ದಶಮ ಸ್ಕಂದ – ಅಧ್ಯಾಯ – 2
ಶಕಟಾಸುರ ಭಂಜನ
ಪೂತನಾ ಸಂಹಾರ ದುರ್ಯೋಗ ಶಾಂತಾರ್ಥವಾಗಿ
ಅನೇಕ ರಕ್ಷಾವಿಧಿಗಳ ನೆರವೇರಿಸಿ
ಹನ್ನೆರಡು ದಿನ ತುಂಬಲಿರುವ ಶಿಶುವಿಗೆ
ತೊಟ್ಟಲಿಡುವ ಸಂಭ್ರಮದಿ ಸ್ವರ್ಣಮಯ ತೊಟ್ಟಿಲಿಗೆ
ರೇಶಿಮೆ ವಸ್ತ್ರದ ಹಾಸಿಗೆ, ಹೊದಿಕೆ
ಪುಷ್ಪಹಾರಗಳನು ಕಟ್ಟಿ ಸಿಂಗರಿಸಿ
ಶಿಶುಸಾರ್ವಭೌಮನನು ಅದರಲಿ ಮಲಗಿಸಿ
ಮಂಜುಳ ದನಿಯಲಿ ಹಾಡಿ ನಲಿದು
ಭಗವಂತನಿಗೆ ಸಂಗೀತ ಸೇವೆ ಸಲ್ಲಿಸಿ ನಲಿದರು
ಹೀಗೆ ಬಾಲಕೃಷ್ಣ ಬೆಳೆಯುತ್ತ ಅಂಬೆಗಾಲನಿಡುತ
ಮುದ್ದಿನ ಮೂಟೆಯಂತಿರ್ಪ ಶಿಶುವನ್ನೆಷ್ಟು ನೋಡಿ ನಲಿದರೂ
ತೃಪ್ತರಾಗದಾದರು ರೋಹಿಣಿ ಯಶೋಧೆಯರು
ಕೃಷ್ಣ ಜನ್ಮನಕ್ಷತ್ರ ರೋಹಿಣಿ ಸಮೀಪಿಸಲು
ಆ ದಿವ್ಯಕ್ಷಣವ ಹಬ್ಬವನ್ನಾಗಿಸಿ ಆಚರಿಸಲಿಚ್ಛಿಸಿ
ಗೋಕುಲ ಸಮೀಪದಲ್ಲಿರ್ಪ ಸುಂದರ ತಾಣಕ್ಕೆ
ಸಕಲರೂ ನಿರ್ಗಮಿಸಿ ಸಂಭ್ರಮದಿ ಪಯಣಿಸಿ
ಸುಂದರವನವ ಸೇರಿದರು
ನಿದ್ದೆಗೆ ಜಾರಿದ ಮಗುವನು
ಪದಾರ್ಥ ತುಂಬಿದ ಬಂಡಿಯ
ಕೆಳಗಿನ ನೆರಳಲಿ ಮೆತ್ತನೆಯ ಹಾಸಿಗೆ
ಹಾಸಿ ಮಲಗಿಸಿ ಯಶೋದೆ
ಗೆಳತಿಯರೊಡನೆ ಹಾಡು-ಹಸೆಯಲಿ ಮಗ್ನಳಾದಳು
ಕಂಸ ನಿಯುಕ್ತ ಶಿಶುಪಾತಕಿ ಶಕಟಾಸುರ
ಶಿಶುವ ವಧಿಸಲು ಬಂಡಿಯನೇರಿ
ಕೆಳಗೆ ಮಲಗಿದ್ದ ಶಿಶುವ ಕೊಲ್ಲಲು ಹವಣಿಸೆ
ಬಂಡಿ ಚಲಿಸುವಷ್ಟರಲಿ ಬಂಡಿಯು ವಿಚಿತ್ರವಾಗಿ ಚಲಿಸುತ್ತ
ಶಿಶುವು ಪುಟ್ಟ ಪಾದದಿಂ ತನ್ನ ಸಮೀಪದಲ್ಲಿರ್ಪ ಬಂಡಿಯ
ʼಮೂಕಿʼಯ ಒದೆಯೆ, ಶಕಟ ಅಗಾಧ ಶಬ್ಧ ಮಾಡುತ್ತಾ
ಹತ್ತಾರು ಅಡಿ ದೂರ ಸರಿದು ಬಿದ್ದು ಪುಡಿಪುಡಿಯಾದನು
ದೈತ್ಯ ಶಕಟಾಸುರನ ವಿಕಾರ ರೂಪಿ ದೇಹ
ಮೃತವಾಗಿ ಬಿದ್ದಿತು
ಚಿಕ್ಕ ಶಿಶುವಿನ ಪಾದ ಸೋಕಿನಿಂದ ಬಂಡಿ
ಅಷ್ಟು ದೂರಕೆ ಸರಿದು ಪುಡಿ ಪುಡಿಯಾದುದು
ದೈತ್ಯವಧೆಯಾದುದು ದೈವಲೀಲೆಯೆಂದೇ ಬಗೆದು
ಶಿಶುವಿಗೆ ರಕ್ಷೆಗಳನಿಟ್ಟು ನಂದಗೋಕುಲವ ಸೇರಿದರು
ಶಿಶುರೂಪಿ ಕೃಷ್ಣಲೀಲೆಯಲಿ ಇಬ್ಬರು
ಕಂಸದೂತರು ಹತರಾದುದು
ಒಂದು ಆರಂಭವಷ್ಟೇ
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44150

-ಎಂ. ಆರ್. ಆನಂದ, ಮೈಸೂರು

