ಪ್ರವಾಸ

ಅಂಡಮಾನ್ ನಲ್ಲಿ ಅಡಿಯಿಟ್ಟು….ಹೆಜ್ಜೆ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಸೆಲ್ಯುಲರ್ ಜೈಲಿನಲ್ಲಿ ಲೇಸರ್ ಪ್ರದರ್ಶನ

ಅಪರಾಧಿಗಳನ್ನು ಹಾಗೂ ರಾಜಕೀಯ ಕೈದಿಗಳನ್ನು ಗಡಿಪಾರು ಮಾಡುವ ಉದ್ದೇಶಕ್ಕಾಗಿ ಬ್ರಿಟಿಷ್ ಸರಕಾರವು 1896ರಲ್ಲಿ ಇದರ ನಿರ್ಮಾಣವನ್ನು ಪ್ರಾರಂಭಿಸಿ 1906ರಲ್ಲಿ ಪೂರ್ಣಗೊಳಿಸಿತು. ಇದರ ರೂಪವು ಸೈಕಲ್ ಚಕ್ರದಲ್ಲಿರುವ ಕಡ್ಡಿಗಳ ರಚನೆಯಂತಿದ್ದು, ಮಧ್ಯಭಾಗದಲ್ಲಿ ಕಾವಲು ಗೋಪುರವಿದೆ. ನಿರ್ಮಾಣದ ಬಳಿಕ, ಇದರಲ್ಲಿ ಏಳು ನೇರ ಕವಲುಗಳು, ಪ್ರತಿ ಕವಲಿನಲ್ಲೂ ಮೂರು ಅಂತಸ್ತುಗಳು ಹಾಗೂ 696 ಕೈದಿಗಳ ಕೊಠಡಿಗಳು ಇದ್ದವು. ಒಂದು ಕಕ್ಷೆಯಿಂದ ಇನ್ನೊಂದು ಕಕ್ಷೆಯಲ್ಲಿರುವ ಕೈದಿಗಳನ್ನು ನೋಡಲಾಗದಂತೆ ಅಥವಾ ಸಂವಹನ ಸಾಧ್ಯವಾಗದಂತೆ ಇರುವ ಸಲುವಾಗಿ, ಒಂದರ ಮುಂಭಾಗವು ಇನ್ನೊಂದರ ಹಿಂಭಾಗವಾಗುವಂತೆ ಈ ಬೃಹದಾಕಾರದ ಕಟ್ಟಡವನ್ನು ಬರ್ಮಾದಿಂದ ತರಿಸಿದ ಎಂಟು ಕೋಟಿಗಳಷ್ಟು ಇಟ್ಟಿಗೆಗಳಿಂದ, 2000 ಕೈದಿಗಳ ಶ್ರಮವನ್ನು ಉಪಯೋಗಿಸಿ ಕಟ್ಟಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಕಾರ್ಯಕರ್ತರನ್ನು ಇಲ್ಲಿ ಬಂಧಿಸಿ ಇಡಲಾಗುತ್ತಿತ್ತು. ಭಾರತದ ಮುಖ್ಯ ಭೂ ಭಾಗವನ್ನು ಸಮುದ್ರದ ಆಳವಾದ ನೀರು ಪ್ರತ್ಯೇಕಿಸಿರುವುದರಿಂದ ಕೈದಿಗಳು ಇಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು. ಅಂತೆಯೇ, ಯಾವುದೇ ರೀತಿಯಲ್ಲಿ ಹೊರಪ್ರಪಂಚದ ಸಂಪರ್ಕವೂ ದುಸ್ಸಾಧ್ಯ. ಆದ್ದರಿಂದ ಇಲ್ಲಿಯ ಶಿಕ್ಷೆಯನ್ನು ‘ಕಾಲಾಪಾನಿ` ಎಂದೂ ಕರೆಯಲಾಗುತ್ತಿತ್ತು.

ಆ ಬಳಿಕ, 1941ರಲ್ಲಿ ಸಂಭವಿಸಿದ ಭೂಕಂಪದಲ್ಲಿ ಈ ಕಟ್ಟಡಕ್ಕೆ ವ್ಯಾಪಕ ಹಾನಿಯುಂಟಾಯಿತು. ಎರಡನೇ ಮಹಾಯುದ್ಧದ ಕಾಲದಲ್ಲಿ ಜಪಾನೀಯರು ಎರಡು ಕವಲುಗಳನ್ನು ಕಿತ್ತು ತೆಗೆದರು. ಸ್ವಾತಂತ್ರ್ಯಾ ನಂತರ 1950ರಲ್ಲಿ ಪಕ್ಕದ ಆಸ್ಪತ್ರೆಯೊಂದಕ್ಕೆ ದಾರಿ ಮಾಡಿ ಕೊಡುವ ಸಲುವಾಗಿ ಇನ್ನೂ ಎರಡು ಕವಲುಗಳನ್ನು ಕೆಡವಲಾಯಿತು. ಈಗ ಉಳಿದಿರುವುದು; 1, 6 ಮತ್ತು 7ನೇ ಕವಲುಗಳು ಮಾತ್ರ. ಇಂದು ಈ ಸಂಕೀರ್ಣವು ರಾಷ್ಟೀಯ ಸ್ಮಾರಕವೆನಿಸಿಕೊಂಡಿದೆ.

ನಾವು ಜೈಲಿನ ಹೊರ ಆವರಣ ತಲಪಿದಾಗ ಪೂರ್ತಿ ಕತ್ತಲಾವರಿಸಿತ್ತು. ಜೈಲು ಕಟ್ಟಡದ ಹೊರಭಾಗವನ್ನು ಬಣ್ಣ ಬಣ್ಣದ ದೀಪಗಳಿಂದ ಬೆಳಗಿಸಲಾಗಿತ್ತು. ಮೊತ್ತ ಮೊದಲ ಬಾರಿಗೆ ಜೈಲಿನ ಕಟ್ಟಡವನ್ನು ನೋಡಿದಾಗ ಖುಷಿಯೊಂದಿಗೆ ಅದೇನೋ ಹೇಳಲಾಗದ ನೋವಿನ ಮಿಶ್ರಭಾವದಿಂದ ಮನ ದುಗುಡಗೊಂಡಿತು. ಒಳಗಡೆ ಅದಾಗಲೇ ದಿನದ ಮೊದಲ ಲೇಸರ್ ಪ್ರದರ್ಶನ ನಡೆಯುತ್ತಿತ್ತು. ಅದು ಮುಗಿದ ಬಳಿಕ ನಮ್ಮ ತಂಡವನ್ನು ಒಳಗೆ ಬಿಡಲು ಇನ್ನೂ ಸ್ವಲ್ಪ ಸಮಯವಿತ್ತು. ಒಮ್ಮೆಗೆ ನಿಗದಿತ ಸಂಖ್ಯೆಯಲ್ಲಿ ಮಾತ್ರ ಜನರನ್ನು ಒಳಗೆ ಬಿಡಲಾಗುತ್ತಿತ್ತು. ಆದ್ದರಿಂದ ಸಮಯ ಕಳೆಯಲು ಅಲ್ಲೇ ಪಕ್ಕದಲ್ಲಿದ್ದ ಹೂದೋಟದೊಳಗೆ ಹೊಕ್ಕೆವು. ಅಲ್ಲಿ, ಜೈಲಿನಲ್ಲಿ ಹುತಾತ್ಮರಾದ ಪ್ರಮುಖ ಸ್ವಾತಂತ್ರ್ಯ ಸೇನಾನಿಗಳ ವಿವರಗಳನ್ನು ಲೋಹದ ಭಿತ್ತಿಯ ಮೇಲೆ ಕೆತ್ತಿ, ಅದನ್ನು ವಿದ್ಯುದ್ದೀಪದಿಂದ ಬೆಳಗಿಸಲಾಗಿತ್ತು. ನಾನು ಎಲ್ಲಾ ಬರೆಹಗಳನ್ನು ಓದಲು ಪ್ರಯತ್ನಿಸಿದರೂ ಸಮಯದ ಅಭಾವದಿಂದ ಸ್ವಲ್ಪ ಕಣ್ಣು ಹಾಯಿಸಿ, ಉಳಿದವುಗಳ ಚಿತ್ರ ತೆಗೆದು ಜೋಪಾನವಾಗಿರಿಸಿದೆ. ನಮ್ಮ ಪ್ರವೇಶದ ಸರದಿ ಬಂದಾಗ, ಒಬ್ಬರಿಗೆ ಪ್ರವೇಶ ದರ ರೂ300/- ತೆತ್ತು ನಮ್ಮ ವಾಹನ ಚಾಲಕ ಬಹಳ ಚಾಕಚಕ್ಯತೆಯಿಂದ ಜನರ ದಟ್ಟ ಗುಂಪಿನೆಡೆಯಲ್ಲಿ ನಮ್ಮನ್ನು ಒಳಗೆ ಕರೆತಂದ ಬಳಿಕ ನಾವು ನಿರಾಳ!

ಮಂದಬೆಳಕಿನಲ್ಲಿ ಜೈಲಿನ ಒಳಾವರಣವು ಹಲವಾರು ಕಟ್ಟಡಗಳಿಂದ ತುಂಬಿದ್ದಂತೆನಿಸಿತು. ನಮ್ಮ ಕುತೂಹಲಕ್ಕೆ ಸರಿಯಾಗಿ ಹೆಚ್ಚೇನೂ ಕಾಣಿಸುತ್ತಿರಲಿಲ್ಲ. ನಮ್ಮನ್ನು ನೇರವಾಗಿ ಪ್ರದರ್ಶನ ನಡೆಯುವ ಸ್ಥಳಕ್ಕೆ ಅಲ್ಲಿದ್ದ ಸಿಬ್ಬಂದಿಗಳು ಕರೆದೊಯ್ದರು. ವಿಶಾಲವಾದ ಬಯಲಿನಲ್ಲಿ ನೂರಾರು ಕುರ್ಚಿಗಳನ್ನು ಓರಣವಾಗಿ ಇರಿಸಲಾಗಿತ್ತು. ಚಾಲಕನ ಮುತುವರ್ಜಿಯಿಂದ ನಮಗೆ ಮುಂಭಾಗದ ಆಸನ ಲಭಿಸಿದಾಗ ನೆಮ್ಮದಿಯೆನಿಸಿತು.

ದಿನದ ಎರಡನೇ ಪ್ರದರ್ಶನವು ಸರಿಯಾಗಿ 6.45ಕ್ಕೆ ಆರಂಭವಾಯಿತು. ನಾವು ಕುಳಿತಿದ್ದ ಬಯಲಿನ ಎರಡೂ ಪಕ್ಕಗಳಲ್ಲಿದ್ದ ಜೈಲಿನ ಕಟ್ಟಡದ ಗೋಡೆ ಮೇಲೆಯೇ ಲೇಸರ್ ಕಿರಣಗಳಿಂದ ದೃಶ್ಯಾವಳಿಗಳು ಮೂಡಿಬರತೊಡಗಿದವು. ಹಿಂದಿಯಲ್ಲಿ ಕೇಳುತ್ತಿದ್ದ ಪೂರಕ ಹಿನ್ನೆಲೆ ಧ್ವನಿ ಹಾಗೂ ಸಂಗೀತ, ವೀಕ್ಷಕರ ಮೇಲೆ ಅತ್ಯಂತ ಗಾಢ ಪರಿಣಾಮ ಬೀರುವಲ್ಲಿ ಯಶಸ್ವಿಯಾದವು. ಆಂಗ್ಲ ಭಾಷೆಯಲ್ಲೂ ಹಿನ್ನೆಲೆ ಧ್ವನಿಯು ಲಭ್ಯವಿರುವುದಾಗಿ ತಿಳಿಯಿತು. ಬ್ರಿಟಿಷರ ದಬ್ಬಾಳಿಕೆ, ಕೈದಿಗಳಿಗೆ ನೀಡುವ ಚಿತ್ರಹಿಂಸೆಗಳು, ಕಾರಾಗೃಹವನ್ನು ಅವರಿಂದ ಕಟ್ಟಿಸುವ ಜೀವಂತ ದೃಶ್ಯಗಳ ಸುಮಾರು 50 ನಿಮಿಷಗಳ ಪ್ರದರ್ಶನವು ಮುಗಿದಾಗ ಎಲ್ಲರ ಮುಖದಲ್ಲೂ ದು:ಖದ ಛಾಯೆ!

ಅಲ್ಲಿಂದ ನಿರ್ಗಮನ ದ್ವಾರದತ್ತ ಹಿಂತಿರುಗುವ ಹಾದಿಯ ಬಲಭಾಗದಲ್ಲಿ ಎತ್ತರಕ್ಕೆ ವಿಶಾಲವಾದ ವೇದಿಕೆಯು ಗೋಚರಿಸಿತು. ಅದರತ್ತ ಹೋಗುವ ದಾರಿಯ ಇಕ್ಕೆಲಗಳಲ್ಲಿ, ಮಾತೃಭೂಮಿಗಾಗಿ ಜೀವತೆತ್ತು ಅಮರರಾದ ವೀರ ಸ್ವಾತಂತ್ರ್ಯ ಹೋರಾಟಗಾರರಿಗಾಗಿ ನಿರಂತರ ಉರಿಯುವ ಎರಡು ಅಮರಜ್ಯೋತಿಗಳನ್ನು ಕಾಣಬಹುದು. ಅಗಲಿದ ದಿವ್ಯಾತ್ಮಗಳಿಗೆ ನಮಿಸುತ್ತಾ ಕೆಲವು ಕ್ಷಣಗಳನ್ನು ಅಲ್ಲಿ ಕಳೆದು, ವೇದಿಕೆಯತ್ತ ನಡೆದೆವು. ಅಲ್ಲಿಯ ಭಿತ್ತಿಗಳಲ್ಲಿ ಅಮರರಾದ ಸೇನಾನಿಗಳೆಲ್ಲರ ಹೆಸರನ್ನು ಕೆತ್ತಲಾಗಿತ್ತು. ಅವರೆಲ್ಲರ ನೋವಿನ ದನಿ ಎಲ್ಲೆಡೆ ಪ್ರತಿಧ್ವನಿಸಿದಂತೆ ಭಾಸವಾಯಿತು… ಭಾರವಾದ ಮನದಿಂದ ಹೊರನಡೆದೆವು. ನಾವು ಉಳಕೊಂಡ ಹೋಟೆಲಿನಲ್ಲಿ ಬೆಳಗ್ಗೆ ಮತ್ತು ರಾತ್ರಿಯ ಆಹಾರ, ಉಚಿತವಾಗಿ ಸೇರ್ಪಡೆಯಾಗಿದ್ದರಿಂದ ಅದೇ ಕಟ್ಟಡದ ಕೆಳಭಾಗದಲ್ಲಿರುವ ರುಚಿ ರೆಸ್ಟೋರೆಂಟಿನಲ್ಲಿ ಅನ್ನ ಸಿಗದಿದ್ದರೂ, ಲಭ್ಯವಿರುವ ರುಚಿಕಟ್ಟಾದ ಜ್ಯೂಸ್, ಹಣ್ಣು, ಚಪಾತಿ ತಿಂದು ರಾತ್ರಿಯೂಟ ಮುಗಿಸಿದೆವು.

ಸುಭಾಷ್ ಚಂದ್ರ ಬೋಸ್ ದ್ವೀಪ (NSCB)

ಮರುದಿನ ಮಂಗಳವಾರ… ಬೆಳಿಗ್ಗೆ ಒಂಭತ್ತು ಗಂಟೆಗೆ ತಿಂಡಿ ಮುಗಿಸಿ, ದ್ವೀಪ ಸಮೂಹದ ಉತ್ತರಕ್ಕಿರುವ ಸಮುದ್ರ ಭಾಗವಾದ ‘ನಾರ್ತ್ ಬೇ’ ಯ ಸಮುದ್ರತೀರಕ್ಕೆ ನಮ್ಮನ್ನು ಕರೆದೊಯ್ಯಲಾಯಿತು. ಮೊದಲೆ ನಿಗದಿಯಾಗಿದ್ದಂತೆ ಇಲ್ಲಿಂದ Ross Island ಎಂಬ ದ್ವೀಪದತ್ತ ಹೋಗುವುದಿತ್ತು. ಇದು 1945ರ ವರೆಗೆ ಅಂಡಮಾನಿನ ರಾಜಧಾನಿಯಾಗಿತ್ತು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸ್ಮರಣಾರ್ಥ ಈ ದ್ವೀಪಕ್ಕೆ ಇತ್ತೀಚೆಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪವೆಂದು, ಪ್ರಧಾನಿ ಮೋದಿಯವರಿಂದ ಪುನರ್ನಾಮಕರಣ ಮಾಡಲಾಗಿದ್ದು; ಇದು ಸಮುದ್ರತೀರದಿಂದ ಯಾಂತ್ರಿಕ ದೋಣಿಯಲ್ಲಿ 15ನಿಮಿಷಗಳ ಪ್ರಯಾಣದ ದೂರದಲ್ಲಿದೆ.

ನಾವು ಸಮುದ್ರ ತೀರಕ್ಕೆ ತಲಪುತ್ತಿದ್ದಂತೆ, ಯಾಂತ್ರೀಕೃತ ದೋಣಿಯ ಮುಖ್ಯಸ್ಥರಿಗೆ ನಮ್ಮನ್ನು ಪರಿಚಯಿಸಲಾಯಿತು. ನಮ್ಮನ್ನು ಬೇರೆ ಪ್ರವಾಸಿಗರ ಜೊತೆ ಸೇರಿಸಿ ಹತ್ತು ಜನರ ತಂಡಗಳನ್ನು ರಚಿಸಿ, ಎಲ್ಲರಿಗೂ ನೀರಿನ ರಕ್ಷಾ ಕವಚವನ್ನು ತೊಡಿಸಿದರು. ಸರತಿ ಸಾಲಿನಲ್ಲಿ ಸಾಗಿ, ಸಿದ್ಧವಾಗಿದ್ದ Blue Sea Ocean ದೋಣಿಯಲ್ಲಿ ನಮ್ಮ ಪ್ರಯಾಣ ಆರಂಭವಾಯಿತು. ಹೋಗುತ್ತಿದ್ದಂತೆ ಬಹುದೂರದಲ್ಲಿ ದ್ವೀಪವು ಗೋಚರಿಸುತ್ತಿತ್ತು. ಆಳ ಸಮುದ್ರದ ಗಂಭೀರ ಅಲೆಗಳ ಮೇಲೆ ತೂಗುತ್ತಾ, ತೊಯ್ದಾಡುತ್ತಾ ರಭಸದಿಂದ ಸಾಗುವ ದೋಣಿ ಓಲಾಡುವಾಗ ಸಹಜವಾಗಿ ಸ್ವಲ್ಪ ಭಯವೆನಿಸಿದರೂ, ರಭಸದಿಂದ ಬೀಸುವ ಗಾಳಿಯೊಂದಿಗೆ ಮುಖಕ್ಕೆ ರಾಚುವ ಉಪ್ಪುನೀರಿನ ತುಂತುರು ಹನಿಗಳು ಮುದನೀಡುತ್ತಿದ್ದವು. ವಿಶಾಲ ಸಾಗರದ ಅನಂತತೆಯನ್ನು ಕಣ್ತುಂಬಿಕೊಳ್ಳುತ್ತಾ ಮೈ ಮರೆಯುವಷ್ಟರಲ್ಲೇ ದೋಣಿಯು ದ್ವೀಪವನ್ನು ತಲಪಿತು. ಆಳ ನೀರಿನ ಪಕ್ಕದಲ್ಲೇ ಪ್ರವಾಸಿಗರಿಗೆ ದೋಣಿಯಿಂದ ಇಳಿಯಲು ಮೆಟ್ಟಲುಗಳಿದ್ದವು. ಅದರ ಮೇಲೆ ಕಾಲಿಡಲು ಭಯವಾದರೂ, ಆ ಕಡೆಯಿಂದ ಭದ್ರವಾಗಿ ಕೈಹಿಡಿದು ಎಳೆದಾಗ ನಾವು ಪಾರಾದೆವು ಎಂಬ ಭಾವನೆ!

ಸುಮಾರು 600ಚ.ಮೀ. ವಿಸ್ತೀರ್ಣದ ಈ ಪುಟ್ಟ ದ್ವೀಪವು ಪೋರ್ಟ್ ಬ್ಲೈರ್ ನಿಂದ ಮೂರು ಕಿ. ಮೀ. ದೂರದಲ್ಲಿದ್ದು, ಜಾಗತಿಕ ಮಹಾಯುದ್ಧದಲ್ಲಿ ಜಪಾನೀಯರಿಂದ ನಾಶ ಹೊಂದಿದ ಇಲ್ಲಿಯ ತಾಣವೇ ಪ್ರವಾಸಿಗರಿಗೆ ಚಾರಿತ್ರಿಕ ಆಕರ್ಷಣೆಯಾಗಿದೆ. ಮುಂಭಾಗದಲ್ಲಿ ಮೊದಲಿಗೆ ಗೋಚರವಾಗುವ “ನೇತಾಜಿ ಸುಭಾಷ್ ಚಂದ್ರ ಬೋಸ್” (NSCB) ಹೆಸರನ್ನು ಹೊತ್ತ ಕಟ್ಟಡದಲ್ಲಿ ಪ್ರವಾಸಿಗರಿಗಾಗಿ ಆಸನಗಳನ್ನು ಅಳವಡಿಸಲಾಗಿದ್ದು, ಮಾರ್ಗದರ್ಶನ ಹಾಗೂ ಸಹಾಯಕ್ಕಾಗಿ ಕೆಲವು ಸಿಬ್ಬಂದಿಗಳ ಲಭ್ಯತೆ ಇದೆ. ಇಲ್ಲಿಯ ಬೇರೆ ಯಾವುದೇ ದ್ವೀಪಗಳಲ್ಲೂ ಕಾಣಸಿಗದಂತಹ ದಷ್ಟಪುಷ್ಟವಾದ ಜಿಂಕೆಗಳು, ಅಲ್ಲಲ್ಲಿ ಮೇಯುತ್ತಿರುವುದನ್ನು ಕಾಣಬಹುದು. ಅವುಗಳ ಮೇಲ್ವಿಚಾರಣೆಗಾಗಿ ಸಿಬ್ಬಂದಿಗಳನ್ನು ನೇಮಿಸಿರುವರು. ಅವುಗಳು ಪ್ರವಾಸಿಗರೊಡನೆ ಸ್ನೇಹದಿಂದ ವರ್ತಿಸುವುದು ಖುಷಿ ಕೊಡುತ್ತದೆ. ದ್ವೀಪದ ಇನ್ನೊಂದು ಕೊನೆಗೆ ಹೋಗಲು ಒಳ್ಳೆಯ ರಸ್ತೆಯಿದ್ದು, ಕಾಲ್ನಡಿಗೆಯಲ್ಲಿ ಹೋಗಬಹುದು. ಆದರೆ, ಏರುದಾರಿಯಾಗಿರುವುದರಿಂದ ಹೆಚ್ಚಿನವರು ಸ್ಥಳೀಯವಾಗಿ ಲಭ್ಯವಿರುವ; ಒಮ್ಮೆಗೆ ಹತ್ತು ಜನರು ಪ್ರಯಾಣಿಸಬಹುದಾದಂತಹ ವಿದ್ಯುತ್ ಚಾಲಿತ ವಾಹನದಲ್ಲಿ ಹೋಗುವರು. ಇದಕ್ಕಾಗಿ ಅಲ್ಲಿಯ ಕೌಂಟರಿನಲ್ಲಿ ಟಿಕೆಟ್ ಪಡೆದು ಸರದಿಗಾಗಿ ಕಾಯಬೇಕಾಗುತ್ತದೆ. ಹೋಗಿ ಬರುವ ಶುಲ್ಕವನ್ನು ಜೊತೆಗೆ ಪಾವತಿಸಿದರೆ, ಅದನ್ನು ಉಪಯೋಗಿಸಿಕೊಂಡು ಅಲ್ಲಿರುವ ಯಾವುದೇ ವಾಹನದಲ್ಲಿ ನಾವು ಪಯಣಿಸಬಹುದಾಗಿದೆ. ಅಲ್ಲಿ ನಮ್ಮ ಸರದಿಗಾಗಿ ಕಾಯುತ್ತಿದ್ದಾಗ, ಸ್ಥಳದಲ್ಲೆ ಕೈಯಲ್ಲಿ ತಯಾರಿಸಿ ಮಾರುತ್ತಿದ್ದ ರುಚಿಯಾದ ಮಲಾಯಿ ಕುಲ್ಫಿಯನ್ನು, ಒಂದಕ್ಕೆ ₹40/-ರಂತೆ ಖರೀದಿಸಿ ಆಸ್ವಾದಿಸುತ್ತಿದ್ದಾಗಲೇ ನಮ್ಮ ವಾಹನ ಬಂದುಬಿಟ್ಟಿತು.

ವಾಹನವು ಕೇವಲ ಐದು ನಿಮಿಷಗಳಲ್ಲಿ ಸಮತಟ್ಟಾದ ಎತ್ತರ ಪ್ರದೇಶದಲ್ಲಿ ನಮ್ಮನ್ನು ತಂದುಬಿಟ್ಟಿತು. ಸುತ್ತಲೂ ಬಿದಿರು, ತೆಂಗಿನ ಮರಗಳ ಹಿಂಡು; ಹೂವಿನ ಗಿಡಗಳು, ಕುಳಿತುಕೊಳ್ಳಲು ಸಿಮೆಂಟಿನ ಆರಾಮಾಸನಗಳು ಕಂಡುಬಂದವು. ಸುಮಾರು ಐವತ್ತು ಮೀಟರ್ ಆಳದಲ್ಲಿರುವ ಕಡಲ ಕಡೆಯಿಂದ ರಭಸವಾಗಿ ಬೀಸಿ ಬರುವ ಗಾಳಿಯು ಬಿಸಿಲ ಧಗೆಯನ್ನು ಕಡಿಮೆಗೊಳಿಸಿತ್ತು. ಅಲ್ಲಿ ಕುಳಿತು ಇವುಗಳನ್ನೆಲ್ಲಾ ಆಸ್ವಾದಿಸಲು ಸಮಯವಿರಲಿಲ್ಲ. ಅಲ್ಲೇ ಮುಂದಕ್ಕೆ ಕೆಳಗಡೆ ಕಡಲತಡಿಯತ್ತ ಹೋಗಲು ದಟ್ಟ ಮರಗಳ ನಡುವೆ ಸೊಗಸಾದ ಮೆಟ್ಟಲುಗಳಿದ್ದವು. ಪ್ರವಾಸಿಗರ ದಟ್ಟಣೆ ಅಲ್ಲಿ ಸ್ವಲ್ಪ ಗೋಚರಿಸಿತು. ಅಗಲವಾದ ಮೆಟ್ಟಲುಗಳ ಇಕ್ಕೆಲಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಸ್ಟೀಲಿನ ಬಲವಾದ ಕಂಬಿ ಬೇಲಿಯನ್ನು ಹಾಕಲಾಗಿತ್ತು. ಅದರಾಚೆಗೆ ಅಲ್ಲಲ್ಲಿ ಸಾಕಷ್ಟು ತೆಂಗಿನಕಾಯಿಗಳು ಅನಾಥವಾಗಿ ಬಿದ್ದಿರುವುದನ್ನು ಕಂಡು ಆಶ್ಚರ್ಯವಾಯಿತು.

ಕಡಲತೀರಕ್ಕೆ ತಲಪಿದಾಗ ಕಂಡ ವಿಹಂಗಮ ದೃಶ್ಯವನ್ನು ಮರೆಯುವ ಹಾಗಿಲ್ಲ! ಎತ್ತ ನೋಡಿದರತ್ತ ಮೂರು ದಿಕ್ಕುಗಳಲ್ಲೂ ವಿಶಾಲವಾದ ಸಾಗರ ಪಸರಿಸಿತ್ತು. ಈ ದ್ವೀಪದ ಕೊನೆಯ ತುದಿ ಇದಾಗಿದ್ದು, ಇಲ್ಲಿ ಸೂರ್ಯನ ಉದಯ ಮತ್ತು ಅಸ್ತ ಎರಡನ್ನೂ ವೀಕ್ಷಿಸಬಹುದಾಗಿದೆ. ಈ ಜಾಗವನ್ನು “ಇಂದಿರಾ ಪಾಯಿಂಟ್” ಎಂದು ಹೆಸರಿಸಲಾಗಿದೆ. ಮುಂಭಾಗದಲ್ಲಿ, ಸ್ವಲ್ಪ ದೂರದಲ್ಲಿ, ಗಾಢ ಕೆಂಪು ಮತ್ತು ಬಿಳಿ ಬಣ್ಣದಿಂದ ಕೂಡಿದ ದೀಪಸ್ತಂಭವು ಎದ್ದು ಕಾಣುತ್ತಿತ್ತು. ಅದರ ಬಳಿಯಲ್ಲಿ ಹುತಾತ್ಮ ಯೋಧರ ನೆನಪಿಗಾಗಿ ಯೋಧನೊಬ್ಬನ ವಿಗ್ರಹವನ್ನು ಎತ್ತರದ ಪೀಠದಲ್ಲಿ ನಿಲ್ಲಿಸಿ ಗೌರವ ಸಲ್ಲಿಸಲಾಗಿದೆ. ಮಧ್ಯಾಹ್ನ ಹನ್ನೊಂದು ಗಂಟೆಯ ಬಿಸಿಲು… ಸರಿಯಾಗಿ ನಿಲ್ಲಲೂ ಸಾಧ್ಯವಾಗದಂತೆ, ಅತ್ಯಂತ ರಭಸದಿಂದ ಬೀಸುವ ಗಾಳಿ. ಮೂರು ಸುತ್ತಲೂ ಕಾಣುವ ಸಾಗರದ ಶುಭ್ರ ನೀರಿನ ಸುಂದರ ಬೆಳ್ನೊರೆಯ ಸೊಗಸನ್ನು ಕಣ್ತುಂಬಿಕೊಳ್ಳುತ್ತಾ ನಿಲ್ಲುವ ಆಸೆಯಾದರೂ, ಬೇಗನೇ ಹಿಂತಿರುಗಬೇಕಿತ್ತು. ವಾಹನ ಬಂದು ನಾವು ಹೊರಟಲ್ಲಿಗೆ ನಮ್ಮನ್ನು ತಲಪಿಸಿತು.
ನಮ್ಮ ದೋಣಿ ಬರಲು ಇನ್ನೂ ಸ್ವಲ್ಪ ಸಮಯವಿದೆ… ಇಲ್ಲೇ ಕೊಂಚ ಅಡ್ಡಾಡೋಣ…ಬನ್ನಿ…

 (ಮುಂದುವರಿಯುವುದು…)

-ಶಂಕರಿ ಶರ್ಮ, ಪುತ್ತೂರು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *