ಬಹಳಷ್ಟು ವರುಷಗಳ ಕಾಲ ನನಗೆ ಮೆಂತ್ಯಸೊಪ್ಪಿಗೂ ಮೆಂತ್ಯಕಾಳಿಗೂ ಸಂಬಂಧವಿದೆಯೆಂದೇ ಗೊತ್ತಿರಲಿಲ್ಲ. ಗೊತ್ತಾದ ಮೇಲೆ ಬೇಜಾರೇ ಆಯಿತು. ಇವೆರಡರ ಮೂಲ ಒಂದೇ ಎಂಬುದಕ್ಕಲ್ಲ; ‘ಹೀಗೆ ಮೆಂತ್ಯಸೊಪ್ಪನ್ನೇ ಕಿತ್ತು ಅಡುಗೆಗೆ ಬಳಸಿಬಿಟ್ಟರೆ ಮೆಂತ್ಯಕಾಳು ತಾನೇ ಹೇಗೆ ಸಿಗುತ್ತದೆ? ಅಯ್ಯೋ’ ಎಂದು ಅಲವತ್ತುಕೊಂಡೆ. ಪುಟ್ಟವನಿದ್ದಾಗ ಬಾಡಿಗೆ ಮನೆಯಾದರೂ ಹಿತ್ತಲಿನ ಒಂಚೂರು ಜಾಗವನ್ನು ಹದ ಮಾಡಿ, ಕೊತ್ತಂಬರಿ ಬೀಜ ಮತ್ತು ಮೆಂತ್ಯಕಾಳನ್ನು ಚೆಲ್ಲಿದ ವಾರಕ್ಕೆಲ್ಲ ಪುಟ್ಟದಾದ ಹಸಿರು ಗಿಡ ಮೊಳಕೆಯೊಡೆವಾಗ ನೋಡಿ ಹಿಗ್ಗಿದ್ದು ಬಾಲ್ಯದ ವಿಸ್ಮಯಗಳಲ್ಲಿ ಒಂದು. ಕಂದುಬಣ್ಣದ ಹಳದಿ ಮಿಶ್ರಿತ ಮತ್ತು ಹಸಿರು ಬಣ್ಣದ ಮೆಂತ್ಯದ ಕಾಳುಗಳನ್ನು ಸ್ಪರ್ಶಿಸುವುದೇ ನನಗೆ ಖುಷಿ; ಇನ್ನು ಸೇವನೆಯಂತೂ ಮಹದಾನಂದ.
ನಮ್ಮ ಮನೆಯಲ್ಲಿ ತುಸು ಹೆಚ್ಚೇ ಎನ್ನುವಂತೆ ಅಜ್ಜಅಜ್ಜಿಯರ ಕಾಲದಿಂದಲೂ ಮೆಂತ್ಯದ ಬಳಕೆ. ಅದರಲ್ಲೂ ನಮ್ಮಮ್ಮನ ಮನೆತನದವರು ‘ಹೋಗೀ ಬಂದು ಮೂಗಿ ಸುತ್ತ’ ಎಂಬ ಗಾದೆಯಂತೆ, ಪದೇ ಪದೇ ಮೆಂತ್ಯಕಾಳಿನ ಗೊಜ್ಜನ್ನೋ, ಮೆಂತ್ಯಕಾಳಿನ ಹುಳಿ (ಸಾಂಬಾರು)ಯನ್ನೋ ಮೆಂತ್ಯಸೊಪ್ಪಿನ ಕಲಸನ್ನವನ್ನೋ ಮಾಡುತ್ತಿದ್ದರು. ಅದು ನಮ್ಮಮ್ಮನಿಗೂ ಚಾಳಿಯಾಯಿತು. ರುಚಿಕರವಾಗಿ ಮಾಡುತ್ತಿದ್ದುದರಿಂದ ನನಗೂ ತುಂಬಾನೇ ಇಷ್ಟವಾಯಿತು. ಇನ್ನು ಮೆಂತ್ಯವನ್ನು ಹೆಚ್ಚು ಹಾಕಿ ಮಾಡಿದ ದೋಸೆಯಂತೂ ಪಂಚಪ್ರಾಣ. ಒಂದು ಕಡೆ ಅವಲಕ್ಕಿ, ಇನ್ನೊಂದು ಕಡೆ ಮೆಂತ್ಯವು ನಮ್ಮನ್ನಾಳುವ ದೊರೆಯೇ ಆದವು. ಪ್ರತಿದಿನ ತಯಾರಿಸಿಕೊಟ್ಟರೂ ಬೇಡವೆನ್ನದೇ ತಿನ್ನುವಷ್ಟು ವ್ಯಾಮೋಹ ಬೆಳೆಯಿತು. ‘ಅದನ್ನದನ್ನೇ ತಿಂದು ಬೇಸರವಾಗುವುದಿಲ್ಲವೇ ನಿಮಗೆ?’ ಎಂದು ಬಹಳ ಮಂದಿ ಆತ್ಮೀಯರು ಕೇಳಿದ್ದುಂಟು: ‘ಮಡದಿಯೇ ಮನದನ್ನೆಯಾದಾಗ ಬೇಸರವೆಲ್ಲಿ?’ ಎಂದು ನಾನು ಮರುಪ್ರಶ್ನಿಸಿ, ಅಂಥವರಿಗೊಂದು ಆಲಂಕಾರಿಕ ಉತ್ತರ ನೀಡುವೆ. ದಿನವೂ ಅದನ್ನೇ ಮಾಡುತ್ತಾರೆಂದು ಇಷ್ಟವೋ? ಇಷ್ಟವೆಂದು ದಿನವೂ ಅದನ್ನೇ ಮಾಡುತ್ತಾರೆಯೋ? ಎಂದು ಕೇಳಿದಂತೆ. ದಿನವೂ ಅವಲಕ್ಕಿಯೊಗ್ಗರಣೆ ಹಾಕಿ ಕೊಟ್ಟರೂ ನಾನು ಬೇಸರಿಸದೇ ನನ್ನ ಪಾಲಿನ ಭಾಗ್ಯವೆಂದು ಹೇಗೆ ಆಸ್ವಾದಿಸಿಕೊಂಡು ತಿನ್ನುವೆನೋ ಹಾಗೆಯೇ ದಿನವೂ ಮೆಂತ್ಯದ ದೋಸೆ, ಮೆಂತ್ಯದ ಗೊಜ್ಜು, ಮೆಂತ್ಯ ಬೇಳೆ ಹುಳಿ, ಮೆಂತ್ಯಸೊಪ್ಪಿನ ಚಿತ್ರಾನ್ನ ಕೊಟ್ಟರೂ ಮುಖ ಸಿಂಡರಿಸದೇ ತಿನ್ನಬಲ್ಲೆ. ಏಕೆಂದರೆ ಇದು ಕೇವಲ ಇಷ್ಟದ ವಿಚಾರವಲ್ಲ; ಪ್ರೀತಿ ಮತ್ತು ಮೋಹದ ಜಾಲ! ಅದು ಜಾಲವೆಂದು ಗೊತ್ತಿದ್ದೂ ಅದರೊಳಗೆ ಇಷ್ಟಪಟ್ಟೇ ಸಿಲುಕಿಕೊಳ್ಳುವುದಿಲ್ಲವೇ ಹಾಗೆ ಉಸಿರು ನಿಲ್ಲುವುದರೊಳಗೆ ಅಥವಾ ಅರಗಿಸಿಕೊಳ್ಳುವಷ್ಟು ಹೊತ್ತು ಎಷ್ಟು ಸಾಧ್ಯವೋ ಅಷ್ಟೂ ಕಾಲ ಮೆಂತ್ಯದ ಅಡುಗೆಗಳನ್ನು ತಿಂದು ಬಿಡಬೇಕೆಂಬ ಅತ್ಯಾಸೆ; ದುರಾಸೆ ಎಂದರೂ ನಡೆದೀತು!
ಮೆಂತ್ಯಗೊಜ್ಜು, ಮೆಂತ್ಯದೋಸೆ, ಮೆಂತ್ಯಹುಳಿ, ಮೆಂತ್ಯಬಾತು ಇವುಗಳಲ್ಲಿ ಯಾವುದು ತುಂಬಾ ಇಷ್ಟ? ಎಂದು ಕೇಳಿದರೆ ತಾಯಿಗೆ ತನ್ನ ನಾಲ್ವರು ಮಕ್ಕಳಲ್ಲಿ ಯಾರಿಷ್ಟ? ಎಂದು ಪ್ರಶ್ನಿಸಿದಂತೆ! ಬೇರೆ ಬೇರೆ ಕಾರಣಕ್ಕಾಗಿ ಎಲ್ಲರನ್ನೂ ಪ್ರೀತಿಸುವಂತೆ, ಮುದ್ದಿಸುವಂತೆ. ವಾರದಲ್ಲಿ ಒಮ್ಮೆಯಾದರೂ ಈ ನಾಲ್ಕು ರೆಸಿಪಿಗಳಲ್ಲಿ ಒಂದು ಗ್ಯಾರಂಟಿ ನಮ್ಮ ಮನೆಯಲ್ಲಿ. ಮೆಂತ್ಯಬೇಳೆ ಹುಳಿಯನ್ನು ನಮ್ಮಮ್ಮ ತಿನ್ನದಿದ್ದರೂ ಸೊಗಸಾಗಿ ಮಾಡುತ್ತಿದ್ದರು. ನಮ್ಮ ಮನೆಗೆ ಸೊಸೆಯಾಗಿ ಬಂದ ಮೇಲೆ ಮಡದಿಗೂ ಅದು ಪಳಗಿತು. ತುಂಬ ವರುಷಗಳ ಕಾಲ ಮೆಂತ್ಯ ಕಂಡರೇ ಆಗದ ನನ್ನ ಮಗನು ಇತ್ತೀಚೆಗೆ ಆಯುರ್ವೇದ ಮತ್ತು ಆಹಾರದ ಶಾಸ್ತ್ರೋಕ್ತ ಅಥವಾ ವೈಜ್ಞಾನಿಕ ಬಳಕೆಯ ಕಾರಣವಾಗಿ ತಿನ್ನುತ್ತಿರುವನು. ಒಟ್ಟಿನಲ್ಲಿ ನಮ್ಮ ಮನೆಯೇ ಮೆಂತ್ಯಮಯ, ಮೆಂತ್ಯಸೊಪ್ಪು ದುಬಾರಿಯಾಗಿಯೋ ದುರ್ಲಭವಾಗಿಯೋ ಆದಾಗ ಮೆಂತ್ಯ ಕಾಳಿನ ಬಳಕೆ. ಒಮ್ಮೊಮ್ಮೆ ಮೆಂತ್ಯಸೊಪ್ಪಿನ ಕಟ್ಟು ಐವತ್ತು ರೂಗಳಷ್ಟಾದಾಗ ತರುವುದಿಲ್ಲ. ಐದುರೂಪಾಯಿಗೆ ಒಂದು ಕಟ್ಟು ಸಿಗುವಾಗ ಹೇರಳ ಬಳಕೆ. ಒಟ್ಟಿನಲ್ಲಿ ಆಯಾ ಕಾಲದ ತರಕಾರಿ ಸೀಸನ್ನು ಗುರುತಿಸಿಕೊಂಡು ಅಡುಗೆ ಮಾಡುವ ಪದ್ಧತಿ ಆಗಿನಿಂದಲೂ. ‘ಮೆಂತ್ಯ ಬಳಸಿ ಮಾಡಿದ ಅಡುಗೆಯು ಕಹಿಯಾಗುವುದಿಲ್ಲವೇ?’ ಎಂದು ಹಲವರು ಪ್ರಶ್ನಿಸುತ್ತಾರೆ; ಆದರೆ ಹದವರಿತು, ಕ್ರಮವರಿತು ಮಾಡುವ ಪ್ರಯತ್ನ ಮಾಡುವುದಿಲ್ಲ; ಕೆಲವರಿಗೆ ಒಗ್ಗುವುದಿಲ್ಲ ಎಂಬುದೂ ಸತ್ಯ. ಅವರು ಬಳಸುವ ಕೆಲವೊಂದು ರೆಸಿಪಿಗಳೂ ತರಕಾರಿಗಳೂ ನಮಗೆ ಸೇರುವುದಿಲ್ಲವಲ್ಲ, ಹಾಗೆ ಅಂತಂದುಕೊಂಡು ಸುಮ್ಮನಾಗುವೆ. ಮೆಂತ್ಯಬೇಳೆ ಹುಳಿಯನ್ನು ತಿನ್ನದವರು ಸಹ ನಮ್ಮ ಮನೆಯ ಮೆಂತ್ಯಗೊಜ್ಜನ್ನು ತಿನ್ನದೇ ಇರರು. ಮೆಂತ್ಯಕಾಳನ್ನು ಬಳಸುವಾಗ ಒಂದು ಚಮಚೆ ಎಣ್ಣೆಯಲ್ಲಿ ಹುರಿದು ಕೆಂಪಗೆ ಮಾಡಿಕೊಳ್ಳಬೇಕು. ಇದೇ ಒಳಗುಟ್ಟು; ಆಗ ಅದರ ಕಹಿಯ ಬಹ್ವಂಶ ಕಾಣೆಯಾಗುವುದು ಖಂಡಿತ. ಮೆಂತ್ಯಬೇಳೆ ಹುಳಿಯು ಉಳಿದರೆ ನಿಸ್ಸಂಶಯವಾಗಿ ಮಾರನೆಯ ದಿನ ಮಧ್ಯಾಹ್ನದ ಊಟಕ್ಕೂ ಡಬ್ಬಿಗೆ ಅನ್ನದ ಜೊತೆ ತೆಗೆದುಕೊಂಡು ಹೋಗುವುದು ಖಾತ್ರಿ. ಅಥವಾ ರೊಟ್ಟಿ, ಚಪಾತಿಯ ಬೆಳಗಿನ ಉಪಾಹಾರಕ್ಕೆ ನಂಚಿಕೊಳ್ಳುವುದು ಇಷ್ಟದ ಮೆನು. ಇನ್ನು ಮೆಂತ್ಯಗೊಜ್ಜನ್ನಂತೂ ವಾರಾನುಗಟ್ಟಲೆ ಕಾಪಿಟ್ಟು, ಬಳಸಬಹುದು. ಇದೊಂಥರ ಪುಳಿಯೋಗರೆ ಗೊಜ್ಜಿನಂತೆ. ಇಟ್ಟು ಬಳಸುವ ರೆಸಿಪಿ. ಸಾಸುವೆಯೊಗ್ಗರಣೆ ಮತ್ತು ಕಡಲಬೀಜದ್ದು ಮೆತ್ತಗಾಗಬಾರದು ಎಂಬ ಕಾರಣಕ್ಕಾಗಿ ನನ್ನ ಮಡದಿಯು ಹೊಸ ಟೆಕ್ನಿಕ್ಕೊಂದನ್ನು ಕಂಡುಕೊಂಡಿದ್ದಾಳೆ. ಹಾಗಾಗಿ, ಗಟ್ಟಿಗೊಜ್ಜಿನ ಕೊನೆಯ ಹನಿಯವರೆಗೂ ಕಡಲೇಬೀಜದ ಕಟುಂ ಕುಟುಂ ಗುಣ ಮಿಸ್ಸಾಗುವುದಿಲ್ಲ! ಈ ಗೊಜ್ಜನ್ನು ಊಟಕ್ಕೂ ತಿಂಡಿಗೂ ಬಳಕೆ ಮಾಡಬಹುದು. ದೋಸೆ, ಚಪಾತಿ, ರೊಟ್ಟಿ, ಉಪ್ಪಿಟ್ಟಿಗು ಸಹ ಸೈಡಿನಲ್ಲಿಟ್ಟುಕೊಂಡು ವ್ಯಂಜನದಂತೆ ನಂಚಿಕೊಳ್ಳಬಹುದು. ಮಧ್ಯಾಹ್ನದ ಊಟಕ್ಕೆಂದು ಉದುರುದುರಾದ ಬಿಸಿಯನ್ನದ ಜೊತೆಗೆ ಕಲೆಸಿಕೊಂಡು, ಒಂದು ಚಮಚೆ ಕಡಲೆಕಾಯಿ ಎಣ್ಣೆಯ ಘಮದೊಂದಿಗೆ ಬೆರೆಸಿಕೊಂಡು ತುತ್ತನ್ನಾಗಿಸಿ ತಿನ್ನುತ್ತಿದ್ದರೆ ಇನ್ನುಳಿದ ಷಡ್ರಸ ಭೋಜನ ಯಾವ ಲೆಕ್ಕ? ಅವೆಲ್ಲವೂ ನಾಚಿ ನೀರಾಗಿ, ನಾಲಗೆಯ ಸಲೈವಾವೇ ಆಗಿ ಪರಿವರ್ತಿತ! ಇವನ್ನೆಲ್ಲ ಬರೆದು ಪ್ರಯೋಜನವಿಲ್ಲ ಎನ್ನುವಿರೋ? ತಿಂದರಷ್ಟೇ ಸರಿ. ನೋಡಿದರೆ, ಕೇಳಿದರೆ ಬಾಯಲ್ಲಿ ನೀರಾಡೀತು; ಆದರೆ ನಾಲಗೆಯ ಮೇಲೆ ಅದು ಬಿದ್ದರಷ್ಟೇ ರುಚಿಗೆ ಅರ್ಥ ಅಂತಲೂ ಅನ್ನುವಿರೋ!?
ಇನ್ನು ಮೆಂತ್ಯಬಾತು ಎಂದು ಒಮ್ಮೊಮ್ಮೆ ಕೆಲವು ಹೊಟೆಲುಗಳಲ್ಲಿ ಕೊಡುವುದು ರೂಢಿ. ಮನೆಯಲ್ಲಿ ಸಹ ಮೆಂತ್ಯಸೊಪ್ಪಿನ ಕಲಸನ್ನ ಮಾಡುವುದು ಸುಲಭ. ಮೆಂತ್ಯಸೊಪ್ಪಿನ ಜೊತೆಗೆ ಹಸಿ ಅವರೆಕಾಳು ಅಥವಾ ಹಸಿ ತೊಗರಿಕಾಳು ಒಳ್ಳೆಯ ಕಾಂಬಿನೇಷನ್ನು. ಕಾಳುಗಳ ಸೀಸನ್ ಇಲ್ಲದಿದ್ದಾಗ ಸೊಪ್ಪಿನ ಜೊತೆಗೆ ಆಲೂಗೆಡ್ಡೆ, ಕ್ಯಾರೆಟ್‌ಗಳಂತೂ ಡೆಡ್ಲಿ ಕಾಂಬಿನೇಷನ್ನು. ಇನ್ನೊಂದಿದೆ. ಅದೇ ಗೋರಿಕಾಯಿ ಅಥವಾ ಜವಳಿಕಾಯಿ. ಗೋರಿಕಾಯಿ ಮತ್ತು ಮೆಂತ್ಯಸೊಪ್ಪಿನ ಕಲಸನ್ನವಂತೂ ನನಗೆ ಬಹು ಇಷ್ಟ. ಅವರೆಕಾಳು ದೇಹಕ್ಕೆ ಈಗ ಒಗ್ಗುತ್ತಿಲ್ಲವೆಂದು ಗುರುತಿಸಿಕೊಂಡು ಕೈ ಬಿಡಲಾಗಿದೆ; ತೊಗರಿಕಾಳು ತೊಂದರೆಯಿಲ್ಲ!
‘ಮೆಂತ್ಯವು ದೇಹಕ್ಕೆ ತಂಪು’ ಎಂಬ ಕಾರಣಕ್ಕಾಗಿ ಮನೆಗಳಲ್ಲಿ ಹೇರಳವಾಗಿ ಬಳಸುವುದು ಪ್ರಾಚೀನರಿಂದ ನಡೆದುಕೊಂಡು ಬಂದ ಪದ್ಧತಿ. ಶರೀರದ ಉಷ್ಣಾಂಶವನ್ನು ತೆಗೆದು ಹಾಕುವ ಶಕ್ತಿ ಮೆಂತ್ಯಕ್ಕಿದೆ. ರಾತ್ರಿಯ ವೇಳೆ ಒಂದು ಚಮಚೆ ಮೆಂತ್ಯಕಾಳನ್ನು ನೀರಿನಲ್ಲಿ ನೆನೆ ಹಾಕಿ, ಬೆಳಗ್ಗೆ ಎದ್ದ ಮೇಲೆ ನೀರು ಕುಡಿದು ಊದಿಕೊಂಡು ದಪ್ಪಗಾದ ಕಾಳನ್ನು ಅಗಿದು ತಿಂದು, ಅದರ ನೀರು ಕುಡಿಯುತ್ತಾ ಬಂದರೆ ದೇಹದ ಉಷ್ಣತೆಯೆಲ್ಲಾ ಜರ‍್ರನೆ ಇಳಿಯುವುದು ಗ್ಯಾರಂಟಿ; ಇದು ಮನೆ ಮದ್ದು. ಇನ್ನು ಮೆಂತ್ಯಸೊಪ್ಪಿನ ಪರೋಟವಂತೂ ಇನ್ನೊಂದು ಹಂತದ ರುಚಿ ಪ್ರಪಂಚ. ಮೇತಿರೋಟಿ, ಮೇತಿ ಪರೋಟಗಳು ಬಹು ಜನಪ್ರಿಯ. ಮೈದಾಹಿಟ್ಟು ಬಳಸದೇ ಗೋದಿಹಿಟ್ಟಿನಲ್ಲೇ ಪರೋಟ ಮಾಡುವಾಗ ಆಲೂಗೆಡ್ಡೆಗೆ ಬದಲಾಗಿ ಮೆಂತ್ಯಸೊಪ್ಪನ್ನು ಬಳಸಿದರೆ ಆರೋಗ್ಯಕಾರಿ ಕೂಡ. ಆಲೂಗೆಡ್ಡೆ, ಅವರೆಕಾಳು-ಇವೆರಡನ್ನು ಐವತ್ತಾದ ಮೇಲೆ ತಿನ್ನದೇ ಇರುವುದು ಕ್ಷೇಮ. ಏಕೆಂದರೆ ಇವೆರಡೂ ವಾಯುವಿಕೋಪಿ ಮತ್ತು ಪ್ರಕೋಪಿ. ಮಸಾಲೆ ಅಕ್ಕಿರೊಟ್ಟಿ ಮಾಡುವಾಗ ಮೆಂತ್ಯಸೊಪ್ಪು ಹಾಕುವುದು ನಮ್ಮ ಮನೆಯ ಅಭ್ಯಾಸ. ಸಣ್ಣಗೆ ಹೆಚ್ಚಿದ ಮೆಂತ್ಯಸೊಪ್ಪು ಅಕ್ಕಿರೊಟ್ಟಿಯ ರುಚಿಯನ್ನೂ ಚೆಲುವನ್ನೂ ಹೆಚ್ಚಿಸುತ್ತದೆ. ಕೈಯಿಂದ ತಟ್ಟಿ, ಬಾಣಲೆಯಲ್ಲಿ ಬೇಯಿಸುವಾಗ ಹುಣ್ಣಿಮೆಯ ಚಂದಿರನಂತೆ ಕಂಡು ಕಂಗೊಳಿಸುತ್ತದೆ! ತಿನ್ನುವಾಗ ಎಲ್ಲಿ ಮುರಿದರೆ ಚಂದ್ರನನ್ನೇ ಮುರಿದುಬಿಟ್ಟೆವೇನೋ ಎಂದೆನಿಸಿ, ನೋಡುತ್ತ ಕುಳಿತುಬಿಡೋಣ ಎಂದೂ ಅನಿಸುತ್ತದೆ! ಅಷ್ಟು ಚೆಂದ ಅದರ ಆಕಾರ; ದುಂಡನೆಯ ಚಂದ್ರಮುಖೀ ಸಾಕಾರ. ಮೆಂತ್ಯಸೊಪ್ಪು ಔಷಧೀಯ ಸಸ್ಯ ಕೂಡ. ಇದರಲ್ಲಿ ಕೊಲೆಸ್ಟಾçಲ್ ಕಡಮೆ ಮಾಡುವ ಗುಣವಿದೆ; ಐರನ್, ಕ್ಯಾಲ್ಸಿಯಂ, ಫೋಲಿಕ್ ಆಸಿಡ್ ಮತ್ತು ವಿಟಮಿನ್ ಎ, ಸಿ, ಕೆ ಗಳು ಸಹ ಇವೆಯಂತೆ, ಮಹಿಳೆಯರ ಹಾರ್ಮೋನ್ ಅಸಮತೋಲನಕ್ಕೆ ಮದ್ದಂತೆ, ಪಚನ ಕ್ರಿಯೆಗೆ ಸಹಕಾರಿ, ಇನ್ಸುಲಿನ್ ಪ್ರಕ್ರಿಯೆಗೆ ಚೋದಕ, ತ್ವಚೆಯನ್ನು ತಾಜಾ ಆಗಿ ಇಡಲು ಸಹಾಯಕ, ಕೂದಲಿಗೆ ಪೋಷಕಾಂಶ, ಆಯುರ್ವೇದದಲ್ಲಿ ರಕ್ತಶುದ್ಧಿಗೆ ಪೂರಕ, ಇದರ ಸೇವನೆಯಿಂದ ತಾಯಂದಿರಲ್ಲಿ ಎದೆಹಾಲಿನ ಪ್ರಮಾಣ ಅಧಿಕ. ಇವೆಲ್ಲವನ್ನೂ ಚರಕ ಮತ್ತು ಸುಶ್ರುತರೇ ಹೇಳಿ, ಮೆಂತ್ಯ ಬಳಸಬೇಕೆಂದು ಸಲಹೆ ನೀಡಿದ್ದಾರೆ! ಒಟ್ಟಿನಲ್ಲಿ ಆರೋಗ್ಯಕಾರಿ ಎಂಬುದಂತೂ ಖಾತ್ರಿ. ಮೆಂತ್ಯವನ್ನು ಯಾವ ರೂಪದಲ್ಲಾದರೂ ಸೇವಿಸದಿದ್ದರೆ ನಾವು ಬಹಳಷ್ಟನ್ನು ಕಳೆದುಕೊಳ್ಳುತ್ತೇವೆ ಜೊತೆಗೆ ಹೆಚ್ಚಾಗಿ ಸೇವಿಸಿದ ಮಾತ್ರಕೇ ಏನೋ ಸಮಸ್ಯೆ ಎಂಬುದು ಸಹ ಇಲ್ಲ. ಹೀಗಿರುವಾಗ ತುಷ್ಟಿಯೂ ಪುಷ್ಟಿಯೂ ರುಚಿಕರವೂ ಆದ ಮೆಂತ್ಯದ ಸೊಪ್ಪು ಮತ್ತು ಮೆಂತ್ಯದ ಕಾಳುಗಳಿಂದ ಸಿದ್ಧಪಡಿಸಲಾದ ಖಾದ್ಯಗಳು ನಮಗೆ ವರವೇ ಸರಿ. ಇದೊಂದು ಹಸಿರು ಆಹಾರ; ಹೆಸರು ಮಾಡಿರುವ ಆಹಾರ. ಇದು ಕಹಿಯೆಂದು ದೂರವಿಟ್ಟರೆ ಅಂಥವರ ಬಗ್ಗೆ ಕನಿಕರವಿರಲಿ ಅಷ್ಟೇ.
ನೂರು ಗ್ರಾಂ ಮೆಂತ್ಯ ಕಾಳುಗಳಲ್ಲಿ 23 ಗ್ರಾಂ ಪ್ರೋಟೀನು, 25 ಗ್ರಾಂ ಫೈಬರು, 176 ಮಿಲಿಗ್ರಾಂ ಕ್ಯಾಲ್ಸಿಯಮ್ಮು, 33 ಮಿಲಿಗ್ರಾಂ ಐರನ್ನು, 191 ಮಿಲಿಗ್ರಾಂ ಮ್ಯಾಗ್ನಿಷಿಯಮ್ಮು, 296 ಮಿಲಿ ಗ್ರಾಂ ಫಾಸ್ಪರಸ್ಸು ಇರುತ್ತದಂತೆ. ಈ ಖನಿಜಾಂಶಗಳಿರುವುದರಿಂದಲೇ ಮೆಂತ್ಯಕಾಳುಗಳಲ್ಲಿ ಪೋಷಕಮೌಲ್ಯಗುಣವಿದೆ. ಅಷ್ಟೇ ಅಲ್ಲ, ಮೆಂತ್ಯವನ್ನು ಒಂದು ಚಮಚೆ ಎಣ್ಣೆಯಲ್ಲಿ ಹುರಿದು ನುಣ್ಣಗೆ ಪುಡಿ ಮಾಡಿಟ್ಟುಕೊಂಡು ಅನ್ನಕ್ಕೆ ಬಳಸಬಹುದು. ಇದನ್ನು ನಮ್ಮಜ್ಜಿ ಕಾಲದಿಂದಲೂ ಮೆಂತ್ಯದ ಹಿಟ್ಟು ಎಂದು ಕರೆದು ಊಟಕ್ಕೆ ಬಳಸಿಕೊಳ್ಳಲಾಗುತ್ತಿದೆ. ಬಾಣಲೆಯನ್ನು ಒಲೆಯ ಮೇಲಿಟ್ಟು, ಸ್ವಲ್ಪ ನೀರನ್ನು ಹಾಕಿ, ಇದೇ ಮೆಂತ್ಯದ ಹಿಟ್ಟನ್ನು ಹಾಕಿ, ಚೆನ್ನಾಗಿ ಕದಡಿ, ಹುಣಸೇನೀರು, ಒಂದು ಚಮಚೆ ಸಾರಿನಪುಡಿ, ಒಂಚೂರು ಬೆಲ್ಲ ಮಿಶ್ರಿಸಿ, ಅದಕ್ಕೆ ಒಣಮೆಣಸಿನಕಾಯಿ ಮತ್ತು ಸಾಸುವೆಯೊಗ್ಗರಣೆ ಹಾಕಿದರೆ ತಾತ್ಕಾಲಿಕವಾದ ಮೆಂತ್ಯದ ಹಿಟ್ಟಿನ ಗೊಜ್ಜು ತಯಾರು. ಇದು ನಂಚಿಕೊಳ್ಳಲು ಸೈ; ಅನ್ನಕ್ಕೆ ಕಲೆಸಿಕೊಂಡು ತಿನ್ನಲೂ ಸೈ. ನಮ್ಮಮ್ಮನ ಕಾಲದಲ್ಲಿ ಮೆಂತ್ಯದ ಕಾಳುಗಳನ್ನು ಕೊಬ್ಬರಿ ಎಣ್ಣೆಗೆ ಬೆರೆಸಿಟ್ಟು, ತಲೆಗೆ ಹಚ್ಚುತ್ತಿದ್ದರು, ‘ತಂಪು ತಂಪು ಕೂಲ್ ಕೂಲ್’ ಆಗಲೆಂದು! ಮೆಂತ್ಯದ ಕಾಳುಗಳಿಗೆ ಸ್ವಲ್ಪ ಶುಂಠಿ, ಜೀರಿಗೆ ಮತ್ತು ಶುದ್ಧ ತುಪ್ಪ ಸೇರಿಸಿ, ಬೇಯಿಸಿ ಸಿದ್ಧಪಡಿಸಿದ ಕಷಾಯವು ನೆಗಡಿ ಮತ್ತು ಕೆಮ್ಮಿಗೆ ರಾಮಬಾಣವಂತೆ.
ಗೊತ್ತಿಲ್ಲದವರಿಗೆ ಮೆಂತ್ಯಬೇಳೆಹುಳಿ (ಸಾಂಬಾರು)ಯ ರೆಸಿಪಿಯನ್ನು ಹೇಳಿಯೇ ಬಿಡುವೆ: ಮೊದಲಿಗೆ ಬಾಣಲೆಯಿಟ್ಟು ಒಗ್ಗರಣೆಗಿಂತ ಸ್ವಲ್ಪ ಹೆಚ್ಚೇ ಎನ್ನುವಷ್ಟು ಅಡುಗೆಯೆಣ್ಣೆ ಹಾಕಿ ಬಿಸಿಮಾಡಿಕೊಳ್ಳಬೇಕು. ಆನಂತರ ಒಂದು ಟೀ ಸ್ಪೂನು ಸಾಸುವೆ, ಎರಡು ಟೀ ಸ್ಪೂನು ಒಣ ಮೆಂತ್ಯಕಾಳನ್ನು ಹಾಕಬೇಕು. ಜೊತೆಗೆ ಕರಿಬೇವಿನ ಎಲೆ ಮತ್ತು ಇಂಗನ್ನು ಬೆರೆಸಬೇಕು. ಮೆಂತ್ಯವು ಕೆಂಪಗಾಗುವ ತನಕ ಕರಿಯಬೇಕು. ಆಮೇಲೆ ಪ್ರತ್ಯೇಕವಾಗಿ ಎತ್ತಿಟ್ಟುಕೊಳ್ಳಬೇಕು. ಅರೆಪಾವು ತೊಗರಿಬೇಳೆಗೆ ಒಂದು ಚಮಚೆ ಅಡುಗೆ ಅರಿಷಿಣ ಬೆರೆಸಿ, ಹಣ್ಣಾದ ಎರಡು ಟೊಮ್ಯಾಟೊ ಹಣ್ಣುಗಳನ್ನು ನಾಲ್ಕು ಭಾಗ ಮಾಡಿ ಸೇರಿಸಿ, ಪುಟ್ಟ ಕುಕ್ಕರಿನಲ್ಲಿಟ್ಟು ಬೇಯಿಸಿಕೊಳ್ಳಬೇಕು. ಬೆಂದ ಮೇಲೆ ಟೊಮ್ಯಾಟೊ ಹಣ್ಣುಗಳ ತುಣುಕುಗಳನ್ನು ಬೇರ್ಪಡಿಸಿ, ಬೆಂದ ಬೇಳೆಯನ್ನು ಪಕ್ಕಕ್ಕಿಟ್ಟುಕೊಂಡು, ಟೊಮ್ಯಾಟೊ ತುಣುಕುಗಳನ್ನು ಮಿಕ್ಸಿಗೆ ಹಾಕಿಕೊಳ್ಳಬೇಕು. ಜೊತೆಗೆ ಒಂದು ಬಟ್ಟಲು ಒಣಕೊಬ್ಬರಿಯ ತುರಿ, ಒಂಚೂರು ಬೆಲ್ಲ ಮತ್ತು ಒಂದು ಚಮಚೆ ಹುಳಿಪುಡಿಯನ್ನು ಸೇರಿಸಿ ತರಿತರಿಯಾಗಿ ಮಿಕ್ಸಿ ಮಾಡಿಕೊಳ್ಳಬೇಕು. (ನಮ್ಮಲ್ಲಿ ತಿಳಿಸಾರಿಗೆ ಸಾರಿನಪುಡಿ, ತರಕಾರಿ ಸಾಂಬಾರಿಗೆ ಹುಳಿಪುಡಿ ಮತ್ತು ಪಲ್ಯಕ್ಕಾಗಿ ಪಲ್ಯದ ಪುಡಿ ಎಂದು ಮೂರು ವಿಧವಾಗಿ ಮಾಡಿಟ್ಟುಕೊಂಡಿರುತ್ತೇವೆ.)
ಬಾಣಲೆಯನ್ನು ಒಲೆಯ ಮೇಲಿಟ್ಟು, ಒಂದು ಲೋಟ ನೀರು ಹಾಕಿ, ಬೆಂದ ತೊಗರಿಬೇಳೆ ಮತ್ತು ಮಿಕ್ಸಿ ಮಾಡಿಟ್ಟುಕೊಂಡ ಅಷ್ಟನ್ನೂ ಸೇರಿಸಿ ಕುದಿಯಲು ಬಿಡಬೇಕು. ಹೀಗೆ ಕುದಿಯುವಾಗ ಕೆಂಪಗೆ ಬಾಡಿಸಿ, ಎತ್ತಿಟ್ಟುಕೊಂಡಿದ್ದ ಮೆಂತ್ಯ, ಸಾಸುವೆ ಇತ್ಯಾದಿಯನ್ನು ಬೆರೆಸಬೇಕು. ಜೊತೆಗೆ ಹುಣಸೆಹಣ್ಣಿನ ತಿಳಿನೀರು ಮತ್ತು ಅರ್ಧ ಚಮಚೆ ಅಡುಗೆಯುಪ್ಪನ್ನು ಸೇರಿಸಬೇಕು. ಸಾಂಬಾರುಗಟ್ಟಿಯಾಗುವವರೆಗೂ ಕುದಿಸಿದರೆ (ಅಂದಾಜು ಐದ್ಹತ್ತು ನಿಮಿಷ) ಮೆಂತ್ಯಬೇಳೆ ಹುಳಿಯು ಸೇವಿಸಲು ಸಿದ್ಧ. ಮೆಂತ್ಯದ ಕಹಿಯಂಶವು ಸಂಪೂರ್ಣ ಹೋಗಿರುವುದು ಮತ್ತು ರುಚಿಕರವೂ ಆರೋಗ್ಯಕರವೂ ಆದ ರೆಸಿಪಿ ನಮಗೆ ದೊರೆಯುವುದು. ಒಂದು ಪಕ್ಷ ಉಳಿದರೆ ಫ್ರಿಜ್ಜಿನಲ್ಲಿಟ್ಟು, ಮಾರನೆಯ ದಿನ ತೆಗೆದು ಐದು ನಿಮಿಷ ಕುದಿಸಿದರೆ ಸಾಂಬಾರು ಮತ್ತೆ ತಿನ್ನಲು ಯೋಗ್ಯವಾಗುವುದು. ಈ ಮೆಂತ್ಯಬೇಳೆಹುಳಿಯನ್ನು ಅನ್ನಕ್ಕೆ ಕಲೆಸಿಕೊಳ್ಳುವಾಗಲೇ ಒಂದು ಚಮಚೆ ಶುದ್ಧ ಕಡಲೆಕಾಯಿ ಎಣ್ಣೆಯನ್ನು ಹಾಕಿಕೊಂಡರೆ ಆಹಾ! ಅದರ ಪರಿಮಳವೋ, ರುಚಿಯೋ, ಮಾಮೂಲಿಗಿಂತ ಒಂದು ತುತ್ತು ಜಾಸ್ತಿಯೇ ತಿಂದಿರುತ್ತೇವೆ. ಈ ಹುಳಿಯನ್ನು ರೊಟ್ಟಿ, ಚಪಾತಿಗೆ ವ್ಯಂಜನವಾಗಿಯೂ ಬಳಸಬಹುದು.
ಹುಳಿಪುಡಿ ಮಾಡಲು ಬೇಕಾಗುವ ಸಾಮಗ್ರಿಗಳು: ದನಿಯಾ ಅಂದರೆ ಕೊತ್ತಂಬರಿಬೀಜ, ಖಾರದ ಪ್ರಮಾಣವನ್ನವಲಂಬಿಸಿ ಗುಂಟೂರು ಮತ್ತು ಬ್ಯಾಡಗಿ ಎರಡೂ ಥರದ ಮೆಣಸಿನಕಾಯಿ, ಕಡಲೇಬೇಳೆ ಮತ್ತು ಉದ್ದಿನಬೇಳೆ, ಚಕ್ಕೆ ಮತ್ತು ಅರಿಶಿನಪುಡಿ. ಇವನ್ನು ಸ್ವಲ್ಪ ಎಣ್ಣೆಯಲ್ಲಿ ಚೆನ್ನಾಗಿ ಹುರಿದು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳುವುದು, ಹುರಿಯುವ ಮುನ್ನ ಮೆಣಸಿನಕಾಯಿಯು ಗಲಗಲ ಎನ್ನುವಂತೆ ಚೆನ್ನಾಗಿ ಒಣಗಿರಬೇಕು, (ಗುಂಟೂರು ಖಾರಕ್ಕೆ; ಬ್ಯಾಡಗಿಯು ಬಣ್ಣಕ್ಕೆ) ಸಾರಿನ ಪುಡಿಗೆ ದನಿಯಾ ಜಾಸ್ತಿ ಬೇಕು. ಜೊತೆಗೆ ಎರಡು ಥರದ ಮೆಣಸಿನಕಾಯಿ, ಜೀರಿಗೆ, ಮೆಣಸು, ಮೆಂತ್ಯ, ಸಾಸುವೆ, ಕರಿಬೇವು ಸೊಪ್ಪು ಮತ್ತು ಅರಿಶಿನಪುಡಿ. ಹೀಗೆ ಪುಡಿಯನ್ನು ಬಳಸದಿದ್ದರೆ ಸಾಂಬಾರಾಗಲೀ ಗೊಜ್ಜಾಗಲೀ ರುಚಿ ಕಾಣದು.
ಇನ್ನು ಮೆಂತ್ಯಗೊಜ್ಜು ಮಾಡುವ ವಿಧಾನ: ಬೇಕಾಗುವ ಸಾಮಗ್ರಿಗಳು – ದಪ್ಪದಾದ ಎರಡು ನಿಂಬೆಹಣ್ಣು ಗಾತ್ರದ ಹುಣಸೇಹಣ್ಣು, ಐದು ಸ್ಪೂನು ಬೆಲ್ಲದ ಪುಡಿ ಅಥವಾ ಒಂದು ನಿಂಬೆ ಹಣ್ಣುಗಾತ್ರದ ಬೆಲ್ಲ, ಒಂದು ಚಮಚೆ ತಿಳಿಸಾರಿನ ಪುಡಿ, ಒಂದು ಸ್ಪೂನು ಇಂಗು ಮತ್ತು ಅಡುಗೆಯುಪ್ಪು, ಒಗ್ಗರಣೆಗೆ ಸಾಸುವೆ, ಕಡಲೇಬೇಳೆ, ಉದ್ದಿನಬೇಳೆ, ಕಡಲೆಕಾಯಿ ಬೀಜ ಮತ್ತು ಒಂದೆರಡು ಸ್ಪೂನು ಮೆಂತ್ಯದ ಕಾಳು.
ನಾಲ್ಕು ಚಮಚೆ ಎಣ್ಣೆಯು ಬಿಸಿಯಾದ ಮೇಲೆ ಸಾಸುವೆ, ಕಡಲೆಬೇಳೆ, ಉದ್ದಿನಬೇಳೆ, ಕಡಲೆಬೀಜ ಹಾಕಿ ಅದು ಗರಿಗರಿಯಾದ ಮೇಲೆ ಬೇರೆಡೆ ಎತ್ತಿಟ್ಟುಕೊಳ್ಳಬೇಕು. ಬಾಣಲೆಯಲ್ಲಿ ಉಳಿದ ಎಣ್ಣೆಗೆ ಮೆಂತ್ಯ, ಕರಿಬೇವು, ಇಂಗು ಹಾಕಿ ಎಣ್ಣೆಯಲ್ಲೇ ಹುರಿಯಬೇಕು. ಆಮೇಲೆ ಅದಕ್ಕೆ ನೆನೆಸಿಟ್ಟ ಹುಣಸೇರಸ (ಕಿವುಚಿ ಹಾಕಿ), ಉಪ್ಪು, ಸಾರಿನಪುಡಿ, ಬೆಲ್ಲ ಹಾಕಿ ಕುದಿಸಬೇಕು. ಹೀಗೆ ಕುದಿಸುವಾಗ ಅರ್ಧ ಚಮಚೆ ಅರಿಷಿಣ ಪುಡಿ ಸೇರಿಸಬೇಕು.ಗಟ್ಟಿ ಹದಕ್ಕೆ ಬಂದ ಮೇಲೆ ಸ್ಟವ್ ಆಫ್ ಮಾಡಿ, ಕರಿದು ಇಟ್ಟಿದ್ದ ಆ ಒಗ್ಗರಣೆಯನ್ನು ಸೇರಿಸಬೇಕು. ಹುಣಸೆಹಣ್ಣು ನೆನೆಯಲು ಒಂದೂವರೆ ಜಾಮೂನ್ ಕಪ್ ನೀರು ಬಳಸಿದರೆ ಸಾಕು, ಬೇರೆ ನೀರು ಮುಟ್ಟಿಸುವಂತಿಲ್ಲ. ನೀರು ಜಾಸ್ತಿಯಾದರೆ ಕುದಿಯುವುದು ಮತ್ತು ಗಟ್ಟಿಯಾಗುವುದು ನಿಧಾನವಾಗುತ್ತದಷ್ಟೇ. ಬೇಕೆನಿಸಿದರೆ ಹುರಿದು ಪುಡಿ ಮಾಡಿದ ಕರಿ ಎಳ್ಳಿನ ಪುಡಿಯನ್ನು ಒಂದು ಚಮಚೆ ಬೆರೆಸಬಹುದು. ಹುಳಿ, ಉಪ್ಪು, ಖಾರ, ಸಿಹಿ ಎಲ್ಲವೂ ಸಮವಾಗಿ ಒಂಚೂರು ಒಗರು ಸೇರಿದ ಈ ಮೆಂತ್ಯಗೊಜ್ಜನ್ನು ಅನ್ನಕ್ಕೂ ಕಲೆಸಿಕೊಳ್ಳಬಹುದು; ವ್ಯಂಜನವಾಗಿಯೂ ಬಳಸಬಹುದು. ನೀರು ಮುಟ್ಟಿಸದೇ ಮರದ ಚಮಚೆ ಬಳಸುತ್ತಿದ್ದರೆ ವಾರಾನುಗಟ್ಟಲೆ ಇಡಬಹುದು. ಒಟ್ಟಿನಲ್ಲಿ ನಮ್ಮ ಅಡುಗೆಮನೆಯಲ್ಲಿ ಮೆಂತ್ಯದ್ದೇ ಸಾಮ್ರಾಜ್ಯ ; ಊಟೋಪಚಾರಗಳಲ್ಲಿ ಅವಿಭಾಜ್ಯ! ಮೆಂತ್ಯ ತಂಬುಳಿ, ಮೆಂತ್ಯಕಾಳಿನ ಇಡ್ಲಿ, ಮೆಂತ್ಯಸೊಪ್ಪಿನ ತೇಪ್ಲಾ ಅಂತೆಲ್ಲಾ ಇನ್ನೂ ಏನೇನೋ ಮೆಂತ್ಯದ ಮೆನುಗಳಿವೆ. ಅವನ್ನೆಲ್ಲಾ ಬರೆಯುತ್ತಾ ಹೋದರೆ ಲೇಖನ ಉದ್ದವಾಗಬಹುದೆಂಬ ಭೀತಿಯಿಂದ ನಿಲ್ಲಿಸುತ್ತಿದ್ದೇನೆ!
-ಡಾ. ಹೆಚ್ ಎನ್ ಮಂಜುರಾಜ್




ಎಂದಿನಂತೆ, ರಸಭರಿತ, ಸೊಗಸಾದ ಲೇಖನ.
ಸಂಪಾದಕರಿಗೆ ಪ್ರಣಾಮಗಳು, ಪ್ರಕಟಿಸಿದ್ದಕ್ಕೆ ಮತ್ತು ಧನ್ಯವಾದಗಳು ಓದುಗರಾಗಿ ಓದಿ ಕಮೆಂಟಿಸಿದ್ದಕ್ಕೆ !
ನಿಮ್ಮಿಂದಾಗಿ ಮತ್ತು ಸುರಹೊನ್ನೆಯ ಪ್ರೋತ್ಸಾಹದಿಂದಾಗಿ ಬರೆಯುವ ತುಮುಲ ಹೆಚ್ಚಾಗಿದೆ.
ಕ್ರೆಡಿಟ್ಟುಗಳೆಲ್ಲ ಪತ್ರಿಕೆಗೆ ಅರ್ಪಿತ, ಸಮರ್ಪಿತ
ಇನ್ನಷ್ಟು ಬರೆಯಲು, ಬರೆದು ಕಳಿಸಲು ಚೋದಿತ !!
ಧನ್ಯವಾದ ಎಂದರೆ ಸಾಲದು; ಬೇರೆ ಪದ ತಿಳಿಯದು………..
ನಾನು ಆಭಾರಿ, ಪ್ರತಿ ಬಾರಿ
ಮಂಜು ಸರ್..ಮೆಂತ್ಯದಕಾಳುಗಳು ಸೊಪ್ಪು.. ನಾನು ಬಳಸುತ್ತೇನೆ..ನಿಮ್ಮ ಲೇಖನ ದಿಂದ.. ಮತ್ತಷ್ಟು ಮಾಹಿತಿ ಜೊತೆಗೆ ತಯಾರಿಸುವ ಬಗೆ…ತಿಳಿದಂತಾಯಿತು…ಅದಕ್ಕಾಗಿ ನಿಮಗೆ ಧನ್ಯವಾದಗಳು.. ಪುರಕ ಚಿತ್ರ ಗಳು ಸೊಗಸಾಗಿ ಬಂದಿವೆ.. ಎಂದಿನಂತೆ ಚಂದದ ಬರೆಹ.
ಹೌದೇ, ತುಂಬ ಸಂತೋಷ, ಪ್ರತಿಕ್ರಿಯೆಗೆ ಧನ್ಯವಾದ
ದಪ್ಪಗಿನ ಅಡುಗೆ ಪುಸ್ತಕ ಮುದ್ರಣಕ್ಕೆ ತಯಾರಿ ನಡೆಸಬಹುದು ಅನ್ನಿಸ್ತದೆ! ಬಾಯಿಯಲ್ಲಿ ನೀರೂರಿಸುವ ವೈವಿಧ್ಯಮಯ ಪಾಕಗಳು ಸುರಹೊನ್ನೆಯಲ್ಲಿ ಘಮಘಮಿಸುತ್ತಿವೆ!!
ನಮಸ್ಕಾರ ಮತ್ತು ಧನ್ಯವಾದ ಮೇಡಂ.
ನಿಮ್ಮಾಶಯದಂತೆಯೇ ಆಗಲಿ. ಹಾರಯಿಸಿ.
ದಪ್ಪ ಪುಸ್ತಕ ಅಲ್ಲದಿದ್ದರೂ ಪುಟ್ಟ ಪುಸ್ತಕವಂತೂ ಹೌದು. ಸುರಹೊನ್ನೆಗೆ ಅರ್ಪಿತವೂ ಹೌದು!
ಏಕೆಂದರೆ ಸುರಹೊನ್ನೆಯು ಪ್ರಕಟಿಸದಿದ್ದರೆ ಬರೆಯಲು ಮನಸಾಗುವುದಿಲ್ಲ; ಇದು ಸತ್ಯ.
ಅಂದ ಹಾಗೆ ಇಂಥ ಪಾಕಬರೆಹಗಳ ಪುಸ್ತಕಕ್ಕೆ ಶೀರ್ಷಿಕೆ ಬೇಕಾಗಿದೆ. ಹೊಳೆದರೆ ದಯಮಾಡಿ ತಿಳಿಸಿ.
ವಂದನೆಗಳು
ಅದ್ಬುತವಾದ ಮೆಂತ್ಯದ ಬಗೆ ಬಗೆಯ ಪಾರಂಪರಿಕ ರುಚಿಯನ್ನು ಬರವಣಿಗೆಯಲ್ಲಿ ತಂದು.ಬಾಯಿಯಲ್ಲಿ ನೀರು ಬಂದಿದ್ದು ಮಾತ್ರವಲ್ಲ .ಅಮ್ಮ ಮಾಡುತ್ತಿದ್ದ ಗೊಜ್ಜು.ಮೊದಲ ತುತ್ತಿಗೆ ತುಪ್ಪ.ಮೆಂತ್ಯದ ಹಿಟ್ಟು ನೆನಪಾಯಿತು.ತಿಂಗಳಿಗೊಮ್ಮೆ ಪಾಕಶಾಲೆಗೆ ಹೋಗುವ ಪಾಕ ತಜ್ಞ. ನಳ. ಭೀಮ ಪಾಕ.ಹೀಗೆ ಅನ್ನೋದು ಗಮನಕ್ಕೆ ಬಂತು.ವಿಜ್ಞಾನ.ಪೌಷ್ಟಿಕಾಂಶ.ಆರೋಗ್ಯ.ಲಾಭ.ಎಲ್ಲವನ್ನೂ ವಿವರಿಸುತ್ತ.ಸಾಹಿತ್ಯದ ಅಭಿವ್ಯಕ್ತಿ ಹಾಸ್ಯದ ಲೇಪ.ವಿದ್ವತ್ ಭಾಷಣ.ವಿದ್ವತ್ಲೇಖನ.ವಿದ್ವತ್ ವಿಮರ್ಶಕ.ವಿದ್ವತ್ ಪಾಕ ತಜ್ಞರು ತಾವು ಎಂಬುದನ್ನು ಹತ್ತಾರು ಲೇಖನಗಳಲ್ಲಿ ಪ್ರಚುರಪಡಿಸಿರುವಿರಿ.ಹೀಗೆ ಬಗೆ ಬಗೆಯ ಚಿಂತನೆಗಳು ಬರವಣಿಗೆಯಲ್ಲಿ ಬಿಡುವಿಲ್ಲದೆ ಮೂಡಿ ಬರಲಿ.ನಮಸ್ಕಾರ.
ತುಂಬಾ ಸೊಗಸಾಗಿದೆ ಸರ್ ಲೇಖನ. ನಿಮ್ಮ ಬರವಣಿಗೆಯ ಶೈಲಿ ಬಹಳ ಆಕರ್ಷಕ. ಎಷ್ಟೊಂದು ಮಾಹಿತಿಗಳು ಅಡಗಿವೆ ನಿಮ್ಮ ಲೇಖನದಲ್ಲಿ. ಬ್ಯೂಟಿಫುಲ್.
ಮೆಂತ್ಯೆ ಪಲಾವ್ ನಷ್ಟೇ ರುಚಿಕರ ಲೇಖನ
ಧನ್ಯವಾದಗಳು sir