ಬೆಳಕು-ಬಳ್ಳಿ

ಕಾವ್ಯ ಭಾಗವತ 68 : ಶ್ರೀ ಕೃಷ್ಣ ಕಥೆ – 5

Share Button

ದಶಮ ಸ್ಕಂದ – ಅಧ್ಯಾಯ – 1
ಶ್ರೀ ಕೃಷ್ಣ ಕಥೆ – 5
ವಸುದೇವ-ದೇವಕಿ – 2

ದೇವಕಿಯ ಎಂಟನೆಯ ಗರ್ಭಧಾರಣೆಯ ಸಮಯ
ಸಮೀಪಿಸುತ್ತಿರೆ ದೇವಕಿಯಲ್ಲೋನೋ ಪುಲಕ
ಯುಕ್ತಕಾಲದಿ ಗರ್ಭ ನಿಲ್ಲಲು ದೇವಕಿಯ ತೇಜಸ್ಸು
ಎಂಟು ದಿಕ್ಕಲ್ಲೂ ಬೆಳಗತೊಡಗಿ ಸೆರೆಮನೆ
ಅರಮನೆಯಾಯಿತು

ಗರ್ಭವೃದ್ಧಿಯಾದಂತೆ ಅವಳ ಮನ
ನಿಶ್ಚಿಂತವಾಗಿ ಸುಪ್ರಸನ್ನವಾಗಿ ಆನಂದಭರಿತವಾಗಿರೆ
ತಂಗಿಯ ಮುಖಲಕ್ಷಣವ ನೋಡಿ ಕಂಸ
ದೇವಕಿಗೆ ಇದೇ ಎಂಟನೆಯ ಗರ್ಭ, ತನ್ನ ಪ್ರಾಣಾಂತಕ ವಿಷ್ಣು
ಇವಳಲ್ಲಿ ರೂಪುಗೊಂಡೇ ಎಂದೂ ಇಲ್ಲದ ತೇಜಸ್ಸು
ಪ್ರಾಪ್ತಿಯಾಗಿದೆ ಈ ದೇವಕಿಗೆ
ಈಗಲೇ ಅವಳ ವಧಿಸಬೇಕೆಂಬ ಮನ ಬಂದರೂ
ನಿರಪರಾಧಿಯ ವಧಿಸಲಾಗದೆ ಶಿಶುಜನ್ಮದ
ಘಳಿಗೆಯ ನಿರೀಕ್ಷೆಯಲಿ ಸದಾಕಾಲ
ಯೋಗೀಶ್ವರರು ಭಕ್ತಿಭಾವ ಮನೋಭಾವದಿ
ಭಗವಧ್ಯಾನ ನಿರತರಾದಂತೆ ಕಂಸ
ಭಗವದ್ಭಯಭರಿತನಾಗಿ ಸದಾ ಚಿಂತಾಸಕ್ತನಾಗಿ
ಕಾಲಯಾಪನೆ ಮಾಡುತಲಿದ್ದ

ಶ್ರೀಹರಿಯು ಜಗದುದ್ಧರಿಸಲು ದೇವಕಿದೇವಿಯ
ಗರ್ಭಪ್ರವೇಶಿಸಿ ಬೆಳೆಯುತಿಹನೆಂಬ ಸಂಗತಿಯನರಿತು
ಬ್ರಹ್ಮ ರುದ್ರಾದಿ ದೇವತೆಗಳು ಗಂಧರ್ವ ಯಕ್ಷ ಕಿಂಪುರುಷರು
ದೇವಕಿಯಿದ್ದ ಸೆರೆಮನೆಗಾಗಮಿಸಿ ದೇವ ಸ್ತೋತ್ರವ ಮಾಡಿದರು

ದೇವಾ, ನೀನು ಸತ್ಯ ಸಂಕಲ್ಪ, ಪ್ರಕೃತಿ ಪುರುಷ ಕಾಲಗಳನು
ಶರೀರವಾಗಿ ಉಳ್ಳವನು, ದೇವಕಾರ್ಯ ಕಾರಣರೂಪವಾದ
ಈ ಪ್ರಪಂಚ ವೃಕ್ಷಕೆ ನೀನೇ ಮುಖ್ಯಾಧಾರ
ಸುಖ ದುಃಖಗಳು ಈ ವೃಕ್ಷದಲ್ಲಿರ್ಪ ಫಲಗಳು
ಈ ವೃಕ್ಷದಿ ವಿರಾಜಿತಿರ್ಪ ಹತ್ತು ಪ್ರಾಣವಾಯುಗಳೆಂಬ ಎಲೆಗಳು
ಜೀವಾತ್ಮ ಪರಮಾತ್ಮರೆಂಬ ಪಕ್ಷಿಗಳಿಗಾವಾಸಸ್ಥಾನ
ಏ ದೇವಾ, ನೀನೀಗ ಭೂಭಾರ ಹರಣ ಕಾರ್ಯವನು
ನಿಮಿತ್ತೀಕರಿಸಿಕೊಂಡು ದೇವಕಿಯ ಗರ್ಭದಿ
ಅವಿರ್ಭವಿಸಿರುವುದು ಈ ಜಗದ ಭಾಗ್ಯ –
ಎಂದರುಹಿ ದೇವತೆಗಳು ನಿರ್ಗಮಿಸಿದರು

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=43955

-ಎಂ. ಆರ್.‌ ಆನಂದ, ಮೈಸೂರು

3 Comments on “ಕಾವ್ಯ ಭಾಗವತ 68 : ಶ್ರೀ ಕೃಷ್ಣ ಕಥೆ – 5

  1. ಎಂದಿನಂತೆ ಕಾವ್ಯ ಭಾಗವತ ಓದಿಸಿಕೊಂಡುಹೋಯಿತು… ಕೃಷ್ಣ ಅವತರಣಿಕೆ ಪೂರ್ವ.. ಸನ್ನಿವೇಶದ ..ತುಣುಕು ಕುತೂಹಲ ಮೂಡಿಸುವಂತಿದೆ.. ವಂದನೆಗಳು ಸಾರ್

  2. ಶ್ರೀಹರಿಯ ಅವತಾರದ ಸಮಯ ಸನ್ನಿಹಿತವಾಗಿದೆ…
    ಸೆರೆಮನೆ ಅರಮನೆಯಾದ ಪರಿ ಅದ್ಭುತ!
    ಸೊಗಸಾದ ಕಾವ್ಯ ಭಾಗವತ ಸರ್…ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *