ಕಾದಂಬರಿ

ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 36

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಒಂದು ತಿಂಗಳು ಉರುಳಿತು. ವಾರುಣಿ ಯಥಾ ಪ್ರಕಾರ ಓದು, ಮನೆಪಾಠ, ಸೆಮಿನಾರ್‌ಗಳಲ್ಲಿ ತೊಡಗಿಸಿಕೊಂಡಳು. ಒಂದು ದಿನ ಆರಾಧ್ಯ ಸರ್ ಹೇಳಿದರು. “ಬಹುಶಃ ನಾವು ಮುಂದಿನ ತಿಂಗಳು ಹತ್ತನೇ ತಾರೀಕಿನ ನಂತರ ತಿರುಪತಿಯ ವೆಂಕಟೇಶ್ವರ ಯೂನಿವರ್ಸಿಟಿಗೆ ಹೋಗಬೇಕಾಗಬಹುದು. ಈ ಸಲ ಆರು ಮಂದಿ ಪೇಪರ್ ಪ್ರೆಸೆಂಟೇಷನ್‌ಗೆ ಸಿದ್ಧರಾಗಿರಬೇಕು. ಸಾಯಂಕಾಲ ಹೆಸರುಗಳನ್ನು ಹೇಳ್ತೀನಿ. ನೀವು ಟಾಪಿಕ್ ಸೆಲೆಕ್ಟ್ ಮಾಡಿಕೊಂಡು ನನಗೆ ತಿಳಿಸಿ. ಎಲ್ಲರೂ ಒಪ್ಪಿದರು.

ಅಮೃತಾ, ಬಕುಳಾ, ಆರ್.ಜಿ., ಗೋವಿಂದ್ ದೇಶಪಾಂಡೆ, ಶ್ರೀಮತಿ, ಸುಂದರ್‌ರಾಜ್ ತಾವಾಗಿ ಹೆಸರು ಕೊಟ್ಟರು. ಅದೇ ದಿನ ಸಾಯಂಕಾಲ ವರು ಆರ್.ಜಿ.ಯನ್ನು ಕೇಳಿದಳು “ಪೇಪರ್ ಪ್ರೆಸೆಂಟೇಷನ್‌ಗೆ ಯಾವ ಟಾಪಿಕ್ ತೊಗೊಂಡಿದ್ದೀರ?”
“ಯಾವುದಾದರೂ ಎರಡು ಕವಿತೆಗಳನ್ನು ಆರಿಸಿಕೊಳ್ತೇನೆ.”
“ಯಾವ ಕವಿತೆಗಳು?”
“ಗೊತ್ತಿಲ್ಲ. ನೋಡಬೇಕು….”
ಅವನು ಹೇಳಲು ಇಷ್ಟಪಡುತ್ತಿಲ್ಲವೆಂದು ಅವಳಿಗೆ ಅರ್ಥವಾಯಿತು. ಇವತ್ತಲ್ಲ ನಾಳೆ ಗೊತ್ತಾಗುತ್ತದೆ” ಎನ್ನಿಸಿತು.
ಸಾಯಂಕಾಲ ಆರಾಧ್ಯ ಸರ್ ಆರು ಜನರನ್ನು ತಮ್ಮ ಛೇಂಬರ್‌ಗೆ ಕರೆದರು. ವಾರುಣಿ ಮನೆಗೆ ವಾಪಸ್ಸಾದಳು.
“ಆರ್.ಜಿ. ಯಾವ ಟಾಪಿಕ್ ಆರಿಸಿಕೊಂಡಿದ್ದಾನೆ?”
“ಗೊತ್ತಿಲ್ಲ ಆಂಟಿ.”

“ಸಧ್ಯ ನೀನು ಆಯ್ಕೆಯಾಗಲಿಲ್ಲವಲ್ಲಾ ಅದೇ ಸಂತೋಷ.”
“ಯಾಕೋ ತಿರುಪತಿಗೆ ಹೋಗುವ ಮೂಡ್ ಇಲ್ಲ ಆಂಟಿ. ದೂರಪ್ರಯಾಣ ಬೇಡ ಅನ್ನಿಸ್ತಿದೆ. ಬೆಂಗಳೂರಿಗೆ ಹೋಗಿ ಅಮ್ಮನ ಜೊತೆ ನಾಲ್ಕು ದಿನ ಇರಬೇಕು ಅಂತ ಮನಸ್ಸಾಗಿದೆ.”
“ನೀನು ಹೋಗದಿದ್ರೆ ಖಂಡಿತಾ ನಿನ್ನ ಫ್ರೆಂಡ್ಸ್ ಬೇಜಾರು ಮಾಡಿಕೊಳ್ತಾರೆ. ಹೈದರಾಬಾದ್‌ಗೂ ಹೋಗ್ತೀರಾ?”
“ಎಲ್ಲರೂ ಹೋಗೋಣಾಂತಿದ್ದಾರೆ. ಹೋದರೂ ರಾಗಿಣಿಗೆ ತೊಂದರೆ ಕೊಡಲು ನನಗಿಷ್ಟವಿಲ್ಲ. ಅವಳಿಗೆ ಇನ್ನೇನು ಡೇಟ್ ಅಲ್ವಾ?”
“ಮುಂದಿನವಾರ ಡೇಟ್ ಕೊಟ್ಟಿದ್ದಾರೆ. ಸತ್ಯಮ್ಮ ಹೋಗಿದ್ದಾರಂತೆ. ಡೆಲಿವರಿ ಆದಮೇಲೆ ಮಡಿಕೇರಿಗೆ ರ‍್ಕೊಂಡು ಹೋಗ್ತಾರಂತೆ. ನೀನು ಮಡಿಕೇರೀಲಿ ಇದ್ದಾಳೆ ಅಂತ ಹೇಳಿಬಿಡು.”
“ಮೊದಲು ಅವಳನ್ನು ಪ್ರಿಪೇರ್ ಮಾಡಬೇಕು.”
“ನೀನು ಅವಳ ಜೊತೆ ಮಾತಾಡು.”

ಅವಳು ತಕ್ಷಣವೇ ರಾಗಿಣಿಗೆ ಫೋನ್ ಮಾಡಿದಳು.
“ನೀವೆಲ್ಲಾ ಬನ್ನಿ. ನಮಗೇನು ತೊಂದರೆಯಿಲ್ಲ” ಎಂದಳು ರಾಗಿಣಿ.
“ಒತ್ತಾಯ ಮಾಡಬೇಡ ರಾಗಿಣಿ. ನೀನು ಮಡಿಕೇರಿಗೆ ಬಂದಮೇಲೆ ಮಗೂನ್ನ ನೋಡಲು ನಾನು ಚಂದ್ರಾ ಆಂಟಿ ಬರ‍್ತೇವೆ. ಎಲ್ಲರ ಜೊತೆ ಬಂದರೆ ನನಗೆ ನಿನ್ನ ಹತ್ತಿರ ಮಾತಾಡಕ್ಕಾಗಲ್ಲ. ದಯವಿಟ್ಟು ತಪ್ಪು ತಿಳಿಯಬೇಡ.”
“ಸರಿ ಕಣೆ. ಹೇಗಿದ್ದಾನೆ ನಿನ್ನ ಹೀರೋ?”
“ಯಾವ ಹೀರೋ?”
“ನಮ್ಮ ಆರ್.ಜಿ. ಸಾಹೇಬರು. ನೀನು ನರ್ಸಿಂಗ್ ಹೋಂನಲ್ಲಿದ್ದಾಗ ತುಂಬಾ ಚೆನ್ನಾಗಿ ನೋಡಿಕೊಂಡರಂತೆ. ಆಗ ತಿರುಪತಿಗೆ ಹರಕೆ ಹೊತ್ತಿದ್ದನಂತೆ. ಅದನ್ನು ತೀರಿಸಲು ನಾಳೆ ತಿರುಪತಿಗೆ ಹೊರಟಿದ್ದಾನಂತೆ.”
“ನಿನಗೆ ಯಾರು ಹೇಳಿದ್ರು?”
“ಚಂದ್ರಾ ಆಂಟಿ ಹೇಳಿದ್ರು…”
“ನನಗೆ ಈ ವಿಚಾರ ಗೊತ್ತಿಲ್ಲ ಕಣೆ.”
“ಅವನು ನಿನ್ನ ಪ್ರೀತಿಸ್ತಿದ್ದಾನೆ. ನಿನಗೆ ಅವನಿಗಿಂತ ಒಳ್ಳೆಯ ಹುಡುಗ ಸಿಗುತ್ತಾನಾ?”
“ನೋ ಕಾಮೆಂಟ್ಸ್.”
“ಪರವಾಗಿಲ್ಲ. ಬದಲಾಗ್ತಿದ್ದೀಯ ಅನ್ನಿಸತ್ತೆ. ಮೊದಲು ಏನಾದರೂ ಹೇಳಿದರೆ ಜವಾಬ್ದಾರಿಯಿದೇಂತ ಬಾಯಿ ಮುಚ್ಚಿಸ್ತಿದ್ದೆ. ಈಗ………”
“ನಾನು ಕಾಲ್ ಕಟ್ ಮಾಡ್ತೀನಿ.”

ಅವಳು ಕಾಫಿ ಡಿಕಾಕ್ಷನ್ ಹಾಕಿತ್ತಿದ್ದಾಗ ಬಕುಳಾ, ಅಮೃತಾ ಬಂದರು.
“ನಾನು ಮೊದಲು ಪ್ರಿಪೇರ್ ಆಗಿದ್ನಲ್ಲಾ ಅದೇ ಟಾಪಿಕ್ ತೆಗೆದುಕೊಂಡೆ” ಅಮೃತಾ ಹೇಳಿದಳು.
“ನಾನು ಡಿಸ್ಕವರಿ ಆಫ್ ಇಂಡಿಯಾ ಅಥವಾ ಮೈ ಎಕ್ಸ್ಪೆರಿಮೆಂಟ್ ವಿತ್ ಟ್ರೂತ್‌ನಲ್ಲಿ ಒಂದು ಚಾಪ್ಟರ್ ತೆಗೆದುಕೊಳ್ತೇನೆ.”
“ಮೈ ಎಕ್ಸ್ಪೆರಿಮೆಂಟ್ಸ್ ವಿತ್ ಟ್ರೂತ್ ಬೆಟರ್ ಅನ್ನಿಸತ್ತೆ. ನೆಹರೂ ಅವರದು ಕಬ್ಬಿಣದ ಕಡಲೆ.”
“ಓ.ಕೆ. ಆರ್.ಜಿ ಎರಡು Poems ತೊಗೊಂಡಿದ್ದಾರೆ. Poems on Love. ಒಂದು ಕ್ಯುಮಿನ್ಸ್ದು, ಇನ್ನೊಂದು ರಾಬರ್ಟ್ ಬರ್ನ್ಸ್ದು….”
“I see”
“ನಿನಗೆ ಗೊತ್ತಿರಲಿಲ್ಲವಾ?”
“ನೆನ್ನೆ ಕೇಳಿದೆ. ಹೇಳಲಿಲ್ಲ. ಹೇಗಾದರೂ ಗೊತ್ತಾಗತ್ತಲ್ಲಾಂತ ಸುಮ್ಮನಾದೆ.”
ಆರ್.ಜಿ. ಸಾಯಂಕಾಲ ಬರಲಿಲ್ಲ. ಮರುದಿನವೂ ಬರಲಿಲ್ಲ. ವಾರುಣಿಗೆ ರಾಗಿಣಿಯಿಂದ ವಿಷಯ ಗೊತ್ತಾಗಿದ್ದರಿಂದ ಸುಮ್ಮನಿದ್ದಳು.

ತಿರುಪತಿಗೆ ಹೋಗುವ ದಿನ ಹತ್ತಿರವಾಯಿತು. ಈ ಮಧ್ಯೆ ಅನಿಕೇತ್ ಫೋನ್ ಮಾಡಿ ಶುಭವಿಚಾರ ಹೇಳಿದ್ದ.
“ನನ್ನ ಹುಡುಗಿ ಜೊತೆ ಮದುವೆ ಸೆಟ್ಲ್ ಆಯ್ತು. ಈ ತಿಂಗಳು ಮಂಗಳೂರಿನಲ್ಲಿ ಎಂಗೇಜ್‌ಮೆಂಟ್. ನೀನು ಬರಲೇಬೇಕು.”
“ಕಾಲೇಜ್‌ನಿಂದ ಟೂರ್ ಪ್ರೋಗ್ರಾಂ ಇದೆ. ಕ್ಲಾಶ್ ಆಗದಿದ್ರೆ ರ‍್ತೀನಿ. ಮದುವೆ ಯಾವಾಗ?”
“ನಾಲ್ಕು ತಿಂಗಳ ನಂತರ……”
“ಓ.ಕೆ. ಆಲ್ ದ ಬೆಸ್ಟ್……..”
ಆರ್.ಜಿ. ಎರಡು ದಿನಗಳಲ್ಲಿ ವಾಪಸ್ಸು ಬಂದ. ನಂತರ ಶನಿವಾರ ತಮ್ಮ ಊರಿಗೆ ಹೊರಟ.
“ನಮ್ಮನೆಯವರಿಗೆ ಪ್ರಸಾದ ಕೊಟ್ಟು ಬರ‍್ತೀನಿ. ಪ್ರಸಾದ ತಲುಪಿಸದಿದ್ರೆ ಎಲ್ಲರೂ ರೌದ್ರಾವತಾರ ತಾಳುತ್ತಾರೆ.”
“ಆಯ್ತಪ್ಪ ಹೋಗಿ ಬಾ. ಯಾರು ಬೇಡಾಂದ್ರು?”

ಅವನು ಸೋಮವಾರ ಊರಿಗೆ ಬಂದ. ಕಾಲೇಜ್‌ನಲ್ಲಿ ಸಿಕ್ಕಿದರೂ ವಾರುಣಿಯನ್ನು ಮಾತನಾಡಿಸಲಿಲ್ಲ. ವಾರುಣಿಗೆ ಆಶ್ಚರ್ಯವಾದರೂ ಸುಮ್ಮನಿದ್ದಳು. ಮನೆಗೆ ಬಂದ ಮೇಲೂ ಆರ್.ಜಿ. ವಿಚಾರ ಮಾತನಾಡದೆ ಸುಮ್ಮನಿದ್ದಳು. ಸುಮಾರು 7 ಗಂಟೆಗೆ ಆರ್.ಜಿ. ಬಂದ ಮುಖ ಊದಿತ್ತು.
“ಆಂಟಿ ನಾನು ನಿಮ್ಮಿಬ್ಬರ ಜೊತೆ ಮಾತನಾಡಬೇಕು. ದಯವಿಟ್ಟು ಬನ್ನಿ.”
ಇಬ್ಬರೂ ಬಂದು ಅವನೆದುರು ಕುಳಿತರು.
“ನೀವಿಬ್ಬರೂ ನಮ್ಮ ಹಳ್ಳಿಗೆ ಬಂದಾಗ ನಾವು ಮನೆಯಲ್ಲಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲವಾ? ಯಾರಾದ್ರೂ ಅವಮಾನ ಮಾಡಿದ್ರಾ?”
“ಯಾರು ಹಾಗೆ ಹೇಳಿದ್ದು?”
“ಯಾರು ಯಾಕೆ ಹೇಳಬೇಕು? ನಿಮಗೆ ಅಸಹನೆ ಕೋಪ ಇದ್ದಿದ್ದರಿಂದಲೇ ನೀವು ಕೀರ್ತಿ, ಅವನ ಹೆಂಡತಿ ಮೈಸೂರಿಗೆ ಬಂದಾಗ ಅವಮಾನ ಮಾಡಿದ್ದೀರ.”
“ಏನು ಅವರು ಮೈಸೂರಿಗೆ ಬಂದಿದ್ರಾ?”
“ಅವರು ಮೈಸೂರಿಗೆ ಬಂದು ನಾಗರಾಜ ಅವರ ಮನೆಗೆ ಊಟಕ್ಕೆ ಹೋಗಿದ್ದರಂತೆ. ನಿಮಗೆ 10 ಸಲ ಫೋನ್ ಮಾಡಿದ್ರೂ ನೀವು ಕಾಲ್ ರಿಸೀವ್ ಮಾಡಿಲ್ಲ. ಯಾಕೆ ಹೀಗೆ ಮಾಡಿದ್ರಿ?”
“ಗೊತ್ತಿಲ್ಲ. ನನಗೆ ತಿಳಿದಂತೆ ನಮಗೆ ಕಾಲ್ ಬಂದಿಲ್ಲ.”
“ಕೀರ್ತಿಗೆ ಕಾಲ್ ಮಾಡಿಕೊಡಿ………” ವರು ಹೇಳಿದಳು. ಅವನು ಕಾಲ್ ಮಾಡಿಕೊಟ್ಟ.

“ನಮಸ್ಕಾರ ಕೀರ್ತಿಯವರೆ ಹೇಗಿದ್ದೀರಾ?”
“ನಾನು ಆರಾಮವಾಗಿದ್ದೇನೆ. ನೀವು ಹೇಗಿದ್ದೀರಾ? ನಿಮಗೆ ಹುಷಾರಿಲ್ಲದ ಕಾರಣ ಮದುವೆಗೆ ಬರಕ್ಕಾಗಲಿಲ್ಲಾಂತ ಬೇಜಾರಾಯಿತು.”
“ಮೈಸೂರಿಗೆ ಬಂದಿದ್ದವರು ಇಲ್ಲಿಗೆ ಯಾಕೆ ಬರಲಿಲ್ಲ?”
“ನಾವು ಫೋನ್ ಮಾಡಿದ್ರೆ ನೀವು ಕಾಲ್ ರಿಸೀವ್ ಮಾಡಲಿಲ್ಲವಲ್ಲಾ……..”
“ನೀವು ಮಾಡಿದ್ರಾ ಶರು ಮಾಡಿದ್ದಳಾ?”
“ಶರು ಮಾಡಿದ್ದಳು.”
“ಶರೂಗೆ ಫೋನ್‌ಕೊಡಿ…”
ಅವಳು ಫೋನ್ ತೆಗೆದುಕೊಂಡು “ಹಲೋ” ಎಂದಳು.
“ನಾನು ವರು. ನೀನು ನಮಗೆ ಫೋನ್ ಮಾಡಿದ್ದೆಯಾ? ಎಷ್ಟು ಸಲ ಮಾಡಿದ್ದೆ? ನೀನು ಫೋನ್ ಮಾಡಿದ್ದರೆ ನಮ್ಮದರಲ್ಲಿ Missed Call ಇರಬೇಕು ತಾನೆ?”
“ನಾನು ಮಾಡಿಲ್ಲಾಂತ ಹೇಳ್ತಿದ್ದೀಯಾ?”
“ಹೌದು ನೀನು ಮಾಡಿಲ್ಲ. ಅಣ್ಣ-ತಮ್ಮನ ನಡುವೆ ಜಗಳ ತಂದು ಹಾಕಲು ಪ್ರಯತ್ನಪಡ್ತಿದ್ದೀಯ……”
“ನಾನ್ಯಾಕೆ ಹಾಗೆ ಮಾಡಲಿ?”
“ಅಹಂಕಾರ ಜಾಸ್ತಿಯಾಗಿದೆ ಅದಕ್ಕೆ. ಇನ್ನು ಹತ್ತು ನಿಮಿಷಗಳಲ್ಲಿ ನೀನು ನಿನ್ನ ತಪ್ಪು ಅರ್ಥಮಾಡಿಕೊಂಡು ಚಂದ್ರಾ ಆಂಟಿಗೆ ಫೋನ್ ಮಾಡಿ ಕ್ಷಮೆ ಕೇಳಬೇಕು. ಕ್ಷಮೆ ಕೇಳದಿದ್ದರೆ ನಾನೇ ನಿಮ್ಮ ಅತ್ತೆ-ಮಾವನಿಗೆ ಫೋನ್ ಮಾಡಿ ನೀನು ಬೆಂಗಳೂರಿನಲ್ಲಿ ಅಮ್ಮನ ಜೊತೆ ಹೇಗೆ ನಡೆದುಕೊಂಡೆ, ಈಗ ಏನು ಮಾಡಿದ್ದೀಯ ಹೇಳ್ತೀನಿ.”
“ಏನಾಯ್ತು ವರು?”
“ಹತ್ತು ನಿಮಿಷ ನನ್ನನ್ನು ಯಾರೂ ಮಾತಾಡಿಸಬೇಡಿ.”

ಅಷ್ಟರಲ್ಲಿ ಚಂದ್ರಾವತಿಯ ಫೋನ್ ರಿಂಗಾಯಿತು. ಅವರು ಕಾಲ್ ರಿಸೀವ್ ಮಾಡಿದರು.
“ಹಲೋ ಆಂಟಿ ನಾನು ಶರು……”
“ಓ ನೀನಾ? ಯಾಕಮ್ಮ……” ಅವರು ಮಾತನಾಡುತ್ತಾ ಸ್ಪೀಕರ್ ಆನ್ ಮಾಡಿದರು.
“ದಯವಿಟ್ಟು ನನ್ನನ್ನು ಕ್ಷಮಿಸಿ ಆಂಟಿ. ವರೂಗೆ ಕ್ಷಮಿಸಲು ಹೇಳಿ.”
“ಯಾಕಮ್ಮ ಏನಾಯಿತು?”
“ನಾವು ಮೈಸೂರಿಗೆ ಬಂದಿದ್ದೆವು. ಆದರೆ ನಿಮಗೆ ಕಾಲ್ ಮಾಡಲಿಲ್ಲ. ಕೀರ್ತಿ ಹತ್ತಿರ ಸುಳ್ಳು ಹೇಳಿಬಿಟ್ಟೆ.”
“ಯಾಕೆ ನಾವು ನಿನ್ನ ಅಂತಸ್ತಿಗೆ ಕಡಿಮೇನಾ? ನಿನ್ನ ವಾರುಣಿ ತಂಗೀನಾಂತ ಆಶ್ಚರ್ಯವಾಗ್ತಿದೆ. ಇಡು ಫೋನ್.”
“ದಯವಿಟ್ಟು ನಮ್ಮ ಅತ್ತೆ-ಮಾವಂಗೆ ಫೋನ್ ಮಾಡೋದು ಬೇಡಾಂತ ಅಕ್ಕಂಗೆ ಹೇಳಿ.”
“ಅವಳ ಕ್ಷಮೆ ಕೇಳಿ ನೀನೇ ಬೇಡಿಕೋ. ನೀನು ಶ್ರೀಮಂತರ ಮನೆ ಸೇರಿರಬಹುದು. ಆದ್ರೆ ನಾವು ಬಡವರಲ್ಲ.”

ಶರು ಅಕ್ಕನಿಗೆ ಕಾಲ್ ಮಾಡಿದಳು. ಆದರೆ ವರು ರಿಸೀವ್ ಮಾಡಲಿಲ್ಲ. 5-6 ಸಲ ಮಾಡಿದರೂ ವರು, ಆರ್.ಜಿ., ಚಂದ್ರಾ ಆಂಟಿ ಯಾರೂ ರಿಸೀವ್ ಮಾಡಲಿಲ್ಲ. ಅವಳು ಕೀರ್ತಿಯ ಬಳಿ ಹೇಳಿದಳು. “ನೀನು ಮಾಡಿದ್ದು ತುಂಬಾ ತಪ್ಪು ಶರು. ನಮ್ಮಣ್ಣಂಗೆ ಅವಮಾನವಾಯ್ತು ಅಂತ ಅವನು ಅಲ್ಲಿ ಗಲಾಟೆ ಮಾಡಿದ್ದಾನೇಂತ ಕಾಣತ್ತೆ. ನಾವು ಅಣ್ಣ-ತಮ್ಮಂದಿರು ಹೇಗಿದ್ದೀವೀಂತ ನಿನಗೆ ಗೊತ್ತಿಲ್ಲ. ಅವರಿಗೆಲ್ಲಾ ಬೇಜಾರಾಗಿದೆ.”
“ನಾನು ತಪ್ಪು ಮಾಡಿದ್ದೀನಿ ನಿಜ. ಅಕ್ಕ, ಅತ್ತೆ-ಮಾವನಿಗೆ ಫೋನ್ ಮಾಡಿದರೆ ಏನು ಮಾಡುವುದು?”
“ನಿಮ್ಮ ಅಕ್ಕ ನಿನ್ನ ರೀತಿಯಲ್ಲ. ಅವರಿಗೆ ಮನೆತನದ ಮಾನ ಮರ್ಯಾದೆ ಮುಖ್ಯಾಂತ ನನಗೆ ಗೊತ್ತು. ನಾನು ನಿನ್ನನ್ನು ಮದುವೆಯಾಗಿ ತಪ್ಪು ಮಾಡಿದೆ ಅನ್ನಿಸ್ತಿದೆ.”
ಶರು ಪಾತಾಳಕ್ಕೆ ಇಳಿದು ಹೋದಳು.

“ಸಾರಿ ಆಂಟಿ, ಸಾರಿ ವಾರುಣಿ. ನಾನು ತುಂಬಾ ದುಡುಕಿಬಿಟ್ಟೆ.”
“ನಾನು ನಿಮ್ಮನ್ನು ಸಾರಿ ಕೇಳಬೇಕು. ನಾವು ಒಳ್ಳೆಯ ಹುಡುಗಿಯನ್ನು ನಿಮ್ಮ ಮನೆಗೆ ಕೊಡಲಿಲ್ಲ. ಕೀರ್ತಿಗೆ ಅವಳನ್ನು ಕಂಟ್ರೋಲ್ ಮಾಡಲು ಹೇಳಿ. ಕಿಡಿ ಇದ್ದಾಗಲೇ ಹೊಸಕಿ ಹಾಕಬೇಕು. ಅದು ಜ್ವಾಲೆಯಾದ ಮೇಲೆ ಆರಿಸೋದು ಕಷ್ಟ.”
“ಇನ್ನು ಆ ವಿಚಾರ ಬಿಡಿ. ನನಗೆ ಹಸಿವಾಗ್ತಿದೆ. ಊಟ ಮಾಡೋಣ” ಚಂದ್ರಾವತಿ ಹೇಳಿದರು.

ಹದಿನೈದು ದಿನಗಳಲ್ಲಿ ವಾರುಣಿ ಕಾಲೇಜ್‌ನವರ ಜೊತೆ ತಿರುಪತಿಗೆ ಹೊರಟಳು. ವೆಂಕಟೇಶ್ವರ ಯೂನಿವರ್ಸಿಟಿಯವರು ಅವರೆಲ್ಲಾ ಇಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಅವರ ಸಹಾಯದಿಂದ ದೇವರದರ್ಶನವೂ ಆಯಿತು. ಮರುದಿನ ಬೆಳಿಗ್ಗೆ ವೆಂಕಟೇಶ್ವರ ಯೂನಿವರ್ಸಿಟಿಯ ‘ಪ್ರತಿಮಾ’ ಎನ್ನುವ ಹುಡುಗಿ ಕೀಟ್ಸ್ ಕವಿಯ ಪದ್ಯ ಪ್ರೆಸೆಂಟ್ ಮಾಡಿದಳು. ಸಾಯಂಕಾಲ ಅಮೃತಾ ಈ ಮೊದಲೇ ಆರಿಸಿಕೊಂಡಿದ್ದ ಸರೋಜಿನಿನಾಯಿಡುಯವರ ಕವಿತೆ ಪ್ರೆಸೆಂಟ್ ಮಾಡಿದಳು. ಚೆನ್ನಾಗಿ ಬಂತು.

ಮರುದಿನ ಅವರು ಕಾಳಹಸ್ತಿ ನೋಡಿಬಂದರು. ಯೂನಿವರ್ಸಿಟಿಯ ಪ್ರೊ. ರಂಗರಾಜ್ ಮೊದಲಿಯಾರ್ ಪ್ರೊಫೆಸರ್ ಆರಾಧ್ಯ ಅವರನ್ನು ಕೇಳಿದರು “ನಮ್ಮ ಸ್ಟೂಡೆಂಟ್ಸ್ಗೆ ಸ್ಫೂರ್ತಿ ಬಂದAತಿದೆ. ಈದಿನ ಒಬ್ಬರು, ನಾಳೆ ಒಬ್ಬರು ಪೇಪರ್ ಪ್ರೆಸೆಂಟ್ ಮಾಡ್ತಾರಂತೆ. ನಿಮ್ಮ ಕಡೆ ರೆಡಿಯಿದ್ದಾರಾ?”
“ಇದ್ದಾರೆ ಸರ್. ಆದರೆ ಇವತ್ತೇ ಪ್ರೋಗ್ರಾಂ ಮುಗಿದರೆ ಒಳ್ಳೆಯದು. ನಾಳೆ ನಾವು ಹೈದರಾಬಾದ್‌ಗೆ ಹೋಗಬೇಕು.”
“ಹಾಗಾದ್ರೆ ಬೆಳಿಗ್ಗೆ ನಮ್ಮ ಹುಡುಗ ಪ್ರೆಸೆಂಟ್ ಮಾಡಲಿ, ಮಧ್ಯಾಹ್ನ ನಿಮ್ಮ…….”
“ರಾಮ್‌ಗೋಪಾಲ್ ಪ್ರೆಸೆಂಟ್ ಮಾಡ್ತಾರೆ….”
ಮಧ್ಯಾಹ್ನ ಆರ್.ಜಿ. ಎರಡು Love Poems ಪ್ರೆಸೆಂಟ್ ಮಾಡಿದ. (Robert Burns – A Red Red Rose)
(E.E. Cummins – I carry your heart with me)
ಎರಡೂ ಚಿಕ್ಕ ಪದ್ಯಗಳು. ಮೊದಲು ಎರಡು ಪದ್ಯಗಳನ್ನೂ ಓದಿದ ನಂತರ ಪದ್ಯ ಬರೆದ ಕವಿಯ ವಿಚಾರ ಹೇಳಿ ಪದ್ಯವನ್ನು ವಿಶ್ಲೇಷಿಸಿದ.
I carry your heart with me poem 2 ಸಲ ಓದಿ ಒಬ್ಬ ಪ್ರೇಮಿಯ ಅಳಲನ್ನು ಸೊಗಸಾಗಿ ವರ್ಣಿಸಿದ. ಅವನು ಪದ್ಯ ನೋಡದೆ ಸಾಲುಗಳನ್ನು ಉಲ್ಲೇಖಿಸಿ ವಿಶ್ಲೇಷಿಸುವುದು ಹೊಸ ಅನುಭವ ನೀಡಿತು.”

ಇಂಗ್ಲೀಷ್ ಡಿಪಾರ್ಟ್ಮೆಂಟ್‌ನ ಚಲಪತಿರಾವ್ ಆರ್.ಜಿ.ಯನ್ನು ಅಭಿನಂದಿಸಿ ಕೇಳಿದರು. “Who is your love ? Is she here?”
ಅವನ ಕಣ್ಮುಂದೆ ವರುಚಿತ್ರ ಬಂದಿತು. ಅವನು ನಕ್ಕು ತಲೆ ಅಲ್ಲಾಡಿಸಿದ.
ಮರುದಿನ ಅವರು ಹೈದರಾಬಾದ್‌ಗೆ ಹೊರಟರು. ರಾಗಿಣಿ ಇಲ್ಲವೆಂದು ಹೇಳಿದ್ದರಿಂದ ವರು ನಿರಾಳವಾಗಿ ಅವರ ಜೊತೆ ಹೈದರಾಬಾದ್ ಸುತ್ತಿದಳು.

ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44947
(ಮುಂದುವರಿಯುವುದು)

ಸಿ.ಎನ್. ಮುಕ್ತಾಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *