ. ಅವರ ಹಾಸ್ಯಭರಿತ ಮಾತುಗಳು, ನಾಡು ನುಡಿ ನೆಲ ಜಲ ಭಾಷೆಯ ಬಗೆಗಿದ್ದ ಒಲವು, ಯಾರ ಮನಸ್ಸನ್ನೂ ನೋಯಿಸದ ಸುಸಂಸ್ಕೃತ ಸಜ್ಜನಿಕೆ ಮೇಳೈಸಿದ ಗುಣದೊಡನೆ ಬದುಕನ್ನು ಬಹಳ ಹತ್ತಿರದಿಂದ ನೋಡಿದ್ದರಿಂದ ಎಲ್ಲವನ್ನೂ ಅಳೆದೂ ತೂಗಿ ಮಾತನಾಡುವುದನ್ನು ಕರಗತ ಮಾಡಿಕೊಂಡಿದ್ದರು. ಹಿರಿಯರ ಕಾಲುಗಳಿಗೆ ಬಗ್ಗಿ ನಮಸ್ಕರಿಸುತ್ತ ಕಿರಿಯರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾ ಇಡೀ ಸಭಾಂಗಣವನ್ನು ಆವರಿಸಿಕೊಳ್ಳುತ್ತಿದ್ದ ಪರಿ ಕಣ್ಣಿಗೆ ಕಟ್ಟಿದಂತಿದೆ.

ಅವರು ೨೦೦೮ ರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಗೆದ್ದು ವಿಭಿನ್ನವಾದ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಮನವನ್ನು ಸೂರೆಗೊಂಡ ನಂತರ ೨೦೨೧ರಲ್ಲಿ ಮತ್ತೊಮ್ಮೆ ಬಹುಮತದಿಂದ ಆಯ್ಕೆಯಾಗಲು ನಾನೂ ನನ್ನ ಅಳಿಲು ಸೇವೆಯನ್ನು ಸಲ್ಲಿಸಿದ್ದೇನೆಂಬ ತೃಪ್ತಿಯಿದೆ.

ಅವರು ಈ ಬಾರಿ ಆಯ್ಕೆಯಾದಾಗ ಯಾರದೋ ಕೊರಳನ್ನು ಅಲಂಕರಿಸಿದ್ದ ಕಾರ್ಯದರ್ಶಿಯ ಸೇವೆ ಅಚಾನಕ್ಕಾಗಿ ನನಗರಿವಿಲ್ಲದೆ ನನ್ನ ಪಾಲಿಗೆ ಬಂದಾಗ ನಾನೂ ಕೂಡ ಅದನ್ನು ಸ್ವೀಕರಿಸದೆ ನಯವಾಗಿಯೇ ತಿರಸ್ಕರಿಸಿದ್ದೆ. ಆದರೆ ಗೋಪಾಲಣ್ಣ ಬಿಡಲೇ ಇಲ್ಲ. ಕೊನೆಗೂ ನನ್ನನ್ನು ಆಯ್ಕೆ ಮಾಡಿದರು. ಆಮೇಲೆ ನನ್ನ ಕೈಲಾದ ಮಟ್ಟಿಗೆ ಹಲವರಿಗೆ ವೇದಿಕೆಯನ್ನೂ ಕಲ್ಪಿಸಿಕೊಟ್ಟಿದ್ದೇ ಅಲ್ಲದೆ ವಿಭಿನ್ನವಾದ ಕಾರ್ಯಕ್ರಮಗಳನ್ನು ಆಯೋಜಿಸಲು ಅವರು ನನ್ನ ಬೆನ್ನಿಗೆ ನಿಂತು ಪ್ರೋತ್ಸಾಹಿಸಿ ಮುನ್ನುಗ್ಗಲು ಜೊತೆಯಾದ್ದರಿಂದಲೆ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲು ಸಾಧ್ಯವಾಯಿತು.

ನನಗೂ ಅವರಿಗೂ ಸುಮಾರು ವರ್ಷಗಳ ಒಡನಾಟ. ನಾನು ಪ್ರಾರಂಭಿಸಿದ ಸ್ನೇಹ ಸಿಂಚನ ಟ್ರಸ್ಟ್ನ ಬಹುತೇಕ ಕಾರ್ಯಕ್ರಮಗಳಲ್ಲಿ ಅವರ ಉಪಸ್ಥಿತಿ ಇರಲೇ ಬೇಕೆಂಬ ಅಲಿಖಿತವಾದ ಒಪ್ಪಂದ ಆದಂತೆಯೇ ರೂಪುಗೊಳ್ಳುತ್ತಿತ್ತು. ನನಗಂತೂ ಗೋಪಾಲಣ್ಣ ಇಲ್ಲದ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ ಎಂಬಂತಹ ಮನಸ್ಥಿತಿ ಉಂಟಾಗಿದ್ದಂತೆ ಭಾಸವಾಗುತ್ತಿದ್ದುದು ಸತ್ಯ.

ಅವರು ನನ್ನ ಮೊದಲ ಸಾಹಿತ್ಯಾತ್ಮಕ ಕಾರ್ಯಕ್ರಮದಿಂದ ಹಿಡಿದು ಅವರ ಅಗಲಿಕೆಯ ಎರಡು ದಿನಗಳ ಮುಂಚೆ ನಡೆದ ನನ್ನ ನಿರ್ದೇಶನದ ಮನಸ್ಸಿದ್ದರೆ ಮಾರ್ಗ ಚಲನಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭಕ್ಕೂ ಆಗಮಿಸಿ ಅಧ್ಯಕ್ಷತೆ ವಹಿಸಿ ಶುಭ ಕೋರಿದ್ದನ್ನು ಹೇಗೆ ಮರೆಯಲಿ?

ನಾನು 2026 ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದಾಗ ಅವರು ಮೊದಲಿಗೆ ಅದನ್ನು ಲಘುವಾಗಿ ತೆಗೆದುಕೊಂಡರೂ ಸಹ ನನ್ನ ಕರ್ತವ್ಯದ ಶಕ್ತಿಯನ್ನು ಶ್ಲಾಘಿಸುತ್ತಾ ನಿಜಕ್ಕೂ ನಿಮ್ಮ ಪ್ರಯತ್ನ ಯಶಸ್ಸು ನೀಡುತ್ತದೆ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದನ್ನು ನಾನೆಂದೂ ಮರೆಯಲಾಗದು.

ಯಾರಲ್ಲಿ ಏನನ್ನು ಅಪೇಕ್ಷಿಸದೆ ಎಲ್ಲರಿಗೂ ಅವರವರ ಇಚ್ಛೆಗನುಸಾರವಾಗಿ ನಡೆಯುವ ಮನಸ್ಸನ್ನು ತಮ್ಮದಾಗಿಸಿಕೊಂಡಿದ್ದ ಗೋಪಾಲಣ್ಣ ಒಂದು ರೀತಿ ದಂತಕತೆಯೇ ಸರಿ. ಬದುಕಿನುದ್ದಕ್ಕೂ ಬೇರೆಯವರ ಸಂತೋಷಕ್ಕಾಗಿ ತನ್ನ ಬಾಳನ್ನು ಮುಡಿಪಾಗಿಟ್ಟ ಇಂತಹ ಮಹನೀಯರಿಗೆ ಸರಿಸಾಟಿ ಯಾರು ಇಲ್ಲ. ಬಂದಿದ್ದನ್ನೆಲ್ಲಾ ಬಂದಂತೆಯೇ ಸ್ವೀಕರಿಸುವ ಒಂದು ರೀತಿ ಮೌನವಾಗಿ ಎಲ್ಲವನ್ನು ವಿಶ್ಲೇಷಿಸುವ ತಾಕತ್ತನ್ನು ಹೊಂದಿದ್ದ ಗೋಪಾಲಣ್ಣ ಯಾರನ್ನು ದ್ವೇಷಿಸಲೇ ಇಲ್ಲ. ತಮ್ಮ ಮನದಾಳದ ನೋವುಗಳನ್ನು ತನ್ನಲ್ಲೇ ಹುದುಗಿಸಿಕೊಂಡು ಮೇಲೆ ಎಲ್ಲರನ್ನೂ ನಗಿಸಿ ನಗುವ ಕಲೆಯನ್ನು ಕರಗತ ಮಾಡಿಕೊಂಡ ಧೀಮಂತ ಎಂದರೂ ಅತಿಶಯೋಕ್ತಿಯೇನಿಲ್ಲ.

ಯಾವುದೇ ಕಾರ್ಯಕ್ರಮ ಇರಲಿ ಸಭೆ ಸಮಾರಂಭಗಳಿರಲಿ ತನ್ನೆಲ್ಲ ಕೆಲಸಗಳನ್ನು ಬದಿಗಿಟ್ಟು ಅಲ್ಲಿಗೆ ಹಾಜರಾಗುವ ಪ್ರವೃತ್ತಿಯನ್ನು ಮೈಗೂಡಿಸಿಕೊಂಡವರು. ತನ್ನ ಕೈಲಾದ ಮಟ್ಟಿಗೆ ಧನಸಹಾಯವನ್ನು ಮಾಡಿ ಎಲ್ಲರ ಪ್ರೀತಿಗೆ ಪಾತ್ರರಾದವರು. ಕಾರ್ಯಕ್ರಮದ ಆಯೋಜಕದ ಸಂಕಷ್ಟವನ್ನು ಅರಿತು ಅವರು ಕೇಳುವ ಮೊದಲೇ ತನ್ನ ಜೇಬಿನಲ್ಲಿದ್ದುದ್ದನ್ನು ಕೊಡುವಂತಹ ಉದಾರ ಮನಸ್ಸಿನವರು. ಕಾರ್ಯಕ್ರಮಗಳಿಗೆ ಕರೆಯಲಿ ಕರೆಯದೇ ಇರಲಿ ಪತ್ರಿಕೆಗಳಲ್ಲಿ ಕನ್ನಡದ ಕಾರ್ಯಕ್ರಮ ಇದೇ ಎಂದು ಗೊತ್ತಾದ ತಕ್ಷಣ ಅಲ್ಲಿಗೆ ಹಾಜರಾಗಿ ಶುಭ ಹಾರೈಸುವುದನ್ನು ರೂಢಿ ಮಾಡಿಕೊಂಡಿದ್ದವರು. ಕನ್ನಡದ ನಾಡು-ನುಡಿ, ನೆಲ-ಜಲ-ಭಾಷೆ ಎಂಬ ಮಾತು ಬಂದ ತಕ್ಷಣ ಮನೆಯನ್ನು ಮರೆತು ಆ ಕ್ಷಣಕ್ಕೆ ಸ್ಥಳಕ್ಕೇ ಹೋಗಿಬಿಡುವ ಸ್ವಭಾವ ಅವರದು.

ದಿನನಿತ್ಯ ಬೆಳಗ್ಗೆನಿಂದ ರಾತ್ರಿಯವರೆಗೂ ಒಂದೇ ಸಮನೆ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದರೂ ಸಹ ಒಂದಿನಿತೂ ಕುಂದದೆ ಆಯಾಸವನ್ನು ಮರೆತು ಎಲ್ಲರೊಂದಿಗೂ ಬೆರೆಯುವ ಅಪ್ಪಟ ಕನ್ನಡಿಗ. ಮಲೆನಾಡಿನಿಂದ ಬಂದು ಮೈಸೂರಿನಲ್ಲಿ ನೆಲೆ ನಿಂತು ಕನ್ನಡದ ಸಾಹಿತ್ಯಾಭಿಮಾನಿಗಳನ್ನು, ಕನ್ನಡದ ಹೋರಾಟಗಾರರನ್ನು ಒಂದೆಡೆ ಸೇರಿಸಿ ಕನ್ನಡಕ್ಕಾಗಿಯೇ ಬಾಳನ್ನು ಸಮರ್ಪಿಸಿಕೊಂಡ ಕನ್ನಡದ ಕಟ್ಟಾಳು. ನಾನಂತೂ ಅವರಿಗೆ ದಿನಕ್ಕೆರಡು ಬಾರಿಯಾದರೂ ಫೋನ್ ಮಾಡಿ ಕುಶಲೋಪರಿಯನ್ನು ತಪ್ಪದೇ ವಿಚಾರಿಸುವುದನು ವಾಡಿಕೆಯಾಗಿತ್ತು. ಆದರೆ ಈಗ ಅವರಿಲ್ಲ ಎಂಬ ನೋವು ಸದಾ ಕಾಡುತ್ತಲೇ ಇದೆ. ಅವರ ಹೆಸರನ್ನು ಈಗಲೂ ನನಗೆ ಉಚ್ಚರಿಸುವುದನ್ನು ಕಂಡಾಗ ನನ್ನ ಕುಟುಂಬಸ್ಥರು ಅವರಿಲ್ಲ ಎಂಬುದನ್ನು ನನ್ನ ಗಮನಕ್ಕೆ ತರುವುದೂ ಉಂಟು.

77 ನೇ ವಯಸ್ಸಿನಲ್ಲಿ ಅಭಿನಂದನಾ ಗ್ರಂಥವನ್ನು ಹೊರತರಬೇಕೆಂದು ನಾನು ಹಠ ಹಿಡಿದಾಗ ಅದನ್ನು ನಯವಾಗಿ ತಿರಸ್ಕರಿಸಿದ್ದೂ ಇದೆ. ಗೋಪಾಲಣ್ಣ ಯಾರಾದರೂ 70 ವರ್ಷ, 75 ವರ್ಷ ಅಥವಾ 80 ವರ್ಷ ಇದ್ದಾಗ ಮಾಡ್ತಾರೆ ನೀವೇನ್ರೀ ನೀವು ಸುಮ್ಮನೆ ಇರಿ ಅಂತ ಗದರಿದ್ದೂ ಉಂಟು. ಆದರೆ ನಾನು ಪಟ್ಟು ಬಿಡದೆ ಗ್ರಂಥವನ್ನು ತರಲೇ ಬೇಕೆಂದು ನಿಶ್ಚಯಿಸಿ ಮೈಸೂರಿನ ಹಲವಾರು ಸಾಹಿತಿಗಳನ್ನು ಭೇಟಿಯಾಗಿ ಅವರ ಲೇಖನಗಳೊಂದಿಗೆ ಅಭಿನಂದನಾ ಗ್ರಂಥಕ್ಕೊಂದು ರೂಪು ಕೊಟ್ಟಾಗ ಗೋಪಾಲಣ್ಣ ಅಚ್ಚರಿಪಟ್ಟಿದ್ದು ಉಂಟು. ಅಂತೂ ಇಂತೂ ಸಾಧಿಸಿಬಿಟ್ಟರಲ್ಲ ಎಂದು ನಕ್ಕಿದ್ದೂ ಉಂಟು. ನಮ್ಮ ಮನೆಯವರಿಗೆ ಇದೇ ಸಂದರ್ಭದಲ್ಲಿ ಕಣ್ಣಿನ ಆಪರೇಷನ್ ಆಗಿ ಆಟೋದಲ್ಲಿ ಓಡಾಡುತ್ತಿದ್ದಾಗ ನನ್ನ ಕೈಗೆ ಕೆಲವೊಮ್ಮೆ ಜೇಬಲ್ಲಿದ್ದ ಹಣವನ್ನು ಕೊಟ್ಟಿದ್ದನ್ನು ನಾನು ಮರೆಯುವಂತಿಲ್ಲ.

ಅವರ ಅಭಿನಂದನಾ ಗ್ರಂಥದ ಸಮಾರಂಭವಂತೂ ಇಂದ್ರಲೋಕದ ವೈಭವವನ್ನು ನೆನಪಿಸುವಂತಿತ್ತು. ಅಲ್ಲಿ ಬಂದಿದ್ದ ಜನಸ್ತೋಮವೋ ಅವರ ಮೇಲಿನ ಅಭಿಮಾನವನ್ನು ಸಾಬೀತು ಪಡಿಸುವಂತಿತ್ತು. ಮೂರು ಸಾವಿರಕ್ಕೂ ಹೆಚ್ಚು ಕನ್ನಡಾಭಿಮಾನಿಗಳ ಪ್ರೀತಿಯನ್ನು ಕಣ್ತುಂಬಿಕೊಂಡ ತೃಪ್ತಿಯಂತೂ ಅವರಿಗಿದ್ದೇ ಇತ್ತು. ಸಾವಿರಾರು ಜನರಿಗೆ ಒಬ್ಬಟ್ಟಿನ ಊಟದೊಂದಿಗೆ ತಾಂಬೂಲಕ್ಕೂ ವ್ಯವಸ್ಥೆ ಮಾಡಿದ್ದು ನಿಜಕ್ಕೂ ಅವರ ಧಾರಾಳತನಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದುದ್ದಂತೂ ಸತ್ಯ.

ಅವರ ಸಮಾರಂಭದ ದಿನ ಅವರ ಕುಟುಂಬಸ್ಥರು ನೀಡಿದ್ದ ಹೊಸ ಕಾರಿನಲ್ಲಿ ಪಯಣಿಸುವಾಗ ಹಠಾತ್ತನೇ ಅವರ ಡ್ರೈವರ್ ಹೃದಯಾಘಾತಕ್ಕೆ ಒಳಗಾಗಿ ಕುಸಿದಾಗ ಕಾರು ಇದ್ದಕ್ಕಿದ್ದಂತೆ ಹಳ್ಳಕ್ಕೆ ಜಾರಿದಾಗ ಅದರೊಳಗಿದ್ದ ಮಡ್ಡೀಕೆರೆ ಗೋಪಾಲಣ್ಣ ಹಾಗೂ ಅವರ ಮಡದಿ ಡಾ. ಅನುಸೂಯ ಅವರಿಗೂ ಪೆಟ್ಟು ಬಿದ್ದಿತ್ತು. ಗೋಪಾಲಣ್ಣನಿಗೆ ಬಲಗೈ ಭುಜದ ಮೂಳೆಯಲ್ಲಿ ಮುರಿತ ಉಂಟಾಗಿದ್ದು ಅವರು ಕಾರ್ಯದೊತ್ತಡದ ಮಧ್ಯೆ ಅದನ್ನು ಕಡೆಗಣಿಸಿದ್ದಲ್ಲದೆ ಅದನ್ನು ಯಾರಿಗೂ ಹೇಳದೇ ಅದೇ ನಗುಮುಖದಲ್ಲೇ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಆದರೆ ನಮ್ಮೆಲ್ಲರ ಒತ್ತಾಯಕ್ಕೆ ಕಟ್ಟುಬಿದ್ದು ಆಗಾಗ ವಿಶ್ರಾಂತಿ ಪಡೆದರೂ ಅವರ ಕಾರು ಹಾಗೂ ಮರಣಿಸಿದ ಡ್ರೈವರ್ ಇಬ್ಬರಿಗೂ ವಿಮೆ ಮಾಡಿಸಲು ತಡವಾಗಿದ್ದೂ ಕೂಡ ಇವರಿಗೆ ಆಘಾತವನ್ನುಂಟು ಮಾಡಿದ್ದು ಮನದ ಮೂಲೆಯಲ್ಲಿ ಕಂಬನಿಯನ್ನು ಮಿಡಿಯುತ್ತಿದ್ದುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಅರ್ಥವಾಗಿತ್ತು.

ಬಲಗೈಯಲ್ಲಿ ಕೊಟ್ಟಿದ್ದನ್ನು ಎಡಗೈಗೂ ಗೊತ್ತಾಗದಂತೆ ನೀಡುವ ಕಲೆ ಅವರಿಗೆ ಕರಗತವಾಗಿತ್ತು ದಿನಂಪ್ರತಿ ಹತ್ತಾರು ಜನರಿಗೆ ಹೊಟ್ಟೆ ತುಂಬಿಸುವ ಕೆಲಸವನ್ನು ಯಾರ ಅರಿವಿಗೂ ಬಾರದಂತೆ ಕರೆದು ಉಪಚರಿಸುತ್ತಿದ್ದದ್ದು ಅದರಲ್ಲಿ ನಾನು ಕೂಡ ಹಲವಾರು ಬಾರಿ ಭಾಗಿಯಾಗುತ್ತಿದ್ದುದು ನನ್ನ ಮನಸ್ಸಿನಲ್ಲಿ ಇಂದಿಗೂ ನಾಟಿ ಮೈಸೂರಿನ ಯಾವುದೇ ಭಾಗಕ್ಕೆ ಹೋದರೂ ಅವರ ನೆನಪುಗಳು ಕಾಡದೇ ಇರುವುದಿಲ್ಲ . ಅವರ ಮನೆಗೆ ದಿನಂಪ್ರತಿ ಹಲವಾರು ಜನ ಹೋಗಿ ಅವರಿಂದ ಸಹಾಯ ಪಡೆಯುತ್ತಿದ್ದು ಉಂಟು. ಮನೆಯಿಂದ ಹೊರಡುವಾಗಲೇ ಬಹಳಷ್ಟು ಜನ ಅವರ ಬರುವಿಕೆಗಾಗಿ ಕಾದು ಅವರ ಸಹಾಯಕ್ಕಾಗಿ ನಿಲ್ಲುತ್ತಿದ್ದರು. ಆದರೂ ಅವರು ಬೇಸರಿಸಿಕೊಳ್ಳದೆ ಅವರುಗಳನ್ನು ಪಕ್ಕದಲ್ಲಿರುವ ಹೋಟೆಲ್‌ಗೆ ಕರೆದುಕೊಂಡು ಹೋಗಿ ತಿಂಡಿ ಕಾಫಿ ಕೊಡಿಸಿ ಕೈಗೂ ದುಡ್ಡು ಕೊಟ್ಟು ಹೋಗುತ್ತಿದ್ದದ್ದು ನಿಜಕ್ಕೂ ಕಣ್ಣಿಗೆ ಕಟ್ಟಿದಂತೆ ಇದೆ.

ನೋವಿನ ದೋಣಿಯ ಪಯಣಿಗರಾದ ನಾವು ಅವರೊಂದಿಗಿನ ನೆನಪಿನ ಬುತ್ತಿಯನ್ನು ಸದಾ ನಮ್ಮ ಮನದಾಳದಲ್ಲಿ ಉಣಬಡಿಸಿಕೊಳ್ಳುತ್ತಲೇ ಇರಬೇಕಾದ ಸಂದಿಗ್ಧ ಪರಿಸ್ಥಿತಿಗೆ ನಮ್ಮನ್ನು ದೂಡಿ ಕಾಣದ ಲೋಕಕ್ಕೆ ಹೋಗಿಯೇ ಬಿಟ್ಟರು. ಅವರಿಗೆ ಅವರೇ ಸಾಟಿ ಎಂಬುದನ್ನೂ ಮತ್ತೊಮ್ಮೆ ರುಜುವಾತು ಪಡಿಸಿ ಹೋಗಿರುವುದನ್ನು ನೆನೆದಾಗ ಮನಸ್ಸು ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಲೇ ಇರುತ್ತದೆ.

ಮ. ನ. ಲತಾಮೋಹನ್, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *