ಪುಸ್ತಕ-ನೋಟ

“ತೆರೆಮರೆಯ ಸಾಧಕರು” – ಪುಸ್ತಕ ಅವಲೋಕನ

Share Button

ಸಾಹಿತ್ಯದ ವಿವಿಧ ಪ್ರಕಾರಗಳಾದ ಕವನ ಸಂಕಲನ, ಕಥಾ ಸಂಕಲನ, ವೈಚಾರಿಕ ಲೇಖನಗಳ ಸಂಕಲನ, ಹಾಸ್ಯ ಲೇಖನಗಳ ಸಂಕಲನ, ಶರಣ ಸಾಹಿತ್ಯ, ಕಾದಂಬರಿಗಳು . . . ಮುಂತಾದ ಹಲವಾರು ವಿಭಾಗಗಳಲ್ಲಿ ಬರಹಗಳನ್ನು ರಚಿಸಿ ನಲವತ್ತಕ್ಕೂ ಮೀರಿ ಪುಸ್ತಕಗಳನ್ನು ಪ್ರಕಟಿಸಿರುವ ನುರಿತ ಲೇಖಕಿ ಶ್ರೀಮತಿ ಬಿ ಆರ್‌ ನಾಗರತ್ನಾ ಅವರು ಅತ್ಯಂತ ಮಾಹಿತಿಪೂರ್ಣ ಕೃತಿಯೊಂದನ್ನು ರಚಿಸಿದ್ದಾರೆ.  ಅದುವೇ “ತೆರೆಮರೆಯ ಸಾಧಕರು”.  ಸುಮಾರು 125 ಪುಟಗಳನ್ನೊಳಗೊಂಡ ಈ ಪುಸ್ತಕವು ಮೂವತ್ತೊಂದು ಜನ ಮೈಸೂರಿನ ಸುತ್ತಮುತ್ತಲಿನ ತೆರೆಮರೆಯ ಸಾಧಕರ ವಿವರಗಳನ್ನು ಒಳಗೊಂಡಿದೆ.  ಈ ಪುಸ್ತಕವನ್ನು ಬೆಂಗಳೂರಿನ ಜಾಗೃತಿ ಪ್ರಿಂಟರ್ಸ್‌ ನವರು ಹೊರತಂದಿದ್ದಾರೆ.  ಬೆಲೆ 150/- ರೂಪಾಯಿಗಳು.

ʼಇಂತಹ ಹಲವಾರು ಸಾಧಕರು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಶ್ರಮಿಸುತ್ತಿದ್ದಾರಾದರೂ ನನ್ನ ಗಮನಕ್ಕೆ ಬಂದ ಕೆಲವರನ್ನು ಮಾತ್ರ ಇಲ್ಲಿ ಉಲ್ಲೇಖಿಸಿದ್ದೇನೆʼ ಎಂದು ವಿನಯದಿಂದ ಹೇಳಿಕೊಳ್ಳುವ ಲೇಖಕಿ, ಈ ಸಂಕಲನದ ಮೂಲ ಉದ್ದೇಶ, ಸಮಾಜಕ್ಕೆ ನಮ್ಮ ಕೊಡುಗೆಯಾಗಿ ಎಷ್ಟೆಷ್ಟು ರೀತಿಯ ಕೈಕಂರ್ಯಗಳನ್ನು ಕೈಗೊಳ್ಳಬಹುದು ಎಂಬುದನ್ನು ತಿಳಿಸುವುದಷ್ಟೇ ಅಲ್ಲದೆ ಇವುಗಳಿಂದ ಪ್ರೇರಣೆಗೊಂಡು ಸದಾಶಯ ಹೊಂದಿರುವ ಸಹೃದಯರುಗಳಿಗೂ ತಮ್ಮ ಪಥ ನಿಚ್ಛಳವಾಗಬಹುದು ಎಂದಿದ್ದಾರೆ.  ಅಷ್ಟೇ ಅಲ್ಲದೆ ಅವರುಗಳಿಗೆ ಸಲ್ಲಿಸಬಹುದಾದ ಕೃತಜ್ಞತೆಯ ಒಂದು ನಮನವೂ ಹೌದು ಈ ಕೃತಿಯ ರಚನೆ.

ಇಲ್ಲಿ ದಾಖಲಿಸಲ್ಪಟ್ಟಿರುವ ಯಾವ ಸಾಧಕರೂ ತಾವು ನಡೆಸುತ್ತಿರುವ ಕಾರ್ಯಗಳಿಗೆ ಪ್ರತಿಫಲವಾಗಿ ಏನನ್ನೂ ಬಯಸದೆ ಸಮಾಜಕ್ಕೆ ತಮ್ಮಿಂದ ನೀಡಬಹುದಾದ ಕಿರುಕಾಣಿಕೆ ಅಥವಾ ಆತ್ಮತೃಪ್ತಿಗಾಗಿ ಎಂಬ ಭಾವದಿಂದ ಎಲೆಮರೆಯ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿರುವವರೇ ಆಗಿದ್ದಾರೆ.  ಆದಾಗ್ಯೂ ಅದನ್ನು ಗುರುತಿಸಿ ಅದನ್ನು ತಮ್ಮದೇ ಆದ ಕೌಶಲ್ಯದಲ್ಲಿ ಸಮರ್ಪಣಾ ಭಾವದಿಂದ ಬರಹವನ್ನಾಗಿ ರೂಪಿಸಿ ಒಂದೆಡೆ ಕಟ್ಟಿಕೊಟ್ಟಿರುವುದರಿಂದ ಇದೊಂದು ಮಾಹಿತಿಪೂರ್ಣ, ಸಂಗ್ರಹಯೋಗ್ಯ ಪುಸ್ತಕವಾಗಿ ಹೊರಹೊಮ್ಮಿದೆ.  ಹಾಗಾಗಿಯೇ ಲೇಖಕಿ ನಾಗರತ್ನಾ ಅವರು “ತೆರೆಮರೆಯ ಸಾಧಕರು” ಎಂಬ ಅನ್ವರ್ಥ ನಾಮವನ್ನಿಟ್ಟಿದ್ದಾರೆ.

ಜೀವನ ಯಾರಿಗೂ ಹೂವಿನ ಹಾಸಿಗೆಯಾಗಿರುವುದಿಲ್ಲ.  ಕಲ್ಲುಮುಳ್ಳುಗಳನ್ನು ನಿವಾರಿಸಿಕೊಳ್ಳುತ್ತಾ ಬದುಕ ಸಾಗಿಸುವ ಛಲತೊಟ್ಟ ಕೆಲವರು ತಾವು ಕಂಡ ಕಲ್ಲುಮುಳ್ಳುಗಳನ್ನು ನಿವಾರಿಸಿಕೊಳ್ಳುವುದಲ್ಲದೇ ಅಲ್ಲೊಂದು ರಸ್ತೆಯನ್ನು ನಿರ್ಮಿಸಿ, ದಾರಿದೀಪವನ್ನು ಹಚ್ಚಿಟ್ಟು ಇತರರಿಗೆ ಸಹಾಯಕರಾಗಿ ಜೀವನ ನಡೆಸಿದರೆ ಅವರು ಸಾಧಕರಾಗುತ್ತಾರೆ, ಸಮಾಜಕ್ಕೆ ಹಿತ ಬಯಸುವವರಾಗುತ್ತಾರೆ ಎಂಬ ಭಾವ ಈ ಪುಸ್ತಕವನ್ನು ಓದಿ ಮುಗಿಸಿದಾಗ ಸ್ಪುರಿಸುವುದರಲ್ಲಿ ಸಂಶಯವಿಲ್ಲ.

ಸಮಾಜಸೇವಾಯೇ ಪರಮಗುರಿ ಎಂದುಕೊಂಡ ಮಂಗಳಮ್ಮನವರು, ಛಲಬಿಡದೆ ಸಾಧನೆಯ ಬೆನ್ನು ಹತ್ತಿದ ಡಾ ಜಮುನಾರಾಣಿ ಮಿರ್ಲೆಯವರು, ವಾತ್ಯಲ್ಯಧಾಮದ ಗಾಂಧೀವಾದಿ ಸಂಸ್ಥಾಪಕ ದಂಪತಿ, ಮಹಿಳಾ ಸಬಲೀಕರಣ ಹಾಗೂ ವಿದ್ಯಾ ಸಂಸ್ಥೆ ವನಿತಾ ಸದನದ ಸಂಸ್ಥಾಪಕ ದಂಪತಿ, ಶಿಲ್ಪಿ ಕಲಾತಪಸ್ವಿ ಎಲ್‌ ಶಿವಲಿಂಗಪ್ಪನವರು, ಸಂಕಟವನ್ನು ಸಮಾಜಸೇವೆಯಲ್ಲಿ ನೀಗಿಸಿಕೊಂಡ ಡಾ ಸುಧಾ ಮತ್ತು ಕೆ ರಮೇಶ್‌ ದಂಪತಿ . . . .  ಹೀಗೆ ವೈವಿಧ್ಯಮಯ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ, ಸಲ್ಲಿಸಿ ನಮ್ಮನ್ನಗಲಿರುವವರ ಕುರಿತು ಅವರ ಸಾಧನೆಯ ಗುರಿ, ಕಾರ್ಯವೈಖರಿಯ ಪರಿ, ಅದರಿಂದಾಗಿ ಸಮಾಜಕ್ಕಾದ/ಸಮಾಜಕ್ಕಾಗುವ ಸದುಪಯೋಗ ಮುಂತಾದವುಗಳನ್ನು ತಮ್ಮ ಎಂದಿನ ಆಕರ್ಷಕ ಶೈಲಿಯಲ್ಲಿ ತಮ್ಮದೇ ಆದ ಮಾತುಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಶ್ರೀಮತಿ ಬಿ ಆರ್‌ ನಾಗರತ್ನಾ ಅವರು.

ಈ ಮೇಲೆ ನಾನು ಹೆಸರಿಸಿರುವುದು ಪುಸ್ತಕದಲ್ಲಿ ಸೇರಿರುವ ಕೆಲವು ಸಾಧಕರನ್ನು ಮಾತ್ರ.  ಅದರಲ್ಲಿರುವ ಮೂವತ್ತೊಂದೂ ಜನರ ಸಾಧನೆಗಳನ್ನು ಓದಿ ಮುಗಿಸಿದಾಗ ಉಂಟಾಗುವ ಭಾವವನ್ನು ಓದುಗರು ಅನುಭವಿಸಿಯೇ ಅರಿಯಬೇಕೆನ್ನುವುದು ನನ್ನಾಸೆ.

ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಹಣಕಾಸು, ಪ್ರತಿಕೂಲ ವಾತಾವರಣವಿದ್ದಲ್ಲಿ ಮಾತ್ರ ಸಾಧ್ಯ ಎಂಬ ಅನಿಸಿಕೆ ಅಭಿಪ್ರಾಯ ಯಾರಲ್ಲಾದರೂ ಇದ್ದಲ್ಲಿ ಇಲ್ಲಿರುವ ಸಾಧಕರ ಯಶೋಗಾಥೆಯನ್ನು ಓದಿದಾಗ ಅವರ ಅಭಿಪ್ರಾಯ ಹುಸಿಯಾಗುವುದು ಖಂಡಿತಾ.  ಅದಕ್ಕೆ ಬೇಕಿರುವುದು ಕಷ್ಟಗಳು ಎದುರಾದರೆ ಅದನ್ನು ಇಷ್ಟಪಡಲು ಪ್ರಾರಂಭಿಸಿ ನಿವಾರಿಸಿಕೊಂಡು ಮುಂದುವರೆಯುವ ಮನೋನಿರ್ಧಾರ ಮತ್ತು ಪ್ರಭಲವಾದ ಇಚ್ಛಾಶಕ್ತಿ ಮಾತ್ರ ಎಂಬ ಅಂಶ ಮನದಟ್ಟಾಗುತ್ತದೆ.  ಕಾಯಕಯೋಗಿಯಂತೆ ನಿರಂತರವಾಗಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಅದು ಖಂಡಿತಾ ಸಫಲವಾಗುವುದೆಂಬ ತಿಳುವಳಿಕೆ ಮೂಡುತ್ತದೆ.

ಇಂತಹ ಪ್ರೇರಣಾಪೂರ್ವಕವಾದ ಪುಸ್ತಕವನ್ನು ರಚಿಸಿದ ಶ್ರೀಮತಿ ಬಿ ಆರ್‌ ನಾಗರತ್ನಾ ಅವರಿಗೆ ವಂದನೆಗಳು.  ಹಾಗೂ ಈ ಪುಸ್ತಕವು ಲೇಖಕಿಯ ಮನದಾಸೆಯಂತೆ ಕೆಲವರಿಗಾದರೂ ಪ್ರೇರಣೆಯಾಗಲೆಂಬ ಸದಾಶಯದೊಂದಿಗೆ ನನ್ನ ಮಾತುಗಳಿಗೆ ಮಂಗಳ ಹಾಡುತ್ತೇನೆ.

ಪದ್ಮಾ ಆನಂದ್, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *