ಏನಿದು ಯುದ್ದ ಎಲ್ಲಡೆ ನಾಶ
ಸುಡುತಲಿ ಬಂದಿದೆ ಜಗವನ್ನು//ಪ//
ಬೇಕಿದೆ ಶಾಂತಿಯ ಹರಡುವ ಹಣತೆಯು
ತೊಡೆಯಲು ಕವಿದಿಹ ತಮವನ್ನು
//ಅ.ಪ//
ಉಗುಳುತ ಕೆಂಡವ ಕಾರುತ ದ್ವೇಷವ
ದಹಿಸಿದೆ ಬುವಿಯನು ಮದದಲ್ಲಿ
ನಾನು ನನ್ನದು ಎಂಬುವ ಸ್ವಾರ್ಥವು
ಉರಿಸಿದೆ ಮತ್ಸರ ಸೊಕ್ಕಿನಲಿ//ಪ//
ಪ್ರಕೃತಿ ನಾಶದ ಅರಿವೇ ಇರದೆ
ನಡೆದಿದೆ ಮನುಜನ ಕಾದಾಟ
ಗಾಳಿಯು ತುಂಬಿದ ಬಲೂನಿನ ತೆರದಲಿ
ನಡೆದಿದೆ ಇವನ ಹಾರಾಟ//ಪ//
ಸುಡುವುದೆ ಸಾಧನೆ ಎಂಬುವ ಮನಸಲಿ
ಎಲ್ಲವ ದಹಿಸುತ ಸಾಗಿಹರು
ಧ್ವಂಸವ ಮಾಡಿ ಬೀಗುತ ಸೊಕ್ಕಲಿ
ತಾವೇ ಉತ್ತಮರು ಎನ್ನುವರು//ಪ//
ಯುದ್ಧದ ದಾಹಕೆ ಸಂಕುಲವೆಲ್ಲ
ರೋಧಿಸಿ ಪ್ರಾಣವ ಬಿಟ್ಟಿಹುದು
ಸುಂದರ ಲೋಕಕೆ ಎಂದೂ ಭರಿಸದ
ನಷ್ಟವೆ ಇಂದಿಗೆ ಆಗಿಹುದು//ಪ//
ಯುದ್ಧವ ನಿಲ್ಲಿಸಿ ಶಾಂತಿಯ ಬದುಕನು
ಸಾಗಿರಿ ಜಗದಲಿ ಒಲವಿನಲಿ
ಶಾಂತಿಗೆ ದೊರೆಯುವ ಮನ್ನಣೆ ಇಳೆಯಲಿ
ಎಲ್ಲಿಯೂ ಇಲ್ಲ ಅರಿವಿರಲಿ//ಪ//
ಶುಭಲಕ್ಷ್ಮಿ ಆರ್ ನಾಯಕ

