ಮಳೆಯೆಂದರೆ ನನಗೆ—
ಹೊತ್ತಲ್ಲದ ಹೊತ್ತಿನ ಮಿಂಚಿನ ಹೊಳಪು,
ಅಪ್ಪನ ಸಿಟ್ಟಿನ ರೌದ್ರ ಗುಡುಗು,
ಚಿಂತೆಯ ಮಡುವಿನಲ್ಲಿ
ಕಣ್ಣೀರಾಗಿ ಕರಗುವ ಅಮ್ಮನ ಕರುಳು.
ಮಳೆಯೆಂದರೆ ನನಗೆ—
ಆ ಹೊತ್ತಿನ ಹಸಿವಿಗೆ ಬೇಯಬೇಕಿದ್ದ ಅಗುಳು
ನೆನೆದು ಕೆಸರಾಗಿ,
ಛುಯ್ ಎಂದ ಸದ್ದಿನಲಿ
ಉಸಿರಡಗಿ ಹೊಗೆಯಾಡುವ ಒಲೆ.
ಮಳೆಯೆಂದರೆ ನನಗೆ—
ಕಿತ್ತುಹೋದ ಮಾಡಿನ ತೂತುಗಳಿಂದ
ಎದೆಯ ಗೂಡಿಗೆ ನೇರವಾಗಿ
ಈಟಿಗಳಂತೆ ನಾಟುವ
ಮುಳ್ಳಿನ ಹನಿಗಳ ನರ್ತನ.
ಮಳೆಯೆಂದರೆ ನನಗೆ—
ಸೋರುವ ಹನಿಗಳ ಹಾವಳಿಗೆ
ಅಮ್ಮ ಹತಾಶಳಾಗಿ,
ಅನ್ನದ ಬಟ್ಟಲು, ಸಾರಿನ ಬಟ್ಟಲುಗಳನ್ನು
ಒಂದೊಂದಾಗಿ ಅಡ್ಡವಿಡುವ
ಕರುಳು ಕಿವುಚುವ ಮೂಕಚಿತ್ರ.
ಮಳೆಯೆಂದರೆ ನನಗೆ—
ಕೈಗೆ ಬಂದ ತುತ್ತು ನೆಲಕಚ್ಚಿದಾಗ,
ಬರಿದಾದ ಬೆಳೆಯ ಕಂಡು
ರೈತನ ಕೆಂಪಾದ ಕಣ್ಣಿಂದ
ಹೆದ್ದೆರೆಯಾಗಿ ಉಕ್ಕಿ ಹರಿವ ಪ್ರವಾಹ.
ಮಳೆಯೆಂದರೆ ನನಗೆ—
‘ಇಂದಿನ ಗಂಜಿಗೇನು ಗತಿ?’ ಎಂದು
ಅಡ್ಡಾದಲ್ಲಿ ಕೆಲಸಕ್ಕಾಗಿ ಕಾಯ್ದು,
ಪುಡಿಗಾಸೂ ಸಿಗದೆ
ರೆಕ್ಕೆ ಮುರಿದ ಹಕ್ಕಿಯಂತೆ
ಚಳಿಗೆ ಗಡಗಡ ನಡುಗುವ ಶ್ರಮಿಕರ ಸಂಕಟ.
ಮಳೆಯೆಂದರೆ ಹಲವರಿಗೆ—
ಬೆಚ್ಚನೆಯ ಗಾಜಿನ ಕಿಟಕಿಯಂಚಿನ
ಕಾವ್ಯಮಯ ಸುಂದರ ರಮಣೀಯ ದೃಶ್ಯ;
ಆದರೆ ನನಗಂತೂ—
ಸೋರುವ ಸೂರಿನಡಿ ನಿಂತು,
ನಾಳೆಯ ತುತ್ತಿನ ಚಿಂತೆಯಲ್ಲೇ ಕರಗುವ,
ಬಡತನದ ಎದೆಯೊಳಗಣ ಕಾರ್ಗತ್ತಲ ಮಳೆ.

ತೆಲುಗು ಮೂಲ : ಚಿತ್ತಲೂರಿ
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀ ಮೋಹನ್

