ದಿನಾಲೂ ಬೆಳಿಗ್ಗೆ ಎದ್ದ ತಕ್ಷಣ ನನ್ನ ಮೊದಲನೆಯ ಕೆಲಸ, ರೇಡಿಯೊ ಆನ್ ಮಾಡಿ ಮಂಗಳೂರು ಆಕಾಶವಾಣಿಯಲ್ಲಿ ವಂದನಾ ಕಾರ್ಯಕ್ರಮ ಕೇಳುವುದು. ವಾರ್ತೆಯ ಬಳಿಕ, ಚಿತ್ರ ಗೀತೆ ನಂತರ ಎಫ್.ಎಮ್. ಕೇಳುವುದು ವಾಡಿಕೆ. ಹಾಗೆ ಮೊನ್ನೆ ಎಫ್.ಎಮ್.ನಲ್ಲಿ, ಆರ್.ಜೆ. ಶೃತಿ ನಗುವಿನ ಬಗ್ಗೆ ತುಂಬಾ ಚೆನ್ನಾಗಿ ವಿವರಿಸುತ್ತಿದ್ದರು. ನಗು ಯಾಕೆ ಬೇಕು, ನಗುವಿನ ಮಹತ್ವ, ವಿವಿಧ ಬಗೆಯ ನಗು ಇತ್ಯಾದಿ. ಮುಖ ಗಂಟಿಕ್ಕಲು ಅದೆಷ್ಟು ಸ್ನಾಯುಗಳ ಅವಶ್ಯಕತೆ ಇದೆ ಮತ್ತು ನಗುವುದು ಎಷ್ಟು ಸುಲಭ ಎಂಬುದನ್ನು ಚೆನ್ನಾಗಿ ಶೃತಿಯವರು ಹೇಳುತ್ತಿದ್ದರು. ತುಂಬಾ ಖುಷಿಯಾಗಿತ್ತು. ಮುಂದಿನ ಬರಹ ನಗುವಿನ ಮೇಲೆಯೇ ಬರೆಯಬೇಕು ಅಂದುಕೊಂಡೆ. ಆದರೆ ಈ ಹಿಂದೆ ನಗುವಿನ ಬಗ್ಗೆ ಅನೇಕ ಲೇಖನಗಳನ್ನು ಓದಿದ್ದೆ. ನಗು ತುಂಬಾ ಸರಳವಾದ ವಿಷಯ. ಆದರೂ ಸ್ವಲ್ಪ ಬರೆಯಬೇಕೆಂದು ಅನಿಸಿತ್ತು. ಯಾವುದಾದರೂ ಒಳ್ಳೆಯ ಭಾಷಣ, ಉಪನ್ಯಾಸ ಅಥವಾ ಉತ್ತಮ ಸ್ಪೀಕರ್ ಮಾತು ಕೇಳಿದಾಗ ಮತ್ತು ಬೆಳಗ್ಗೆ ರೇಡಿಯೊದಲ್ಲಿ ಬರುವ ಚಿಂತನಾ ಕಾರ್ಯಕ್ರಮದಲ್ಲಿ ಕೆಲವೊಂದು ಉಪಯುಕ್ತ ಮುಖ್ಯ ಅಂಶಗಳನ್ನು ಟಿಪ್ಪಣಿಯಾಗಿ ಬರೆಯುವುದನ್ನು ರೂಢಿ ಮಾಡಿಕೊಂಡಿದ್ದೇನೆ. ಯಾವಾಗಲಾದರೂ. ಸಭೆಯನ್ನು ಉದ್ದೇಶಿಸಿ ಮಾತನಾಡಲಿರುವಾಗ ಈ ಪಾಯಿಂಟ್‌ಗಳನ್ನು ಉಪಯೋಗಿಸುವುದು ನನ್ನ ವಾಡಿಕೆ. ಹಾಗೆಯೇ ಆರ್. ಜೆ. ಶೃತಿಯವರು ನಗುವಿನ ಬಗ್ಗೆ ಹೇಳಿದ ಅನೇಕ ಗಮನಾರ್ಹ ವಿಷಯಗಳನ್ನು ಕೂಡಲೇ ನೋಟ್ ಮಾಡಿಕೊಂಡೆ. ನಗು ಯಾಕೆ ಮುಖ್ಯ? ಬೇರೆಯವರ ನಗುವಿಗೆ ಕಾಯದೆ ನಾವೇ ಮೊದಲು ನಕ್ಕಾಗ ಆಗುವ ಆನಂದ ಅಪರಿಮಿತ. ನಗುವ ಮುಖವು ಸ್ನೇಹಪರತೆಯನ್ನು ತೋರಿಸುತ್ತದೆ. ಶೃತಿಯವರ ನಿರೂಪಣೆ ತುಂಬಾ ಚೆನ್ನಾಗಿತ್ತು.
ನಾವು ಸಾಮಾನ್ಯವಾಗಿ ತುಂಬಾ ಸಂತೋಷವಾದಾಗ ನಗುತ್ತೇವೆ. ನಾವು ಅಂದುಕೊಂಡಂತೆ ಏನಾದರೂ ಆದಾಗಲೂ ನಾವು ಖುಷಿ ಪಡುತ್ತೇವೆ. ಕೆಲವೊಮ್ಮೆ ಕಾಮಿಡಿ ಸಿನೆಮಾ ಅಥವಾ ಕಾರ್ಯಕ್ರಮ ನೋಡುವಾಗಲೂ ತುಂಬಾ ಆನಂದವಾಗುತ್ತದೆ. ನಗು ಸಾಂಕ್ರಾಮಿಕವಾದದ್ದು. ಕೆಲವರು ನಗುವುದು ನೋಡುವಾಗ ನಮಗೂ ನಗು ಬರುತ್ತದೆ. ಚಿಕ್ಕ ಮಗುವನ್ನು ನೋಡುವಾಗ ಎಷ್ಟೇ ಒತ್ತಡವಿರುವಾಗಲೂ ಮುಖದಲ್ಲಿ ಮಂದಹಾಸ ಮೂಡುತ್ತದೆ. ಪರಸ್ಪರ ಭೇಟಿಯಾದಾಗ ಮಾತಿಗೂ ಮೊದಲು ಪರಿಚಿತ ನಗೆಯನ್ನು ಬೀರುತ್ತೇವೆ. ನಗು ಸಂತೋಷದ ಸಂಕೇತ. ಪರಿಚಿತರೊಡನೆ ನಕ್ಕಾಗ ಪ್ರತಿ ನಗು ಸಿಗದಿದ್ದರೆ ಮನಸ್ಸಿನಲ್ಲಿ ಅನುಮಾನ, ಚಿಂತೆ, ಬೇಸರ ಉಂಟಾಗಿ ನಮ್ಮಿಂದ ಏನಾದರೂ ತಪ್ಪಾಗಿದೆಯೋ ಎಂಬ ಭಾವನೆ ಮೂಡುತ್ತದೆ. ನಗು ಅನೇಕ ಮುರಿದ ಹೃದಯಗಳನ್ನು ಒಂದುಗೂಡಿಸುವುದಲ್ಲದೆ, ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ.
ನಗಿಸುವುದು ಕೂಡ ಒಂದು ಟ್ಯಾಲೆಂಟ್. ನಾನು ರಿಯಾಲಿಟಿ ಶೋ ಎಂದೂ ನೋಡಿದವಳೇ ಅಲ್ಲ. ಮೊದಲು ಒಂದೆರಡು ಬಾರಿ ಹಿಂದಿ ಬಿಗ್ ಬಾಸ್ ನೋಡಿದ್ದೆ. ನಂತರ ಇದೆಲ್ಲಾ ಸ್ಕ್ರಿಪ್ಟೆಡ್ ಅಂತ ಗೊತ್ತಾದಾಗ ನೋಡುವುದನ್ನೇ ಬಿಟ್ಟಿದ್ದೆ. ಆದರೆ ಈ ಬಾರಿ ಪ್ರಪ್ರಥಮ ಬಾರಿಗೆ ಕನ್ನಡ ಬಿಗ್ ಬಾಸ್ ಸರಣಿಯನ್ನು ವೀಕ್ಷಿಸಿದ್ದೆ. ಎರಡು ಕಾರಣಗಳು. ಒಂದು ನಿವೃತ್ತಿಯ ಬಳಿಕ ಫ್ರೀಯಾಗಿದ್ದೆ. ಮತ್ತೊಂದು ನಮ್ಮ ಕರಾವಳಿಯ ಹುಡುಗಿ ರಕ್ಷಿತಾ ಶೆಟ್ಟಿ ಸ್ಪರ್ಧಿಯಾಗಿ ಆಯ್ಕೆಯಾದದ್ದು. ಅದರಲ್ಲಿ ಗಿಲ್ಲಿ ನಟ ಎಂಬ ಸ್ಪರ್ಧಿಯು ತನ್ನ ವಿಶಿಷ್ಟ ಹಾಸ್ಯ ಶೈಲಿಯ ಮೂಲಕ ಮನ ರಂಜಿಸುತ್ತಿದ್ದರು. ನನಗೆ ಮೊದಲನೆಯ ಸಲ ಅವರ ಪರಿಚಯವಾದರೂ, ಕಾಮಿಡಿ ಕಿಲಾಡಿಗಳು ಸೇರಿ ಹಲವಾರು ರಿಯಾಲಿಟಿ ಷೋಗಳಲ್ಲಿ ನಟಿಸಿದ ಹೆಗ್ಗಳಿಕೆ ಬೇರೆ ಇತ್ತು. ಪ್ರತಿಭಾವಂತ ಹುಡುಗ. ದಿನಾಲೂ ತನ್ನ ಅಪೂರ್ವ ಪ್ರತಿಭೆಯಿಂದ ಚುಟುಕುಗಳು, ಸಂದರ್ಭಕ್ಕೆ ತಕ್ಕಂತಹ ಜೋಕುಗಳು, ಒತ್ತಡದ ಕ್ಷಣಗಳಲ್ಲಿಯೂ ತಕ್ಷಣದ ಪ್ರತಿಕ್ರಿಯೆಗಳು, ಸನ್ನಿವೇಶಕ್ಕೆ ತಕ್ಕಂತೆ ಹಾಸ್ಯದಿಂದ ಎಲ್ಲರ ಮನೆ ಮಾತಾಗಿದ್ದರು. ತನ್ನ ಅದ್ಭುತ ಸೆನ್ಸ್ ಆಫ್ ಹ್ಯೂಮರ್‌ನಿಂದ ಎಲ್ಲರ ಮನ ಗೆದ್ದು ಬಿಗ್ ಬಾಸ್ ವಿನ್ನರ್ ಆಗಿಯೇ ಬಿಟ್ಟರು. ಸಾಮಾನ್ಯ ಕುಟುಂಬದಿಂದ ಬಂದು ತನ್ನಲ್ಲಿರುವ ಅಪ್ರತಿಮ ಪ್ರತಿಭೆಯಿಂದ ಎಲ್ಲಾ ಘಟಾನುಘಟಿಗಳನ್ನು ಹಿಂದಿಕ್ಕಿ ಟ್ರೋಫಿ ತನ್ನದಾಗಿಸಿಕೊಂಡಿದ್ದ. ಇದು ನಗುವಿಗಿರುವ ಶಕ್ತಿ. ಇಡೀ ಕರುನಾಡಿನ ಮನ ಗೆದ್ದಿದ್ದ. ಈ ಸೀಸನ್ ಮುಗಿಯುವಷ್ಟರಲ್ಲಿ ನಾನು ಗಿಲ್ಲಿಯ ಫ್ಯಾನ್ ಆಗಿ ಬಿಟ್ಟಿದ್ದೆ.
ಹಾಸ್ಯಕ್ಕಿರುವ ಶಕ್ತಿ ಅಪಾರ. ನಗುವಿನ ಮೂಲಕ ನಾವು ಖಂಡಿತವಾಗಿಯೂ ಇತರರ ಮನಸ್ಸನ್ನು ಗೆಲ್ಲಬಹುದು. ನಗು ನಮ್ಮ ಬದುಕನ್ನು÷ಸುಂದರಗೊಳಿಸುವುದಲ್ಲದೆ, ಬೇರೆಯವರ ಬದುಕಿಗೂ ಬೆಳಕು ನೀಡುತ್ತದೆ. ನಗು ಮಾನವನಿಗೆ ಬೇಕಾಗಿರುವ ಅತೀ ಅಮೂಲ್ಯ ಉಡುಗೊರೆ. ಸಂಶೋಧನೆಗಳ ಪ್ರಕಾರ ನಗುತ್ತಿರುವವರ ಆಯುಷ್ಯ, ನಗದೇ ಇರುವವರಿಗಿಂತ ಏಳು ವರ್ಷ ಅಧಿಕ ಎಂದು ಇತ್ತೀಚಿಗೆ ಓದಿದ ನೆನಪು. ನಗುವಿಗೂ ದೀರ್ಘಾಯುಷ್ಯಕ್ಕೂ ನೇರವಾಗಿ ಸಂಬಂಧ ಇಲ್ಲದಿದ್ದರೂ, ನಗು ಆರೋಗ್ಯಕರ ಜೀವನಕ್ಕೆ ನಾಂದಿಯಾಗಿರುತ್ತದೆ. ನಗುವು ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಸಂತೋಷದ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ನಗುವು ಸಂತೋಷದ ಸಂಕೇತ.
ಇಂದಿನ ಧಾವಂತದ ಜೀವನ ಶೈಲಿ, ಒತ್ತಡದ ಬದುಕು ಹಾಗೂ ಸಾಮಾಜಿಕ ಜವಾಬ್ದಾರಿಗಳ ನಡುವೆ ಮನುಷ್ಯನು ನಗುವುದನ್ನು ಮರೆತಿದ್ದಾನೆ. ತನ್ನವರಿಗಾಗಿ ಅಲ್ಪ ಸಮಯವನ್ನೂ ಮೀಸಲಾಗಿಡದೆ, ತೊಳಲಾಡುವುದನ್ನು ಕಾಣುತ್ತೇವೆ. ಗುರಿಗಳನ್ನು ಮುಟ್ಟುವ ಹಂಬಲದಲ್ಲಿ ಕುಟುಂಬಕ್ಕೆ ಹೆಚ್ಚು ಸಮಯ ನೀಡಲು ಸಾಧ್ಯವಾಗದೆ ಹೆಚ್ಚಿನ ಸಮಯ ಮುಖ ಗಂಟಿಕ್ಕಿರುವುದನ್ನು ಕಾಣಬಹುದು. ಕೆಲವರು ಗಂಭೀರವಾಗಿದ್ದರೆ ಹೆಚ್ಚು ಸ್ಥಾನಮಾನ, ಘನತೆ ಹಾಗೂ ಗೌರವ ಸಿಗುತ್ತದೆ ಎಂಬ ಭ್ರಮಾಲೋಕದಲ್ಲಿರುತ್ತಾರೆ. ಆದರೆ ನನ್ನ ಪ್ರಕಾರ, ಇದು ತಪ್ಪು ಕಲ್ಪನೆ. ಸಂದರ್ಭಕ್ಕೆ ತಕ್ಕಂತೆ ಮುಖಭಾವವನ್ನು ಬದಲಿಸಿಕೊಳ್ಳುವುದು ಅತ್ಯುತ್ತಮ. ಆದರೆ ಪ್ರವಾಸ, ಪಿಕ್ನಿಕ್, ಮದುವೆ ಸಮಾರಂಭಗಳಂತಹ ಸಂದರ್ಭಗಳಲ್ಲಿ ಸ್ವಲ್ಪ ಹಗುರವಾದ ಮನೋಸ್ಥಿತಿಯನ್ನು ಎಲ್ಲರೂ ಇಷ್ಟ ಪಡುತ್ತಾರೆ.
ನಗು ಅತಿಯಾದರೂ ಒಳ್ಳೆಯದಲ್ಲ. ಯಾವಾಗಲೂ ನಗುತ್ತಾ ಇರುವ ವ್ಯಕ್ತಿಯನ್ನು ಲಘುವಾಗಿ ಪರಿಗಣಿಸುವ ಸಾಧ್ಯತೆಗಳೇ ಹೆಚ್ಚು. ನನಗೇ ಈ ಅನುಭವ ತುಂಬಾ ಸಲ ಆಗಿದೆ. ಹೆಚ್ಚಾಗಿ ಸೀರಿಯಸ್ ಆಗಿ ಇರದೆ ನನ್ನ ಮೌಲ್ಯವನ್ನು ನಾನೇ ಕಳೆದುಕೊಂಡೆ ಎಂದೇ ನನಗನಿಸಿತ್ತು. ಹಲವಾರು ಬಾರಿ ನನ್ನ ಒಳ್ಳೆಯತನವನ್ನು ದುರ್ಬಲತೆಯೆಂದೇ ಅರ್ಥೈಸಿಕೊಂಡವರೇ ಅಧಿಕ.
ಒಟ್ಟಿನಲ್ಲಿ ನಗು ಎಂಬುದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ನಾವು ಎಷ್ಟೇ ಸುಂದರವಾಗಿ ಅಲಂಕರಿಸಿಕೊಂಡರೂ, ಆಭರಣಗಳಿಂದ ಸಿಂಗರಿಸಿಕೊಂಡರೂ ಮುಖದ ಮೇಲೆ ನಗುವಿಲ್ಲದಿದ್ದರೆ ಎಲ್ಲವೂ ವ್ಯರ್ಥ. ನಾನು ಈ ಲೇಖನ ಬರೆಯುವಷ್ಟರಲ್ಲಿ ಕಾಕತಾಳೀಯವೆಂಬಂತೆ ‘ನಗು ನಗುತಾ ನಲಿ ನಲಿ, ಏನೇ ಆಗಲಿ’ ಎಂಬ ಬಂಗಾರದ ಮನುಷ್ಯ ಸಿನೆಮಾದ ಹಾಡು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿತ್ತು. ನಿಜಕ್ಕೂ ಹಳೆ ಹಾಡುಗಳು ಅದೆಷ್ಟು ಪ್ರೇರಣಾದಾಯಕ ಹಾಗೂ ಅರ್ಥಪೂರ್ಣ ಎಂದು ನನಗನಿಸಿತು. ನಗು ದೇವರು ಕೊಟ್ಟ ಒಂದು ವರ. ಎಲ್ಲರಲ್ಲೂ ನಗೆಯನ್ನು ಹಂಚಿ ಹಗುರಾಗೋಣ.
–ಶೈಲಾರಾಣಿ ಬಿ, ಮಂಗಳೂರು.
